Tuesday 27 October 2020

ಉನ್ಮತ್ತ ರಾತ್ರಿಗಳು

ಉನ್ಮತ್ತ ರಾತ್ರಿಗಳು - ಹುಚ್ಚೆದ್ದ ರಾತ್ರಿಗಳು! 
ಇದ್ದಿದ್ದರೆ ನಾ ನಿನ್ನ ಬಳಿ
ಉನ್ಮತ್ತರಾತ್ರಿಗಳಿರಲೇಬೇಕು
ಭೋಗದುನ್ಮಾದದುಂಬಳಿ!

ವ್ಯರ್ಥವೀ ಗಾಳಿ
ಹೃದಯ ದಡ ಸೇರಿದೆ
ಬೇಡಿನ್ನು ಕೈವಾರ
ಭೂಪಟವ ಹರಿದೆ

ಹುಟ್ಟು ಹಾಕುತ್ತ ಪ್ರೇಮ-
ಆಹಾ-ಶರಧಿಯಲ್ಲಿ
ತಂಗುವೆನೀ ರಾತ್ರಿ
ನಿನ್ನಲ್ಲಿ

Emily Dickinson ಬರೆದ 'Wild Nights' ಕವನದ ಭಾವಾನುವಾದ

Friday 23 October 2020

ಪುಸ್ತಕ: ವಸುಧೇಂದ್ರ: ತೇಜೋ ತುಂಗಭದ್ರಾ

ಪೀಠಿಕೆ:

ತುಂಬ ದಿನಗಳಾದ ಮೇಲೆ ಕನ್ನಡದಲ್ಲಿ ಪೂರ್ಣಪ್ರಮಾಣದ ಕಾದಂಬರಿಯನ್ನು ಓದಿದೆ. ಎಸ್ ಎಲ್ ಭೈರಪ್ಪನವರ `ಉತ್ತರಾಯಣ`ದ ನಂತರ ಓದಿದ ಕಾದಂಬರಿ ಇದು. ಇತ್ತೀಚಿಗೆ ನಾನು ಕನ್ನಡದಲ್ಲಿ ಹೆಚ್ಚಾಗಿ ಓದುವ ಲೇಖಕ ಜೋಗಿ. ಅವರದು ನೀಳ್ಗತೆಗಳು ಅಥವಾ ಕಿರುಕಾದಂಬರಿಗಳು.

ಇ-ಬುಕ್ಕುಗಳಲ್ಲಿ ಈಗ ಕನ್ನಡ ಪುಸ್ತಕಗಳನ್ನು ಓದಬಹುದಾದರೂ, ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಪೆನ್ನು ಹಿಡಿದುಕೊಂಡು, ಗೆರೆ ಎಳೆಯುತ್ತ ಓದುವ ಮಜವೇ ಬೇರೆ (ಅದು ಈಗಿನ ತಲೆಮಾರಿಗೆ ವಿಚಿತ್ರ ಅನ್ನಿಸಿದರೂ ಅಚ್ಚರಿಯಿಲ್ಲ). 

`ವಿವಿಡ್ಲಿಪಿ`ಯ ಸತ್ಯಪ್ರಮೋದವರು ಈಗ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ, ಅಷ್ಟೇ ಅಲ್ಲ, ಅಂಚೆಯ ಮೂಲಕ ಕಳಿಸುತ್ತಾರೆ ಕೂಡ. `ವಸುಧೇಂದ್ರ` ಅವರ ಇತ್ತೀಚಿನ `ತೇಜೋ ತುಂಗಭದ್ರಾ`(ತೇತುಂ) ಕಾದಂಬರಿಯನ್ನು ಅಂಚೆಯಲ್ಲಿ ನನಗೆ ತಲುಪಿಸಿದರು.

೪೫೦ ಪುಟಗಳ ಕಾದಂಬರಿಯದು. ಇಂಗ್ಲಿಷಿನಲ್ಲಿ ಬರುವ ಕಾದಂಬರಿಗಳಿಗೆ ಹೋಲಿಸಿದರೆ, ಅಂಥ ದೊಡ್ಡ ಕಾದಂಬರಿ ಏನಲ್ಲ. ಆದರೆ ಕನ್ನಡದ ಮಟ್ಟಿಗೆ ಇದು ದೊಡ್ಡ ಕಾದಂಬರಿಯೇ. ಇತ್ತೀಚಿಗಂತೂ ಇಂಥ ದೊಡ್ಡ ಕಾದಂಬರಿಗಳನ್ನು ಕನ್ನಡದಲ್ಲಿ ಬರೆಯುವವರು ಕಡಿಮೆಯೇ ಎಂದು ನನ್ನ ಅನಿಸಿಕೆ.

ಕನ್ನಡಿಗರು ಕನ್ನಡದಲ್ಲಿ ಓದುವುದು ಕಡಿಮೆ, ಅದರಲ್ಲೂ ಕನ್ನಡ ಪುಸ್ತಕಗಳನ್ನು ಕಾದಂಬರಿಗಳನ್ನು ಕೊಂಡುಕೊಂಡು ಓದುವುದು ಇನ್ನೂ ಕಡಿಮೆಯೇ. ಇಂಗ್ಲೆಂಡಿನಂತಹ ಚಿಕ್ಕ ದೇಶದಲ್ಲೇ ಪ್ರಸಿದ್ಧ ಲೇಖಕರ ಲಕ್ಷಾಂತರ ಪ್ರತಿಗಳು ಖರ್ಚಾಗುತ್ತವೆ. ಕನ್ನಡದಲ್ಲಿ ಪ್ರಸಿದ್ಧ ಲೇಖಕರ ಕಾದಂಬರಿಗಳು ಸಾವಿರಗಳಲ್ಲಿ ಮಾರಾಟವಾದರೂ ಇಂಗ್ಲಿಷ್ ಮಾರುಕಟ್ಟಗೆ ಹೋಲಿಸಿದರೆ ಎಲ್ಲಿ ಸಮ? ಅದಕ್ಕೆಂದೇ ಬರವಣಿಗೆ ಎನ್ನುವುದು ಕನ್ನಡದಲ್ಲಿ ವೃತ್ತಿ ಆಗಲಾರದು.  ಇಂಥಹ ಸಂದರ್ಭದಲ್ಲಿ ವಸುಧೇಂದ್ರ ಅವರು ತಮ್ಮ ಸ್ವಂತ ವೃತ್ತಿಯನ್ನು ತೊರೆದು, ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದು, ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು, ಇ-ಪುಸ್ತಕಗಳಲ್ಲಿ ಲಭ್ಯವಾಗುವಂತೆ ಮಾಡಿಕೊಳ್ಳುವುದು, ಚೆನ್ನಾಗಿ ಬರೆಯುತ್ತಿರುವ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವುದು – ನನಗೆ ಆನಂದ ಮತ್ತು ಆಶ್ಚರ್ಯಗಳನ್ನು ಉಂಟುಮಾಡುತ್ತದೆ.

ಈಗಾಗಲೇ ಸಾಕಷ್ಟು ಪ್ರಬಂಧಗಳನ್ನು ಕಥೆಗಳನ್ನು ಚಿಕ್ಕ ಕಾದಂಬರಿಗಳನ್ನು ಬರೆದು, ಸಾಕಷ್ಟು ಪುಸ್ತಕಗಳ ಪ್ರಕಾಶಕರಾಗಿ, ಕನ್ನಡ ಸಾಹಿತ್ಯದಲ್ಲಿ ವಸುಧೇಂದ್ರ ಅವರದು ಈಗಾಗಲೇ ದೊಡ್ಡ ಹೆಸರು. ಅನನ್ಯ ರೀತಿಯ ಕಥೆಗಳ `ಮೋಹನಸ್ವಾಮಿ`ಯನ್ನು ಬರೆದು ಕನ್ನಡ ಸಾಹಿತ್ಯದಲ್ಲಿ ಹೊಸ ಬೆರಗನ್ನು ಮೂಡಿಸಿದವರು. ಅವರ ಪ್ರತಿ ಪುಸ್ತಕವನ್ನು ನಾನು ಕಾತರದಿಂದ ಆಸಕ್ತಿಯಿಂದ ಕಾಯುತ್ತಿರುತ್ತೇನೆ.

ತೇತುಂ ಕಾದಂಬರಿಯ ಪರಿಚಯ:

ಈ ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳನ್ನು ವಿಚಾರಗಳನ್ನು ಬರೆಯುವ ಮುನ್ನ ಈ ಕಾದಂಬರಿಯನ್ನು ಇನ್ನೂ ಓದದವರಿಗೆ ಒಂದು ಚಿಕ್ಕ ಪರಿಚಯ ಪರಿಚಯ ಮಾಡಿಕೊಳ್ಳಬೇಕಷ್ಟೇ. ನೀವು ಕಾದಂಬರಿಯನ್ನು ಓದಿದವರಾಗಿದ್ದರೆ ಈ ವಿಭಾಗವನ್ನು ಎಗರಿಸಿ ಮುಂದುವರಿಸಬಹುದು.

ಈ ಕಾದಂಬರಿಯ ಕಾಲಾವಧಿ ೧೪೯೨ರಿಂದ ೧೫೧೮. ಕಥೆ ನಡೆಯುವ ಸ್ಥಳಗಳು ಪೂರ್ಚುಗಲ್ಲಿನ ಲಿಸ್ಬನ್ ನಗರ, ವಿಜಯನಗರದ ತೆಂಬಕಪುರ ಮತ್ತು ಗೋವಾ.

ನಾವು ಶಾಲೆಯಲ್ಲಿ ಓದಿದ ಇತಿಹಾಸದ ಪುಟಗಳ ಪೋರ್ಚುಗಲ್ಲಿನ ನಾವಿಕ ಅಲ್ಬುಕರ್ಕ್, ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯ ಮತ್ತು ಬಿಜಾಪುರದ ಸುಲ್ತಾನ ಆದಿಲ್ ಶಾ ಈ ಕಾದಂಬರಿಯ ಐತಿಹಾಸಿಕ ಪಾತ್ರಗಳು. ಆದರೆ ಇವರಾರೂ ಈ ಕಾದಂಬರಿಯ ನಾಯಕರಲ್ಲ, ಪ್ರಮುಖ ಪಾತ್ರಗಳೂ ಅಲ್ಲ,

ಅತ್ತ ಯುರೋಪಿನಲ್ಲಿ ಪೋರ್ಚುಗಲ್ ದೇಶದ ಲಿಸ್ಬನ್ ಎನ್ನುವ ನಗರದಲ್ಲಿ ಗೇಬ್ರಿಯಲ್ ಎಂಬ ಕ್ರಿಶ್ಚಿಯನ್ ಹುಡುಗನಿಗೆ ಬೆಲ್ಲಾ ಎಂಬ ಯಹೂದಿ ಹುಡುಗಿಯ ಮೇಲೆ ಪ್ರೇಮ ಅಂಕುರಿಸುತ್ತದೆ. ಬೆಲ್ಲಾಳನ್ನು ಮದುವೆಯಾಗಬೇಕಾದರೆ ಸಾಕಷ್ಟು ಹಣ ಮಾಡಬೇಕು ಎನ್ನುವ ಆಸೆಯಿಂದ ಗೇಬ್ರಿಯಲ್ ಅಲ್ಬುಕರ್ಕನ ನಾವೆಯನ್ನು ಏರಿ ಭಾರತಕ್ಕೆ ಹೊರಟು ನಿಲ್ಲುತ್ತಾನೆ.

ಇತ್ತ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ತೆಂಬಿಕಪುರ ಎನ್ನುವ ಪಟ್ಟಣದಲ್ಲಿ ಹಂಪಮ್ಮ ಎಂಬ ಚಲುವೆಯ ಮೇಲೆ ಹೊಯ್ಸಳದ ಕಡೆಯಿಂದ ಬಂದ ಕೇಶವನೆಂಬ ಶಿಲ್ಪಿಯ ಕಣ್ಣು ಬೀಳುತ್ತದೆ.

ಎತ್ತಣ ಪೋರ್ಚುಗಲ್ ಎತ್ತಣ ತೆಂಬಕಪುರ, ಎತ್ತಣ ಗೇಬ್ರಿಯಲ್ ಎತ್ತಣ ಹಂಪಮ್ಮ, ಎತ್ತಣ ತೇಜೋ ನದಿ, ಎತ್ತಣ ತುಂಗೆ ಭದ್ರಾ ನದಿ! ಎತ್ತಣದ್ದೆತ್ತ ಸಂಬಂಧವಯ್ಯ!! ಈ ಸಂಬಂಧಗಳೇ ಈ ಕಾದಂಬರಿಯ ವಸ್ತು.

ತೇಜೋನದಿಯಿಂದ ತುಂಗಭದ್ರೆಯವರೆಗೆ:

ಇದು ರಾಜಕೀಯ ಕಾದಂಬರಿಯಲ್ಲ, ಹಾಗೆಂದು ಇದರಲ್ಲಿ ರಾಜಕಾರಣವಿಲ್ಲ ಎಂದಲ್ಲ. ರಾಜಕೀಯಕ್ಕಿಂತ ಹೆಚ್ಚಾಗಿ ಇದು ಸಾಮಾಜಿಕ ಕಾದಂಬರಿ. ಈ ಕಾದಂಬರಿಯನ್ನು ಬರೆಯುವ ಹಿಂದೆ ವಸುಧೇಂದ್ರ ಅವರು ಮಾಡಿರುವ ಶ್ರಮ, ಓದು, ಟಿಪ್ಪಣೆ ಅಪಾರ. ಹಾಗೆಯೇ ಒಮ್ಮೆ ಕಾದಂಬರಿಯನ್ನು ಬರೆಯಲು ಆರಂಭಿಸಿದ ಮೇಲೆ ಬೆಂಬಿಡದೇ ಸತತವಾಗಿ ಬರೆದು ಮುಗಿಸಿ ನಂತರ ಅದನ್ನು ತಿದ್ದಿ ತೀಡಿ ಓದುಗನ ಕೈಗೆ ಇಡುವವರೆಗೂ ಸಂಯಮ ಮತ್ತು ಶಿಸ್ತು ಬೇಕಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಕಾಣಸಿಗುವ ವೃತ್ತಿಪರ ಕಾದಂಬರಿಕಾರಂತೆ ಕಾಣುತ್ತಾರೆ ವಸುಧೇಂದ್ರ ಅವರು. ಈ ಕಾದಂಬರಿಯಲ್ಲಿ ಜಾಗತಿಕ ಮಟ್ಟದ ಕಾದಂಬರಿಗಳಲ್ಲಿ ಕಾಣಸಿಗುವ ಬಂಧ ಮತ್ತು ಪರಿಪಕ್ಷತೆ ಇದೆ.

ತೇಜೋ ತುಂಗಭದ್ರಾ ಕಾದಂಬರಿಯಲ್ಲಿ ಎರಡು ಬಂಗಾರದ  ಚಿಕ್ಕ ಮೀನುಗಳಿವೆ. ಪೋರ್ತುಗಲ್ ದೇಶದ ಲಿಸ್ಬನ್ ನಗರದಲ್ಲಿ ಹರಿಯುವ ತೇಜೋ ನದಿಯಲ್ಲಿ ಹುಟ್ಟಿ ಬೆಳೆದ ಈ ಎರಡು ಪುಟ್ಟ ಬಂಗಾರದ ಮೀನುಗಳು ಒಂದು ಚಿಕ್ಕ ಗಾಜಿನ ಮೀನಿನ ತೊಟ್ಟಿಯಲ್ಲಿ ಅಟ್ಲಾಂಟಿಕ್ ಮಹಾಸಾಗರ ದಾಟಿ ಅರಬ್ಬೀ ಸಮುದ್ರವನ್ನು ಮುಟ್ಟಿ ಭಾರತದ ತುಂಗಭದ್ರಾ ನದಿಯನ್ನು ತಲುಪುವ ಸಾಧ್ಯತೆಗಳಲ್ಲಿ ಬರುವ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯದ ಮಹಾಪೂರಗಳು ಈ ಕಾದಂಬರಿಯ ಮುಖ್ಯ ಪ್ರತಿಮೆ.

ಗೇಬ್ರಿಯಲ್ಲಿನ ಕತೆ ಹೇಳುತ್ತ ಲಿಸ್ಬನ್ ನಗರದ ಕ್ರಿಶ್ಚಿಯನ್ ಮತ್ತು ಯೆಹೂದಿ ಧರ್ಮ ವೈಷಮ್ಯವನ್ನು, ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ಹಾಗೆಯೇ ಭಾರತದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಸತಿಪದ್ಧತಿಯಂಥ ಸಂಪ್ರದಾಯಗಳ ಬಗೆಗೂ ಹೃದಯ ಹಿಂಡುವಂತೆ ಬರೆಯುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಸಾಮಾಜಿಕ ದೌರ್ಜನ್ಯಗಳ ಬಗ್ಗೆ, ಜನಾಂಗೀಯ ದ್ವೇಷದ ಬಗ್ಗೆ, ಸ್ತ್ರೀ ದೌರ್ಜನ್ಯದ ಬಗ್ಗೆ ಒಬ್ಬ ಸೂಕ್ಷ್ಮಗ್ರಾಹಿ ವೀಕ್ಷಕನಂತೆ ಬರೆಯುತ್ತಾರೆ.

ಸಾಮಾನ್ಯವಾಗಿ ಕಾದಂಬರಿಯ ಮುಖ್ಯ ಜೀವಾಳ ಅದರ ಚಲನೆ, ಕುತೂಹಲ ಮತ್ತು ಸಸ್ಪೆನ್ಸ್. ಸಹೃದಯ ಓದುಗನಿಗೆ ಓದುವಷ್ಟು ಕಾಲ ತಲೆಯ ನಿರಂತರ ಕೆಲಸದೊಡನೆ ಮನರಂಜನೆಯೂ ದೊರಕಿದರೆ ಅಲ್ಲಿಗೆ ಕಾದಂಬರಿ ಗೆದ್ದಂತೆಯೆ. ತೇತುಂ ಇದನ್ನು ಸಾಧಿಸಿದೆ. ಒಂದು ಬ್ಲಾಕ್‌ಬಸ್ಟರ್ ಸಿನೆಮಾಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಈ ಕಾದಂಬರಿಯಲ್ಲಿವೆ. ನೆಟ್ ಫ್ಲೆಕ್ಸ್ ಅಥವಾ ಅಮೇಜಾನ್ ಪ್ರೈಮ್ ನ ವೆಬ್ ಸೀರಿಸ್ ಮಾಡಬಹುದಾದಷ್ಟು ದೊಡ್ಡ ಕತೆಯಿದೆ, ಕತೆಯಲ್ಲಿ ಕುತೂಹಲಕಾರಿ ತಿರುವುಗಳಿವೆ. ಪ್ರತಿ ಅಧ್ಯಾಯದಲ್ಲೂ ಕಿರುಗತೆಗಳಿವೆ, ಆ ಕಿರುಗತೆಗಳು ಮೂಲಕತೆಗೆ ಪೂರಕವಾಗುತ್ತವೆ.

ಇಡೀ ಕಾದಂಬರಿಯ ಉತ್ತರ ಅಮ್ಮದಕಣ್ಣ ಎನ್ನುವ ವಿಚಿತ್ರ ಹೆಸರಿನಲ್ಲಿದೆ. ಈ ಅಮ್ಮದಕಣ್ಣ ಎಂದರೆ ಏನು, ಯಾರು? ಇವನು ಯಾವ ದೇಶದವನು?  ಯಾವ ಭಾಷೆ ಅವನದು? ಯಾವ ಧರ್ಮ ಅವನದು? ಎನ್ನುವ ಪ್ರಶ್ನೆಗಳ ಉತ್ತರದಲ್ಲಿ ಇಡೀ ಕಾದಂಬರಿಯ ಆಶಯ ಅಡಗಿದೆ. ಎಲ್ಲಿಂದ ಬಂದರೇನು, ಯಾವ ಧರ್ಮದಲ್ಲಿ ಹುಟ್ಟಿದರೇನು, ಯಾವ ಧರ್ಮಕೆ ಬದಲಾದರೇನು, ಎಲ್ಲ ಧರ್ಮಗಳೂ ಶೋಷಣೆಯೇ. ಯಾವ ಭಾಷೆಯ ನುಡಿದರೇನು, ಎಷ್ಟು ಭಾಷೆ ಕಲಿತರೇನು, ಹೃದಯದ ಭಾಷೆ ಒಂದೇ.

ಸತಿ ಸಹಗಮನದ ಪ್ರಸ್ತಾಪ ಕಾದಂಬರಿಯಲ್ಲಿ ಎರಡು ಸಲ ಬರುತ್ತದೆ. ಹಿಂದೂ ಧರ್ಮ ಕಂಡ ಅತ್ಯಂತ ಕರಾಳ ಸಂಪ್ರದಾಯ ಇದೇ ಇರಬೇಕು. ಇದನ್ನು ಭಾರತೀಯ ಮತ್ತು ಪಾಶ್ಚಾತ್ಯ ದೃಷ್ಟಿಕೋನದಿಂದ ಲೇಖಕರು ತೋರಿಸುತ್ತಾರೆ. ಯಾವ ಕಡೆಯಿಂದ ನೋಡಿದರೂ ಇದು ಹೀನಾಯ ಸಾಂಪ್ರದಾಯದಂತೇ ಕಾಣುವುದು ಈ ಕಾದಂಬರಿಯ ಆಶಯವಿರಬೇಕು. ಹಾಗೆಯೇ ವೈಷ್ಣವ ಮತ್ತು ಶೈವರ ನಡುವಿನ ತಿಕ್ಕಾಟವೂ ಪ್ರಸ್ತಾಪವಾಗುತ್ತದೆ. ಅದೇ ರೀತಿ ಯಹೂದಿಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದ್ದ ಕ್ರಿಶ್ಚಿಯನ್ನರು ಧರ್ಮದ ಹೆಸರಿನಲ್ಲಿ ಮಾಡಿದ ಹಿಂಸೆ ಮತ್ತು ಅನ್ಯಾಯಗಳನ್ನೂ ತೆರೆದಿಡುತ್ತಾರೆ.

ಲೆಂಕಸೇವೆಯ ಬಗ್ಗೆ ಈ ಕಾದಂಬರಿಯನ್ನು ಓದುವ ಮೊದಲು ನನಗೆ ಗೊತ್ತೇ ಇರಲಿಲ್ಲ, ಬಹುಷಃ ಇದಕ್ಕೆ ಧರ್ಮದ ಹಂಗಿಗಿಂತ ರಾಜಕೀಯದ ಹಂಗು ಜಾಸ್ತಿ ಇರಬೇಕು ಅನಿಸುತ್ತದೆ.

ಈ ಕಾದಂಬರಿಯಲ್ಲಿ ಇತಿಹಾಸದ ಪುಟಗಳಲ್ಲಿ ಅವಿತಿರುವ, ಬಹಳಷ್ಟು ಜನರಿಗೆ ಗೊತ್ತಿಲ್ಲದ ಕೆಲವು ಸೋಜಿಗೆದ ವಿಷಯಗಳು ಸದ್ದಿಲ್ಲದಂತೆ ನುಸುಳಿ ಮುದ ನೀಡುತ್ತವೆ.  ಇವು ಕಾದಂಬರಿಕಾರನ ಅಧ್ಯಯನ ಮತ್ತು ಅದನ್ನು ಕಾದಂಬರಿಯಲ್ಲಿ ಮಾಡಿಸಿದ ಕುಶಲತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಉದಾಹರಣೆಗೆ, ದೋಸೆ ಮಾಡುವ ವಿಧಾನ ವಿಜಯನಗರ ರಾಜ್ಯದ ಅಡುಗೆ ಮನೆಗಳಿಗೆ ಹೇಗೆ ಬಂದಿರಬಹುದು ಎನ್ನುವುದು ಬಂದಾದರೆ, ಮೆಣಸಿನಕಾಯಿ ಹೇಗೆ ಭಾರತಕ್ಕೆ ಹೊರಗಿನಿಂದ ಬಂದು ಮಣಸಿನ ಜಾಗವನ್ನು ಆಕ್ರಮಿಸಲು ಶುರುಮಾಡಿತು ಎನ್ನುವುದು ಇನ್ನೊಂದು. ಅಷ್ಟೇ ಅಲ್ಲ, ಕಾಗದ ಭಾರತಕ್ಕೆ ಹೇಗೆ ಬಂದಿತು, ನಾವಿಕರು ವಿಟಮಿನ್ ಸಿ ಕೊರತೆಯಿಂದ ಹೇಗೆ ಬಳಲುತ್ತಿದ್ದರು ಎನ್ನುವುದರ ಪ್ರಸ್ತಾಪವೂ ಬರುತ್ತದೆ.

ಈ ಕಾದಂಬರಿಯ ಇನ್ನೊಂದು ವಿಶೇಷತೆಂದರೆ ಪುರಂದರದಾಸರೂ ಒಂದು ಪಾತ್ರವಾಗಿ ಬಂದಿರುವುದು. ಕೆಲವೇ ಪುಟಗಳಲ್ಲಿ ಈ ಪಾತ್ರ ಬಂದರೂ ಇದ್ದಕ್ಕಿದ್ದಂತೆ ಕಾದಂಬರಿಗೆ ಹೊಸ ಹೊಳಪನ್ನು ತಂದು ಕೊಡುತ್ತದೆ. ವಸುಧೇಂದ್ರ ಅವರ ಬರವಣಿಯ ಚಮತ್ಕಾರವಿದು.

ಪ್ರತಿ ಅಧ್ಯಾಯವೂ ದೊಡ್ಡದಾಗಿದೆ, ಆದ್ದರಿಂದ ಅಧ್ಯಯಗಳನ್ನು ಕಿರು ಅಧ್ಯಾಯಗಳಾಗಿ ಮಾಡಿ ಸಂಖ್ಯೆಗಳನ್ನೋ, ಇಲ್ಲ ಹೆಸರುಗಳನ್ನು ಕೊಟ್ಟಿದ್ದರೆ ಓದುವವರಿಗೆ ಇನ್ನೂ ಅನುಕೂಲವಾಗುತ್ತಿತ್ತು ಅನಿಸುತ್ತದೆ. ಮೊದಲ ಭಾಗದಲ್ಲಿ ಕತೆ ನಿಧಾನಗತಿಯಲ್ಲಿ ಸಾಗುತ್ತದೆ ಮತ್ತು ವಿವರಗಳು ಹೆಚ್ಚಾಗಿವೆ. ಉತ್ತರಾರ್ಧದಲ್ಲಿ ನಾಗಾಲೋಟದಲ್ಲಿ ಓಡುತ್ತದೆ. ಹೀಗಾಗಿ ಕಾದಂಬರಿಯ ಗತಿ ಒಂದೇ ಸಮನಾಗಿಲ್ಲ.

ಇತಿಹಾಸಕಾರರು, ಎಡಪಂಥೀಯರು ಮತ್ತು ಬಲಪಂಥೀಯರು ಒಪ್ಪದ ಮತ್ತು ಆಕ್ಷೇಪಿಸುವ ವಿವರಗಳು ಕಾದಂಬರಿಯಲ್ಲಿ ಇವೆ. ಅವುಗಳನ್ನು ಆಚೆಯಿಟ್ಟು ಓದುಗನಾಗಿ ಈ ಕಾದಂಬರಿಯನ್ನು ಓದುತ್ತ, ಓದಿದ ಮೇಲೆ ಮೆಲಕು ಹಾಕುತ್ತ ಆಸ್ವಾನಿದ್ದೇನೆ. ಕನ್ನಡಕ್ಕೆ ಇದೊಂದು ಅಪರೂಪದ ಕಾದಂಬರಿ ಎಂದು ನನ್ನ ಅನಿಸಿಕೆ. ಇದು ಇಂಗ್ಲೀಷ್ ಮತ್ತು ಇತರ ಭಾಷೆಗಳಿಗೂ ಅನುವಾದವಾಗಿ ಇನ್ನೂ ಹೆಚ್ಚು ಜನರನ್ನು ತಲುಪಲಿ ಎನ್ನುವುದು ನನ್ನ ಅಭಿಲಾಷೆ.

This article was first published in www.anivaasi.com on 23/10/2020


ಅದೋ ನೋಡಿ ಹೋಗುತಿಹರು

ಅದೋ ನೋಡಿ ಹೋಗುತಿಹರು 
ಹಿಂದುಗಳೂ ಮುಸಲ್ಮಾನರೂ 
ಬಡವರೂ ಶ್ರೀಮಂತರೂ 
ಎಡರೂ ಬಲರೂ 
ಎಲ್ಲ ಒಂದೇ ದಿಕ್ಕಿನಲ್ಲಿ 
ಎಲ್ಲ ಒಂದೇ ಗಮ್ಯದತ್ತ 
ಯಾರ ಒತ್ತಾಯವಿಲ್ಲದೇ 
ಯಾರಪ್ಪಣೆಯ ಕೇಳದೇ 

ಏಯ್, ಸಾಕ್ ಮಾಡಯ್ಯ, ನಿನ್ ಆದರ್ಶದ ಕವಿತೆ 
ಅಂತೆಲ್ಲ ಸುಮ್ಕೆ ಬಯ್ಬೇಡಿ ಸ್ವಾಮಿ 

ನಾ ನಿಮ್ಮಾಣೆ ಸುಳ್ ಹೇಳ್ತಿಲ್ವೆ 
ನೀವೇ ನೋಡಿ ಬಸ್ಸು ರೇಲ್ವೆ

Sunday 4 October 2020

ಕಾರ್ತಿಕ

ಎಲೆಗಳುದರಲದರುವ ಕಾಲ
ಒಂದು ಭೋರ್ಗಾಳಿ ಸಾಕು
ಎಲೆಗಳೆಲ್ಲ ಅದುರಿ ಉದುರಿ
ದಿ  ಕ್ಕಾ   ಪಾ     ಲಾ       ಗಿ
ಬದುಕು
ಚೆ
              ಲ್ಲಾ
      ಪಿ
                           ಲ್ಲಿ
ಕಾರ್ತಿಕನೇ,
ನಿನಗೆ ಕರುಣೆಯೇ ಇಲ್ಲವೇ?