Sunday 27 June 2021

ಇಂಗ್ಲೆಂಡ್ ಪತ್ರ - 4

 ಒಂದು ಸಾಕ್ಷ್ಯಚಿತ್ರ, ಒಂದು ಶಾಲೆ ಮತ್ತು ಒಂದು ಪುಸ್ತಕ


‘ವಿಧಿಯ ಹೆಣ್ಣುಮಕ್ಕಳು‘ ಎನ್ನುವ ಸಾಕ್ಷ್ಯಚಿತ್ರ: 


ನೆಟ್‍ಫ್ಲಿಕ್ಸ್‌ನಲ್ಲಿ ‘ವಿಧಿಯ ಹೆಣ್ಣುಮಕ್ಕಳು (Daughters of Destiny)‘ ಎನ್ನುವ 4 ಕಂತುಗಳ ಸಾಕ್ಷ್ಯಚಿತ್ರವಿದೆ. ಈ ಸಾಕ್ಷ್ಯಚಿತ್ರವನ್ನು ಮಾಡಿದವರು, ಆಸ್ಕರ್ ಪ್ರಶಸ್ತಿ ವಿಜೇತ ಅಮೇರಿಕದ ವನೆಸಾ ರಾತ್ ಎನ್ನುವವರು. ವನೆಸಾ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸೂಕ್ಷ್ಮಸಂವೇದನೆಯ ಸಾಕ್ಷ್ಯಚಿತ್ರ ನಿರ್ದೇಶಕಿ. 


ಈ ಸಾಕ್ಷ್ಯಚಿತ್ರಕ್ಕೆ ಅವರು ಆರಿಸಿಕೊಂಡಿದ್ದು ಒಂದು ಬೋರ್ಡಿಂಗ್ ಸ್ಕೂಲನ್ನು. ಇದು ಅಮೇರಿಕದಲ್ಲಿರುವ ಬೋರ್ಡಿಂಗ್ ಶಾಲೆಯ ಕತೆಯಲ್ಲ, ಭಾರತದ ಹಳ್ಳಿಯೊಂದರಲ್ಲಿ ಇರುವ ‘ಶಾಂತಿಭವನ‘ ಎಂಬ ಬೋರ್ಡಿಂಗ್ ಶಾಲೆ; ಈ ಶಾಲೆ ಬೆಂಗಳೂರಿನಿಂದ ಒಂದು ಗಂಟೆ ದೂರದಲ್ಲಿ ನೆರೆಯ ತಮಿಳುನಾಡಿನ ಹಳ್ಳಿಯೊಂದರಲ್ಲಿದೆ. 


ವೆನಿಸಾ ಅವರು ಅಮೇರಿಕದಿಂದ ಭಾರತದ ಈ ಹಳ್ಳಿಯಲ್ಲಿರುವ ಬೋರ್ಡಿಂಗ್ ಶಾಲೆಗೆ ಬರುತ್ತಾರೆ. ನಾಲ್ಕು ವರ್ಷದ ನಾಲ್ಕು ಪುಟ್ಟ ಹೆಣ್ಣುಮಕ್ಕಳು ಬೋರ್ಡಿಂಗ್ ಶಾಲೆಯನ್ನು ಸೇರಿ ವಯಸ್ಕರಾಗಿ ತಮ್ಮ ಉನ್ನತ ಶಿಕ್ಷಣಕ್ಕೆ ಹೋಗುವವರೆಗೆ, ಅವರ ಜೀವನವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತ ಹೋಗುತ್ತಾರೆ. ನಾಲ್ಕು ಗಂಟೆಗಳಲ್ಲಿ ಅಷ್ಟು ವರ್ಷಗಳ ಕತೆಯನ್ನು ಕುತೂಹಲಭರಿತವಾಗಿ ಹೇಳುತ್ತ ಹೋಗುತ್ತಾರೆ. ಈ ಸಾಕ್ಷ್ಯಚಿತ್ರಕ್ಕೆ ನವಿರಾಗಿ ಎ ಆರ್ ರೆಹಮಾನ್ ಸಂಗೀತವನ್ನು ಕೂಡ ಕೊಟ್ಟಿದ್ದಾರೆ. 


ಈ ಸಾಕ್ಷ್ಯಚಿತ್ರವನ್ನು ನೋಡುತ್ತ ಕಣ್ಣು ಆಗಾಗ ಒದ್ದೆಯಾಗುತ್ತದೆ, ಮನಸ್ಸು ಭಾರವಾಗುತ್ತದೆ, ‘Pause‘ ಬಟನ್ ಒತ್ತಿ ಚಿಂತಿಸುವಂತೆ ಮಾಡುತ್ತದೆ. ನಮ್ಮನ್ನು ‘ಶಾಂತಿಭವನ‘ದ ಮಕ್ಕಳ ನಡುವೆ ನಿಲ್ಲಿಸಿಬಿಡುತ್ತದೆ.  


‘ಶಾಂತಿಭವನ‘ವೆಂಬ ಶಾಲೆ:


ಕೇರಳ ಮೂಲದ ಅಬ್ರಹಾಂ ಜಾರ್ಜ್ ಎನ್ನುವವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 1962ರ ಚೈನಾದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಅಪ್ಪಳಿಸಿದ ಬಾಂಬಿನ ಭಯಂಕರ ಶಬ್ದದಿಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಮೇರಿಕದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ತಾಯಿ ಅವರ ಶ್ರವಣ ಚಿಕಿತ್ಸೆಗಾಗಿ ಅಮೇರಿಕಕ್ಕೆ ಕರೆಸಿಕೊಳ್ಳುತ್ತಾರೆ. ಅಲ್ಲಿ ಕಿವಿಯ ಶಸ್ತ್ರಚಿಕಿತ್ಸೆಯಾಗುತ್ತದೆ. ಅಲ್ಲಿಯೆ ಉಳಿದುಕೊಂಡ ಅಬ್ರಹಾಂ, ಅಮೇರಿಕದಲ್ಲಿ ಬ್ಯುಸಿನೆಸ್ ಸ್ಕೂಲ್ ಸೇರಿ, ಅಲ್ಲಿಯ ಉನ್ನತ ಶಿಕ್ಷಣ ಪಡೆಯುತ್ತಾರೆ. ಅಲ್ಲಿನ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಾರೆ, ನಂತರ ತಮ್ಮದೇ ಸ್ವಂತ ಕಂಪನಿ ಕಟ್ಟಿಕೊಂಡು ದೊಡ್ಡ ಉದ್ಯಮಿಯಾಗುತ್ತಾರೆ್. ಆದರೆ ಅಬ್ರಹಾಂ ಸೆಳೆತವೆಲ್ಲ ಭಾರತದಡೆಗೇ. ಭಾರತದ ಸಮಾಜಕ್ಕೆ ತಮ್ಮಿಂದ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿ ‘ಶಾಂತಿಭವನ‘ವೆಂಬ ಬೋರ್ಡಿಂಗ್ ಶಾಲೆಯನ್ನು ಆರಂಭಿಸುತ್ತಾರೆ. . 


ಕರ್ನಾಟಕದ ಗಡಿಗೆ ತುಂಬ ಹತ್ತಿರದಲ್ಲಿ ತಮಿಳುನಾಡಿನ ಹಳ್ಳಿಯೊಂದರಲ್ಲಿರುವ ಈ ‘ಶಾಂತಿಭವನ‘ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡುವ ಬೋರ್ಡಿಂಗ್ ಶಾಲೆ. ಈ ಬೋರ್ಡಿಂಗ್ ಸ್ಕೂಲಿನಲ್ಲಿ ಪ್ರತಿ ತಿಂಗಳು ಪ್ರತಿ ಮಗುವಿನ ಶಿಕ್ಷಣಕ್ಕೆ (ವಸತಿ, ಆಹಾರ ಮತ್ತು ಆರೋಗ್ಯ ಸೇರಿ) 11,000 ಸಾವಿರ ರೂಪಾಯಿ ಬೇಕಾಗುತ್ತದೆ! ಭಾರತದಲ್ಲಿ ಎಷ್ಟು ಜನರಿಗೆ ಇಂಥ ಬೋರ್ಡಿಂಗ್ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಸಾಧ್ಯವಿದೆ? ಮೇಲ್ಮಧ್ಯಮ ವರ್ಗ ಅನಿಸಿಕೊಂಡವರೂ ಇಂಥ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಕನಸನ್ನು ಕಾಣಲಾಗದು. ಹಾಗಾದರೆ ಇದು ಅಬ್ರಹಾಂ ಜಾರ್ಜ್ ಅವರು ಶ್ರೀಮಂತ ಮಕ್ಕಳಿಗಾಗಿ ತೆರೆದ ಬೋರ್ಡಿಂಗ್ ಶಾಲೆ ಎಂದು ನೀವು ಅಂದುಕೊಂಡಿದ್ದರೆ ಅದು ಖಂಡಿತ ತಪ್ಪು. 


ಬಡತನ, ದಾರಿದ್ರ್ಯ, ಅನಕ್ಷರತೆ ಮತ್ತು ‘ಕೆಳಜಾತಿ‘ ಅಥವಾ ‘ಅಸ್ಪೃಶ್ಯತೆ‘ ಎಲ್ಲ ಸೇರಿ, ನಗರಗಳಿಂದ ದೂರ ಚಿಕ್ಕ ಹಳ್ಳಿಗಳಲ್ಲಿ ಬದುಕುವವರ ಮನೆಯಲ್ಲಿ ಹುಟ್ಟಿದ ನತದೃಷ್ಟ ಮಕ್ಕಳನ್ನು ಹುಡುಕಿ ತಂದು ಈ ಶಾಲೆಯಲ್ಲಿ ಸೇರಿಸುತ್ತಾರೆ ಅಬ್ರಹಾಂ. ಆಧುನಿಕ ಜಗತ್ತು ಬದುಕಲೆತ್ನಿಸುತ್ತಿರುವ ಜಾತ್ಯತೀತತೆ, ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಕನಸಗಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಿ, ಆ ಕನಸುಗಳನ್ನು ಸಾಕಾರ ಮಾಡಲು ಈ ಬೋರ್ಡಿಂಗ್ ಶಾಲೆ ಪಣತೊಟ್ಟು ನಿಂತಿದೆ. ವಸತಿ, ಊಟ, ಆರೋಗ್ಯ ಮತ್ತು ಶಿಕ್ಷಣ ಸೇರಿ ಪ್ರತಿ ಮಗುವಿಗೆ ತಿಂಗಳಿಗೆ ಆಗುವ ಸುಮಾರು 11,000 ರೂಪಾಯಿ ವೆಚ್ಚವನ್ನು ಶಾಂತಿಭವನದ ದತ್ತಿಸಂಸ್ಥೆಯೇ ನೋಡಿಕೊಳ್ಳುತ್ತದೆ. ಮೊದಮೊದಲಿಗೆ ಎಲ್ಲ ಖರ್ಚನ್ನೂ ಸ್ವತಃ ಅಬ್ರಹಾಂ ಜಾರ್ಜ್ ಅವರೇ ತಮ್ಮ ಅಮೇರಿಕದ ಉದ್ಯಮದ ವಹಿವಾಟದಿಂದ ಬಂದ ಹಣದಲ್ಲಿ ನಡೆಸುತ್ತಿದ್ದರು; ಇತ್ತೀಚೆಗೆ ದೇಣಿಗೆ ಪಡೆಯುತ್ತಿದ್ದಾರೆ. ಈಗ ಇಲ್ಲಿ ಮುನ್ನೂರಕ್ಕೂ ಹೆಚ್ಚು ಇಂಥ ಮಕ್ಕಳು ಅತ್ಯುತ್ತಮ ಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. 


‘ಆನೆ ಓಡಿಸುವವನ ಮಗಳು‘ ಎನ್ನುವ ಪುಸ್ತಕ:


ಬೆಂಗಳೂರಿನಿಂದ ತುಂಬ ದೂರವೇನೂ ಇಲ್ಲದ, ಆದರೆ ನಾಗರಿಕ ಜೀವನದ ಮೂಲಭೂತ ಸೌಕರ್ಯಗಳೂ ಇಲ್ಲದ ಚಿಕ್ಕ ಹಳ್ಳಿ. ಅಲ್ಲಿ ಕಳ್ಳಭಟ್ಟಿ ಮಾಡಿಕೊಂಡು ಬಡತನದ ರೇಖೆಗಿಂತ ಬಹಳ ಕೆಳಗೆ ಬದುಕುತ್ತಿರುವ ಕ್ರಿಸ್ತ ಧರ್ಮಕ್ಕೆ ಸೇರಿದ ದಲಿತನ ಸಂಸಾರ. ಗಂಡು ಸಂತಾನಕ್ಕಾಗಿ ಹಾತೊರೆಯುತ್ತಿರುವಾಗ ಹುಟ್ಟಿದ ಮಗು ಹೆಣ್ಣು ಮಗು ಶಿಲ್ಪಾ. ಶಿಲ್ಪಾಳ ಬದುಕು, ಆ ಹಳ್ಳಿಯಲ್ಲಿ ಹುಟ್ಟಿರುವ ಎಲ್ಲ ಹುಡುಗಿಯರಂತೆ, ನಾಕಾರು ವರ್ಷ ಅಲ್ಲಿರುವ ಸರಕಾರಿ ಕನ್ನಡ ಶಾಲೆಯಲ್ಲಿ ಓದಿದ ಶಾಸ್ತ್ರ ಮಾಡಿ, ಹದಿಮೂರೋ ಹದಿನಾಲ್ಕೋ ಆಗುವಷ್ಟರಲ್ಲಿ ಮದುವೆ ಮಾಡಿಕೊಂಡು, ನಾಕಾರು ಮಕ್ಕಳ್ಳನ್ನು ಹೆತ್ತು, ಇನ್ನೂ ಹೆಚ್ಚಿನ ಬಡತನವನ್ನು ಹೊತ್ತು, ಹೆಣ್ಣಾಗಿ ಹುಟ್ಟಿದ ‘ತಪ್ಪಿ‘ಗೆ ನರಕದ ಬದುಕನ್ನು ಸವೆಸಬೇಕಾಗುತ್ತಿತ್ತೇನೋ! ಆದರೆ ಹಾಗಾಗಲಿಲ್ಲ. ಶಿಲ್ಪಾ ಇರುವ ಹಳ್ಳಿಗೆ  ‘ಶಾಂತಿಭವನ‘ದ ತಂಡ ಬಂದು ಶಿಲ್ಪಾಳನ್ನು ಶಾಂತಿಭವನಕ್ಕೆ ಹೊತ್ತೊಯ್ಯುತ್ತದೆ! 


ಶಿಲ್ಪಾ ಎಂಬ ಈ ಹುಡುಗಿ ಶಾಲೆ ಸೇರಿದಾಗಿನಿಂದ ಹಿಡಿದು ಶಾಂತಿಭವನ ತೊರೆದು ಕಾಲೇಜು ಸೇರುವವರೆಗೆ ವನೆಸಾ ರಾತ್ ತಮ್ಮ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯುತ್ತ ಹೋಗುತ್ತಾರೆ. ಶಿಲ್ಪಾ ನಮ್ಮ ಕಣ್ಣ ಮುಂದೆ ಬೆಳೆಯುತ್ತ ಹೋಗುತ್ತಾಳೆ, ಈ ಚಿತ್ರದಲ್ಲಿ. ಕ್ಯಾಮರಾದ ಮುಂದೆ ಈ ಹುಡುಗಿ ತನ್ನ ಕುಟುಂಬದ ಕತೆಯನ್ನು, ತನ್ನ ಹಳ್ಳಿಯ ಬದುಕನ್ನು, ಸಂತೋಷವನ್ನು, ದುಃಖವನ್ನು, ದುಗುಡಗಳನ್ನು, ಆಸೆಗಳನ್ನು, ಕನಸುಗಳನ್ನು ಹೇಳುತ್ತ ಹೋಗುತ್ತಾಳೆ. ರಜೆಗೆ ತನ್ನ ಹಳ್ಳಿಗೆ ಹೋದಾಗ ವನಿಸಾ ಕ್ಯಾಮರಾವನ್ನು ಅಲ್ಲಿಯೂ ತೆಗೆದುಕೊಂಡು ಹೋಗಿ ಶಿಲ್ಪಾಳ ಅಪ್ಪ, ಅಮ್ಮ, ತಂಗಿ, ತಮ್ಮಂದಿರನ್ನು ಮಾತಾಡಿಸುತ್ತಾರೆ, ಅವಳ ಹಳ್ಳಿಯ ಬದುಕನ್ನು ಸೆರೆಹಿಡಿಯುತ್ತಾರೆ. 


ಕಾಲೇಜು ಬಿಟ್ಟು ಹೋದ ಶಿಲ್ಪಾ ‘ಆನೆ ಓಡಿಸುವವನ ಮಗಳು (The Elephant Chaser’s daughter)‘ ಎನ್ನುವ ನೆನಪಿನ ಕತೆಯನ್ನು (Memoir) ಬರೆಯುತ್ತಾರೆ. ವನೆಸಾ ರಾತ್ ತಮ್ಮ ಸಾಕ್ಷ್ಯಚಿತ್ರದಲ್ಲಿ ಹಿಡಿದಿಡಲಾಗದ ಘಟನೆಗಳನ್ನು, ದುಗುಡಗಳನ್ನು, ತಲ್ಲಣಗಳನ್ನು ಈ ಕತೆಯಲ್ಲಿ ತುಂಬ ಪರಿಣಾಮಕಾರಿಯಾಗಿ ಶಿಲ್ಪಾ ಬರೆದಿದ್ದಾರೆ. ಕನ್ನಡದ ದಲಿತ ಹುಡುಗಿಯೊಬ್ಬಳು ಇಂಗ್ಲೀಷಿನಲ್ಲಿ ಬರೆದ ಮೊಟ್ಟಮೊದಲ ಆತ್ಮಕತೆ ಇದೇ ಇರಬಹುದು ಎಂದು ನನ್ನ ಊಹೆ. 


ತಂಗಿ ಕಾವ್ಯಾಳ ಅಸಹಜ ಸಾವಿನಿಂದ ಆರಂಭವಾಗುವ ಈ ಪುಸ್ತಕ, ಫ್ಲಾಷ್‍ಬ್ಯಾಕಿಗೆ ಹೋಗುತ್ತದೆ. ನೀಲಿ ಬಣ್ಣದ ಜೀಪು ಹಳ್ಳಿಗೆ ಬಂದು, ತನ್ನನ್ನು ತನ್ನ ಅಪ್ಪ-ಅಮ್ಮನಿಂದ ದೂರಾಗಿಸಿ, ‘ಶಾಂತಿಭವನ‘ದಲ್ಲಿ ಸೇರಿಸಿದ್ದನ್ನು ಪುಟ್ಟ ಹುಡುಗಿಯ ಬೆರಗು ಕಣ್ಣಿಂದ ಬರೆಯುತ್ತಾರೆ. ಬೋರ್ಡಿಂಗ್ ಶಾಲೆಯಲ್ಲಿ ಹೊಂದಿಕೊಳ್ಳಲು ಕಷ್ಟ ಪಟ್ಟಿದ್ದು, ಜೊತೆಗೆ ಅಲ್ಲಿ ಸಿಗುವ ಸೌಕರ್ಯಗಳನ್ನು ಆನಂದಿಸಿದ್ದು -  ಒಟ್ಟೊಟ್ಟಿಗೆ ಹೇಗೆ ಪುಟ್ಟ ಮಗುವಿನ ಮೇಲೆ ಪರಿಣಾಮ ಮಾಡುತ್ತಿದ್ದವು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ರಜೆಯ ವೇಳೆಯಲ್ಲಿ ಹಳ್ಳಿಗೆ ಹೋಗಿ ಅಲ್ಲಿ ಹೊಂದಿಕೊಳ್ಳಲು ಕಷ್ಟ ಪಡುವುದನ್ನು, ತಂಗಿಯ ಜೊತೆ ಆಟವಾಡುವುದನ್ನು, ತಾಯಿಯು ತಮ್ಮನ್ನೆಲ್ಲ ತೊರೆದು ದೂರದ ಸಿಂಗಾಪೂರಿಗೆ ಕೆಲಸದಾಳಾಗಿ ಹೋಗುವುದನ್ನು, ಯೌವನದ ಹೊಸ್ತಿಲಲ್ಲಿ ಬಂದಾಗ ಆಗುವ ನವಿರು ಭಾವಗಳನ್ನು ಮತ್ತು ಆಗವ ಘಟನೆಗಳನ್ನು ಬಿಚ್ಚುತ್ತ ಹೋಗುತ್ತಾರೆ. ಆರ್ಥಿಕ ಅನಾನುಕೂಲತೆಗಳಿಂದಾಗಿ ಬೋರ್ಡಿಂಗ್ ಶಾಲೆ ಮುಚ್ಚಿಹೋಗುವ ಪರಿಸ್ಥಿತಿ ಬಂದಾಗ ಕಂಗಾಲಾಗಿ ತನ್ನ ಜೀವನ ಮತ್ತೆ ಹಳ್ಳಿಯ ಬದುಕಿಗೆ ಸೀಮಿತ ಎನ್ನುವ ಚಿಂತೆ ಏನೇನೆಲ್ಲವನ್ನು ಮಾಡಿದುತ್ತದೆ ಎನ್ನುವುದನ್ನು ಆ ಸಮಯದ ದುಗುಡದಿಂದಲೇ ಬರೆದಿದ್ದಾರೆ. ಆದರೆ ಮತ್ತೆ ಶಾಲೆ ತನ್ನ ಕಷ್ಟಗಳನ್ನು ನಿವಾರಿಸಿಕೊಂಡು ಮುಂದುವರೆಯುತ್ತದೆ, ಶಿಲ್ಪಾ ಶಾಂತಿಭವನದ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕೆ ಅಣಿಯಾಗುತ್ತಾರೆ. ಅತ್ತ ಅಪ್ಪ ಕಳ್ಳಭಟ್ಟಿ ವ್ಯವಹಾರವನ್ನು ಬಿಟ್ಟು ಆನೆ ಓಡಿಸುವವನ ಸರಕಾರಿ ನೌಕರಿ ಹಿಡಿಯುತ್ತಾರೆ, ತಾಯಿ ಸಿಂಗಾಪೂರಿನಿಂದ ವಾಪಸ್ ಬರುತ್ತಾರೆ, ಆದರೆ ಅನಿರೀಕ್ಷಿತವಾಗಿ ತಂಗಿ ಕಾವ್ಯಾಳ ಅಸಹಜ ಸಾವು ಸಂಭವಿಸುತ್ತದೆ. ಅಲ್ಲಿಗೆ ಪುಸ್ತಕ ಮತ್ತೆ ಮೊದಲನೇ ಅಧ್ಯಾಯಕ್ಕೆ ಬರುತ್ತದೆ. ಈ ಪುಸ್ತಕವನ್ನು ತನ್ನ ತಂಗಿ ಕಾವ್ಯಾಗೆ ಮತ್ತು ಡ್ಯಾಡ್ (ಅಬ್ರಹಾಂ) ಅವರಿಗೆ ಅರ್ಪಿಸಿದ್ದಾಳೆ (ಶಿಲ್ಪಾ ತನ್ನ ತಂದೆಗೆ ಅಪ್ಪಾ ಎಂದೂ, ಅಬ್ರಹಾಂ ಅವರನ್ನು ಡ್ಯಾಡ್ ಎಂದೂ ಕರೆಯುತ್ತಾಳೆ). 


ಕರ್ನಾಟಕದ ಕಗ್ಗ ಹಳ್ಳಿಯೊಂದರ ಬಡತನ ತುಂಬಿ ತುಳುಕುತ್ತಿರುವ ದಲಿತರ ಮನೆಯಲ್ಲಿ ‘ಹೆಣ್ಣಾ‘ಗಿ ಹುಟ್ಟಿದ ಶಿಲ್ಪಾ, ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕವನ್ನು ಬರೆದು, ಭಾರತದಲ್ಲಿ ಉನ್ನತ ಶಿಕ್ಷಣವನು ಪಡೆದು, ಇಂದು ಅಮೇರಿಕದ ನ್ಯುಯಾರ್ಕ್‌ ನಗರದ ಮನಶಾಸ್ತ್ರದಲ್ಲಿ ಪಿಎಚ್‍ಡಿ ಮಾಡುತ್ತಿದ್ದಾರೆ! ಒಂದಕ್ಕೊಂದು ಸಂಬಂಧಗಳಿಲ್ಲದ ಅಬ್ರಹಾಂ, ವನಿಸಾ ಮತ್ತು, ಶಿಲ್ಪಾ ಅವರು ಕಟ್ಟಿಕೊಟ್ಟ ಒಂದು ಶಾಲೆ, ಒಂದು ಸಾಕ್ಷ್ಯಚಿತ್ರ ಮತ್ತು ಒಂದು ಪುಸ್ತಕ - ಈ ಮೂರೂ ಸೇರಿ, ಬದುಕಿನ ಬಗ್ಗೆ, ಮಾನವತೆಯ ಬಗ್ಗೆ ಒಂದು ಪುಟ್ಟ ಆಶಾವಾದವನ್ನು ಮೂಡಿಸುತ್ತವೆ. ಮನುಷ್ಯತ್ವ ಜಾಗತಿಕವಾಗಿ ಹಬ್ಬಿ ಸೃಷ್ಟಿಸುತ್ತಿರುವ ಈ ಬಾದರಾಯಣ ಸಂಬಂಧಗಳು ಆಧುನಿಕ ಜಗತ್ತಿನ ಹೊಸ ಕೊಂಡಿಗಳಾಗುತ್ತಿವೆ. ಸಮಾಜದಲ್ಲಿರುವ ಜಾತೀಯತೆ, ಲಿಂಗ ಅಸಮಾನತೆ ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುವ ಭರವಸೆ ಮೂಡಿಸುತ್ತಿವೆ. ಜಗತ್ತು ಸಣ್ಣದಾದಂತೆಲ್ಲ, ಭಾಷೆಯ ಭಾರ ಕಡಿಮೆಯಾದಂತೆಲ್ಲ, ಮಾನವತೆಯ ಸಾಂಕ್ರಾಮಿಕ ಜಗತ್ತಿನ ಮೂಲೆಮೂಲೆಯನ್ನೂ ತಲುಪುತ್ತಿದೆ. 


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)

Saturday 12 June 2021

ಇಂಗ್ಲೆಂಡ್ ಪತ್ರ - 3

 ಕೊರೋನಾದ ಬಗ್ಗೆ ಇನ್ನೊಂದಿಷ್ಟು:


2020ರ ಆರಂಭದಲ್ಲಿ ಮೊಟ್ಟಮೊದಲು ಕೋವಿಡ್-19 ಕಾಯಿಲೆಯ ವರದಿ ಬಂದಾಗ ರಾಜಕಾರಣಿಗಳು, ಪತ್ರಿಕೆಗಳು, ವಿಜ್ಞಾನಿಗಳು ಈ ಹಿಂದೆ ಬಂದ ಸಾರ್ಸ್ (SARS) ಕಾಯಿಲೆಯ ತರಹ ಈ ಕಾಯಿಲೆಯು ಕೆಲವು ತಿಂಗಳು ಕೆಲವು ದೇಶಗಳನ್ನು ಕಾಡಿ ಹೊರಟು ಹೋಗುತ್ತದೆ ಎಂದುಕೊಂಡರು. ಜಾಗತಿಕ ಸಾಂಕ್ರಾಮಿಕವೊಂದನ್ನು ಎದುರಿಸಲು ಪ್ರಪಂಚದಲ್ಲಿ ಅತ್ಯುನ್ನತ ಆರೋಗ್ಯ ವ್ಯವಸ್ಥೆ ಇರುವ ದೇಶಗಳೂ ಸಿದ್ಧವಾಗಿರಲಿಲ್ಲ, ತನ್ನೆಲ್ಲ ಪ್ರಜೆಗಳಿಗೆ ಉಚಿತ ಆರೋಗ್ಯ ಕೊಡುವ ಬ್ರಿಟನ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ದಿನಕ್ಕೊಂದು ಹೇಳಿಕೆ ಕೊಡುತ್ತ ಗೊಂದಲದಲ್ಲಿತ್ತು. ಹಿಂದೆಂದೂ ನೋಡಿರದ ರೀತಿಯಲ್ಲಿ ನಾನು ಕೆಲಸ ಮಾಡುವ ಆಸ್ಪತ್ರೆಗಳು ಕೊರೋನಾ ಸೋಂಕಿತರಿಂದ ಭರ್ತಿಯಾದವು. ತೀವ್ರ ನಿಗಾ ಘಟಕಗಳು ತುಂಬಿದವು. ಹೊಸ ತೀವ್ರ ನಿಗಾ ಘಟಕಗಳನ್ನು ಸೃಷ್ಟಿಸಿದರು. ಎಲ್ಲ ರುಟೀನ್ ಕಾಯಿಲೆಗಳ ಕ್ಲಿನಿಕ್ಕುಗಳು ಮತ್ತು ಶಸ್ತ್ರಚಿಕಿತ್ಸೆಗಳು ನಿಂತುಹೋದವು. 


ಇಡೀ ಯುನೈಟೆಡ್ ಕಿಂಗ್‍ಡಮ್ ಲಾಕ್‍ಡೌನ್‍ಗೆ ಹೋಯಿತು; ಆದರೆ ವೈದ್ಯವೃತ್ತಿಯಲ್ಲಿರುವ ನನ್ನಂಥವರಿಗೆ ಎಲ್ಲಿಯ ಲಾಕ್‍ಡೌನ್? ವೈಯಕ್ತಿಕ ರಕ್ಷಾ ಧಿರಿಸನ್ನು ಹಾಕಿಕೊಂಡು ಸೋಂಕಿತರನ್ನು ನೋಡುತ್ತಿದ್ದೆವು, ನಮಗೆ ಯಾವಾಗ ಸೋಂಕು ತಲುಗುವುದೋ ಎನ್ನುವ ಅನಿಶ್ಚಿತತೆಯಲ್ಲಿ ಮನೆಗೆ ಮರುಳುತ್ತಿದ್ದೆವು. ಎಲ್ಲಿ ನಮಗೆ ಬಂದಿರಬಹುದಾದ ಸೋಂಕನ್ನು ಸಂಗಾತಿಗೆ, ಮಕ್ಕಳಿಗೆ ಕೊಡುತ್ತೇವೋ ಎಂದು ಹೆದರುತ್ತಿದ್ದೆವು . ಜೊತೆಗೆ ಕೆಲಸ ಮಾಡುವ, ಪರಿಚಯವಿರುವ ಹಲವಾರು ವೈದ್ಯರು ಸೋಂಕಿತರಾಗಿ, ಕಾಯಿಲೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಭರ್ತಿಯಾದರು, ಕೆಲವು ವೈದ್ಯರು ಅಸುನೀಗಿದರು. 


ಈ ಸಾಂಕ್ರಾಮಿಕದ ಮೊದಲ ಅಲೆ ವ್ಯಾಪಕವಾಗಿರುವಾಗ ನಡೆದ ಬ್ರಿಟನ್ನಿನ ಸಂಶೋಧನೆಗಳಿಂದ ತಿಳಿದು ಬಂದ ಅಂಶವೇನೆಂದರೆ ಸೋಂಕಿತರಲ್ಲಿ ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದಿರುವ ಜನರಲ್ಲಿ, ಈ ರೋಗ ಹೆಚ್ಚು ತೀವ್ರವಾಗಿರುತ್ತದೆ ಎನ್ನುವುದು ಮತ್ತು ಹೆಚ್ಚು ಪ್ರಾಣಹಾನಿಯನ್ನು ಮಾಡುತ್ತದೆ ಎನ್ನುವುದು. ಆಷ್ಟೇ ಅಲ್ಲ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದ ಜನ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ಈ ಸಾಂಕ್ರಾಮಿಕ ಹೆಚ್ಚು ವ್ಯಾಪಿಯಾಗಿರುವುದೂ ಕಂಡುಬಂತು. 


ಅಂದರೆ ಬ್ರಿಟನ್ ದೇಶದಲ್ಲಿರುವ ಅಲ್ಪಸಂಖ್ಯಾತ ಜನರು ಈ ಕಾಯೆಲೆಯಿಂದಾಗಿ ಹೆಚ್ಚು ಬಳಲುತ್ತಾರೆ, ಹೆಚ್ಚಾಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ (ಬ್ರಿಟನ್ನಿನಲ್ಲಿ ಎಲ್ಲರಿಗೂ ಆರೋಗ್ಯ ಚಿಕಿತ್ಸೆ ಉಚಿತ), ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರುತ್ತಾರೆ, ಹಾಗಾಗಿ ಬ್ರಿಟನ್ನಿನ ಆರೋಗ್ಯ ಮತ್ತು ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲನ್ನು ಬೇಡುತ್ತಾರೆ, ಅಲ್ಲದೇ ರೋಗವನ್ನೂ ಹೆಚ್ಚು ಜನರಿಗೆ ಹಬ್ಬಿಸುತ್ತಾರೆ ಎಂದಾಯಿತು. 


ಲಸಿಕೆ ಬಂದಾಗಲೂ ಕೂಡ, ಬಹುಸಂಖ್ಯಾತರಿಗೆ ಹೋಲಿಸಿದರೆ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ವಲಸೆ ಬಂದಿರುವ ಜನರು ಲಸಿಕೆ ಪಡೆಯುವಲ್ಲಿ ಹೆಚ್ಚು ಹಿಂದೇಟು ಹಾಕಿದರು. ಬೇರೆಯವರು ತೆಗೆದುಕೊಂಡು ಬದುಕಿ ಉಳಿದರೆ ನೋಡೋಣ ಎಂದು ಮೂಗು ಮುರಿದರು. ಲಸಿಕೆಯ ಬಗ್ಗೆ ಇಲ್ಲ ಸಲ್ಲದ ತರ್ಕಗಳನ್ನು ಸಾಮಾಜಿಕ ತಾಣಗಳಲ್ಲಿ, ವಾಟ್ಸ್ಯಾಪ್ಪಿನಲ್ಲಿ ಹರಿಬಿಟ್ಟರು. 


ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದು ಬ್ರಿಟನ್ನಿನಲ್ಲಿ ನೆಲೆಸಿರುವ ಜನರ ವರ್ಣಜನಾಂಗವನ್ನು ತೆಗೆದುಕೊಂಡರೆ ಬಹುತೇಕ ಜನರು ಕಪ್ಪು ಅಥವಾ ಕಂದು ಬಣ್ಣದವರು.  ಧರ್ಮವನ್ನು ತೆಗೆದುಕೊಂಡರೆ ಅವರೆಲ್ಲ ಬಹುತೇಕ ಜನ ಇಸ್ಲಾಂ, ಹಿಂದೂ ಅಥವಾ ಸಿಖ್ ಧರ್ಮಕ್ಕೆ ಸೇರಿದವರು. ಹಾಗಿದ್ದರೂ ಕೊರೋನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಒಂದೇ ಒಂದು ಪತ್ರಿಕೆಯೂ, ಒಬ್ಬನೇ ಒಬ್ಬ ರಾಜಕಾರಣಿಯೂ ಕಪ್ಪು ಅಥವಾ ಕಂದು ವರ್ಣದವರ ಬಗೆಯಾಗಲೀ, ಅಥವಾ ಇಸ್ಲಾಂ, ಹಿಂದೂ ಅಥವಾ ಸಿಖ್ ಧರ್ಮಗಳ ಕುರಿತಾಗಲೀ ಕೀಳಾಗಿ ಮಾತನಾಡಿಲ್ಲ, ಉದ್ರೇಕಕಾರಿ ಹೇಳಿಕೆಗಳನ್ನು ಕೊಟ್ಟಿಲ್ಲ; ಬದಲಾಗಿ, ಸಹಾನುಭೂತಿಯನ್ನು ತೋರಿಸಿದ್ದಾರೆ. 


ಕೋವಿಡ್ ಸೋಂಕಿತ ರೋಗಿ ಮೃತನಾದಾಗ ಬ್ರಿಟನ್ನಿನ ಆಸ್ಪತ್ರೆಯ ಯಾವುದೇ ಸಿಬ್ಬಂದಿಯಾಗಲಿ ವೈದ್ಯನಾಗಲಿ ಮೃತವ್ಯಕ್ತಿಯ ಬಂಧುಗಳಿಂದ ಒಂದೇ ಒಂದು ಏಟು ತಿಂದು ಹಿಂಸೆಗೊಳಗಾದ ಒಂದೇ ಒಂದು ಘಟನೆಯೂ ಇಲ್ಲಿ ನಡಿದಿಲ್ಲ. ಪರಂತು, ರೋಗಿಗಳು ಕೃತಜ್ಙತೆ ವ್ಯಕ್ತಪಡಿಸಿದ್ದಾರೆ, ಬ್ರಿಟನ್ನಿನ ಜನತೆ ತಮ್ಮ ಮನೆ ಮನೆಯ ಮುಂದೆ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳನ್ನುಹೇಳುವ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.  


ಕಂದುಬಣ್ಣದ ಹಿಂದೂಧರ್ಮಕ್ಕೆ ಸೇರಿದವನಾದ ನಾನು ಈ ಲಾಕ್‍‍ಡೌನ್ ಸಮಯದ ಧೀರ್ಘಾವಧಿಯಲ್ಲಿ ಎಲ್ಲೇ ಹೋದರೂ ಯಾರೂ ನನ್ನನ್ನು ಕೊರೋನಾ ಕಾಯಿಲೆಯನ್ನು ಹಬ್ಬಿಸುವ ವೈರಸ್ಸಿನಂತೆ ನೋಡಿಲ್ಲ. ಆಸ್ಪತ್ರೆಯಲ್ಲಿ ಯಾವ ರೋಗಿಯೂ, ರೋಗಿಯ ಬಂಧುವೂ ನನ್ನನ್ನು ಕೆಂಗಣ್ಣಿನಿಂದ ನೋಡಿಲ್ಲ. ಯಾವ ರಾಜಕಾರಣಿಯೂ, ಯಾವ ಅಂಕಣಕಾರನೂ, ಯಾವ ಪತ್ರಿಕೆಯೂ, ಯಾವ ಟಿವಿ ಚಾನೆಲ್ಲೂ ನನ್ನ ಬಣ್ಣದ ಬಗ್ಗೆ, ಧರ್ಮದ ಬಗ್ಗೆ, ನಿಷ್ಕೃಷ್ಟವಾಗಿ ಮಾತನಾಡಿಲ್ಲ, ಅವಹೇಳನ ಮಾಡಿಲ್ಲ, ಅಷ್ಟರ ಮಟ್ಟಿಗೆ ಅಲ್ಪಸಂಖ್ಯಾತನಾಗಿ ಮತ್ತು ವೈದ್ಯನಾಗಿ ಈ ಕೊರೋನಾದ ಜಾಗತಿಕ ಸಾಂಕ್ರಾಮಿಕದಲ್ಲಿ ಬ್ರಿಟನ್ನಿನಲ್ಲಿ ನಾನು ಸುರಕ್ಷಿತವಾಗಿದ್ದೇನೆ. ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದು ಬಾಯಿಬಿಟ್ಟು ಹೇಳುವ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೇನೆ. 


ಆಯುರ್ವೇದವೋ ಅಲೋಪತಿಯೋ?


ಹೋಮಿಯೋಪತಿಯ ಮೂಲತತ್ತ್ವದ ಪ್ರಕಾರ ಯಾವುದರಿಂದ ಕಾಯಿಲೆ ಬರುತ್ತದೋ ಅದರಿಂದಲೇ ಕಾಯಿಲೆಯನ್ನು ವಾಸಿ ಮಾಡಬಹುದು ಎನ್ನುವುದು. ಕಾಯಿಲೆಯನ್ನು ಗುಣಪಡಿಸಲು ಬೇರೊಂದು ಪದಾರ್ಥವನ್ನು ಬಳಸಿ ಕಾಯಿಲೆಯನ್ನು ಕಡಿಮೆ ಮಾಡಿದರೆ ಅಥವಾ ವಾಸಿ ಮಾಡಿದರೆ, ಅದಕ್ಕೆ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಅಲೋಪತಿ ಎಂದು ಹೆಸರಿಟ್ಟರು, ಹೋಮಿಯೋಪತಿಯಿಂದ ಈ ಆರೋಗ್ಯ ಪದ್ಧತಿಯನ್ನು ಬೇರ್ಪಡಿಸಲು. ಆಧುನಿಕ ವೈದ್ಯಶಾಸ್ತ್ರವನ್ನು ‘ಅಲೋಪತಿ’ ಎಂದು ಎಂದು ಕರೆಯುವುದು ವಾಡಿಕೆ. ಈ ವ್ಯಾಖ್ಯದ ಪ್ರಕಾರ, ಕೆಮ್ಮನ್ನು ಕಡಿಮೆ ಮಾಡಲು, ಡೆಕ್ಸ್‌‍ಟ್ರೋಮೆಥೊರ್ಫಾನ್ (dextromethorphan) ಕೊಟ್ಟರೂ, ನೀಲಗಿರಿ ಎಣ್ಣೆ ಕೊಟ್ಟರೂ, ಅದು ಅಲೋಪತಿಯೇ ಆಯಿತಲ್ಲವೇ?  ಇತ್ತೀಚೆಗೆ ಭಾರತದ ಪ್ರಖ್ಯಾತ ಆಯುರ್ವೇದದ ಉದ್ಯಮಿಯೊಬ್ಬರು ಲಕ್ಷಾಂತರ ಕೊರೋನಾ ಸೋಂಕಿತರು ಅಲೋಪತಿಯಿಂದಾಗಿ ಬಲಿಯಾದರು ಎಂದು  ಮಾಧ್ಯಮದ ಮುಂದೆ ಹೇಳಿ ವಿವಾದಕ್ಕೆ ಎಡೆ ಮಾಡಿಕೊಟ್ಟರು. ಅಲೋಪತಿಯ ವ್ಯಾಖ್ಯವನ್ನು ನೋಡಿದರೆ ಆಯುರ್ವೇದವೂ ಅಲೋಪತಿಯೇ ಅಲ್ಲವೇ? 


ಹಾಗೆಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ತಯಾರು ಮಾಡಿದ ಔಷಧಿಗಳಿಂದ ಅಡ್ಡಪರಿಣಾಮಗಳು ಇರುವುದಿಲ್ಲ, ಆದರೆ ಆಧುನಿಕ ವೈದ್ಯಶಾಸ್ತ್ರದ ಔಷಧಿಗಳಿಂದ ಬಹಳ ಅಡ್ಡಪರಿಣಾಮಗಳು ಆಗುತ್ತವೆ ಎಂದು ಬಹಳಷ್ಟು ಜನರಲ್ಲಿ ಭ್ರಮೆಯಿದೆ. ಹಾಗೆ ನೋಡಿದರೆ, ಆಧುನಿಕ ಔಷಧಿಗಳು ಮಾರುಕಟ್ಟೆಗೆ ಬರುವ ಮೊದಲು ಸಾಕಷ್ಟು ಪ್ರಯೋಗ ಮತ್ತು ಟ್ರಯಲ್‍ಗಳನ್ನು ಸಾಗಿ ಬಂದಿರುತ್ತವೆ, ಆದರೆ ಆಯುರ್ವೇದದ ಹೆಸರಿನಲ್ಲಿ ಬರುವ ಔಷಧಿಗಳ ಪರಿಣಾಮಗಳನ್ನು ಅಡ್ಡಪರಿಣಾಮಗಳನ್ನು ಅಧುನಿಕ ಔಷಧಗಳಷ್ಟು ಕಟ್ಟುಬದ್ಧಾಗಿ ಟ್ರಯಲ್‍ಗಳನ್ನು ಮಾಡಿರುವುದಿಲ್ಲ. ಹಾಗಾಗಿ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಮತ್ತು ಟಿವಿ ಪತ್ರಿಕೆಗಳಲ್ಲಿ ಜಾಹಿರಾತುಕೊಡುವ, ಆಯುರ್ವೇದದ ಹಣೆಪಟ್ಟಿ ಹಾಕಿಕೊಂಡಿರುವ ಔಷಧಿಗಳಿಂದ ದೂರವಿರುವುದು ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಎನ್ನುವುದು ನನ್ನ ಅಭಿಪ್ರಾಯ. ಇದೇ ಮಾತನ್ನು ನಾನು ಅಲೋಪತಿಯ ಹೆಸರಿನಲ್ಲಿ ವೈದ್ಯರ ಚೀಟಿಯಿಲ್ಲದೇ ಸಿಗುವ ಮತ್ತು ಜಾಹೀರಾತುಗಳಲ್ಲಿ ಬರುವ ಔಷಧಿಗಳ ಬಗ್ಗೆಯೂ ಹೇಳುತ್ತೇನೆ.


 

ಗಾಢಕಾಲಪ್ರಯೋಗ:


ಇತ್ತೀಚೆ ‘ಗಾಢಕಾಲಪ್ರಯೋಗ (Deep Time Experiment)’ದ ನಿಮಿತ್ತ 27ರಿಂದ 50 ವರ್ಷದ 15 ಜನರು ಫ್ರಾನ್ಸ್ ದೇಶದ ಕಗ್ಗತ್ತಲಿನ ಗುಹೆಯೊಂದರಲ್ಲಿ ಬಾಹ್ಯಪ್ರಪಂಚದ ಸಂಪರ್ಕವಿಲ್ಲದೇ, ಫೋನು, ಗಡಿಯಾರಗಳಿಲ್ಲದೇ 40 ದಿವಸ ಬದುಕಿ ಹೊರಗೆ ಬಂದರು. ಗಡಿಯಾರ ಅಥವಾ ಕ್ಯಾಲೆಂಡರ್ ಇಲ್ಲದೇ, ಬಾಹ್ಯ ಸಂಪರ್ಕವಿಲ್ಲದೇ,  ದಿನ-ರಾತ್ರಿಯ ಕಲ್ಪನೆಯಿಲ್ಲದೇ ಮನುಷ್ಯನಿಗೆ ಕಾಲಮಾನದ ಬಗ್ಗೆ ಏನು ಅನಿಸುತ್ತದೆ ಎಂದು ತಿಳಿಯುವುದೇ ಈ ಪ್ರಯೋಗದ ಉದ್ದೇಶವಾಗಿತ್ತು. 


ನಲವತ್ತನೇ ದಿನ ಗುಹೆಯ ಒಳಗೆ ಹೋಗಿ ಅಲ್ಲಿದ್ದ 15 ಜನರನ್ನು ಹೊರಗೆ ತಂದು ‘ನಲವತ್ತು ದಿನಗಳಾದವು, ಪ್ರಯೋಗ ಮುಗಿಯಿತು’ ಎಂದು ಹೇಳಿದರೆ, ಗುಹೆಯಿಂದ ಹೊರಬಂದ ಜನ ನಂಬಲೇ ಇಲ್ಲ. ‘ಯಾಕೆ ಹತ್ತು ದಿನ ಬೇಗ ನಮ್ಮನ್ನು ಹೊರಗೆ ತಂದಿರಿ?’ ಎಂದು ಬೇಸರ ಮಾಡಿಕೊಂಡರು. ಗುಹೆಯಲ್ಲಿದ್ದವರ ಲೆಕ್ಕದ ಪ್ರಕಾರ ಅವರು ಗುಹೆಯ ಒಳಗೆ ಹೋಗಿ ಬರೀ ಮೂವತ್ತು ದಿನಗಳಾಗಿದ್ದವು. 


ಅಂದರೆ ಗುಹೆಯಲ್ಲಿರುವವರಿಗೆ ಮಾನಸಿಕವಾಗಿ ಕಾಲವುನಿಧಾನ ಗತಿಯಲ್ಲಿ ಚಲಿಸುತ್ತಿತ್ತು. ಕಾಲವನ್ನು ಮಾನಸಿಕವಾಗಿ ನಿಧಾನವಾಗಿಸುವ ಈ ಪ್ರಯೋಗವನ್ನು ಸಾವಿರಾರು ವರ್ಷಗಳಿಂದ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸಾಧಕರು, ಜಪಾನಿನ ಹಿಮಪರ್ವತಗಳಡಿಯಲ್ಲಿ ಯಾಮಾಬುಷಿ ಅನ್ನುವ ಭಿಕ್ಶುಗಳು ಮಾಡುತ್ತಲೇ ಬಂದಿದ್ದಾರೆ. 2020 ಮರ್ಚ್ ತಿಂಗಳಿನಿಂದ ಕೊರೋನಾದ ನಿಮಿತ್ತ ಲಾಕ್‍ಡೌನ್ ಆದಾಗಿನಿಂದ ನಮ್ಮ ಬದುಕೂ ಕೂಡ ಈ ಗಾಢಕಾಲಪ್ರಯೋಗದಂತೆ, ಯಾಮಾಬುಷಿ ಬಿಕ್ಕುಗಳಂತೆ ಸ್ವಲ್ಪವಾದರೂ ನಿಧಾನವಾಗಿದೆ. ಬೇಗನೆದ್ದು ಓಡುವ ಆತುರ, ಮಕ್ಕಳ ಶಾಲೆಗೆ ತಡವಾಗುವ ಆತಂಕ,  ಕೆಲಸದ ಒತ್ತಡ, ಹಣ ಗಳಿಸಲು ವೇಳೆಯನ್ನು ಮಾರಿಕೊಳ್ಳುವ ತುರಾತುರಿ, ವೇಳೆಗೆ ಸರಿಯಾಗಿ ಹೋಗಬೇಕಾದ ಜಾಗಕ್ಕೆ ಹೋಗುತ್ತೇವೆಯೋ ಇಲ್ಲವೋ ಎನ್ನುವ ಉದ್ವೇಗಗಳೆಲ್ಲ ತಕ್ಕಮಟ್ಟಿಗೆ ಕಡಿಮೆಯಾಗಿವೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಹರಿಯುತ್ತಿದ್ದವರು ಒಂದು ಕೊಂಬೆಯೋ ಕಲ್ಲೋ ಸಿಕ್ಕಾಗ ಆಗುವ ಅನುಭವವನ್ನು ಈ ಕೊರೋನಾ ಲಾಕ್‍ಡೌನ್ ಕೆಲವರಿಗಾದರೂ ಕೊಟ್ಟಿದೆ ಅನಿಸುತ್ತೆ. ಹೆಚ್ಚು ಹೆಚ್ಚು ಜನ ವ್ಯಾಯಾಮ ಮಾಡುತ್ತಿದ್ದಾರೆ, ಯೋಗ ಕಲಿಯುತ್ತಿದ್ದಾರೆ, ಬಿಟ್ಟು ಹೋದ ಹವ್ಯಾಸಗಳನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ, ಓದು, ಬರಹ, ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)