Saturday 27 October 2012

ಪುಸ್ತಕ: ಗುರುಪ್ರಸಾದ ಕಾಗಿನೆಲೆ: ಗುಣ


 
ಗುಣ ಎಂದರೆ ಸ್ವಭಾವ. ರೋಗದಿಂದ ವಾಸಿ ಎಂತಲೂ ಆಗುತ್ತದೆ. ಯೋಗ್ಯತೆಯಂತಲೂ ಅರ್ಥವಿದೆ. ಈ ಮೂರೂ ಅರ್ಥಗಳು ಈ ಕಾದಂಬರಿಯ ಆಶಯಕ್ಕೆ ಪೂರಕವಾಗಿವೆ. 

ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ, ಎಂಬಿಬಿಎಸ್ ಮತ್ತು ಪಿಜಿ ಮಾಡಿ, ದುಡ್ಡು ಮಾಡಲು, ಬದುಕು ಕಟ್ಟಲು ವೈದ್ಯನೊಬ್ಬ ಇನ್ನೊಬ್ಬ ವೈದ್ಯೆಯನ್ನು ಮದುವೆಯಾಗಿ ಅಮೇರಿಕದಲ್ಲಿ ಸುಮಾರು ಇಪ್ಪತ್ತು ವರ್ಷ ಬದುಕಿದ ಕತೆ ಇದು. 

ಪಿಜಿ ಮಾಡುವಾಗಲೇ ಆಗುವ ಅರೇಂಜ್ಡ್ ಮದುವೆ  (ರೋಮ್ಯಾನ್ಸ್ ಇಲ್ಲವೇ ಇಲ್ಲವೆನ್ನುವಷ್ಟು ವಿವರಗಳು ಕಡಿಮೆ), ಅತ್ತೆ-ಸೊಸೆಯರ ಜಟಾಪಟಿ, ಅಮೇರಿಕಕ್ಕೆ ಹೋಗಲು ಮಾಡುವ ಕೆಲಸಗಳು, ಅಮೇರಿಕದಲ್ಲಿ ರೆಸಿಡೆನ್ಸಿ ಮಾಡುವಾಗಿನ ಘಟನೆಗಳು, ರೆಸಿಡೆನ್ಸಿ ಮುಗಿಸಿ ಕೆಲಸಕ್ಕೆ ಸೇರುವುದು, ಮಗಳು ಹುಟ್ಟುವುದು, ಅವಳ ಬೆಳವಣಿಗೆ,  ಕೆಲಸದ ಖುಷಿಗಳು-ಒತ್ತಡಗಳು. 

ಅಮೇರಿಕದಲ್ಲೇ ದಶಕಗಳು ಕಳೆಯುತ್ತ ಬಂದಾಗ ಖಾಲಿ ಖಾಲಿ ಎನಿಸುವ ಬದುಕು, ಹೊಸತನವಿಲ್ಲದ ನಿಂತ ನೀರಾದ ದಾಂಪತ್ಯ, ತಾಯಿಯ ಸಾವು, ತಂದೆಯ ಕಾಯಿಲೆ, ಹದ್ದು ಮೀರುತ್ತಿರುವ ಹರೆಯಕ್ಕೆ ಕಾಲಿಟ್ಟ ಹುಡುಗಿ, ಕುಡಿತದ ಮೊರೆ. 

ತಾನೊಬ್ಬ ಕುಡುಕನಾಗುತ್ತಿದ್ದೇನೆ, ತನ್ನ ಧಿಡೀರ್ ಕೋಪದ ಬುದ್ಧಿ ತನ್ನ ಹತೋಟಿಯನ್ನೂ ಮೀರುತ್ತಿದೆ ಎಂದು ಅರಿವಾಗುವುದರಲ್ಲಿ ಹೆಂಡತಿ ಮಕ್ಕಳು, 'ಸ್ವಲ್ಪ ದಿನದ ಮಟ್ಟಿಗಾದರೂ ನೀನು ನಮ್ಮಿಂದ ದೂರವಿದ್ದರೆ ಒಳ್ಳೆಯದು' ಎಂದು ಮನೆಯಿಂದ ಸಾಗಹಾಕುತ್ತಾರೆ. ಅಸ್ಪತ್ರೆಯ ನಿಯಮದ ಪ್ರಕಾರ ತಾನು ಇರುವ ಊರನ್ನು ಬಿಟ್ಟು ಒಂದು ವರ್ಷಕ್ಕೆ ಬೇರೆ ಊರಿಗೆ ಹೋಗುವ 'ಅವಕಾಶ' ಬರುತ್ತದೆ. 

ಕುಡಿಯುವುದನ್ನು ಬಿಡುತ್ತಾನೆ. ಕೋಪ ಶಮನಕ್ಕೆ ಹಾದಿಹುಡುಕಲು ಆರಂಭಿಸುತ್ತಾನೆ. ಮಗಳ ಗ್ರಾಜ್ಯುವೇಷನ್ ಡೇ ಗೆ ಮತ್ತೆ ವಾಪಸ್ಸು ಬರುತ್ತಾನೆ. ಬೆಳೆದು ನಿಂತ ಮಗಳ, ಅವಳ ಬಾಯ್‍ಫ್ರೆಂಡಿನ, ತನ್ನ ಮಡದಿಯ, ತನ್ನ ಗೇ ಗೆಳೆಯನ ಜೊತೆ ಮಾತಾಡುತ್ತ ಮತ್ತೊಂದು ಬದುಕಿಗೆ ಪ್ರಯತ್ನ ಮಾಡುತ್ತಾನೆ. 

ಕನ್ನಡಕ್ಕೇ ಬಹುಷಃ ಮೊದಲ ಬಾರಿಗೆ ಗೇಗಳ ಬಗ್ಗೆ ಬಂದಿರುವ ಕಾದಂಬರಿ ಇದೇ ಇರಬೇಕು. ಈ ಕಾದಂಬರಿಯಲ್ಲಿ ಎರಡು ಗೇ ಪಾತ್ರಗಳು, ಒಬ್ಬ ಅಮೇರಿಕನ್, ಇನ್ನೊಬ್ಬ ಕನ್ನಡಿಗ ಡಾಕ್ಟರು. ನನಗೆ ಗೊತ್ತಿರುವ ಮಟ್ಟಿಗೆ ಕನ್ನಡದಲ್ಲಿ ಸಲಿಂಗಿಗಳ ಬಗ್ಗೆ ಬಂದಿರುವ ಮೊದಲ ಕಾದಂಬರಿ ಇದೇ ಇರಬೇಕು. ಈ ಸಲಿಂಗಿಗಳ ಕತೆ ಮೂಲ ಕತೆಯಲ್ಲಿ ಯಾವ ಪರಿಣಾಮ ಮಾಡದಿದ್ದರೂ, ಬದುಕಿನ ಇನ್ನೊಂದು ಕೋನವನ್ನು ಪರಿಶೀಲಿಸುತ್ತದೆ. 

ಇಡೀ ಕಾದಂಬರಿ ಅನಿವಾಸಿ ಕನ್ನಡಿಗ ವೈದ್ಯನೊಬ್ಬನ ಪರ್ಸನಲ್ ಡೈರಿಯ ಪುಟಗಳನ್ನು ಹೆಕ್ಕಿ ಜೋಡಿಸಿಟ್ಟಂತಿದೆ. ಸುಮಾರು ಇಪ್ಪತ್ತು ವರುಷದ ಬದುಕಿದ ಮತ್ತು ಹತ್ತಿರದಿಂದ ಕಂಡ ಅಥವಾ ಬದುಕಿದ ಬದುಕನ್ನು ಯಾವ ಮೆಲೋಡ್ರಮಾಗಳಿಲ್ಲದೇ, ಯಾವ ಆಡಂಬರಗಳಿಲ್ಲದೇ, ಯಾವ ಇಂಟೆಲೆಕ್ಚ್ಯುವಲ್ ಇಸಂಗೂ ಜೋತುಬೀಳದೆ  ಬರೆಯುವುದು ಸುಲಭದ ಕೆಲಸವಲ್ಲ. ಕಾದಂಬರಿಯಲ್ಲಿ ಎಲ್ಲಿಯೂ ಉಪದೇಶಗಳಿಲ್ಲ, ಹಿಂದೆ ತಿರುಗಿ ನೋಡಿ ಸ್ಯುಡೂ ಹಳಹಳಿಯಿಲ್ಲ, ಇದು ಹೀಗೇ ಇದ್ದರೆ ಚಂದ, ಹೀಗಿಲ್ಲದಿದ್ದರೆ ಅಸಹ್ಯ ಎನ್ನುವ ಫಿಲಾಸಾಫಿಯಿಲ್ಲ. 

ಅನಿವಾಸಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದಕ್ಕಿಂತ ಒಳ್ಳೆ ಕನ್ನಡ ಕಾದಂಬರಿ ಇಲ್ಲ. ಅನಿವಾಸಿ ಕನ್ನಡಿಗರು, ಅದರಲ್ಲೂ ವೈದ್ಯರು ಓದಲೇ  ಬೇಕಾದ ಕಾದಂಬರಿಯಿದು.

Thursday 21 June 2012

ಮಾವು


`ಮಾವು` ಎಂದೆ ನೋಡಿ
ಮನೆಯೆಲ್ಲ ಮನವೆಲ್ಲ 
ಕಂಪು ಬಣ್ಣ ಸ್ವಾದ ನಾರು ಗೊರಟ 
ಜೊತೆಗೆ ಭಾರತ 

ಗೆಳೆಯ, 
ಮಾವಿನ ಸಿಹಿ ಗೊತ್ತಿದ್ದೂ ಒಗರು ಗೊತ್ತಿದ್ದೂ 
’I am not missing it' ಎಂದು 
ವೈನು ಹಿಡಿದು ಕೂತಿದ್ದೇನೆ 

ನಿದ್ದೆಗೆ ಜಾರುವಾಗ, ನಿದ್ದೆಯ ಕನಸಿನಲ್ಲಿ 
ಬೆನ್ನುಹುರಿಯಲ್ಲಿ ಅಳುಕಿದಂತಾಗಿ 
ಎದೆಯೆಲ್ಲ ಹಿಂಡಿದಂತಾಗಿ 
ಹುಳಿದ್ರಾಕ್ಷಿಯ ತೇಗಿನಲ್ಲೂ 
ಮಾವಿನ ವಾಸನೆ 

ತ್ರಿಶಂಕುವಿನ ಸ್ವರ್ಗದಲ್ಲಿ 
ಮಾವು ಸಿಗುವುದಿಲ್ಲ 
ಸಿಕ್ಕರೂ ತಿಂದಂತಾಗುವುದಿಲ್ಲ 

ಅಭಿಮನ್ಯುವಿನ ಚಕ್ರವ್ಯೂಹವಿದು 
ಎಂದು ಯಾರಿಗೆ ಗೊತ್ತಿತ್ತು? 

ಮಾವನ್ನು ದಿಟ್ಟಿಸುತ್ತ ಕೂತಿದ್ದೇನೆ 
ಇಂಟರ್ನೆಟ್ಟಿನ ಮುಂದೆ 
ಇನ್ನು ಒಂದೇ ಕ್ಲಿಕ್ಕು 
ಆನ್‍ಲೈನ್ ಆರ್ಡರು 
ರತ್ನಾಗಿರಿಯಿಂದ ಸೀದಾ ಮನೆಗೇನೇ 
ಆಪೂಸು!

Thursday 7 June 2012

ಪೆಂಡಾಲು ಕಟ್ಟುವ ಹುಡುಗ

 

ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ
ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ

ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ
ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ

ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳುಗಳೇ ಸರಗಳು
ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ

ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು...

ಅವರಿವರ ಬಳಿಯಿದ್ದ 
ಅವುಗಳನ್ನು ಗಳಿಸಲು 
ಏನನ್ನೂ ಕದಿಯಲಿಲ್ಲ

ಬಾಗಿಸಲಿಲ್ಲ ಬೆನ್ನನ್ನು
ಮಂಡೆಯೂರಿ ಬಿಕ್ಕಿ ಬೇಡಲಿಲ್ಲ
ಗೋಗೆರೆಯಲಿಲ್ಲ, ಅಳಲಿಲ್ಲ, ಕನಿಕರವ ಬೇಡಲಿಲ್ಲ

ನೀನದನ್ನು ಸೊಕ್ಕಾದರೂ ಅನ್ನು
ತಿಕ್ಕಲುತನವಾದರೂ ಅನ್ನು
ನಿನ್ನ ಮದುವೆಯ ದಿನ 
ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ

’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’ 
ಎನ್ನುವ ನಿಮ್ಮಪ್ಪನ ವೇದಾಂತ
ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು

ಅದೇ ಮೊಟ್ಟಮೊದಲ ಬಾರಿಗೆ 
ಜೀವನದಲ್ಲಿ ನಾನು ಮುಖವನೆತ್ತಿ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು
ನಿನ್ನಪ್ಪನ ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು

Thursday 24 May 2012

ಕೊಲೆ

 

ನಾನು. ನನ್ನ ಗಂಡ. ನನ್ನ ಮಗ. 

ನಾಕನೇ ವ್ಯಕ್ತಿಯ ಆಗಮನ.
ಹೆಣ್ಣು. ಮೊದಲ ಭೇಟಿಯಲ್ಲೇ ಮಾತಿನ ಮಿಂಚಲ್ಲೇ
ನನ್ನ ಗೆಳತಿಯ ಬಗ್ಗೆ ಗೊತ್ತಾಗಿ ಹೋಗಿತ್ತು

ಆದರೂ ನೋಡೇ ಬಿಡೋಣ ಎಂದು
ಗೊತ್ತಿಲ್ಲದಿರುವ ಹಾಗಿದ್ದೆ
ಬೇಕು ಬೇಕೆಂದು ಮತ್ತೆ ಮತ್ತೆ ಮನೆಗೆ ಬಂದಳು
ನನ್ನ ಜೊತೆ ಹರಟೆ ಹೊಡೆಯುವ ನೆವ

ಮಧ್ಯಂತರದಲ್ಲಿ ಚಿತ್ತ ಪೂರ್ತಿ ಅಸ್ವಸ್ತ
ಬಚ್ಚಲುಮನೆಯಲ್ಲಿ ಚಿಲಕ ಹಾಕಿ
ತಂಪು ಟೈಲುಗಳ ಸಾಂತ್ವನ

ಬೆಳಗಿನ ನಾಕಕ್ಕೇ ಎದ್ದು
ಮಂಜು ಸವಿಯುವ ನೆಪ ಮಾಡಿ
ನನ್ನೊಡನೆ ಮಾತಿಗಿಳಿದೆ
ನೊಂದ ಹೆಣ್ಣು ಇನ್ನೇನು ಮಾಡಬಲ್ಲಳು
ಶಬ್ದಗಳಲ್ಲಿ ಕವನ ಹುಡುಕುವುದನ್ನು ಬಿಟ್ಟು

ಏಳು ಗಂಟೆಗೆ ಮನೆಗೆ ಮರಳಿದೆ
ಬೆಡ್ಡಿನಲ್ಲಿ ಆರು ವರುಷದ ಮಗ ಮಲಗಿದ್ದ ನಿರುಮ್ಮಳ
ಅವನ ಪಕ್ಕ ಏನೂ ಆಗದೇ ಇರುವ ತರಹ ಗೊರಕೆ ಹೊಡೆಯುತ್ತಿರುವ ಗಂಡ

ಕೊಲೆಯಾಗುವುದು
ಕೊಲೆಮಾಡುವುದು
ಎರಡೂ ಒಂದೇ!

Thursday 3 May 2012

ನಾಯಿಯೂ ಅಜ್ಜಿಯೂ

 

ನಮ್ಮ ಮನೆಯ ನಾಯಿ  
ಅಂಗಳದಲ್ಲಿ  
ಬಿಸಿಲನ್ನು ಕಾಯಿಸಿಕೊಳ್ಳುತ್ತ
ನೆರಳಿನ ಜೊತೆ ಜಗಳವಾಡುತ್ತ
ಕಿವಿ ಕೆರೆದುಕೊಳ್ಳುತ್ತ 
ಮುಚ್ಚಿದ ಗೇಟಿನವರೆಗೂ ಓಡುತ್ತ
ಮತ್ತೆ ತಲಬಾಗಿಲವರೆಗೂ ತೇಗುತ್ತ
ನಾಲಗೆಯಿಂದ ಮೈಯನ್ನೆಲ್ಲ ನೆಕ್ಕಿಕೊಳ್ಳುತ್ತ
ಆಗಾಗ  ಆಕಳಿಸಿತ್ತ, ಮೈಮುರಿಯುತ್ತ, ಮೈಕೊಡವುತ್ತ

ಇರಲು


ಆಚೆ ಓಣಿಯ ಬೀದಿನಾಯೊಂದು
ನಮ್ಮ ಮನೆ ಮುಂದಿನ ರಸ್ತೆಯಲಿ
ವಯ್ಯಾರದಲ್ಲಿ ಬರುತ್ತಿರುವ
ವಾಸನೆ ಮೂಗಿಗೆ

ಬಡಿದದ್ದೇ

ಈ ನಮ್ಮ ನಾಯಿ
ತಲೆಯೆತ್ತಿ 
ಕಿವಿ ನಿಮಿರಿಸಿ 
ಬಾಲ ನಿಗುರಿಸಿ
ಗೇಟಿನವರೆಗೂ ಧಡಪಡಿಸಿ 
ಇಸ್ಟಗಲ ಬಾಯಿ ತೆರೆದು
ಬೊಗಳಿದ್ದೇ ಬೊಗಳಿದ್ದು

ಆದರೆ ಆ ನಾಯಿ 
ಈ ನಮ್ಮ ನಾಯಿಯನ್ನು 
ನೋಡೇ ಇಲ್ಲ ಎನ್ನುವಂತೆ
ತನ್ನ ಪಾಡಿಗೆ ತಾನು
ಕ್ಯಾರೇ ಎನ್ನದೇ 
ಆರಾಮವಾಗಿ ನಮ್ಮ ಓಣಿಯನ್ನು
ದಾಟಿ ಹೊರಟುಹೋಯಿತು

ಆ ನಾಯಿ ಕಣ್ಣಿಂದ ದೂರಾಗುವವರೆಗೂ
ಬೊಗಳಿದ ನಮ್ಮ ನಾಯಿ 
ಮರಳಿ 
ನೆರಳಲ್ಲಿ ಕಾಲು ಚಾಚಿ
ಎಲ್ಲಂದರಲ್ಲಿ ತನ್ನ ಮೈಯ
ನೆಕ್ಕತೊಡಗಿತು 

ಇದೆಲ್ಲ ನಡೆಯುತ್ತಲೇ ಇಲ್ಲ
ಅಥವಾ ನಡೆದರೂ ಏನಂತೆ
ಎನ್ನುವ ದಿವ್ಯ ನಿರ್ಲಿಪ್ತತೆಯಲ್ಲಿ
ಅಂಗಳದಲ್ಲೇ ಕುಳಿತಿದ್ದ ನನ್ನ ಅಜ್ಜಿ 
ಹೂಬತ್ತಿ ಗೆಜ್ಜೆವಸ್ತ್ರ ಬಸಿಯುತ್ತ
ದಾಸರ ಪದ ಒಟಗುಟ್ಟುತ್ತಿದ್ದಳು,

'ಬಂದದ್ದೆಲ್ಲ ಬರಲಿ
ಗೋವಿಂದನ ದಯವೊಂದಿರಲಿ’