Sunday 6 December 1992

Sunday 26 January 1992

ಕತೆ: ಕಾಗೆಪಿಂಡ

 ಪುಟ್ಟಚೀಲದಲ್ಲಿ ಅವ್ವನ ನೆನಪನ್ನು ಹೊತ್ತು ಬಸ್ಸಿನಿಂದ ಇಳಿದು ದಿಟ್ಟಿಸಿದೆ ಸುತ್ತಲೂ. ಬಸ್ ನಿಲ್ದಾಣ ಸ್ತಬ್ದವಾಗಿತ್ತು. ತಗ್ಗುದಿನ್ನೆಗಳಲ್ಲೆಲ್ಲ ನೀರು ತುಂಬಿ ನಿಂತಿತ್ತು. ಮಳೆ ಬಂದು ನಿಂತಿದ್ದರೂ, ಕಪ್ಪುಮೋಡಗಳ ರಾಶಿ ಸೂರ್ಯನನ್ನು ನುಂಗಿ ಹಾಕಲು ಸಿದ್ಧತೆ ನಡೆಸಿದ್ದವು. ಕ್ಯಾನ್ಸರಿನಿಂದ ಹಣ್ಣಾದ ದೇಹ ಇಂದೋ ನಾಳೆಯೋ ಹೋಗುವುದೆಂದು ಗೊತ್ತಿದ್ದರೂ ಅವ್ವನ ಸಾವು ನನ್ನನ್ನು ಗರಬಡಿಸಿತ್ತು. ಹಳ್ಳಿಯಿಂದ ಮರಣ ಕರ್ಮಗಳನ್ನೆಲ್ಲ ಪೂರೈಸಿ ಮತ್ತೆ ನಾನು ಸ್ನಾತಕೋತ್ತರ ಕಲಿಯುತ್ತಿರುವ ಪಟ್ಟಣಕ್ಕೆ ಬಂದಿಳಿದೆ. 


​ ಬಸ್ ನಿಲ್ದಾಣದಿಂದ ನಿಧಾನವಾಗಿ ಹಾಸ್ಟೇಲಿನತ್ತ ಬೇಯುತ್ತಿರುವ ಮೆದುಳಿನೊಡನೆ ನಡೆಯತೊಡಗಿದೆ.  ಚಪ್ಪಲಿಯ ಹೊಡೆತದಿಂದ ನೀರು ಶರ್ಟು ಪ್ಯಾಂಟನ್ನೆಲ್ಲ ಕೆಸರಿನಿಂದ ಸಿಂಗರಿಸುವ ಕೆಲಸದಲ್ಲಿ ತೊಡಗಿತ್ತು. ಹೊಟ್ಟೆ ತುಂಬ ಮೆದ್ದು ಬಸ್ಸೇರಿ ಬಂದಿದ್ದರೂ ಹೊಟ್ಟೆಯಲ್ಲಿನ ವಿಚಿತ್ರ ತಳಮಳದಿಂದ ತಲೆ ಸಿಡಿಯುತ್ತಿತ್ತು.

ಕಾಲೇಜಿನ ಪ್ರಶಾಂತವಾದ ಗಾರ್ಡನ್ನಿನಲ್ಲಿ ಮಾಮೂಲು ಗಿಡದಡಿ ಕಾವ್ಯಳೊಡನೆ ಹರಟುತ್ತಿರುವಾಗ, ನನ್ನ ರೂಮ್-ಮೇಟ್ ಆನಂದ ಓಡಿ ಬಂದು, `ಮದರ್ ಸೀರಿಯಸ್, ಸ್ಟಾರ್ಟ್ ಇಮ್ಮೀಡಿಯೇಟ್ಲಿ,` ಎಂಬ ಟೆಲಿಗ್ರಾಂ ಕೈಗಿತ್ತ. ಎಲ್ಲರ ಗಂಟಲೂ ಬಿಗಿದಂತಾಗಿ ಯಾರೂ ಮಾತಾಡಲಿಲ್ಲ. ಮೂರು ವರ್ಷಗಳಿಂದ ಸಾವಿನೊಡನೆ ಸರಸವಾಡುತ್ತಿದ್ದ ಕ್ಯಾನ್ಸರ್ ಅವ್ವನನ್ನು ಗಟ್ಟಿಯಾಗಿ ತಬ್ಬಿಕೊಳ್ಳಲಿತ್ತು, ಅಥವಾ ಈಗಾಗಲೇ... ಮುಂದಿನ ಊಹೆಯನ್ನು ಅಲ್ಲೇ ತುಂಡರಿಸಿ ಹಳ್ಳಿಯ ಬಸ್ಸೇರಿದೆ. ನಮ್ಮ ಹಳ್ಳಿಗೆ ಸೇರಲು ಮೂರು ಬಸ್ಸು ಬದಲಿಸಬೇಕು. ಬಸ್ಸು ಬಂದರೆ ಉಂಟು, ಇಲ್ಲದಿದ್ದರೆ ಕಾಯುತ್ತ ಕೂರಬೇಕು, ಅಥವಾ ಹೋಗುತ್ತಿರುವ ಟ್ರ್ಯಾಕ್ಟರೋ ಲಾರಿಗಳ ಸಹಾಯದಿಂದ ಹೋಗಬೇಕು.

ಕೆಸರಿನಲ್ಲಿ ಕಾಲು ಜಾರಿತು. ಮತ್ತೆ ಮಳೆಯ ದಪ್ಪ ದಪ್ಪ ಹನಿಗಳು ಬೋಳುತಲೆಯ (ಅವ್ವನ ತಿಥಿಗೆ ಬೋಳಿಸಿಕೊಂಡದ್ದು) ಮೇಲೆ ಟಪ್ ಟಪ್ ಎಂದು ಬೀಳತೊಡಗಿದವು. ತಲೆ ಮೇಲೆ ಹನಿಗಳು ಬಿದ್ದು ಅಡಿವರೆಗೆ ಹರಿಯತೊಡಗಿ ನಡಿಗೆ ಚುರುಕಾಯಿತು. ​

ಬಾಳುಮಾಮಾ*ನ ಮನೆಯಲ್ಲಿ ಅಡಿಯಿಡುತ್ತಲೇ, ಗಂಗಾಮಾಂಶಿ*  ನನ್ನನ್ನು ನೋಡುತ್ತಲೇ, ಓಡಿ ಬಂದು ಬಿಗಿಯಾಗಿ ತಬ್ಬಿ, ಬಿಕ್ಕುತ್ತ ಅವ್ವನ ಸಾವನ್ನು ಗಳಗಳನೇ ಸುರಿಸಿದಳು. ಮನಸ್ಸನ್ನು ಕಲ್ಲಗಿಸಿಕೊಂಡೇ ಬಂದಿದ್ದರೂ ಕಲ್ಲೂ ನೀರಾಗಿ ಹರಿಯತೊಡಗಿತ್ತಿಲ್ಲಿ. ಅಪ್ಪನ ಸಂಬಂಧ ಎಂದೋ ಕಿತ್ತು ಹಾಕಿದ್ದ ಕಾಕಾ*, ಅಪ್ಪ ಸತ್ತಾಗ ಬಂದಿರದಿದ್ದರೂ, ಈಗ ಮೌನವಾಗಿ ಮೂಲೆ ಹಿಡಿದಿದ್ದ. ಬಾಳುಮಾಮಾನ ಮಗಳು ಲಕ್ಷ್ಮಿ ಮಗುವಿನಂತೆ ಬಿಕ್ಕಳಿಸಿ ದನಿ ತೆಗೆದು ಅಳುತ್ತಿದ್ದಳು. ನನ್ನ ದಾರಿ ಕಾದೂ ಕಾದೂ, ಇನ್ನು ಶಾಸ್ತ್ರದ ಪ್ರಕಾರ ಕಾಯುವುದು ಸಾಧ್ಯವಿಲ್ಲ ಎಂದು ಸಿರ್ಧರಿಸಿ, ಅವ್ವನನ್ನು ಆಗಲೇ ಸುಟ್ಟು ಬಂದಾಗಿತ್ತು. ಬಾಳುಮಾಮಿ ಕಂಬನಿಗೆರೆಯುತ್ತಲೇ ಅವ್ವನ ಸಾವನ್ನು ಕತೆಯಾಗಿಸಿದಳು. 

ಅಪ್ಪ ಅಪಘಾತದಲ್ಲಿ ತೀರಿದಾಗ, ಅವ್ವನ ಕ್ಯಾನ್ಸರ್ ಪೆಡಂಭೂತದ ಭಾರ ಹೊತ್ತವನು ಬಾಳುಮಾಮಾ (ಕಾಕಾಗಳ ಸಂಬಂಧ ಆಸ್ತಿಯ ವಿಷಯದಲ್ಲಿ ಮುರಿದುಹೋಗಿತ್ತು). ಸ್ನಾತಕೋತ್ತರ ಶಿಕ್ಷಣಕ್ಕಾಗಿ  ನನ್ನ ಬೆನ್ನೆಲುಬಾದ, ನನ್ನ ಫೀಸು, ಹಾಸ್ಟೇಲು, ಊಟ ಮತ್ತು ಐಷಾರಾಮಿಯ ಖರ್ಚನ್ನೆಲ್ಲ ನೋಡಿಕೊಳ್ಳಲು. ಹಾಗಂತ ಅವನೇನೂ ಮಹಾ ಸ್ಥಿತಿವಂತನಲ್ಲ. ಅಪ್ಪನ ಸಾವಿನಿಂದ ಮುರಿದು ಮುಳುಗುತ್ತಿದ್ದ ನಮ್ಮ ಬಾಳನೌಕೆಯನ್ನು ಹಾಗೂ ಹೀಗೂ ಸಾಗಿಸುತ್ತಿದ್ದ. ಒಂದು ರೀತಿಯಲ್ಲಿ ಅವ್ವ ಹೋಗಿದ್ದು ಒಳ್ಳೆಯದೇ ಆಯಿತು, ಸ್ವಲ್ಪ ಭಾರ ಕಡಿಮೆಯಾಯಿತು. ಏನೂ ಮಾತಾಡದೇ ಸುಮ್ಮನೇ ಕೂತುಬಿಟ್ಟೆ. `ಏನಾದ್ರೂ ಮಾತಾಡೋ. ಹಿಂಗ ಸುಮ್ಮನ ಕೂತ್ರ, ನನ್ನ ಹೊಟ್ಟಿ ತೊಳದಂಗ ಆಗ್ತದ,` ಅಂದಳು ಬಾಳುಮಾಮಿ. `ನೀರು` ಅಂದೆ. ಲಕ್ಷ್ಮಿ ನೀರು ತಂದುಕೊಟ್ಟಳು. 

ಲಕ್ಷ್ಮಿಯ ನೆನಪಾದೊಡನೆಯೇ ಹೆದರಿಕೆಯಾಗಿ ಯೋಚನೆ ನಿಲ್ಲಿಸಿ ರೂಮಿನ ಬೀಗ ತೆಗೆದೆ.  ರೂಮ್-ಮೇಟುಗಳಿಬ್ಬರೂ ಇನ್ನೂ ಕಾಲೇಜಿನಿಂದ ಬಂದಿರಲಿಲ್ಲ. ಊರಿಗೆ ತಲುಪಿದ ಬಗ್ಗೆ ಬಾಳುಮಾಮಾಗೆ ಪತ್ರ  ಬರೆಯಲು ಕುಳಿತುಕೊಂಡೆ (ಬಂದೊಡನೇ ಪತ್ರ ಬರೆಯುವುದು ಅಪ್ಪ ಹಾಕಿಕೊಟ್ಟ ಅಭ್ಯಾಸ). ಬರೆಯುತ್ತ ತಲೆಯೆತ್ತಿ ಕಿಟಕಿಯಾಚೆ ನೋಡಿದೆ. ಜಿಟಿಜಿಟಿ ಹನಿಯುತ್ತಿದ್ದ ಮಳೆ ಶಾಂತವಾಗಿ ಎಲೆಯಲೆಗಳಲ್ಲಿ ಕುಳಿತು ತಂಪುಗಾಳಿ ಚೆಲ್ಲುತ್ತಿತ್ತು. ಎಲ್ಲಿಂದಲೋ ಹಾರಿ ಬಂದು ಎದುರಿನ ಗಿಡದ ರೆಂಬೆಯ ಮೇಲೆ ಕಾಗೆಯೊಂದು ಬಂದು ಕೂತು, `ಕಾವ್ ಕಾವ್` ಎಂದು ಕಣ್ಣು ಪಿಳಿಪಿಳಿಸತೊಡಗಿತು.

ಬಾಳುಮಾಮಾ ನನ್ನನ್ನು ಸಾಕಿ ಸಲಹುವ ಭರವಸೆಯಿತ್ತರೂ, ಪಿಂಡ ಇಟ್ಟು ಅರ್ಧಗಂಟೆ ಕಳೆದರೂ ಅದು ಹಾಗೇ ಬಿದ್ದಿತ್ತು. ಅವ್ವನ ಎಲ್ಲ ಆಸೆಗಳನ್ನು ಒಬ್ಬೊಬ್ಬರಾಗಿ ಹೇಳುತ್ತ, ಅವನ್ನು ಇಡೇರಿಸುವ ಪ್ರಮಾಣ ಮಾಡಿ, ಅವ್ವನ ಆತ್ಮಕ್ಕೆ ಸಮಾಧಾನವಾಗುವವರೆಗೆ, ಪಿಂಡವನ್ನು ಕಾಗೆ ತಿನ್ನುವುದಿಲ್ಲ ಎಂದು ಗಾಢವಾಗಿ ನಂಬುವ ಬಳಗದವರಿಂದ ಸುತ್ತುವರೆದಿದ್ದೆ. ಬಾಳುಮಾಮಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಮಾತು ಕೊಟ್ಟ. ಕಾಗೆ ಬರಲಿಲ್ಲ. ಅಲ್ಲಿ ನೆರೆದ ಎಲ್ಲರಿಗೂ ಅವ್ವನ ಕೊನೆಯ ಆಶಯ ಸರ್ವವಿದಿತವೇ - ನನ್ನ ಲಕ್ಷ್ಮಿಯ ಮದುವೆ!

ಹಳ್ಳಿಗೆ ಬಂದಾಗ ನನ್ನ ಮತ್ತು ಲಕ್ಷ್ಮಿಯ ಮದುವೆಯ ಪ್ರಸ್ತಾಪ ಧೀರ್ಘಕ್ಕೆ ತಿರುಗಿದಾಗ ನನಗೆ ಕೋಪ ತಡೆಯಲಾಗಲಿಲ್ಲ, `ಹತ್ತನೇತ್ತೆ ನಪಾಸಾದ ಈ ಹಳ್ಳಿ ಗಮಾರೀನ್ನ ನಾ ಮದುವಿ ಆಗಂಗಿಲ್ಲ` ಎಂದಾಗ ಲಕ್ಷ್ಮಿ ಸೆರಗಿನಲ್ಲಿ ಮುಖ ಮುಚ್ಚಿ ಅಡುಗೆ ಮನೆಗೆ ಓಡಿದಳು. ಚಿಕ್ಕವರಿದ್ದಾಗಿನಿಂದಲೂ ಚೇಷ್ಟೆಗೋ ಇಲ್ಲಾ ಗಂಭೀರವಾಗಿಯೋ ನನ್ನ ಮತ್ತು ಲಕ್ಷ್ಮಿಯ ನಂಟನ್ನು ಗಂಟು ಮಾಡಿದ್ದರು ನನ್ನವ್ವ ಮತ್ತು ನನ್ನ ಮಾಮಾ ಮಾಂಶಿಯರು ಸೇರಿ. ಅವ್ವ ಜೋರು ಮಾಡುತ್ತ, `ಲಕ್ಷ್ಮಿ ಕರಗಿಸಿದ ಬಂಗಾರಿದ್ದಂಗ. ನಿಂಗ ಹೆಂಗ ಬೇಕೋ ಹಂಗ ತಿರುಗಿಸಿಕೊಳ್ಳಬಹುದು. ನೀನs ಓದಿಸಿ ಅವಳಿಗೆ ಎಸ್ಸೆಸ್ಸಿ ಏನು ಪಿಹೆಚ್ಡಿ ಮಾಡಿಸಬಹುದು. ಬಾಳಣ್ಣ ನಿನ್ನ ಸಾಕಿ ಬೆಳೆಸಿ ದೊಡ್ಡ ಸಾಹೇಬನ್ನ ಮಾಡ್ಲಿಕ್ಕೆ, ನಿನಗ ಕಲೀಲಿಕ್ಕೆ, ಓದಲಿಕ್ಕೆ, ಇರಲಿಕ್ಕೆ, ಉಣಲಿಕ್ಕೆ, ಮಜಾ ಮಾಡಲಿಕ್ಕೆ, ಕಷ್ಟ ಪಟ್ಟು ತಿಂಗ್ಳಾ ತಿಂಗ್ಳಾ ರೊಕ್ಕಾ ಕಳಸ್ತಾನ. ನೀ ಇಷ್ಟೂ ಮಾಡಲಿಲ್ಲ ಅಂದ್ರ ಅವನ ಋಣ ಹೆಂಗ ತೀರಸ್ತಿ?` ಎಂದಳು. ನಾನು ಕಾವ್ಯಳ ವಿಚಾರ ಹೇಳಲು ಬಾಯ್ದೆರೆದೆ. ಆದರೆ ಅವ್ವನ ಕ್ಯಾನ್ಸರ್ ನನ್ನ ಬಾಯಿ ಮುಚ್ಚಿಸಿತು. ನಾನು ಹೂಂ ಉಹೂಂ ಅನ್ನದೇ ತಲೆ ಅಲ್ಲಡಿಸಿದೆ.

ಇನ್ನೂ ಕಾಗೆಪಿಂಡವಿನ್ನೂ ಹಾಗೇ ಇತ್ತು. ಒಂದು ಕಾಗೆ ಅದೆಲ್ಲಿಂದಲೋ ಹಾರಿಬಂದು ಗತ್ತಿನಿಂದ ಅಲ್ಲೇ ಹತ್ತಿರದಲ್ಲೇ ಎರಡು ಕಾಲಲ್ಲಿ ಕುಪ್ಪಳಿಸುತ್ತಿದ್ದರೂ ಪಿಂಡವನ್ನು ಮಾತ್ರ ಮುಟ್ಟಿರಲಿಲ್ಲ. ಗಂಗಾ ಮಾಂಶಿ ನನ್ನನ್ನು ಜೋರಾಗಿ ಅಲುಗಾಡಿಸಿದಳು, `ಲಕ್ಷ್ಮೀನ್ನ ಮದುವಿ ಆಗೋ ಮಾತು ಕೊಡೋ, ನಿನ್ನವ್ವನ ಆತ್ಮಕ್ಕ ಶಾಂತಿ ಸಿಗತದ` ಅಂದಳು. ನಾನು ಸತ್ತ ಅವ್ವನ ಮುಖವನ್ನೂ ತಪ್ಪಿಸಿಕೊಂಡಿದ್ದೆ, ಕೊನೆ ದಿನಗಳಲ್ಲಿ ಅವಳ ಉಪಚಾರ ಕೂಡ ಮಾಡಿರಲಿಲ್ಲ. ಅದೇ ಪಾಪಪ್ರಜ್ಞೆಯಲ್ಲಿ  ನಾನು ತಲೆಯಾಡಿಸಿ, `ಹೂಂ, ಹಂಗ ಆಗಲಿ` ಎಂದೆ. ಅಚಾರ್ರು ಏನೋ ಮಂತ್ರ ಗುಣಗುಣಿಸಿ ಅರ್ಘ್ಯ ಬಿಟ್ಟು, ಮತ್ತೊಮ್ಮೆ ಜೋರಾಗಿ, `ಅವ್ವಾ, ನಾನು ಲಕ್ಷೀನ್ನs ಮದುವಿ ಆಗತೀನಿ` ಎಂದು ಹೇಳಿದೆ. ಆಚಾರ್ರು ಅದನ್ನು ಸಂಸ್ಕೃತದಲ್ಲಿ ಹೇಳಿಸಿ ನೀರು ಬಿಡಿಸಿದರು. ನೀರು ಬಿಡಿಸಿದ್ದೇ ತಡ, ಒಂದಲ್ಲ, ಎರಡಲ್ಲ, ಕಾಗೆಗಳ ದಂಡೇ ಬಂದು ಪಿಂಡ ಬಕ್ಕಿದವು. ಅದನ್ನು ನೋಡಿ ಎಲ್ಲರೂ ಜೋರಾಗಿ ಅತ್ತರು. ಅವ್ವ ಇಷ್ಟು ಹೊತ್ತು ಕಾಗೆಪಿಂಡ ಮಾಡಿಸದೇ ಕಾಯುತ್ತಿದುದು ಅದಕ್ಕೇ ಎಂದು, ನನ್ನ ಮತ್ತು ಲಕ್ಷ್ಮಿಯ ಮದುವೆ ಶತಃಸಿದ್ಧ ಎಂಬ ಮಾತು ಕೇಳಿಸಿಕೊಂಡೇ ಅವ್ವನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಹಾರೈಸಿದರು, ಇಲ್ಲದಿದ್ದರೆ ಅವ್ವ ಅಂತರ್-ಪಿಶಾಚಿಯಾಗಿ ಅಲೆಯುತ್ತಿದ್ದಳು ಎಂದು ಗಲ್ಲ ಗಲ್ಲ ಬಡಿದುಕೊಂಡರು.

ಕಿಟಕಿಯಾಚೆಗಿದ್ದ ಕಾಗೆ ಹಾರಿ ಹೋಯಿತು. ಒಂಟಿತನ ಸಹಿಸಲಸಾಧ್ಯವೆನಿಸಿ ಪುಸ್ತಕ ಹಿಡಿದು ಕಾಲೇಜಿನ ಲೈಬ್ರರಿ ಕಡೆಗೆ ಹೊರಟೆ. ಮತ್ತೆ ಮಳೆ ಬರುವ ಸೂಚನೆಗಳಿದ್ದವು. ಮೋಡಗಳ ದಟ್ಟತೆ ಇನ್ನೂ ಕಡಿಮೆಯಾಗಿರಲಿಲ್ಲ.

ಲಕ್ಷ್ಮಿ ನನ್ನ ಜೊತೆ ಹೆಜ್ಜೆಹಾಕತೊಡಗಿದಳು. ದೊಡ್ಡ ಹಣೆ ತುಂಬ ಇಷ್ಟಗಲ ಕುಂಕುಮ, ಉದ್ದ ಜಡೆ ತುಂಬ ಮಲ್ಲಿಗೆ, ಮುಖದ ತುಂಬ ನಗು ತುಂಬಿಕೊಂಡು ಕೈಹಿಡಿದು ನಡೆಯುತ್ತಿದ್ದಳು. ಚಿಕ್ಕವರಿದ್ದಾಗ ಇಬ್ಬರೂ ಕೂಡಿ ರಜಾದಿನಗಲಲ್ಲಿ ಆಡಿದ ರಾಜಾ-ರಾಣಿ ಆಟ, ಅಡಿಗೆ ಆಟ, ಗಂಡಾ-ಹೆಣ್ತಿ ಆಟ ಎಲ್ಲ ನೆನಪಿಸಿಕೊಂಡು ನಗುತ್ತಿದ್ದಳು. ನಾನು ನಮ್ಮ ಎರಡು ವರ್ಷದ ಪೋರಿಯನ್ನು ಎತ್ತಿಕೊಂಡು  ನಗುತ್ತಿದ್ದೆ.

ಮತ್ತೆ ಮಳೆ ಶುರುವಾಯಿತು. ಮಳೆಯಲ್ಲಿ ಅರ್ಧ ತೊಯ್ದ ಕಾವ್ಯ ದುಗುಡದಿಂದ ನನ್ನತ್ತಲೇ ಬರುತ್ತಿದ್ದಳು. `ಅವ್ವ ಸತ್ಲು` ಎಂದೆ. ಇಬ್ಬರೂ ಕಾಲೇಜಿನ ಗಾರ್ಡನ್ನಿನತ್ತ ಮಾತಿಲ್ಲದೇ ನಡೆದೆವು. ಮಳೆ ನಿಂತಿತು. ನೆಲವೆಲ್ಲ ಹಸಿಯಾಗಿದ್ದರೂ ಮಾಮೂಲು ಗಿಡದಡಿ ಕುಳಿತೆವು. ನನಗೆ ತಲೆಯೆತ್ತಿ ಕಾವ್ಯಳನ್ನು ನೋಡುವ ಧೈರ್ಯವಾಗಲಿಲ್ಲ. ಕೈಗೆ ಸಿಕ್ಕ ಹುಲ್ಲಿನ ಗರಿಕೆಗಳನ್ನು ಕೀಳುತ್ತ ಮಣ್ಣಲ್ಲಿ ಬೆರಳಾಡಿಸುತ್ತಿದ್ದೆ. 

ನಡೆದುದೆಲ್ಲವನ್ನೂ ಕಕ್ಕಬೇಕೆನಿಸಿ ನಿಧಾನವಾಗಿ ಕಾವ್ಯಳತ್ತ ನೋಡಿದೆ. ನಾನು ಅವಳನ್ನು ನೋಡಿದ್ದೇ ತಡ ಆಕೆ ಅಳತೊಡಗಿದಳು. ಅವಳ ಕಂಬನಿ ಒರೆಸುತ್ತ, `ಯಾಕ ಕವಿ (ಕಾವ್ಯಳನ್ನು ನಾನು ಕರೆಯುತ್ತಿದುದು ಹಾಗೆ), ಯಾಕ ಅಳ್ತಿ? ನನ್ನವ್ವ ಹೋಗಿದ್ದು ಛೊಲೋನs ಆಗೇದ. ಅವಳು ಎಷ್ಟು ವರ್ಷದಿಂದ ನರಳತಿದ್ಲು ನಿನಗ ಗೊತ್ತದಲ್ಲ? ನಾನs ಅಳವಲ್ಲೆ, ನೀ ಯಾಕ ಅಳ್ತಿ? ಆಳುವಂಥಾದು ಏನ ಆಗೇದ ಈಗ? ಏನು ಆಗಬೇಕಾಗಿತ್ತೋ ಅದು ಆಗೂದs` ಎಂದು ವೇದಾಂತ ಮಾತಾಡಿದೆ.

ಕಾವ್ಯ ಅಳುತ್ತಲೇ, ` ನಾ ನಿಮ್ಮವ್ವ ಸತ್ತಿದ್ದಕ್ಕ ಅಳ್ತಿಲ್ಲ. ನಿನ್ನ ಸಲುವಾಗಿ ಅಳ್ಳಿಕತ್ತೀನಿ. ಕನಡ್ಯಾಗ ಮುಖಾರೆ ನೋಡ್ಕೋ. ತಲ್ಲಿ ಕೆದರೇದ, ಮುಖಾ ಬತ್ತಿ ಹೋಗೇದ, ನಿನ್ನ ಶರ್ಟು ಪ್ಯಾಂಟು ನೋಡು. ಯಾರೋ ಹುಚ್ಚನ್ನ ನೋಡಿದಂಗ ಆಗೇದ` ಎಂದಳು. 

ನನ್ನನ್ನು ನೋಡಿಕೊಂಡೆ. ರೊಜ್ಜಿನಲಿ ಮಿಂದ ಚಪ್ಪಲಿ, ರಾಡಿ ರಾಡಿ ಪ್ಯಾಂಟು, ನೀರಲ್ಲಿ ತೊಯ್ದ ಮುಗ್ಗಸು ವಾಸನೆಯ ಶರ್ಟು - ಕಾಲೇಜಿಗೆ ತಿರುಕನಂತೆ ಬಂದಿದ್ದೆ.

ಕಾವ್ಯಳಿಗೆ ಅವ್ವನ ಸಾವಿನಿಂದ ಹಿಡಿದು ಕಾಗೆಪಿಂಡದವರೆಗೆ ಭಾವರಹಿತನಾಗಿ ವಿವರಿಸಿದೆ. ಅಳುತ್ತಲೇ ಒಂದು ಸಣ್ಣ ಮಂದಹಾಸ ತಂದುಕೊಂಡು, `ಇದಕ್ಯಾಕ ಇಷ್ಟ ತಲಿ ಕೆಡಸಿಕೋತಿ? ನಿನ್ನ ಪರಿಸ್ಥಿತಿ ನನಗ ಅರ್ಥ ಆಗತದ. ನೀ ನಿಮ್ಮವ್ವನ ಆಸೆ ಹಂಗ ಲಕ್ಷ್ಮೀನ್ನ ಮದುವಿ ಆಗು, ಆತಿಲ್ಲೋ? ನಿನಕಿಂತ ಛೊಲೋ ಹುಡುಗನ್ನ ಹುಡುಕಿ ನಾ ಮದುವಿ ಆಗತೀನಿ, ನಾನೇನೂ ನನಗ ಏನೂ ಮಾಡ್ಕೋಳೂದುಲ್ಲ` ಎಂದು ಒಂದು ಕ್ಷಣ ಕೊನೆ ಬಾರಿ ಎಂಬಂತೆ ತಬ್ಬಿಕೊಂಡು, ದುರುದುರು ಹೊರಟುಹೋದಳು, ಹಿಂತಿರುಗಿಯೂ ನೋಡದೇ.

ಮತ್ತೆ ಹನಿಗಳು ಶುರುವಾದವು. ಕಾವ್ಯ ಇನ್ನೂ ನನ್ನನ್ನೇ ನೋಡುತ್ತ ಕೂತಿದ್ದಳು.  ಕಾಗೆ ಪಿಂಡದ ಬಗ್ಗೆ ಹೇಳಬಾರದು ಎಂದು ನಿರ್ಧರಿಸಿ, `ಕವಿ, ನನ್ನ ಸಲುವಾಗಿ ನೀ ಎಂದೂ ಅಳೂದು ಬ್ಯಾಡ, ನನ್ನಿಂದ ದೂರ ಹೋಗ್ಬಿಡು` ಎಂದೆ.

`ಯಾಕೋ, ಹುಚ್ಚ ಗಿಚ್ಚ ಹಿಡೀತೇನ? ಹಿಂಗ್ಯಾಕ ಮಾತಾಡ್ತೀಯೋ? ಎಲ್ಲಾ ಸರಿ ಹೋಗತದ` ಎಂದು ಕೈ ಅದುಮಿದಳು. 

`ಇಲ್ಲ ಕವಿ, ನಂಗ ಹುಚ್ಚ ಹಿಡದಿಲ್ಲ. ಈ ಸಮಾಜಕ್ಕ ಹುಚ್ಚ ಹಿಡದದ. ನಮ್ಮ ಸಂಸ್ಕೃತಿಗೆ ಹುಚ್ಚ ಹಿಡದದ. ನನ್ನ ಮಾಮಾ ಮಾಮಿ ಮಾಂಶಿಗೆ ಹುಚ್ಚ ಹಿಡದದ. ಮತ್ತ ಆ ಕಾಗೀಗೆ, ಆ  ಕಾಗೀಗೂ ಹುಚ್ಚ ಹಿಡದದ` ಎಂದೆ. ಕಾವ್ಯ ನನ್ನನ್ನು ಜೋರಾಗಿ ಅಲುಗಾಡಿಸಿದಳು. ನಾನು ಕಾವ್ಯಳ ಮಡಿಲಲ್ಲಿ ಮುಖ ಹುದುಗಿಸಿದೆ. ಅವಳು ನನ್ನ ತಲೆಕೂದಲಲ್ಲಿ ಕೈಯಾಡಿಸಿ ಸಮಾಧಾನ ಮಾಡಿದಳು. ಅವಳಿಗೆ ನಾನು ಏನು ಹೇಳುತ್ತಿದ್ದೇನೆಂದು ಅರಿವಿರಲಿಲ್ಲ. 

ನಾನು ಕಾವ್ಯಳನ್ನು ಕರೆದುಕೊಂಡು ಹಳ್ಳಿಗೆ ಹೋದೆ. ಬಾಳುಮಾಮಾ ಮಾಮಿಗೆ ಕಾವ್ಯಳ ಪರಿಚಯ ಮಾಡಿಸಿ ನಮ್ಮ ಪ್ರೇಮದ ಬಗ್ಗೆ ಹೇಳಿದೆ. ಮಾಮಾ ಮಾಮಿ ನನ್ನ ಮೇಲೆ ಕೆಂಡ ಕಾರದೇ ಎಲ್ಲ ಮುಗಿದು ಹೋದಂತೆ ಒಬ್ಬರಿಗೊಬ್ಬರು ನೋಡಿಕೊಂಡರು. `ಲಕ್ಷ್ಮಿ ಮದುವಿ ಮಾಡೂ ಜವಾಬ್ದಾರಿ ನಂಗ ಬಿಡ್ರಿ` ಎಂದೆ. ಬಾಳುಮಾಮಾ, `ಆತಪಾ, ದೊಡ್ಡ ಮನಷ್ಯಾ ಇದ್ದಿ, ಭಾಳ ಓದಕೊಂಡಿ. ಏನ್ ಮಾಡ್ತೀಯೋ ಮಾಡು, ನಮ್ಮ ಮಗಳ ಮದುವಿ ಹೆಂಗ ಮಾಡೂದು ಯಾರ ಜೊತೆ ಮಾಡೂದು ಅದೌ ನಮಗs ಇರಲಿ` ಎಂದ. ಬಾಳುಮಾಮಿ ಕಾಗೆಪಿಂಡದ ವಿಷಯ ವಿವರಿಸಿ, `ನಂಗೊತ್ತಿತ್ತು, ನೀ ಹಿಂಗ ಕೈಕೊಡಾವಾ ಅಂತ, ಆದ್ರ ನಿಮ್ಮವ್ವನ್ನ ಪ್ರೇತಾತ್ಮ ಮಾಡಿದ್ಯಲ್ಲೋ, ನಿಮ್ಮವ್ವಗ ಸುಳ್ಳು ಹೇಳಿದ್ಯಲ್ಲೋ` ಎಂದು ಹಲುಬಿದಳು. ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದಳು.

ತಣ್ಣನೆಯ ಗಾಳಿ ಬೀಸತೊಡಗಿತು. ಹಕ್ಕಿಗಳು ಗೂಡು ಸೇರಲು ಶುರು ಮಾಡಿದ್ದವು.

ಕಾವ್ಯಳನ್ನು ಗಟ್ಟಿಯಾಗಿ ಹಿಡಿದುಕೊಂದು ಮುತ್ತುಕೊಟ್ಟೆ. ಅವಳು ನಾಚಿ ಮುಖ ಮುಚ್ಚಿಕೊಂಡಳು. ಅವಳ ಕೊರಳಲ್ಲಿದ್ದ ಮಂಗಳಸೂತ್ರವನ್ನು ಎತ್ತಿ ಅವಳ ಮುಚ್ಚಿದ ಕೈಗಳಿಗೆ ಹೊಡೆದೆ. ಕೈತೆರದರೆ ಅಲ್ಲಿ ಲಕ್ಷ್ಮಿಯ ಮುಖವಿತ್ತು. ಗಾಬರಿಯಾಯಿತು. 

ಗುಡುಗಿದ ಶಬ್ದವಾಯಿತು. ಕಾಗೆಯೊಂದು ಹೆದರಿ ರೆಂಬೆಯಲ್ಲಿ ಕುಳಿತು `ಕಾವ್ ಕಾವ್` ಎಂದು ಭಯವನ್ನು ಇನ್ನಷ್ಟು ಹೆಚ್ಚಿಸಿತು.

(ಸೂಚನೆ: ಕತೆ ಅಸಂಬದ್ಧ ಅನಿಸಿದರೆ ಅಥವಾ ಅರ್ಥವಾಗದಿದ್ದರೆ ಸಣ್ಣ ಸುಳಿವು: ದಪ್ಪಕ್ಷರದಲ್ಲಿರುವುದೆಲ್ಲ ಭೂತಕಾಲ, ಇಟಾಲಿಕ್ ನಲ್ಲಿ ಇರುವುದೆಲ್ಲ ಭವಿಷ್ಯತ್ ಕಾಲ. ಉಳಿದುದೆಲ್ಲ ವರ್ತಮಾನಕಾಲ.)

ಈ ಕತೆ `ತರಂಗ`ದಲ್ಲಿ ಪ್ರಕಟವಾಗಿತ್ತು. ಇದು ನನ್ನ ಮೊಟ್ಟಮೊದಲ ಪ್ರಕಟಿತ ಕತೆ.