Thursday 2 July 2020

ಕತೆ: ಸಂಭಾಷಣೆ

ಏನೋ ಸೋಂಬೇರಿ! ಇನ್ನು ಮಲಗಿದ್ದೀಯಾ? ನಾನು ಎದ್ದು ಅದೆಷ್ಟು ಹೊತ್ತು ಆಯ್ತು ಗೊತ್ತಾ? ಅರ್ಧ ಗಂಟೆಯಿಂದ ಎಳಿಸ್ತಾ ಇದ್ದೀನಿ. ರಾತ್ರಿಯಲ್ಲಾ ಆದೆಷ್ಟು ಗೊರಕೆ ಹೊಡಿತಿಯ. ರಾತ್ರಿ ಸರಿ ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ. ಏಳ್ತಿಯೊ ಇಲ್ಲ ನಿನ್ನ ಮುಖದ ಮೇಲೆ ನೀರು ಹಾಕಬೇಕೋ?

ಆಯ್ತು ಮಾರಾಯ್ತಿ! ಒಂದೈದು ನಿಮಿಷ ಆರಾಮವಾಗಿ ಮಲಗಲು ಬಿಡಲ್ಲ ನೀನು. ಈ ಬೆಳಗಿನ ಸಿಹಿ ನಿತ್ಯ ಸುಖ ನಿನಗೆ ಹೇಗೆ ಗೊತ್ತಾಗಬೇಕು? ನೀನೋ, ಮಧ್ಯಾಹ್ನದ ಸಾಯಂಕಾಲ ಒಂದು ಒಳ್ಳೆ ನಿದ್ದೆ ಮಾಡ್ತೀಯಾ. ನನಗೆ ಸೋಂಬೇರಿ ಅಂತಿಯೇನೇ? ನೀನು ಸೋಂಬೇರಿ, ನಿಮ್ಮಪ್ಪ ಸೋಂಬೇರಿ, ನಿನ್ನ ತಾತ ಸೋಂಬೇರಿ.

ಏಯ್, ಸಾಕು ಮಾಡು ನಿನ್ನ ವರಾತ. ನಿನ್ನನ್ನು ನೋಡಲ್ವಾ? ಕೈಯಲ್ಲಿ ನ್ಯೂಸ್ಪೇಪರ್ ಹಿಡ್ಕೊಂಡು ಹಾಗೆ ಬಾಯಿ ತಕ್ಕೊಂಡು ಕುರ್ಚಿನಲ್ಲೇ ನಿದ್ದೆ ಹೊಡಿತಾ ಇರ್ತಿಯ? ನಾನು ಎದ್ದು ಆಗಲೇ ಎರಡು ಗಂಟೆ ಆಯಿತು. ಹೊಟ್ಟೆ ಚುರುಚುರು ಅಂತಿದೆ. ಬೇಗ ತಿಂಡಿ ಕೊಡುತ್ತೀಯಾ ಇಲ್ಲ ಇನ್ನು ಹೀಗೆ ಬಿದ್ದುಕೊಂಡಿರ್ತಿಯ?

ಆಯ್ತು ಕಣೆ, ಎದ್ದೆ ಮಾರಾಯ್ತಿ. ಅದೇನು ಒಂದು ವಾರದಿಂದ ಉಪವಾಸವಿರುವ ತರ ಆಡ್ತೀಯ! ನಿನ್ನೆ ರಾತ್ರಿ ಬೇರೆ ಅಷ್ಟೊಂದು ತಿಂದಿದ್ದೀಯಾ! ತಗೋ, ತಿನ್ನು.

ಥ್ಯಾಂಕ್ಯೂ ಡಿಯರ್.

ಅದೇನು ಥ್ಯಾಂಕ್ಯೂನೋ! ಇನ್ನು ಹಾಕಿಲ್ಲ ಎನ್ನುವಷ್ಟರಲ್ಲಿ ಖಾಲಿ ಮಾಡ್ತಿಯಾ? ರುಚಿನಾದ್ರೂ ನೋಡೇ, ಮೂದೇವಿ! ಎಲೆ ಎಲೆ, ಕೋಪ ಮಾಡ್ಕೋಬೇಡವೇ. ಅರ್ಧಕ್ಕೆ ಬಿಟ್ಟು ಏಳಬೇಡ್ವೆ.

ಅದೇನ್ ತಿಂಡಿ ಮಾಡ್ತೀಯೋ? ಸೂಪರ್ ಮಾರ್ಕೆಟ್ ಇಂದ ಎರಡು ಡಬ್ಬಿ ತರ್ತೀಯಾ. ಈ ಡಬ್ಬಿ ಬಿಟ್ಟರೆ ಅದು, ಆ ಡಬ್ಬಿ ಬಿಟ್ಟರೆ ಇದು, ಅದು ಬಿಟ್ಟರೆ ಮನೆಯಲ್ಲಿ ಬೇರೆ ಏನಿದೆ ತಿಂಡಿ ತಿನ್ನಕ್ಕೆ? ಅದೇ ಪಕ್ಕದ ಮನೆ ಷಣ್ಮುಗಂ ನೋಡು, ಒಂದು ದಿನ ಇಡ್ಲಿ ದೋಸೆ, ಇನ್ನೊಂದು ದಿನ ಚಿಕ್ಕನ್, ಮತ್ತೊಂದು ದಿನ ಮಟನ್. ನೀನು ಇದ್ದೀಯ ದಂಡಕ್ಕೆ. ಬರಿ ಅನ್ನ ಸಾರು, ಅನ್ನ ಮೊಸರು. ಸುಮ್ನೆ ನನ್ನ ತಲೆ ತಿನ್ನಬೇಡ. ನಿನಗಂತೂ ಬೇರೆ ಕೆಲಸ ಇಲ್ಲ. ಬಾಯ್ ಬಾಯ್, ಬರ್ತೀನಿ.

ಇಷ್ಟಕ್ಕೆಲ್ಲ ಯಾಕೆ ಅಷ್ಟೊಂದು ಕೋಪ ಮಾಡ್ಕೋತಿಯ? ಇವತ್ತು ಭಾನುವಾರ ಕಣೆ. ಎಲ್ಲಿಗೆ ಹೊರಟೆ?

ನಾನೇನು ಮನೆಬಿಟ್ಟು ಓಡಿ ಹೋಗಲ್ಲ. ಇಲ್ಲೇ ನಮ್ಮ ಕಾಲೋನಿಯಲ್ಲಿ ಫ್ರೆಂಡ್ಸ್ ಎಲ್ಲಾ ಮಾತಾಡಿಸಿಕೊಂಡು ಟೈಂಪಾಸ್ ಮಾಡಿಕೊಂಡು ಬರುತ್ತೇನೆ. ನಿನ್ನ ಜೊತೆ ಏನು ಮಾಡೋಕ್ಕಿದೆ ಈ ಮನೆಯಲ್ಲಿ? ಮಧ್ಯಾಹ್ನ ಊಟಕ್ಕೇನೂ ಕಾಯಬೇಡ. ನಯ್ಯರ್ ಮನೆಯಲ್ಲಿ ಫಿಶ್ ಫ್ರೈ ವಾಸನೆ ಬರ್ತಾ ಇದೆ ಆಗಲೇ.

ಬೇಗ ಬಂದುಬಿಡೆ. ನೀನಿಲ್ದೆ ಸಿಕ್ಕಾಪಟ್ಟೆ ಬೋರಾಗುತ್ತೆ. ಸಿ ಯು ಸೂನ್.

ಸಿ ಯು. ಬಾಯ್.

ಇದು, ಹೆಂಡತಿಯನ್ನು ಕಳೆದುಕೊಂಡ, ಒಬ್ಬ ಮಗಳು ಅಮೆರಿಕಕ್ಕೆ, ಒಬ್ಬ ಮಗ ಇಂಗ್ಲೆಂಡಿಗೆ ಹೋದಮೇಲೆ, 65 ವರ್ಷದ ರಿಟೈರ್ ಆಗಿರುವ ಶಾಮರಾಯರಿಗೂ, ಮತ್ತು ಅವರ 6 ವರ್ಷದ ‘ಪ್ರೀತಿ’ ಎಂಬ ಬೆಕ್ಕಿಗೂ ಬೆಳಗಿನ ಜಾವ ನಡೆಯುವ ಸಂಭಾಷಣೆಯ ತುಣುಕು.