Friday 8 July 2016

ಚೆಲುವು

ಅದೇ ತಾನೆ ಹುಟ್ಟಿದ ತಮ್ಮನಿಗೆ ಇರುವುದು
ಇಷ್ಟು ವರ್ಷವಾದರೂ ನನಗೇಕೆ ಇಲ್ಲ
ಎಂದು ಅಮ್ಮನ ಮುಂದೆ ರಂಪ ಮಾಡಿ
ಇನ್ನಿಲ್ಲದಂತೆ ಬಯ್ಯಿಸಿಕೊಂಡಾಗ
ನನಗೆ ನಾಕು ವರ್ಷ

ಪಕ್ಕದ ಮನೆ ಹುಡುಗಿಯ ಬಿಳಿ ಜೋಳದ ಬಣ್ಣವನ್ನು
ಅಮ್ಮ ಎಲ್ಲರ ಮುಂದೆ ಹೊಗಳಿ
ನನ್ನ ನಸುಗಪ್ಪಿನ ಬಣ್ಣ ಎಲ್ಲ ಅಪ್ಪನದೇ ಎಂದು
(ಅದು ನನ್ನದೇ ತಪ್ಪು ಎನ್ನುವಂತೆ)
ಎಲ್ಲರ ಮುಂದೆ ಹಂಗಿಸಿಕೊಂಡಾಗ
ನನಗಿನ್ನೂ ಹತ್ತು ವೆರ್ಷ

ನನ್ನ ಸಪಾಟ ಎದೆಯನ್ನು
ಪುಸ್ತಕದಲ್ಲೋ ದುಪ್ಪಟದಲ್ಲೋ ಮುಚ್ಚಿಕೊಂಡು
ಒಂಟಿಯಿರುವಾಗ ಎರಡು ಸೇಬು ಇಟ್ಟುಕೊಂಡು
ಕನ್ನಡಿಯ ನೋಡಿಕೊಳ್ಳುವಾಗ
ನನಗೆ ಷೋಡಸದ ಹರೆಯ

ಸ್ಲೀವ್ ಲೆಸ್ ಹಾಕಿಕೊಂಡಾಗ ಕಪ್ಪು
ಕಂಕುಳ ಕಾಣದಂತೆ ಕೈಯೆತ್ತುವುದನ್ನು
ಸೀರೆ ಉಟ್ಟುಕೊಂಡಾಗ (ಸ್ವಲ್ಪವೇ ಬಂದ) ಡೊಳ್ಳು
ಹೊಟ್ಟೆ ಕಾಣದಂತೆ ಸೆರಗು ಮುಚ್ಚಿಕೊಳ್ಳುವುದನ್ನು
ಜೀನ್ಸು ಹಾಕಿದಾಗ ಸಪಾಟು
ನಿತಂಬ ಕಾಣದಂತೆ ಉದ್ದ ಶರ್ಟು ಹಾಕುವುದನ್ನು
ಇಪ್ಪತ್ತೈದಾಗುವಷ್ಟರಲ್ಲಿ
ರೂಢಿಯಾಗಿತ್ತು

ಮಗುವಾದ ಮೇಲೆ
ಕಪ್ಪು ನಿತಂಬದ ಮೇಲೆ
ಹೆಚ್ಚಾದ ಡೊಳ್ಳುಹೊಟ್ಟೆಯ ಮೇಲೆ
ಮೂಡಿದ ಬಿಳಿ ಗೆರೆಗಳನ್ನು
ಜೋತು ಬಿದ್ದ ಮೊಲೆಗಳನ್ನು
ಕಂಡಾಗಲೆಲ್ಲ ವಾಕರಿಕೆಯಲ್ಲೇ
ನಲವತ್ತಾಗುತ್ತ ಬಂತು

ಮೀಸೆ ಗಡ್ಡಗಳನ್ನು
ಕಾಲ ಕೂದಲನ್ನು
ಮೇಲಿಂದ ಮೇಲೆ ತೆಗೆಯುತ್ತ
ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತ
ಫೇಸಿಯಲ್ಸು ಹೇರ್ ಸ್ಟೈಲು ಮಾಡಿಸಿಕೊಳ್ಳುತ್ತ
ನನಗೆ ಐವತ್ತು ವರ್ಷ ಆಗೇ ಹೋಯ್ತು

ಐದು ವರ್ಷದ ಮೊಮ್ಮಗುವನ್ನು
ಪಕ್ಕದಲ್ಲೇ ಮಲಗಿಸಿಕೊಂಡು
ಹಾಡು ಕಲಿಸಿ ಕತೆಯ ಹೇಳಿ
ಗಟ್ಟಿಯಾಗಿ ತಬ್ಬಿಕೊಂಡು
ಚಂದದೊಂದು ಮುತ್ತನಿತ್ತು
ಗುಡ್ ನೈಟ್ ಹೇಳಿದಾಗ
‘You are the most beautiful
girl in the world’ ಎಂದಿತು
ನನಗಾಗ ಅರವತ್ತು

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)