Friday 3 February 2017

ಸಿನೆಮಾ: ಕನ್ನಡ: ಕಿರಿಕ್ ಪಾರ್ಟಿ



೧೯೮೭: ನಾನಿನ್ನೂ ಕಾಲೇಜಿಗೆ ಕಾಲಿಟ್ಟಿರಲಿಲ್ಲ. 

`ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡೋ`, `ಚಲುವೆ ಒಂದು ಕೇಳ್ತೀನಿ, ಇಲ್ಲ ಅಂದೇ (ಅನ್ನದೇ ಅಲ್ಲ) ಕೊಡ್ತೀಯಾ?`, `ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ`, ಎಂದು ಮಾತಾಡುವಂಥ ವಾಕ್ಯಗಳ ಹಾಡು ಕಿವಿಗೆ ಬಿದ್ದವು. ಚಿ ಉದಯ ಶಂಕರ್ ಅವರ ಸರಳಿತ ಸುಲಲಿತ, ವಿಜಯ ನಾರಸಿಂಹ ಅವರ ಕ್ಲಿಷ್ಟಪದಗಳ ಹಾಡುಗಳನ್ನು ಕೇಳಿ ಬೆಳೆದ ನನಗೆ ಮೊದಮೊದಲು ಸ್ವಲ್ಪ ಕಸಿವಿಸಿಯೇ ಆಯಿತು. We all resist change. ಆದರೆ ಸ್ವಲ್ಪೇ ದಿನಗಳಲ್ಲಿ ಹಾಡುಗಳು ಹುಚ್ಚು ಹಿಡಿಸಿದವು, ಬಾಯಿಪಾಠ ಆದವು. ಹೊಸಪರಿಭಾಷೆಯ ಸಾಹಿತ್ಯ ಮತ್ತು ಸಂಗೀತದ ಹೊಸತನ, ಮಲಗಿದ್ದ ಕನ್ನಡ ಚಿತ್ರಸಂಗೀತವನ್ನು ಬಡಿದೆಬ್ಬಿಸಿತು. ಇನ್ನೂ ಕಾಲೇಜಿನ ಮೆಟ್ಟಿಲು ಹತ್ತಿಲ್ಲದಿದ್ದರೂ ಕಾಲೇಜಿಗೆ ಹೋಗುವ ಅಣ್ಣ ಇದ್ದ, ಬಳಗದ ಜನ ಇದ್ದರು, ಗೆಳೆಯರ ಅಣ್ಣ ತಂಗಿಯರಿದ್ದರು. ಎಲ್ಲರ ಬಾಯಲ್ಲೂ `ಪ್ರೇಮಲೋಕ`ದ ಹಾಡುಗಳೇ. ಈ ಸಿನೆಮಾ ಮಹತ್ವದ್ದಾಗುವುದು ಬರೀ ಹಾಡುಗಳಿಂದಲ್ಲ. ಹಾಡುಗಳ ಮೂಲಕ ಸಿನೆಮಾದ ಕತೆ ಹೇಳುವ, ಕಾಲೇಜು ಬದುಕಿನ ಪ್ರೇಮವನ್ನು ಪಡ್ಡೆ ಹುಡುಗರ ದೃಷ್ಟಿಯಿಂದ ತೋರಿಸಿತು. ಸಿನೆಮಾ ಯಾವಾಗ ನಮ್ಮೂರಿಗೆ ಬರುತ್ತೋ ಎಂದು ಕಾದಿದ್ದೇ ಕಾದಿದ್ದು. ಪ್ರೇಮಲೋಕ ಕನ್ನಡ ಕಮರ್ಷಿಯಲ್ ಚಿತ್ರದ ಒಂದು ಮಹತ್ವದ ಮೈಲುಗಲ್ಲಾಯಿತು. ಕಾಲೇಜ್ ಲೈಫನ್ನು ಬೆಳ್ಳಿಪರದೆ ಮೇಲೆ ಅಜರಾಮರವಾಗಿಸಿತು. ತುಂಡುಲಂಗದ ಜೂಹಿ ಚಾವ್ಲಾ ಹುಡುಗರ ಎದೆಯಲ್ಲಿ ಭದ್ರವಾದರು. ತುಟಿಗೆ ತುಟಿಯಿಟ್ಟು ಮುತ್ತನಿತ್ತು ಹುಡುಗರಿಗೆ ಹುಚ್ಚುಹಿಡಿಸಿದರು. 

೨೦೧೬-೨೦೧೭: ಫಾಸ್ಟ್ ಪಾರ್ವರ್ಡ್ ೨೦ ಇಯರ್ಸ್. 

`ಬೆಳಗೆದ್ದು ಯಾರ ಮುಖವ ನಾನು ನೋಡಿದೆ`, `ಸಾರ್, ತಿರ್ಬೋಕಿ ಜೀವನಾ ನಮ್ಮದಲ್ಲ`, ಎನ್ನುವ ಹಾಡುಗಳು ಕನ್ನಡಿಗರ ಫೋನುಗಳಲ್ಲಿ ಗುಣಗುಣಿಸುತ್ತಿದೆ. ಈಗ ಕೆಲ ವರ್ಷದಿಂದ ಯೋಗರಾಜ ಭಟ್ಟರು ಕನ್ನಡ ಹಾಡುಗಳನ್ನು ಬರೆಯುವ ಶೈಲಿಯನ್ನೇ ಬದಲಾಯಿಸಿದರು (ಹಳೆಪಾತ್ರೆ ಹಳೆಕಬಣ ಹಳೆ ಪೇಪರ್ ತರ ಹೋಯಿ). ಅಲ್ಲಿಂದ ಶುರುವಾದ ಟ್ರೆಂಡು `ಕಿರಿಕ್ ಪಾರ್ಟಿ`ಯಲ್ಲಿ ಮುಂದುವರೆದಿದೆ. 

ಮತ್ತೆ ಕಾಲೇಜು ಲೈಫು. ಮತ್ತೊಂದು ಪ್ರೇಮಲೋಕ ಎಂದುಕೊಂಡರೆ ಅದು ಶುದ್ಧ ಸುಳ್ಳು. ಇಲ್ಲಿ ಪ್ರೇಮವಿದೆ, ಆದರೆ ಅದೇ ಮುಖ್ಯ ಎಳೆ ಅಲ್ಲ. ಇಂಜಿನಿಯರಿಂಗ್ ಕಾಲೇಜಿದೆ ಎಂದ ಮಾತ್ರಕ್ಕೆ `ಥ್ರಿ ಇಡಿಯಟ್ಸ್` ನ ನಕಲು ಆಗಿಲ್ಲ. ಹುಡುಗಿಯರು ತುಂಡುಲಂಗ ಹಾಕುವುದಿಲ್ಲ, ಎದೆಸೀಳು ತೋರಿಸುವುದಿಲ್ಲ. ತುಟಿಗೆ ತುಟಿಯಿಟ್ಟು ಮುತ್ತನಿಡುವುದಿಲ್ಲ. ಆದರೆ ಸಿನೆಮಾ ಬಾಕ್ಸಾಫೀಸನ್ನು ದೋಚುತ್ತಿದೆ. ಇಪ್ಪತ್ತು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ! 

ಮಲಯಾಳಂನಲ್ಲಿ ಕಾಲೇಜ್ ಜೀವನದ ಬಗ್ಗೆ ಅದ್ಭುತ ಸಿನೆಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಸುಮಾರು ಸಿನೆಮಾಗಳು ಕನ್ನಡಕ್ಕೂ ಬಂದಿದೆ. `ಅಟೋಗ್ರಾಫ್`, `ಪ್ರೇಮಂ` ಉದಾಹರಣೆಗಳು. `ಕಿರಿಕ್ ಪಾರ್ಟಿ` ಅದಕ್ಕೊಂದು ಉತ್ತರ ಕೊಟ್ಟಿದೆ. ಯಾವುದೇ ಬೋಧನೆ ಅಥವಾ ಉಪದೇಶದ ಹಂಗಿಲ್ಲದೇ ಒಂದು ದೊಡ್ಡ ಸೋಷಿಯಲ್ ಮೆಸೇಜನ್ನು ಹುಳ ಬಿಡುತ್ತದೆ ಈ ಚಿತ್ರ. 

ನಗಿಸುತ್ತ, ಎಪಿಸೋಡಿಕ್ ಆಗಿ ಕತೆ ಹೇಳುತ್ತ, ಎರಡೂವರೆ ಗಂಟೆ ಕಾಲೇಜು ಮತ್ತು ಕಾಲೇಜ್ ಹಾಸ್ಟೇಲಿನಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ. ಈ ಲಾಸ್ಟ್ ಬೆಂಚ್ ಹುಡುಗರು ಮಾತೆತ್ತಿದರೆ ಕುಡಿಯುತ್ತಾರೆ, ಸೇದುತ್ತಾರೆ, ಬ್ಯಾಟು-ಸ್ಟಂಪು ಹಿಡಿದು ಹೊಡೆದಾಡಿಕೊಳ್ಳುತ್ತಾರೆ, ಸಸ್ಪೆಂಡಾಗುತ್ತಾರೆ, ಫೇಲಾಗುತ್ತಾರೆ, ಆನ್ಸರ್ ಪತ್ರಿಕೆಯನ್ನೇ ಕದ್ದು ಹಾಸ್ಟೇಲಿನಲ್ಲಿ ಕುಡಿಯುತ್ತ ಸೇದುತ್ತ ಜ್ಯೂನಿಯರುಗಳನ್ನು ಜಾನುವಾರುಗಳಂತೆ ಅಳಿಸುತ್ತ ಉತ್ತರ ಬರೆಯುತ್ತಾರೆ. ಆದರೆ ಈ ಹುಡುಗರ ಬಗ್ಗೆ ಯಾರೂ ಒಂದೇ ಒಂದು ಕೆಟ್ಟ ಮಾತು ಹೇಳುವುದಿಲ್ಲ. ಆದರೆ ಹುಡುಗಿ, ಕುಡಿದು ಕುಣಿಯುತ್ತ ಅಕಸ್ಮಾತ್ತಾಗಿ ಬಿದ್ದು ಸತ್ತರೆ ಆ ವೀಡಿಯೋ ಮನೆ ಮನೆಯನ್ನೂ ತಲುಪಿ ಹುಡುಗಿಯ ಜನರ ಬಾಯಿಚಪಲದ ವಸ್ತುವಾಗುತ್ತಾಳೆ. ತಂದೆಯ ಕಣ್ಣಲ್ಲಿ ಮಗಳು ನಿಷ್ಕೃಷ್ಟವಾಗುತ್ತಾಳೆ. 

ಬದಲಾಗುತ್ತಿರುವ ಸಮಾಜಕ್ಕೆ, ಎಲ್ಲರ ಕೈಯಲ್ಲಿ ಮೊಬೈಲ್ ಇರುವ ಜನಾಂಗಕ್ಕೆ ಈಗ ಮನರಂಜನೆ ಎಂದರೆ ಮರ ಸುತ್ತಿ ಕುಣಿಯುವ ಹಾಡುಗಳಲ್ಲ, ತುಂಡುಲಂಗದ ಹುಡುಗಿಯರಲ್ಲ, ಕ್ಯಾಬರೆಗಳಲ್ಲ. ಒಂದು ಚಿಕ್ಕ ಕತೆ, ಚಂದದ ಚಿತ್ರಕತೆ, ಅದಕ್ಕೊಪ್ಪುವ ಹಾಡುಗಳು, ಒಂದಿಷ್ಟು ನಗು, ಸ್ವಲ್ಪವೇ ಅಳು, ದಿನಾ ಮಾತಾಡುವಂಥ ಸಂಭಾಷಣೆ, ಸುಪ್ತವಾಗಿ ಹರಿಯುವ ಒಂದು ಮೆಸೇಜು ಇದ್ದರೆ ಜನ ಸಿನೆಮಾ ಹಾಲಿಗೆ ಬರುವಂತೆ ಮಾಡಬಹುದು ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ. 

ಈ ಸಿನೆಮಾ ಏನು ಧಿಡೀರ್ ಎಂದು ಆದದ್ದಲ್ಲ. ಇದೇ ರಕ್ಷಿತ್ `ಉಳಿದವರು ಕಂಡಂತೆ` ಎನ್ನುವ `ರೋಶೋಮಾನ್` ತರಹದ ಸಿನೆಮಾ ಮಾಡಿದವರು. ಈ ಸಿನೆಮಾ, ಕಾಲೇಜು ಬರೀ ಪ್ರೇಮಿಸುವುದನ್ನು ಕಲಿಸುವುದಿಲ್ಲ, ನಗುವುದನ್ನು, ಗೆಳೆಯರನ್ನು, ವೈರಿಗಳನ್ನು, ಕುಡಿಯುವುದನ್ನು, ಸೇದುವುದನ್ನು, ವಿರಹವನ್ನು ಕಲಿಸುತ್ತದೆ ಎಂದು ಹದವಾಗಿ ಹೇಳುತ್ತದೆ, ಕಡೆಬೆಂಚಿನ ಹುಡುಗರ ದೃಷ್ಟಿಕೋನದಿಂದ. ಬದಲಾಗುತ್ತಿರುವ ಹಿಂದೀ ಸಿನೆಮಾ ಸಂಗೀತದಂತೆಯೇ ಕನ್ನಡ ಸಂಗೀತವೂ ಬದಲಾಗುತ್ತಿದೆ. ಸಂಗೀತದಂತೆ ಸಿನೆಮಾ ಸಾಹಿತ್ಯವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸಕಾಲಕ್ಕೆ ಹೊಸಹುಡುಗರು ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದಾರೆ, ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಸಿನೆಮಾದಲ್ಲಿ ಕ್ಲೀಷೆಯಾಗಿರುವ ಸೀನುಗಳನ್ನು ಧಿಕ್ಕರಿಸಿ ಸೀನುಗಳನ್ನು ಹೆಣೆಯುತ್ತಿದ್ದಾರೆ. 


(ಟ್ರೈಲರ್)

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)