Tuesday 7 April 2015

ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?

ಕವಿತೆ 
ಸರಳವಾಗಿರಬೇಕು 
ಮಗುವಿನ ಮಾತಿನಂತೆ 
ಒಳಗೊಂದು ಅರ್ಥ 
ಹೊರಗೊಂದು ಅರ್ಥ 
ವಿಲ್ಲದಂತೆ ಎಂದರಾಯಿತೇ? 

ಕವಿತೆ 
ಒಂದಿಂಚು ಮೇಕಪ್ಪು ಬಡಿದುಕೊಂಡು 
ಘಮಘಮ ಸೆಂಟು ಬಡಿದುಕೊಂಡು 
ವಯ್ಯಾರವಾಗಿರಬೇಕೇ ಬೇಡವೇ 
ಎಂದು ಗಂಟೆಗಟ್ಟಲೇ 
ಚರ್ಚಿಸಬಹುದು 

ಕವಿತೆ ಇರಬೇಕು 
ಮಗುವಿನ ನಗೆಯಂತೆ 
ಹುಣ್ಣಿಮೆಯ ಚಂದಿರನಂತೆ 
ಮುಂಜಾನೆಯ ಮಂಜಿನಂತೆ 
ಹುಚ್ಚು ಹೊಳೆಯಂತೆ 
ಅಂತೆಲ್ಲ ಕ್ಲೀಷೆಯಾಗಿ ಹೇಸಿಗೆ ಮಾಡಿಬಿಡಬಹುದು 

ಕವಿತೆ ಮಾತಾಡಬೇಕು 
ಮಾತಿನಲ್ಲಿರುವ ಮೌನದಂತೆ 
ಮೌನದಲ್ಲಿರುವ ಮಾತಿನಂತೆ
ಎಂದು ಒಗಟು ಮಾಡಬಹುದು 

ಕವಿತೆ 
ನೊಂದವರ ದನಿಯಾಗಬೇಕು 
ಬೆಂದವರ ಕತ್ತಿಯಾಗಬೇಕು 
ಬಿದ್ದವರ ಮೇಲೆತ್ತಬೇಕು
ಎಂದೆಲ್ಲ ಭಾಷಣ ಮಾಡಲು ಚಂದ 

ಕವಿತೇ, 
ಕವಿಯುವ ಸಮಯದಲ್ಲಿ 
ನೀನೇಕೆ ಕವಿಯದೇ ಕೂತೆ? 
ಎಂದರೆ ನಾಕುಜನ 
ನಕ್ಕು ತಲೆ ಅಲ್ಲಾಡಿಸಿಯಾರು 

’ಕವಿತೆ ಎಂದರೆ ಪದಗಳಲ್ಲವೋ 
ಭವಿಸಿ ಸಾಯುವ ಕ್ಷರಗಳಲ್ಲವೋ 
ಸವಿಸಿ ಸೇವಿಸಿ ಮನವ ತಣಿಸುವ ಕುಣಿವ ಸಾಲುಗಳೋ’ 
ಎಂದರೆ ವ್ಯಾಕರಣ ಪಂಡಿತರು ತಪ್ಪು ಹುಡುಕಿಯಾರು, ಹುಷಾರು! 

ಅಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು? 
ಇದಲ್ಲ ಎಂದು ಧಾರಾಳವಾಗಿ ಹೇಳಿಬಿಡಬಹುದು.

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)