Saturday 26 November 2011

ಕ್ಷಣಗಳು


ನಾ ಮತ್ತೆ ಬದುಕಬಲ್ಲೆನಾದರೆ
ನನ್ನ ಯತ್ನವೆಲ್ಲ ಆಗ
ಇನ್ನೂ ಹೆಚ್ಚು ತಪ್ಪು ಮಾಡುವುದು
ಈಗಿನಷ್ಟು ಒಳ್ಳೆಯವನಾಗದಿರುವುದು
ಇನ್ನೂ ಹೆಚ್ಚು ಆರಾಮವಾಗಿರುವುದು
ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು

ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು
ಹೆಚ್ಚು ಕೊಳಕಾಗಿರುವುದು
ಹೆಚ್ಚು ಓಡಾಡುವುದು
ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು
ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು
ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು
ತುಂಬ ಐಸ್‍ಕ್ರೀಮು ತಿನ್ನುವುದು
ಕಡಿಮೆ ಬೀನ್ಸು ತಿನ್ನುವುದು
ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ 
ಮಾಡಿಕೊಳ್ಳುವುದು 

ನಾನೊಬ್ಬ ದೂರದೃಷ್ಟಿಯ ಜಾಗರೂಕ ನಾಗರಿಕ
ಬದುಕಿನ ಪ್ರತಿ ನಿಮಿಷದಲ್ಲೂ!
ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ
ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು

ನಿನಗೆ ಗೊತ್ತಿಲ್ಲದಿದ್ದರೆ ಕೇಳು - ಬದುಕು ಎಂದರೆ ಅದೇ-
’ಈಗ’ನ್ನು ಕಳೆದುಕೊಳ್ಳಬೇಡ

ನಾನೀಗ ಎಲ್ಲಿಗೆ ಹೋದರೂ
ಜ್ವರ ಮಾಪಕ ಬೇಕು
ಬಿಸಿನೀರು ಇರಬೇಕು
ಕೊಡೆ ಬೇಕು, ಗಾಳಿಕೊಡೆ ಕೂಡ

ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ
ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ
ವಸಂತನಿಂದ ಹೇಮಂತ ಬರುವವರೆಗೂ.
ಬಂಡಿ ಓಡಿಸುತ್ತೇನೆ ತುಂಬ ಸಲ 
ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ 
ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು

ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ...
ಆದರೆ... ನನಗೀಗ ವರ್ಷ ಎಂಬತ್ತೈದು
ಇನ್ನೆಷ್ಟು ದಿನ ನಾನು ಬದುಕಬಲ್ಲೆ?

ಇದು ಹೂರೆ ಲೂಇಸ್ ಬೋರ್ಹೇಸ್ (Jorge Luis Borges) ಎಂಬ ಅರ್ಜಂಟೈನಾದ ಸ್ಪಾನಿಷ್ ಸಾಹಿತಿಯ ಒಂದು ಪ್ರಸಿದ್ಧ ಕವನ. ಇಂಗ್ಲೀಷಿನಿಂದ ಅನುವಾದಿಸಿದ್ದೇನೆ.