Saturday 31 July 2021

ಇಂಗ್ಲೆಂಡ್ ಪತ್ರ - 6

ಜನಾಂಗೀಯತೆಯ ಬಗ್ಗೆ ಒಂದಿಷ್ಟು ಆಲೋಚನೆಗಳು

2005ನೇ ಇಸ್ವಿ. ನಾನು ಇಂಗ್ಲೆಂಡಿಗೆ ಬಂದು ಒಂದು ವರ್ಷವಾಗಿತ್ತು. ನಾನಾಗ ಬಾರ್ನೆಟ್ ಎನ್ನುವ ಲಂಡನ್ನಿನ ಉತ್ತರ ಭಾಗದ ಪ್ರದೇಶದ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದೆ. ನಾನು ದಿನವೂ ಟ್ಯೂಬ್‍ನಲ್ಲಿ (ಲಂಡನ್ನಿನ ಲೋಕಲ್ ಟ್ರೇನಿಗೆ ಟ್ಯೂಬ್ ಎಂದು ಕರೆಯುತ್ತಾರೆ) ಸಂಚರಿಸುತ್ತಿದ್ದೆ. ನಾನು ಬಾರ್ನೆಟ್ ಸ್ಟೇಷನ್ನಿನಲ್ಲಿ ಇಳಿದು ಆಸ್ಪತ್ರೆಗೆ ತಲುಪುತ್ತಿದ್ದಂತೇ ಸೆಂಟ್ರಲ್ ಲಂಡನ್ನಿನಲ್ಲಿ ಬಾಂಬ್ ಧಾಳಿಯಾದ ಸುದ್ದಿ ಹಬ್ಬಿತ್ತು. ಈಗಿನಂತೆ ಆಗ ಟ್ವಿಟರ್ ಆಗಲಿ ವಾಟ್ಯ್‌ಆ್ಯಪ್ ಆಗಲಿ ಇರಲಿಲ್ಲ. ಬಿ.ಬಿ.ಸಿ ನ್ಯೂಸ್ ಚಾನೆಲ್ಲಿನಲ್ಲಿ ಬಿಸಿಬಿಸಿ ಸುದ್ದಿ ಅದೇ ತಾನೆ ಹೊರಹೊಮ್ಮುತ್ತಿತ್ತು. ನಾನು ಅಂದು ಇನ್ನೊಂದು ಹತ್ತು ನಿಮಿಷ ತಡವಾಗಿ ಮನೆಯಿಂದ ಹೊರಟಿದ್ದರೆ, ನಾನೂ ಆ ಬಾಂಬ್ ಧಾಳಿಯಾದ ಟ್ರೇನಿನಲ್ಲಿ ಇರುತ್ತಿದ್ದೆ, ಸತ್ತು ಹೋಗುತ್ತಿದ್ದೆನೋ, ಇಲ್ಲ ವಿಕಲಾಂಗನಾಗಿ ಬದುಕಿ ಉಳಿದಿರುತ್ತಿದ್ದೆನೋ ಗೊತ್ತಿಲ್ಲ. ಅದಿರಲಿ, ಲಂಡನ್ ಬಾಂಬ್ ಧಾಳಿಯಾಗಿ ಎರಡು ವಾರ ಕಳೆದಿರಬಹುದು. ನಾನು ಬಾರ್ನೆಟ್ ಟ್ಯೂಬ್ ಸ್ಟೇಷನ್ ಹತ್ತಿರದ ಬಸ್ ಸ್ಟಾಪಿನಲ್ಲಿ ಬಾರ್ನೆಟ್ ಆಸ್ಪತ್ರೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಗಿನ ಜಾವ ಎಂಟು ಗಂಟೆ ಇರಬಹುದು, ಆ ಚಿಕ್ಕ ನಿಲ್ದಾಣದಲ್ಲಿ ನಾನು ಒಬ್ಬನೇ ಇದ್ದೆ. ಎರಡು ಮೋಟರ್ ಬೈಕುಗಳು ಜೋರಾಗಿ ಬಂದು ನನ್ನ ಮುಂದೆಯೇ ಅನತಿದೂರದಲ್ಲಿ ಬಂದು ನಿಂತವು. ಇಬ್ಬರು ತಮ್ಮ ಹೆಲ್ಮೆಟ್ ತೆಗೆದು ನನ್ನ ಮುಖದ ಮೇಲೆ ಉಗಿದು, ‘ಪಾಕಿ‘ ಎಂದು ಬಯ್ದರು. ನನಗೆ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ, ಅಷ್ಟೊಂದು ಶಾಕ್ ನಲ್ಲಿದ್ದೆ. ಅವರು ನನಗೆ ಇನ್ನೇನು ಮಾಡಲಿದ್ದರೋ, ಸದ್ಯ, ಅದೇ ಸಮಯಕ್ಕೆ ಹಿಂದಿನಿಂದ ಬಸ್ಸು ಬಂತು. ಅವರು ಹೊರಟು ಹೋದರು. ನಾನು ನನ್ನ ಮುಖದ ಮೇಲಿನ ಎಂಜಲನ್ನು ಒರೆಸಿಕೊಂಡು ಬಸ್ಸೇರಿದೆ.


ಭಾರತದಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣಕ್ಕೆ-ಕೆಲಸಕ್ಕೆ ಇಂಗ್ಲೆಂಡಿಗೆ ಬರುವವರೆಗೆ ವರ್ಣಭೇದ/ಜನಾಂಗಭೇದ (ರೇಸಿಸಂ)ದ ಬಗ್ಗೆ ಅಲ್ಲಲ್ಲಿ ಓದಿ, ಕೆಲವು ಸಿನೆಮಾಗಳಲ್ಲಿ ನೋಡಿ ಗೊತ್ತಿತ್ತೇ ಹೊರತು, ಜನಾಂಗಭೇದದ ಆಳ ಅಗಲಗಳು ಮತ್ತು ಇತಿಹಾಸ ಒಂಚೂರೂ ಗೊತ್ತಿರಲಿಲ್ಲ. ರೇಸಿಸಂನ ಅನುಭವವೂ ಆಗಿರಲಿಲ್ಲ. ನಮಗೆ ಪಠ್ಯದಲ್ಲೂ ಜನಾಂಗಭೇದದ ಬಗ್ಗೆ ಹೆಚ್ಚಿನ ವಿವರಗಳು ಇರಲಿಲ್ಲ. ನಮ್ಮ ಶಿಕ್ಷಕರೂ ಅದರ ಬಗ್ಗೆ ಎಂದೂ ಮಾತಾಡಿದ್ದಿಲ್ಲ. ಕರ್ನಾಟಕದಲ್ಲಿ ನಾನು ಓದಿದ ಎಲ್ಲ ಊರುಗಳಲ್ಲೂ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದ್ದವರಾಗಿದ್ದರಿಂದ ಜನಾಂಗಭೇದ ಇರುವುದು ಸಾಧ್ಯವೇ ಇರಲಿಲ್ಲ, ಹಾಗಾಗಿ ಜನಾಂಗಭೇದದ ಬಗ್ಗೆ ಶಿಕ್ಷಣದಲ್ಲಿ ಪಠ್ಯವನ್ನು ಸೇರಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು.

ಆದರೆ ಲಿಂಗಭೇದ, ಜಾತಿಭೇದ, ಧರ್ಮಭೇದ ಮತ್ತು ಭಾಷಾಭೇದಗಳು ಬದುಕಿನ ಹೆಜ್ಜೆಹೆಜ್ಜೆಗೂ, ಮಾತುಮಾತಿಗೂ ಇರುತ್ತಿತ್ತಲ್ಲ. ಅವುಗಳ ಬಗೆಗೂ ಕೂಡ ನಮಗೆ ಪಠ್ಯವಿರಲಿಲ್ಲ, ಶಾಲೆಯಲ್ಲಿ ಯಾರೂ ಪಾಠ ಮಾಡಲಿಲ್ಲ, ಯಾವ ಪರೀಕ್ಷೆಗೂ ಅವುಗಳ ಬಗ್ಗೆ ಪ್ರಶ್ನೆ ಕೇಳುತ್ತಿರಲಿಲ್ಲ. ಅಸಮಾನತೆಯ ಬಗ್ಗೆ, ಸಮಾನತೆಯ ಬಗ್ಗೆ ಶಾಲೆಯಲ್ಲಿ ಒಂದೇ ಒಂದು  ಅಧ್ಯಾಯವಿರಲಿಲ್ಲ. ಬ್ರಾಹ್ಮಣರು ಎಲ್ಲರಿಗಿಂತ ಉತ್ಕೃಷ್ಟ ಜಾತಿಯವರು ಎಂದು ತಾವೇ ನಿರ್ಧಾರಮಾಡಿಕೊಂಡು ಸಮಾಜವನ್ನು ನಂಬಿಸಿದ್ದರು. `ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ,` ಎಂದು ಶಿಕ್ಷಕರೇ ಶಾಲೆಯಲ್ಲಿ ಜೋರಾಗಿ ಹೇಳಿ ನಗುತ್ತಿದ್ದರು. ಸಂಸ್ಕೃತ ಭಾಷೆಯು ಕನ್ನಡ ಮತ್ತು ಮರಾಠಿ ಭಾಷೆಗಿಂತ ಮಿಗಿಲು ಎನ್ನುವಂತೆ ಬೋಧಿಸಲಾಗುತ್ತಿತ್ತು. ದಕ್ಷಿಣ ಭಾಗದ ಕನ್ನಡಿಗರಿಗೆ ಉತ್ತರ ಕರ್ನಾಟಕದ ಕನ್ನಡಿಗರನ್ನು ಕಂಡರೆ ಅಸಡ್ಡೆ ಭಾವನೆಯಿತ್ತು. ಉತ್ತರ ಭಾರತದವರಿಗೆ ದಕ್ಷಿಣ ಭಾರತದವರನ್ನು ಕಂಡರೆ ‘ಮದ್ರಾಸಿ‘ ಎಂದು ಅರೆ-ಜನಾಂಗೀಯ ನಿಂದನೆ ದಿನವೂ ಕಿವಿಗೆ ಬೀಳುತ್ತಿತ್ತು. ಪೂರ್ವ ರಾಜ್ಯಗಳ ಜನರನ್ನು ಕಂಡರೆ ಪೂರ್ಣಪ್ರಮಾಣದ ಜನಾಂಗೀಯ ನಿಂದನೆ ಸರ್ವೇಸಾಮಾನ್ಯವಾಗಿತ್ತು, ಅವರಿಗೆ `ಚಿಂ..` ಎಂದೋ, ‘ನೇಪಾಲೀ, ಚೈನೀ‘ ಎಂದೋ ಅವ್ಯಾಚ್ಯವಾಗಿ ಕರೆಯುವುದು ನಡೆಯುತ್ತಿತ್ತು. 

ಇಂಗ್ಲೆಂಡಿನಲ್ಲೂ ಜನಾಂಗಭೇದ, ಭಾರತದ ಜಾತಿಭೇದದಷ್ಟೇ ತೀವ್ರವಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ತೋರಿಸಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿ‘ಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನುಗಳಿವೆ. ಹಾಗೆಯೇ ಆಫ್ರಿಕಾ ಮೂಲದಿಂದ ಬಂದವರಿಗೆ, ‘ನಿ..‘ ಶಬ್ದ ಪ್ರಯೋಗಿಸಿದರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. 

ಇದೆಲ್ಲ ಅಧೀಕೃತವಾಯಿತು. ಆದರೆ ಅನಧೀಕೃತವಾಗಿ ಜನಾಂಗಭೇದ ಇನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಕೆಲಸದಲ್ಲಿ, ದಾರಿಯಲ್ಲಿ, ಅಂಗಡಿಗಳಲ್ಲಿ, ರೆಸ್ಟೋರಂಟುಗಳಲ್ಲಿ ಏಶಿಯನ್ನರು ಮತ್ತು ಆಫ್ರಿಕನ್ನರು ಆಗಾಗ ಜನಾಂಗೀಯ ನಿಂದನೆಗೆ ನೇರವಾಗಿಯೋ ಪರೋಕ್ಷವಾಗಿಯೋ ಒಳಗಾಗುತ್ತಲೇ ಇರುತ್ತಾರೆ. ಬಿಳಿಯರೇ ಶ್ರೇಷ್ಟ ಜನಾಂಗ (white supremacist) ಎಂದು ನಂಬಿಕೊಂಡು ಉಗ್ರವಾದ, ಭಯೋತ್ಪಾದನೆ ಮಾಡುವವರೆಗೂ ಹೋಗುವ ಜನರು ಮತ್ತು ಸಂಘಗಳು ಇಲ್ಲಿ ಬೇಕಾದಷ್ಟಿವೆ.

ಕ್ಲಿನಿಕ್ಕಿಗೆ ಮತ್ತು ಆಸ್ಪತ್ರೆಗೆ ಬರುವ ಕೆಲವರು ತಮಗೆ ಬಿಳಿ-ವೈದ್ಯರೇ ಬೇಕೆಂದು ಕೇಳಿಕೊಳ್ಳುತ್ತಾರೆ. ಕಂದು ಮತ್ತು ಕಪ್ಪು ಜನಾಂಗದ ವೈದ್ಯರ ಮೇಲೆ ದೂರುಗಳೂ ಹೆಚ್ಚು ಕೇಸುಗಳೂ ಹೆಚ್ಚು, ಶಿಕ್ಷೆಗಳೂ ಹೆಚ್ಚು, ಅವರನ್ನು ವೈದ್ಯರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಗಳೂ ಹೆಚ್ಚು. 

ಕೆಲವು ವರ್ಷಗಳ ಹಿಂದೆ ಡಾ. ಹಡೀಜಾ ಬಾವಾ-ಗಾರ್ಬಾ ಎನ್ನುವ ಕಪ್ಪುಜನಾಂಗದ ವೈದ್ಯೆಗೆ, ಅವರು ಕೆಲಸದ ಸಮಯದಲ್ಲಿ ಮಾಡಿದ ತಪ್ಪಿನಿಂದಾಗಿ, ಕೋರ್ಟು ಜೈಲು ಶಿಕ್ಷೆಯನ್ನು ಕೊಟ್ಟಿತು. ವೈದ್ಯಕೀಯ ನ್ಯಾಯಮಂಡಲಿಯು ಒಂದು ವರ್ಷ ವೈದ್ಯಕೀಯ ಕೆಲಸದಿಂದ ವಜಾ ಮಾಡಿತು. ಆದರೆ ‘ಜನರಲ್ ಮೆಡಿಕಲ್ ಕೌನ್ಸಿಲ್‘ (ಈ ದೇಶದಲ್ಲಿ ವೈದ್ಯ್ರರನ್ನು ನಿಯಂತ್ರಿಸುವ ಸಂಸ್ಥೆ), ವೈದ್ಯಕೀಯ ನ್ಯಾಯಮಂಡಲಿಯ ನಿರ್ಣಯಕ್ಕೆ ಸವಾಲು ಹಾಕಿ, ಬಾವಾ-ಗರ್ಬಾ ಅವರನ್ನು ವೈದ್ಯರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವ ನಿರ್ಧಾರ ಮಾಡಿ ಗೆದ್ದಿತು (ಈಗ ಆ ತೀರ್ಪಿನ ವಿರುದ್ಧ ಬಾವಾ-ಗಾರ್ಬಾ ಗೆದ್ದಿದ್ದಾರೆ). ಬ್ಯಾಪಿಯೋ (British Association of Physicians of Indian Origin) ಸಂಸ್ಥೆಯು, ಬಾವಾ-ಗಾರ್ಬಾ ಬಿಳಿಜನಾಂಗದವಳಾಗಿದ್ದರೆ ‘ಜನರಲ್ ಮೆಡಿಕಲ್ ಕೌನ್ಸಿಲ್‘ ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತೇ ಎಂದು ಪ್ರಶ್ನಿಸಿತು. ವೈದ್ಯಸಂಘಟನೆಗಳಲ್ಲಿ ಮತ್ತು ಆಸ್ಪತ್ರಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಜನಾಂಗೀಯ ಭೇದದ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳಾದವು. ‘ಜನರಲ್ ಮೆಡಿಕಲ್ ಕೌನ್ಸಿಲ್‘ಅನ್ನು ಖಂಡಿಸಿ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಬರೆದರು. 

 ಇತ್ತೀಚೆ ಮುಗಿದ ಯುರೋಕಪ್ ಫುಟ್‍ಬಾಲ್ ಆಟದಲ್ಲಿ, ಇಂಗ್ಲೆಂಡ್ ತಂಡವು ಇಟಲಿ ತಂಡದ ವಿರುದ್ಧ ಪೆನಲ್ಟಿ ಶೂಟ್‍ನಲ್ಲಿ ಸೋತಿತು. ಪೆನೆಲ್ಟಿ ಶೂಟ್‍ನಲ್ಲಿ ತಪ್ಪಾಗಿ ಹೊಡೆದವರು ಕಪ್ಪುಜನಾಂಗಕ್ಕೆ ಸೇರಿದವರಾಗಿದ್ದರಿಂದ ಸಾಮಾಜಿಕ ತಾಣಗಳಲ್ಲಿ ಜನಾಂಗನಿಂದನೆಯ ಸುರಿಮಳೆಯಾಯಿತು. 

ಇಂಥ ಘಟನೆಗಳು ದಿನವೂ ನಡೆಯುತ್ತಲೇ ಇರುತ್ತವೆ, ಆಗಾಗ ವರದಿಯಾಗುತ್ತವೆ, ಕೆಲವೊಮ್ಮೆ ರಾಷ್ಟ್ರೀಯ ಅಂತರರಾಷ್ಟ್ರೀಯ ಸುದ್ದಿಯಾಗುತ್ತವೆ, ಮೋರ್ಚಾಗಳು ನಡೆಯುತ್ತವೆ, ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಜನಾಂಗೀಯ ನಿಂದನೆ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ, ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕಾನೂನುಗಳು, ಪತ್ರಿಕೆಗಳು, ದೃಶ್ಯಮಾಧ್ಯಮಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ. ಇತ್ತೀಚೆ ನಡೆದ ಯುರೋ ಕಪ್ ಫುಟ್‌ಬಾಲ್ ಪಂದ್ಯದಲ್ಲಿ ಇಂಗ್ಲೆಂಡಿನ ಆಟಗಾರರು ಸಮಾನತೆಯ ಬಗ್ಗೆ, ತಾರತಮ್ಯದ ಅಳಿವಿನ ಬಗ್ಗೆ ಮಂಡೆಯೂರಿ ಕುಳಿತು ಸಾಂಕೇತಿಕವಾಗಿ ಬಿಂಬಿಸಿ, ಜನರಲ್ಲಿ ಅರಿವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. 

ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ, ಜನಾಂಗಭೇದದ ಬಗ್ಗೆ, ಲಿಂಗ ತಾರತಮ್ಯದ ಬಗ್ಗೆ, ಸಾಮಾಜಿಕ ಸಮಾನತೆಯ ಬಗ್ಗೆ ಪ್ರಾರ್ಥಮಿಕ ಶಾಲೆಯಿಂದಲೇ ಶಿಕ್ಷಣ ಶುರುವಾಗುತ್ತದೆ. ಸೆಕೆಂಡರಿ ಶಾಲೆಗಳಲ್ಲಿ ಕೂಡ ಮುಂದುವರೆಯುತ್ತದೆ. ಇಂಗ್ಲೆಂಡಿನ ಶಾಲೆಗಳಲ್ಲಿ  PSHE (Personal Social Health Education) ಎನ್ನುವ ವಿಷಯವನ್ನು ಕಲಿಸಲಾಗುತ್ತದೆ (ಈ ವಿಷಯಕ್ಕೆ ಪರೀಕ್ಷೆ ಇರುವುದಿಲ್ಲ) ಮತ್ತು ಪ್ರತಿ ವಾರವೂ ಒಂದಾದರೂ ಪಿರಿಯಡ್ ಇರುತ್ತದೆ. ಈ ಪಿರಿಯಡ್ಡಿನಲ್ಲಿ ಜನಾಂಗಭೇದ ಮತ್ತು ಲಿಂಗ ಸಮಾನತೆಯ ಬಗ್ಗೆ ವಿವಿಧ ನಿಟ್ಟಿನಲ್ಲಿ ಪಾಠಮಾಡುತ್ತಾರೆ, ಮಕ್ಕಳ ನಡುವೆ ಚರ್ಚೆಯನ್ನು ಏರ್ಪಡಿಸುತ್ತಾರೆ, ಡಾಕ್ಯುಮೆಂಟರಿಗಳನ್ನು ತೋರಿಸಿ ವಿವರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಸಮಾನತೆಯಯ ಬಗ್ಗೆ, ಸಮಾಜದ ತಾರತಮ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. 

ಕೆಲವೇ ವರ್ಷಗಳ ಹಿಂದೆ ಬಂದ ಕನ್ನಡ ಸಿನೆಮಾ `ದೃಶ್ಯ` ಸಿನೆಮಾದಲ್ಲಿ ಪ್ರಶಾಂತ್ ಸಿದ್ದಿ (ನಾಯಕನ ಸಹಾಯಕನಾಗಿ ಕೆಲಸ ಮಾಡುವವನ ಪಾತ್ರ)ಯವರನ್ನು ಚಿತ್ರದ ನಾಯಕ (ರವಿಚಂದ್ರನ್) ಕರೆಯುವುದೇ `ನಿ..` ಎಂದು. ಒಂದು ಸಿನೆಮಾ ಮಾಡಲು ನೂರಾರು ಜನ ಕೆಲಸ ಮಾಡುತ್ತಾರೆ, ಅದರಲ್ಲಿ ಒಬ್ಬನೇ ಒಬ್ಬನಿಗೂ ಆ `ನಿ..` ಶಬ್ದ ರೇಸಿಸ್ಟ್ ಶಬ್ದ ಎಂದು ಗೊತ್ತಿರಲಿಲ್ಲವೇ? ಆಷ್ಟೇ ಅಲ್ಲ, ಸಿನೆಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡುವವರಿಗೂ ಗೊತ್ತಿರಲಿಲ್ಲವೇ? ಭಾರತೀಯ ಶಿಕ್ಷಣದಲ್ಲಿ ಜನಾಂಗಭೇದದ ವಿಷಯವು ಅಡಕವಾಗಿದ್ದರೆ ಇಂಥ ದೊಡ್ಡ ಪ್ರಮಾದವಾಗುತ್ತಿರಲ್ಲಿಲ್ಲ. 

‘ಫ್ರೆಂಚ್ ಬಿರಿಯಾನಿ‘ ಎನ್ನುವ ಕನ್ನಡ ಸಿನೆಮಾ ಇದೆ, ಅದರಲ್ಲಿ ಇರುವ ಬಿಳಿಜನಾಂಗದ ಯುರೋಪಿಯನ್ ಮಾತನಾಡುತ್ತಾ ಪೋಲೀಸ(ರಂಗಾಯಣ ರಘು)ನಿಗೆ ಹೇಳುತ್ತಾನೆ, ‘ನೀನು ರೇಸಿಸ್ಟ್.‘ ಅದಕ್ಕೆ ಉತ್ತರವಾಗಿ ಪೋಲೀಸ್, ‘ಹೌದು, ನಾನು ರೇಸಿಸ್ಟ್, ನನ್ನ ಹೆಂಡತಿಯೂ ರೇಸಿಸ್ಟ್, ಮಗನೂ ರೇಸಿಸ್ಟ್, ಟೋಟಲೀ ರೇಸಿಸ್ಟ್ ಫ್ಯಾಮಿಲಿ,‘ ಎಂದು ಖುಷಿಯಲ್ಲಿ ಹೇಳುತ್ತಾನೆ. ಯುರೋಪಿಯನ್ನನಿಗೆ ದಿಗಿಲಾಗುತ್ತದೆ. ಪೋಲೀಸನಿಗೆ ‘ರೇಸಿಸ್ಟ್‘ ಎಂದರೆ ‘ರೇಸಿನಲ್ಲಿ ಓಡುವವನ“, ಅವನಿಗೆ ರೇಸಿಸ್ಟ್ ಶಬ್ದದ ಅರ್ಥವೇ ಗೊತ್ತಿಲ್ಲ. ರೇಸಿಸಂ ಎಂದರೇನು, ಜನಾಂಗೀಯ ನಿಂದನೆ ಎಂದರೇನು ಎನ್ನುವುದು ಬಹಳಷ್ಟು ಭಾರತೀಯರಿಗೆ ಇನ್ನೂ ಏನೂ ಗೊತ್ತಿಲ್ಲ ಎನ್ನುವುದನ್ನು ಹಾಸ್ಯದ ರೂಪದಲ್ಲಿ ಸೂಕ್ಷ್ಮವಾಗಿ ಆ ಒಂದು ದೃಶ್ಯದಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ. 

(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)




Saturday 10 July 2021

ಇಂಗ್ಲೆಂಡ್ ಪತ್ರ - 5

ಯುನೈಟೆಡ್ ಕಿಂಗ್‍ಡಮ್, ಗ್ರೇಟ್ ಬ್ರಿಟನ್ ಮತ್ತು ಇಂಗ್ಲೆಂಡ್  


ಭಾರತವನ್ನು ಇಂಗ್ಲೀಷಿನಲ್ಲಿ ‘ಇಂಡಿಯಾ’ ಎನ್ನುತ್ತಾರೆ, ಉತ್ತರ ಭಾರತದ ವಿವಿಧ ಭಾಷೆಗಳಲ್ಲಿ ‘ಹಿಂದುಸ್ಥಾನ್’ ಎನ್ನುತ್ತಾರೆ, ಆದರೆ ಭೌಗೋಳಿಕವಾಗಿ ಈ ಮೂರೂ ಹೆಸರುಗಳು ಒಂದೇ ಭೂಭಾಗವನ್ನು ಹೇಳುತ್ತವೆಯಾದ್ದರಿಂದ ಒಂದು ಸಲ ಕೇಳಿಸಿಕೊಂಡರೆ ಸಾಕು ಅರ್ಥವಾಗಿ ಬಿಡುತ್ತದೆ. ‘ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು,’ ಎಂದು ಇಂಡಿಯಾದ ಎರಡು ಬೇರೆ ಬೇರೆ ಹೆಸರುಗಳನ್ನು ಸೇರಿಸಿ ಒಂದೇ ಸಾಲಿನಲ್ಲಿ ಹಾಡು ಹಾಡಿದರೂ, ಕೇಳುಗರಿಗೆ ಗೊಂದಲವೇನೂ ಆಗುವುದಿಲ್ಲ. ಬರ್ಮಾ ಅಂದರೂ ಒಂದೇ, ಮಾಯಮ್ಮಾರ್ ಎಂದರೂ ಒಂದೇ, ಎಂದು ಒಂದು ಸಲ ಹೇಳಿದರೆ ಸಾಕು, ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ. ಆದರೆ ನಾನಿರುವ ಈ ದೇಶದ ಗತಿ ಹಾಗಲ್ಲ. ಇಂಗ್ಲೆಂಡ್ ಎಂದರೆ ಬೇರೆ ಅರ್ಥ, ಗ್ರೇಟ್ ಬ್ರಿಟನ್ ಎಂದರೆ ಬೇರೆ ಅರ್ಥ, ಯುನೈಟಡ್ ಕಿಂಗ್‍ಡಮ್ (ಯು.ಕೆ) ಎಂದರೆ ಇನ್ನೊಂದು ಅರ್ಥ! ನಿಮ್ಮಲ್ಲಿ ಬಹಳಷ್ಟು ಓದುಗರಿಗೆ ಇವುಗಳ ನಡುವಿನ ವ್ಯತ್ಯಾಸ ಗೊತ್ತಿರಬಹುದು ಎಂದುಕೊಂಡಿದ್ದೇನೆ; ಗೊತ್ತಿದ್ದರೂ, ಈ ಸಲದ ನನ್ನ ಈ ‘ಇಂಗ್ಲೆಂಡ್ ಪತ್ರ’ವನ್ನು ಓದಿದರೆ, ಬಹುಷಃ ನಷ್ಟವೇನೂ ಆಗುವುದಿಲ್ಲ ಅಂದುಕೊಂಡಿದ್ದೇನೆ. 

ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಆಸ್ಸಾಂ ಇತ್ಯಾದಿ 29 ರಾಜ್ಯಗಳು (states) ಸೇರಿದರೆ ಅದು ಭಾರತವಾಗುತ್ತದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನೆವಾಡ, ಫ್ಲೋರಿಡಾ ಇತ್ಯಾದಿ 50 ರಾಜ್ಯಗಳು (states) ಸೇರಿದ ಪ್ರದೇಶಕ್ಕೆ ಅಮೇರಿಕೆಯ ಸಂಯುಕ್ತ ಸಂಸ್ಥಾನ ಅಥವಾ ಸರಳವಾಗಿ ಅಮೇರಿಕಾ ದೇಶ ಎನ್ನುತ್ತೇವೆ. ಅದು ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತದೆ. 

ಆದರೆ ನಾನಿರುವ ಈ ದೇಶ ಹಾಗಲ್ಲ! ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ನಾರ್ದರ್ನ್ (ಉತ್ತರ) ಐರ್‌ಲ್ಯಾಂಡ್ ಎನ್ನುವ ನಾಲ್ಕು ‘ದೇಶಗಳು’ (countries) ಸೇರಿರುವ ದೇಶಕ್ಕೆ ‘ಯುನೈಟೆಡ್ ಕಿಂಗ್‍ಡಮ್ (ಯು.ಕೆ)‘ ಎನ್ನುವ ದೇಶ (country) ಎನ್ನುತ್ತಾರೆ! ಏನು ‘ದೇಶಗಳು’ ಸೇರಿ ‘ಒಂದು ದೇಶ’ವಾಗುವುದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ಬಹುವಚನ ಸೇರಿ ಏಕವಚನ ಮಾಡಲಾದೀತೆ ಎಂದು ಜಗಳಕ್ಕೆ ಬರಬೇಡಿ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್‌ಲ್ಯಾಂಡ್ ಪ್ರದೇಶಗಳನ್ನು‘ದೇಶಗಳು (Countries)’ ಎನ್ನದೇ ‘ರಾಜ್ಯಗಳು’ (States) ಎಂದು ಹೇಳಿದ್ದರೆ ಯಾರಿಗೂ ಕನ್‍ಫ್ಯೂಸ್ ಆಗುತ್ತಲೇ ಇರಲಿಲ್ಲ ಎಂದು ಬಯ್ಯಬೇಡಿ. ಏಕೆಂದರೆ ಸ್ಕಾಟ್‌ಲ್ಯಾಂಡನ್ನೋ ವೇಲ್ಸ್‌ಅನ್ನೋ ‘ದೇಶ (country)’ವೆನ್ನುವ ಬದಲು ಅಪ್ಪಿ ತಪ್ಪಿ ‘ರಾಜ್ಯ (state)’ ಎಂದು ಯಾರಾದರೂ ಕರೆಯಲಿ, ಸ್ಕಾಟ್‌ಲ್ಯಾಂಡಿನವರು ಮತ್ತು ವೇಲ್ಸಿನವರು ನಖಶಿಕಾಂತ ಕೋಪ ಮಾಡಿಕೊಳ್ಳುತ್ತಾರೆ! ಅಧೀಕೃತವಾಗಿ ಇವುಗಳನ್ನು ರಾಜ್ಯ(state)ಗಳೆನ್ನದೇ ದೇಶ(country)ಗಳೆನ್ನುತ್ತಾರೆ. 

ಭಾರತದಲ್ಲಿ ರಾಜ್ಯಗಳಿರುವಂತೆ, ರಷ್ಯಾದಲ್ಲಿ ಗಣರಾಜ್ಯಗಳಿವೆ (republic), ಚೈನಾದಲ್ಲಿ ಪ್ರಾಂತಗಳಿವೆ (province). ಆದರೆ ದೇಶಗಳು ಸೇರಿ ದೇಶವಾದ ದೇಶ ಈ ಭೂಮಿಯ ಮೇಲೆ ಯುನೈಟೆಡ್ ಕಿಂಗ್‍ಡಮ್ (ಯು.ಕೆ) ಒಂದೇ ಇರಬೇಕು. ಯಾಕೋ ಇದು ತುಂಬಾ ಅಧಿಕಪ್ರಸಂಗವಾಯಿತು ಎಂದು ನೀವೆಂದುಕೊಂಡರೆ ಅದು ನಿಮ್ಮ ಸಮಸ್ಯೆ. ಕನ್ನಡದಲ್ಲಿ ಈ ದೇಶದ ಹೆಸರನ್ನು ಭಾಷಾಂತರ ಮಾಡಿದರೆ ‘ಸಂಯುಕ್ತ ಸಾಮ್ರಾಜ್ಯ’ ಎಂದಾಗುತ್ತದೆ; ಹಾಗೆಂದು ಯಾರಿಗಾದರೂ ಕನ್ನಡದಲ್ಲಿ ಹೇಳಿದರೆ ಅಥವಾ ಬರೆದರೆ, ಕನ್ನಡ ತಾಯಿಯ ಮೇಲಾಣೆ, ಯಾವ ಕನ್ನಡಿಗನಿಗೂ ನಾನು ಯಾವ ದೇಶದ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಅರ್ಥವಾಗುವುದಿಲ್ಲ! ಹಾಗಾಗಿ ಯುನೈಟೆಡ್ ಕಿಂಗ್‍ಡಮ್‍ ದೇಶವನ್ನು ಕನ್ನಡದಲ್ಲಿ ಬರೆಯುವಾಗ ಇಂಗ್ಲೆಂಡ್ ಎಂದೋ ಅಥವಾ ಬ್ರಿಟನ್ ಎಂದೋ ತಪ್ಪುತಪ್ಪಾಗಿ ಬರೆಯುತ್ತೇವೆ! ಯು.ಕೆ ಎಂದು ಚಿಕ್ಕದಾಗಿ ಬರೆದರೆ ಸರಿಯಾಗುತ್ತದೆ, ಆದರೆ ಕನ್ನಡದ ಜನರು ‘ಉತ್ತರ ಕನ್ನಡ‘ ಎಂದುಕೊಳ್ಳುತ್ತಾರೆ, ಏನು ಮಾಡುವುದು? 

ನಿಮಗೀಗ ಇಂಗ್ಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ (ಯು.ಕೆ) ನಡುವಿನ ವ್ಯತ್ಯಾಸ ಅರ್ಥವಾಯಿತು ಎಂದುಕೊಂಡಿದ್ದೇನೆ. ಹಾಗಾದರೆ ಈ ‘ಗ್ರೇಟ್ ಬ್ರಿಟನ್’ ಎಂದರೇನು? ಗ್ರೇಟ್ ಬ್ರಿಟನ್ ಅಂದರೆ ‘ಯು.ಕೆ’ ತಾನೆ ಎಂದು ನೀವಂದುಕೊಂಡಿದ್ದರೆ ಅದು ಖಂಡಿತ ತಪ್ಪು. ಯು.ಕೆ ಒಂದು ದ್ವೀಪಗಳ ದೇಶ. ಅದರಲ್ಲಿ ಅತ್ಯಂತ ಗೊಡ್ಡ ದ್ವೀಪದ ಹೆಸರೇ ಗ್ರೇಟ್ ಬ್ರಿಟನ್. “ಹಾಗಾದರೆ ‘ಲಿಟಲ್ ಬ್ರಿಟನ್’ ಎನ್ನುವ ದ್ವೀಪವೂ ಇರಬೇಕಲ್ಲ,” ಎಂದು ನೀವು ಕೇಳಬೇಕು. ಇಲ್ಲ ಸ್ವಾಮಿ, ‘ಲಿಟಲ್ ಬ್ರಿಟನ್’ ಎನ್ನುವ ಹೆಸರಿನ ದ್ವೀಪ ಇಲ್ಲ. “ಹಾಗೆಂದ ಮೇಲೆ ಈ ಪುಟ್ಟ ದ್ವೀಪಕ್ಕೆ ‘ಗ್ರೇಟ್ ಬ್ರಿಟನ್’ಎಂದು ಏಕೆ ಕರೆಯಬೇಕು, ಬರೀ ‘ಬ್ರಿಟನ್’ ಎಂದು ಕರೆದರೆ ಸಾಲುತ್ತಿರಲಿಲ್ಲವೇ,” ಎಂದು ನನ್ನನ್ನು ಬಯ್ಯಬೇಡಿ, ಈ ದೇಶದಲ್ಲಿ ಪ್ರಿಫಿಕ್ಸ್ ಆಗಿ ಗ್ರೇಟ್, ಗ್ರ್ಯಾಂಡ್ ಸೇರಿಸುವುದು ರೂಢಿಯಾಗಿಬಿಟ್ಟಿದೆ (ಗ್ರೇಟ್ ಬರ್‌ಮಿಂಗ್‌ಹ್ಯಾಮ್ ರನ್, ಗ್ರೇಟ್ ಬ್ರಿಟಿಷ್ ಬೇಕ್ ಆಫ್, ಗ್ರ್ಯಾಂಡ್ ಸೆಂಟ್ರಲ್ ಇತ್ಯಾದಿ); ಮೈಸೂರಿನವರು ಎಲ್ಲದಕ್ಕೂ ಮೈಸೂರು ಸೇರಿಸುವುದಿಲ್ಲವೇ (ಮೈಸೂರು ಮಲ್ಲಿಗೆ, ಮೈಸೂರು ಪಾಕು, ಮೈಸೂರು ಮಸಾಲೆ ದೋಸೆ), ಹಾಗೆಯೇ ಇದು. 

ಈ ಗ್ರೇಟ್ ಬ್ರಿಟನ್ ಎನ್ನುವ ದ್ವೀಪದಲ್ಲಿ ಯು.ಕೆ ದೇಶದ ನಾಲ್ಕು ದೇಶಗಳಲ್ಲಿ ಮೂರು ದೇಶಗಳಿವೆ, ಅವೇ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್. ಏನು ಒಂದು ದ್ವೀಪದಲ್ಲಿ ಮೂರು ದೇಶಗಳಾ ಎಂದು ಮೂಗು ಮುರಿಯಬೇಡಿ. ಹಾಗಾದರೆ ಈ ನಾಲ್ಕನೇ ದೇಶವಾದ ಉತ್ತರ ಐರ್‌ಲ್ಯಾಂಡ್ ಎಲ್ಲಿದೆ? ಅದು ಗ್ರೇಟ್ ಬ್ರಿಟನ್ ದ್ವೀಪದ ಪಶ್ಚಿಮದಲ್ಲಿರುವ ಚಿಕ್ಕ ದ್ವೀಪವಾದ ಐರ್‌ಲ್ಯಾಂಡ್‍ನಲ್ಲಿದೆ. ಹಾಗಾದರೆ ಈ ನಾಲ್ಕನೇಯ ದೇಶಕ್ಕೆ ಉತ್ತರ ಐರ್‌ಲ್ಯಾಂಡ್ ಎನ್ನುವ ಬದಲು ಐರ್‌ಲ್ಯಾಂಡ್ ಎಂದೇ ಕರೆಯಬಹುದಿತ್ತಲ್ಲ! ಅದು ಹಾಗಲ್ಲ ಮಾರಾಯ್ರೇ, ಐರ್‌ಲ್ಯಾಂಡ್ ಎನ್ನುವ ದ್ವೀಪದ ಒಂದು ಚಿಕ್ಕ ಉತ್ತರ ಭಾಗ ಮಾತ್ರ ‘ಯು.ಕೆ’ಗೆ ಸೇರಿದ್ದು, ಅದಕ್ಕೇ ಅದು ಉತ್ತರ ಐರ್‌ಲ್ಯಾಂಡ್, ಅದು ಯು.ಕೆ.ಯ ನಾಲ್ಕನೇಯ ದೇಶ. ಹಾಗಾದರೆ ಐರ್‌ಲ್ಯಾಂಡ್ ದ್ವೀಪದ ದಕ್ಷಿಣ ಭಾಗಕ್ಕೆ ಇರುವ ಭೂಮಿಗೆ ‘ದಕ್ಷಿಣ ಐರ್‌ಲ್ಯಾಂಡ್’ ಎನ್ನುತ್ತಾರಾ? ಇಲ್ಲ,ಅದು ಇನ್ನೊಂದು ದೇಶ, ಯು.ಕೆ ಗೆ ಸೇರಿರದ ಸ್ವತಂತ್ರ ದೇಶ, ಅದೇ ‘ಐರ್‌ಲ್ಯಾಂಡ್’! ಹಾಗಾದರೆ ಐರ್‌ಲ್ಯಾಂಡ್ ಎನ್ನುವ ಸ್ವತಂತ್ರ ದೇಶ ನಿಜವಾದ ಲೆಕ್ಕದಲ್ಲಿ ದಕ್ಷಿಣ ಐರ್‌ಲ್ಯಾಂಡ್, ಹಾಗೆಂದು ಯಾರಾದರೂ ಐರಿಷ್ ಮುಂದೆ ಹೇಳಿ ನೋಡಿ, ನಿಮ್ಮ ಹಲ್ಲು ನಿಮ್ಮ ಕೈಯಲ್ಲಿರುತ್ತವೆ! 

ಇನ್ನೂ ಮಜಕೂರಿನ ವಿಷಯಗಳನ್ನು ಹೇಳುತ್ತೇನೆ ಕೇಳಿ. ಭಾರತದೇಶದ ಚುನಾಯಿತ ನಾಯಕನಿಗೆ ಪ್ರಧಾನ ಮಂತ್ರಿ (Prime Minister) ಎಂತಲೂ, ರಾಜ್ಯದ ಚುನಾಯಿತ ನಾಯಕನಿಗೆ ಮುಖ್ಯಮಂತ್ರಿ (Chief Minister) ಎಂತಲೂ ಕರೆಯುತ್ತೇವೆ ತಾನೆ? ಹಾಗಾದರೆ ರಾಜ್ಯ ಅಥವಾ ಪ್ರಾಂತವನ್ನೇ ದೇಶವೆನ್ನುವ ಈ ಯು.ಕೆ.ನಲ್ಲಿ ಇಂಥ ನಾಯಕರಿಗೆ ಏನೆನ್ನುತ್ತಾರೆ ಎನ್ನುವ ಕುತೂಹಲ ಹುಟ್ಟುತ್ತದಲ್ಲವೇ? ಯು.ಕೆ ದೇಶದ ನಾಲ್ಕು ದೇಶಗಳಲ್ಲಿ ಮೂರು ದೇಶಗಳ (ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ನಾರ್ತ್ ಐರ್‌ಲ್ಯಾಂಡ್) ಮುಖ್ಯನಾಯಕನಿಗೆ ಮೊದಲಮಂತ್ರಿ (First Minister) ಎಂದು ಕರೆಯುತ್ತಾರೆ, ಭಾರತದಲ್ಲಿ ರಾಜ್ಯಗಳ ಮುಖಂಡರನ್ನು ಮುಖ್ಯಮಂತ್ರಿ (chief minister) ಎಂದು ಕರೆದಂತೆ. ಇನ್ನು ಉಳಿದ ನಾಲ್ಕನೇ ದೇಶವಾದ ಇಂಗ್ಲೆಂಡ್ ದೇಶಕ್ಕೆ ಮೊದಲಮಂತ್ರಿಯೇ ಇಲ್ಲ! ಹಾಗಾಗಿ ದೇಶ ಚುನಾಯಿಸಿದ ಪ್ರಧಾನಮಂತ್ರಿಯೇ ಇಂಗ್ಲೆಂಡ್ ದೇಶವನ್ನೂ ನೋಡಿಕೊಳ್ಳಬೇಕು. ಇದು ಹೇಗೆ ಎಂದರೆ, ಭಾರತದ ಎಲ್ಲ ರಾಜ್ಯಗಳ ನಾಯಕರು ಅವರವರ ರಾಜ್ಯಗಳ ಮುಖ್ಯಮಂತ್ರಿಗಳು, ಆದರೆ ಕರ್ನಾಟಕಕ್ಕೆ ಮುಖ್ಯಮಂತ್ರಿಯಿಲ್ಲ ಎನ್ನುವಂತೆ! ಭಾರತದ ಚುನಾವಣೆಯೊಂದರಲ್ಲಿ ಬಿಹಾರಿಯೊಬ್ಬ ಪ್ರಧಾನಮಂತ್ರಿ ಆದ ಎಂದುಕೊಳ್ಳಿ, ಆ ಬಿಹಾರಿಯೇ ಕರ್ನಾಟಕವನ್ನು ನೋಡಿಕೊಳ್ಳಬೇಕು, ಏಕೆಂದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಇಲ್ಲವಲ್ಲ! ಈಗಾಗಲೇ ಹತ್ತು ಜನ ಸ್ಕಾಟ್‌ಲ್ಯಾಂಡ್ ದೇಶದವರು ಯು.ಕೆ. ಯ ಪ್ರಧಾನಮಂತ್ರಿಗಳಾಗಿ ಹೋಗಿದ್ದಾರೆ, ಹಾಗಾಗಿ ಅವರು ಅಪರೋಕ್ಷವಾಗಿ ಇಂಗ್ಲೆಂಡ್ ದೇಶವನ್ನೂ ಆಳಿದ್ದಾರೆ. 

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಸ್ಕಾಟ್‌ಲ್ಯಾಂಡಿನ ಬಹಳಷ್ಟು ಜನರಿಗೆ ಇಂಗ್ಲೆಂಡಿನ ಜನರನ್ನು ಕಂಡರಾಗುವುದಿಲ್ಲ. ಇದು ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದದ ತರಹ, ಕರ್ನಾಟಕ ತಮಿಳುನಾಡಿನ ಕಾವೇರಿ ವಿವಾದದ ತರಹ ಇರಬಹುದೇ ಅನಿಸಬಹುದು; ಇದು ಅದಕ್ಕಿಂತ ಸ್ವಲ್ಪ ಹೆಚ್ಚೇ ಅನ್ನಿ. ಎಷ್ಟು ಹೆಚ್ಚು ಎಂದರೆ ಕೆಲವು ವರ್ಷಗಳ ಹಿಂದೆ ಯು.ಕೆ ಯಿಂದ ಹೊರಬಂದು ಸ್ವತಂತ್ರ ದೇಶವಾಗಲು ಸ್ಕಾಟ್‌ಲ್ಯಾಂಡ್ ಮತದಾನವನ್ನು ಮಾಡಿತ್ತು, ಕೂದಲೆಳೆಯಲ್ಲಿ ಸ್ಕಾಟ್‌ಲ್ಯಾಂಡ್ ಸ್ವತಂತ್ರ ದೇಶವಾಗುವ ಅವಕಾಶ ತಪ್ಪಿಹೋಯಿತು. ಇದರ ಹೋಲಿಕೆ ಹೇಗೆಂದರೆ, ತಮಿಳುನಾಡಿನ ಜನ ತಮಗೆ ತಮಿಳದೇಶ ಬೇಕು ಎಂದು ತಮಿಳುನಾಡಿನ ಜನರೇ ಮತದಾನ ಮಾಡಿಕೊಂಡಂತೆ. 

ಇನ್ನೂ ಕೆಲವು ವಿಚಿತ್ರವೆನ್ನಿಸುವ ವಿಷಯಗಳಿವೆ. ಯು.ಕೆ.ಯಲ್ಲಿರುವ ಆರೋಗ್ಯ ವ್ಯವಸ್ಥೆ (ನ್ಯಾಷನಲ್ ಹೆಲ್ತ್ ಸರ್ವೀಸ್ - NHS) ಈ ದೇಶದಲ್ಲಿರುವ ಪ್ರತಿಯೊಬ್ಬರಿಗೆ ಉಚಿತ ಎಂದು ಈ ಹಿಂದೆ ಬರೆದಿರುವೆನಲ್ಲವೇ, ಆದರೆ ವೈದ್ಯರು ಕೊಡುವ ಮಾತ್ರೆಗಳ ಚೀಟಿ(prescription)ಯ ಪ್ರತಿ ಐಟಂಗೆ ‘ಇಂಗ್ಲೆಂಡಿ’ನಲ್ಲಿ ಸುಮಾರು ಹತ್ತು ಪೌಂಡ್ (ಸುಮಾರು ಸಾವಿರ ರೂಪಾಯಿ) ಕೊಡಬೇಕು. 25 ಪೆನ್ಸ್ (25 ರೂಪಾಯಿ)ಗೆ ಯಾವುದೇ ಅಂಗಡಿಯಲ್ಲಿ ವೈದ್ಯರ ಚೀಟಿಯಿಲ್ಲದೇ ಸಿಗುವ ಕ್ರೋಸಿನ್ ಮಾತ್ರೆಯನ್ನು ವೈದ್ಯರು ಬರೆದು ಕೊಟ್ಟರೆ, ಅದಕ್ಕೂ ಹತ್ತು ಪೌಂಡ್ ಕೊಡಬೇಕು!  ಆದರೆ ಸಾವಿರಾರು ಪೌಂಡ್ ಬೆಲೆಬಾಳುವ ಮಾತ್ರೆಯನ್ನು ಬರೆದುಕೊಟ್ಟರೂ ಹತ್ತು ಪೌಂಡ್ ಕೊಟ್ಟರೆ ಸಾಕು! ಆದರೆ ಇದಕ್ಕೂ ಮಜಕೂರಿನ ವಿಷಯವೆಂದರೆ ವೇಲ್ಸ್, ಸ್ಕಾಟ್‌ಲ್ಯಾಂಡ್ ಮತ್ತು ಉತ್ತರ ಐರ್‌ಲ್ಯಾಂಡಿನವರಿಗೆ ಇದೂ ಉಚಿತ. ಇದರ ಲೆಕ್ಕ ಹೇಗೆ ಆಯಿತು ಎಂದರೆ, ಕರ್ನಾಟಕದವರು ಮಾತ್ರ ವೈದ್ಯರ ಚೀಟಿಗೆ ದುಡ್ಡು ಕೊಡಬೇಕು, ಕೇರಳ, ಆಂಧ್ರ ಮತ್ತು ತೆಲಂಗಾಣದವರಿಗೆ ಉಚಿತ ಎಂಬಂತೆ! ಹೀಗೆ ಭಾರತದಲ್ಲಿ ಆಗಿದ್ದರೆ, ಕರ್ನಾಟಕದವರು ಚಳುವಳಿ ಮಾಡದೇ ಬಿಡುತ್ತಿದ್ದರೇ? ಆದರೆ ಇಂಗ್ಲೆಂಡಿನವರು ಮಾತ್ರ ತೆಪ್ಪಗೆ ದುಡ್ಡುಕೊಟ್ಟು ಮಾತ್ರೆಗಳನ್ನು ಪಡೆಯುತ್ತಾರೆ. 

ಈ ವಿಚಿತ್ರಗಳು ಇಲ್ಲಿಗೇ ಮುಗಿಯುವುದಿಲ್ಲ. ಇಂಗ್ಲೆಂಡಿನಲ್ಲಿರುವ ಮಕ್ಕಳು ಯು.ಕೆ.ಯ ಯಾವುದೇ ವಿಶ್ವವಿದ್ಯಾನಿಯದಲ್ಲಿ ಯಾವುದೇ ಡಿಗ್ರಿ ಕೋರ್ಸ್ ಮಾಡಲು (ಮೆಡಿಕಲ್ ಇರಲಿ ಆರ್ಟ್ ಇರಲಿ ಶುಲ್ಕ ಒಂದೇ) ವರ್ಷಕ್ಕೆ 9000 ಪೌಂಡ್ (9 ಲಕ್ಷ ರೂಪಾಯಿಗಳು) ಕೊಡಬೇಕು. ಆದರೆ ಸ್ಕಾಟ್‌ಲ್ಯಾಂಡಿನ ಮಕ್ಕಳು ಸ್ಕಾಟ್‌ಲ್ಯಾಂಡಿನ ವಿಶ್ವವಿದ್ಯಾನಿಲಯಗಳಲ್ಲಿ ಓದಲು, ವೇಲ್ಸ್‌‍ನ ಮಕ್ಕಳು ವೇಲ್ಸ್‌ನ ವಿಶ್ವವಿದ್ಯಾನಿಲಯಗಳಲ್ಲಿ ಓದಲು, ಉತ್ತರ ಐರ್‌ಲ್ಯಾಂಡಿನವರು ತಮ್ಮ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಇಷ್ಟೆಲ್ಲ ಕೊಡಬೇಕಾಗಿಲ್ಲ, ಹೆಚ್ಚೂ ಕಡೆಮೆ ಪುಗಸಟ್ಟೆ ಎಂದರೂ ತಪ್ಪಿಲ್ಲ. ಇದು ಹೇಗೆ ಎಂದರೆ, ಕರ್ನಾಟಕದ ಮಕ್ಕಳು ಕರ್ನಾಟಕದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಶುಲ್ಕ ಕೊಡಬೇಕು, ಆದರೆ ತಮಿಳುನಾಡಿನ ಮಕ್ಕಳು ತಮಿಳುನಾಡಿನ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಶುಲ್ಕ ಕೊಡಬೇಕಾಗಿಲ್ಲ ಎನ್ನುವಂತೆ!      

ಕ್ರೀಡೆಗಳ ವಿಷಯಕ್ಕೆ ಬಂದರೆ ಇದು ಇನ್ನೂ ಸಂಕೀರ್ಣವಾಗುತ್ತದೆ. ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ಟನ್ನೇ ತೆಗೆದುಕೊಳ್ಳೋಣ. ಈಗ ಆಗಸ್ಟಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸರಣಿ ಆರಂಭವಾಗುತ್ತದೆ ತಾನೆ? ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಯು.ಕೆ.ಯ ಕ್ರಿಕೆಟ್ ತಂಡ ಎಂದು ಯಾವತ್ತೂ ಕರೆಯುವುದಿಲ್ಲ. ಏಕೆಂದರೆ ಸ್ಕಾಟ್‌ಲ್ಯಾಂಡಿಗೆ ತನ್ನದೇ ಆದ ಕ್ರಿಕೆಟ್ ತಂಡವಿದೆ ಮತ್ತು ಅದು ಪ್ರತ್ಯೇಕವಾಗಿ ಅಂತರರಾಷ್ಟ್ರೀಯವಾಗಿ ಸ್ಪರ್ಧಿಸುತ್ತದೆ. ಇದು ಹೇಗೆ ಅಂದರೆ, ಕರ್ನಾಟಕ ಪ್ರತ್ಯೇಕವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದಂತೆ! ವರ್ಲ್ಡ್‌ಕಪ್ ಫೈನಲ್ ನ್ಯೂಜಿಲೆಂಡ್ ಮತ್ತು ಕರ್ನಾಟಕದ ನಡುವೆ ಎಂದರೆ ಹೇಗೆ ಅನಿಸಬಹುದು? ಇತ್ತೀಚೆ ಮುಗಿದ ವರ್ಲ್ಡ್‌ಕಪ್ ಫೈನಲ್‍ನಲ್ಲಿ ಆದದ್ದೂ ಅದೇ! ಪಂದ್ಯ ನಡೆದದ್ದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ, ನ್ಯೂಜಿಲೆಂಡ್ ಮತ್ತು ಯು.ಕೆ.ಯ ನಡುವೆ ಅಲ್ಲ! 

ಸ್ಕಾಟ್‌ಲ್ಯಾಂಡಿನ ಕ್ರಿಕೆಟ್ ತಂಡಕ್ಕೆ ಪ್ರತ್ಯೇಕ ಅಂತರರಾಷ್ಟೀಯ ಮನ್ನಣೆ ಇರಬೇಕಾದರೆ, ವೇಲ್ಸ್ ಮತ್ತು ಉತ್ತರ ಐರ್‌ಲ್ಯಾಂಡಿಗೆ ಕೂಡ ಇರಬೇಕಲ್ಲವೇ? ಇಲ್ಲ, ಏಕೆಂದರೆ ವೇಲ್ಸ್ ಮತ್ತು ಇಂಗ್ಲೆಂಡ್ ಸೇರಿ ಒಂದು ತಂಡ. ಹಾಗಾದರೆ ಇಂಗ್ಲೆಂಡ್ ತಂಡವನ್ನು ‘ಇಂಗ್ಲೆಂಡ್-ವೇಲ್ಸ್’ ತಂಡ ಎಂದು ಕರೆಯಬೇಕಲ್ಲವೇ? ಹೌದು, ಆದರೆ ಹಾಗೆ ಕರೆಯುವುದಿಲ್ಲ, ವೇಲ್ಸಿನವರೇ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಮಗೇಕೆ ಅದರೆ ಉಸಾಬರಿ? ಆಷ್ಟಾಗಿ ಈ ‘ಇಂಗ್ಲೆಂಡ್-ವೇಲ್ಸ್‘ ತಂಡದಲ್ಲಿ ಈಗ ಒಬ್ಬನೇ ಒಬ್ಬ ವೇಲ್ಸ್‌ನ ಆಟಗಾರನೂ ಇಲ್ಲ, ಆ ಮಾತು ಬೇರೆ ಬಿಡಿ.

ಇನ್ನು ಉತ್ತರ ಐರ್‌ಲ್ಯಾಂಡಿನವರು ಸ್ವತಂತ್ರ ದೇಶವಾದ ಐರ್‌ಲ್ಯಾಂಡಿನ ಜೊತೆ ಸೇರಿ ‘ಐರ್‌ಲ್ಯಾಂಡ್’ ಎಂದು ಅಂತರರಾಷ್ಟೀಯವಾಗಿ ಸ್ಪರ್ಧಿಸುತ್ತಾರೆ, ತನ್ನ ಸಮಷ್ಟಿ ದೇಶವಾದ ಯು.ಕೆ.ಯ ಬೇರೆ ದೇಶಗಳ ಜೊತೆ ಸೇರಿ ಅಲ್ಲ. ಉತ್ತರ ಐರ್‌ಲ್ಯಾಂಡ್ ಯು.ಕೆ ಗೆ ಸೇರಿದ್ದರೂ ಅವರು ಕ್ರಿಕೆಟ್ ಆಡುವುದು ತಮ್ಮ ನೆರೆಯ ಸ್ವತಂತ್ರ ದೇಶವನ್ನು ಸೇರಿ ಮತ್ತು ಮತ್ತು ಅವರು ಇಂಗ್ಲೆಂಡ್ ವಿರುದ್ಧ ಮ್ಯಾಚ್ ಕೂಡ ಆಡುತ್ತಾರೆ! ಇದು ಹೇಗೆ ಆಯಿತು ಎಂದರೆ, ಪಶ್ಮಿಮ ಬಂಗಾಲ ರಾಜ್ಯವು ಬಂಗ್ಲಾದೇಶದೊಡನೆ ಸೇರಿ, ಭಾರತದ ವಿರುದ್ಧ ಮ್ಯಾಚ್ ಆಡಿದಂತೆ, ಊಹಿಸಲೂ ಸಾಧ್ಯವೇ? ಇನ್ನೂ ವಿಚಿತ್ರವೆಂದರೆ, ಈಗಿನ ಇಂಗ್ಲೆಂಡಿನ ಒಂದು ದಿನ ಮತ್ತು ಟಿ20 ತಂಡದ ನಾಯಕನಾಗಿರುವ ಇಯಾನ್ ಮಾರ್ಗನ್, ಐರ್‌ಲ್ಯಾಂಡ್ ದೇಶದಲ್ಲಿ ಹುಟ್ಟಿ ಬೆಳೆದು (ಉತ್ತರ ಐರ್‌ಲ್ಯಾಂಡ್ ಅಲ್ಲ) ಐರ್‌ಲ್ಯಾಂಡ್ ತಂಡಕ್ಕೆ ಆಡಿದವನು (ಅವನ ತಂದೆ ಐರಿಷ್, ತಾಯಿ ಇಂಗ್ಲೀಷ್)! ಇದು ಹೇಗೆಂದರೆ ಪಾಕಿಸ್ಥಾನದಲ್ಲಿ ಜನಿಸಿ ಬೆಳೆದಿರುವ ವ್ಯಕ್ತಿಯೊಬ್ಬ, ತನ್ನ ತಾಯಿ ಭಾರತೀಯಳೆಂಬ ಕಾರಣಕ್ಕೆ ಭಾರತಕ್ಕೆ ಬಂದು ಕ್ರಿಕೆಟ್ ತಂಡದ ನಾಯಕನಾದಂತೆ, ಇದನ್ನು ಊಹಿಸಲೂ ಸಾಧ್ಯವೇ?

ಈಗ ನಡೆಯುತ್ತಿರುವ ಯುರೋ-2020 ಫುಟ್‍ಬಾಲ್‍ ಸ್ಪರ್ಧೆಯಲ್ಲಿ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್ ತಂಡಗಳಿದ್ದವು, ಯು.ಕೆ.ಯ ತಂಡ ಎಂದು ಇಲ್ಲವೇ ಇಲ್ಲ. ಈ ಲೇಖನ ಬರೆಯುವ ವೇಳೆಗೆ ಇಂಗ್ಲೆಂಡ್ ಫೈನಲ್ ತಲುಪಿದೆ, ಮತ್ತು ವೇಲ್ಸ್ ಮತ್ತು ಸ್ಕಾಟ್‌ಲ್ಯಾಂಡ್ ತಂಡಗಳು ನಿರ್ಗಮಿಸಿವೆ (ಉತ್ತರ ಐರ್‌ಲ್ಯಾಂಡ್ ಅರ್ಹತೆಯನ್ನೂ ಪಡೆಯಲಿಲ್ಲ). ಹಾಗಾದರೆ ವೇಲ್ಸ್, ಉತ್ತರ ಐರ್‌ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡಿನವರು ಇಂಗ್ಲೆಂಡ್ ತಂಡವು ಯುರೋಕಪ್ ಗೆಲ್ಲಲಿ ಎಂದು ಹಾರೈಸಿ ಬೆಂಬಲಿಸುತ್ತಾರೋ ಅಥವಾ ಸೋಲಲಿ ಎಂದು ಶಾಪ ಹಾಕುತ್ತಾರೋ ನೀವೇ ಊಹಿಸಿ!

(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)