Thursday 2 May 2024

ನೋಡೂಣಂತ

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ

ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ

ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ

ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ

ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ

ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ

ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಹಾಡೂಣಂತ

(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)

Monday 18 March 2024

ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

ನಾನು ಬರೆದ ಆ ಕತೆಯನ್ನು ತಿಂದಳು 
ಆ ಕತೆ ತಿಂದಾದ ಮೇಲೆ ನಾ ಬರೆದ 
 ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ 
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು 

 ನಾನು ಅವಳನ್ನು ತಡೆಯಹೋದೆ 
ನಕ್ಕು ಕಣ್ಣು ಮಿಟುಕಿಸದಳು 

ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು 
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು 
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು 
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು 

 ನಾನು ಅವಳನ್ನು ತಡೆಯಹೋದೆ 
ಕೈ ಸವರಿ ಮಾತಿಗಿಳಿದಳು 

 ನನ್ನ ಎಲ್ಲ ಪಾಸ್ವರ್ಡ್ ಪಡೆದಳು 
 ನನ್ನ ಬರವಣಿಗೆಯ ಫೈಲುಗಳನ್ನು 
 ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು 
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು 

 ನಾನು ಅವಳನ್ನು ತಡೆಯಹೋದೆ 
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು 

 ನನ್ನ ಹಳೆಬಟ್ಟೆಗಳನ್ನು ಬೀಸಾಕಿ 
 ಹೊಸ ಬಟ್ಟೆಗಳ ತಂದಳು 
ಗಡ್ಡ ತಲೆಗಳ ಟ್ರಿಮ್ ಮಾಡಿದಳು 
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು 

 ನಾನು ಅವಳನ್ನು ತಡೆಯಹೋದೆ 
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು 

ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ 
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು 
 ಮಲಗುವ ಮಂಚವನ್ನು ಗಟ್ಟಿಗೊಳಿಸಿ 
ಹೊಸ ಗಾದೆ ದಿಂಬು ಹಾಕಿದಳು 

ನಾನು ಇನ್ನು ತಡೆಯದಾದೆ 
ಅವಳ ದೇಹದಲ್ಲಿ ಲೀನವಾದೆ 

ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು 
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು 
ಅವಳು ತಿಂದ ಆ ಕತೆಯ ಹೆಸರು, 
`ನನಗೆಂಥ ಹುಡುಗಿ ಬೇಕು?` 

ನಾನು ಕತೆ ಕವನ ಬರೆಯುವುದನ್ನು ಬಿಟ್ಟು 
ಈಗ ಹದಿನೈದು ವರ್ಷಗಳಾದವು

Tuesday 5 March 2024

ಹೀಗೊಂದು ಪ್ರಾಮಾಣಿಕ ಸಂದರ್ಶನ

'ನಿನಗೇಕೆ ಕೆಲಸ ಕೊಡಬೇಕು?` 
`ಏಕೆಂದರೆ ನನಗೆ ದುಡ್ಡು ಬೇಕು.` 

 `ನಿನಗೆ ಏನು ಅನುಭವವಿದೆ?` 
 `ನಾಕಾರು ವರ್ಷಗಳಲ್ಲಿ 
ಹತ್ತಾರು ಕಡೆ ಕೆಲಸ 
ಮಾಡಿದ ಬಿಟ್ಟ/ಬಿಡಿಸಿಕೊಂಡ ಅನುಭವವಿದೆ.` 

 `ನೀನು ಓದಿರುವುದಕ್ಕೂ ಈ ಕೆಲಸಕ್ಕೂ 
 ಏನಾದರೂ ಸಂಬಂಧವಿದೆಯೇ?` 
`ಇರಬಹುದು, ಇರದೆಯೂ ಇರಬಹುದು, 
 ಆದರೆ ಇಬ್ಬರ ಶಿಫಾರಸ್ಸಂತೂ ಇದೆ.` 

 `ನಿನ್ನ ಶಕ್ತಿ ಏನು? 
`ಕೊಟ್ಟಿರುವ ಕೆಲಸವನ್ನು ಮುಗಿಸಲು ಪ್ರಯತ್ನಿಸುವುದು,
ಕೊಡದೇ ಇರಬೇಕಾದ ಕೆಲಸವನ್ನು 
ಕೆಲಸ ಕಳೆದುಕೊಂಡರೂ ಮಾಡದಿರುವುದು.` 

 `ನಿನ್ನ ಕುಂದುಕೊರತೆಗಳೇನು?` 
`ಸಿಕ್ಕಾಪಟ್ಟೆ ಪಾರ್ಟಿ ಮಾಡುವುದು, 
ರಾತ್ರಿ ತುಂಬ ಹೊತ್ತು ಓಟಿಟಿ ನೋಡುವುದು, 
ಬೆಳಗಿನ ಸಮಯ ತೂಕಡಿಸುವುದು.` 

 `ಧನ್ಯವಾದಗಳು, ಹೊರಗೆ ಕಾಯಿರಿ` 
`ಧನ್ಯವಾದಗಳು, 
 ನೀವು ಹೇಳಿದ ದಿನ ಕೆಲಸಕ್ಕೆ ಸೇರಲು ಸಿದ್ಧ, 
ನಿನಗೆ ಕೆಲಸ ಕೊಡುವುದಿಲ್ಲ ಎಂದು ಮಾತ್ರ ಹೇಳಬೇಡಿ 
ನನಗದನ್ನು ಕೇಳಲು ಇಷ್ಟವಿಲ್ಲ.`

Sunday 18 February 2024

ನೀರುಮುಳುಕ

ಹೆಪ್ಪುಗಟ್ಟುವಂಥ ಚಳಿಗಾಲ 
ನಡೆದೆ ದೇವದಾರುಗಳ ಕಾಡಿನಲ್ಲಿ 
ಕಂಡೆ ಜಲಪಾತದಡಿಯಲ್ಲಿ 
ಒಂಟಿ ಹಕ್ಕಿ. 

ಹಸಿಬಂಡೆ ಮೇಲೆ ಹೊಳೆಯುತ್ತಿತ್ತು 
ಹುಚ್ಚು ನೀರು ಸೋಕಿದಾಗ 
ಕೊರಳಿಂದ ಹೊರಬಂತು 
ಮೈಮರೆತಂತೆ ನಿಲ್ಲದ ಗಾನ 

ಕೊಟ್ಟೆನೆಂದರೆ ನನ್ನದಲ್ಲದು 
ಹೇಗೆ ಪುಸಲಾಯಿಸಲಿ ಕೈಗೆ ಸಿಗೆಂದು 
ಅದಕ್ಕೆ ನೀರಿನಾಳವೂ ಗೊತ್ತು 
ನೆಲದ ಮೇಲೆ ನಿಂತು ಕೊರಳೆತ್ತಲೂ 

(ಕ್ಯಾಥಲೀನ್ ಜೇಮೀ ಬರೆದಿರುವ `ದ ಡಿಪ್ಪರ್` ಎನ್ನುವ ಕವನದ ಭಾವಾನುವಾದದ ಸಣ್ಣ ಪ್ರಯತ್ನ. ಮೂಲ ಕವಿತೆಯ ಕೊಂಡಿ ಇಲ್ಲಿದೆ: https://www.poetryfoundation.org/poetrymagazine/poems/42188/the-dipper)