Friday 26 March 2021

ಶಿವಪ್ರಸಾದ್ ಅವರ ‘ಪಯಣ’ ಕಾದಂಬರಿ: ಒಂದು ಪರಿಚಯ


‘ಅನಿವಾಸಿ’ಯ ನಿಯಮಿತ ಬರಹಗಾರರಾಗಿರುವ, ‘ಕೆ‍.ಎಸ್‍.ಎಸ್‍.ವಿ.ವಿ’ ಯ ಸಂಸ್ಥಾಪಕರಲ್ಲೊಬ್ಬರಾಗಿರುವ, ‘ಕನ್ನಡ ಬಳಗ, ಯು.ಕೆ’ಯ ಕಾರ್ಯಕಾರಿ ಸಮಿತಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿರುವ, ‘ಕನ್ನಡ ಬಳಗ, ಯಾರ್ಕ್‌ಶೈರ್ ಅಧ್ಯಾಯ’ದ ಸಂಸ್ಥಾಪಕರಾಗಿರುವ, ಕನ್ನಡ ಸಾಹಿತ್ಯ ಮತ್ತು ಸಿನೆಮಾದ ದಿಗ್ಗಜರನ್ನು ಇಂಗ್ಲೆಂಡಿಗೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ, ಮುಂದಾಳುವಾಗಿ, ವ್ಯವಸ್ಥಾಪಕರಾಗಿ, ಕವಿಯಾಗಿ, ಸನ್ಮಿತ್ರರಾಗಿ, ಕನ್ನಡದ ಖ್ಯಾತ ಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಗನಾಗಿ, ಮಕ್ಕಳ ತಜ್ಞರಾಗಿ, ಡಾ. ಜಿ ಎಸ್ ಶಿವಪ್ರಸಾದ್ (ನಮಗೆಲ್ಲ ಅವರು ಪ್ರಸಾದ್) ಅವರನ್ನು ಗೊತ್ತಿಲ್ಲದ ಕನ್ನಡಿಗ ಇಂಗ್ಲೆಂಡಿನಲ್ಲಿ ಇಲ್ಲ ಎಂದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ ಎಂದುಕೊಂಡಿದ್ದೇನೆ. ಈಗಾಗಲೇ ಸಾಕಷ್ಟು ಲೇಖನಗಳನ್ನು ಕವನಗಳನ್ನು ಬರೆದಿರುವ ಪ್ರಸಾದ್ ಅವರು ‘ಅನಿವಾಸಿ ತಾಣದಲ್ಲಿ ಮಾತ್ರವಲ್ಲದೇ, ಕನ್ನಡ ಪತ್ರಿಕೆಗಳಲ್ಲೂ ಪ್ರಕಟಿಸಿದ್ದಾರೆ. 2016ರಲ್ಲಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ 60 ಕವನಗಳ (ಇಂಗ್ಲೀಷ್ ಮತ್ತು ಕನ್ನಡ ಭಾಷೆ) ಸಂಕಲನವನ್ನೂ, 2018 ರಲ್ಲಿ ‘ದಕ್ಷಿಣ ಅಮೇರಿಕ - ಒಂದು ಸುತ್ತು’ ಎನ್ನುವ ಪ್ರವಾಸ ಕಥನವನ್ನೂ ಪ್ರಕಟಿಸಿದ್ದಾರೆ. ಇದುವರೆಗೂ ತಮ್ಮನ್ನು ಕವನ ಮತ್ತು ಲೇಖನಗಳಿಗೆ ಸೀಮಿತಗೊಳಿಸಿದ್ದ ಪ್ರಸಾದ್ ಅವರು, ಇದೀಗ ಕಥಾಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ, ಅವರ ಮೊದಲ ಕಾದಂಬರಿ ‘ಪಯಣ’. 

‘ಒಳ್ಳೆಯ’ ಮನುಷ್ಯನ ಬದುಕು ‘ಒಳ್ಳೆಯ’ ಕತೆಯಾಗಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಕೆಟ್ಟ ಪಾತ್ರಗಳಿಲ್ಲದಿದ್ದರೆ ಅದು ‘ಕತೆ’ ಹೇಗೆ ಆಗುತ್ತೆ ಎನ್ನುವುದು ವಿಮರ್ಶಕರ  ತಕರಾರು. ಕೆಟ್ಟ ಪಾತ್ರಗಳಿಲ್ಲದಿದ್ದರೂ ಕತೆ ಹೇಳಲು ಸಾಧ್ಯ ಎಂದು ಸವಾಲು ಹಾಕುವಂತೆ ಡಾ. ಜಿ ಎಸ್ ಶಿವಪ್ರಸಾದ್ (ಪ್ರಸಾದ್) ಅವರು ‘ಪಯಣ’ವನ್ನು  ಬರೆದಿದ್ದಾರೆ. 

ಇತ್ತೀಚೆ ‘ಕನ್ನಡ ಬಳಗ’ಕ್ಕಾಗಿ ಪ್ರೋ.ಕೃಷ್ಣೇಗೌಡರು ಮಾತಾಡಿದಾಗ ಪ್ರಸಿದ್ಧ ಲೇಖಕರೊಬ್ಬರ ಬಗ್ಗೆ ಪ್ರಸ್ತಾಪಿಸುತ್ತಾ, ಅವರ ಒಂದು ಕಾದಂಬರಿಯಲ್ಲಿ ಕೆಟ್ಟ ಪಾತ್ರಗಳೇ ಇರಲಿಲ್ಲವಂತೆ. ಅದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದ್ದಕ್ಕೆ, ‘ಪ್ರಪಂಚದಲ್ಲಿ ಎಂಥೆಂಥ ಜನರಿದ್ದರೂ ನಮಗೆ ಒಳ್ಳೆಯವರು ಅನಿಸಿದವರನ್ನು ಮಾತ್ರ ನಮ್ಮ ಮನೆಯೊಳಗೆ ಬಿಟ್ಟುಕೊಳ್ಳುವಂತೆ, ಕಾದಂಬರಿಯಲ್ಲೂಅದನ್ನೇ ಮಾಡಿದ್ದೇನೆ, ಮನೆಯೊಳಗೆ ಬಿಟ್ಟುಕೊಂಡವರ ಬಗ್ಗೆ ಮಾತ್ರ ಕತೆ ಬರೆದಿದ್ದೇನೆ,’ ಎಂದರಂತೆ. ‘ಪಯಣ’ದ ವಿಷಯದಲ್ಲೂ ಅದೇ ಮಾತನ್ನು ಹೇಳಬೇಕಾಗುತ್ತದೆ.  ಪ್ರಸಾದ್ ಅವರ ಜೊತೆ ಸುಮಾರು ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಮಾತಾನಾಡಿದ್ದೇನೆ, ಒಡನಾಡಿದ್ದೇನೆ, ಅವರ ಮನೆಯ ಆತಿಥ್ಯವನ್ನೂ ಸವಿದಿದ್ದೇನೆ; ಅವರ ಸಭ್ಯತೆ, ವಿನಯಶೀಲತೆ, ಸ್ನೇಹಪರತೆ ಮತ್ತು ಒಳ್ಳೆಯತನಗಳಿಂದಾಗಿ ಅವರು ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಒಳ್ಳೆಯದನ್ನು ಮಾತ್ರ ಕಾಣಬಲ್ಲ ಉದಾರ ಹೃದಯಿಗಳು. ಹಾಗಾಗಿ ಅವರ ‘ಪಯಣ‘ದಲ್ಲಿ ‘ವಿಲನ್‘ ಇಲ್ಲದಿರುವುದು ಆಶ್ಚರ್ಯವೇನಲ್ಲ. 

ಇದೊಂದು ನಾಯಿಯ ಕತೆ. ನಾಯಿ ಬೀಗಲ್ ಜಾತಿಯದು. ಮಗಳ ಜೊತೆ ಆಟಕ್ಕೆ ಇರಲಿ ಎಂದು ಪುಟ್ಟಮರಿಯಾಗಿ ಸಿನೆಮಾ ನಿರ್ದೇಶಕನೊಬ್ಬನ ಮನೆಗೆ ‘ಸ್ನೂಪಿ’ಯಾಗಿ ಬರುತ್ತದೆ; ಮನೆಯಲ್ಲಿ ಇನ್ನೇನು ಹೊಂದಿಕೊಳ್ಳುತ್ತಿದೆ ಎನ್ನುವಾಗ ಮನೆಯಿಂದ ತಪ್ಪಿಸಿಕೊಂಡು ಬೀದಿನಾಯಿಯಾಗಿ ತನ್ನ ಹೆಸರನ್ನು ಕಳೆದುಕೊಳ್ಳುತ್ತದೆ. ಕಾರ್ಪೋರೇಷನ್ ಅವರಿಂದಾಗಿ ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು ಹೆಸರಿಲ್ಲದ ನಾಯಿ ಕೈದಿಗಳಂತೆ ‘2025’ ಎನ್ನುವ ಸಂಖ್ಯೆಯಾಗುತ್ತದೆ. ನಂತರ ದತ್ತು ಸ್ವೀಕಾರವಾಗಿ ‘ಆರ್ಚಿ’ಯಾಗುತ್ತದೆ. ಬೆಳೆಯುತ್ತ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತ ಪೋಲೀಸರಿಗೆ ಸಹಾಯ ಮಾಡುತ್ತದೆ. ಪೋಲೀಸ್ ನಾಯಿಪಡೆಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವಾಗ ಮತ್ತೆ ಸಿನೆಮಾ ನಿರ್ದೇಶಕನಿಗೆ ‘ಆರ್ಚಿ’ಯೇ ‘ಸ್ನೂಪಿ’ ಎಂದು ಗೊತ್ತಾಗುತ್ತದೆ. ‘ಆರ್ಚಿ’ ಮತ್ತೆ ‘ಸ್ನೂಪಿ’ಯಾಗುತ್ತಾ, ಮತ್ತೆ ನಿರ್ದೇಶಕನ ಮನೆ ಸೇರುತ್ತಾ ಎನ್ನುವುದೇ ಕತೆ. ಕತೆಯ ಕೊನೆ ತುಂಬ ಸ್ವಾರಸ್ಯಕರವಾಗಿದೆ. 

ಪುಟ್ಟ ಮಗುವಾದಾಗಿನಿಂದ ನಿವೃತ್ತ(!)ನಾಗುವವರೆಗಿನ ನಾಯಿಯ ಕತೆಯಿದು. ಟಿಪಿಕಲ್ ಬೆಂಗಳೂರಿಗನಂತೆ ಕನ್ನಡ, ತಮಿಳು ಮತ್ತು ಇಂಗ್ಲೀಷ್ (ನಾಯಿ ತರಬೇತಿಗೆ ಪೋಲೀಸ್ ಇಲಾಖೆಯವವರು ಇಂಗ್ಲೀಷ್ ಬಳಸುತ್ತಾರೆ ಎನ್ನುವ ಊಹೆ ನನ್ನದು) ಮೂರೂ ಭಾಷೆಯಲ್ಲಿ ಪರಿಣಿತಿ ಪಡೆಯುವ ನಾಯಿಯಿದು. 

ಇದು ಮೂಲ ಕತೆಯ ಎಳೆಯಾದರೆ, ಇದರಲ್ಲಿ ಮೂರು ಮಕ್ಕಳ ಉಪಕತೆಗಳಿವೆ. ಒಂದೊಂದು ಮಗುವಿನ ಕತೆಯೂ ಈ ನಾಯಿಯ ಬದುಕಿನ ಜೊತೆ ಬೆರೆತುಕೊಂಡಿವೆ. ಯಾವ ಭ್ರಾತೃಗಳೂ ಇಲ್ಲವೆಂದು ಒಂಟಿಯಾಗಿರುವ ಮಗುವಿಗೆ ನಾಯಿ ತಮ್ಮನಾಗುತ್ತಾನೆ, ಗೆಳೆಯನಾಗುತ್ತಾನೆ. ಸೂರಿಲ್ಲದ ಹುಡುಗಿಗೆ ಜೊತೆಗಾರನಾಗುತ್ತಾನೆ, ರಕ್ಷಕನಾಗುತ್ತಾನೆ. ಆಟಿಸಂ ಇರುವ ಮಗುವಿನ ಆರೈಕೆಗೆ ಸಹಾಯವಾಗುತ್ತಾನೆ. ಮೂರೂ ಮಕ್ಕಳ ಕತೆಗಳು ಮೂಲ ಕತೆಗೆ ಧಕ್ಕೆ ಬರದಂತೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮಕ್ಕಳ ದೃಷ್ಟಿಯಿಂದ ನಾಯಿಗಳ ಬಗ್ಗೆ ಇರುವ ಪ್ರೀತಿ ಮತ್ತು ತುಂಟತನವನ್ನು ನಾವು ಕಂಡುಕೊಳ್ಳುತ್ತೇವೆ. ನಾಯಿಗಳಿಗೂ ಮಕ್ಕಳಿಗೂ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವುದನ್ನು ಪ್ರಸಾದ್ ಸೂಕ್ಷ್ಮವಾಗಿ ನಿರೂಪಿಸುತ್ತಾರೆ. 

ಕತೆಯ ತಂತ್ರ ಸರಳ ಮತ್ತು ಶೈಲಿ ನೇರ. ಅಲ್ಲಲ್ಲಿ ಮಾಹಿತಿಗಳೂ ಬಂದು ಕತೆಯ ಓಟಕ್ಕೆ ಕಡಿವಾಣ ಹಾಕುತ್ತವಾದರೂ ಕತೆಗೆ ಪೂರಕವಾಗುವಂತೆ ವಿಷಯ ಗೊತ್ತಿಲ್ಲದವರಿಗೆ ಗೊತ್ತಿರಲಿ ಎನ್ನುವಂತೆ ತೋಳ-ನಾಯಿಗಳ ಇತಿಹಾಸ, ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ, ನಾಯಿಗಳ ತರಬೇತಿ, ಪೋಲಿಸ್ ಪಡೆಯಲ್ಲಿ ನಾಯಿಗಳ ಪಾತ್ರಗಳ ಬಗ್ಗೆ ವಿವರವಾದ ಮಾಹಿತಿಗಳಿವೆ.

ಕತೆ ಓದಿ ಮುಗಿಸಿದಾಗ ಒಂದು ಕಾಮಿಕ್ ಪುಸ್ತಕವನ್ನು ಅಥವಾ ಒಂದು ‘ಡಿಸ್ನಿ‘ ಸಿನೆಮಾ ನೋಡಿದಂತಾಯಿತು, ಜೊತೆಗೆ ನಾಯಿಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲಿತಂತಾಯಿತು. ಇದೊಂದು ಸುಂದರ ‘ಮಕ್ಕಳ ಕಾದಂಬರಿ’ ಅಲ್ಲವೇ ಅನಿಸಿತು. ಕನ್ನಡದಲ್ಲಿ ಮಕ್ಕಳ ಕಾದಂಬರಿಗಳಿಲ್ಲ ಎನ್ನುವ ಕೊರತೆಯನ್ನು ಈ ಪುಸ್ತಕ ಖಂಡಿತವಾಗಿಯೂ ನೀಗಿಸುತ್ತದೆ ಎಂದು ನನ್ನ ಅನಿಸಿಕೆ. ಕನ್ನಡ ಭಾಷೆಯಲ್ಲಿ ಕತೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಇಚ್ಛಿಸುವ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಕನ್ನಡದ ಮಕ್ಕಳಿಗೆ ಈ ಪುಸ್ತಕದಿಂದ ಕನ್ನಡದ ಓದನ್ನು ಶುರು ಮಾಡಿದರೆ ಅವರಿಗೆ ಕನ್ನಡದ ಓದಿನಲ್ಲಿ ಆಸಕ್ತಿ ಹುಟ್ಟಬಹುದು. 

ಕಾದಂಬರಿಯ ಅಂತ್ಯದಲ್ಲಿ ಬರೆದಿರುವಂತೆ, ಈ ಕಾದಂಬರಿಯನ್ನು ಸಿನೆಮಾ ಮಾಡಬಹುದು, ಒಂದು ಒಳ್ಳೆಯ ಅನಿಮೇಷನ್ ಸಿನೆಮಾ ಮಾಡುವ ಎಲ್ಲ ಸರಕೂ ಈ ಕಾದಂಬರಿಯಲ್ಲಿದೆ. ಪ್ರಸಾದ್ ಅವರು ಇನ್ನೂ ಹಲವು ಕಾದಂಬರಿಗಳನ್ನು ಬರೆಯಲಿ ಎನ್ನುವುದು ನನ್ನ ಅಪೇಕ್ಷೆ. 

('ಅನಿವಾಸಿ'ಯಲ್ಲಿ ಮೊದಲು ಪ್ರಕಟಿತ)


Sunday 14 March 2021

ಕಪ್ಪುರಂಧ್ರಗಳು

ನಿನ್ನ ಹಿಂದೆ ದೃಷ್ಟಿನೆಟ್ಟು ಕೂತಿದ್ದೇನೆ 
ನಿನ್ನ ತಲೆಯ ಸುಳಿ ಸೇರುವಲ್ಲಿ 
ಕೇಂದ್ರದ ಸುತ್ತ ನೆರೆದ 
ತಾರೆಗಳ ಗುಚ್ಛದಂತಿರುವ 
ನಿನ್ನ ದಟ್ಟ ಕೂದಲು 
ಶೂನ್ಯದಿಂದ ಅನಂತದೆಡೆಗೆ 
ಅನಂತದಿಂದ ಅನಂತದಾಚೆಗೆ 

ಈ ಬ್ರಹ್ಮಾಂಡದಲ್ಲಿಅಸಂಖ್ಯಾತ 
ಆಕಾಶಗಂಗೆಗಳಿವೆಯಂತೆ, ಆದರೆ 
ಕಪ್ಪುರಂಧ್ರಗಳಂತಿರುವ ನಿನ್ನ ಕಣ್ಣುಗಳಿಗೆ ನಾನು 
ಕಾಣಿಸುವುದು ಸಾಧ್ಯವೇ ಇಲ್ಲ ಬಿಡು, ಏಕೆಂದರೆ 
ನೀನು ಈ ಕವನವನ್ನೋದುವುದಿಲ್ಲ, ಓದಿದರೂ 
ನಿನ್ನನ್ನು ನೋಡಿ ಬರೆದಿರಬಹುದೆಂದು ನಿನಗೆ 
ಗೊತ್ತಾಗುವುದು ಸಾಧ್ಯವೇ ಇಲ್ಲ

(ಕನ್ನಡಪ್ರಭ ಇನ್‍ಆರ್‌ಐ ಆವೃತ್ತಿ 15/03/2021 ರಂದು ಪ್ರಕಟಿತ)