Friday 18 December 2020

ಹೆಸರು

ಹೀಗೊಂದು ಪ್ರೇಮಸಂಜೆಯಲ್ಲಿ
ಒಂದು ಗುಂಪು ಬಂದು ನಮ್ಮ ಹೆಸರು ಕೇಳುತ್ತದೆ
ನಾನು ರಾಮ ಇವಳು ಸೀತೆ ಎನ್ನುತ್ತೇನೆ

ಸ್ವಲ್ಪ ಸಮಯದ ಮೇಲೆ
ಇನ್ನೊಂದು ಗುಂಪು ಬರುತ್ತದೆ
ನಾನು ವಹೀದಾ ಇವನು ರಹೀಮ ಎನ್ನುತ್ತಾಳೆ

ಇನ್ನೂ ಸ್ವಲ್ಪ ಹೊತ್ತಾದ ಮೇಲೆ
ಗೆಳೆಯ-ಗೆಳತಿಯರು ಬರುತ್ತಾರೆ
ನಮ್ಮ ನಿಜವಾದ ಹೆಸರನ್ನು ಕೂಗುತ್ತಾರೆ

Friday 13 November 2020

ನಾನು ಮತ್ತು ನನ್ನ ಭಾಷೆ


ಇಂಗ್ಲಂಡಿನಲ್ಲಿರುವ ನಾನಿರುವ ಊರಿನ poetry clubನಲ್ಲಿ
ನಾನು ಅನುವಾದಿಸಿ ಓದುವ ಕವಿತೆಯ ಭಾಷೆ 'ಕನ್ನಡ' ಎಂದೆ
'I didn't know you are from Canada,' ಎಂದು ನಿರೂಪಕ
ನನ್ನ ಕಂದು ಮೈಬಣ್ಣವನ್ನು ಓರೆಗಣ್ಣಿಂದ ನೋಡುತ್ತಾನೆ

ನಾನು ಕೆಲಸ ಮಾಡುವ ಇಂಗ್ಲಂಡಿನ ಆಸ್ಪತ್ರೆಯಲ್ಲಿ
ಭಾರತೀಯ ಮೂಲದ ವಯಸ್ಸಾದ ರೋಗಿಗಳಿಗೆ
'ನಿಮ್ಮ ಪಂಜಾಬಿ ಉರ್ದು ಹಿಂದಿ ನನಗೆ ಅರ್ಥವಾಗುವುದಿಲ್ಲ,' ಎಂದರೆ
'ನೀನ್ಯಾವ ಸೀಮೆಯ ಭಾರತೀಯ!' ಎಂದು ಗೇಲಿ ಮಾಡುತ್ತಾರೆ

ಇಂಗ್ಲಂಡಿನ ಅಖಿಲ ಭಾರತೀಯ ಸಮಾರಂಭವೊಂದರಲ್ಲಿ
ಹಿಂದಿ ಪಂಜಾಬಿ‌ ಬೆಂಗಾಲಿ ಹಾಡುಗಾರರ ನಡುವೆ
ನಾನೊಂದು ಕನ್ನಡದ ಭಾವಗೀತೆಯನ್ನು ಹಾಡುತ್ತೇನೆ
'What a lovely Tamil song!' ಎಂದು‌ ಡಿಜೆ ಬೆನ್ನು ತಟ್ಟುತ್ತಾನೆ

ಇಂಗ್ಲೀಷಿನಲ್ಲಿ ಬ್ಲಾಗಿಸುವ ನನ್ನ ಕಸಿನ್ ಮನೆಗೆ ಬೆಂಗಳೂರಿಗೆ ಹೋದಾಗ,
'ನೀನೇಕೆ ಕನ್ನಡದಲ್ಲೂ ಬರೆಯುವುದಿಲ್ಲ?' ಎಂದು ಕೇಳಿದರೆ ಆತ ನನ್ನನ್ನೇ ಕೇಳುತ್ತಾನೆ:
ಇಂಗ್ಲಂಡಿನಲ್ಲಿದ್ದೂ ನೀನ್ಯಾಕೆ ಇನ್ನೂ ಕನ್ನಡದಲ್ಲಿ ಬರೆಯುತ್ತೀಯ?
ನಿನ್ನ ಮಗಳಿಗಾಗಲಿ ನನ್ನ ಮಗನಿಗಾಗಲಿ ಕನ್ನಡ ಓದಲು ಬರುತ್ತದೆಯೆ?'

(`ಕನ್ನಡಪ್ರೆಸ್` ಯುಟ್ಯೂಬ್ ಚಾನಲ್ಲಿಗೆ ಓದಿದ್ದು. ನಂತರ `ಅನಿವಾಸಿ`ಯಲ್ಲಿ ಪ್ರಕಟಿತ)



Tuesday 27 October 2020

ಉನ್ಮತ್ತ ರಾತ್ರಿಗಳು

ಉನ್ಮತ್ತ ರಾತ್ರಿಗಳು - ಹುಚ್ಚೆದ್ದ ರಾತ್ರಿಗಳು! 
ಇದ್ದಿದ್ದರೆ ನಾ ನಿನ್ನ ಬಳಿ
ಉನ್ಮತ್ತರಾತ್ರಿಗಳಿರಲೇಬೇಕು
ಭೋಗದುನ್ಮಾದದುಂಬಳಿ!

ವ್ಯರ್ಥವೀ ಗಾಳಿ
ಹೃದಯ ದಡ ಸೇರಿದೆ
ಬೇಡಿನ್ನು ಕೈವಾರ
ಭೂಪಟವ ಹರಿದೆ

ಹುಟ್ಟು ಹಾಕುತ್ತ ಪ್ರೇಮ-
ಆಹಾ-ಶರಧಿಯಲ್ಲಿ
ತಂಗುವೆನೀ ರಾತ್ರಿ
ನಿನ್ನಲ್ಲಿ

Emily Dickinson ಬರೆದ 'Wild Nights' ಕವನದ ಭಾವಾನುವಾದ

Friday 23 October 2020

ಪುಸ್ತಕ: ವಸುಧೇಂದ್ರ: ತೇಜೋ ತುಂಗಭದ್ರಾ

ಪೀಠಿಕೆ:

ತುಂಬ ದಿನಗಳಾದ ಮೇಲೆ ಕನ್ನಡದಲ್ಲಿ ಪೂರ್ಣಪ್ರಮಾಣದ ಕಾದಂಬರಿಯನ್ನು ಓದಿದೆ. ಎಸ್ ಎಲ್ ಭೈರಪ್ಪನವರ `ಉತ್ತರಾಯಣ`ದ ನಂತರ ಓದಿದ ಕಾದಂಬರಿ ಇದು. ಇತ್ತೀಚಿಗೆ ನಾನು ಕನ್ನಡದಲ್ಲಿ ಹೆಚ್ಚಾಗಿ ಓದುವ ಲೇಖಕ ಜೋಗಿ. ಅವರದು ನೀಳ್ಗತೆಗಳು ಅಥವಾ ಕಿರುಕಾದಂಬರಿಗಳು.

ಇ-ಬುಕ್ಕುಗಳಲ್ಲಿ ಈಗ ಕನ್ನಡ ಪುಸ್ತಕಗಳನ್ನು ಓದಬಹುದಾದರೂ, ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಪೆನ್ನು ಹಿಡಿದುಕೊಂಡು, ಗೆರೆ ಎಳೆಯುತ್ತ ಓದುವ ಮಜವೇ ಬೇರೆ (ಅದು ಈಗಿನ ತಲೆಮಾರಿಗೆ ವಿಚಿತ್ರ ಅನ್ನಿಸಿದರೂ ಅಚ್ಚರಿಯಿಲ್ಲ). 

`ವಿವಿಡ್ಲಿಪಿ`ಯ ಸತ್ಯಪ್ರಮೋದವರು ಈಗ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ, ಅಷ್ಟೇ ಅಲ್ಲ, ಅಂಚೆಯ ಮೂಲಕ ಕಳಿಸುತ್ತಾರೆ ಕೂಡ. `ವಸುಧೇಂದ್ರ` ಅವರ ಇತ್ತೀಚಿನ `ತೇಜೋ ತುಂಗಭದ್ರಾ`(ತೇತುಂ) ಕಾದಂಬರಿಯನ್ನು ಅಂಚೆಯಲ್ಲಿ ನನಗೆ ತಲುಪಿಸಿದರು.

೪೫೦ ಪುಟಗಳ ಕಾದಂಬರಿಯದು. ಇಂಗ್ಲಿಷಿನಲ್ಲಿ ಬರುವ ಕಾದಂಬರಿಗಳಿಗೆ ಹೋಲಿಸಿದರೆ, ಅಂಥ ದೊಡ್ಡ ಕಾದಂಬರಿ ಏನಲ್ಲ. ಆದರೆ ಕನ್ನಡದ ಮಟ್ಟಿಗೆ ಇದು ದೊಡ್ಡ ಕಾದಂಬರಿಯೇ. ಇತ್ತೀಚಿಗಂತೂ ಇಂಥ ದೊಡ್ಡ ಕಾದಂಬರಿಗಳನ್ನು ಕನ್ನಡದಲ್ಲಿ ಬರೆಯುವವರು ಕಡಿಮೆಯೇ ಎಂದು ನನ್ನ ಅನಿಸಿಕೆ.

ಕನ್ನಡಿಗರು ಕನ್ನಡದಲ್ಲಿ ಓದುವುದು ಕಡಿಮೆ, ಅದರಲ್ಲೂ ಕನ್ನಡ ಪುಸ್ತಕಗಳನ್ನು ಕಾದಂಬರಿಗಳನ್ನು ಕೊಂಡುಕೊಂಡು ಓದುವುದು ಇನ್ನೂ ಕಡಿಮೆಯೇ. ಇಂಗ್ಲೆಂಡಿನಂತಹ ಚಿಕ್ಕ ದೇಶದಲ್ಲೇ ಪ್ರಸಿದ್ಧ ಲೇಖಕರ ಲಕ್ಷಾಂತರ ಪ್ರತಿಗಳು ಖರ್ಚಾಗುತ್ತವೆ. ಕನ್ನಡದಲ್ಲಿ ಪ್ರಸಿದ್ಧ ಲೇಖಕರ ಕಾದಂಬರಿಗಳು ಸಾವಿರಗಳಲ್ಲಿ ಮಾರಾಟವಾದರೂ ಇಂಗ್ಲಿಷ್ ಮಾರುಕಟ್ಟಗೆ ಹೋಲಿಸಿದರೆ ಎಲ್ಲಿ ಸಮ? ಅದಕ್ಕೆಂದೇ ಬರವಣಿಗೆ ಎನ್ನುವುದು ಕನ್ನಡದಲ್ಲಿ ವೃತ್ತಿ ಆಗಲಾರದು.  ಇಂಥಹ ಸಂದರ್ಭದಲ್ಲಿ ವಸುಧೇಂದ್ರ ಅವರು ತಮ್ಮ ಸ್ವಂತ ವೃತ್ತಿಯನ್ನು ತೊರೆದು, ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದು, ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು, ಇ-ಪುಸ್ತಕಗಳಲ್ಲಿ ಲಭ್ಯವಾಗುವಂತೆ ಮಾಡಿಕೊಳ್ಳುವುದು, ಚೆನ್ನಾಗಿ ಬರೆಯುತ್ತಿರುವ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವುದು – ನನಗೆ ಆನಂದ ಮತ್ತು ಆಶ್ಚರ್ಯಗಳನ್ನು ಉಂಟುಮಾಡುತ್ತದೆ.

ಈಗಾಗಲೇ ಸಾಕಷ್ಟು ಪ್ರಬಂಧಗಳನ್ನು ಕಥೆಗಳನ್ನು ಚಿಕ್ಕ ಕಾದಂಬರಿಗಳನ್ನು ಬರೆದು, ಸಾಕಷ್ಟು ಪುಸ್ತಕಗಳ ಪ್ರಕಾಶಕರಾಗಿ, ಕನ್ನಡ ಸಾಹಿತ್ಯದಲ್ಲಿ ವಸುಧೇಂದ್ರ ಅವರದು ಈಗಾಗಲೇ ದೊಡ್ಡ ಹೆಸರು. ಅನನ್ಯ ರೀತಿಯ ಕಥೆಗಳ `ಮೋಹನಸ್ವಾಮಿ`ಯನ್ನು ಬರೆದು ಕನ್ನಡ ಸಾಹಿತ್ಯದಲ್ಲಿ ಹೊಸ ಬೆರಗನ್ನು ಮೂಡಿಸಿದವರು. ಅವರ ಪ್ರತಿ ಪುಸ್ತಕವನ್ನು ನಾನು ಕಾತರದಿಂದ ಆಸಕ್ತಿಯಿಂದ ಕಾಯುತ್ತಿರುತ್ತೇನೆ.

ತೇತುಂ ಕಾದಂಬರಿಯ ಪರಿಚಯ:

ಈ ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳನ್ನು ವಿಚಾರಗಳನ್ನು ಬರೆಯುವ ಮುನ್ನ ಈ ಕಾದಂಬರಿಯನ್ನು ಇನ್ನೂ ಓದದವರಿಗೆ ಒಂದು ಚಿಕ್ಕ ಪರಿಚಯ ಪರಿಚಯ ಮಾಡಿಕೊಳ್ಳಬೇಕಷ್ಟೇ. ನೀವು ಕಾದಂಬರಿಯನ್ನು ಓದಿದವರಾಗಿದ್ದರೆ ಈ ವಿಭಾಗವನ್ನು ಎಗರಿಸಿ ಮುಂದುವರಿಸಬಹುದು.

ಈ ಕಾದಂಬರಿಯ ಕಾಲಾವಧಿ ೧೪೯೨ರಿಂದ ೧೫೧೮. ಕಥೆ ನಡೆಯುವ ಸ್ಥಳಗಳು ಪೂರ್ಚುಗಲ್ಲಿನ ಲಿಸ್ಬನ್ ನಗರ, ವಿಜಯನಗರದ ತೆಂಬಕಪುರ ಮತ್ತು ಗೋವಾ.

ನಾವು ಶಾಲೆಯಲ್ಲಿ ಓದಿದ ಇತಿಹಾಸದ ಪುಟಗಳ ಪೋರ್ಚುಗಲ್ಲಿನ ನಾವಿಕ ಅಲ್ಬುಕರ್ಕ್, ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯ ಮತ್ತು ಬಿಜಾಪುರದ ಸುಲ್ತಾನ ಆದಿಲ್ ಶಾ ಈ ಕಾದಂಬರಿಯ ಐತಿಹಾಸಿಕ ಪಾತ್ರಗಳು. ಆದರೆ ಇವರಾರೂ ಈ ಕಾದಂಬರಿಯ ನಾಯಕರಲ್ಲ, ಪ್ರಮುಖ ಪಾತ್ರಗಳೂ ಅಲ್ಲ,

ಅತ್ತ ಯುರೋಪಿನಲ್ಲಿ ಪೋರ್ಚುಗಲ್ ದೇಶದ ಲಿಸ್ಬನ್ ಎನ್ನುವ ನಗರದಲ್ಲಿ ಗೇಬ್ರಿಯಲ್ ಎಂಬ ಕ್ರಿಶ್ಚಿಯನ್ ಹುಡುಗನಿಗೆ ಬೆಲ್ಲಾ ಎಂಬ ಯಹೂದಿ ಹುಡುಗಿಯ ಮೇಲೆ ಪ್ರೇಮ ಅಂಕುರಿಸುತ್ತದೆ. ಬೆಲ್ಲಾಳನ್ನು ಮದುವೆಯಾಗಬೇಕಾದರೆ ಸಾಕಷ್ಟು ಹಣ ಮಾಡಬೇಕು ಎನ್ನುವ ಆಸೆಯಿಂದ ಗೇಬ್ರಿಯಲ್ ಅಲ್ಬುಕರ್ಕನ ನಾವೆಯನ್ನು ಏರಿ ಭಾರತಕ್ಕೆ ಹೊರಟು ನಿಲ್ಲುತ್ತಾನೆ.

ಇತ್ತ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ತೆಂಬಿಕಪುರ ಎನ್ನುವ ಪಟ್ಟಣದಲ್ಲಿ ಹಂಪಮ್ಮ ಎಂಬ ಚಲುವೆಯ ಮೇಲೆ ಹೊಯ್ಸಳದ ಕಡೆಯಿಂದ ಬಂದ ಕೇಶವನೆಂಬ ಶಿಲ್ಪಿಯ ಕಣ್ಣು ಬೀಳುತ್ತದೆ.

ಎತ್ತಣ ಪೋರ್ಚುಗಲ್ ಎತ್ತಣ ತೆಂಬಕಪುರ, ಎತ್ತಣ ಗೇಬ್ರಿಯಲ್ ಎತ್ತಣ ಹಂಪಮ್ಮ, ಎತ್ತಣ ತೇಜೋ ನದಿ, ಎತ್ತಣ ತುಂಗೆ ಭದ್ರಾ ನದಿ! ಎತ್ತಣದ್ದೆತ್ತ ಸಂಬಂಧವಯ್ಯ!! ಈ ಸಂಬಂಧಗಳೇ ಈ ಕಾದಂಬರಿಯ ವಸ್ತು.

ತೇಜೋನದಿಯಿಂದ ತುಂಗಭದ್ರೆಯವರೆಗೆ:

ಇದು ರಾಜಕೀಯ ಕಾದಂಬರಿಯಲ್ಲ, ಹಾಗೆಂದು ಇದರಲ್ಲಿ ರಾಜಕಾರಣವಿಲ್ಲ ಎಂದಲ್ಲ. ರಾಜಕೀಯಕ್ಕಿಂತ ಹೆಚ್ಚಾಗಿ ಇದು ಸಾಮಾಜಿಕ ಕಾದಂಬರಿ. ಈ ಕಾದಂಬರಿಯನ್ನು ಬರೆಯುವ ಹಿಂದೆ ವಸುಧೇಂದ್ರ ಅವರು ಮಾಡಿರುವ ಶ್ರಮ, ಓದು, ಟಿಪ್ಪಣೆ ಅಪಾರ. ಹಾಗೆಯೇ ಒಮ್ಮೆ ಕಾದಂಬರಿಯನ್ನು ಬರೆಯಲು ಆರಂಭಿಸಿದ ಮೇಲೆ ಬೆಂಬಿಡದೇ ಸತತವಾಗಿ ಬರೆದು ಮುಗಿಸಿ ನಂತರ ಅದನ್ನು ತಿದ್ದಿ ತೀಡಿ ಓದುಗನ ಕೈಗೆ ಇಡುವವರೆಗೂ ಸಂಯಮ ಮತ್ತು ಶಿಸ್ತು ಬೇಕಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಕಾಣಸಿಗುವ ವೃತ್ತಿಪರ ಕಾದಂಬರಿಕಾರಂತೆ ಕಾಣುತ್ತಾರೆ ವಸುಧೇಂದ್ರ ಅವರು. ಈ ಕಾದಂಬರಿಯಲ್ಲಿ ಜಾಗತಿಕ ಮಟ್ಟದ ಕಾದಂಬರಿಗಳಲ್ಲಿ ಕಾಣಸಿಗುವ ಬಂಧ ಮತ್ತು ಪರಿಪಕ್ಷತೆ ಇದೆ.

ತೇಜೋ ತುಂಗಭದ್ರಾ ಕಾದಂಬರಿಯಲ್ಲಿ ಎರಡು ಬಂಗಾರದ  ಚಿಕ್ಕ ಮೀನುಗಳಿವೆ. ಪೋರ್ತುಗಲ್ ದೇಶದ ಲಿಸ್ಬನ್ ನಗರದಲ್ಲಿ ಹರಿಯುವ ತೇಜೋ ನದಿಯಲ್ಲಿ ಹುಟ್ಟಿ ಬೆಳೆದ ಈ ಎರಡು ಪುಟ್ಟ ಬಂಗಾರದ ಮೀನುಗಳು ಒಂದು ಚಿಕ್ಕ ಗಾಜಿನ ಮೀನಿನ ತೊಟ್ಟಿಯಲ್ಲಿ ಅಟ್ಲಾಂಟಿಕ್ ಮಹಾಸಾಗರ ದಾಟಿ ಅರಬ್ಬೀ ಸಮುದ್ರವನ್ನು ಮುಟ್ಟಿ ಭಾರತದ ತುಂಗಭದ್ರಾ ನದಿಯನ್ನು ತಲುಪುವ ಸಾಧ್ಯತೆಗಳಲ್ಲಿ ಬರುವ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯದ ಮಹಾಪೂರಗಳು ಈ ಕಾದಂಬರಿಯ ಮುಖ್ಯ ಪ್ರತಿಮೆ.

ಗೇಬ್ರಿಯಲ್ಲಿನ ಕತೆ ಹೇಳುತ್ತ ಲಿಸ್ಬನ್ ನಗರದ ಕ್ರಿಶ್ಚಿಯನ್ ಮತ್ತು ಯೆಹೂದಿ ಧರ್ಮ ವೈಷಮ್ಯವನ್ನು, ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ಹಾಗೆಯೇ ಭಾರತದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಸತಿಪದ್ಧತಿಯಂಥ ಸಂಪ್ರದಾಯಗಳ ಬಗೆಗೂ ಹೃದಯ ಹಿಂಡುವಂತೆ ಬರೆಯುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಸಾಮಾಜಿಕ ದೌರ್ಜನ್ಯಗಳ ಬಗ್ಗೆ, ಜನಾಂಗೀಯ ದ್ವೇಷದ ಬಗ್ಗೆ, ಸ್ತ್ರೀ ದೌರ್ಜನ್ಯದ ಬಗ್ಗೆ ಒಬ್ಬ ಸೂಕ್ಷ್ಮಗ್ರಾಹಿ ವೀಕ್ಷಕನಂತೆ ಬರೆಯುತ್ತಾರೆ.

ಸಾಮಾನ್ಯವಾಗಿ ಕಾದಂಬರಿಯ ಮುಖ್ಯ ಜೀವಾಳ ಅದರ ಚಲನೆ, ಕುತೂಹಲ ಮತ್ತು ಸಸ್ಪೆನ್ಸ್. ಸಹೃದಯ ಓದುಗನಿಗೆ ಓದುವಷ್ಟು ಕಾಲ ತಲೆಯ ನಿರಂತರ ಕೆಲಸದೊಡನೆ ಮನರಂಜನೆಯೂ ದೊರಕಿದರೆ ಅಲ್ಲಿಗೆ ಕಾದಂಬರಿ ಗೆದ್ದಂತೆಯೆ. ತೇತುಂ ಇದನ್ನು ಸಾಧಿಸಿದೆ. ಒಂದು ಬ್ಲಾಕ್‌ಬಸ್ಟರ್ ಸಿನೆಮಾಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಈ ಕಾದಂಬರಿಯಲ್ಲಿವೆ. ನೆಟ್ ಫ್ಲೆಕ್ಸ್ ಅಥವಾ ಅಮೇಜಾನ್ ಪ್ರೈಮ್ ನ ವೆಬ್ ಸೀರಿಸ್ ಮಾಡಬಹುದಾದಷ್ಟು ದೊಡ್ಡ ಕತೆಯಿದೆ, ಕತೆಯಲ್ಲಿ ಕುತೂಹಲಕಾರಿ ತಿರುವುಗಳಿವೆ. ಪ್ರತಿ ಅಧ್ಯಾಯದಲ್ಲೂ ಕಿರುಗತೆಗಳಿವೆ, ಆ ಕಿರುಗತೆಗಳು ಮೂಲಕತೆಗೆ ಪೂರಕವಾಗುತ್ತವೆ.

ಇಡೀ ಕಾದಂಬರಿಯ ಉತ್ತರ ಅಮ್ಮದಕಣ್ಣ ಎನ್ನುವ ವಿಚಿತ್ರ ಹೆಸರಿನಲ್ಲಿದೆ. ಈ ಅಮ್ಮದಕಣ್ಣ ಎಂದರೆ ಏನು, ಯಾರು? ಇವನು ಯಾವ ದೇಶದವನು?  ಯಾವ ಭಾಷೆ ಅವನದು? ಯಾವ ಧರ್ಮ ಅವನದು? ಎನ್ನುವ ಪ್ರಶ್ನೆಗಳ ಉತ್ತರದಲ್ಲಿ ಇಡೀ ಕಾದಂಬರಿಯ ಆಶಯ ಅಡಗಿದೆ. ಎಲ್ಲಿಂದ ಬಂದರೇನು, ಯಾವ ಧರ್ಮದಲ್ಲಿ ಹುಟ್ಟಿದರೇನು, ಯಾವ ಧರ್ಮಕೆ ಬದಲಾದರೇನು, ಎಲ್ಲ ಧರ್ಮಗಳೂ ಶೋಷಣೆಯೇ. ಯಾವ ಭಾಷೆಯ ನುಡಿದರೇನು, ಎಷ್ಟು ಭಾಷೆ ಕಲಿತರೇನು, ಹೃದಯದ ಭಾಷೆ ಒಂದೇ.

ಸತಿ ಸಹಗಮನದ ಪ್ರಸ್ತಾಪ ಕಾದಂಬರಿಯಲ್ಲಿ ಎರಡು ಸಲ ಬರುತ್ತದೆ. ಹಿಂದೂ ಧರ್ಮ ಕಂಡ ಅತ್ಯಂತ ಕರಾಳ ಸಂಪ್ರದಾಯ ಇದೇ ಇರಬೇಕು. ಇದನ್ನು ಭಾರತೀಯ ಮತ್ತು ಪಾಶ್ಚಾತ್ಯ ದೃಷ್ಟಿಕೋನದಿಂದ ಲೇಖಕರು ತೋರಿಸುತ್ತಾರೆ. ಯಾವ ಕಡೆಯಿಂದ ನೋಡಿದರೂ ಇದು ಹೀನಾಯ ಸಾಂಪ್ರದಾಯದಂತೇ ಕಾಣುವುದು ಈ ಕಾದಂಬರಿಯ ಆಶಯವಿರಬೇಕು. ಹಾಗೆಯೇ ವೈಷ್ಣವ ಮತ್ತು ಶೈವರ ನಡುವಿನ ತಿಕ್ಕಾಟವೂ ಪ್ರಸ್ತಾಪವಾಗುತ್ತದೆ. ಅದೇ ರೀತಿ ಯಹೂದಿಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದ್ದ ಕ್ರಿಶ್ಚಿಯನ್ನರು ಧರ್ಮದ ಹೆಸರಿನಲ್ಲಿ ಮಾಡಿದ ಹಿಂಸೆ ಮತ್ತು ಅನ್ಯಾಯಗಳನ್ನೂ ತೆರೆದಿಡುತ್ತಾರೆ.

ಲೆಂಕಸೇವೆಯ ಬಗ್ಗೆ ಈ ಕಾದಂಬರಿಯನ್ನು ಓದುವ ಮೊದಲು ನನಗೆ ಗೊತ್ತೇ ಇರಲಿಲ್ಲ, ಬಹುಷಃ ಇದಕ್ಕೆ ಧರ್ಮದ ಹಂಗಿಗಿಂತ ರಾಜಕೀಯದ ಹಂಗು ಜಾಸ್ತಿ ಇರಬೇಕು ಅನಿಸುತ್ತದೆ.

ಈ ಕಾದಂಬರಿಯಲ್ಲಿ ಇತಿಹಾಸದ ಪುಟಗಳಲ್ಲಿ ಅವಿತಿರುವ, ಬಹಳಷ್ಟು ಜನರಿಗೆ ಗೊತ್ತಿಲ್ಲದ ಕೆಲವು ಸೋಜಿಗೆದ ವಿಷಯಗಳು ಸದ್ದಿಲ್ಲದಂತೆ ನುಸುಳಿ ಮುದ ನೀಡುತ್ತವೆ.  ಇವು ಕಾದಂಬರಿಕಾರನ ಅಧ್ಯಯನ ಮತ್ತು ಅದನ್ನು ಕಾದಂಬರಿಯಲ್ಲಿ ಮಾಡಿಸಿದ ಕುಶಲತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಉದಾಹರಣೆಗೆ, ದೋಸೆ ಮಾಡುವ ವಿಧಾನ ವಿಜಯನಗರ ರಾಜ್ಯದ ಅಡುಗೆ ಮನೆಗಳಿಗೆ ಹೇಗೆ ಬಂದಿರಬಹುದು ಎನ್ನುವುದು ಬಂದಾದರೆ, ಮೆಣಸಿನಕಾಯಿ ಹೇಗೆ ಭಾರತಕ್ಕೆ ಹೊರಗಿನಿಂದ ಬಂದು ಮಣಸಿನ ಜಾಗವನ್ನು ಆಕ್ರಮಿಸಲು ಶುರುಮಾಡಿತು ಎನ್ನುವುದು ಇನ್ನೊಂದು. ಅಷ್ಟೇ ಅಲ್ಲ, ಕಾಗದ ಭಾರತಕ್ಕೆ ಹೇಗೆ ಬಂದಿತು, ನಾವಿಕರು ವಿಟಮಿನ್ ಸಿ ಕೊರತೆಯಿಂದ ಹೇಗೆ ಬಳಲುತ್ತಿದ್ದರು ಎನ್ನುವುದರ ಪ್ರಸ್ತಾಪವೂ ಬರುತ್ತದೆ.

ಈ ಕಾದಂಬರಿಯ ಇನ್ನೊಂದು ವಿಶೇಷತೆಂದರೆ ಪುರಂದರದಾಸರೂ ಒಂದು ಪಾತ್ರವಾಗಿ ಬಂದಿರುವುದು. ಕೆಲವೇ ಪುಟಗಳಲ್ಲಿ ಈ ಪಾತ್ರ ಬಂದರೂ ಇದ್ದಕ್ಕಿದ್ದಂತೆ ಕಾದಂಬರಿಗೆ ಹೊಸ ಹೊಳಪನ್ನು ತಂದು ಕೊಡುತ್ತದೆ. ವಸುಧೇಂದ್ರ ಅವರ ಬರವಣಿಯ ಚಮತ್ಕಾರವಿದು.

ಪ್ರತಿ ಅಧ್ಯಾಯವೂ ದೊಡ್ಡದಾಗಿದೆ, ಆದ್ದರಿಂದ ಅಧ್ಯಯಗಳನ್ನು ಕಿರು ಅಧ್ಯಾಯಗಳಾಗಿ ಮಾಡಿ ಸಂಖ್ಯೆಗಳನ್ನೋ, ಇಲ್ಲ ಹೆಸರುಗಳನ್ನು ಕೊಟ್ಟಿದ್ದರೆ ಓದುವವರಿಗೆ ಇನ್ನೂ ಅನುಕೂಲವಾಗುತ್ತಿತ್ತು ಅನಿಸುತ್ತದೆ. ಮೊದಲ ಭಾಗದಲ್ಲಿ ಕತೆ ನಿಧಾನಗತಿಯಲ್ಲಿ ಸಾಗುತ್ತದೆ ಮತ್ತು ವಿವರಗಳು ಹೆಚ್ಚಾಗಿವೆ. ಉತ್ತರಾರ್ಧದಲ್ಲಿ ನಾಗಾಲೋಟದಲ್ಲಿ ಓಡುತ್ತದೆ. ಹೀಗಾಗಿ ಕಾದಂಬರಿಯ ಗತಿ ಒಂದೇ ಸಮನಾಗಿಲ್ಲ.

ಇತಿಹಾಸಕಾರರು, ಎಡಪಂಥೀಯರು ಮತ್ತು ಬಲಪಂಥೀಯರು ಒಪ್ಪದ ಮತ್ತು ಆಕ್ಷೇಪಿಸುವ ವಿವರಗಳು ಕಾದಂಬರಿಯಲ್ಲಿ ಇವೆ. ಅವುಗಳನ್ನು ಆಚೆಯಿಟ್ಟು ಓದುಗನಾಗಿ ಈ ಕಾದಂಬರಿಯನ್ನು ಓದುತ್ತ, ಓದಿದ ಮೇಲೆ ಮೆಲಕು ಹಾಕುತ್ತ ಆಸ್ವಾನಿದ್ದೇನೆ. ಕನ್ನಡಕ್ಕೆ ಇದೊಂದು ಅಪರೂಪದ ಕಾದಂಬರಿ ಎಂದು ನನ್ನ ಅನಿಸಿಕೆ. ಇದು ಇಂಗ್ಲೀಷ್ ಮತ್ತು ಇತರ ಭಾಷೆಗಳಿಗೂ ಅನುವಾದವಾಗಿ ಇನ್ನೂ ಹೆಚ್ಚು ಜನರನ್ನು ತಲುಪಲಿ ಎನ್ನುವುದು ನನ್ನ ಅಭಿಲಾಷೆ.

This article was first published in www.anivaasi.com on 23/10/2020


ಅದೋ ನೋಡಿ ಹೋಗುತಿಹರು

ಅದೋ ನೋಡಿ ಹೋಗುತಿಹರು 
ಹಿಂದುಗಳೂ ಮುಸಲ್ಮಾನರೂ 
ಬಡವರೂ ಶ್ರೀಮಂತರೂ 
ಎಡರೂ ಬಲರೂ 
ಎಲ್ಲ ಒಂದೇ ದಿಕ್ಕಿನಲ್ಲಿ 
ಎಲ್ಲ ಒಂದೇ ಗಮ್ಯದತ್ತ 
ಯಾರ ಒತ್ತಾಯವಿಲ್ಲದೇ 
ಯಾರಪ್ಪಣೆಯ ಕೇಳದೇ 

ಏಯ್, ಸಾಕ್ ಮಾಡಯ್ಯ, ನಿನ್ ಆದರ್ಶದ ಕವಿತೆ 
ಅಂತೆಲ್ಲ ಸುಮ್ಕೆ ಬಯ್ಬೇಡಿ ಸ್ವಾಮಿ 

ನಾ ನಿಮ್ಮಾಣೆ ಸುಳ್ ಹೇಳ್ತಿಲ್ವೆ 
ನೀವೇ ನೋಡಿ ಬಸ್ಸು ರೇಲ್ವೆ

Sunday 4 October 2020

ಕಾರ್ತಿಕ

ಎಲೆಗಳುದರಲದರುವ ಕಾಲ
ಒಂದು ಭೋರ್ಗಾಳಿ ಸಾಕು
ಎಲೆಗಳೆಲ್ಲ ಅದುರಿ ಉದುರಿ
ದಿ  ಕ್ಕಾ   ಪಾ     ಲಾ       ಗಿ
ಬದುಕು
ಚೆ
              ಲ್ಲಾ
      ಪಿ
                           ಲ್ಲಿ
ಕಾರ್ತಿಕನೇ,
ನಿನಗೆ ಕರುಣೆಯೇ ಇಲ್ಲವೇ?

Thursday 2 July 2020

ಕತೆ: ಸಂಭಾಷಣೆ

ಏನೋ ಸೋಂಬೇರಿ! ಇನ್ನು ಮಲಗಿದ್ದೀಯಾ? ನಾನು ಎದ್ದು ಅದೆಷ್ಟು ಹೊತ್ತು ಆಯ್ತು ಗೊತ್ತಾ? ಅರ್ಧ ಗಂಟೆಯಿಂದ ಎಳಿಸ್ತಾ ಇದ್ದೀನಿ. ರಾತ್ರಿಯಲ್ಲಾ ಆದೆಷ್ಟು ಗೊರಕೆ ಹೊಡಿತಿಯ. ರಾತ್ರಿ ಸರಿ ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ. ಏಳ್ತಿಯೊ ಇಲ್ಲ ನಿನ್ನ ಮುಖದ ಮೇಲೆ ನೀರು ಹಾಕಬೇಕೋ?

ಆಯ್ತು ಮಾರಾಯ್ತಿ! ಒಂದೈದು ನಿಮಿಷ ಆರಾಮವಾಗಿ ಮಲಗಲು ಬಿಡಲ್ಲ ನೀನು. ಈ ಬೆಳಗಿನ ಸಿಹಿ ನಿತ್ಯ ಸುಖ ನಿನಗೆ ಹೇಗೆ ಗೊತ್ತಾಗಬೇಕು? ನೀನೋ, ಮಧ್ಯಾಹ್ನದ ಸಾಯಂಕಾಲ ಒಂದು ಒಳ್ಳೆ ನಿದ್ದೆ ಮಾಡ್ತೀಯಾ. ನನಗೆ ಸೋಂಬೇರಿ ಅಂತಿಯೇನೇ? ನೀನು ಸೋಂಬೇರಿ, ನಿಮ್ಮಪ್ಪ ಸೋಂಬೇರಿ, ನಿನ್ನ ತಾತ ಸೋಂಬೇರಿ.

ಏಯ್, ಸಾಕು ಮಾಡು ನಿನ್ನ ವರಾತ. ನಿನ್ನನ್ನು ನೋಡಲ್ವಾ? ಕೈಯಲ್ಲಿ ನ್ಯೂಸ್ಪೇಪರ್ ಹಿಡ್ಕೊಂಡು ಹಾಗೆ ಬಾಯಿ ತಕ್ಕೊಂಡು ಕುರ್ಚಿನಲ್ಲೇ ನಿದ್ದೆ ಹೊಡಿತಾ ಇರ್ತಿಯ? ನಾನು ಎದ್ದು ಆಗಲೇ ಎರಡು ಗಂಟೆ ಆಯಿತು. ಹೊಟ್ಟೆ ಚುರುಚುರು ಅಂತಿದೆ. ಬೇಗ ತಿಂಡಿ ಕೊಡುತ್ತೀಯಾ ಇಲ್ಲ ಇನ್ನು ಹೀಗೆ ಬಿದ್ದುಕೊಂಡಿರ್ತಿಯ?

ಆಯ್ತು ಕಣೆ, ಎದ್ದೆ ಮಾರಾಯ್ತಿ. ಅದೇನು ಒಂದು ವಾರದಿಂದ ಉಪವಾಸವಿರುವ ತರ ಆಡ್ತೀಯ! ನಿನ್ನೆ ರಾತ್ರಿ ಬೇರೆ ಅಷ್ಟೊಂದು ತಿಂದಿದ್ದೀಯಾ! ತಗೋ, ತಿನ್ನು.

ಥ್ಯಾಂಕ್ಯೂ ಡಿಯರ್.

ಅದೇನು ಥ್ಯಾಂಕ್ಯೂನೋ! ಇನ್ನು ಹಾಕಿಲ್ಲ ಎನ್ನುವಷ್ಟರಲ್ಲಿ ಖಾಲಿ ಮಾಡ್ತಿಯಾ? ರುಚಿನಾದ್ರೂ ನೋಡೇ, ಮೂದೇವಿ! ಎಲೆ ಎಲೆ, ಕೋಪ ಮಾಡ್ಕೋಬೇಡವೇ. ಅರ್ಧಕ್ಕೆ ಬಿಟ್ಟು ಏಳಬೇಡ್ವೆ.

ಅದೇನ್ ತಿಂಡಿ ಮಾಡ್ತೀಯೋ? ಸೂಪರ್ ಮಾರ್ಕೆಟ್ ಇಂದ ಎರಡು ಡಬ್ಬಿ ತರ್ತೀಯಾ. ಈ ಡಬ್ಬಿ ಬಿಟ್ಟರೆ ಅದು, ಆ ಡಬ್ಬಿ ಬಿಟ್ಟರೆ ಇದು, ಅದು ಬಿಟ್ಟರೆ ಮನೆಯಲ್ಲಿ ಬೇರೆ ಏನಿದೆ ತಿಂಡಿ ತಿನ್ನಕ್ಕೆ? ಅದೇ ಪಕ್ಕದ ಮನೆ ಷಣ್ಮುಗಂ ನೋಡು, ಒಂದು ದಿನ ಇಡ್ಲಿ ದೋಸೆ, ಇನ್ನೊಂದು ದಿನ ಚಿಕ್ಕನ್, ಮತ್ತೊಂದು ದಿನ ಮಟನ್. ನೀನು ಇದ್ದೀಯ ದಂಡಕ್ಕೆ. ಬರಿ ಅನ್ನ ಸಾರು, ಅನ್ನ ಮೊಸರು. ಸುಮ್ನೆ ನನ್ನ ತಲೆ ತಿನ್ನಬೇಡ. ನಿನಗಂತೂ ಬೇರೆ ಕೆಲಸ ಇಲ್ಲ. ಬಾಯ್ ಬಾಯ್, ಬರ್ತೀನಿ.

ಇಷ್ಟಕ್ಕೆಲ್ಲ ಯಾಕೆ ಅಷ್ಟೊಂದು ಕೋಪ ಮಾಡ್ಕೋತಿಯ? ಇವತ್ತು ಭಾನುವಾರ ಕಣೆ. ಎಲ್ಲಿಗೆ ಹೊರಟೆ?

ನಾನೇನು ಮನೆಬಿಟ್ಟು ಓಡಿ ಹೋಗಲ್ಲ. ಇಲ್ಲೇ ನಮ್ಮ ಕಾಲೋನಿಯಲ್ಲಿ ಫ್ರೆಂಡ್ಸ್ ಎಲ್ಲಾ ಮಾತಾಡಿಸಿಕೊಂಡು ಟೈಂಪಾಸ್ ಮಾಡಿಕೊಂಡು ಬರುತ್ತೇನೆ. ನಿನ್ನ ಜೊತೆ ಏನು ಮಾಡೋಕ್ಕಿದೆ ಈ ಮನೆಯಲ್ಲಿ? ಮಧ್ಯಾಹ್ನ ಊಟಕ್ಕೇನೂ ಕಾಯಬೇಡ. ನಯ್ಯರ್ ಮನೆಯಲ್ಲಿ ಫಿಶ್ ಫ್ರೈ ವಾಸನೆ ಬರ್ತಾ ಇದೆ ಆಗಲೇ.

ಬೇಗ ಬಂದುಬಿಡೆ. ನೀನಿಲ್ದೆ ಸಿಕ್ಕಾಪಟ್ಟೆ ಬೋರಾಗುತ್ತೆ. ಸಿ ಯು ಸೂನ್.

ಸಿ ಯು. ಬಾಯ್.

ಇದು, ಹೆಂಡತಿಯನ್ನು ಕಳೆದುಕೊಂಡ, ಒಬ್ಬ ಮಗಳು ಅಮೆರಿಕಕ್ಕೆ, ಒಬ್ಬ ಮಗ ಇಂಗ್ಲೆಂಡಿಗೆ ಹೋದಮೇಲೆ, 65 ವರ್ಷದ ರಿಟೈರ್ ಆಗಿರುವ ಶಾಮರಾಯರಿಗೂ, ಮತ್ತು ಅವರ 6 ವರ್ಷದ ‘ಪ್ರೀತಿ’ ಎಂಬ ಬೆಕ್ಕಿಗೂ ಬೆಳಗಿನ ಜಾವ ನಡೆಯುವ ಸಂಭಾಷಣೆಯ ತುಣುಕು.

Tuesday 12 May 2020

Music Covers: Aa Chal Ke Tujhe


Singers: Savitha Keshav and Krishna Kulkarni 
Piano and Guitar: Keshav Kulkarni 
Drums: Krishna Kulkarni

Thursday 30 April 2020

ಕತೆ: ಸುರಂಗ

ಚಿತ್ರಗಳು: ಡಾ ಲಕ್ಷ್ಮಿನಾರಾಯಣ ಗೂಡುರು

  

 

ಢಗ್ ಢಗ್ ಢಗ್ ಎಂದು ಲೋಹವನ್ನು ಹೊಡೆದಂತೆ ಸದ್ದಾಯಿತು. ಗುದ್ದಲಿಯನ್ನು ಪಕ್ಕಕ್ಕೆ ಇಟ್ಟು, ಸಲಿಕೆಯಿಂದ ಮಣ್ಣನ್ನು ಸರಿಸಿದ. ನಿಧನಿಧಾನವಾಗಿ ಮಾಸಿದ ಬಣ್ಣದ ಚೌಕಾಕಾರವೊಂದು ಕಾಣಿಸಿಕೊಂಡಿತು. ಮಣ್ಣನ್ನು ಸರಿಸಿದರೆ ಬಾಗಿಲಿನಂತಿತ್ತು. ಇನ್ನೂ ಮಣ್ಣನ್ನು ಸರಿಸಿದರೆ ಅದು ಬಾಗಿಲೇ ಆಗಿತ್ತು, ಅದೂ ದಪ್ಪ ಮಾಸಿದ ಕಬ್ಬಿಣದ ಬಾಗಿಲು. ಆ ಬಾಗಿಲಿಗೊಂದು ಕೊಂಡಿ ಬೇರೆ, ಕೊಂಡಿಗೊಂದು ಬೀಗವೂ. ಬೀಗಕ್ಕೆ ಪಕ್ಕದಲ್ಲೇ ಇದ್ದ ಕಲ್ಲಿನಿಂದ ಒಂದು ಹೊಡೆದ, ಬೀಗ ತೆರೆದುಕೊಳ್ಳಲಿಲ್ಲ. ಸಲಿಕೆಯಿಂದ ಸಲಿಡಿಸಿದ, ಗುದ್ದಲಿಯಿಂದ ಗುದ್ದಿದ, ಎಬ್ಬಿದ, ಏನೆಲ್ಲ ಮಾಡಿದ, ಬೀಗ ಬಿಟ್ಟುಕೊಳ್ಳಲಿಲ್ಲ. ಛಲ ಬಿಡದೇ ಅರ್ಧ ಗಂಟೆ ಹೊಡೆದ, ಹೊಡೆದ, ಬೆವರಿನಿಂದ ಒದ್ದೆ ಆಗುವವರೆಗೂ ಜಜ್ಜಿದ. ಕೊನೆಗೂ ಬೀಗ ಬಿಟ್ಟುಕೊಂಡಿತು. ಬಿರುಬಿಸಿಲಿನಲ್ಲಿ ಬೀಗಕ್ಕೆ ಹೊಡೆದೂ ಹೊಡೆದೂ ತುಂಬ ಸುಸ್ತಾಗಿದ್ದ, ಆದರೂ ಬೀಗ ಒಡೆದ ಹುಮ್ಮಸ್ಸು ಎಲ್ಲ ಆಯಾಸವನ್ನೂ ನೀಗಿಸಿತು.

ಬೀಗವನ್ನು ಬಿಚ್ಚಿ, ಬಾಗಿಲನ್ನು ತೆರೆದ. ಕರ ಕರ ಕರ ಎಂದು ಸದ್ದು ಮಾಡುತ್ತ ಬಾಗಿಲು ತೆರೆದುಕೊಂಡಿತು. ಒಳಗೆ ತಲೆ ಹಾಕಿದ. ಕತ್ತಲು, ಕಗ್ಗತ್ತಲು. ಗಬ್ಬು ವಾಸನೆ, ದುರ್ನಾತ. ಕಿವಿಗೊಟ್ಟ, ಏನೂ ಕೇಳಿಸಲಿಲ್ಲ. ಕೈಯಾಡಿಸಿದ, ಏನೂ ಸಿಗಲಿಲ್ಲ. ಮೊಬೈಲಿನ ಟಾರ್ಚನ್ನು ಆನ್ ಮಾಡಿದ.  ಸುರಂಗದಂತೆ ಏನೋ ಕಾಣಿಸಿದಂತಾಯಿತು, ಆದರೆ ಏನೂ ಕಾಣಲಿಲ್ಲ. ಬಾಗಿಲನ್ನು ಮುಚ್ಚಿ ದೊಡ್ಡ ಟಾರ್ಚುನ್ನು ತರಲು ದೊಡ್ಡ ಹಿತ್ತಲಿನಿಂದ ಮನೆಯ ಹಿಂಬಾಗಿಲಿಗೆ ಹೋದ.

ಹಿತ್ತಲ ಬಾಗಿಲ ಬಳಿಯೇ ನಿಂತು, “ಅಮ್ಮಾ, ಸ್ವಲ್ಪ ಟಾರ್ಚು ಕೊಡ್ತೀಯಾ?” ಎಂದು ಕೂಗಿದ.

“ನನಗೇನು ಗೊತ್ತೋ? ಟಾರ್ಚೇನು ಅಡಿಗೆ ಮನೆಯಲ್ಲಿ ಉಪಯೋಗಿಸುತ್ತೇವೆಯೇ? ನೀನುಂಟು ನಿಮ್ಮಪ್ಪ ಊಂಟು,” ಎಂದು ಅಡಿಗೆ ಮನೆಯಿಂದಲೇ ಅಮ್ಮ ಕೂಗಿದರು.

ಹಿತ್ತಲ-ಚಪ್ಪಲಿಯನ್ನು ಹಿತ್ತಲಲ್ಲೇ ಬಿಟ್ಟು ಮನೆಯ ಒಳಗೆ ಹೋದ. ಒಳಗೆ ಬಂದು ಮಮೂಲು ಜಾಗದಲ್ಲಿ ನೋಡಿದ, ಟಾರ್ಚು ಇರಲಿಲ್ಲ. ಹೆಂಡತಿಗೆ ಕೇಳೋಣವೆಂದರೆ ಅವಳು ಕೆಲಸಕ್ಕೆ ಹೋಗಿಯಾಗಿದೆ. ಮಗಳು ಶಾಲೆಗೆ ಹೋಗಿಯಾಗಿದೆ (ಅವಳು ಆಗಾಗ ಟಾರ್ಚಿನ ಜೊತೆ ಆಡತ್ತಾಳೆ). ತಂಗಿ ಪಡಸಾಲೆಯಲ್ಲಿ ಟಿವಿ ಹಾಕಿಕೊಂಡು, ಕಿವಿಗೆ ಹೆಡ್-ಫೋನ್ ಹಾಕಿಕೊಂಡು, ಸ್ಮಾರ್ಟ್‍ಫೋನಿನಲ್ಲಿ ಏನನ್ನೋ ಕೇಳಿಕೊಂಡು, ತನಗೂ ಈ ಮನೆಗೂ ಯಾವುದೇ ಸಂಬಂಧವೇ ಇಲ್ಲವೇನೋ ಎನ್ನುವಂತೆ ಏನನ್ನೋ ಸ್ಕ್ರೋಲ್ ಮಾಡುತ್ತಿದ್ದಾಳೆ, ಅವಳಿಗೆ ಕೇಳಿ ಯಾವ ಪ್ರಯೋಜನವೂ ಇಲ್ಲ. ಅಜ್ಜ ತನ್ನ ಕೋಣೆಯಲ್ಲಿ ಪುಸ್ತಕ ಓದುತ್ತ ತೂಕಡಿಸುತ್ತ ಕೂತಿರುತ್ತಾನೆ, ಅವನಿಗೇನು ಗೊತ್ತಿರುತ್ತದೆ ಟಾರ್ಚು ಎಲ್ಲಿದೆ ಎಂದು. ಕೇಳಿದರೆ ಅಪ್ಪನಿಗೇ ಕೇಳಬೇಕು. ರಾತ್ರಿ ವಾಕಿಂಗಿಗೆ ಅವರೇ ತಾನೆ ಟಾರ್ಚು ಹಿಡಿದುಕೊಂಡು ಹೋಗುವುದು?

ಅಪ್ಪ ಯಥಾಪ್ರಕಾರ ದೇವರ ಕೋಣೆಯಲ್ಲಿ ಕೂತು ದೇವರ ಪೂಜೆ ಮಾಡುತ್ತಿದ್ದರು. ಅವರ ಪೂಜೆ ಮುಗಿಯುವವರೆಗೂ ಅವರದು ಮೌನವೃತ ಇದ್ದಂತೆಯೇ. ಟಾರ್ಚು ಕೇಳುವಂತೆಯೇ ಇಲ್ಲ. ದೇವರ ಕೋಣೆಯ ಮುಂದೆ ಹಾಗೇ ನಿಂತ. ಪೂಜೆ ಮಾಡುತ್ತಿದ್ದರೂ ಓರೆಗಣ್ಣಿನಲ್ಲಿ ಮಗ ಬಂದಿದ್ದು ಗೊತ್ತಾಗಿ, ಎಂದೂ ತಾನು ದೇವರ ಪೂಜೆ ಮಾಡುವಾಗ ಬರದವ ಇವತ್ತು ಬಂದಿರುವುದನ್ನು ನೋಡಿ ಅಪ್ಪನಿಗೆ ಆಶ್ಚರ್ಯವಾಯಿತು. ದೇವರಿಗೆ ನಮಸ್ಕಾರ ಮಾಡು ಎಂದು ಕಣ್ಣಿಂದಲೇ ಸನ್ನೆ ಮಾಡಿದರು. ನಮಸ್ಕಾರ ಮಾಡಿದ.

 

ಅಪ್ಪನ ಪೂಜೆ ಮುಗಿಯುತ್ತಿರುವುದನ್ನು ಕಾಯುತ್ತಿರುವಾಗ ಹೆಂಡತಿಗೆ ಈ ವಿಚಿತ್ರ ಬಾಗಿಲು ಸಿಕ್ಕಿದ ಬಗ್ಗೆ ಮೆಸೇಜು ಕಳಿಸಿದ. ಕೂಡಲೇ ಹೆಂಡತಿಯ ಮೆಸೇಜು ಬಂತು. ಆ ಬಾಗಿಲನ ಬೀಗದ ಬಗ್ಗೆ, ಒಳಗಿರುವ ಕತ್ತಲಿನ ಬಗ್ಗೆ ಬರೆದು, ಟಾರ್ಚಿಗಾಗಿ ಕಾಯುತ್ತಿರುವುದಾಗಿ ಬರೆದ. ಹೆಂಡತಿ, “ಫೋನಿನಲ್ಲೇ ಟಾರ್ಚು ಇದೆಯಲ್ಲ?” ಎಂದು ಪೆದ್ದ ಮುಖದ ಇಮೋಜಿ ಬರೆದಳು. “ಆ ಟಾರ್ಚು ಯಾವುದಕ್ಕೂ ಸಾಲುವುದಿಲ್ಲ, ನಾನು ನೋಡಿಯಾಯಿತು” ಎಂದು ಬರೆದು ಗೆದ್ದ ಮುಖದ ಇಮೋಜಿಯನ್ನು ಸೇರಿಸಿದ.

“ನಾನು ಏನಾದರೂ ಕಾರಣ ಹೇಳಿ ಮನೆಗೆ ಬಂದು ಬಿಡುತ್ತೇನೆ, ಯಾವ ಕಾರಣಕ್ಕೂ ನಾನು ಬರುವವರೆಗೂ ಒಳಗೆ ಇಳಿಯಬೇಡ,” ಎಂದು ಬರೆದು ಅವಳೂ ಕೋಪದ ಚಿತ್ರದ ಇಮೋಜಿಯನ್ನು ಹಾಕಿದಳು.

ಅಷ್ಟರಲ್ಲಿ ಅಪ್ಪನ ಪೂಜೆ ಮುಗಿಯಿತು, “ಹುಂ, ಹೋಗಿ ನಿನ್ನ ಅಜ್ಜನನ್ನು ಕರೆ, ಪ್ರಾಸಾದ ಕೊಡಬೇಕು,” ಎಂದರು ಅಪ್ಪ.

ಅಜ್ಜನಿಗೆ ಕಿವಿ ಕೇಳುವುದಿಲ್ಲ. ದೇವರ ಕೋಣೆಯಿಂದ ಅಡುಗೆ ಮನೆಯನ್ನು ಹಾಯ್ದು, ಅಲ್ಲಿಂದ ಪಡಸಾಲೆಗೆ ಬಂದು, ಅಲ್ಲಿಂದ ದೊಡ್ಡೂಟದ ಕೋಣೆಯನ್ನು ಬಳಸಿ, ಉಗ್ರಾಣದ ಕೋಣೆ ದಾಟಿ ಅಜ್ಜನ ಕೋಣೆಗೆ ಹೋಗಬೇಕು, ಹೋದ

ಈ ಮನೆಯಲ್ಲಿ ನಡೆಯುವಾಗಲೆಲ್ಲ, ಇಂಥದೊಂದು ದೊಡ್ಡ ಮನೆ ತಮಗೆ ಬೇಕಾ? ಮನೆ ನೋಡಿದರೆ ಮಹಾನ್ ಶ್ರೀಮಂತರು ಅಂದುಕೊಳ್ಳುತ್ತಾರೆ, ಇಡೀ ಪಟ್ಟಣ ಹಾಗೇ ಅಂದುಕೊಂಡಿದೆ ಕೂಡ. ಇಲ್ಲಿ ನೋಡಿದರೆ ತಿಂಗಳು ತಿಂಗಳು ದುಡ್ಡು ಹೊಂದಿಸುವುದೇ ಕಷ್ಟವಾಗುತ್ತಿದೆ. ಹೆಂಡತಿಯೊಬ್ಬಳ ಸಂಪಾದನೆಯಲ್ಲಿ ಇಷ್ಟು ಜನರ ಹೊಟ್ಟೆ ತುಂಬಬೇಕು, ತನಗೂ ಕೆಲಸವಿಲ್ಲ, ಎಂದು ತನ್ನನ್ನೇ ಬಯ್ದುಕೊಂಡ.

ನಾಕಾರು ಕಾಯಿಲೆಗಳಿರುವ ಅಜ್ಜ, ಬಿಪಿ ಡಯಾಬಿಟೀಸಿನ ಜೊತೆ ರೆಟೈರಾದ ಅಪ್ಪ (ಪಿಂಚಣಿ ಇಲ್ಲ), ಕೆಲಸವಿಲ್ಲದೇ ಮನೆಯಲ್ಲೇ ಬಿದ್ದಿರುವ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ತಂಗಿ (ಆಕೆಯ ಪ್ರಿಯತಮ ಕೈಕೊಟ್ಟ ಮೇಲೆ, ಒಳ್ಳೆಯ ಕೆಲಸ ಇರುವ ಯಾವ ಗಂಡಾದರೂ ಮದುವೆಯಾಗುತ್ತೇನೆ ಎಂದು ಅಣ್ಣನ ಹತ್ತಿರ ಹೇಳಿದ್ದಾಳೆ, ಅವನ ಹೊರತಾಗಿ ಅವಳಿಗೆ ಪ್ರಿಯಕರನೊಬ್ಬನಿದ್ದ ಎಂದು ಯಾರಿಗೂ ಗೊತ್ತಿಲ್ಲ), ಹಗಲು ರಾತ್ರಿ ಅಡುಗೆ ಮನೆಯಲ್ಲೇ ಕಾಲ ಕಳೆವ ತಾಯಿ, ಬೆಳಿಗ್ಗೆ ಐದು ಗಂಟೆಗೆ ಎದ್ದು ತಾನಾಯಿತು ಇನ್ನೂ ಯಾರೂ ಏಳುವ ಮೊದಲೇ ಕೆಲಸಕ್ಕೆ ಹೋಗಿ (ಹೋಗುವ ಮೊದಲು ತನ್ನನ್ನು ಏಳಿಸಿ) ರಾತ್ರಿ ಎಂಟು ಗಂಟೆಗೆ ಮನೆಗೆ ಬಂದು, ಮಲಗುವವರೆಗೆ ಮಗಳ ಜೊತೆ ಕಾಲ ಕಳೆಯುವ ಹೆಂಡತಿ, ಮನೆಯಲ್ಲಿ ತನ್ನ ಮತ್ತು ತನ್ನ ಅಮ್ಮನ ಹೊರತಾಗಿ ಇನ್ನಾರ ಜೊತೆಯೂ ಮಾತಾಡದ ತನ್ನ ಎಂಟು ವರ್ಷದ ಮಗಳು (ಅವಳಿಗೆ ಕನ್ನಡದಲ್ಲಿ ಮಾತಾಡುವುದೆಂದರೆ ಮುಜುಗರವಂತೆ). ಇಷ್ಟು ಜನರಿಗೆ ಇಂಥ ದೊಡ್ಡ ಮನೆ. ಅಜ್ಜನ ಅಜ್ಜನ ಅಜ್ಜನೋ ಇನ್ನಾರೋ ಕಟ್ಟಿಸಿದ್ದಂತೆ, ಮಹಾಮನೆಯಂತೆ!

ದೇವರ ಮನೆಯಿಂದ ಅಜ್ಜನ ಕೋಣೆಗೆ ಹೋಗುವಷ್ಟರಲ್ಲಿ ಮನೆಯ ಮೇಲೆ, ಮನೆಯಲ್ಲಿ ಇರುವ ಎಲ್ಲರ ಮೇಲೆ ವಿಪರೀತ ಸಿಟ್ಟು ಬಂದು ಬಿಟ್ಟಿತ್ತು. ಅಜ್ಜನ ಕೋಣೆಗೆ ಹೋಗಿ ಅಜ್ಜನನ್ನು ಕರೆದ. ಅಜ್ಜನ ಜೊತೆ ತಾನೂ ದೇವರಕೋಣೆಗೆ ಬಂದ. ಅಪ್ಪ ಕೊಟ್ಟ ಪ್ರಸಾದ ತೆಗೆದುಕೊಂಡ.

“ಅಪ್ಪಾ, ಟಾರ್ಚು ಎಲ್ಲಿಟ್ಟೀದಿಯಾ?” ಎಂದ.

“ಅಲ್ಲೇ ಮಾಮೂಲಿ ಜಾಗದಲ್ಲಿ ಇಲ್ಲವಾ?” ಎಂದರು.

“ಇಲ್ಲ, ಇದ್ದಿದ್ದರೆ ಕೇಳುತ್ತಿದ್ದೆನಾ?,” ಎಂದ ಖಾರವಾಗಿ. “ಇಂಥಾ ಬೆಳಗಿನ ಬೆಳಕು ಇರುವಾಗ ಟಾರ್ಚು ಏಕೆ?” ಎಂದರು ಅಪ್ಪ ಇನ್ನೂ ಖಾರವಾಗಿ.

“ನಿಮಗದೆಲ್ಲಾ ಯಾಕೆ? ಎಲ್ಲಿಟ್ಟಿದ್ದೀರಾ ಹೇಳಿ, ಅಷ್ಟು ಸಾಕು,” ಎಂದ. ನಿಧಾನವಾಗಿ ಕೋಪ ಮೇಲೇರುತ್ತಿತ್ತು. ಅಪ್ಪನಿಗೆ ಇನ್ನೂ ರೇಗಿತು, “ನಿನಗೆ ಏಕೆ ಬೇಕು ಎಂದು ಹೇಳುವವರೆಗೂ ನಾನು ಕೊಡುವುದಿಲ್ಲ,” ಎಂದು ಧ್ವನಿ ಜೋರು ಮಾಡಿದರು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕಿವಿ ಸರಿಯಾಗಿ ಕೇಳಿಸದ ಅಜ್ಜ ತನಗೂ ಇವರಿಬ್ಬರ ಜಗಳಕ್ಕೂ ಏನೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಆರಾಮವಾಗಿ ಪ್ರಸಾದ ತಿನ್ನುತ್ತಿದ್ದರು.

ಇವರಿಬ್ಬರ ಜೋರು ಜೋರು ಮಾತು ಕೇಳಿ, ಇದು ವಾರಕ್ಕೊಮ್ಮೆಯಾದರೂ ನಡೆಯುವ ಮಾಮೂಲು ಎಂದು ಗೊತ್ತಿದ್ದರೂ, ಅಭ್ಯಾಸಬಲದಂತೆ ಆಡುಗೆಮನೆಯಿಂದ ಅಮ್ಮ ದೇವರಕೋಣೆಗೆ ಕೈಯಲ್ಲಿ ಸೌಟು ಹಿಡಿದುಕೊಂಡೇ ಬಂದರು.

“ಪಡಸಾಲೆಯ ಜಗಳ ಈಗ ದೇವರ ಮನೆಗೂ ಬಂತಾ?” ಎಂದು ಇಬ್ಬರಿಗೂ ಬಯ್ದರು. “ಇಲ್ಲಮ್ಮ, ಟಾರ್ಚು ಕೇಳಿದರೆ ಅಪ್ಪ ನೂರೆಂಟು ಮಾತಾಡುತ್ತಾರೆ,” ಎಂದು ಅಪ್ಪನ ಬಗ್ಗೆ ಚಾಡಿ ಬಿಟ್ಟ. “ಟಾರ್ಚು ಏಕೆ ಬೇಕು ಎನ್ನುವ ಸಣ್ಣ ಪ್ರಶ್ನೆ ಕೇಳಲೂ ನನಗೆ ಹಕ್ಕಿಲ್ಲವೇ?” ಎಂದು ಅಪ್ಪ ಅವಲತ್ತುಕೊಂಡರು.

“ಆವಾಗಿನಿಂದ ಟಾರ್ಚು ಟಾರ್ಚು ಎನ್ನುತ್ತಿದ್ದೀಯ! ಯಾಕೆ ಬೇಕು ಎಂದು ಹೇಳಿದರೆ ನಿನ್ನ ಗಂಟೇನು ಹೋಗುವುದಿಲ್ಲವಲ್ಲ!” ಎಂದು ಅಮ್ಮ ಅಪ್ಪನ ಪಕ್ಷ ಸೇರಿದರು. ಇವರೆಲ್ಲರ ಮಾತು ಹೆಡ್-ಫೋನ್ ಹಾಕಿಕೊಂಡಿದ್ದರೂ ಅದರೊಳಗಿಂದ ತೂರಿ ತಂಗಿಗೂ ಕೇಳಿಸಿತು. ಅವಳೂ ದೇವರಕೋಣೆಗೆ ಬಂದಳು.

ವಿಧಿಯಿಲ್ಲದೇ ಹಿತ್ತಲಲ್ಲಿ ನೆಲಕ್ಕೆ ಅಂಟಿಕೊಂಡ ಬಾಗಿಲಿನ ಬಗ್ಗೆ ಹೇಳಿದ, ಅದಕ್ಕಿದ್ದ ಬೀಗದ ಬಗ್ಗೆ ಹೇಳಿದ. ಅದನು ತೆರೆದರೆ ಸುರಂಗದ ತರಹ ಇರುವುದಾಗಿ ಹೇಳಿದ. ಆದರೆ ಗವ್ವೆನ್ನುವ ಕತ್ತಲಿರುವುದರಿಂದ ಏನೂ ಕಾಣುತ್ತಿಲ್ಲವೆಂದೂ, ಅದಕ್ಕೇ ಟಾರ್ಚು ಬೇಕೆಂದೂ ಹೇಳಿದ. ಇದ್ದಕ್ಕಿದ್ದಂತೆ ಮನೆಯ ವಾತಾವರಣವೇ ಬದಲಾಯಿತು. ಎಲ್ಲರ ಮುಖದಲ್ಲೂ ಕುತೂಹಲ ಮತ್ತು ಆಶ್ಚರ್ಯ.

ಅಜ್ಜ ಪಿಳಿಪಿಳಿ ಕಣ್ಣು ಬಿಟ್ಟು, “ಏನಾಯಿತು, ಯಾಕೆ ಎಲ್ಲರೂ ಒಟ್ಟಿಗೆ ಸೇರಿದ್ದೀರಿ?” ಎಂದರು.

ಅಜ್ಜನ ಕಿವಿಯಲ್ಲಿ ಜೋರಾಗಿ ಸುರಂಗಮಾರ್ಗದ ಬಗ್ಗೆ ಹೇಳಿದ. ಅಜ್ಜ, “ಕೊನೆಗೂ ನಿನಗೆ ಸಿಕ್ಕಿಬಿಟ್ಟಿತಾ! ನನ್ನ ತಾತ ಹೇಳಿದಂತೆ ನನ್ನ ಮೊಮ್ಮಗನಿಗೆ ಇದು ಸಿಕ್ಕೇಬಿಟ್ಟಿತು” ಎಂದು ಬಾಂಬು ಸಿಡಿಸಿದರು. “ಅಂದರೆ, ಏನು ಹಾಗೆಂದರೆ?” ಎಂದು ಎಲ್ಲರೂ ಆಶ್ಚರ್ಯ ಚಕಿತರಾದರು.”ಅದು ಹಾಗೆ ಅಂದರೆ ಹಾಗೇ.”

“ಮತ್ತೆ ಒಂದೇ ಒಂದು ದಿನವೂ ಅದರ ಬಗ್ಗೆ ಹೇಳಿದ್ದನ್ನು ಕೇಳಿಲ್ಲ,” ಎಂದು ಅಪ್ಪ ಕೇಳಿದರು.”ಆಯ್ತಪ್ಪಾ, ಇವತ್ತು ಹೇಳ್ತೀನಿ ಕೇಳಿ. ಅದಕ್ಕಿಂತ ಮೊದಲು ಎಲ್ಲರೂ ಪಡಸಾಲೆಗೆ ಬನ್ನಿ. ಅಲ್ಲಿ ಕೂತು ಕಾಫಿ ಕುಡಿಯುತ್ತ ಆ ಸುರಂಗಮಾರ್ಗದ ಬಗ್ಗೆ ಹೇಳುತ್ತೇನೆ,” ಎಂದರು.

ಎಲ್ಲರೂ ಪಡಸಾಲೆಗೆ ಬಂದು ಕೂತರು. ಆದರೆ ಇವನಿಗೆ ಅಜ್ಜನ ಉಪದ್ಯಾಪಿ ಕತೆಗಳನ್ನು ಕೇಳುವ ತಾಳ್ಮೆ ಇರಲಿಲ್ಲ. ಅದಷ್ಟು ಬೇಗ ಆ ಸುರಂಗದಲ್ಲಿ ಏನಿದೆ ನೋಡಬೇಕು ಎನಿಸಿತ್ತು.

ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತು. ಇವನೇ ಎದ್ದು ಹೋಗಿ ಬಾಗಿಲು ತೆರೆದ. ನೋಡಿದರೆ ಸರಿ ಸುಮಾರು ಇಪ್ಪತ್ತರ ಆಸುಪಾಸಿನ ಗಂಡಸು, ತನಗಿಂತ ಒಂದು ಹತ್ತು ವರ್ಷ ಚಿಕ್ಕವನಿರಬಹುದು.

“ಯಾರು ಬೇಕಾಗಿತ್ತು?” ಎಂದ. “ನೀವೇ ಬೇಕಾಗಿತ್ತು,” ಎಂದನವ.

“ತಾವು ಯಾರು ಗೊತ್ತಾಗಲಿಲ್ಲವಲ್ಲ?” ಎಂದ. “ನಾನು ನಿಮ್ಮ ಚಿಕ್ಕಪ್ಪನ ಮಗ!” ಎಂದನವ.

ಒಬ್ಬ ಚಿಕ್ಕಪ್ಪ ಇರುವುದೇ ಮರೆತು ಹೋಗಿತ್ತು. ಚಿಕ್ಕಪ್ಪ ಓದಿನಲ್ಲಿ ಅಷ್ಟಕ್ಕಷ್ಟೇ. ಯಾವಾಗಲೂ ಕತೆ, ಕಾದಂಬರಿ, ಸಿನೆಮಾ ಮತ್ತು ನಾಟಕ. ಹೆಸರಿಗೆ ಬಿಕಾಂ ಸೇರಿದ್ದರೂ ಸಮಯವೆಲ್ಲ ನಾಟಕ ಮಾಡುವುದರಲ್ಲೋ ಮಾಡಿಸುವುದರಲ್ಲೋ ಹೋಗುತ್ತಿತ್ತು. ಕೆಲವು ಸಲ ಕಂಪನಿ ನಾಟಕದವರ ಜೊತೆ ತಿಂಗಳುಗಟ್ಟಲೇ ಹೋಗಿ ಮತ್ತೆ ಯಾವಾಗಲೋ ಮನೆಗೆ ಬರುತ್ತಿದ್ದ. ಒಂದು ಸಲ ಬರುವಾಗ ಕಂಪನಿ ನಾಟಕದ ಹೆಣ್ಣನ್ನು ಮನೆಗೆ ಕರೆತಂದಿದ್ದ. ತನಗಿನ್ನೂ ಆಗ ಎಂಟೋ ಒಂಬತ್ತೋ ವಯಸ್ಸು. ಅವತ್ತು ಆ ಹೆಂಗಸಿನ ಮುಂದೆಯೇ ಅಪ್ಪ ಅಮ್ಮ ಸೇರಿ ಚಿಕ್ಕಪ್ಪನಿಗೆ ಎಗ್ಗಾಮುಗ್ಗಾ ಉಗಿದರು. ಅಜ್ಜ ಸಾಕಷ್ಟು ಹೆಣಗಾಡಿದ ಅಪ್ಪನನ್ನು ಸಮಾಧಾನ ಮಾಡಲು. ಅಪ್ಪನಿಗಿಂತ ಅಮ್ಮ ಕೆಂಡಾಮಂಡಲ ಸಿಟ್ಟಾಗಿದ್ದರು. ಚಿಕ್ಕಪ್ಪ ಆ ಹೆಂಗಸನ್ನು ಕರೆದುಕೊಂಡು ಹೊರಟೇಬಿಟ್ಟ. ಹೋಗುವಾಗ, “ಇನ್ನೆಂದೂ ಈ ಮನೆಗೆ ಕಾಲಿಡುವುದಿಲ್ಲ,” ಎಂದು ಶಪಥ ಹಾಕಿ ಹೋದ.

ಹತ್ತಿರದ ಊರಿನಲ್ಲೇ ಬಿಡಾರ ಬಿಟ್ಟಿದ್ದರಿಂದ ಆಗಾಗ ಚಿಕ್ಕಪ್ಪನ ಸುದ್ದಿ ಮನೆಯನ್ನು ತಲುಪುತ್ತಿತ್ತು. ಚಿಕ್ಕಪ್ಪ ನಾಟಕ ಕಂಪನಿಯ ಹೆಂಗಸನ್ನು ಮದುವೆಯಾಗಿದ್ದಾನೆ ಎಂದು ಕೆಲವರು, ಮದುವೆಯಾಗಿಲ್ಲದಿದ್ದರೂ ಮದುವೆಯಾದವರಂತೆ ಒಂದೇ ಮನೆಯಲ್ಲಿ ಇದ್ದಾರೆ ಎಂದು ಕೆಲವರೂ ಮಾತಾಡಿಕೊಳ್ಳುತ್ತಿದ್ದರು. ಅದಾಗಿ ಸ್ವಲ್ಪ ತಿಂಗಳುಗಳ ನಂತರ ಚಿಕ್ಕಪ್ಪ ಊರು ಬಿಟ್ಟು ಇನ್ನೆಲ್ಲೋ ಹೋದ ಮೇಲೆ ಚಿಕ್ಕಪ್ಪನ ಬಗ್ಗೆ ಮಾತು ಕಡಿಮೆಯಾಯಿತು.

ಅದಾದ ಮೇಲೆ ಚಿಕ್ಕಪ್ಪನನ್ನು ಮನೆಯಲ್ಲಿ ಹೆಚ್ಚು ಕಡೀಮೆ ಎಲ್ಲರೂ ಮರೆತೇ ಬಿಟ್ಟಂತಿತ್ತು. ಅಷ್ಟೆಲ್ಲ ವರ್ಷಗಳಾದ ಮೇಲೆ `ಚಿಕ್ಕಪ್ಪ` ಎನ್ನುವ ಹೆಸರು ಮತ್ತೆ ಮೂಡಿದ್ದು ಇವತ್ತೇ.  ಚಿಕ್ಕಪ್ಪನ ಮುಖವೇ ಮರೆತುಹೋಗಿತ್ತು, ಇನ್ನು ಚಿಕ್ಕಪ್ಪನ ಮಗನನ್ನ್ನು ಗುರುತಿಸುವುದಾದರೂ ಹೇಗೆ?

ಚಿಕ್ಕಪ್ಪನ ಮಗ ಇದ್ದರೂ ಇರಬಹುದು ಎಂದುಕೊಂಡು ಮನೆಯೊಳಗೆ ಕರೆದ. ಒಳ ಬಂದವನೇ ಎಲ್ಲರೂ ತನಗೆ ಚಿರಪರಿಚಿತರು ಎನ್ನುವಂತೆ ಅಜ್ಜನ ಕಾಲಿಗೆ ಬಿದ್ದ, ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿದ, ತಂಗಿಗೆ ತಲೆ ಸವರಿದ, ತನ್ನನ್ನು ಕರಡಿಯಂತೆ ತಬ್ಬಿಕೊಂಡ. ಅಪ್ಪ ಅಮ್ಮ ಗಂಟು ಮುಖ ಹಾಕಿ ಕೂತರು. ಅಜ್ಜನೇ ಚಿಕ್ಕಪ್ಪನ ಬಗ್ಗೆ ವಿಚಾರಿಸಿದ. ಚಿಕ್ಕಪ್ಪ ಊರು ಬಿಟ್ಟು ನಾಕಾರು ವರ್ಷ ಉತ್ತರ ಭಾರತ, ಬಿಹಾರ ಅ೦ತೆಲ್ಲ ಅಲೆದು ಕೊನೆಗೆ ಮುಂಬೈಗೆ ಬಂದನಂತೆ, ಅಲ್ಲಿ ಸಿನೆಮಾಗೆ, ಟಿವಿಗೆ, ಡೈಲಾಗ್ ಬರೆಯಲು, ಚಿತ್ರಕತೆಗೆ ಸಹಾಯ ಮಾಡುತ್ತ ಇದ್ದನಂತೆ, ತಾಯಿ ಮುಂಬೈಗೆ ಬಂದ ಒಂದೆರೆಡು ವರ್ಷದಲ್ಲಿ ಅಪ್ಪನನ್ನು ಬಿಟ್ಟು ಅಲ್ಲಿಯ ನಿರ್ಮಪಕನೊಬ್ಬನ ಹಿಂದೆ ಹೋದಳಂತೆ. ಇವನು ಅಪ್ಪನ ಜೊತೆ ಮುಂಬೈನಲ್ಲೇ ಬೆಳೆದನಂತೆ. ಮುಂದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಪುಣೆಯ ಫಿಲಂ ಕಾಲೇಜಿನಲ್ಲ ತರಬೇತಿ ಪಡದಿದ್ದಾನಂತೆ. ಚಿಕ್ಕಪ್ಪ ಹೆಂಡತಿ ಬಿಟ್ಟ ಮೇಲೆ ಒಬ್ಬ ಸಹನಿರ್ದೇಶಕಿಯೊಂದಿಗೆ ಲಿವ್-ಇನ್ ಮಾಡುತ್ತಿದ್ದನಂತೆ. ಸಿಕ್ಕಾಪಟ್ಟೆ ಸೇದುತ್ತಿದ್ದುದರಿಂದ ಶ್ವಾಸಕೋಶದ ಕ್ಯಾನ್ಸರಾಗಿ ಹೋದರೆಂದು ಹೇಳಿದ.

ಅಪ್ಪ ಗಂಭೀರವಾಗಿ, “ಈಗೇನು ಬಂದಿದ್ದು?” ಎನ್ನುವಂತೆ ಅವನನ್ನು ನೋಡುತ್ತಲೇ ಇದ್ದರು. ಇರುವ ಇಂಥ ದೊಡ್ಡ ಮನೆಯ ಆಸ್ತಿಯ ಮೇಲೆ ಕಣ್ಣಿಟ್ಟೇ ಬಂದಿದ್ದಾನೆ ಎನ್ನುವುದು ಅಪ್ಪನಿಗೆ ಖಾತ್ರಿಯಿತ್ತು.

ಅದನ್ನು ಅರಿತವನಂತೆ ಚಿಕ್ಕಪ್ಪನ ಮಗ, “ಇಷ್ಟು ವರುಷ ಬಿಟ್ಟು ಈಗ ಬಂದಿರುವ ಕಾರಣವೇನೆಂದರೆ, ಈ ಮನೆ, ಅರಮನೆಯಂಥ ದೊಡ್ಡದಾದ ಪುರಾತನ ಮನೆಯ ಬಗ್ಗೆ ಅಪ್ಪ ಆಗಾಗ ಹೇಳುತ್ತಿದ್ದರು. ಆವಾಗಿನಿಂದಲೂ ನನಗೆ ಈ ಮನೆಯದೇ ಕನಸು. ಈ ಮನೆಯನ್ನು ನೋಡಬೇಕು ಎನ್ನುವ ಏಕೈಕ ಉದ್ದೇಶದಿಂದ ಬಂದಿದ್ದೇನೆ,” ಎಂದು ಎದ್ದವನೇ, “ನನಗೆ ಮನೆಯನ್ನು ಪೂರ್ತಿ ನೋಡಬೇಕು,” ಎಂದ.

ತಂಗಿ ಎದ್ದು, “ನಾನು ತೋರಿಸುತ್ತೇನೆ,” ಎಂದು ಉತ್ಸಾಹದಿಂದ ಅವನನ್ನು ಕರೆದುಕೊಂಡು ಹೋದಳು.

ಅಪ್ಪ ಅವನು ಅತ್ತ ಹೋಗುತ್ತಿದ್ದಂತೇ, “ಇನ್ನು ಇದೊಂದು ಬಾಕಿ ಇತ್ತು. ‘ಈ ಮನೆಯನ್ನು ಮಾರಿ, ನನ್ನ ಅಪ್ಪನ ಪಾಲಿನ ದುಡ್ಡನ್ನು ನನಗೆ ಕೊಡಿ’ ಎಂದು ಕೇಳಲು ಬಂದಿದ್ದಾನೆ್ ಅನಿಸುತ್ತೆ” ಎಂದ. “ಅನಿಸುವುದೇನು, ಅದಕ್ಕೇ ಬಂದಿದ್ದಾನೆ,” ಎಂದು ಪೇಚಾಡಿದಳು ಅಮ್ಮ.

ಮನೆಯನ್ನೆಲ್ಲ ನೋಡಿಕೊಂಡು ಬಂದ ಮೇಲೆ, “ನಾನು ಒಂದು ಸಿನೆಮಾಕ್ಕೆ ಚಿತ್ರಕತೆಯನ್ನು ತಯಾರು ಮಾಡಿಯಾಗಿದೆ, ಫೈನನ್ಸಿಯರ್ ಕೂಡ ಒಪ್ಪಿದ್ದಾರೆ. ಆ ಸಿನೆಮಾಕ್ಕೆ ಒಂದು ಹಳೆಯ ಕಾಲದ ದೊಡ್ಡ ಮನೆಯೇ ಮುಖ್ಯಪಾತ್ರ. ನನ್ನ ಸಿನಮಾಕ್ಕೆ ಹೇಳಿ ಮಾಡಿಸಿದಂತಿದೆ ಈ ಮನೆ. ಎಲ್ಲ ಸೇರಿ ಎರಡು ಮೂರು ತಿಂಗಳ ಚಿತ್ರೀಕರಣ, ಸಾಕಷ್ಟು ದುಡ್ಡನ್ನು ನಿಮಗೆ ಬಾಡಿಗೆಯಾಗಿ ಕೊಡುತ್ತೇವೆ,” ಎಂದ.

ಅಪ್ಪನಿಗೆ ಸ್ವಲ್ಪ ಸಮಾಧಾನವಾಯಿತು, “ನೋಡೋಣ,” ಎಂದರು.ಅಮ್ಮನಿಗೂ ಸ್ವಲ್ಪ ನೆಮ್ಮದಿ ಅನಿಸಿ ಕಾಫಿಯನ್ನು ತಂದುಕೊಟ್ಟರು.

ಇಷ್ಟೆಲ್ಲ ಮಾತು ಮುಗಿದ ಮೇಲೆ ಅಜ್ಜ, “ಸರಿಯಾದ ಸಮಯಕ್ಕೇ ಬಂದಿದ್ದೀಯ. ಅದರಲ್ಲೂ ನೀನು ಸಿನೆಮಾ ನಾಟಕ ಎಲ್ಲ ಕಲಿತಿದ್ದೀಯ ಎಂದರೆ ನಿನಗೆ ಕತೆ ಕೇಳಲು ತುಂಬಾ ಆಸಕ್ತಿ ಇರಬೇಕಲ್ಲವೇ? ಅಷ್ಟೇ ಅಲ್ಲ, ನೀನೂ ಈ ಮನೆಯ ಮಗನೇ ಅಲ್ಲವೇ? ಯಾರಿಗೂ ಹೇಳದ ಕತೆಯನ್ನು ನಾನು ಹೇಳಲು ಶುರು ಮಾಡಿವವನಿದ್ದೆ, ಸರಿಯಾದ ಸಮಯಕ್ಕೆ ಆ ದೇವರೇ ಕಳಿಸಿಕೊಟ್ಟಂತೆ ಬಂದಿದ್ದೀಯ,” ಎಂದು ಕತೆಯನ್ನು ಆರ೦ಭಿಸಿದರು.

ಒಂದಾನೊಂದು ಕಾಲದಲ್ಲಿ ಒಂದು ಸುಭಿಕ್ಷವಾದ ರಾಜ್ಯವಿತ್ತು. ಅಂಥ ರಾಜ್ಯದಲ್ಲಿ ಒಂದು ಪಟ್ಟಣ, ಆ ಪಟ್ಟಣದಲ್ಲೊಂದು ದೊಡ್ಡ ಮನೆ. ಸುತ್ತಲಿನ ಹತ್ತು ಊರುಗಳಲ್ಲಿ ಅಂಥ ಭವ್ಯವಾದ ಮನೆ ಇರಲಿಲ್ಲ. ಆ ಮನೆಯ ಜನರು ಅಗರ್ಭ ಶ್ರೀಮಂತರು. ಬರೀ ಶ್ರೀಮಂತರಷ್ಟೇ ಆಗಿರಲಿಲ್ಲ, ಸದ್ಗುಣಿಗಳೂ ನ್ಯಾಯವಂತರೂ ದಾನವಂತರೂ ಮತ್ತು ಮಹಾರಾಜರಿಗೆ ಬೇಕಾದವರೂ ಆಗಿದ್ದರು. ಅವರ ಮನೆಯಲ್ಲಿ ಊಟ ಬೆಳ್ಳಿ ತಟ್ಟೆಯಲ್ಲಿ ಆಗಬೇಕು. ಚಿಕ್ಕ ಮಕ್ಕಳಿಗೆ ಕಾಲಿಗೆ ಬೆಳ್ಳಿಯ ಗೆಜ್ಜೆಯಲ್ಲ, ಬಂಗಾರದ ಗೆಜ್ಜೆ ಕಟ್ಟುತ್ತಿದ್ದರು.

ಅದೇ ಕಾಲಕ್ಕೆ ಈ  ರಾಜ್ಯದ ಮೇಲೆ ಪಕ್ಕದ ರಾಜ್ಯದಿಂದ ಮಹಾಸಂಗ್ರಾಮವಾಗಿ ಸದ್ಗುಣಿಯಾದ ಮಹಾರಾಜನು ತನ್ನ ಆಪ್ತರೊಡನೆ ಪಲಾಯನ ಮಾಡಿದನು. ಪಕ್ಕದ ರಾಜ್ಯದ ದುರ್ಗುಣಿಯಾದ ರಾಜನು ಈ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಈ ದುರ್ಗುಣಿರಾಜನು ರಾಜ್ಯ ಬೊಕ್ಕಸವನ್ನು ಖಾಲಿ ಮಾಡಿ ತನ್ನ ರಾಜ್ಯಕ್ಕೆ ಕೊಂಡೊಯ್ದನು. ಜನರ ಮೇಲೆ ಅಸಾಧ್ಯ ತೆರಿಗೆಯನ್ನು ಹೇರಿದನು. ಸಾಲದ್ದಕ್ಕೆ ರಾಜ್ಯದ ಎಲ್ಲ ಶ್ರೀಮಂತರ ಮನೆ ಲೂಟಿ ಮಾಡಲು ತನ್ನ ಸೈನಿಕರಿಗೆ ಆದೇಶ ನೀಡಿದನು.

ದುರ್ಗುಣಿರಾಜನ ಕಡೆಯವರು ಮನೆಯನ್ನು ಶೋಧಿಸಲು ಬರುತ್ತಾರೆ, ಏನಾದರೂ ಕುಂಟು ಕಾರಣ ಹೇಳಿ, ಯಾವುದೋ ಕಾಗದ ಪತ್ರ ತೋರಿಸಿ, ಮನೆಯನ್ನು ದೋಚಿಕೊಂಡು ಹೋಗುತ್ತಾರೆ ಎನ್ನುವ ಸುದ್ದಿ ಈ ದೊಡ್ಡಮನೆಗೆ ತಲುಪಿತು.

ಮನೆಯ ಯಜಮಾನರು ಪುರೋಹಿತರನ್ನು ಕರೆಸಿದರು. ಪುರೋಹಿತರ ಆಣತಿಯಂತೆ ಅಮಾವಾಸ್ಯೆಯ ರಾತ್ರಿ,  ಮನೆಯವರ ಹೊರತಾಗಿ ಯಾರಿಗೂ ಗೊತ್ತಾಗದಂತೆ ಪುರೋಹಿತರು ತೋರಿಸಿದ ಜಾಗದಲ್ಲಿ (ಆಳುಗಳನ್ನೆಲ್ಲ ರಜೆ ಕೊಟ್ಟು ಕಳಿಸಿದ್ದರು) ಮನೆಯ ಹಿತ್ತಲಿನಲ್ಲಿ ಸುರಂಗವನ್ನು ತೋಡಲು ಶುರುಮಾಡಿದರು. ಹದಿನೈದು ದಿನಗಳಲ್ಲಿ ಸುರಂಗವೊಂದು ತಯಾರಾಯಿತು.  ಪುರೋಹಿತರು ಸ್ಮಶಾನದ ಭಸ್ಮವನ್ನು ತಂದು ಶಿವನ ಹೆಸರಿನಲ್ಲಿ ಹೋಮವನ್ನು ಮಾಡಿ ಕಾಳಿಂಗಸರ್ಪವನ್ನು ಆಹ್ವಾನ ಮಾಡಿದರು. ಪುರೋಹಿತರ ಆದೇಶದಂತೆ ಕಾಳಿಂಗಸರ್ಪವೊಂದು ಸುರಂಗದ ಕಾವಲಿಗೆ ಸುರಂಗದ ಒಳಗೆ ಸೇರಿತು. ಭದ್ರವಾಗಿ ಸುರಂಗದ ಆಳಗಳಲ್ಲಿ ಎಲ್ಲ  ಸಂಪತ್ತನ್ನು ಅಡಗಿಸಿಟ್ಟು ಸುರಂಗಕ್ಕೊಂದು ಬಾಗಿಲು ಮುಚ್ಚಿ, ಚಿಲಕವನ್ನು ಹಾಕಿ, ಅದಕ್ಕೊಂದು ದೊಡ್ಡ ಬೀಗ ಹಾಕಿ, ಕಲ್ಲು ಮಣ್ಣುಗಳಿಂದ ಮುಚ್ಚಿದರು. ಬೀಗದ ಕೈಯನ್ನು ಮನೆಯ ಯಜಮಾನನಿಗೆ ಕೊಟ್ಟರು (ಅದರ ಒಂದು ನಕಲು ಬೀಗದ ಕೈಯನ್ನು ಗುಪ್ತವಾಗಿ ತಮ್ಮಲ್ಲಿಯೇ ಇಟ್ಟುಕೊಂಡಿದ್ದರು, ಪುರೋಹಿತರು).

ಕಾಳಿಂಗನ ಅನುಮತಿ ಇಲ್ಲದೇ ಆ ಸುರಂಗ ಮಾರ್ಗದಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ಪುರೋಹಿತರು ಸಾರಿದರು. ಕಾಳಿಂಗನ ಅನುಮತಿ ಬೇಕಿದ್ದರೆ ಮಧ್ಯರಾತ್ರಿಯ ಪ್ರಹರದಲ್ಲಿ ಕಾಳಿಂಗಾಷ್ಟಕ ಮಂತ್ರ ಹೇಳಿದ ನಂತರವೇ ಸುರಂಗದ ಬಾಗಿಲನ್ನು ತೆರೆಯಬೇಕು ಎಂದು ಪುರೋಹಿತರು ಎಲ್ಲರಿಗೂ ಎಚ್ಚರಿಕೆ ಕೊಟ್ಟರು. ಕಾಳಿಂಗಾಷ್ಟಕವನ್ನು ಮನೆಯ ಯಜಮಾನನಿಗಲ್ಲದೇ ಇನ್ನಾರಿಗೂ ಗೊತ್ತಿರಕೂಡದು (ತಾನು ಸಾಯುವ ಕಾಲದಲ್ಲಿ ಆ ಮಂತ್ರವನ್ನು ತನ್ನ ಮಗನಿಗೆ ಹೇಳಬೇಕು) ಎಂದು ಕಾಳಿಂಗಾಷ್ಟಕವನ್ನು ಬರೆದಿರುವ ತಾಳೆಗರಿಯನ್ನು ಮನೆಯ ಯಜಮಾನನಿಗೆ ಕೊಟ್ಟು, `ಈ ಕಾಳಿಂಗಾಷ್ಟಕದ ಒಂದೇ ಪ್ರತಿ. ಇದನ್ನು ಇನ್ನೊಂದು ಪ್ರತಿ ಬರೆದರೆ, ಈ ಮಂತ್ರವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಈ ಮಂತ್ರ ನಿಮ್ಮ ಹೊರತಾಗಿ ಯಾರಿಗೂ ಗೊತ್ತಿರಕೂಡದು, ನನಗೂ ಕೂಡ ಗೊತ್ತಿರಕೂಡದು` ಎಂದರು.

ರಾಜಭಟರು ರಾಜ್ಯದ ವಿವಿಧ ನಗರಗಳಲ್ಲಿ ಪಟ್ಟಣಗಳಲ್ಲಿ ಶ್ರೀಮಂತರ ಮನೆಗಳನ್ನು ದೋಚುತ್ತಿದ್ದರು.  ಈ ದೊಡ್ಡ ಮನೆಗೂ ನುಗ್ಗಿದರು. ಮನೆಯನ್ನು ಶೋಧಿಸಿದರು, ಜಾಲಾಡಿಸಿದರು. ಒಂದೇ ಒಂದು ಗುಂಜಿ ಬಂಗಾರ ಸಿಗಲಿಲ್ಲ. ಒಂದೇ ಒಂದು ಬೆಳ್ಳಿಯ ಬಟ್ಟಲು ಸಿಗಲಿಲ್ಲ. ನಿರಾಸೆಯಿಂದ ಹಿಂತಿರುಗಿದರು. ದುರ್ಗುಣಿರಾಜನಿಗೆ ಸುದ್ದಿ ಮುಟ್ಟಿಸಿದರು. ದುರ್ಗುಣಿರಾಜನಿಗೆ ಇನ್ನಿಲ್ಲದ ಕೋಪ ಬಂದಿತು. ರಾಜಪುರೋಹಿತರನ್ನು ಮಹಾಮಂತ್ರಿಯನ್ನು ಕರೆಸಿ ಈ ಮನೆಯ ಬಗ್ಗೆ ವಿಚಾರಿಸಿದನು. ಆ ಮನೆಯವರು ಮಾಹಾನ್ ದಾನಿಗಳೆಂದೂ, ಅಗರ್ಭ ಶ್ರೀಮಂತರೆಂದೂ ಅರುಹಿದರು.

ದುರ್ಗುಣಿರಾಜನು ಸುಮ್ಮನೇ ಕೂರಲಿಲ್ಲ. ಚಿಕ್ಕ ಸೈನ್ಯದ ಜೊತೆ ಮಹಾಸೇನಾಧಿಪತಿಯನ್ನೂ ಮಹಾಮಂತ್ರಿಯನ್ನೂ ಕರೆದುಕೊಂಡು ಹೊರಟು ನಿಂತನು. ಮನೆ ತಲುಪಿದಾಗ ಮನೆ ಖಾಲಿಯಾಗಿತ್ತು. ಮನೆಯ ಎಲ್ಲರೂ ಊರು ಬಿಟ್ಟು ಕುದುರೆ ಕಟ್ಟಿಕೊಂಡು ಹೊರಟು ಹೋಗಿದ್ದರು. ಸೈನಿಕರು ಮನೆಯ ಮೂಲೆ ಮೂಲೆ ಹುಡುಕಿದರು. ಊರಿನ ಮನೆ ಮನೆಗಳನ್ನು ಕೆದಕಿದರು. ಒಂದು ಚಿಕ್ಕಾಸೂ ಸಿಗಲಿಲ್ಲ.

ಇದೇ ಸಮಯವನ್ನು ಕಾದು ನಿಂತವರಂತೆ, ಪುರೋಹಿತರು ತಡ ಮಾಡಲಿಲ್ಲ. ದುರ್ಗುಣಿರಾಜ ಉಳಿದುಕೊಂಡ ಬಿಡಾರಕ್ಕೆ ಹೋಗಿ ನಮಸ್ಕರಿಸಿದರು.

“ಮಹಾರಾಜರಿಗೆ ಜಯವಾಗಲಿ. ಚಕ್ರವರ್ತಿಗಳು ನೂರ್ಕಾಲ ಬಾಳಿ, ನಿಮ್ಮ ಕೀರ್ತಿ ಸೂರ್ಯ ಚಂದ್ರರಿರುವವರೆಗೂ ಅಜರಾಮರವಾಗಿರಲಿ,” ಎಂದು ರಾಜನಿಗೆ ನಮಸ್ಕರಿಸಿ, `”ಮಹಾರಾಜರೇ, ನಿಮ್ಮ ಬಳಿ ಮಾತ್ರ ಹೇಳುವ ವಿಷಯವೊಂದಿದೆ. ಆ ವಿಷಯ ನಿಮಗೆ ಇಷ್ಟವಾದರೆ ನನ್ನನ್ನು ನಿಮ್ಮ ರಾಜಪುರೋಹಿತನನ್ನಾಗಿ ಮಾಡುತ್ತೀರಿ ಎಂದುಕೊಂಡಿದ್ದೇನೆ,” ಎಂದರು.

ಪುರೋಹಿತರು ರಾಜನಿಗೆ ಸುರಂಗದ ಬಗ್ಗೆ ಹೇಳಿದರು. ಅದರಲ್ಲಿ ಅಡಗಿಸಿಟ್ಟಿರುವ ಸಂಪತ್ತಿನ ಬಗ್ಗೆ ಹೇಳಿದರು. ತಾವೇ ಸ್ವತಃ ನಿಂತು ಸುರಂಗ ತೋಡಿಸಿದ್ದಾಗಿಯೂ, ಕಾಳಿಂಗನನ್ನು ಕಾವಲಿಗೆ ಇಟ್ಟಿರುವುದಾಗಿಯೂ ಹೇಳಿದರು. ಇದೆಲ್ಲ ಗುಪ್ತವಾಗಿ ನಡೆಯಬೇಕಾದ ಸಮಾಚಾರ, ನಿಮ್ಮ ಭಟರನ್ನು ಸೈನಿಕರನ್ನು ಮಂತ್ರಿಗಳನ್ನೂ ಸೇನಾಧಿಪತಿಗಳನ್ನೂ ಕಳಿಸಿಬಿಡಿ ಎಂದರು.

ಮಹಾರಾಜನರ ಆನಂದಕ್ಕೆ ಮೇರೆಯೇ ಇರಲಿಲ್ಲ. ಆದರೆ ಮಹಾರಾಜರು, `ಇಲ್ಲ ಪುರೋಹಿತರೇ, ಮಂತ್ರಿಗಳಿಲ್ಲದೇ ಸೇನಾಧಿಪತಿಗಳಿಲ್ಲದೇ ನಾನು ಇದುವರೆಗೂ ಯಾವುದೇ ಕಾರ್ಯವನ್ನೂ ಗುಪ್ತವಾಗಿ ಮಾಡಿದ್ದಿಲ್ಲ. ಮಂತ್ರಿಗಳು ನನ್ನ ಮಸ್ತಕದಂತೆ, ಸೇನಾಧಿಪತಿಗಳಿ ನನ್ನ ಬಾಹುಗಳಂತೆ,` ಎಂದರು.

ಪುರೋಹಿತರು, “ಆಯಿತು, ಮಹಾಪ್ರಭುಗಳೇ, ಆದರೆ ಸುದ್ದಿ ನೀವು ಮೂವರ ಹೊರತಾಗಿ ಇನ್ನಾರಿಗೂ ಸೇರದಿರಲಿ,” ಎಂದರು. ಪುರೋಹಿತರು ಸುರಂಗದ ಬಗ್ಗೆ ಮಂತ್ರಿಗಳಿಗೆ ಸೇನಾಧಿಪತಿಗಳಿಗೆ ಹೇಳಿದರು.

ಮಹಾಮಂತ್ರಿಗಳು, “ಮಹಾರಾಜರೇ, ಇದೇಕೋ ನನಗೆ ಸುಳ್ಳಿನ ಸರಮಾಲೆ ಅನಿಸುತ್ತದೆ,” ಎಂದರು.

ಸೇನಾಧಿಪತಿಗಳು, “ಮಹಾರಾಜರೇ, ಸುಳ್ಳಿದ್ದರೂ ಇರಲಿ, ಒಂದು ಸಲ ನೋಡಿಯೇ ಬಿಡೋಣವಂತೆ,” ಎಂದು ಮಂತ್ರಿಗಳ ಮಾತನ್ನು ತಳ್ಳಿ ಹಾಕಿದರು.

ಪುರೋಹಿತರು, ಮಹಾರಾಜರು, ಮಹಾಮಂತ್ರಿ ಮತ್ತು ಮಹಾಸೇನಾಧಿಪತಿಗಳು – ಈ ನಾಲ್ಕು ಜನರು ಮಧ್ಯರಾತ್ರಿಯ ಎರಡನೆಯ ಪ್ರಹರದಲ್ಲಿ ಮಹಾಮನೆಯ ಹಿತ್ತಲಿನಲ್ಲಿ ಸೇರಿದರು. ಪುಟ್ಟ ದೀಪದ ಬೆಳಕಿನಲ್ಲೇ ಕಲ್ಲು ಮಣ್ಣುಗಳಿಂದ ಮುಚ್ಚಿದ್ದ ಜಾಗವನ್ನು ಪುರೋಹಿತರು ತೋರಿಸಿದರು. ಸೇನಾಪತಿಗಳು ಮಂತ್ರಿಗಳ ಸಹಾಯದಿಂದ ಇಷ್ಟವಿಲ್ಲದಿದ್ದರೂ ಕಲ್ಲು ಮಣ್ಣುಗಳನ್ನು ಸರಿಸಿದರು. ಅಲ್ಲಿದ್ದ ಕಬ್ಬಿಣದ ಬಾಗಿಲು ಮತ್ತು ಬೀಗ ಕಾಣಿಸಿತು. ಪುರೋಹಿತರು ತಮ್ಮ ಪಂಚೆಯ ಗಂಟಿನಿಂದ ಬೀಗದ ಕೈಯನ್ನು ತೆಗೆದು ಸೇನಾಧಪತಿಗಳ ಕೈಗೆ ಕೊಟ್ಟರು. ಬಾಗಿಲನ್ನು ತೆರೆಯುತ್ತಿದ್ದಂತಯೇ ಬುಸ್ ಎಂದು ಸರ್ಪವೊಂದು ಹೆಡೆಯೆತ್ತಿತು. ಕಾಳಿಂಗಾಷ್ಟಕವನ್ನು ಬರೆದ ತಾಳೆಗರಿ ಈ ಮಹಾಮನೆಯ ಯಜಮಾನನಿಗೆ ಕೊಟ್ಟಾಗಿದ್ದರೂ, ಪುರೋಹಿತರಿಗೆ ಕಾಳಿಂಗಾಷ್ಟಕ ಬಾಯಿಪಾಠವಿತ್ತು. ಕಾಳಿಂಗಾಷ್ಟಕ ಮಂತ್ರವನ್ನು ಶಾಸ್ತ್ರೋಕ್ತವಾಗಿ ಹೇಳಿದರು. ಕಾಳಿಂಗ ಒಳಗೆ ಸರಿದು ದಾರಿ ಬಿಟ್ಟಿತು.

“ಕಾಳಿಂಗ ಈಗ ಯಾರಿಗೂ ಏನೂ ಮಾಡುವುದಿಲ್ಲ, ನೀವಿನ್ನು ಧೈರ್ಯವಾಗಿ ಒಳಗೆ ಇಳಿಯಬಹುದು,” ಎಂದರು.

“ಮಂತ್ರಿಗಳೇ, ಈಗಲಾದರೂ ನಂಬಿಕೆ ಬಂದಿತೇ?” ಎಂದು ಕುಹಕವಾಡಿದರು. ಮಹಾರಾಜರು ನಕ್ಕರು. ಮಂತ್ರಿಗಳಿಗೆ ಅಪಮಾನವಾಯಿತು. “ಇದು ನಂಬಿಕೆಯ ಪ್ರಶ್ನೆಯಲ್ಲ, ಮಹಾಮಂತ್ರಿಯಾದವನು ಪರಾಮರ್ಶೆ ಮಾಡದೇ ಯಾವುದನ್ನೂ ಒಪ್ಪಬಾರದು,” ಎಂದರು ಮಹಾಮಂತ್ರಿಗಳು.

“ಪುರೋಹಿತರೇ, ನೀವೇ ಅಲ್ಲವೇ ಈ ಎಲ್ಲ ವ್ಯವಸ್ಥೆ ಮಾಡಿದ್ದು. ನೀವು ಒಳಗೆ ಇಳಿದು ಮಂತ್ರಿಗಳಿಗೆ ಸೇನಾಧಿಪತಿಗಳಿಗೆ ತೋರಿಸಿರಿ. ಮೂವರೂ ಸೇರಿ ಅಲ್ಲಿರುವ ಸಂಪತ್ತನ್ನು ಮೇಲೆ ತನ್ನಿ. ನಾನು ಇಲ್ಲಿಯೇ ನಿಂತು ನಿಮಗಾಗಿ ಕಾಯುತ್ತೇನೆ,” ಎಂದರು, ರಾಜನಿಗೆ ಇನ್ನೂ ಪುರೋಹಿತನ ಮೇಲೆ ನಂಬಿಕೆ ಇರಲಿಲ್ಲ.

“ಆದರೆ ನಾಗಪೂಜೆ ಮಾಡಿದ ನಾನೇ ಒಳಗೆ ಹೋಗಕೂಡದು, ಅದು ನಿಮಯೋಲ್ಲಂಘನೆ ಮಾಡಿದಂತೆ,” ಎಂದರು ಪುರೋಹಿತರು.

“ಹಾಗಾದರೆ ಸೇನಾಧಿಪತಿಗಳು ಮತ್ತು ಮಂತ್ರಿಗಳು ಒಳಗೆ ಇಳಿಯಲಿ. ಒಬ್ಬರಿಗೊಬ್ಬರು ದೀಪ ಹಿಡಿದು ದಾರಿ ತೋರಿಸಬಹುದು,” ಎಂದರು ಮಹಾರಾಜರು. ಸೇನಾಧಿಪತಿಗಳು ಮತ್ತು ಮಂತ್ರಿಗಳು ಒಳಗೆ ಇಳಿದರು. ಮಹಾರಾಜರು ಮತ್ತು ಪುರೋಹಿತರು ದೊಡ್ಡಮನೆಯ ಹಿತ್ತಲಲ್ಲಿ ಸುರಂಗದ ಬಾಗಿಲ ಬಳಿ ನಿಂತರು.

ಸುರಂಗದ ಒಳಗೆ ಇಳಿದ ಸೇನಾಧಿಪತಿಗಳಿಗೆ ಮತ್ತು ಮಂತ್ರಿಗಳಿಗೆ ಅಲ್ಲಿರುವ ಸಂಪತ್ತನ್ನು ಹುಡುಕಲು ತುಂಬ ಸಮಯವೇನೂ ಬೇಕಾಗಲಿಲ್ಲ. ಆದರೆ ಮಹಾಮಂತ್ರಿಗಳೂ ಸೇನಾಧಿಪತಿಗಳೂ ಸೇರಿ ಮಹಾರಾಜನನ್ನು ಮುಗಿಸಲು ಬಹಳ ಕಾಲದಿಂದ ಹೊಂಚುಹಾಕುತ್ತಿದ್ದರು. ಸೇನಾಧಿಪತಿಗಳಿಗೆ ತಾವು ಮಹಾರಾಜರಾಗುವ ಆಸೆ. ಮಹಾಮಂತ್ರಿಗಳು ತಮ್ಮ ಮಗಳನ್ನು ಸೇನಾಧಿಪತಿಗಳ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು. ಸೇನಾಧಿಪತಿಗಳು ಒಂದು ವೇಳೆ ಮಹಾರಾಜರಾದರೆ, ತನ್ನ ಮಗಳು ಮುಂದಿನ ರಾಣಿಯಾಗುತ್ತಾಳೆ, ತನ್ನ ಮೊಮ್ಮಗ ಮುಂದೊಂದು ದಿನ ಮಹಾರಾಜನಾಗುತ್ತಾನೆ ಎನ್ನುವ ಕನಸು ಮಹಾಮಂತ್ರಿಗಳದ್ದು. ಮಹಾರಾಜನನ್ನು ಮುಗಿಸಲು ಇದಕ್ಕಿಂತ ಸರಿಯಾದ ಸಮಯ ಸಿಗುವುದು ಸಾಧ್ಯವಿಲ್ಲವೆಂದು ತಮ್ಮಲ್ಲಿಯೇ ಮಾತಾಡಿಕೊಂಡರು. 

ಇತ್ತ ಮೇಲೆ, ಏಷ್ಟು ಸಮಯವಾದರೂ ಯಾರೊಬ್ಬರ ಸುಳಿವಿಲ್ಲ, ಯಾರೂ ಮೇಲೆ ಬರುತ್ತಿಲ್ಲ. ಮಹಾರಾಜರಿಗೆ ಆತಂಕ ಶುರುವಾಯಿತು. ಮಹಾರಾಜರ ತಾಳ್ಮೆ ಕಡಿಮೆಯಾಗುತ್ತಿತ್ತು.

ಅಷ್ಟರಲ್ಲಿ ಕೆಳಗಿನಿಂದ ಮಹಾಮಂತ್ರಿಗಳ ಧ್ವನಿ, “ಮಹಾರಾಜರೇ, ಇಲ್ಲಿ ಬರೀ ಚಿನ್ನವಲ್ಲ, ಚಿನ್ನದ ಗಣಿಯೇ ಇದೆ, ಇದು ಮುಗಿಯದ ಗಣಿಯ ತರಹ ಇದೆ. ಹೋದಷ್ಟೂ ಸುರಂಗ ಮುಗಿಯುತ್ತಲೇ ಇಲ್ಲ. ಸುರಂಗ ಮಾರ್ಗದ ಇಕ್ಕೆಲಗಳಲ್ಲೂ ಬಂಗಾರ, ವಜ್ರ, ವೈಢೂರ್ಯ. ಕಾಳಿಂಗ ಕೂಡ ಏನೂ ಮಾಡದೇ ಸುಮ್ಮನೇ ಕೂತಿದ್ದಾನೆ. ಆದರೆ ಇದನ್ನೆಲ್ಲ ಮೇಲೆ ತರಲು ಒಬ್ಬರ ಮೇಲೆ ಒಬ್ಬರು ಒಟ್ಟು ಮೂರು ಜನ ನಿಲ್ಲಬೇಕು. ಆದ್ದರಿಂದ ನೀವು ಕೂಡ ಕೆಳಗೆ ಬರಬೇಕು,” ಎಂದರು.

ಮಹಾರಾಜರು ಆನಂದ ಪರವಷರಾಗಿ ಪುರೋಹಿತರ ಬೆನ್ನು ತಟ್ಟಿ, ತಮ್ಮ ಮೇಲಿದ್ದ ಬಂಗಾರದ ಸರವನ್ನು ಪುರೋಹಿತರಿಗೆ ನೀಡಿದರು. ನಂತರ ಮೆಲ್ಲನೇ ಸುರಂಗದ ಒಳಕ್ಕೆ ಇಳಿದರು. ಮಹಾರಾಜರನ್ನು ಮುಗಿಸಲು ಕೆಳಗೆ ಇಬ್ಬರೂ ಕಾಯುತ್ತಿದ್ದರು.

ಮಹಾರಾಜರು ಕೆಳಗೆ ಇಳಿಯುತ್ತಿದ್ದಂತೇ, ಪುರೋಹಿತರು ಸುರಂಗದ ಬಾಗಿಲು ಫಟಾರೆಂದು ಮುಚ್ಚಿ ಬೀಗವನ್ನು ಹಾಕಿದರು. ಈ ವಿಷಯವನ್ನು ಹಳೆಯ ರಾಜನ ಗೂಢಚಾರಿಗೆ ಹೇಳಿದರು. ಅದಾಗಿ ಎರಡು ದಿನಕ್ಕೆ ಹಳೆಯ ರಾಜನು ಮರಳಿ ಬಂದು ಮತ್ತೆ ರಾಜ್ಯಭಾರವನ್ನು ಮಾಡಿದನು. ಪಲಾಯನ ಮಾಡಿದ ಈ ಮನೆಯವರೂ ಮತ್ತೆ ಮನೆಗೆ ಮರಳಿ ಬಂದರು. ಆದರೆ ಕಾಳಿಂಗನಿಂದ ಒದಗಬಹುದಾದ ಶಾಪಕ್ಕೆ ಹೆದರಿ ಸುರಂಗವನ್ನು ತೆಗೆಯುವ ಧೈರ್ಯ ಮಾತ್ರ ಯಾರಿಗೂ ಇರಲಿಲ್ಲ.

“ಹಾಗಾದರೆ ನಾವು ಆ ಮಹಾಮನೆಯ ವಂಶಸ್ಥರೇ?” ಎಂದು ಅಪ್ಪ ಕೇಳಿದ.

ಅಜ್ಜ ಹೌದು ಎಂದು ತಲೆಯಾಡಿಸಿದರು.

“ಹಾಗಾದರೆ ಸುರಂಗದ ಎಲ್ಲ ಸಂಪತ್ತಿಗೆ ನಾವು ವಾರಸುದಾರರೇ?” ಎಂದು ಅಮ್ಮ ಕೇಳಿದಳು.

ಅಜ್ಜ ಹೌದು ಎಂದು ಅದಕ್ಕೂ ತಲೆಯಾಡಿಸಿದರು.

ಚಿಕ್ಕಪ್ಪನ ಮಗ ಮುಖ ಅರಳಿಸಿ, “ಸೂಪರಾಗಿದೆ ಕತೆ, ಇದರ ಜಾಡನ್ನೇ ಹಿಡಿದು ಒಂದು ಸಿನೆಮಾ ಮಾಡುತ್ತೇನೆ,” ಎಂದ.

“ಖಂಡಿತ ಮಾಡು, ಸಿನೆಮಾ ಸೂಪರ್ ಫ್ಲಾಪ್ ಆಗುವುದು ಮಾತ್ರ ಗ್ಯಾರಂಟಿ,’ ಎಂದು ಬಚ್ಚಬಾಯಿಯನ್ನು ಪೂರ್ತಿ ತೆರೆದು ನಕ್ಕರು.

ಆಮೇಲೆ ನಿಧಾನವಾಗಿ ಅಜ್ಜ ಹೇಳಿದರು, “ಈ ಘಟನೆ ನಡೆದ ಮೇಲೆ ಎಲ್ಲರೂ ಅಲ್ಲಿ ಸುರಂಗವಿರುವುದನ್ನು ಮರೆತು ಬಿಡಲು ಹೇಳಿದರು. ಆ ಸುರಂಗದ ಒಳಗಿರುವ ಸಕಲ ಆಸ್ತಿ, ಚಿನ್ನ, ರನ್ನ, ವಜ್ರ, ವೈಢೂರ್ಯಗಳೂ ತಮ್ಮದಲ್ಲ ಎನ್ನುವಂತೆ ಬದುಕಿದರು. ಒಂದೆರೆಡು ತಲೆಮಾರು ಕಳೆಯುವಷ್ಟರಲ್ಲಿ ಅಲ್ಲಿ ಸುರಂಗವಿರುವುದು ಆ ಮನೆಯ ಬಹುತೇಕ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ಅದು ಕತೆಯ ರೂಪದಲ್ಲಿ ಅದು ಹೇಗೋ ಗೌಪ್ಯವಾಗಿ ನನ್ನ ತಾತ ನನಗೆ ಹೇಳಿದ್ದರು. ಅವರಿಗೂ ನನಗೂ ಈ ಮನೆಯ ಇಷ್ಟು ದೊಡ್ಡ ಹಿತ್ತಲಿನಲ್ಲಿ ಆ ಸುರಂಗದ ಬಾಗಿಲು ಎಲ್ಲಿದೆ ಎಂದು ಗೊತ್ತಿರಲಿಲ್ಲ, ಗೊತ್ತು ಮಾಡಿಕೊಳ್ಳುವ ಇಚ್ಛೆಯೂ ಇರಲಿಲ್ಲ,” ಎಂದು, “ಹಾಗಾಗಿ ಇಂಥ ದೊಡ್ಡ ಮನೆಯಲ್ಲಿ ಎಲ್ಲರೂ ಬಡತನದ ಜೀವನ ಸಾಗಿಸಬೇಕಾಯಿತು”.

ಅಷ್ಟರಲ್ಲಿ ಹೆಂಡತಿ ಆಫೀಸಿಗೆ ಅರ್ಧದಿನದ ರಜೆ ಹಾಕಿ ಮನೆಗೆ ಬಂದಳು. ತಾನು ಹೇಳಿದಂತೆ ಗಂಡ ಹಿತ್ತಲಿಗೆ ಹೋಗದೇ ಮನೆಯಲ್ಲೇ ಇರಿವುದನ್ನು ನೋಡಿ ತನ್ನ ಬಗ್ಗೆ ತನಗೇ ಹೆಮ್ಮೆಯಾಯಿತು. ಹೆಂಡತಿ ಮನೆಗೆ ಬರುತ್ತಿದ್ದಂತೆಯೇ ಎಲ್ಲರೂ ಗಡಿಬಿಡಿಯಿಂದ ಕೂತಲ್ಲಿಂದ ಎದ್ದರು.  ಹೆಂಡತಿಗೆ ಚಿಕ್ಕಪ್ಪನ ಮಗನನ್ನು ಪರಿಚಯಿಸಿದ. ಇಬ್ಬರೂ ಉಭಯಕುಶಲೋಪರಿಯನ್ನು ಮಾಡಿದ ಮೇಲೆ, ಚಿಕ್ಕಪ್ಪನ ಮಗನಿಗೆ ದೊಡ್ಡದಾದ ಮನೆಯಲ್ಲಿ ಒಂದು ಕೋಣೆಯನ್ನು ತೋರಿಸಿ ಬಚ್ಚಲು ಮನೆ ಎಲ್ಲಿ ಇದೆ ಎಂದು ತೋರಿಸಿದ.

ಹೆಂಡತಿಯನ್ನು ತಮ್ಮ ಮಲಗುವ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. ಇಲ್ಲಿಯವರೆಗೆ ನಡೆದುದನ್ನು ಸಂಕ್ಷಿಪ್ತವಾಗಿ ವಿವರಿಸಿದ. ಆಷ್ಟರಲ್ಲಿ ಅವರು ಮಲಗುವ ಕೋಣೆಯ ಬಡಿಯುವ ಸದ್ದಾಯಿತು.

“ಯಾರು?” ಎಂದ. “ನಾನು ನಿನ್ನಮ್ಮ, ಎಲ್ಲರೂ ನಿನಗಾಗಿ ಟಾರ್ಚು ಹಿಡಿದುಕೊಂಡು ಕಾಯುತ್ತಿದ್ದಾರೆ,” ಎಂದರು ಅಮ್ಮ. ಅಪ್ಪ ಟಾರ್ಚು ತಂದುಕೊಟ್ಟ. ಎಲ್ಲರೂ ಹಿತ್ತಲಿನತ್ತ ಕುತೂಹಲದಿಂದ ಹೆಜ್ಜೆ ಹಾಕಿದರು. ಚಿಕ್ಕಪ್ಪನ ಮಗನೂ ಜೊತೆಗೆ ಬಂದ. ಮುಚ್ಚಿಟ್ಟಿದ್ದ ಬಾಗಿಲನ್ನು ಎಲ್ಲರಿಗೂ ತೋರಿಸಿದ. ಎಲ್ಲರ ಮುಖದಲ್ಲೂ ಆಶ್ಚರ್ಯ, ಕುತೂಹಲ ಮಿಶ್ರಿತ ಭಯ. ಎಲ್ಲರೂ ಅದರ ಸುತ್ತಲೂ ಸುತ್ತುವರೆದರು. ನಿಧಾನವಾಗಿ ಬಾಗಿಲನ್ನು ತೆರೆದ. ಕಪ್ಪನೆಯ ಕತ್ತಲು. ಬೆಳಕು ಒಳಗೆ ಹೋಗಲು ಕಷ್ಟ ಪಡುತ್ತಿತ್ತು. ಟಾರ್ಚು ಹಿಡಿದ. ಎಲ್ಲರೂ ಬಗ್ಗಿ ನೋಡಿದರು. ಕತ್ತಲನ್ನು ಬಿಟ್ಟು ಮತ್ತೇನೂ ಕಾಣಿಸಲಿಲ್ಲ.

“ಒಳಗೆ ಇಳಿಯುತ್ತೇನೆ,” ಎಂದ. ಅಪ್ಪ ಹುಂ ಅನ್ನಲಿಲ್ಲ ಉಹುಂ ಅನ್ನಲಿಲ್ಲ. ಸುಮ್ಮನೇ ನಿಂತಿದ್ದ.

ಅಮ್ಮ ಆತಂಕಗೊಂಡು, “ಬೇಡಪ್ಪ. ಒಳಗೆ ಏನೂ ಕಾಣುತ್ತಿಲ್ಲ. ನಿನಗೆ ಏನಾದರೂ ಆದರೆ?” ಎಂದು ಅಳುವ ಮುಖ ಮಾಡಿದಳು, “ಕಾಳಿಂಗಸರ್ಪ ನಿನ್ನನ್ನು ಕಚ್ಚಿದರೆ?”.

ಹೆಂಡತಿ. “ಸುಮ್ಮನಿರಿ ಅತ್ತೆ. ನೀವು ಜಾಗೃತೆಯಿಂದ ಹೋಗಿ. ನಾನು ಇಲ್ಲೇ ನಿಂತು ಕಾಯುತ್ತೇನೆ, ಇನ್ನೇನು ಮಗಳು ಶಾಲೆ ಮುಗಿಸಿ ಬರುವ ಸಮಯವಾಯಿತು,” ಎಂದಳು.

ಚಿಕ್ಕಪ್ಪನ ಮಗ, “ನಾನೂ ಬರಲೇನು?” ಎಂದು ಕೇಳಿದ. ಬೇಡ ಎಂದ.

ಅಜ್ಜ, “ನಮ್ಮ ಮನೆಯಲ್ಲಿ ಯಾರಿಗೂ ಕಾಳಿಂಗಾಷ್ಟಕ ಮಂತ್ರವನ್ನು ಹೇಳಿಕೊಡಲಿಲ್ಲ, ನನಗೆ ಕಾಳಿಂಗಾಷ್ಟಕ ಮಂತ್ರ ಗೊತ್ತಿಲ್ಲ. ಬೇಡ, ಹೋಗಬೇಡ,” ಎಂದರು. ಅದಕ್ಕೆ ತಂಗಿ, “ಸುಮ್ಮನಿರಿ ಅಜ್ಜ. ಸುಮ್ಮನೇ ಹೆದರಿಸಬೇಡಿ. ನೀವೋ ನಿಮ್ಮ ಕತೆಗಳೋ!” ಎಂದು ನಕ್ಕಳು.

ಟಾರ್ಚು ಹಿಡಿದು ಒಳಗೆ ಮೆಲ್ಲನೇ ಒಳಗೆ ಇಳಿದ. ಎಲ್ಲರೂ ಬಾಯಿ ಬಿಟ್ಟುಕೊಂಡು ಮೇಲೆ ನಿಂತು ನೋಡುತ್ತಿದ್ದರು. ಮೆಲ್ಲ ಒಳಗಿಳಿದ. ಟಾರ್ಚು ಹಿಡಿದಿದ್ದರಿಂದ ಅವನು ಕೆಳಗೆ ಹೋಗುತ್ತಿರುವುದು ಕಾಣುತ್ತಿತ್ತು.

ಕಾಲು ನೆಲವನ್ನು ತಾಕುತ್ತಿದ್ದಂತೇ ಕಾಲಿಗೆ ಕೊಚ್ಚೆ ತಾಕಿತು. ಹೆದರಿಕೆಯಾಯಿತು. ಮೊಣಕಾಲವರೆಗೆ ಕೊಚ್ಚೆ. ಸುತ್ತ ಕತ್ತಲು ಮತ್ತು ದುರ್ನಾತ. ಬೆಳಗಿನ ತಿಂಡಿಯೆಲ್ಲ ವಾಂತಿ ಬರುವಂತಾಯಿತು. ಟಾರ್ಚಿನ ಬೆಳಕು ಯಾವುದಕ್ಕೂ ಸಾಲುತ್ತಿರಲಿಲ್ಲ. ಟಾರ್ಚನ್ನು ಸುತ್ತ ತಿರುಗಿಸಿದ. ಅದು ಒಂದು ಕೊಚ್ಚೆ ಗುಂಡಿಯಂತೆ ಕಾಣಿಸಿತು. ಆಳವಿರಲಿಲ್ಲ, ಆದರೆ ಒಬ್ಬರು ಹೋಗುವಷ್ಟು ಸುರಂಗದಂತೆ ಇತ್ತು,  ಕೆಳಗೆಲ್ಲ ನೀರು. ಪಕ್ಕದಲ್ಲೆಲ್ಲೆ ಪಾಚಿ. ಮೇಲೆ ನೋಡಿದ. ಎಲ್ಲರೂ ಮೇಲಿನಿಂದ ಇವನನ್ನೇ ದಿಟ್ಟಿಸಿ ನೋಡುತ್ತಿದ್ದರು.

“ಹೊಲಸು ತಿಪ್ಪೆ ಗುಂಡಿಯಂತಿದೆ,” ಎಂದು ಕಿರುಚಿದ.

ಆ ಸುರಂಗದಲ್ಲಿ ಹೋಗಲು ಕೊಚ್ಚೆ ನೀರಿನಲ್ಲೇ ಅಡಿ ಮುಂದಿಟ್ಟ. ಕಾಲಿಗೆ ಏನೋ ಸರಿದಾಡಿದಂತೆ ಅನಿಸಿತು. ಗಾಬರಿಯಾದ.

ಅಷ್ಟರಲ್ಲಿ ಸರಭರನೇ ನಾಕಾರು ಹೆಗ್ಗಣಗಳು ತೆರೆದ ಬಾಗಿಲಿನಿಂದ ಹೊರಗೆ ಹಾರಿದವು. ಹೆಗ್ಗಣಗಳನ್ನು ನೋಡಿ ಅಮ್ಮ ಕಿಟರನೇ ಕಿರುಚಿಕೊಂಡಳು. ಅಮ್ಮ ಕಿರುಚಿಕೊಂಡಿರುವುದನ್ನು ನೋಡಿ ತಂಗಿ ಕೂಡ ಕಿಟಾರನೇ ಕಿರುಚಿದಳು.

ಗಾಬರಿಯಾಗಿ ಮೇಲೆ ಬಂದ. ಕಾಲಿಗೆಲ್ಲ ಕೊಚ್ಚೆ ತುಂಬಿಕೊಂಡಿತ್ತು, ಮೂಗಿಗೆಲ್ಲ ದುರ್ನಾತ ಬಡಿದುಕೊಂಡಿತ್ತು.

“ಥೂ, ವ್ಯಾಕ್, ಕೊಚ್ಚೆ, ಗಲೀಜು. ಅಲ್ಲಿ ಇಲಿ ಹೆಗ್ಗಣ ಬಿಟ್ಟರೆ ಏನೂ ಇಲ್ಲ. ಬಹುಷಃ ಮುನಿಸಿಪಾಲಟಿಯ ಗಟಾರಿರಬಹುದು,” ಎಂದು ಆ ಬಾಗಿಲನ್ನು ವಾಪಸ್ ಮುಚ್ಚಿದ.

“ಒಂದು ಬೀಗ ತೆಗೆದುಕೊಂಡು ಬಾರೆ,” ಎಂದು ತಂಗಿಗೆ ಹೇಳಿದ.

“ನೀನು ಸ್ನಾನ ಮಾಡು ಹೋಗೋ. ಚಿಕ್ಕಪ್ಪನ ಮಗನೋ ಅಪ್ಪನೋ ಬೀಗ ಹಾಕಿಕೊಂಡು ಬರುತ್ತಾರೆ,” ಎಂದು ಅಮ್ಮ ಅಂದರು. ನಿಂತೇ ಇದ್ದ, ಕೊಳಕು ನಾರುತ್ತ.

ತಂಗಿ ಒಂದು ಹಳೆಯ ದೊಡ್ಡ ಬೀಗವನ್ನು ಹುಡುಕಿಕೊಂಡು ತಂದು ಕೊಟ್ಟಳು. ಬಾಗಿಲಿಗೆ ಬೀಗ ಹಾಕಿ, ಅದರ ಮೇಲೆ ಮತ್ತೆ ಮಣ್ಣನ್ನು ಮುಚ್ಚಿ, “ದರಿದ್ರದ್ದು, ನನ್ನ ಇಡೀ ದಿನವನ್ನು ಹಾಳು ಮಾಡಿತು,” ಎಂದು ಜೋರಾಗಿ ಎಲ್ಲರಿಗೂ ಬಯ್ಯುವಂತೆ ತನಗೇ ತಾನೇ ಬಯ್ದುಕೊಂಡು, ಬೀಗದ ಕೈಯನ್ನು ಪೈಜಾಮದ ಜೀಬಿನಲ್ಲಿ ಜೋಪಾನವಾಗಿ ಇಟ್ಟುಕೊಂಡು, ಲಗುಬಗೆಯಿಂದ ಸ್ನಾನ ಮಾಡಲು ಬಚ್ಚಲು ಮನೆಗೆ ಹೊರಟ. ಹೋಗುವಾಗ ಹೆಂಡತಿಗೆ, “ಟಾವೆಲ್ ತೆಗೆದುಕೊಂಡು ಬಾರೆ,” ಎಂದ.

ಬಚ್ಚಲು ಮನೆಗೆ ಹೆಂಡತಿ ಟಾವೆಲನ್ನು ಕೊಡುತ್ತಿರುವಾಗ, “ಅದು ಅಜ್ಜ ಹೇಳಿರುವಂತೆ ಒಂದು ಸುರಂಗದಂತಿದೆ. ಅಲ್ಲೊಂದು ಬಾಗಿಲು ಇದ್ದಂತಿದೆ. ಅದರ ಒಳಗೆ ಅಜ್ಜ ಹೇಳುವಂತೆ ಏನೋ ಇದೆ ಅನಿಸುತ್ತೆ. ಯಾರಿಗೂ ಹೇಳಬೇಡ,” ಎಂದು ಬಚ್ಚಲುಮನೆಯ ಬಾಗಿಲು ಹಾಕಿಕೊಂಡ.

ಯಥಾಪ್ರಕಾರ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಹೆಂಡತಿಯೇ ಎದ್ದಳು. ಪಕ್ಕದಲ್ಲಿ ಮಗಳು ಕನಸಿನ ಲೋಕದಲ್ಲಿ ಮುಗುಳ್ನಗುತ್ತಿದ್ದಳು. ತಾನು ಮೊದಲು ಸ್ನಾನ ಮಾಡಿ ಕೆಲಸಕ್ಕೆ ತಯಾರಾದ ಮೇಲೆ, ಇನ್ನೊಂದು ಕೋಣೆಯಲ್ಲಿ ಮಲಗುವ ಗಂಡನನ್ನು ಎಬ್ಬಿಸುವುದು ವಾಡಿಕೆ (ಮಗುವಾದ ಮೇಲಿಂದ ತಾನು ಮಗಳು ಒಟ್ಟಿಗೆ ಮಲಗುವುದು, ಅವನು ಬೇರೆ ಕೋಣೆಯಲ್ಲಿ ಮಲಗುವುದು ರೂಢಿಯಾಗಿದೆ). ಗಂಡ ಎದ್ದ ಕೂಡಲೇ ಇನ್ನೂ ಎಲ್ಲರೂ ಏಳುವ ಮೊದಲೇ ಕೆಲಸಕ್ಕೆ ಹೋಗುವುದು ಅವಳ ದಿನನಿತ್ಯದ ಕರ್ಮ. ಮಗಳನ್ನು ಏಳಿಸಿ, ತಯಾರು ಮಾಡಿ, ತಿಂಡಿ ಕೊಟ್ಟು, ತನ್ನ ತಾಯಿ ಮಾಡಿದ ಊಟದ ಡಬ್ಬಿ ಕಟ್ಟಿ ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದರೆ ನಿರುದ್ಯೋಗಿಯಾದ ಗಂಡನ ಕೆಲಸ ಮುಗಿಯಿತು. ಗಂಡ ಕೆಲಸ ಕಳೆದುಕೊಂಡ ಮೇಲೆ ಅವನಿಗೆ ಇನ್ನೊಂದು ಕೆಲಸ ಸಿಗುವ ಆಸೆಯನ್ನೇ ಬಿಟ್ಟಿದ್ದಾಳೆ. ಆದರೆ ದಿನ ಹೋದಂತೆ ಕಂದರ ಮಾತ್ರ ದೊಡ್ಡದಾಗುತ್ತಿದೆ ಎನಿಸುತ್ತದೆ.

ಅವತ್ತೂ ಕೂಡ ತಾನು ಎದ್ದು ತಯಾರದ ಮೇಲೆ ಗಂಡನನ್ನು ಏಳಿಸಲು ಗಂಡ ಮಲಗುವ ಕೋಣೆಗೆ ಹೋದಳು. ಅವನು ಅಲ್ಲಿರಲಿಲ್ಲ. ರಾತ್ರಿಯೆಲ್ಲ ಬಹುಷಃ ಚಿಕ್ಕಪ್ಪನ ಮಗನ ಜೊತೆ ಮಾತಾಡುತ್ತ ಚಿಕ್ಕಪ್ಪನ ಮಗನಿಗೆ ಉಳಿಯಲು ಕೊಟ್ಟ ಕೋಣೆಯಲ್ಲೇ ಮಲಗಿರಬಹುದು ಎಂದುಕೊಂಡು ಅಲ್ಲಿ ಹೋದಳು.  ಅಲ್ಲಿ ಗಂಡನೂ ಇರಲಿಲ್ಲ, ಚಿಕ್ಕಪ್ಪನ ಮಗನೂ ಇರಲಿಲ್ಲ. ಚಿಕ್ಕಪ್ಪನ ಮಗನ ಬ್ಯಾಗು ಮಾತ್ರ ಇತ್ತು. ಇಂಥಾ ದೊಡ್ಡ ಮನೆಯಲ್ಲಿ ಯಾರು ಎಲ್ಲಿ ಬೇಕಾದರೂ ಮಲಗಬಹುದು. ಈಗ ಅವಳಿಗೆ ಕೋಪ ಮೂಗಿಗೇ ಬರುತ್ತಿತ್ತು. ತನಗೆ ಕೆಲಸಕ್ಕೆ ಹೋಗಲು ತಡವಾಗುತ್ತಿದೆ, ಈಗ ಇವನನ್ನು ಇಂಥಾ ದೊಡ್ಡ ಮನೆಯಲ್ಲಿ ಹುಡುಕಬೇಕು ಬೇರೆ! ಗಂಡನ ಹೆಸರನ್ನು ಜೋರಾಗಿ ಕೂಗುತ್ತ ಹೋದಳು.

“ಏನಾಯಿತೇ? ಬೆಳ್‍ಬೆಳಿಗ್ಗೆ ಅದೇನು?” ಎಂದು ಅಮ್ಮ ಎದ್ದು ಹೊರಬಂದರು.

“ಇವನು ಇನ್ನೂ ಎದ್ದಿಲ್ಲ. ಎಲ್ಲಿ ಮಲಗಿದ್ದಾನೋ?” ಎಂದಳು.

“ಒಂದು ದಿನವಾದರೂ ಮಲಗಲಿ ಬಿಡೆ. ನಿನ್ನೆ ಅವನೂ ಚಿಕ್ಕಪ್ಪನ ಮಗನೂ ತುಂಬ ಹೊತ್ತು ಮಾತಾಡುತ್ತ ಕೂತಿದ್ದರು,” ಎಂದು ಅಮ್ಮ ಮಗನನ್ನು ವಹಿಸಿಕೊಂಡು ಮಾತಾಡಿದಳು, “ಒಂದು ದಿನ ನೀನೇ ಮಗಳನ್ನು ಏಳಿಸಿ ತಯಾರು ಮಾಡಿ ತಿಂಡಿ ಕೊಟ್ಟರೆ ಏನೂ ಆಗುವುದಿಲ್ಲ, ಅಷ್ಟರಲ್ಲಿ ಅವನೂ ಎದ್ದು ತಯಾರಾಗಿ ಮಗಳನ್ನು ಶಾಲೆಗೆ ಬಿಟ್ಟು ಬರುತ್ತಾನೆ. ಒಂದು ದಿನ ಕೆಲಸಕ್ಕೆ ಒಂಚೂರು ತಡವಾದರೆ ಪ್ರಳಯವೇನೂ ಆಗುವುದಿಲ್ಲ. ”

“ಆಯಿತು, ಅದೊಂದು ಬಾಕಿ ಇದೆ. ಇಡೀ ಮನೆಯಲ್ಲಿ ಕೆಲಸ ಅಂತ ಮಾಡುವುದು ನಾನೊಬ್ಬಳೇ. ನನ್ನ ಒಬ್ಬಳ ಸಂಪಾದನೆಯಿಂದ ನಿಮ್ಮೆಲ್ಲರ ಹೊಟ್ಟೆ ತುಂಬಬೇಕು. ಅದರ ಜೊತೆ ಇದೊಂದು ಕೇಡು,” ಎಂದಳು.  

ಅಮ್ಮನೂ ಮಗನನ್ನು ಕೂಗುತ್ತ ದೊಡ್ಡ ಮನೆಯಲ್ಲಿ ನಡೆದಳು.

ಇವರ ಗದ್ದಲ ಕೇಳಿ ಅಪ್ಪ ಮತ್ತು ತಂಗಿಯೂ ಬಂದರು. ಎಲ್ಲರೂ ಬೇರೆ ಬೇರೆ ದಿಕ್ಕಿನಲ್ಲಿ ಗಂಡನನ್ನು ಹುಡುಕತೊಡಗಿದರು.

ಅಪ್ಪ ಕೂಗಿದರು, “ಹಿತ್ತಲ ಬಾಗಿಲು ತೆರೆದಿದೆ!” ಎಂದು ಹಿತ್ತಲಿನತ್ತ ಓಡಿದರು.

ಎಲ್ಲರೂ ಹಿತ್ತಲಿಗೆ ಹೋದರು.

“ಬಹುಷಃ ಸುರಂಗದ ಒಳಗೆ ಹೋಗಿದ್ದಾನೆ ಅನಿಸುತ್ತೆ, ಹಾಳಾದವನು” ಎಂದು ಮಗನನ್ನು ಬಯ್ದರು. ಇವಳಿಗೆ ಈಗ ಸಂಶಯವೇ ಇರಲಿಲ್ಲ. ಓಡುತ್ತ ಸುರಂಗದ ಬಳಿಗೆ ಓಡಿದಳು. ಸುರಂಗದ ಬಾಗಿಲು ತೆರೆದಿತ್ತು. ಇಣುಕಿ ನೋಡಿದರೆ ಏನೂ ಕಾಣುತ್ತಿರಲಿಲ್ಲ. ಜೋರಾಗಿ ಹೆಸರು ಹಿಡಿದು ಕೂಗಿದಳು. ಯಾವ ಉತ್ತರವೂ ಬರಲಿಲ್ಲ. ಫೋನಿನಲ್ಲಿ ಟಾರ್ಚನ್ನು ಆನ್ ಮಾಡಿದಳು. ಆ ಪುಟ್ಟ ಬೆಳಕಿನಲ್ಲಿ ಸುರಂಗದ ಅಡಿಯಲ್ಲಿ ಗಲೀಜು ನೀರಿನಲ್ಲಿ ಇಬ್ಬರು ಕಾಣಿಸಿದರು.

ಗಂಡನ ಹೆಸರನ್ನು ಜೋರಾಗಿ ಕಿರುಚಿದಳು. ಯಾವ ಉತ್ತರವೂ ಬರಲಿಲ್ಲ. ಚಿಕ್ಕಪ್ಪನ ಮಗನ ಹೆಸರನ್ನೂ ಕೂಗಿದಳು. ಯಾವ ಉತ್ತರವೂ ಬರಲಿಲ್ಲ.

ಇನ್ನೂ ಜೋರಾಗಿ ಕಿರುಚಿದಳು, “ಏನು ಕಿವಿ ಕೇಳುವುದಿಲ್ಲವೇ? ನನಗೆ ಕಲಸಕ್ಕೆ ತಡವಾಗುತ್ತಿದೆ. ಈ ಸುರಂಗದ ಕೆಲಸ ಮಗಳನ್ನು ಶಾಲೆಗೆ ಬಿಟ್ಟು ಬಂದ ಮೇಲೆ ಮಾಡಿದರಾಗುವುದಿಲ್ಲವೇ?”

ಅವಳ ಕಿರುಚಾಟ ಕೇಳಿ ತಂಗಿ ಓಡಿ ಸುರಂಗದ ಹತ್ತಿರ ಬಂದಳು. ಸುರಂಗದ ಒಳಗೆ ಕೈ ಮಾಡಿ ಅವಳೂ ಫೋನಿನ ಟಾರ್ಚನ್ನು ಆನ್ ಮಾಡಿದಳು. ಎರಡು ಟಾರ್ಚುಗಳ ಬೆಳಕಿನಲ್ಲಿ ಸುರಂಗ ಚೆನ್ನಾಗಿ ಕಾಣುತ್ತಿತ್ತು. ಆ ಇಬ್ಬರೂ ಅಲ್ಲಾಡದೇ ಬಿದ್ದಿದ್ದರು. ಸುತ್ತಲಿನ ನೀರು ಕೆಂಪಾಗಿತ್ತು. ಸಲಿಕೆ, ಗುದ್ದಲಿ, ಹಾರೆಗಳು ರಕ್ತಸಿಕ್ತವಾಗಿದ್ದವು.

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Thursday 23 April 2020

ಕೋವಿಡ್ ಕಾಲದಲ್ಲೊಂದು ಆಶಯ

ಮತ್ತೆ ಮಕ್ಕಳು ಅಜ್ಜ-ಅಜ್ಜಿಯ 
ಕೈಯ ಹಿಡಿದು ಆಡಲಿ 
ದೂರ ಬದುಕುವ ಮನೆಯ ಮಂದಿ 
ಮತ್ತೆ ಭೇಟಿಯ ಮಾಡಲಿ 

ಗೆಳೆಯ ಗೆಳತಿಯರೆಲ್ಲ ಕೂಡಿ 
ಹಾಡಿ ಕುಣಿದು ನಲಿಯಲಿ 
ಬಂಧು ಬಳಗದ ಜಾತ್ರೆಯಲ್ಲಿ 
ಮದುವೆ ಸಂಭ್ರಮ ಜರುಗಲಿ 

ವಿದ್ಯೆವಿನಯವ ಹೇಳಿಕೊಡುವ 
ಶಾಲೆ ಮತ್ತೆ ತೆರೆಯಲಿ 
ಗಾನಸಭೆಗಳು ಸಿನಿಮಂದಿರಗಳು 
ತುಂಬಿ ತುಂಬಿ ತುಳುಕಲಿ 

ಮತ್ತೆ ಮುಖದಲ್ಲಿ ನಗುವು ಮೂಡಲಿ 
ಮತ್ತೆ ಮೂಡಣ ಮೊಳಗಲಿ 
ಮತ್ತೆ ಮನದಲ್ಲಿ ಶಾಂತಿ ಕಾಣಲಿ 
ಮತ್ತೆ ಪಡುವಣ ಪುಟಿಯಲಿ

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Friday 17 April 2020

Video: All Izz Well


18 girls in different 10 towns in the UK, one fun song, during COVID-19 lockdown

Thursday 30 January 2020

ಫೇಸ್ಬು‍ಕ್ ಗೀತೆ

ಜೈ ಇಂಟರ್ ನೆಟ್ಟಿನ ತನುಜಾತೆ 
ಜಯ ಹೇ ಫೇಸ್‍ಬುಕ್ಕಿನ ಖಾತೆ 

ಜಯ ನೂರಾರ್ ಸುಳ್ ಫ್ರೆಂಡ್ಸ್ ಗಳ ನಾಡೆ 
ಜಯ ಹೇ ಸ್ಟೇಟಸ್‍ಗಳ ಬೀಡೆ 
ಸೋಷ್ಯಲ್ ನೆಟ್‍ವರ್ಕಿನ ಮಾರಾಣಿಯೇ 
ಹೊನ್ನಿನ ಶೂಲ ಕಮೆಂಟಿನ ಖಣಿಯೇ 
ಗೂಗಲು ಯಾಹೂsಗಳು ಅವತರಿಸಿದ 
ಅಂತರಜಾಲದ ತನುಜಾತೆ 
ಜಯ ಹೇ ಫೇಸ್‍ಬುಕ್ಕಿನ ಖಾತೆ 

ಪಾರ್ಟಿಯ ಟ್ರಿಪ್ಪಿನ ಅಲ್ಬಂ ಹಾಕು 
ಹೊಸ ಹೇರ್ ಡ್ರೆಸ್ಸಿನ ಸೆಲ್ಫೀ ನಾಕು 
ಲೈಕು ಇಮೋಜೀ ನೂರಾ 
ಕಮೆಂಟುಗಳು ಭರಪೂರಾ 
ಡಿಸ್ಲೈಕ್ ಎಂಬ ಬಟನ್ನೇ ಇಲ್ಲದ 
ಹೊಗಳು ಭಟ್ಟರ ನಿಜ ಭ್ರಾತೆ 
ಜಯ ಹೇ ಫೇಸ್‍ಬುಕ್ಕಿನ ಖಾತೆ 

ಯಾರದೋ ನಾಯಿಯ ಬೆಕ್ಕಿನ ವಿಡಿಯೋ 
ಯಾರ ಮನೆಯೊಳಗದೇನ್ನಡೆದಿದೆಯೋ 
ಸ್ಕ್ರೋಲು ಮಾಡುತ್ತ ಲೈಕು 
ಕೆಲವು ಕೊಮೆಂಟನು ಹಾಕು 
ವೇಳೆಯನೆಲ್ಲವ ತಿಂದು ತೇಗಿರಲು 
ಅಡುಗೆಗೆ ಇಡಲೂ ಮರೆತೆ 
ಜಯ ಹೇ ಫೇಸ್‍ಬುಕ್ಕಿನ ಖಾತೆ 

ಫಾರ್ಮ್‍ವಿಲ್ಲಾವನು ಆಡುತ ಕೂತೆ 
ಮಕ್ಕಳ ಕೈಗೆ ಐಪ್ಯಾಡ್ ಕೊಟ್ಟೆ 
ಪ್ರೊಫೈಲಿಗೆ ನೂರಾರ್ ಹೊಗಳಿಕೆ 
ಇರೆ ಗಂಡನ ಹೊಗಳಿಕೆ ಬೇಕೆ? 
ಗಾಸಿಪ್ ಮಾಡಲು ಮೆಸೆಂಜರಿರಲು 
ನನಗಿನ್ನೇತರ ಕೊರತೆ? 
ಜಯ ಹೇ ಫೇಸ್‍ಬುಕ್ಕಿನ ಖಾತೆ 

ಸರ್ವಜನಾಂಗದ ವರ್ಚುವಲ್ ತೋಟ 
ನಿಜ ಜೀವನವ ಮರೆಸುವ ನೋಟ 
ಏನನು ಮಾಡುವ ಮೊದಲು 
ಬೇಕು ಫೇಸ್ಬುಕ್ಕಿನ ವಾಲು 
ಮೀನ್ ಮಾರ್ಕೆಟ್ಟನು ಹೋಲುವ ಧಾಮ 
ಸಮಯ ಕೊಲ್ಲು ಬಾ ಆರಾಮ 
ಫೇಸ್-ಬುಕ್ ಎನೆ ಕುಣಿದಾಡುವ ಮನಸು 
ಸ್ಮಾರ್ಟ್ ಫೋನಿಲ್ಲದ ಬಾಳದು ಹೊಲಸು 
ಜೈ ಅಂತರಜಾಲದ ತನುಜಾತೆ 
ಜಯಹೇ ಫೇಸ್‍ಬುಕ್ಕಿನ ಖಾತೆ

(ಒಂದು ಅಣಕುವಾಡು)

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)


(ಯಾರ್ಕ್-ಶೈರ್ ಕನ್ನಡ ಬಳಗದ `ಸಂಕ್ರಾಂತಿ`ಯಲ್ಲಿ ಓದಿದ್ದು)

Thursday 16 January 2020

ಸಿನೆಮಾ: ಕನ್ನಡ: ಅವನೇ ಶ್ರೀಮನ್ನಾರಾಯಣ

ಬುದ್ಧಿವಂತಿಕೆಗೆ ಮಿತಿ ಇದೆ, ಆದರೆ ದಡ್ಡತನಕ್ಕೆ ಮಿತಿಯೇ ಇಲ್ಲವೇ, ಶ್ರೀಮನ್ನಾರಾಯಣ!



‘Two things are infinite: the universe and human stupidity; and I am not sure about the Universe,’ ಎಂದು ಐನ್‍ಸ್ಟೀನ್ ಹೇಳಿದ್ದಾನೆ. ಮನುಷ್ಯನಲ್ಲಿ ಬುದ್ಧಿವಂತಿಕೆಯ ಜೊತೆ ಈ ಸ್ಟುಪಿಡಿಟಿ ಇಲ್ಲದಿದ್ದರೆ ಅಂಥಾ ಭಾರಿ ಗಾತ್ರದ ವಿಮಾನವನ್ನು ಹಗುರವಾದ ಗಾಳಿಯಲ್ಲಿ ಹಾರಿಸುವ ಸಾಹಸ ಮಾಡುತ್ತಿದ್ದನೇ, ಅಗಾಧ ಸಮುದ್ರದಲ್ಲಿ ತಿಮಿಂಗಿಲಿಗಿಂತಲೂ ದೊಡ್ಡದಾದ ಹಡುಗಿನಲ್ಲಿ ಇನ್ನೊಂದು ಖಂಡಕ್ಕೆ ದಾಟುವ ಧೈರ್ಯ ಮಾಡುತ್ತಿದ್ದನೇ? ಬುದ್ಧಿವಂತ ಜನರ ನಡುವೆ ಇಂಥಹ ಕೆಲವು ಸ್ಟುಪಿಡ್ ಜನರಿರುವುದರಿಂದಲೇ,  ಅವರ ಸ್ಟುಪಿಡಿಟಿಗೆ ಯಾವ ಮೇರೆ ಇಲ್ಲದಿರುವುದರಿಂದಲೇ, ನಾವಿವತ್ತು ಸ್ಮಾರ್ಟ್ ಫೋನುಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಪಂಚವನ್ನೇ ಸ್ಕ್ರೋಲ್ ಮಾಡುತ್ತಿದ್ದೇವೆ, ಹಾಲಿಡೇಗಾಗಿ ಬಾಹ್ಯಾಕಾಶಕ್ಕೆ ಹೋಗಲು ವೇಟಿಂಗ್ ಲಿಸ್ಟಿನಲ್ಲಿ ಸಾಲು ಹಚ್ಚಿದ್ದೇವೆ.

ಹದಿನೆಂಟನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನವನ್ನು ಒಂದೇ ಕಾಲದಲ್ಲಿ ತಂದಿಟ್ಟರೆ ಹೇಗಿಬಹುದು? ಬಿಜಾಪುರದಂಥ ಬರಡು ನೆಲದಲ್ಲಿ ಕೌಬಾಯ್‍ಗಳಿದ್ದರೆ ಏನಾಗಬಹುದು? ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಪಾಳಯಗಾರರ ರಾಜ್ಯ ನಡೆಯುತ್ತಿದ್ದರೆ ಜನರ ಗತಿ  ಏನಾಗಬಹುದು? ಇಂಥ ಸ್ಟುಪಿಡ್ ಪ್ರಶ್ನೆಗಳು ಬುದ್ಧಿವಂತರಿಗೆ ಬರಲು ಸಾಧ್ಯವೇ ಇಲ್ಲ, ಮಿತಿಯಿಲ್ಲದ ಸ್ಟುಪಿಡಿಟಿಯಿಂದ ಮಾತ್ರ ಸಾಧ್ಯ. ಇಂಥ ವಾತಾವರಣವನ್ನು ಸೃಷ್ಟಿಸಿಕೊಂಡು, ಪೌರಾಣಿಕ-ಇಂಡೀ-ಬಾಲಿವುಡ್-ಹಾಲಿವುಡ್‍ಗಳನ್ನು ಸೇರಿಸಿ, ಮನರಂಜನೆಯನ್ನೇ ಧ್ಯೇಯವಾಗಿಟ್ಟುಕೊಂಡು ಸಿನೆಮಾ ಮಾಡಿದರೆ ಹೇಗಿರಬಹುದು? ಇದಕ್ಕೆಲ್ಲ ಉತ್ತರ, ‘ಅವನೇ ಶ್ರೀಮನ್ನಾರಾಯಣ‘.

ಅಕಿರಾ ಕುರಸೋವಾ ಅವರ ‘ರೋಶೋಮಾನ್‘ದಿಂದ ಪ್ರೇರಿತರಾಗಿ, ತಮ್ಮ ಮೊದಲ ‘ಉಳಿದವರು ಕಂಡಂತೆ’ ಸಿನೆಮಾದಿಂದಲೇ ಅದಮ್ಯ ಪ್ರತಿಭೆಯನ್ನು ತೋರಿಸಿದ ರಕ್ಷಿತ್, ‘ಲೂಸಿಯಾ’ದ ಪವನ್ ಕುಮಾರ್ ತರಹ ಪ್ರಾಯೋಗಿಕ ಚಪಲತೆಯ ನಿರ್ದೇಶಕನಾಗಿ ಉಳಿದುಬಿಡಲಿಲ್ಲ. ಸಿನೆಮಾಗಳಲ್ಲಿ ನಟಿಸಿದರು. ತಮ್ಮ ಮೊದಲ ಸಿನೆಮಾದ ಪ್ರತಿಭಾವಂತ ಜನರನ್ನು ಸೇರಿಸಿ ಮುಖ್ಯವಾಹಿನಿ ಸಿನೆಮಾಕ್ಕೇ ಕೈಹಾಕಿದರು. ’ಉಳಿದವರು ಕಂಡಂತೆ’ ಬಾಕ್ಸ್ ಆಫೀಸಿನಲ್ಲಿ ಮಖಾಡೆ ಮಲಗಿದರೆ, ’ಕಿರಿಕ್ ಪಾರ್ಟಿ’ ಮನೆ ಮಾತಾಯಿತು. ’ಕಿರಿಕ್ ಪಾರ್ಟಿ’ ಮುಖ್ಯವಾಹಿನಿಯ ಸಿನೆಮಾ ಆದರೂ ಹೊಸತನವಿತ್ತು, ಹೊಸ ಸಂಗೀತವಿತ್ತು, ಹರೆಯದ ಪ್ರೇಮದ ಕತೆಯಾದರೂ, ಹಿಂದೆ ಬಂದ ಮುಖ್ಯವಾಹಿನಿಯ ಸಿನೆಮಾಗಳಿಂದ ಬೇರೆ ತರಹದ ಸಿನೆಮಾ ಮಾಡಿ ಗೆದ್ದಿತ್ತು. ’ಕಿರಿಕ್ ಪಾರ್ಟಿ’ ಮಾಡಿ ಮೂರು ವರ್ಷದ ನಂತರ, ದೊಡ್ಡ ಬಜೆಟ್ಟಿನಲ್ಲಿ ’ಶ್ರೀಮನ್ನಾರಾಯಣ’ ಬಿಡುಗಡೆ ಮಾಡಿದಾಗ ಕುತೂಹಲ ಮೂಡಿದ್ದು ಸಹಜವೇ.

ಈ ಸಿನೆಮಾವನ್ನು ಕಿಡಿಗೇಡಿ ಪೋಲಿಸ್ `ಶ್ರೀಮನ್ನಾರಾಯಣನ ಆವಾಂತರಗಳು` ಎಂದಾದರೂ ನೋಡಬಹುದು. ಫಜೀತಿಯಲ್ಲಿ ಸಿಕ್ಕಿಬಿದ್ದು ಇನ್ನೇನು ಕತೆ ಮುಗಿಯಿತು ಎನ್ನುವಾಗ ಅದೇನೋ ಉಪಾಯ ಮಾಡಿ ಪಾರಾಗುವ `ಶ್ರೀಮನ್ನಾರಾಯಣನ ಸಾಹಸಗಳು` ಎಂದಾದರೂ ನೋಡಬಹುದು, ಸಾಮಾನ್ಯ ಮನುಷ್ಯನೊಬ್ಬ ಹೇಗೆ ’ಶ್ರೀಮನ್ನಾರಾಯಣ’ನಾದ ಎಂತಲೂ ನೋಡಬಹುದು.

`ಒಂದಾನೊಂದು ಕಾಲ್ಪನಿಕ ಕಾಲದಲ್ಲಿ ’ಅಮರಾವತಿ’ ಎಂಬ ಕಾಲ್ಪನಿಕ ಊರು,` ಎಂದು ಶುರುವಾಗುವ ಸಿನೆಮಾ ಚಂದಾಮಾಮಾ ಕತೆಯಂತೆಯೇ ಇದೆ. ಲೂಟಿ ಮಾಡಿದ ನಿಧಿ ಹುಡುಕುವ ಅದೇ ಪುರಾತನ ಕತೆಯನ್ನು ಹೇಳಿರುವ ರೀತಿ ಮಾತ್ರ ಹೊಸದು. ಹೀಗೂ ಸಿನೆಮಾ ಮಾಡಲು ಸಾಧ್ಯವೇ ಎಂದು ಸಿನೆಮಾ ಮಾಡುವ ಮಂದಿಯೂ ಆಶ್ಚರ್ಯ ಪಡುವಂತೆ ಸಿನೆಮಾ ಮಾಡಿದ್ದಾರೆ. ಹಲವಾರು ಉಪಕತೆಗಳನ್ನು ಸೇರಿಸುತ್ತ, ಕೂರ್ಮಾವತಾರದ ಪುರಾಣ ಕತೆಯನ್ನೂ ತೋರಿಸುತ್ತ ನಿಜ ಮನುಷ್ಯರ ಫ್ಯಾಂಟಸಿ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ಲಘುಹಾಸ್ಯವನ್ನು ಚಿತ್ರದುದ್ದಕ್ಕೂ ಲೀಲಾಜಾಲವಾಗಿ ತೋರಿಸಿದ್ದಾರೆ (ಎಲ್ಲಿಯೂ ಹಾಸ್ಯವನ್ನು ತುರುಕಿದಂತೆ ಅನಿಸುವುದೇ ಇಲ್ಲ) ಒಂದೇ ಸಿನೆಮಾದಲ್ಲಿ ಭಕ್ತ ಪ್ರಹ್ಲಾದPirates of the CaribbeanNo Country for Old Manಕೆಜಿಎಫ್‍ಗಳನ್ನು ಕಲಿಸಿ ಬಡಿಸಿದ್ದಾರೆ. ಕೆಲವರಿಗೆ ಅದು ರುಚಿರುಚಿಯಾದ ಚಿತ್ರಾನ್ನ, ಇನ್ನು ಕೆಲವರಿಗೆ ವಿಚಿತ್ರಾನ್ನ.

ಚಿತ್ರಾನ್ನವೇ ಆಗಲಿ, ವಿಚಿತ್ರಾನ್ನವೇ ಆಗಲಿ, ಅದು ಅವರವರ ಬಾಯ್‍ರುಚಿ. ಒಂದೇ ಸಿನೆಮಾದಲ್ಲಿ ನಾಟಕ, ಕೋಟೆ, ರಾಜವಂಶ, ರೇಬಾನ್ ಕನ್ನಡಕ, ಮೋಟರ್ ಬೈಕು (ರಾತ್ರಿ ಕಗ್ಗತ್ತಿನಲ್ಲಿ ಕಪ್ಪು ಕನ್ನಡಕ ಹಾಕಿಕೊಂಡು ಶ್ರೀಮನ್ನಾರಾಯಣನ ಸವಾರಿ ಹೋಗುತ್ತದೆ!), ಹಳ್ಳಿಯವರ ಬಾಯಿಂದ ಪುಂಖಾನುಪುಂಖವಾಗಿ ಇಂಗ್ಲೀಷ್ ಸೇರಿಸಿದ ಕನ್ನಡ ಮಾತುಗಳು ಜನರಿಗೆ ಗೊಂದಲವಾದರೆ ಅಚ್ಚರಿಯಿಲ್ಲ, ಅಬ್ಸರ್ಡ್ ಅನ್ನಿಸಿ ಸಿನೆಮಾ ಇಷ್ಟವಾಗದಿದ್ದರೆ ಅಚ್ಚರಿಯಿಲ್ಲ. ಸಿನೆಮಾದಲ್ಲೇ ಹೇಳಿರುವಂತೆ, ’ಬುದ್ಧಿವಂತಿಕೆಗೆ ಮಿತಿ ಇದೆ, ಆದರೆ ದಡ್ಡತನಕ್ಕೆ ಮಿತಿಯೇ ಇಲ್ಲ.’ 

ಏನೇ ಆದರೂ ಚಿತ್ರತಂಡದ ಪರಿಶ್ರಮ ಮಾತ್ರ ಶ್ಲಾಘನೀಯ. ಕಮರ್ಶಿಯಲ್ ಸಿನೆಮಾದ ಅಂಶಗಳನ್ನು ಮತ್ತೊಮ್ಮೆ ಧಿಕ್ಕರಿಸಿ ಪ್ರೇಮಕತೆಯಲ್ಲದ ಸಿನೆಮಾ ಮಾಡಿದ್ದಾರೆ, ಅದೂ ಕನ್ನಡದಲ್ಲಿ. ಕನ್ನಡ ಸಿನೆಮಾದಲ್ಲಿ ಒಂದು ಕಲ್ಟ್ ಕ್ಲಾಸಿಕ್ ಆಗುವ ಎಲ್ಲ ಲಕ್ಷಣಗಳೂ ಈ ಚಿತ್ರಕ್ಕಿದೆ. ಸಿನೆಮಾ ಗೆದ್ದಿದೆಯಂತೆ (ಹಾಗಾಗಿ ಕನ್ನಡಿಗರು ಕನ್ನಡ ಸಿನೆಮಾವನ್ನು ನೋಡುವುದಿಲ್ಲ ಎನ್ನುವ ಗಾದೆ ಸ್ವಲ್ಪವಾದರೂ ಸುಳ್ಳಾಗಿದೆ), ಹಾಗಾಗಿ ರಕ್ಶಿತ್ ಶೆಟ್ಟಿ ತಂಡದಿಂದ ಇನ್ನೂ ಚಂದದ ಹೊಸ ಪರಿಭಾಷೆಯ ಸಿನೆಮಾಗಳನ್ನು ನಿರೀಕ್ಷಿಸಬಹುದು. 

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)