Tuesday, 31 December 2024

ವರ್ಷದ ಕೊನೆಯ ದಿನ

 ಈ ವರ್ಷ,


ನಾನು ದಿನವೂ ವ್ಯಾಯಾಮ- ಯೋಗ ಮಾಡಿದ್ದೇನೆ.

ಖರೀದಿಸಿದ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ.

`ಸ್ನೂಜ್ ಬಟನ್` ಒತ್ತುವುದನ್ನು ನಿಲ್ಲಿಸಿದ್ದೇನೆ.


ನಾನು ಟಿಕ್‌ಟಾಕ್ ಸ್ಕ್ರೋಲ್ ಮಾಡುವುದನ್ನು ಬಿಟ್ಟಿದ್ದೇನೆ.

ಇನ್ಸ್-ಟಾ, ಫೇಸ್-ಬುಕ್ ತ್ಯಜಿಸಿದ್ದೇನೆ.

ಎಲ್ಲ ವಾಟ್ಸ್-ಆಪ್ ಗುಂಪುಗಳನ್ನು ತೊರೆದಿದ್ದೇನೆ.


ನಾನು ಪ್ರತಿದಿನ ಧ್ಯಾನ ಮಾಡಿದ್ದೇನೆ.

ಎಲ್ಲರನ್ನೂ ಅವರಿರುವಂತೇ ಒಪ್ಪಿಕೊಂಡಿದ್ದೇನೆ.

ನಾನು ನನ್ನನ್ನು ಕೂಡ  ಕ್ಷಮಿಸಿಕೊಂಡಿದ್ದೇನೆ.


ನನ್ನ ಬಹುಪಾಲು ಸಾಲಗಳನ್ನು ತೀರಿಸಿದ್ದೇನೆ.

ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಉಳಿಸಿದ್ದೇನೆ.

ನನ್ನ ಆಸೆ-ಅಗತ್ಯಗಳನ್ನು ಕಡಿಮೆ ಮಾಡಿಕೊಂಡಿದ್ದೇನೆ.


ನನ್ನ ಸಂಗಾತಿಯ ಮಾತುಗಳನ್ನು ಕಿವಿಯಿಟ್ಟು ಕೇಳಿದ್ದೇನೆ.

ಮಕ್ಕಳಿಗೆ ಉಪದೇಶ ಮಾಡುವುದನ್ನು ಬಂದ್ ಮಾಡಿದ್ದೇನೆ.

ನನ್ನ ತಂದೆ ತಾಯಿಗೆ ಸಾಕಷ್ಟು ಸಮಯ ನೀಡಿದ್ದೇನೆ.


ಯಾರೂ ನೋಡುತ್ತಿಲ್ಲ ಎನ್ನುವ ಹಾಗೆ ಕುಣಿದಿದ್ದೇನೆ.

ಹಾಲಿಡೇಗಳಲ್ಲಿ ಫೋಟೋ ತೆಗೆಯುವುದನ್ನು ಕೈಬಿಟ್ಟು

ಪ್ಲಾನ್ ಮಾಡದೇ ಅಲೆದಾಡಿದ್ದೇನೆ.


ನಾನು ಟಿವಿ ಸುದ್ದಿ-ಚರ್ಚೆ ನೋಡುವುದನ್ನು ನಿಲ್ಲಿಸಿದ್ದೇನೆ.

ನೆಟ್‌ಫ್ಲಿಕ್ಸ್ ಬಿಂಜ್-ವಾಚ್ ಮಾಡುವುಕ್ಕೆ ಬೈ ಹೇಳಿದ್ದೇನೆ.

ಲೈವ್ ಕ್ರಿಕೆಟ್ ಮತ್ತು ಫುಟ್‌ಬಾಲ್ ಬದುಕಿಗೆ ಬ್ರೇಕ್ ಹಾಕಿದ್ದೇನೆ.


ಈ ವರ್ಷದ ಕೊನೆಯ ದಿನದಂದು 

ಹೀಗೆಲ್ಲ ಬರೆಯುವುದು ನನ್ನಾಸೆಯಾಗಿತ್ತು.

ಆದರೆ ಅವುಗಳಲ್ಲಿ ಒಂದನ್ನೂ ನಾನು ಪೂರೈಸಲಿಲ್ಲ,


ಏಕೆಂದರೆ,


ಕಳೆದ ವರ್ಷವೂ ಹಾಗೇ ಆಗಿತ್ತು,

ಅದರ ಹಿಂದಿನ ವರ್ಷದಂತೆಯೇ,

ಅದರ ಹಿಂದಿನ ವರ್ಷದಂತೆಯೇ!


(ಈ ಕವನ ಕಳೆದ ವರ್ಷದ ಕಾಪಿ ಅಂಡ್ ಪೇಸ್ಟ್!)


Friday, 27 December 2024

ಅನ್ನೋ ಜನರು

 `ನಿನಗೆ ಹೇಗೆ ಬೇಕೋ ಹಾಗೆ ನಗು, 

ಆದರೆ ಗಂಡಸರ ಮುಂದೆ ಅಷ್ಟು ಜೋರಾಗಿ ನಗಬೇಡ. 


ನಿನಗೇನು ಬೇಕೋ ಹಾಕಿಕೊ, 

ಆದರೆ ಸ್ಕರ್ಟನ್ನು ಮೊಣಕಾಲ ಕೆಳಗೆ ಹಾಕಿಕೊ, 

ಎದೆಯ ಸೀಳು ಮತ್ತು ಹೊಕ್ಕುಳ ಕಾಣದಂಥ ಟಾಪ್ ಹಾಕಿಕೊ,` 


ಎಂದ ಅಮ್ಮನ ಮಾತಿಗೆ ಸುಮ್ಮನೆ ನಕ್ಕೆ. 

ಪೇಪರ್ ಓದುತ್ತ ಕೂತ ಅಪ್ಪ ಸಮ್ಮತಿಸುತ್ತಿದ್ದ.


`ನಿನ್ನ ಗಂಡ ಏನೂ ಅನ್ನುವುದಿಲ್ಲವೇನೇ?

ಎಂದು ಮತ್ತೆ ಕೇಳಿದಳು.


`ಮಕ್ಕಳನ್ನೂ ಸಲಹಬಲ್ಲೆ,

ಮನೆಯನ್ನೂ ನಡೆಸಬಲ್ಲೆ,

ವಾಹನವನ್ನೂ ಓಡಿಸಬಲ್ಲೆ,

ಆಫೀಸನ್ನೂ ನಡೆಸಬಲ್ಲೆ,


ಮಣಭಾರದ ಸೀರೆಯುಟ್ಟು 

ಕಲ್ಯಾಣಮಂಟಪದಲ್ಲಿ 

ದಿನವಿಡೀ ಓಡಾಡಬಲ್ಲೆ,

ಹೈಹೀಲ್ಸ್ ಹಾಕಿಕೊಂಡು 

ಕ್ಲಬ್ಬಿನಲ್ಲಿ ಪಾರ್ಟಿಯಲ್ಲಿ 

ರಾತ್ರಿಯಿಡೀ ಕುಣಿಯಬಲ್ಲೆ.


ಅನ್ನೋ ಜನರು ಅನ್ನಲಿ ಬಿಡಿ, ಅಮ್ಮ,

ಎಲ್ಲರ ಮಾತು ಕೇಳುವಂತೆ

ನಿನ್ನ ಮಾತನ್ನೂ 

ನನ್ನ ಗಂಡನ ಮಾತನ್ನೂ 

ಕೇಳಿಸಿಕೊಳ್ಳುತ್ತೇನೆ  

(ನನ್ನ ಗಂಡ ನಿನ್ನಂತೆ ನೇರ ಹೇಳುವುದಿಲ್ಲ, ಅಷ್ಟೇ)

Saturday, 26 October 2024

ಜಘನಕೆ ಗೌರವಾರ್ಪಣೆ

ಲುಸಿಲ್ ಕ್ಲಿಫ್ಟನ್ ಬರೆದ 'Homage to my hips' ಕವನದ ಭಾವಾನುವಾದ
ಕವಿಯ ಓದು ಇಲ್ಲಿದೆ.

ಈ ಜಘನ ಘನ ಜಘನ

ಗಜಗಮನಕೆ

ಬೇಕು ಅವಕಾಶ.

ಸಾಲುವುದಿಲ್ಲ ಸಣ್ಣ 

ಪುಟ್ಟ ಜಾಗಗಳು. ಈ ಜಘನ 

ಸರ್ವತಂತ್ರ ಸ್ವತಂತ್ರ.

ಇಷ್ಟವಾಗುವುದಿಲ್ಲ ತಡೆದರೆ ಯಾರೂ.

ಈ ಜಘನವನ್ನು ಕಟ್ಟಿ ಹಾಕಲಾರರು ಯಾರೂ,   

ಹೋಗುತ್ತದೆ ಹೋಗಬೇಕೆಂದ ಕಡೆ 

ಮಾಡುತ್ತದೆ ತನಗನಿಸಿದ್ದನ್ನು.

ಈ ಜಘನ ಪ್ರಬಲ ಜಘನ.

ಈ ಜಘನ ಮಾಯಾ ಜಘನ. 

ಗೊತ್ತು ನನಗೆ, ಈ ಜಘನ 

ಸಿಕ್ಕಿಸಿ ಗಂಡಸನ್ನು ಮಾಯಾಜಾಲದಲ್ಲಿ

ತಿರುಗಿಸುತ್ತದೆ ಅವನ ಬುಗುರಿಯಂತೆ.

 

Monday, 21 October 2024

ಯಾರು?

ಮೂಳೆಯನು ತುಂಡರಿಸಿ 
ರಂಧ್ರಗಳ ಕೊರೆಕೊರೆದು 
ಉಸಿರಿಗೆ ನಾದವನು ಮೊದಲು ಕೊಟ್ಟವರಾರು? 

ಸಾವಿನಲಿ ಜೀವವನು 
ಊದಲೂಬಹುದೆಂದು 
ತನ್ನೆಲ್ಲ ಜನರಿಗೆ ಹೇಳಿ ಕೊಟ್ಟವರಾರು? 

ಆಳದಾ ನೋವುಗಳ 
ಹೇಳದಾ ಗೋಳುಗಳ 
ಅಮೂರ್ತ ರಾಗದಲಿ ನುಡಿಸಿ ಕೊಟ್ಟವರಾರು? 

ರೂಪಕವ ಹಾಕುತ್ತ 
ಉಪಮೆಗಳ ಹೇಳುತ್ತ 
ರಾಗಕ್ಕೆ ಶಬ್ದಗಳ ಕವನ ಕೊಟ್ಟವರಾರು?

Saturday, 12 October 2024

ಕನಸುಗಳು

ಕನಸುಗಳು ಕ್ಷಿತಿಜದಲ್ಲಿ 
ಆಕಾಶದಂತೆ ಅನಂತ 
ಸಾಗರದಂತೆ ಅಗಾಧ 
ಬಿಟ್ಟು ಬಂದ ಮನೆ ಈಗ 
ಸಾವಿರಾರು ಗಾವುದ 

ಪ್ರೀತಿಗೆ ಇಷ್ಟು ಧೈರ್ಯವಿರುತ್ತದೆಂದು ಗೊತ್ತಿರಲಿಲ್ಲ 
ಅವನಿಗಾಗಿ 
ಕೇವಲ ಅವನೊಬ್ಬನಿಗಾಗಿ 
ಎಲ್ಲರನ್ನೂ 
ಎಲ್ಲವನ್ನೂ 
ಅಷ್ಟು ಸುಲಭವಾಗಿ 
ಬೀ         ಸಾ          ಕಿ 
ಏಳು ಸಮುದ್ರ ದಾಟುತ್ತೇನೆಂದು 
ಖಂಡಿತ ಅಂದುಕೊಂಡಿರಲಿಲ್ಲ 

ಪ್ರೀತಿಸಿ ಮದುವೆಯಾದ ಗಂಡ ಮಗಳನ್ನು ಕೊಟ್ಟ 
ಬಿಟ್ಟ 
ಅಪರಿಚಿತ ಅನಿವಾಸಿ ನಾಡಿನಲ್ಲಿ ಜೀವವ ಜೊತೆಗಿಟ್ಟ 
ಯಾವ ಮುಖವಿಟ್ಟು ಮರಳಲಿ ದೇಶಕ್ಕೆ? 

ಉರಿವ ದೀಪಗಳ ದೊಡ್ಡ ನಗರ 
ನನ್ನ ಜಗದವಲ್ಲ ನನ್ನ ಜಗವದಲ್ಲ 
ಅಂಗೈಯಲ್ಲಿ ಯಾರ್ಯಾರದೋ ಮನೆ ಕೆಲಸದ 
ಉರುಟುಗಳು ಮೂಡುತ್ತವೆಂದು ಯಾರಿಗೆ ಗೊತ್ತಿತ್ತು? 
ರೇಶಿಮೆ ಸೀರೆಯ ಬದಲು ಕಾಟನ್ ಯುನಿಫಾರ್ಮಿನಲ್ಲಿ 
ಮನೆಯಿಂದ ಹೊರಗೆ ಬೀಳುತ್ತೇನೆಂದು 
ಯಾರು ಹೇಳಿದ್ದರು ಶಕುನ? 

ಸೆಂಟ್ರಲ್ ಲಂಡನ್ನಿನ ವಿಕ್ಟೋರಿಯನ್ ಕಾಲದ 
ಮೂರಂತಸ್ತಿನ ಸಾಲು ಸಾಲು ಮನೆಗಳ ನೆಲವನ್ನು 
ಗುಡಿಸಿ, ಒರೆಸಿ, ಕೋಣೆಯನ್ನು ಓರಣವಾಗಿರಿಸಿ 
ಪಾತ್ರೆ ತೊಳೆದು, ಬಟ್ಟೆಗಳನ್ನು ಇಸ್ತ್ರಿ 
ಮಾಡಿ ಮಕ್ಕಳನ್ನು ಪ್ರ್ಯಾಮಿನಲ್ಲಿ ಹಾಕಿಕೊಂಡು 
ನನ್ನದೇ ಮಕ್ಕಳು ಎನ್ನುವಂತೆ 
ಪಾರ್ಕುಗಳಲ್ಲಿ ಸುತ್ತಾಡಿಸಿ 
ಆಡಿಸುವ 
ಮೇಡ್-ಗೆ 

ಒಂದು ದಿನ ಮಗಳ ಕೊರಳಲ್ಲಿ ಸ್ಟೆತೋಸ್ಕೋಪು 
ಕೈಯಲ್ಲಿ ಸ್ಕಾಲ್-ಪೆಲ್ ಹಿಡಿವ ಕನಸು

Monday, 27 May 2024

ಇರಲಿ ಬಿಡು

ನನ್ನ ಬಟ್ಟಲು ಮತ್ತೆ ಖಾಲಿಯಾಗುತ್ತಲಿದೆ, ತುಂಬಿಸಿ ಬಿಡು

ನೀ ತೊರೆವ ಗಾಯ ಬಹಳ ನೋಯುತ್ತಲಿದೆ , ಕುಡಿಯಲು ಬಿಡು


ಎಲ್ಲ ಮರೆತು ಮುಂದೆ ಸಾಗೆಂದು ಹೇಳಬಂದಿರುವೆ ನೀನು 

ನಾವು ಬಂದ ದಾರಿಯಲಿ ಗುರುತುಗಳು ಕಾಯುತ್ತಲಿವೆ, ಹೆಕ್ಕಲು ಬಿಡು

 

ನೀ ನೀರುಣಿಸಿದ ಬಳ್ಳಿಯ ತುಳಿದು ಸಾಗಿಹೆ ನೀನು 

ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು


ನನ್ನ ಪ್ರೇಮ ನಿನಗಷ್ಟು ಬೇಗ ಸಾಕಾಯಿತೆ? 

ಹಣೆಯಲಿ ಬರೆದಿದ್ದೇ ಇಷ್ಟು ಅನ್ನುತ್ತಲಿದೆ, ಇರಲಿ ಬಿಡು


ಪ್ರೇಮವಿರದ ಬದುಕು ಮದಿರೆಯಿರದ ಬಟ್ಟಲು

ಬದುಕಲು ನಿನ್ನ ನೆನಪನು ಕುಡಿಯುತ್ತಲಿದೆ, ಬಿಟ್ಟು ಬಿಡು 


ಪ್ರೇಮದ ನಿರಂತರ ಹುಡುಕಾಟವಂತೆ ಬದುಕು

ಈ ಹುಡುಕಾಟ ಕವನವಾಗುತ್ತಲಿದೆ, ಬರೆಯಲು ಬಿಡು

Thursday, 2 May 2024

ನೋಡೂಣಂತ

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ

ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ

ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ

ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ

ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ

ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ

ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಕುಣ್ಯೂಣಂತ

(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)

Monday, 18 March 2024

ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

ನಾನು ಬರೆದ ಆ ಕತೆಯನ್ನು ತಿಂದಳು 
ಆ ಕತೆ ತಿಂದಾದ ಮೇಲೆ ನಾ ಬರೆದ 
 ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ 
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು 

 ನಾನು ಅವಳನ್ನು ತಡೆಯಹೋದೆ 
ನಕ್ಕು ಕಣ್ಣು ಮಿಟುಕಿಸದಳು 

ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು 
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು 
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು 
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು 

 ನಾನು ಅವಳನ್ನು ತಡೆಯಹೋದೆ 
ಕೈ ಸವರಿ ಮಾತಿಗಿಳಿದಳು 

 ನನ್ನ ಎಲ್ಲ ಪಾಸ್ವರ್ಡ್ ಪಡೆದಳು 
 ನನ್ನ ಬರವಣಿಗೆಯ ಫೈಲುಗಳನ್ನು 
 ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು 
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು 

 ನಾನು ಅವಳನ್ನು ತಡೆಯಹೋದೆ 
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು 

 ನನ್ನ ಹಳೆಬಟ್ಟೆಗಳನ್ನು ಬೀಸಾಕಿ 
 ಹೊಸ ಬಟ್ಟೆಗಳ ತಂದಳು 
ಗಡ್ಡ ತಲೆಗಳ ಟ್ರಿಮ್ ಮಾಡಿದಳು 
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು 

 ನಾನು ಅವಳನ್ನು ತಡೆಯಹೋದೆ 
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು 

ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ 
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು 
 ಮಲಗುವ ಮಂಚವನ್ನು ಗಟ್ಟಿಗೊಳಿಸಿ 
ಹೊಸ ಗಾದೆ ದಿಂಬು ಹಾಕಿದಳು 

ನಾನು ಇನ್ನು ತಡೆಯದಾದೆ 
ಅವಳ ದೇಹದಲ್ಲಿ ಲೀನವಾದೆ 

ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು 
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು 
ಅವಳು ತಿಂದ ಆ ಕತೆಯ ಹೆಸರು, 
`ನನಗೆಂಥ ಹುಡುಗಿ ಬೇಕು?` 

ನಾನು ಕತೆ ಕವನ ಬರೆಯುವುದನ್ನು ಬಿಟ್ಟು 
ಈಗ ಹದಿನೈದು ವರ್ಷಗಳಾದವು

Tuesday, 5 March 2024

ಹೀಗೊಂದು ಪ್ರಾಮಾಣಿಕ ಸಂದರ್ಶನ

'ನಿನಗೇಕೆ ಕೆಲಸ ಕೊಡಬೇಕು?` 
`ಏಕೆಂದರೆ ನನಗೆ ದುಡ್ಡು ಬೇಕು.` 

 `ನಿನಗೆ ಏನು ಅನುಭವವಿದೆ?` 
 `ನಾಕಾರು ವರ್ಷಗಳಲ್ಲಿ 
ಹತ್ತಾರು ಕಡೆ ಕೆಲಸ 
ಮಾಡಿದ ಬಿಟ್ಟ/ಬಿಡಿಸಿಕೊಂಡ ಅನುಭವವಿದೆ.` 

 `ನೀನು ಓದಿರುವುದಕ್ಕೂ ಈ ಕೆಲಸಕ್ಕೂ 
 ಏನಾದರೂ ಸಂಬಂಧವಿದೆಯೇ?` 
`ಇರಬಹುದು, ಇರದೆಯೂ ಇರಬಹುದು, 
 ಆದರೆ ಇಬ್ಬರ ಶಿಫಾರಸ್ಸಂತೂ ಇದೆ.` 

 `ನಿನ್ನ ಶಕ್ತಿ ಏನು? 
`ಕೊಟ್ಟಿರುವ ಕೆಲಸವನ್ನು ಮುಗಿಸಲು ಪ್ರಯತ್ನಿಸುವುದು,
ಕೊಡದೇ ಇರಬೇಕಾದ ಕೆಲಸವನ್ನು 
ಕೆಲಸ ಕಳೆದುಕೊಂಡರೂ ಮಾಡದಿರುವುದು.` 

 `ನಿನ್ನ ಕುಂದುಕೊರತೆಗಳೇನು?` 
`ಸಿಕ್ಕಾಪಟ್ಟೆ ಪಾರ್ಟಿ ಮಾಡುವುದು, 
ರಾತ್ರಿ ತುಂಬ ಹೊತ್ತು ಓಟಿಟಿ ನೋಡುವುದು, 
ಬೆಳಗಿನ ಸಮಯ ತೂಕಡಿಸುವುದು.` 

 `ಧನ್ಯವಾದಗಳು, ಹೊರಗೆ ಕಾಯಿರಿ` 
`ಧನ್ಯವಾದಗಳು, 
 ನೀವು ಹೇಳಿದ ದಿನ ಕೆಲಸಕ್ಕೆ ಸೇರಲು ಸಿದ್ಧ, 
ನಿನಗೆ ಕೆಲಸ ಕೊಡುವುದಿಲ್ಲ ಎಂದು ಮಾತ್ರ ಹೇಳಬೇಡಿ 
ನನಗದನ್ನು ಕೇಳಲು ಇಷ್ಟವಿಲ್ಲ.`

Sunday, 18 February 2024

ನೀರುಮುಳುಕ

ಹೆಪ್ಪುಗಟ್ಟುವಂಥ ಚಳಿಗಾಲ 
ನಡೆದೆ ದೇವದಾರುಗಳ ಕಾಡಿನಲ್ಲಿ 
ಕಂಡೆ ಜಲಪಾತದಡಿಯಲ್ಲಿ 
ಒಂಟಿ ಹಕ್ಕಿ. 

ಹಸಿಬಂಡೆ ಮೇಲೆ ಹೊಳೆಯುತ್ತಿತ್ತು 
ಹುಚ್ಚು ನೀರು ಸೋಕಿದಾಗ 
ಕೊರಳಿಂದ ಹೊರಬಂತು 
ಮೈಮರೆತಂತೆ ನಿಲ್ಲದ ಗಾನ 

ಕೊಟ್ಟೆನೆಂದರೆ ನನ್ನದಲ್ಲದು 
ಹೇಗೆ ಪುಸಲಾಯಿಸಲಿ ಕೈಗೆ ಸಿಗೆಂದು 
ಅದಕ್ಕೆ ನೀರಿನಾಳವೂ ಗೊತ್ತು 
ನೆಲದ ಮೇಲೆ ನಿಂತು ಕೊರಳೆತ್ತಲೂ 

(ಕ್ಯಾಥಲೀನ್ ಜೇಮೀ ಬರೆದಿರುವ `ದ ಡಿಪ್ಪರ್` ಎನ್ನುವ ಕವನದ ಭಾವಾನುವಾದದ ಸಣ್ಣ ಪ್ರಯತ್ನ. ಮೂಲ ಕವಿತೆಯ ಕೊಂಡಿ ಇಲ್ಲಿದೆ: https://www.poetryfoundation.org/poetrymagazine/poems/42188/the-dipper)