Friday 24 December 2021

ಇಂಗ್ಲೆಂಡ್ ಪತ್ರ 14

ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳು

ವರ್ಷ ಮುಗಿಯುತ್ತ ಬಂದಿದೆ. ಕೋವಿಡ್-19 ವೈರಸ್ ಜಾಗತಿಕ ಸಾಂಕ್ರಾಮಿಕ ಇನ್ನೂ ಮಾನವ ಜನಾಂಗವನ್ನು ಇನ್ನೂ ಬಿಟ್ಟು ಹೋಗುವ ಯಾವ  ಲಕ್ಷಣಗಳೂ ಕಾಣುತ್ತಿಲ್ಲ. ಓಟಿಟಿಗಳ ದೆಸೆಯಿಂದಾಗಿ, ಪೈರೇಟೆಡ್ ಜಾಲತಾಣಗಳಿಂದ ಸಿನೆಮಾ ನೋಡುವ ಚಟದಿಂದ ಕಂಪ್ಯೂಟರುಗಳಿಗೆ  ವೈರಸ್ ಬರುವುದಂತೂ ಕಡಿಮೆಯಾಗಿದೆ. 


ನೆಟ್‌ಫ್ಲಿಕ್ಸ್ ಮತ್ತು ಅಮೇಜ಼ಾನ್ ಪ್ರೈಮ್‌ಗಳಲ್ಲಿ ಈಗ ಬೇಕಾದಷ್ಟು ಭಾರತೀಯ (ಕನ್ನಡವನ್ನೂ ಸೇರಿಸಿ) ಬೇಕಾದಷ್ಟು ಸಿನೆಮಾಗಳು ನೋಡಲು ಸಿಗುತ್ತಿವೆ. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ. `ಕಥಾಗುಚ್ಛ ಸಿನೆಮಾ/ಸೀರೀಸ್ (ಆ್ಯಂಥಾಲಾಜಿ)`ಗಳನ್ನು ವಿವಿಧ ಭಾಷೆಗಳಲ್ಲಿ ನೋಡಿದೆ. ಈಗ ಎಲ್ಲ ಸಿನೆಮಾಗಳೂ ಇಂಗ್ಲೀಷ್ ಸಬ್‍ಟೈಟಲ್ಲುಗಳಲ್ಲಿ ಬರುವುದರಿಂದ ಯಾವ ಭಾಷೆಯ ಸಿನೆಮಾ ಆದರೂ ಪರವಾಗಿಲ್ಲ.


ಸಣ್ಣಕತೆಗಳನ್ನು ಸೇರಿಸಿ ಕಥಾಗುಚ್ಛಗಳ ಸಿನೆಮಾ ಮಾಡುವ ಪ್ರಯೋಗ ಹೊಸದೇನಲ್ಲ. ಕೋವಿಡ್ ಸಾಂಕ್ರಾಮಿಕದಲ್ಲಿ ಇಂಥ ಸಿನೆಮಾಗಳು ಭಾರತೀಯ ಭಾಷೆಗಳಲ್ಲಿ ಹೆಚ್ಚಾದವು ಮತ್ತು ಓಟಿಟಿಯಲ್ಲಿ ಸಬ್‌ಟೈಟಲ್‌ಗಳೋಡನೆ ನೋಡಲು ದೊರೆತವು. 


ಇಂಥ ಸಿನೆಮಾಗಳು ಒಂದು ‘ಕಥಾಸಂಕಲನ‘ವನ್ನು ಓದಿದ ಅನುಭವವನ್ನು ಕೊಡುತ್ತವೆ. ಸಿನೆಮಾದ ವಸ್ತು ಮತ್ತು ತಂತ್ರಗಳಲ್ಲಿ ಆಸಕ್ತಿಯಿರುವವರಿಗೆ ಹೊಸ ಹೊಸ ವಿಷಯಗಳನ್ನು ಕಲಿಸುತ್ತವೆ. ಈ ವರ್ಷ ಇಂಥ ಸಿನೆಮಾಗಳು ವಿವಿಧ ಭಾರತೀಯ ಭಾಷೆಗಳಲ್ಲಿ ಬೆಳಕುಕೊಂಡವು. ಕೋವಿಡ್ ದೆಸೆಯಿಂದಾಗಿ ಕಡಿಮೆ ಬಡ್ಜೆಟ್ಟಿನಲ್ಲಿ ತಮ್ಮ ಸೃಜನಶೀಲತೆಯನ್ನು ಕಂಡುಕೊಳ್ಳುವ ಉಪಾಯಕ್ಕೆ ನಿರ್ದೇಶಕರು ತಮ್ಮನ್ನು ಒಡ್ಡಿಕೊಂಡರು ಎನಿಸುತ್ತದೆ. ಕೆಲವು ಸಿನೆಮಾದ ತರಹ ಇದ್ದರೆ, ಕೆಲವು ಎಪಿಸೋಡುಗಳ ತರಹ ಇವೆ. ತಮಿಳಿನಲ್ಲಿ (ನನಗೆ ತಮಿಳು ಬರುವುದೂ ಇಲ್ಲ) ಈ ಕೋವಿಡ್ ಸಮಯದಲ್ಲಿ ಬಂದ ಇಂಥ ಮೂರು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 


ನವರಸ: 


ಒಂಭತ್ತು ರಸಗಳ ಕಥಾಗುಚ್ಛವಿದು. ಒಂದೊಂದು ರಸಕ್ಕೆ ಒಂದು ಕತೆ. ಇಂಥದೊಂದು ಕಲ್ಪನೆಯೇ ಅದ್ಭುತ.  ಇಂಥದೊಂದು ಕಲ್ಪನೆಯಲ್ಲಿ ವಿವಿಧ ಪರಿಣಿತರನ್ನು ಸೇರಿಸಿ ಮಾಡುವ ಕೆಲಸ ಸುಲಭದ್ದಲ್ಲ. ಹಾಗೆಯೇ ಎಲ್ಲ ಕಿರುಚಿತ್ರಗಳೂ ಒಂದೇ ರೀತಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುವುದಿಲ್ಲ. 


ಕರುಣ ರಸದ ಮೊದಲ ಕತೆಯಲ್ಲಿ ಕೊಲೆಯ ಕ್ರೌರ್ಯವಿದೆ, ಕ್ರೌರ್ಯಯ ಕ್ರಿಯೆ ಮುಗಿದಾದ ಮೇಲೆ ಉಳಿಯುವುದು `ಕರುಣ` ಮಾತ್ರವೇ ಎಂದು ಪ್ರಶ್ನಿಸುವಂತಿದೆ ಈ ಚಿತ್ರ. 


ಎರಡನೇ ಕತೆಯ ಮುಖ್ಯ ಎಳೆ ಹಾಸ್ಯರಸ. ಪ್ರಸಿದ್ಧ ಹಾಸ್ಯನಟನೊಬ್ಬ ತಾನು ಓದಿದ ಪ್ರಾರ್ಥಮಿಕ ಶಾಲೆಗೆ ಮುಖ್ಯ ಅತಿಥಿಯಾಗಿ ಬರುವ ಕಥೆ. ಆ ಹಾಸ್ಯನಟ ಚಿಕ್ಕವನಿದ್ದಾಗ ನಡೆದ ಘಟನೆ ನೋಡುಗರಿಗೆ ನಗುತರಿಸುವಂತಿದ್ದರೂ ನಿಜಜೀವನದಲ್ಲಿ ನಡೆದರೆ ಜಿಗುಪ್ಸೆಯನ್ನು, ಹೇಸಿಗೆಯನ್ನು (ಬೀಭತ್ಸ) ಹುಟ್ಟಿಸುವಂತಿದೆ. ಕತೆ ಕೊನೆಯಲ್ಲಿ `ಕರುಣ`ದಲ್ಲಿ ಮುಕ್ತಾಯವಾಗುತ್ತದೆ. 


`ಅದ್ಭುತ`ರಸದ ಕತೆಯಲ್ಲಿ ಅತಿರಂಜಕ/ಅದ್ಭುತರಮ್ಯ (ಫ್ಯಾಂಟಸಿ - ಸೈಫೈ) ಕತೆಯಿದೆ. ವಿಜ್ಞಾನ ಮತ್ತು ತತ್ವಶಾಸ್ತ್ರಗಳ ನಡುವಿನ ಜಿಜ್ಞಾಸೆಗಳನ್ನು ಕತೆಗಳನ್ನಾಗಿಸಿ ಹೇಳುವ ರೀತಿಯಲ್ಲಿ ನಿಗೂಢತೆಯಿದೆ, ಜೊತೆಗೆ ಅಂತ್ಯದಲ್ಲಿ ಊಹಿಸಲಾಗದ ತಿರುವಿನಲ್ಲಿ `ಭಯಾನಕ`ದ ರಸದಲ್ಲಿ ಮುಕ್ತಾಯವಾಗುತ್ತದೆ. 


`ಅಸಹ್ಯ (ಬೀಭತ್ಸ)` ತರಿಸುವ `ಪಾಯಸ`ದ ಕತೆಯಿದೆ. ಈ ಚಿತ್ರದಲ್ಲಿ ತುಂಬ ಸೂಕ್ಷ್ಮ ಅವಲೋಕನಗಳಿವೆ. ಪುಟ್ಟ ಪುಟ್ಟ ವಿಷಯಗಳನ್ನೂ ವಿವರವಾಗಿ ಆದರೆ ಗುಪ್ತಗಾಮಿಸಿಯಾಗಿ ಕ್ಯಾಮರದಲ್ಲಿ ಸೆರೆಹಿಡಿಯಲಾಗಿದೆ. ಮುಖ್ಯಪಾತ್ರದ ತಲ್ಲಣಗಳು ವ್ಯಾಚ್ಯವಾಗದೇ ನಮ್ಮನ್ನು ತಲುಪುವ ನಿಪುಣತೆ ಇದೆ. ಚಿತ್ರದ ಕೊನೆ ಅಸಹ್ಯ ತರಿಸುತ್ತದೆ, ಮಗಳಿಗೆ. ಆದರೆ ನೋಡುಗನಿಗಲ್ಲ ಎನ್ನುವುದು ವಿಶೇಷ ಎನಿಸುತ್ತದೆ. ಚಿತ್ರದ ನಾಯಕ ಮಾಡುವುದು ತಪ್ಪು ಎಂದು ಗೊತ್ತಿದ್ದರೂ ನೋಡುಗನಿಗೆ ಅವನ ಮೇಲೆ ಅಸಹ್ಯ ಅನಿಸುವುದಿಲ್ಲ, ಬದಲು ಆ ಮುದುಕನ ಮೇಲೆ `ಕರುಣೆ` ಮೂಡುತ್ತದೆ.


`ರೌದ್ರ` ಎಂದರೆ ಭಯಂಕರ ಸಿಟ್ಟು. ಈ ಭಯಂಕರ ಸಿಟ್ಟು ಕೊಲೆಯ ಕ್ರೌರ್ಯದಿಂದ ಆರಂಭವಾಗುತ್ತದೆ. ಕೊಲೆ ಮಾಡಿದ ಮೇಲೆ ಕೋಪವೆಲ್ಲ ಇಳಿದು ಹೋಗುತ್ತದೆ. ಆದರೆ ಕೊಲೆ ಮಾಡಿದಾತನ ಸಹೋದರಿಗೆ ತನ್ನ ತಾಯಿಯ ಮೇಲೆ ಕೋಪ (ಕಾರನವೇನೇ ಇರಲಿ), ಆ ಕೋಪ ತಾಯಿಯು ಸಾವಿನ ಹೊಸ್ತಿಲಲ್ಲಿ ಇದ್ದರೂ ತಾಯಿಯನ್ನು ಕ್ಷಮಿಸಲು ಬಿಡುವುದಿಲ್ಲ, ಅಂಥ ಭಯಂಕರ ಕೋಪ. ಈ ಚಿತ್ರ `ಪಾಯಸ` ಚಿತ್ರದಷ್ಟೇ ಸಶಕ್ತವಾಗಿದೆ. 


`ಶಾಂತ`, `ಭಯಾನಕ`, `ವೀರ` ಮತ್ತು `ಶೃಂಗಾರ` ರಸಗಳ ಕತೆಗಳು ತುಂಬ ತೆಳುವಾಗಿವೆ. ಇಲ್ಲಿ ಭಯವೂ ಆಗುವುದಿಲ್ಲ, ವೀರಾವೇಶವೂ ಮೂಡುವುದಿಲ್ಲ, ಶೃಂಗಾರದ ಹೊಂಗೆ ಮರ ಹೂ ಬಿಡುವುದಿಲ್ಲ, ಶಾಂತಿಯೂ ಸಿಗುವುದಿಲ್ಲ, ಏನೂ ಅನಿಸುವುದಿಲ್ಲ. ಈ ನಾಲ್ಕು ಚಿತ್ರಗಳ ಬಗ್ಗೆ ಕಡಿಮೆ ಬರೆದಷ್ಟು ಒಳ್ಳೆಯದು. 


ಪುತ್ತಂ ಪುದು ಕಾಲೈ: 


ಸಿನೆಮಾದ ಶೀರ್ಷಿಕೆಯೇ ಹೇಳುವಂತೆ ಈ ಚಿತ್ರದ ಎಲ್ಲ ಎಲ್ಲ ಕತೆಗಳೂ ಒಂದು ಹೊಸ ಭರವಸೆಯೊಂದಿಗೆ ಮುಗಿಯುತ್ತವೆ. ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಈ ಸಿನೆಮಾಗಳು ನಗರಗಳಲ್ಲಿ ಮಾತ್ರವಲ್ಲ, ಐದರಲ್ಲಿ ನಾಲ್ಕು ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಅದೂ ಕೋವಿಡ್ ಲಾಕ್‌‌ಡೌನ್ ಕಾಲದಲ್ಲಿ. 


‘ಪ್ರೀತಿ‘ ಎನ್ನುವುದೊಂದು ಮೂಡಿದರೆ, ಎಷ್ಟೇ ವಯಸ್ಸಾಗಿದ್ದರೂ ಹೇಗೆ ಮಾನಸಿಕವಾಗಿ ನಾವೆಲ್ಲ ಯುವಕರಾಗುತ್ತೇವೆ ಎನ್ನುವುದನ್ನು ವಿಭಿನ್ನ ತಂತ್ರದಿಂದ ಇಲ್ಲಿ ಕತೆಯನ್ನು ಹೇಳಿದ್ದಾರೆ. ಇಂಥ ತಂತ್ರವನ್ನು ಉಪಯೋಗಿಸಿ ಮಾಡಿದ ಇನ್ನೊಂದು ಸಿನೆಮಾವನ್ನು ನಾನಂತೂ ನೋಡಿಲ್ಲ.  ಅದಕ್ಕೆಂದೇ ಈ ಸಿನೆಮಾ ತಂತ್ರದಿಂದಾಗಿ ತುಂಬ ಖುಷಿಕೊಡುತ್ತದೆ. ಇಂಥದೊಂದು ಕತೆಯನ್ನು ಕತೆಯ ರೂಪದಲ್ಲಿ ಬರೆಯಲು ಸಾಧ್ಯವೇ ಇಲ್ಲ, ದೃಶ್ಯಮಾಧ್ಯಮದಲ್ಲೇ ಮಾಡಬೇಕು, ಹಾಗಿದೆ ಈ ತಂತ್ರ. 


ಎರಡು ತಲೆಮಾರುಗಳ ನಡುವಿನ ಕಂದಕವು ಕೋವಿಡ್ ಲಾಕ್‌ಡೌನ್‌ನಿಂದಾಗಿ ಹೇಗೆ ಮುಚ್ಚುತ್ತಾ ಬರುತ್ತದೆ ಎನ್ನುವ ಆಶಯದ ಇನ್ನೊಂದು ಕತೆಯಿದೆ. ಅಜ್ಜ ಮತ್ತು ಮೊಮ್ಮಗಳು ಲಾಕ್‌ಡೌನ್ ನೆಪದಲ್ಲಿ ಒಂದೇ ಮನೆಯಲ್ಲಿ ಇರಬೇಕಾದ ಅನಿವಾರ್ಯತೆಯ ಒದಗುತ್ತದೆ. ಇಲ್ಲಿ ತಾತನೂ ಕೂಡ ತುಂಬ ಓದಿದ ವಿದ್ಯಾವಂತ ಎನ್ನುವುದು ಈ ಚಿತ್ರದ ವಿಶೇಷ, ಏಕೆಂದರೆ ಇಲ್ಲಿಯವರೆಗೂ ‘ತಾತ‘ ಎಂದರೆ ಹಳ್ಳಿಯಲ್ಲಿ ಬೆಳೆದ ಅವಿದ್ಯಾವಂತ ಎನ್ನುವಂತೆ ಚಿತ್ರರಂಗ ತೋರಿಸುತ್ತ ಬಂದಿದೆ. 


ಇನ್ನೊಂದು ಕತೆ: ಕೋಮಾದಲ್ಲಿರುವ ತಾಯಿಯಿಂದಾಗಿ ತವರುಮನೆಗೆ ಬರುವ ಇಬ್ಬರು ಹೆಣ್ಣುಮಕ್ಕಳ (ಅವರಿಗೂ ವಯಸ್ಸಾಗುತ್ತಿದೆ) ನಡುವಿನ, ಮತ್ತು ಅವರು ಮತ್ತು ಅವರ ತಂದೆಯ ನಡುವಿನ ಭಾವನೆಗಳ ಸುತ್ತ ಕತೆ ಸಾಗಿ ಭರವಸೆಯೊಂದಿಗೆ ಮುಗಿಯುತ್ತದೆ. 


ಲಾಕ್‌ಡೌನ್ ದೆಸೆಯಿಂದಾಗಿ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ, ತನ್ನ ಕಾಲೇಜ್‌ಮೇಟ್ ಆಗಿದ್ದ ಯುವಕನ ಮನೆಗೆ (ಈಗ ಆತ ವೈದ್ಯ) ಬರುವ ಡ್ರಗ್-ಅಡಿಕ್ಟ್ ಆದ ಯುವತಿಯೊಬ್ಬಳು ಆ ಮನೆಯಿಂದ ಹೊರಗೆ ಹೋಗುವಷ್ಟರಲ್ಲಿ ಹೇಗೆ ಹೊಸ ಆಸೆಗಳನ್ನು ಅರಳಿಸಿಕೊಂಡು ಹೋಗುತ್ತಾಳೆ ಎನ್ನುವುದು ಇನ್ನೊಂದು ಕತೆ. 


ಕೊನೆಯ ಕತೆ, ಈ ಸಿನೆಮಾಗಳ ಬಾಲಂಗಸಿಯಂತೆ ಉಳಿಯುತ್ತದೆ, ಆದರೆ ಆ ಕತೆಯ ಅಂತ್ಯದ ತಿರುವು ಸೊಗಸಾಗಿದೆ. ಈ ಕಥಾಗುಚ್ಛದ ಮೂಲ ಉದ್ದೇಶ `ಭರವಸೆ`ಇದ್ದರೂ, ಕೊನೆಯ ಕತೆ ಇಲ್ಲಿ ಸಲ್ಲದ, ಆದರೆ ಸ್ವತಂತ್ರವಾಗಿ ಒಂದು ಉತ್ತಮ ಕಿರುಚಿತ್ರವಾಗಿದೆ. 


ಪಾವ ಕದೈಗಳ್:


ಈ ಕಿರುಚಿತ್ರಗಳ ಸಾಮಾನ್ಯ ಅಂಶ ಎಂದರೆ `ಪಾಪ‘ - ಸಮಾಜದ ಅಥವಾ ಕುಟುಂಬದ ಕಣ್ಣಿನಲ್ಲಿ ಯಾವುದು ಪಾಪವೋ, ಅಂಥ ಪಾಪಗಳ ಕತೆಗಳಿವೆ. ಈ ಸಿನೆಮಾದ ಕತೆಗಳು ಹಳ್ಳಿ ಮತ್ತು ಪಟ್ಟಣಗಳ ನಡುವೆ ತುಯ್ದಾಡುತ್ತವೆ ಎನ್ನುವುದು ವಿಶೇಷ. ಈ ಕಥಾಗುಚ್ಛ ದುರ್ಬಲ ಹೃದಯದವರಿಗೆ ಅಲ್ಲ. 


ಇದೊಂದು ವಿಚಿತ್ರ ತ್ರಿಕೋನ ಪ್ರೇಮದ ಕತೆ. ಹಳ್ಳಿಯೊಂದರಲ್ಲಿ ನಡೆಯುವ ಈ ಪ್ರೇಮದಲ್ಲಿ ಅಂತರಧರ್ಮಪ್ರೇಮ ಮತ್ತು ಸಲಿಂಗಪ್ರೇಮ ಎನ್ನುವ ಎರಡು ಸಂಘರ್ಷಗಳನ್ನು ಒಟ್ಟಿಗೇ ಇಟ್ಟು ನೋಡುವ ಕಥೆಯನ್ನು ಹೆಣೆದಿದ್ದಾರೆ. ಇಸ್ಲಾಂ ಹುಡುಗಿಯ ಮೇಲೆ ಹಿಂದೂ ಹುಡುಗನಿಗೆ ಪ್ರೇಮ ಅಂಕುರಿಸುತ್ತದೆ. ಆ ಹುಡುಗಿಯ ಅಣ್ಣನಿಗೆ ಈ ಹಿಂದೂ ಹುಡುಗನ ಮೇಲೆ ಪ್ರೇಮ ಮೂಡುತ್ತದೆ. ಈ ಎರಡು `ಪಾಪ`ಗಳ ಪ್ರೇಮಕತೆಯೇ ಇಲ್ಲಿನ ವಸ್ತು.


ಇಲ್ಲಿರುವ ಎರಡನೇ ಕತೆ ಅಂತರಜಾತಿ ಪ್ರೇಮದ ಪಾಪದ ಕತೆ. ಮನೆತನದ ಮರ್ಯಾದೆಯನ್ನು ಕಾಪಾಡಲು ಕೊಲೆ ಮಾಡಿಸಲೂ (ಆನರ್ ಕಿಲ್ಲಿಂಗ್) ಹೇಸದ ಅಪ್ಪನ ಕಥೆಯಿದೆ, ಅದು ಆತನಿಗೆ ಪಾಪ ಎಂದು ಕೂಡ ಅನ್ನಿಸುವುದಿಲ್ಲ. ಆ ಕತೆಯಲ್ಲಿ ಕೂಡ ಸಲಿಂಗಕಾಮದ `ಪಾಪ` ಬರುತ್ತದೆ. 


ಮೂರನೇ ಕತೆಯಲ್ಲಿ ಅಪ್ರಾಪ್ತ ಹುಡುಗಿಯ ಮೇಲಿನ ಬಲಾತ್ಕಾರವಾಗುತ್ತದೆ; ಅದು ಪಾಪ. ಆದರೆ, ಬಲಾತ್ಕಾರ ಮಾಡಿದಾತನಿಗ ಯಾವ ಪಾಪದ ಭಯವೂ ಇಲ್ಲ. ಯಾವ ಪಾಪವನ್ನೂ ಮಾಡಿರದ ಬಲಾತ್ಕಾರಕ್ಕೆ ಒಳಗಾದ ಅಪ್ರಾಪ್ತ ಹುಡುಗಿ ಸಮಾಜದ ಕಣ್ಣಲ್ಲಿ `ಪಾಪ` ಮಾಡಿದವಳು. ಇಂಥ ಸಮಾಜವನ್ನು ಎದುರಿಸುವ ಧೈರ್ಯ ಸಾಲದೇ ಮಗಳನ್ನೇ ಕೊಲ್ಲುವ `ಪಾಪ`ದ ಕಲ್ಪನೆಯಿದೆ. 


ನಾಲ್ಕನೇ ಕತೆಯಲ್ಲಿ ಅಂತರಜಾತೀಯ ವಿವಾಹವಾಗಿ ನಗರವನ್ನು ಸೇರಿದ ಹಿರಿಯ ಮಗಳ ಕಾರಣದಿಂದಾಗಿ, ಉಳಿದ ಹೆಣ್ಣುಮಕ್ಕಳ ಮದುವೆ ಮಾಡಲಾಗದೇ, ತನ್ನ ಜಾತಿಯಲ್ಲಿ ತಲೆ ತಗ್ಗಿಸಿ ನಡೆಯುವವನಿಗೆ ತನ್ನ ಹಿರಿಯ ಮಗಳು ಮಾಡಿದ್ದು `ಪಾಪ`. ಆ `ಪಾಪ`ಕ್ಕೆ ತಂದೆ ಮಾಡುವ ಪ್ರತಿಕಾರ ಈ ಕಥಾಗುಚ್ಛದ ಅತ್ಯುತ್ತಮ ಸಿನೆಮಾ ಆಗಿಸುತ್ತದೆ. ಈ ಚಿತ್ರದಲ್ಲಿ ಪ್ರಕಾಶ್ ರೈ ತಂದೆಯ ಪಾತ್ರವನ್ನು ಮಾಡುವ ರೀತಿ ಅನನ್ಯವಾಗಿದೆ. . 


ಈ ನಾಲ್ಕೂ ಕತೆಗಳನ್ನು ವಾಸ್ತವಕ್ಕೆ ಹತ್ತಿರವಾಗಿರುವಂತೆ ಬರೆಯಲಾಗಿದೆ ಮತ್ತು ಚಿತ್ರೀಕರಿಸಲಾಗಿದೆ. `ನವರಸ` ಮತ್ತು `ಪುತ್ತಂ ಪುದು ಕಾಲೈ`ಗಳಿಗೆ ಹೋಲಿಸಿದರೆ, ಈ ಕಥಾಗುಚ್ಛ `ಪಾಪ`ದ ವಿಷಯಕ್ಕೆ ಬದ್ಧವಾಗಿದೆ. ತುಂಬ ದಿನ ನೆನಪಿನಲ್ಲಿ ಉಳಿಯುವಂಥ ಕಥಾಗುಚ್ಛವಿದು.. 


ಕನ್ನಡದಲ್ಲಿ ಕಥಾಗುಚ್ಛಗಳ ಸಿನೆಮಾಗಳು:


ಈ ಮೂರೂ ಕಥಾಗುಚ್ಛಗಳು ವಿನೂತನವಾಗಿವೆ. ನಮ್ಮ ಸಮಯವನ್ನು ತಿನ್ನದೇ, ನಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡದೇ, ವಿಭಿನ್ನ ರೀತಿಯ ಕತೆಗಳನ್ನು ಹೇಳುವ ಇಂಥ ಕಥಾಗುಚ್ಛಗಳು ನನಗೆ ತುಂಬ ಇಷ್ಟವಾದವು. ಲಾಕ್‌ಡೌನ್ ಸಮಯದಲ್ಲಿ ತಮಿಳು ಚಿತ್ರರಂಗ ತಂದ ಇಂಥ ವಿಭಿನ್ನ ಪ್ರಯತ್ನವನ್ನು ಮಲಯಾಳಂದಲ್ಲೂ ಮಾಡಿದ್ದಾರೆ, ತೆಲುಗಿನಲ್ಲೂ ಬಂತು, ಹಿಂದಿಯಲ್ಲೂ ಬಂದವು. ಆದರೆ ಕನ್ನಡದಲ್ಲಿ ಮಾತ್ರ ಬರಲಿಲ್ಲ. ಲಾಕ್-ಡೌನ್ ಕತೆಯ `ಇಕ್ಕಟ್` ಸಿನೆಮಾ ಮಾತ್ರ ಬಂತು. 


ಕಿರುತೆರೆಯಲ್ಲಿ ಬಹಳ ಹಿಂದೆ ಶ್ಯಾಮ್ ಬೆನಗಲ್ ‘ಅಮರಾವತೀ ಕಿ ಕಹಾನಿ‘ ಎನ್ನುವ ಸುಂದರ ಕಥಾಗುಚ್ಛವನ್ನು ದೂರದರ್ಶನಕ್ಕೆ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಅವರು `ಕಥಾಸಂಗಮ`ವನ್ನು ದಶಕಗಳ ಹಿಂದೆಯೇ ಮಾಡಿದ್ದರು. ಅದೇ ಹೆಸರನ್ನು ಇಟ್ಟುಕೊಂಡು ರಿಷಭ ಶೆಟ್ಟಿಯವರು ಕೋವಿಡ್ ಬರುವ ಮೊದಲು ಮಾಡಿದ್ದರು. ಅಚ್ಚಕನ್ನಡದ ಮೈಸೂರಿನಲ್ಲಿ ಬದುಕಿದ್ದ ತಮಿಳಿನ ಆರ್.ಕೆ.ನಾರಾಯಣ್ ಅವರು ಇಂಗ್ಲೀಷಿನಲ್ಲಿ ಬರೆದ ಕತೆಗಳನ್ನು ಹಿಂದಿಯಲ್ಲಿ ತೆರೆಗೆ ತಂದವರು ಮನೆಮಾತು ಕೊಂಕಣಿಯಾಗಿದ್ದ ಶಂಕರನಾಗ್ ಅವರು (ಕಥೆ ಬರೆಯುವವರಿಗೆ ಸಿನೆಮಾ ಮಾಡುವವರಿಗೆ ಭಾಷೆಯ ಹಂಗಿಲ್ಲ, ಅಲ್ಲವೇ?) ಅಂದಿನ ಕಾಲದ ತಂತ್ರಜ್ಞಾನದಲ್ಲಿ, ಇರುವ ಕಡಿಮೆ ಬಡ್ಜೆಟ್ಟಿನಲ್ಲಿ, ಆರ್ ಕೆ ನಾರಾಯಣ್ ಅವರ ಕತೆಗಳನ್ನು ಕಿರುತೆರೆಗೆ ತಂದು `ಸ್ವಾಮಿ`ಯನ್ನು ಭಾರತದ ಮನೆ ಮಾತಾಗಿಸಿದ್ದು ಕನ್ನಡ ಚಿತ್ರರಂಗದ ಶಂಕರನಾಗ್. 


ಇತ್ತೀಚೆ ಬಂದ `ಅನ್-ಕಹೀ ಕಹಾನಿಯಾಂ` ಎನ್ನುವ ಕಥಾಗುಚ್ಛದಲ್ಲಿ ಜಯಂತ್ ಕಾಯ್ಕಿಣಿಯವರು ಬರೆದ ಕತೆಯೊಂದನ್ನು ಎತ್ತಿಕೊಂಡು ಒಂದು ಕತೆ ಹೇಳಿದ್ದಾರೆ.  ಕನ್ನಡ ಸಾಹಿತ್ಯ ಸಣ್ಣಕತೆಗಳ ಗಣಿ ಎಂದರೆ ತಪ್ಪಿಲ್ಲ. ಮಾಸ್ತಿಯವರಿಂದ ಹಿಡಿದು ಜೋಗಿಯವರು ಬರೆದಿರುವ ಸಣ್ಣಕತೆಗಳಲ್ಲಿ ಇಂಥ ಒಂದಲ್ಲ ಹತ್ತು ಆ್ಯಂಥಾಲಾಜಿಗಳನ್ನು ತರಬಹುದು. ಓಟಿಟಿಯಲ್ಲಿ ಕನ್ನಡದ ಕಂಪನ್ನು ಹರಡಲು ಇದಕ್ಕಿಂತ ಓಳ್ಳೆಯ ವಸ್ತುಗಳು ಮತ್ತು ತಂತ್ರಗಳು ಸಿಗುವುದಿಲ್ಲ. ಇದರತ್ತ ಕನ್ನಡದ ನಿರ್ದೇಶಕರು ಮತ್ತು ನಿರ್ಮಾಪಕರು ಗಮನ ಹರಿಸಲಿ ಎನ್ನುವುದು ನನ್ನ ಆಶಯ. 


(ಕೆಂಡಸಂಪಿಗೆಯಲ್ಲಿ ಮೊದಲಿ ಪ್ರಕಟಿತ)


Saturday 27 November 2021

ಇಂಗ್ಲೆಂಡ್ ಪತ್ರ 13

ಆರೋಗ್ಯ, ಕಾಯಿಲೆ ಮತ್ತು ಸಾವು

 ಪುನೀತ್ ರಾಜಕುಮಾರ್ ಅವರು ಯಾವುದೇ ಪೂರ್ವಸೂಚನೆಗಳಿಲ್ಲದೇ ಹೃದಯಾಘಾತಗಿಂದ ನಿಧನರಾದಾಗ ಸುದ್ದಿಮಾಹಿನಿಗಳಲ್ಲಿ, ವಾಟ್ಸ್ಯಾಪಿನಲ್ಲಿ ಆರೋಗ್ಯದ ಆರೈಕೆಯ ವಿಷಯವಾಗಿ, ವ್ಯಾಯಾಮವನ್ನು ಮಾಡಬೇಕೇ ಬೇಡವೇ, ಯಾವ ಯಾವ ಆರೋಗ್ಯದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು, ಏನು ತಿನ್ನಬೇಕು, ಏನು ತಿನ್ನಬಾರದು, ಏನು ಕುಡಿಯಬೇಕು, ಏನು ಕುಡಿಯಬಾರದು, ಯಾವ ವೈದ್ಯಶಾಸ್ತ್ರವನ್ನು ಅವಲಂಬಿಸಬೇಕು ಎನ್ನುವ ಬಗೆಗೆ ಸಾಕಷ್ಟು ಚರ್ಚೆಗಳು, ಸಲಹೆಗಳು, ಉಪದೇಶಗಳು ಪಾಮರರಿಂದ ಹಿಡಿದು ಪಂಡಿತರವರೆಗೂ ನಡೆದಿವೆ. ವೈದ್ಯವೃತ್ತಿಯಲ್ಲಿರುವ ಹೃದಯರೋಗ ಪರಿಣಿತರು ಸುದ್ದಿವಾಹಿನಿಗಳಲ್ಲಿ, ಯುಟ್ಯೂಬಿನಲ್ಲಿ ತಮ್ಮ ನುರಿತ ಸಲಹೆಗಳನ್ನು ಕೊಟ್ಟಿದ್ದಾರೆ. ಒಂದರ್ಥದಲ್ಲಿ ಪುನೀತ್ ಅವರ ಹಠಾತ್ ಹೃದಯಾಘಾತದಿಂದ ಜನರಲ್ಲಿ ಆರೋಗ್ಯದ ಬಗ್ಗೆ, ವ್ಯಾಯಾಮ ಎಷ್ಟು ಮಾಡಬೇಕು ಎನ್ನುವ ಬಗ್ಗೆ ಗೊಂದಲಗಳಾಗಿವೆ. ನಾನು ಹೃದಯಶಾಸ್ತ್ರಜ್ಞನಲ್ಲ, ರೇಡಿಯಾಲಾಜಿಸ್ಟ್. ನನ್ನ ಈ ಮಿತಿಯಲ್ಲಿ ಕೆಲವು ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತೇನೆ. 


ಈ ಕೆಳಗಿನ ಎರಡು ಮಾದರಿಗಳನ್ನು ಗಮನಿಸಿ: 

  1. ಪ್ರತಿ ನಿಮಿಷಕ್ಕೆ ಹತ್ತಾರು ಗಿಗಾಬೈಟ್ ಮಾಹಿತಿಯನ್ನು ಪಡೆದು, ಸಂಗ್ರಹಿಸಿ, ರವಾನಿಸಿ, ವಿಭಾಗಿಸಿ, ವಿಶ್ಲೇಷಿಸಿ, ಅರ್ಥವಾಗುವ ಹಾಗೆ ಮಾಹಿತಿಯನ್ನು ಹೊರಹಾಕುವ, ನೂರಾರು ತರಹದ ಸಾಫ್ಟ್‌ವೇರ್‌ಗಳಿರುವ ಒಂದು ಸೂಪರ್ ಕಂಪ್ಯೂಟರನ್ನು ಊಹಿಸಿಕೊಳ್ಳಿ. ಅಂಥ ನೂರಾರು ಸೂಪರ್ ಕಂಪ್ಯೂಟರ್ ಮತ್ತು ಅವುಗಳ ಜಾಲವನ್ನು ಊಹಿಸಿಕೊಳ್ಳಿ. ಇಂಥ ವ್ಯವಸ್ಥೆ ನಾಸಾ, ಗೂಗಲ್‌, ಫೇಸ್‍ಬುಕ್‌ ಸರ್ವರ್‌ಗಳನ್ನು ಇಟ್ಟಿರುವ ಜಾಗಗಳಲ್ಲಿ ನೋಡಬಹುದು. ಅರ್ಧ ಎಕರೆ ಜಾಗದಲ್ಲಿ ನೂರಾರು ಕೂಲರ್‌ಗಳ ನಡುವೆ ಈ ಸರ್ವರ್‌ಗಳನ್ನು ಇಟ್ಟಿರುತ್ತಾರೆ. ಅವುಗಳನ್ನು ಸದಾ ಕಾಲ ನೋಡಿಕೊಳ್ಳಲು ಇಂಜಿನಿಯರುಗಳ ತಂಡವೇ ಇರುತ್ತದೆ. ಈ ಅರ್ಧ ಎಕರೆಯ ಜಾಗದಲ್ಲಿ ನೂರಾರು ಕಂಪ್ಯೂಟರುಗಳು ನಡೆಯುವ ಈ ಎಲ್ಲ ಸಂಕೀರ್ಣ ಕೆಲಸಗಳನ್ನು ಕೇವಲ ಒಂದೂವರೆ ಕಿಲೋ ಮಾತ್ರ ತೂಗುವ ನಮ್ಮ ತಲೆಬುರುಡೆಗಿಂತ ಚಿಕ್ಕದಾದ ವಸ್ತುವೊಂದು ಮಾಡಬಲ್ಲದು ಎಂದರೆ ನಂಬುತ್ತೀರಾ? ಹೌದು, ಅಂಥ ಒಂದು ವಸ್ತುವಿದೆ, ಅದೇ ನಮ್ಮ ನಿಮ್ಮೆಲ್ಲ ತಲೆಬುರುಡೆಯೊಳಗಿರುವ ಮೆದುಳು. ಈ ಮೆದುಳಿನ ಸುತ್ತ ಯಾವ ಕೂಲರ್‌ಗಳೂ ಇಲ್ಲ. ಸರ್ವರ್‌ಗಳು ಉಪಯೋಗಿಸುವ ಸಾವಿರದಲ್ಲಿ ಒಂದು ಭಾಗದಷ್ಟು ಶಕ್ತಿಯನ್ನು ಮಾತ್ರ ಉಪಯೋಗಿಸಿ ಮೆದುಳು ಈ ಸೂಪ್ರ ಕಂಪ್ಯೂಟರ್‌ಗಳ ತರಹ ಕೆಲಸ ಮಾಡುತ್ತದೆ. 

  2. ಒಂದು ಕ್ಷಣವೂ ನಿಲ್ಲದೇ ಕೆಲಸಮಾಡುವ ಒಂದು ಪಂಪ್‍ಸೆಟ್ ಒಂದನ್ನು ಊಹಿಸಿಕೊಳ್ಳಿ.ಈ ಪಂಪ್‍ಸೆಟ್ಟಿನಿಂದ ಹೊರಬರುವ ಕೊಳವೆ ಸಹಸ್ರಾರು ಟಿಸಿಲೊಡೆಯುತ್ತ, ಚಿಕ್ಕದಾಗುತ್ತ,  62 ಸಾವಿರ ಕ್ಯುಬಿಕ್ ಸೆಂಟಿಮೀಟರ್ ಪ್ರದೇಶದ ಪ್ರತಿ ಬಿಂದುವಿಗೂ ತನ್ನೊಳಗೆ ಇರುವ ಕೇವಲ ಆರು ಲೀಟರ್ ದ್ರವದಲ್ಲಿ ನೀರುಣಿಸುತ್ತದೆ, ಪೋಷಣೆಮಾಡುತ್ತದೆ. ಅಷ್ಟೇ ಅಲ್ಲ, ಅಷ್ಟು ದೊಡ್ಡ ಪ್ರದೇಶದಲ್ಲಿ ಕ್ಷಣ ಕ್ಷಣವೂ ಬೆಳೆಯುವ ಕೊಳೆಯನ್ನು ಹೊತ್ತು, ಕೊಳೆಯನ್ನು ಬೇರ್ಪಡಿಸುವ ಕಾರ್ಖಾನೆಗೆ ರವಾನಿಸುತ್ತದೆ. ಅಲ್ಲದೇ ಇದೆಲ್ಲ ಕೆಲಸವನ್ನು ಒಂದೇ ನಿಮಿಷದಲ್ಲಿ ಮಾಡುತ್ತದೆ, ಮತ್ತು ಈ ಕೆಲಸ 24 x 7 ಪುನರಾವರ್ತನೆಯಾಗುತ್ತಲೇ ಇರುತ್ತದೆ. ಇದುವರೆಗೆ ಮಾನವ ನಿರ್ಮಿತ ಇಂಥ ಯಾವ ಪಂಪ್‍ಸೆಟ್ಟುಗಳೂ ಒಂದು ನಿಮಿಷ ಕೂಡ ಕೆಟ್ಟು ಹೋಗದೇ, ಎಂಬತ್ತು ವರ್ಷ ಬಿಟ್ಟು ಬಿಡದೇ ನಿರಂತರವಾಗಿ ಈ ಮೇಲೆ ಹೇಳಿದ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಆದರೆ ನಮ್ಮ ನಿಮ್ಮೆಲ್ಲರ ಚಿಕ್ಕ ಮುಷ್ಟಿ ಗಾತ್ರದ ಹೃದಯ ಈ ಕೆಲಸವನ್ನು ತಾನಿರುವ ವ್ಯಕ್ತಿ ಸಾಯುವವರೆಗೆ ದುಡಿಯುತ್ತಲೇ ಇರುತ್ತದೆ.   


ಈ ರೀತಿಯಾಗಿ ಮನುಷ್ಯನ ಸಂಕೀರ್ಣ ರಚನೆಯನ್ನು ವಿವರಿಸುತ್ತ ಹೋಗಬಹುದು. ಪ್ರತಿ ಅಂಗವ್ಯವಸ್ಥೆಯನ್ನು ಒಂದೊಂದು ರೀತಿಯ ಯಂತ್ರಗಳಿಗೆ ಹೋಲಿಸಿ ನೋಡಿದರೆ ನಮ್ಮ ದೇಹದ ಸಂಕೀರ್ಣಯ ಅಗಾಧತೆಯ ಬಗ್ಗೆ ಒಂಚೂರಾದರೂ ಕಲ್ಪನೆ ಮಾಡಿಕೊಳ್ಳಬಹುದು. ಒಬ್ಬ ಮನುಷ್ಯನ ದೇಹವನ್ನು ನಕಲು ಮಾಡುವ ಯಂತ್ರಸಂಕೀರ್ಣವನ್ನು ನಿರ್ಮಿಸಲು ತೊಡಗಿದರೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣಿತರಾದ ಲಕ್ಷಾಂತರ ಇಂಜಿನಿಯರುಗಳು ಬೇಕಾಗುತ್ತದೆ, ಅವರು ಹತ್ತಾರು ವರ್ಷ ತಂಡತಂಡಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದು ಕ್ರಿಕೆಟ್ ಮೈದಾನದಷ್ಟು ದೊಡ್ಡ ಜಾಗ ಬೇಕಾಗುತ್ತದೆ. ಅದನ್ನು ನಿರ್ಮಿಸಿ ಕೆಲಸ ಮಾಡಲು ಶುರುಮಾಡಿದ ಮೇಲೆ, ಆ ಯಂತ್ರಸಂಕೀರ್ಣವು ಅವಿರತವಾಗಿ ಕೆಲಸ ಮಾಡುತ್ತಲಿರಲು, ನಿರ್ವಹಿಸಲು ಮತ್ತು ರಿಪೇರಿ ಮಾಡಲು ಪ್ರತಿದಿನವೂ ಸಾವಿರಾರು ಇಂಜಿನಿಯರುಗಳು ಬೇಕಾಗುತ್ತದೆ. ಆದರೆ ಇಷ್ಟೊಂದು ಸಂಕೀರ್ಣ ಕೆಲಸಗಳು ನಮ್ಮ ಐದಾರು ಅಡಿ ದೇಹದಲ್ಲಿ ಎಡೆಬಿಡದೇ ನಡೆಯುತ್ತಿದೆ. ದೇಹವು ತನ್ನನ್ನು ತಾನೇ ಸದಾ ಕಾಲ ರಿಪೇರಿ ಮಾಡಿಕೊಳ್ಳುತ್ತಲೇ ಇರುತ್ತದೆ. ಇಂಥ ಸಂಕೀರ್ಣವಾದ ನಮ್ಮ ದೇಹರಚನೆ ಮತ್ತು ಕ್ರಿಯೆಗಳನ್ನು ವೈದ್ಯರು ಪ್ರಶ್ನೆ ಕೇಳುವುದರಿಂದ, ತಪಾಸಣೆಯಿಂದ, ರಕ್ತ-ಮೂತ್ರ ಪರೀಕ್ಷೆಯಿಂದ, ಸ್ಕ್ಯಾನ್‌ಗಳಿಂದ ಒಂಚೂರು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ, ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಔಷಧಿ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ದೇಹ ತನ್ನನ್ನು ತಾನು ರಿಪೇರಿ ಮಾಡಿಕೊಳ್ಳಲು ನೆರವಾಗುತ್ತಾರೆ. ದೇಹಕ್ಕೆ ಬೇಕಾದ ಸಹಾಯವನ್ನು ಮಾಡುತ್ತಾರೆ. ಹೃದಯದ ಬಡಿತ ನಿಧಾನವಾಗಿದ್ದರೆ ಪೇಸ್ ಮೇಕರ್ ಹಾಕುತ್ತಾರೆ. ಹಾರ್ಮೋನ್ ಕಡಿಮೆಯಾದರೆ ಹಾರ್ಮೋನಿನ ಮಾತ್ರೆ ಕೊಡುತ್ತಾರೆ. ವೈರಾಣು ಸೋಂಕದಂತೆ ಲಸಿಕೆಗಳನ್ನು ಹಾಕುತ್ತಾರೆ. 

 

ಅನುವಂಶೀಯ ಅಥವಾ ಹುಟ್ಟಿನಿಂದ ರೋಗಗಳು ಬಂದಿರದಿದ್ದರೆ, ನಲವತ್ತರವರೆಗೂ ಬಹುತೇಕ ಬಹಳಷ್ಟು ಜನರಿಗೆ ಎಲ್ಲ ಸರಿಯಾಗಿಯೇ ನಡೆಯುತ್ತಿರುತ್ತದೆ. ಏನು ತಿಂದರೂ, ಏನು ಕುಡಿದರೂ, ಎಷ್ಟೊತ್ತಿಗೆ ಮಲಗಿದರೂ, ಎಷ್ಟೊತ್ತಿಗೆ ಎದ್ದರೂ, ಬದುಕು ಸುಸೂತ್ರವಾಗಿ ನಡೆಯುತ್ತಿರುತ್ತದೆ. ಕಾಲ ಕಳೆದಂತೆ ಅಂಗಾಂಗಗಳು ವೋರ್ನ್‌ಔಟ್ ಆಗುತ್ತವೆ, ಮೊದಲಿನ ಉತ್ಸಾಹವನ್ನು ಕಳೆದುಕೊಳ್ಳುತ್ತವೆ. ಮೆದುಳು ಮೊದಲಿನ ಚುರುಕನ್ನು ಕಡಿಮೆ ಮಾಡಿಕೊಳ್ಳುತ್ತದೆ, ಹೃದಯವು ಮೊದಲಿನ ಲವಲವಿಕೆಯನ್ನು ಕಳೆದುಕೊಳ್ಳುತ್ತದೆ, ಕಿಡ್ನಿಗಳು ಮೊದಲಿನಂತೆ ಕಲ್ಮಷವನ್ನು ಹೊರಹಾಕಲು ಹೆಣಗುತ್ತವೆ, ರಕ್ತದೊತ್ತಡ (ಬಿ.ಪಿ) ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗಲು ಶುರುವಾಗಿರುತ್ತದೆ, ರಕ್ತನಾಳಗಳ ಕೊಳವೆಗಳು ಚಿಕ್ಕವಾಗಲು ಶುರುವಿಡುತ್ತದೆ, ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ, ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದೆಲ್ಲ ಆಗಬೇಕಾದ್ದೆ. ಒಟ್ಟಿನಲ್ಲಿ ಆರೋಗ್ಯ ಮೊದಲಿನಂತೆ ಇಲ್ಲ ಎನ್ನುವ ಸೂಚನೆಯನ್ನು ನಿಧಾನವಾಗಿ ಹೊರಗೆ ಪ್ರಕಟವಾಗಲು ಶುರುವಾಗುತ್ತವೆ. ಹೀಗಾಗಿ ಬಹಳಷ್ಟು ಕಾಯಿಲೆಗಳು ಮತ್ತು ಸಾವುಗಳು ಸಾಕಷ್ಟು ಮುನ್ಸೂಚನೆಗಳನ್ನು ಕೊಟ್ಟೇ ಬರುತ್ತವೆ.. 


ಆದರೆ ಕೆಲವು ಸಾವುಗಳು ಪುನೀತ್ ರಾಜಕುಮಾರ್ ಅವರಿಗೆ ಆದಂತೆ ಹಠಾತ್ತನೇ ಜರುಗುತ್ತವೆ: ಕೆಲವು ಹಠಾತ್ ಸಾವುಗಳು ನಮ್ಮ ದೇಹಕ್ಕೆ ಸಂಬಂಧಿಸಿದ್ದು (ಉದಾ: ತೀವ್ರ ಹೃದಯಾಘಾತ), ಕೆಲವು ಮನಸ್ಸಿಗೆ ಸಂಬಂಧಿಸಿದ್ದು (ಉದಾ: ಆತ್ಮಹತ್ಯೆ), ಕೆಲವು ನೈಸರ್ಗಿಕ ಸೂಕ್ಷ್ಮಜೀವಿಗಳಿಂದ ಬರುವಂಥದ್ದು (ಉದಾ: ಕೋವಿಡ್-19), ಕೆಲವು ಮನುಷ್ಯನ ನಾಗರಿಕತೆಯಿಂದ ಹುಟ್ಟಿದ್ದು (ಉದಾ: ರಸ್ತೆ ಅಪಘಾತ), ಕೆಲವು ನೈಸರ್ಗಿಕ ವಿಕೋಪಗಳಿಂದ ಆದದ್ದು (ಉದಾ: ಭೂಕಂಪ). ವೈದ್ಯಕೀಯ ಕ್ಷೇತ್ರದಲ್ಲಿ ಇಂಥ ಹಠಾತ್ ಸಾವುಗಳನ್ನು ತಡೆಗಟ್ಟಲು (ಅದರಲ್ಲೂ ದೈಹಿಕ ಮತ್ತು ಮಾನಸಿಕ ಕಾರಣಗಳಿಂದ ಬರುವ ಸಾವುಗಳು) ದಶಕಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇವೆಲ್ಲವನ್ನು ತಡೆಗಟ್ಟಲು ‘ಇದಂ ಇತ್ಠಂ‘ ಎನ್ನುವ ಉತ್ತರಗಳು ಇಲ್ಲ, ಬಹುಷಃ ಸಿಗುವುದೂ ಇಲ್ಲ. ಏಕೆಂದರೆ ಮನುಷ್ಯನ ಶರೀರದ ರಚನೆಯು, ಮೇಲೆ ವಿವರಿಸಿದಂತೆ, ತುಂಬ ಸಂಕೀರ್ಣವಾದುದು. ಇಂಥ ಸಂಕೀರ್ಣ ಯಂತ್ರವನ್ನು ನಾನು ಬಲ್ಲೆ, ಯಾವಾಗಲೂ ಆರೋಗ್ಯವಾಗಿ ಇಡಬಲ್ಲೆ, ಕೆಟ್ಟು ಹೋಗದಂತೆ ಮಾಡಬಲ್ಲೆ, ಸಾಯದಂತೆ ತಡೆಯಬಲ್ಲೆ ಎಂದು ಯಾವುದಾದರೂ ವೈದ್ಯ, ಆಸ್ಪತ್ರೆ ಅಥವಾ ವೈದ್ಯಶಾಸ್ತ್ರ ಹೇಳಿಕೆ ಕೊಟ್ಟರೆ ಅಥವಾ ಆಮಿಷ ತೋರಿಸಿದರೆ ಅದಕ್ಕಿಂತೆ ದೊಡ್ಡ ಮೌಢ್ಯ ಇನ್ನೊಂದಿಲ್ಲ. 


ನಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು, ನಮ್ಮನ್ನು ಆರೋಗ್ಯವಂತರನ್ನಾಗಿ ಇಡಲು, ರೋಗದಿಂದ ಗುಣಮುಖವಾಗುವಂತೆ ಮಾಡಲು, ವಿಜ್ಞಾನಿಗಳು ಮತ್ತು ವೈದ್ಯರು ಸಂಶೋಧನೆಗಳನ್ನು, ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಹೊಸ ತಂತ್ರಜ್ಞಾನಗಳನ್ನು, ಔಷಧಿಗಳನ್ನು, ಶಸ್ತ್ರಚಿಕಿತ್ಸೆಗಳನ್ನು ಅವಿಷ್ಕಾರ ಮಾಡುತ್ತಲೇ ಇದ್ದಾರೆ. ವೈದ್ಯಕೀಯ ಕ್ಷೇತ್ರ ಈ ಕಳೆದ ಶತಮಾನದಲ್ಲಿ, ಅದರಲ್ಲೂ ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ. ವೈದ್ಯರುಗಳು ಎಂಬಿಬಿಎಸ್ ಓದಿದ ಮೇಲೆ ಸ್ಪೇಷಾಲಿಟಿ ಮತ್ತು ಸೂಪರ್-ಸ್ಪೇಷಾಲಿಟಿಗಳನ್ನು ಮಾಡುತ್ತಾರೆ. ಜೀವಕೋಶದೊಳಗಿನ ಕಣ್ಣಿಗೆ ಕಾಣದ ಜೀನ್ಸ್‌ಗಳನ್ನು ರಿಪೇರಿ ಮಾಡುವುದರಿಂದ ಹಿಡಿದು ಕಿಡ್ನಿ-ಲಿವರ್‌ಗಳನ್ನು ಜೋಡಿಸುವವರೆಗೆ ವೈದ್ಯರಿದ್ದಾರೆ. ಸಾವಿರಾರು ತರಹದ ರಕ್ತತಪಾಸಣೆಗಳಿವೆ. ಸಿಟಿ ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್‌ಗಳಿವೆ. 


ಇಷ್ಟೊಂದು ಸೌಲಭ್ಯಗಳು, ವೈದ್ಯರು, ಶಸ್ತ್ರಚಿಕಿತ್ಸೆಗಳು, ಔಷಧಗಳು ಇದ್ದರೂ ಮನುಷ್ಯನ ದೇಹರಚನೆ, ಜೀವಕೋಶಗಳ ಕ್ರಿಯೆ, ಅಂಗಾಂಗಳ ವ್ಯವಸ್ಥೆ, ಮತ್ತು ವಿವಿಧ ಅಂಗಾಂಗಳ ನಡುವಿನ ಸಂಬಂಧಗಳ ವಿಪರೀತ ಸಂಕೀರ್ಣತೆಯನ್ನು ಇನ್ನೂ 10% ಕೂಡ ಅರ್ಥಮಾಡಿಕೊಂಡಿಲ್ಲ. ನಮ್ಮೊಳಗೆ ಮತ್ತು ನಮ್ಮ ಸುತ್ತ ಮುತ್ತ ಸಹಸ್ರಾರು ರೀತಿಯ ವೈರಸ್ಸುಗಳು, ಬೆಕ್ಟೀರಿಯಾಗಳು ಮತ್ತು ಅಣಬೆಗಳಿವೆ, ಅವುಗಳ ಮತ್ತು ಮನುಷ್ಯನ ಜೊತೆಗಿನ ನಡುವಿನ ಅವಿನಾಭಾವದ ಸಂಬಂಧ ಇನ್ನೂ 1% ಕೂಡ ಅರ್ಥವಾಗಿಲ್ಲ. ಆದರೂ ಮನುಷ್ಯನ ಆರೋಗ್ಯದ ನಿರ್ವಹಣೆಯಲ್ಲಿ, ರೋಗಗಳನ್ನು ಗುಣಪಡಿಸುವಲ್ಲಿ ಅಥವಾ ಹತೋಟಿಗೆ ಇಡುವಲ್ಲಿ, ಮನುಷ್ಯನ ಸರಾಸರಿ ಆಯುಷ್ಯವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಅರೋಗ್ಯವನ್ನು ಕಾಪಾಡಿಕೊಳ್ಳಲು ಅನುವಂಶೀಯ ಕಾರಣಗಳು, ನಮ್ಮ ಸುತ್ತಲಿನ ಪರಿಸರದ ಕಾರಣಗಳು ಎಷ್ಟರಮಟ್ಟಿಗೆ ಕಾರಣ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಯಾಕೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಆಗುತ್ತದೆ, ಯಾಕೆ ಕೆಲವರಿಗೆ ಕಿಡ್ನಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡುವುದನ್ನು ಕಡಿಮೆ ಮಾಡುತ್ತದೆ ಎಂದೆಲ್ಲ ಸಾಕಷ್ಟು ಸಂಶೋಧನೆಗಳು ನಡೆದಿವೆ ಮತ್ತು ಕೆಲವು ಕಾರಣಗಳೂ ಗೊತ್ತಿವೆ. ಆರೋಗ್ಯವನ್ನು ಸಢೃಡವಾಗಿ ಇಡಲು ಏನೇನು ಮಾಡಬೇಕು ಮತ್ತು ಏನೇನು ಮಾಡಬಾರದು ಎನ್ನುವುದರ ಬಗ್ಗೆಯೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. 


ಪುನೀತ್ ಅವರ ಅಕಾಲಿಕ ಸಾವಿನ ಸ್ವಲ್ಪ ದಿನಗಳಲ್ಲಿ, ಕೆಲವು ಹೃದಯ ಪರಿಣಿತ ವೈದ್ಯರು ೪೦ ದಾಟಿದ ಪ್ರತಿಯೊಬ್ಬ ಭಾರತೀಯ ಗಂಡಸು (ಹೆಂಗಸರಲ್ಲ) ಹೃದಯದ ಸಿಟಿ ಸ್ಕ್ಯಾನ್, ಇಸಿಜಿ ಮತ್ತು ಟ್ರೆಡ್ ಮೀಲ್ ಪರೀಕ್ಷೆಗಳನ್ನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿಕೆ ಕೊಟ್ಟರು. ಈ ಮೂರು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಆಗುವ ಖರ್ಚು ಕಡಿಮೆ ಏನಲ್ಲ, ಮತ್ತು ಎಲ್ಲರ ಕೈಗೆ ಎಟುಕುವುದೂ ಇಲ್ಲ. ಒಂದು ವೇಳೆ ಈ ಮೂರೂ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಆ ಪರೀಕ್ಷೆಗಳಿಂದ ಆಗುವ ಗೊಂದಲಗಳು ಒಂದೆರಡಲ್ಲ. ಏಕೆಂದರೆ, ಆ ಪರೀಕ್ಷೆಗಳನ್ನು ನಾಲ್ಕು ಪರಿಣಿತರಿಗೆ ಕೊಟ್ಟರೆ ಆ ನಾಲ್ಕೂ ಜನ ಪರಿಣಿತರ ಅಭಿಪ್ರಾಯಗಳು ಅವರವರ ಅನುಭವ ಮತ್ತು ಜ್ಞಾನಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತವೆ. ಒಬ್ಬ ನೀನು ಸಂಪೂರ್ಣ ಆರೋಗ್ಯವಾಗಿದ್ದೀಯ ಎನ್ನಬಹುದು, ಇನ್ನೊಬ್ಬ ನಿನಗೆ ಮಾತ್ರೆಗಳ ಅವಶ್ಯಕತೆ ಎನ್ನಬಹುದು, ಮತ್ತೊಬ್ಬ ನಿನಗೆ ಅಂಜಿಯೋಪ್ಲಾಸ್ಟಿಯಾಗಬೇಕು ಎಂದು ಹೇಳಬಹುದು, ಮುಗದೊಬ್ಬ ನಿನಗೆ ಬೈಪಾಸ್ ಆಗಬೇಕು ಎಂದು ಹೇಳಬಹುದು. ಅಷ್ಟೇ ಅಲ್ಲ, ಸಮೂಹಿಕವಾಗಿ ಇಂಥ ಪರೀಕ್ಷೆಗಳನ್ನು ಸ್ಕ್ರೀನಿಂಗ್ ಪರೀಕ್ಷೆಗಳಾಗಿ ಎಲ್ಲ ನಾಗರಿಕರು ನಲವತ್ತು ಆಗಿತ್ತಿದ್ದಂತೆ ಮಾಡಿಸಿಕೊಳ್ಳಬೇಕೆಂದು ಯಾವ ವೈದ್ಯಸಮೂಹವೂ ವೈಜ್ಞಾನಿಕವಾಗಿ ಶಿಫಾರಸು ಮಾಡಿಲ್ಲ. ಒಂದು ವೇಳೆ ಶಿಫಾರಸು ಮಾಡಿದರೆ ಅದರ ವೆಚ್ಚವನ್ನು ಭರಿಸುವ ಶಕ್ತಿ ಭಾರತ ಸರಕಾರಕ್ಕೆ ಇಲ್ಲ, ಸ್ವಂತ ಖರ್ಚಿನಿಂದ ಮಾಡಿಸಿದರೆ ಬಡವ-ಬಲ್ಲಿದರ ನಡುವಿನ ಕಂದರ ಇನ್ನಷ್ಟು ಅಗಲವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. 


ಪುನೀತ್ ಅವರ ನಿಧನವಾದಾಗ ನಿಯಮಿತ ವ್ಯಾಯಾಮ ಮಾಡುವುದು, ಜಿಮ್-ಗೆ ಹೋಗುವುದು  ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಕೂಗು ಕೇಳಿಬಂತು. ಕೆಲವು ವೈದ್ಯರು ಮನುಷ್ಯನ ದೇಹವಿರಿವುದು ನಡೆಯಲು, ಓಡಲಲ್ಲ; ಮನುಷ್ಯನ ಮಾಂಸಖಂಡಗಳು ಇರುವುದು ಹುಲ್ಲು ಕೊಯ್ಯಲು, ಪ್ರಾಣಿಯನ್ನು ಬೇಟೆಯಾಡಲಲ್ಲ. ಆದ್ದರಿಂದ ಜಿಮ್-ಗೆ ಹೋಗುವುದು ಒಳ್ಳೆಯದಲ್ಲ ಎಂದು ಘೋಷಿಸಿದರು, ಓಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.. 


ಇದನ್ನು ಅರ್ಥ ಮಾಡಿಕೊಳ್ಳಲು ನಾವು ವೈದ್ಯಶಾಸ್ತ್ರದಲ್ಲಿ ಉಪಯೋಗಿಸುವ `ರಿಸ್ಕ್ ಅಂಶ`ಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಒಳಿತು. ದಿನಾ ಕಂಠಮಠ ಅಲ್ಕೋಹಾಲು ಕುಡಿದರೆ ಒಂದೆರೆಡು ದಶಕಗಳಲ್ಲಿ ಲಿವರ್ ಕೆಟ್ಟು ಹೋಗುತ್ತದೆ, ಸಿಗರೇಟು ಸೇವನೆಯಿಂದ ಮೂರ್ನಾಕು ದಶಕಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ; ಅಂದರೆ, ಅಲ್ಕೋಹಾಲು ಲಿವರಿಗೆ ರಿಸ್ಕು, ಸಿಗರೇಟು ಶ್ವಾಸಕೋಶಕ್ಕೆ ರಿಸ್ಕು. ಆದರೆ ಕಂಠಮಠ ಅಲ್ಕೋಹಾಲು ಕುಡಿದರೆ ಲಿವರ್ ಕೆಟ್ಟು ಹೋಗುವ ರಿಸ್ಕಿಗೂ ಸಿಗರೇಟು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ರಿಸ್ಕಿಗೂ ವ್ಯತ್ಯಾಸವಿದೆ. ದಿನಾ ತುಂಬ ಕುಡಿಯುವವರಿಗೆ ಲಿವರ್ ಕೆಟ್ಟು ಹೋಗುವುದು ಗ್ಯಾರಂಟಿ, ಆದರೆ ಸಿಗರೇಟು ಸೇವಿಸುವವರೆಲ್ಲರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಅಷ್ಟೇ ಅಲ್ಲ, ಶ್ವಾಸಕೋಶದ ಕ್ಯಾನ್ಸರ್ ಬಂದಿರುವವರೆಲ್ಲರೂ ಧೂಮ್ರಪಾನಿಗಳಾಗಬೇಕಿಲ್ಲ. ಶ್ವಾಸಕೋಶದ ಕ್ಯಾನ್ಸರ್ ಬಂದಿರುವ ೧೦೦ರಲ್ಲಿ ೭೦ ಜನ ಧೂಮ್ರಪಾನಿಗಳಾಗಿರುತ್ತಾರೆ. ಇನ್ನುಳಿದ ೩೦% ಜನರಿಗೆ ಯಾವ ದುರಾಭ್ಯಾಸಗಳು ಇಲ್ಲದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಇದೇ ತರ್ಕವನ್ನು ನಿಯಮಿತ ವ್ಯಾಯಾಮಕ್ಕೆ ಹೋಲಿಸಿ ನೋಡಿದರೆ ಇದರ ಮಹತ್ವ ಅರಿವಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರಿಗೆ ಹೃದಯ ರೋಗಗಳು, ಸಕ್ಕರೆ ಕಾಯಿಲೆ, ಹೈ ಬಿಪಿ ಬರುವ ಸಾಧ್ಯತೆಗಳು ಕಡಿಮೆ, ಆದರೆ ಬರುವುದಿಲ್ಲ ಎಂದೇನಿಲ್ಲ. ಪುನೀತ್ ರಾಜಕುಮಾರ್ ಅಷ್ಟೆಲ್ಲ ವ್ಯಾಮಾಮ ಮಾಡಿಯೂ ಧಿಡೀರೆಂದು ಹೊರಟುಹೋದರೆಂದು ವ್ಯಾಯಾಮವನ್ನೇ ಮಾಡಬಾರದು ಎನ್ನುವುದೂ ಒಂದೇ, ಸಿಗರೇಟು ಸೇದದೇ ಇದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುವುದಿದ್ದರೆ ಬಂದೇ ಬರುತ್ತದೆ, ಆದ್ದರಿಂದ ದಿನವೂ ನಾವೆಲ್ಲರೂ ಸಿಗರೇಟು ಸೇದಬೇಕು ಎನ್ನುವುದೂ ಒಂದೇ ವಾದವಾಗುತ್ತದೆ. ನಮ್ಮ ದೇಹಕ್ಕೆ, ನಮಗೆ ಸರಿ ಅನಿಸುವಂತೆ, ಸೂಕ್ತ ಮಾರ್ಗದರ್ಶನದಲ್ಲಿ, ನಿಯಮಿತವಾಗಿ ವ್ಯಾಯಾಮ, ಓಟ, ನಡಿಗೆ, ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮ ಸ್ಠಿತಿಯಲ್ಲಿ ಇರಲು ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ, ಆದರೆ ಅವೆಲ್ಲ ನಮಗೆ ಯಾವುದೇ ರೋಗ ಬರದಂತೆ ಅಥವಾ ಸಾಯದಂತೆ ತಡೆಯುತ್ತವೆ ಎಂದುಕೊಳ್ಳುವುದು ಮಾತ್ರ ಮಹಾನ್ ಮೂರ್ಖತನ. 


ಪುನೀತ್ ರಾಜಕುಮಾರ್ ಅಮೇರಿಕದಲ್ಲೋ, ಇಂಗ್ಲೆಂಡಿನಲ್ಲೋ ಇದಿದ್ದರೆ ಅಲ್ಲಿನ ಆರೋಗ್ಯ ವ್ಯ್ವಸ್ಥೆಯಿಂದಾಗಿ ಬದುಕಿ ಉಳಿಯುತ್ತಿದ್ದರು ಎನ್ನುವ ಮಾತುಗಳನ್ನು ಕೇಳುತ್ತಿದ್ದೇವೆ. ಇಂಗ್ಲೆಂಡಿನಲ್ಲಿ ಒಂಚೂರು ಎದೆನೋವು ಕಾಣಿಸಿಕೊಂಡರೆ ಸಾಕು, 999ಗೆ ಫೋನು ಮಾಡುತ್ತೇವೆ. ಆ್ಯಂಬ್ಯುಲೆನ್ಸ್ ನಿಮಿಷಗಳಲ್ಲಿ ಮನೆಯ ಮುಂದಿರುತ್ತದೆ. ಆ್ಯಂಬ್ಯುಲೆನ್ಸ್ ಓಡಿಸುವವರು ಬರೀ ವಾಹನ ಚಾಲಕರಲ್ಲ, ಅವರು ತುರ್ತುಚಿಕಿತ್ಸೆಯ ಪರಿಣಿತರು; ಮನೆಗೆ ಬರುತ್ತಿದ್ದಂತೆಯೇ ಇಸಿಜಿ ಮಾಡಿ, ನೋವಿಗೆ ಮಾತ್ರೆ/ಇಂಜಕ್ಷನ್ ಕೊಟ್ಟು, ಹೃದಯಕ್ಕೆ ಬೇಕಾದ ಔಷಧಿಕೊಡುತ್ತಾರೆ. ನಂತರ ಆ್ಯಂಬ್ಯುಲೆನ್ಸ್‌ನಲ್ಲಿ ಮಲಗಿಸಿಕೊಂಡು, ಜೋರಾಗಿ ಸೈರನ್ ಹಾಕಿಕೊಂಡು ವೇಗದಲ್ಲಿ ಆಸ್ಪತ್ರೆಯತ್ತ ಓಡಿಸಿಕೊಂಡು ಹೊರಟರೆ ರಸ್ತೆಯಲ್ಲಿಯ ಎಲ್ಲ ವಾಹನಗಳೂ ದಾರಿ ಮಾಡಿಕೊಡುತ್ತವೆ. ಆಸ್ಪತ್ರೆಯಲ್ಲಿ ಕಾಲ ಮಿಂಚಿವ ಮುಂಚೆ ತಲುಪಿದ ಮೇಲೆ ಅಲ್ಲಿನ ವೈದ್ಯರು ಹೃದಯದ ರಕ್ತನಾಳಗಳನ್ನು ಪರೀಕ್ಷೆ ಮಾಡಿ, ಅಂಜಿಯೋಪ್ಲಾಸ್ಟಿ ಮಾಡಿ ಗುಣಮುಖರನ್ನಾಗಿಸುತ್ತಾರೆ.  


ಜಗತ್ತಿನ ಅತ್ಯಂತ ಆರೋಗ್ಯಕರ ಆಹಾರವನ್ನು ತಯಾರಿಸಿದ ಖ್ಯಾತಿಗೆ ಮಾತ್ರನಾಗಿದ್ದ, ಹಾಲಿವುಡ್ ತಾರೆಯರಿಗೆ ಅಡುಗೆ ಮಾಡಿದ ಪ್ರಖ್ಯಾತ ಬಾಣಸಿಗ (ಚೆಫ್), ಗುರ್‌ಪರೀತ್ ಬೇನ್ಸ್, ಇಂಗ್ಲೆಂಡ್ ನಿವಾಸಿ. ಜಗತ್ತಿಗೇ ಅತ್ಯಂತೆ ಆರೋಗ್ಯದಾಯಕ ಅಡುಗೆಯನ್ನು ಮಾಡಿದ ಅವರಿಗೂ  ಇತ್ತೀಚೆಗೆ (ನವೆಂಬರ್ 12) ತೀವ್ರ ಹೃದಯಾಘಾತವಾಯಿತು. ಮೇಲೆ ಬರೆದ ಅಷ್ಟೆಲ್ಲ ಸೌಲಭ್ಯಗಳು ಇಂಗ್ಲೆಂಡಿನಲ್ಲಿ ಇದ್ದರೂ ಕೂಡ ಅವರನ್ನು ಉಳಿಸಿಕೊಳ್ಳಲು ಇಲ್ಲಿನ ವೈದ್ಯರಿಗೆ ಆಸ್ಪತ್ರೆಗಳಿಗೆ ಸಾಧ್ಯವಾಗಲಿಲ್ಲ.ತೀವ್ರ ಹೃದಯಾಘಾತದಿಂದ ಪುನೀತ್ ಅವರಂತೆಯೇ ಪುನೀತ್ ಅವರಿಗಿಂತ ಒಂದು ವರ್ಷ ಚಿಕ್ಕವರಾದ ಗುರ್‌ಪರೀತ್ ಸಾವನ್ನಪ್ಪಿದರು. ಇದಕ್ಕೇನೆನ್ನೋಣ?


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)

Saturday 13 November 2021

ಇಂಗ್ಲೆಂಡ್ ಪತ್ರ 12

ಪುನೀತ್ ರಾಜಕುಮಾರ್ ಶೃದ್ಧಾಂಜಲಿ

ಪುನೀತ್ ರಾಜಕುಮಾರ್ ಅವರ್ ಹಠಾತ್ ಸಾವು ಕನ್ನಡ ನಾಡಿಗೆ ಸಂಬಂಧಿಸಿದ ಎಲ್ಲರಿಗೂ ದಿಗ್ಭ್ರಮೆಯಾಗಿದೆ. ವಾಟ್ಸ್ಯಾಪ್ಪಿನಲ್ಲಿ, ಫೇಸ್ಬುಕ್ಕಿನಲ್ಲಿ, ಸುದ್ದಿವಾಹಿನಿಗಳಲ್ಲಿ, ಯುಟ್ಯೂಬಿನಲ್ಲಿ, ಪತ್ರಿಕೆಗಳಲ್ಲಿ, ಕನ್ನಡದ ಜಾಲತಾಣಗಳಲ್ಲಿ ಪುನೀತ್ ಅವರ ಸಿನೆಮಾಗಳ ಬಗ್ಗೆ, ಪುನೀತ್ ವ್ಯಕ್ತಿತ್ವದ ಬಗ್ಗೆ, ಸಾಮಾಜಿಕ ಕೆಲಸಗಳ ಬಗ್ಗೆ ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಅವರನ್ನು ಹತ್ತಿರದಿಂದ ನೋಡಿದವರ ಬೆರೆತವರ ಸಂದರ್ಶನಗಳು, ಅವರ ಅಂತ್ಯಸಂಸ್ಕಾರದ ವಿಡಿಯೋಗಳು ಸಾಕಷ್ಟು ಬರುತ್ತಿವೆ. ಇಂಗ್ಲೆಂಡಿನ ‘ಬಿ.ಬಿ.ಸಿ‘ ಸುದ್ದಿವಾಹಿನಿಯಲ್ಲೂ ಪುನೀತ್ ಅವರನ್ನು ಸ್ಮರಿಸಲಾಯಿತು. 


ನಾನು ಪುನೀತ್ ಅವರನ್ನು ಹತ್ತಿರದಿಂದ ನೋಡಿದವನೂ ಅಲ್ಲ, ಮಾತಾಡಿಸಿದವನೂ ಅಲ್ಲ. ನನ್ನ ಹೆಂಡತಿಯ ಗೆಳೆತಿಯ ಮದುವೆಯೊಂದಕ್ಕೆ ಮೈಸೂರಿಗೆ ಪುನೀತ್ ಬಂದಿದ್ದರು. ಆಗಿನ್ನೂ ‘ಅಪ್ಪೂ‘ ಬಂದಿರಲಿಲ್ಲ. ಎರಡು ಮಾತು ಮಾತಾಡಿಸಿದ್ದೆ.‘ನಿಮ್ಮ ಅಭಿನಯದ ‘ಭಾಗ್ಯವಂತ‘ ನನ್ನ ಬಾಲ್ಯದಲ್ಲಿ ಅಚ್ಚುಮೆಚ್ಚಿನ ಚಿತ್ರವಾಗಿತ್ತು, ನಿಮ್ಮ ಅಭಿನಯದಿಂದ ಸಿನೆಮಾ ಹಾಲಿನಲ್ಲಿ ಇದ್ದ ಎಲ್ಲರನ್ನೂ ಅಳಿಸಿಬಿಟ್ಟಿರಿ,’ ಅನ್ನುವ ಅರ್ಥದಲ್ಲಿ ಮಾತಾಡಿದ್ದೆ. ‘ನನಗೆ ಆಗ ಅಭಿನಯ ಎಂದರೇನು ಎನ್ನುವುದೇ ಗೊತ್ತಿರಲಿಲ್ಲ, ನಿರ್ದೇಶಕರು ಏನು ಹೇಳಿದರೋ ಅಷ್ಟು ಮಾಡಿದ್ದೆ, ಅಷ್ಟೇ,‘ ಎಂದು, ಒಂದು ಸಹಜ ನಗೆ ಚೆಲ್ಲಿದ್ದರು. 


‘ಲೋಹಿತ್‘ ಆಗಿ ಮೊದಲನೇ ಇನಿಂಗ್ಸ್: 


ಪುನೀತ್ ಅವರ ಸಿನೆಮಾಗಳನ್ನು ನಾನು ಅಷ್ಟಾಗಿ ನೋಡಿಲ್ಲ, ಆದರೆ ಲೋಹಿತ್ ಮಾಡಿದ ಎಲ್ಲ ಚಿತ್ರಗಳನ್ನೂ ತಪ್ಪದೇ ನೋಡಿದ್ದೇನೆ. ರಾಜಕುಮಾರನ ಯಾವ ಸಿನೆಮಾಗಳನ್ನೂ ಬಿಡದ ನಮಗೆಲ್ಲ, ರಾಜಕುಮಾರನ ವಾರಸುದಾರನಂತೆ ಬಂದ ಲೋಹಿತ್ ಅಂದರೆ ಪಂಚಪ್ರಾಣ. ನನಗಿಂತ ನಾಕಾರು ವರ್ಷ ಚಿಕ್ಕವನಾದ ಲೋಹಿತ್ ಸಿನೆಮಾ ಬಂದರೆ ಸಾಕು, ನಾವು ವಾರಿಗೆಯವರೆಲ್ಲ ಸೇರಿ ಲೋಹಿತ್ ಸಿನೆಮಾಕ್ಕೆ ದಂಡು.


‘ಸನಾದಿ ಅಪ್ಪಣ್ಣ’ ಸಿನೆಮಾದಲ್ಲಿ ‘ತಾತಾ...ಪೀಪಿ...’ ಎಂದು ಕರೆಯುವ ಪಾತ್ರದಲ್ಲಿ ರಾಜಕುಮರ್‌ ಅವರ ಮೊಮ್ಮಗನಾಗಿ ಲೋಹಿತ್ ಅಭಿನಯ, ಪುಟ್ಟಹುಡುಗನಾಗಿದ್ದ ನನಗೆ ತುಂಬ ಇಷ್ಟವಾಗಿತ್ತು. ಚಲಿಸುವ ಮೋಡಗಳು ಸಿನೆಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ ಲೋಹಿತ್ ಹಾಡಿ ಕುಣಿದ ‘ಕಾಣದಂತೆ ಮಾಯವಾದನೋ...‘ ಹಾಡು ರಾಜಕುಮಾರ್ ಹಾಡುಗಳಷ್ಟೇ ಪ್ರಸಿದ್ಧವಾಗಿತ್ತು. 


ಲೋಹಿತ್ ಮುಖ್ಯಪಾತ್ರದಲ್ಲಿದ್ದ ‘ಭಾಗ್ಯವಂತ‘ ಸಿನೆಮಾ ನೋಡಿದ ಅನುಭವ ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ. ಸಿನೆಮಾದ ಮಧ್ಯಂತರವಾದಾಗ ನನ್ನ ಕಣ್ಣೆಲ್ಲ ಒದ್ದೆಯಾಗಿತ್ತು. ನನ್ನ ಪಕ್ಕ ಕುಳಿತಿದ್ದ ನನ್ನ ಕಸಿನ್ ಎಲ್ಲಿ ನನ್ನ ಕಣ್ಣೀರನ್ನು ನೋಡಿ ನಕ್ಕುಬಿಡುತ್ತಾನೋ ಎಂದು ಬೇಗ ಬೇಗ ಕಣ್ಣೀರನ್ನು ಒರೆಸಿಕೊಂಡು ಅವನತ್ತ ನೋಡಿದರೆ ಆತ ಮುಖ ಮುಚ್ಚಿಕೊಂಡು ಅಕ್ಷರಷಃ ಬಿಕ್ಕಿ ಬಿಕ್ಕಿ ಅಳುತ್ತಿದ್ದ! ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ಸಿನೆಮಾದಲ್ಲಿ ಮಧ್ಯಂತರವಾದಾಗ ಜನರಿಗೆ ಅದಷ್ಟು ಬೇಗ ಎದ್ದು ಹೊರಗೆ ಹೋಗುವ ಆತುರ; ಆದರೆ ಈ ಸಿನೆಮಾದಲ್ಲಿ ಜನರು ಇನ್ನೂ ಗರಬಡಿದವರಂತೆ ಕೂತಿದ್ದರು, ಬಹಳಷ್ಟು ಜನರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು. 


‘ಭಕ್ತ ಪ್ರಹ್ಲಾದ‘ ಸಿನೆಮಾ ನೋಡಿ ಬಂದ ಮೇಲೆ, ಲೋಹಿತ್ ಅಲ್ಲದೇ ಇನ್ನಾರಿಗಾದರೂ ರಾಜಕುಮಾರ್ ಅವರ ‘ಹಿರಣ್ಯಕಷ್ಯಪು‘ವಿನ ಅವತಾರವನ್ನು ಸಹಿಸಿಕೊಳ್ಳಲು ಆಗುತ್ತಿತ್ತೇ ಎಂದು ಅನಿಸಿತ್ತು. ರಾಜಕುಮಾರ್ ಅತ್ಯಮೋಘ ಅಭಿನಯ, ಸಿನೆಮಾದ ಸಂಭಾಷಣೆಗಳು, ಒಂದಾದ ಮೇಲೋಂದರಂತೆ ಬರುವ ಲೋಹಿತನ ಸುಂದರವಾದ ಹಾಡುಗಳು ಮನಸ್ಸನ್ನು ಸೂರೆ ಮಾಡಿದ್ದವು. ಆ ಸಿನೆಮಾವನ್ನು ನಾಕಾರು ಸಲವಾದರೂ ನೋಡಿರಬೇಕು. ಆ ಸಿನೆಮಾ ಕಥೆಯ ಕ್ಯಾಸೆಟ್ ಬಂದಾಗ ತಂದೆಯನ್ನು ಕಾಡಿಬೇಡಿ ಕ್ಯಾಸೆಟ್ ಖರೀದಿಸಿ ಸಂಭಾಷಣೆಯನ್ನು ಬಾಯಿಪಾಠ ಮಾಡಿದ್ದೆವು. ಬಂಧು ಬಳಗದವರು ಸೇರಿದಾಗ ನಾನು ತೆರೆಯ ಹಿಂದೆ ನಿಂತು ಸಂಭಾಷಣೆಯನ್ನು ಹೇಳುವುದು, ನನ್ನ ತಮ್ಮ ಎಲ್ಲರ ಮುಂದೆ ಹಿರಣ್ಯಕಷ್ಯಪು ಮತ್ತು ಪ್ರಹ್ಲಾದನ ದ್ವಿಪಾತ್ರಾಭಿನಯ ಮಾಡುವುದು ಮಾಡಿ ಮನರಂಜನೆ ನೀಡುತ್ತಿದ್ದೆವು. 


‘ಬೆಟ್ಟದ ಹೂ‘ ಸಿನೆಮಾದ ಕತೆ ಮತ್ತು ಅದರಲ್ಲಿ ಲೋಹಿತನ ಸಹಜ ಅಭಿನಯ ತುಂಬ ಆಪ್ತವಾಗಿತ್ತು. ಆ ಸಿನೆಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದೆವು. ಹಾಗೆಯೇ ‘ಎರಡು ನಕ್ಷತ್ರಗಳು‘ ಮತ್ತು‘ಯಾರಿವನು?‘ ಸಿನೆಮಾಗಳನ್ನು ಆ ಚಿಕ್ಕ ವಯಸ್ಸಿನಲ್ಲಿ ಲೋಹಿತ್ ಅಭಿಮಾನಿಯಾಗಿ ನೋಡಿದ್ದೇನೆ. ನಾನು ಎಷ್ಟರ ಮಟ್ಟಿಗೆ ಲೋಹಿತನ ಅಭಿಮಾನಿಯಾಗಿದ್ದೆ ಎಂದರೆ ಲೋಹಿತ್ ಹಾಡಿದ ಹಾಡುಗಳೆಲ್ಲ ಬಾಯಿಪಾಠವಾಗಿದ್ದವು. ದಶಕಗಳು ಉರುಳಿದ ಮೇಲೆ ನನ್ನ ಪುಟ್ಟ ಮಗನನ್ನು ಮಲಗಿಸಲು ನಾನು ದಿನವೂ ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ...‘ ಹಾಡನ್ನು ಹಾಡಿ ಮಲಗಿಸಿದ್ದೇನೆ.  


‘ಪುನೀತ್‘ ಆಗಿ ಎರಡನೇ ಇನಿಂಗ್ಸ್:


ಲೋಹಿತ್ ಪುನೀತ್ ಆಗುವ ಹೊತ್ತಿಗೆ ನಾನು ದೇಶವನ್ನು ಬಿಟ್ಟಾಗಿತ್ತು. ಹೀಗಾಗಿ ನಾನು ಅವರ ಎರಡನೇ ಇನಿಂಗ್ಸನ್ನು ಮಿಸ್ ಮಾಡಿಕೊಂಡೆ. ಭಾರತದಿಂದ ಬರುವಾಗ ತರುವ ಡಿವಿಡಿಗಳಲ್ಲಿ ‘ಮಿಲನ‘, ‘ಪೃಥ್ವಿ‘, ‘ವಂಶಿ‘, ‘ಹುಡುಗರು‘, ‘ಪರಮಾತ್ಮ‘ ಮತ್ತು ‘ಮೈತ್ರಿ‘ ಸಿನೆಮಾಗಳನ್ನು ನೋಡಿದ್ದೇನೆ. ಅವರ ಕೊನೆಯ ಚಿತ್ರ ‘ಯುವರತ್ನ‘ವನ್ನು ಪ್ರೈಮ್‍ನಲ್ಲಿ ನೋಡಿದ್ದೇನೆ. ಅವರ ಎರಡನೇ ಇನಿಂಗ್ಸ್‌ನಲ್ಲಿ ನನಗೆ ‘ಮೈತ್ರಿ‘ ತುಂಬ ಇಷ್ಟವಾದದ್ದು (ಆ ಚಿತ್ರದ ಚಿತ್ರೀಕರಣದ ವೇಳೆ ಸಿನೆಮಾದ ಪಾತ್ರಧಾರಿಗಳಾದ ಹಳ್ಳಿಯ ನೂರಾರು ಮಕ್ಕಳ ಕಾಲಲ್ಲಿ ಚಪ್ಪಲಿ ಇರಲಿಲ್ಲ ಎನ್ನುವುದನ್ನು ಕಂಡು ಅವತ್ತೇ ಎಲ್ಲ ಮಕ್ಕಳಿಗೂ ಚಪ್ಪಲಿ ತರಿಸಿ ಕೊಡಿಸಿದರೆಂದು ಆ ಸಿನೆಮಾದ ನಿರ್ದೇಶಕರಾದ ಗಿರಿರಾಜ್ ಅವರು ಸಂದರ್ಶನದಲ್ಲಿ ಹೇಳಿದ್ದನ್ನು ನೋಡಿ  ಮನಸ್ಸು ಆರ್ದ್ರವಾಯಿತು). 


ಪುನೀತ್ ಕನ್ನಡ ಸಿನೆಮಾಕ್ಕೆ ನಾಯಕನಾಗಿ ಬರುವಷ್ಟರಲ್ಲಿ ಶಿವಾರಾಜಕುಮಾರ್ ಆಗಲೇ ದೊಡ್ಡ ತಾರೆಯಾಗಿದ್ದರು ಮತ್ತು ರಾಘವೇಂದ್ರ ರಾಜಕುಮಾರ್ ನಾಕಾರು ಸಿನೆಮಾ ಮಾಡಿ ತೆರೆಯಿಂದ ಮರೆಯಾಗಿದ್ದರು. ಬಾಲನಟನಾಗಿ ಕನ್ನಡಿಗರ ಮನೆಮಾತಾಗಿದ್ದ ಲೋಹಿತ್, ಪುನೀತ್ ಆಗಿ ತೆರೆಯ ಮೇಲೆ ಹೀರೋ ಆಗಿ ಬಂದು ಶಿವಣ್ಣನ ಹಾದಿ ಹಿಡಿಯುತ್ತಾರೋ ಇಲ್ಲ ರಾಘಣ್ಣನ ಹಾದಿ ಹಿಡಿಯುತ್ತಾರೋ ಎಂದು ಚರ್ಚೆ ನಡೆಯುತ್ತಿತ್ತು. ಆದರೆ ಪುನೀತ್ ಇಬ್ಬರ ಹಾದಿಯನ್ನೂ ಹೊಡಿಯದೇ ತಂದೆಯ ಹಾದಿ ಹಿಡಿದರು. ಹೀರೋ ವೈಭವೀಕರಣದ ಸಿನೆಮಾಗಳಿದ್ದರೂ ತಂದೆಯಂತೆ ಸಮಾಜ ಮುಖಿಯಾದ ಸಿನೆಮಾ ಮಾಡಿದರು, ತಂದೆಯಂತೆ ಹಿನ್ನೆಲೆ ಗಾಯನವನ್ನೂ ಮಾಡಿದರು, ತಂದೆಯಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರು. 


ತಂದೆಗಿಂತ ಒಂದೆ ಹೆಜ್ಜೆ ಮುಂದೆ ಹೋಗಿ, ಕನ್ನಡದ ಕಿರುತೆರೆಯಲ್ಲಿ ಎಲ್ಲರ ಮನೆಮಗನಂತೆ ‘ಕೋಟ್ಯಧಿಪತಿ‘ಯನ್ನು ನಡೆಸಿಕೊಟ್ಟು ತಮ್ಮ ಸಹಜತೆಯಿಂದ ಮನೆ-ಮನ ತಲುಪಿದರು. ‘ಕೋಟ್ಯಧಿಪತಿ‘ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಡುವ ರೀತಿ ಅನನ್ಯವಾದದ್ದು. ಎಲ್ಲಿಯೂ ಅಮಿತಾಭ್ ಅವರನ್ನು ಅನುಕರಣೆ ಮಾಡದೇ ತಮ್ಮತನವನ್ನು ತೋರಿಸಿಕೊಟ್ಟರು. ಹಿರಿಯರಿಗೆ ಕೊಡುವ ಗೌರವವಿರಲಿ, ಕಿರಿಯರನ್ನು ಹುರಿದುಂಬಿಸುವುದಿರಲಿ, ಎಲ್ಲಿಯೂ ಕೃತಕತೆ ಕಾಣುತ್ತಿರಲಿಲ್ಲ. 


ಎಂಬತ್ತನೇ ದಶಕದಿಂದ ಹಿಡಿದು ಇಂದಿನವರೆಗೆ ಕನ್ನಡದ ಮುಖ್ಯವಾಹಿನಿಯ ಬಹಳಷ್ಟು ಸಿನೆಮಾಗಳು ನಾಯಕ ಕೇಂದ್ರಿತವೇ. ಒಂದಾದರೂ ಹೀರೋ ವರ್ಷಿಪ್ಪಿನ ಹಾಡಿರಬೇಕು, ಸಿನೆಮಾ ಹೆಸರುಗಳೂ ಹೀರೋನ ಹೆಸರಿನಿಂದಲೇ ಶುರುವಾಗಬೇಕು, ಅಷ್ಟರಮಟ್ಟಿಗೆ ಈ ಸ್ಟಾರ್ ಸಿನೆಮಾಗಳು ಹೀರೋ ಕೇಂದ್ರಿತ. ಇದಕ್ಕೆ ಪುನೀತ್ ಅವರ ಸಿನೆಮಾಗಳು ಕೂಡ ಹೊರತಾಗಿರಲಿಲ್ಲ. ಇವುಗಳ ಮಧ್ಯೆ ‘ಮಿಲನ‘, ‘ಹುಡುಗರು‘, ‘ಮೈತ್ರಿ‘ಯಂಥ ವಿಭಿನ್ನ ಸಿನೆಮಾಗಳನ್ನು ಮಾಡಿದರು, ಮತ್ತು ಆ ಪಾತ್ರಗಳಿಗೆ ತಕ್ಕುದಾಗಿ ಅಭಿನಯಿಸಿ ಜೀವ ತುಂಬಿದರು. 


ನನಗೆ ಪುನೀತ್ ಹೀರೋ ಆಗಿ ನಟಿಸಿದ ಸಿನೆಮಾಗಳಿಗಿಂತ ಅವರು ನಿರ್ಮಿಸಿದ ಸಿನೆಮಾಗಳು ಹೆಚ್ಚು ಇಷ್ಟ. ಅವರ ನಿರ್ಮಾಣದ ಈ ಎಲ್ಲ ಚಿತ್ರಗಳೂ ವಿಭಿನ್ನ. ‘ಕವಲುದಾರಿ‘ ತನ್ನ ವಿಭಿನ್ನ ರೀತಿಯ ಪತ್ತೆದಾರಿ ಕತೆಯಿಂದ ಗಮನ ಸೆಳೆಯುತ್ತದೆ. ಹಾಗೆಯೇ“ಮಾಯಾಬಜಾರ್-2016‘ ಮತ್ತು ‘ಫ್ರೆಂಚ್ ಬಿರಿಯಾನಿ‘ (ಹೆಸರೇ ಎಷ್ಟು ವಿಚಿತ್ರವಾಗಿದೆ) ಕನ್ನಡದ ಎರಡು ಉತ್ತಮ ಬ್ಲ್ಯಾಕ್-ಕಾಮಿಡಿಗಳು. ‘ಫ್ರೆಂಚ್ ಬಿರಿಯಾನಿ‘, ಇತ್ತೀಚಿಗೆ ಕನ್ನಡದಲ್ಲಿ ನಾನು ತುಂಬ ಮೆಚ್ಚಿಕೊಂಡ ಚಿತ್ರಗಳಲ್ಲಿ ಒಂದು. ಸಿನೆಮಾದ ಕತೆ, ಚಿತ್ರಕತೆ, ಜೋಕುಗಳು, ನಟನೆ, ಹಾಡುಗಳು, ಛಾಯಾಗ್ರಹಣ ಒಂದಕ್ಕೊಂದು ಪೂರಕವಾಗಿವೆ. ತಮ್ಮ ನಿರ್ಮಾಣದ ಸಿನೆಮಾಗಳಲ್ಲಿ ತಾವು ಅಭಿನಯಿಸದೇ, ಹೊಸಬರನ್ನು ಹಾಕಿಕೊಂಡು, ಕನ್ನಡಕ್ಕೆ ಹೊಸ ಕತೆಗಳನ್ನು ಹೇಳಲು ಪುನೀತ್ ಹೊಸ ಅಧ್ಯಾಯವನ್ನೇ ಶುರುಮಾಡಿದ್ದರು. ಇನ್ನೂ ಇದ್ದಿದ್ದರೆ ಇನ್ನೂ ಎಷ್ಟೊಂದು ಬೇರೆ ಬೇರೆ ತರಹದ ಕತೆಗಳನ್ನು ಕನ್ನಡ ಸಿನೆಮಾಕ್ಕೆ ತರುತ್ತಿದ್ದರೋ? ಮಲಯಾಳಂ ಭಾಷೆಗೆ ಸರಿಸಾಠಿಯಾಗಿ ನಿಲ್ಲಬಲ್ಲ ಸಿನೆಮಾಗಳನ್ನು ಕನ್ನಡದಲ್ಲೂ ನಿರೀಕ್ಷಿಸಬಹುದು ಎನ್ನುವ ಆಸೆಯನ್ನು ಹುಟ್ಟುಹಾಕಿದ್ದರು.  


ಪವನ್‍ಕುಮಾರ್ ಅವರ ನಿರ್ದೇಶನದ ‘ದ್ವಿತ್ವ‘ ಚಿತ್ರವನ್ನು ಕನ್ನಡಿಗರು ಕಾತರದಿಂದ ಎದುರು ನೋಡುತ್ತಿದ್ದರು. ಕನ್ನಡ ಮುಖ್ಯವಾಹಿನಿಯ ಸಿನೆಮಾಗಳಿಗಿಂತ ವಿಭಿನ್ನವಾಗಿ ಸಿನೆಮಾಗಳನ್ನು ಮಾಡಲು ಪುನೀತ್ ಸಜ್ಜಾಗುತ್ತಿದ್ದರು ಎನಿಸುವ ಸೂಚನೆಗಳನ್ನು ಕೊಟ್ಟಿದ್ದರು. ತಮ್ಮ ನಿರ್ಮಾಣದಲ್ಲಿ ಇನ್ನೂ ಹೊಸರೀತಿಯ ಸಿನೆಮಾಗಳನ್ನು ಮಾಡುವ ಬಗ್ಗೆ ಮಾತಾಡಿದ್ದರು ಮತ್ತು ತೊಡಗಿಸಿಕೊಂಡಿದ್ದರು. 


ಕ್ಲೀಷೆ ಎನಿಸಿದರೂ, ನಿಜವಾದ ಅರ್ಥದಲ್ಲಿ ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆ ಬಡವಾಗಿದೆ. ಕನ್ನಡ ಸಿನೆಮಾರಂಗ ಒಬ್ಬನನ್ನಲ್ಲ, ಒಬ್ಬ ಸ್ಟಾರ್, ಒಬ್ಬ ಸಧಬಿರುಚಿಯ ನಿರ್ಮಾಪಕ, ಕಿರುತೆರೆಯ ನಿವೇದಕ ಮತ್ತು ಹಿನ್ನೆಲೆ ಗಾಯಕ ಎಂದು ನಾಲ್ವರನ್ನು ಕಳೆದುಕೊಂಡಿದೆ. 


ಯಾರಿಗೂ ಯಾವ ಮುನ್ಸೂಚನೆ ಕೊಡದೇ ತೀವ್ರ ಹೃದಯಾಘಾತದ ಈ ಸಾವು, ಶಂಕರನಾಗ್ ಅವರ ಅಪಘಾತದ ಸಾವಿನಂತೆ ಹೋಲಿಕೆ ಕಂಡರೆ ಅಚ್ಚರಿಯಿಲ್ಲ. ಪುನೀತ್ ಕೂಡ ಶಂಕರನಾಗ್ ತರಹ ಅಪಾರ ಕನಸುಗಳನ್ನು ಕಟ್ಟಿಕೊಂಡು ಒಂದೇ ಸಮಯದಲ್ಲಿ ನಾಕಾರು ಕೆಲಸದಲ್ಲಿ ಕೈಹಾಕಿದವರು. ಶಂಕರನಾಗ್ ತರಹವೇ ಎಲ್ಲರ ಜೊತೆ ನಗುನಗುತ್ತ ಎಲ್ಲರನ್ನೂ ಪ್ರೋತ್ಸಾಹಿಸುತ್ತ ತಾನೂ ಬೆಳೆದು ಎಲ್ಲರನ್ನೂ ಬೆಳೆಸಿದ ಅಜಾತಶತ್ರು. ಶಂಕರನಾಗ್ ತರಹವೇ ಹಿಂದಿನ ದಿನದವರೆಗೂ ನಕ್ಕು ನಲಿದು ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋದರು. ಪುನೀತ್ ಬಿಟ್ಟು ಹೋದ ಕನಸುಗಳು ಮೊಳೆತು ಹೆಮ್ಮರಗಳಾಗಲಿ ಎಂದು ಆಶಿಸುತ್ತ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ.     




Saturday 9 October 2021

ಇಂಗ್ಲೆಂಡ್ ಪತ್ರ 11

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು: ಭಾಗ 2

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  


ಕನ್ನಡದಲ್ಲಿ ಸ್ಪೆಲ್ಲಿಂಗ್:


ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.


‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  


ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 


ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 


ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:


ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 


ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.


ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 


ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 


‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 


ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 


ಕನ್ನಡದ ಅಂಕಿಗಳು:


ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 


ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:


ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   


ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.   






Saturday 25 September 2021

ಇಂಗ್ಲೆಂಡ್ ಪತ್ರ 10

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು: ಭಾಗ 1

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ (ಎರಡು ಭಾಗಗಳಲ್ಲಿ). 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (...), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘...‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 


Saturday 11 September 2021

ಇಂಗ್ಲೆಂಡ್ ಪತ್ರ 9

ಸಿನೆಮಾ ನೋಡುವ ಚಟ

ಈ ಇಂಗ್ಲೆಂಡ್ ದೇಶಕ್ಕೆ ಹೊಸದಾಗಿ ಬಂದಾಗ (2004) ಹಿಂದಿಭಾಷೆಯ ದೊಡ್ಡ ಬಜೆಟ್ಟಿನ ಚಲನಚಿತ್ರಗಳು ಮಾತ್ರ ಟಾಕೀಜುಗಳಲ್ಲಿ ಅಥವಾ ಮಲ್ಟಿಪ್ಲೆಕ್ಸುಗಳಲ್ಲಿ ನೋಡಲು ಸಿಗುತ್ತಿದ್ದವು. ಆ ಸಿನೆಮಾಹಾಲು-ಮಲ್ಟಿಪ್ಲೆಕ್ಸುಗಳೋ, ನಾವಿರುವ ಮನೆಯಿಂದ ಇಪ್ಪತ್ತರಿಂದ ನಲವತ್ತು ಮೈಲಿ ದೂರದ ನೆರೆಯ ಊರುಗಳಲ್ಲಿ ಬರುತ್ತಿದ್ದವು. ಅಷ್ಟು ದೂರ ಕಾರೋಡಿಸಿಕೊಂಡು, ಸಿನೆಮಾ ನೋಡಿ, ದೂರ ವಾಪಸ್ ಬರುವಷ್ಟರಲ್ಲಿ ತಲೆ ನೋವು, ಸುಸ್ತು, ನಿದ್ದೆ.

ಟಿವಿಯಲ್ಲಿ ಆಗಲೇ ಹಿಂದಿಯ ಚಾನೆಲ್‍ಗಳು ಬರುತ್ತಿದ್ದವು, ಆದರೆ ಅವಕ್ಕೆ ಸಾಕಷ್ಟು ದುಡ್ಡು ಸುರಿಯಬೇಕಿತ್ತು. ಪ್ರತಿ ಹಿಂದಿ ಚಾನೆಲ್‍ಗೆ ಐದಾರು ಪೌಂಡು ಕೊಡಬೇಕಾಗುತ್ತಿತ್ತು. ಅಷ್ಟು ಕೊಟ್ಟರೂ ನೋಡಲು ಸಿಗುತ್ತಿದುದು ಈಗಾಗಲೇ ಹತ್ತಾರು ನೋಡಿದ ಶಾರೂಖ್‍ಖಾನ್ ಸಿನೆಮಾಗಳೋ ಇಲ್ಲ ಸೂಪರ್ ಹಿಟ್ ಆದ ಸಿನೆಮಾಗಳೋ ಮಾತ್ರ. ಹಿಂದಿ ಭಾಷೆಯಲ್ಲಿ ತಯಾರಾಗುವ ಸೂಕ್ಷ್ಮಸಂವೇದನೆಯ ಸಿನೆಮಾಗಳು ಟಾಕೀಜುಗಳಲ್ಲಿ ಅಥವಾ ಟಿವಿ ಚಾನೆಲ್ಲುಗಳಲ್ಲಿ ಬರುತ್ತಿರಲಿಲ್ಲ. 

ಹಿಂದಿಗಿಂತ ಹೆಚ್ಚಾಗಿ ಕನ್ನಡ ಸಿನೆಮಾಗಳನ್ನು ನೋಡುತ್ತ ಬಾಲ್ಯ ಕಳೆದವನು ನಾನು. ರಾಜಕುಮಾರ್ ಎಂದರೆ ಪಂಚಪ್ರಾಣ, ಎಷ್ಟೆಂದರೂ ಅವನು ನಮ್ಮ ತಾಯಿಯ ಕಡೆಯ ಕುಟುಂಬದ ಆರಾಧ್ಯದೈವವಾಗಿದ್ದವನು (ನನಗೆ ಅದೇಕೋ ರಾಜಕುಮಾರನನ್ನು ‘ಡಾ.ರಾಜ್‍ಕುಮಾರ್ ಅವರು’ ಎಂದು ಬಹುವಚನದಲ್ಲಿ ಬರೆದರೆ ತುಂಬ ಕೃತಕವೆನಿಸುತ್ತದೆ, ಕ್ಷಮಿಸಿ). ನನ್ನ ಅಜ್ಜಿಗಂತೂ (ತಾಯಿಯ ತಾಯಿ) ರಾಜಕುಮಾರನೆಂದರೆ ಪ್ರಾಣ. ರಾಜಕುಮಾರ್ ಗುಬ್ಬಿಕಂಪನಿಯಲ್ಲಿದ್ದ ಸಮಯದಲ್ಲಿ ನಾಟಕ ಮಾಡಲು ಹುಬ್ಬಳ್ಳಿಗೆ ಬಂದಾಗ ನನ್ನ ಅಜ್ಜಿಯ ಮನೆಯ ಹತ್ತಿರವೇ ಇದ್ದನಂತೆ! ನನ್ನ ಅಜ್ಜಿಗೆ ರಾಜಕುಮಾರನು ರಾಜಕುಮಾರನಾಗುವ ಮೊದಲಿನಿಂದಲೂ ಗೊತ್ತು!! ರಾಜಕುಮಾರನ ಯಾವುದೇ ಸಿನೆಮಾ ಬಂದರೂ ನನ್ನ ಸೋದರಮಾವಂದಿರು ಫಸ್ಟ್‌ಡೇ ಲಾಸ್ಟ್‌ಶೋಗೆ ಅದೆಲ್ಲಿಂದಲೋ ಟಿಕೆಟ್ಟುಗಳನ್ನು ದಕ್ಕಿಸಿಕೊಂಡು (ರಾಜಕುಮಾರನ ಸಿನೆಮಾಗೆ ಮೊದಲದಿನದ ಟಿಕೇಟ್ ಸಿಗಲು ಪುರ್ವಜನ್ಮದಲ್ಲಿ ಪುಣ್ಯಮಾಡಿರಬೇಕು, ಹಾಗಿತ್ತು ಆಗ)  ಮನೆಮಂದಿಯನ್ನೆಲ್ಲ (ನನ್ನ ಅಜ್ಜಿಯನ್ನೂ ಸೇರಿಸಿ), ಅಜ್ಜಿಮನೆಗೆ ರಜೆಗೆ ಬಂದ ನಮ್ಮಂಥ ಪುಟ್ಟಮಕ್ಕಳನ್ನೆಲ್ಲ ಕಟ್ಟಿಕೊಂಡು ಹೊರಡುತ್ತಿದ್ದರು (ಒಟ್ಟು ಇಪ್ಪತ್ತು ಮೂವತ್ತು ಜನ ಇರುತ್ತಿದ್ದೆವು!). ಆಗ ಲಾಸ್ಟ್‌ಶೋ ರಾತ್ರಿ ಒಂಬತ್ತು ಗಂಟೆಗೆ ಇರುತ್ತಿತ್ತು; ಆಗಿನ ಕಾಲದಲ್ಲಿ ಒಂಬತ್ತು ಗಂಟೆ ಅಂದರೆ ಒಂಥರ ಅಪರಾತ್ರಿ ಇದ್ದಂತೆ, ಬರೀ ಗುರ್ಕಾಗಳು ಕುಡುಕರು ನಾಯಿಗಳು ಮಾತ್ರ ರಸ್ತೆ ಮೇಲೆ ಕಾಣಸಿಗುತ್ತಿದ್ದರು.ಸಿನೆಮಾ ಬಿಡುತ್ತಿದುದು ರಾತ್ರಿ ಹನ್ನೆರೆಡೋ ಹನ್ನೆರೆಡುವರೆಯೋ ಆಗುತ್ತಿತ್ತು. ಆಗ ಗವ್ ಎನ್ನುವ ಕತ್ತಲೆಯಲ್ಲಿ ಸೋದರ ಮಾವಂದಿರ ಕೈಹಿಡಿದು ನಾಯಿಗಳನ್ನು, ಕಡುಕರನ್ನು ದೂರದಿಂದಲೇ ಗಮನಿಸುತ್ತ, ನೋಡಿರುವ ರಾಜಕುಮಾರನ ಸಿನೆಮಾದ ಸಿನೆಮಾದ ಬಗ್ಗೆ ಭಯಂಕರ ಚರ್ಚೆ ಮಾಡಿಕೊಂಡು ಬರುತ್ತಿದ್ದೆವು. ಜೊತೆಗೆ ಆಗಾಗ ವಿಷ್ಣುವರ್ಧನ, ಅನಂತನಾಗ, ಶಂಕರನಾಗ, ಅಂಬರೀಷರ ಸಿನೆಮಾಗಳನ್ನೂ ನೋಡುತ್ತಿದ್ದೆವು. ಹುಬ್ಬಳ್ಳಿಯಲ್ಲಿ ಕನ್ನಡ ಸಿನೆಮಾಗಳಷ್ಟೇ ಹಿಂದಿ ಸಿನೆಮಾಗಳೂ ಸಿನೆಮಾಹಾಲುಗಳಿಗೆ ಬರುತ್ತಿದ್ದವು. ಹೀಗಾಗಿ ಅಮಿತಾಭ್, ಜಿತೇಂದ್ರರ ಹಿಂದಿ ಸಿನೆಮಾಗಳನ್ನೂ ಎಗ್ಗಿಲ್ಲದೇ ನೋಡುತ್ತಿದ್ದೆವು. 

ಮುಂದೆ ಎಂಬಿಬಿಎಸ್ ಮಾಡಲು ಹುಬ್ಬಳ್ಳಿಗೇ ಬಂದಾಗ ನನಗೆ ಸಿನೆಮಾ ಲೋಕಕ್ಕೇ ಬಂದಂತಾಯಿತು. ಕಾಲೇಜಿನ ಹತ್ತಿರವೇ ಇದ್ದ ಅಮೃತ ಥೇಟರಿನಲ್ಲಿ ಇಂಗ್ಲೀಷ್ ಸಿನೆಮಾ, ಸುಜಾತದಲ್ಲಿ ರಾಜಕುಮಾರನ ಸಿನೆಮಾ, ಚಂದ್ರಕಲಾದಲ್ಲಿ ರಾಜಕುಮಾರನ ಹಳೆಯ ಸಿನೆಮಾ, ಅಪ್ಸರಾ-ಸುಧಾ-ರೂಪಂನಲ್ಲಿ ಹಿಂದಿ ಸಿನೆಮಾ, ಮೋಹನ-ಮಲ್ಲಿಕಾರ್ಜುನದಲ್ಲಿ ಆರ್ಟ್ ಸಿನೆಮಾ, ಸಂಗೀತದಲ್ಲಿ ತೆಲುಗು ಸಿನೆಮಾ...ಒಟ್ಟಿನಲ್ಲಿ ಸಿನೆಮಾ ಸುಗ್ಗಿ. ಇಂಥದೇ ಸಿನೆಮಾ ಆಗಿರಬೇಕಿತ್ತು ಎಂದೇನೂ ಇರಲಿಲ್ಲ. ಒಂದಿನಿತೂ ಕಲೆಯಿಲ್ಲದ ಶುದ್ಧ ವ್ಯಾಪಾರಿಚಿತ್ರದಿಂದ ಹಿಡಿದು ಪ್ರಶಸ್ತಿಗೋಸ್ಕರವಾಗಿಯೇ ಮಾಡಿದ ಕಲಾತ್ಮಕ ಚಿತ್ರಗಳವರೆಗೆ ಯಾವುದಾದರೂ ನಡೆಯುತ್ತಿತ್ತು. ಧಾರವಾಡದಲ್ಲಿ ವರ್ಷಕ್ಕೊಮ್ಮೆ ಉತ್ತಮ ಕಲಾತ್ಮಕ ಚಿತ್ರಗಳ ಉತ್ಸವವನ್ನು ಮಾಡುತ್ತಿದ್ದರು. ಎಲ್ಲ ಸಿನೆಮಾ ಟಾಕೀಜುಗಳ ಮ್ಯಾಟ್ನಿಶೋದಲ್ಲಿ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರು. ಸಮಯ ಮಾಡಕೊಂಡು ಅವನ್ನೂ ನೋಡುತ್ತಿದ್ದೆ. 

ವಯಸ್ಸಾದಂತೆ ಸಿನೆಮಾ ಹುಚ್ಚು ಕಡಿಮೆಯಾಗುತ್ತದಂತೆ, ಆದರೆ ಪಿಜಿ ಮಾಡಲು ಮೈಸೂರಿಗೆ ಬಂದಾಗ ಈ ಸಿನೆಮಾ ಹುಚ್ಚು ಕಡಿಮೆಯಾಗುವ ಬದಲು ಇನ್ನೂ ಹೆಚ್ಚೇ ಆಯಿತು. ಅದರಲ್ಲೂ ಕನ್ನಡ ಸಿನೆಮಾಗಳನ್ನು ನೋಡುವ ಹುಚ್ಚು ಇನ್ನೂ ಹೆಚ್ಚಾಯಿತು. ಎಷ್ಟೇ ಕೆಟ್ಟ ಕನ್ನಡ ಸಿನೆಮಾಗಳನ್ನು ನೋಡಿದರೂ ಛಲ ಬಿಡದ ತ್ರಿವಿಕ್ರಮನಂತೆ ಈ ಸಲವಾದರೂ ಒಳ್ಳೆಯ ಸಿನೆಮಾ ನೋಡಲು ಸಿಗುತ್ತದೆ ಎನ್ನುವ ಭ್ರಮೆಯಿಂದ ಇರುವ ಬರುವ ಕನ್ನಡ ಸಿನೆಮಾಗಳನ್ನು ನೋಡುತ್ತಿದ್ದೆ. ಹಳೆಯ ತಲೆಮಾರೆಲ್ಲ ಖಾಲಿಯಾಗಿ ಶಿವರಾಜಕುಮಾರ, ಉಪೇಂದ್ರ, ರಮೇಶ, ಸುದೀಪರೆಲ್ಲ ಬಂದಿದ್ದರು. ಹಿಂದಿಯನ್ನು ಖಾನ್‍ಗಳು ಆಳುತ್ತಿದ್ದರು. ಮೈಸೂರಿಗೆ ಎಲ್ಲ ಹಿಂದಿ ಸಿನೆಮಾಗಳು ಬರುತ್ತಿರಲಿಲ್ಲ, ಆದರೆ ಬರುವ ಸಿನೆಮಾ ಬಿಡುತ್ತಿರಲಿಲ್ಲ. ಸ್ಟರ್ಲಿಂಗ್‍ನಲ್ಲಿ ಬರುವ ಇಂಗ್ಲೀಷ್ ಸಿನೆಮಾಗಳನ್ನೂ ಬಿಡುತ್ತಿರಲಿಲ್ಲ. ಆದರೂ ಒಲವು ಮಾತ್ರ ಕನ್ನಡ ಮತ್ತು ಹಿಂದಿ ಸಿನೆಮಾಗಳದ್ದೇ. 

ಇಷ್ಟೊಂದು ಕನ್ನಡ ಮತ್ತು ಹಿಂದಿ ಸಿನೆಮಾ ಹುಚ್ಚಿರುವ ನಾನು ಇಂಗ್ಲೆಂಡಿಗೆ ಬಂದಾಗ ನೀರಿನಿಂದ ಆಚೆ ತೆಗೆದ ಮೀನಿನಂತೆ ಆಗಿದ್ದೆ. ಆಗಾಗ ಹಿಂದಿ ಸಿನೆಮಾಗಳನ್ನು ಥೇಟರಿನಲ್ಲಿ ನೋಡುವುದನ್ನು ಬಿಟ್ಟರೆ ಭಾರತದ ಯಾವ ಭಾಷೆಯ ಸಿನೆಮಾಗಳೂ ನೋಡಲು ಸಿಗುತ್ತಿರಲಿಲ್ಲ. ಕನ್ನಡ ಸಿನೆಮಾಗಳೊಂದೂ ಟಾಕೀಜಿಗೆ ಬರುತ್ತಿರಲಿಲ್ಲ. ಕನ್ನಡದ ಟಿವಿ ಚಾನೆಲ್‍ಗಳು ಇರಲಿಲ್ಲ. ಈ ಸಿನೆಮಾ ತಲುಬನ್ನು ನಿವಾರಿಸಿಕೊಳ್ಳುವ ಉಪಾಯಗಳೆಂದರೆ, ಭಾರತಕ್ಕೆ ರಜೆಗೆ ಹೋದಾಗ ಒಂದಿಪ್ಪತ್ತು ಕನ್ನಡ ಸಿನೆಮಾಗಳ ವಿಸಿಡಿ (ನಂತರ ಡಿವಿಡಿ)ಗಳನ್ನು ಹೊತ್ತು ತರುವುದು ಮತ್ತು ಗೆಳೆಯರ ಮನೆಗೆ ಹೋದಾಗ ವಿಸಿಡಿ, ಡಿವಿಡಿಗಳನ್ನು ವಿನಿಮಯಮಾಡಿಕೊಳ್ಳುವುದು. ಈ ವಿಸಿಡಿ, ಡಿವಿಡಿಗಳು 90% ಪೈರೇಟೆಡ್ ಆಗಿರುತ್ತಿದ್ದವಾದ್ದರಿಂದ ಸಿನೆಮಾಗಳ ಪ್ರಿಂಟ್ ಕ್ವಾಲಿಟಿ ತುಂಬ ಕೆಟ್ತದಾಗಿರುತ್ತಿದ್ದವು, ಅರ್ಧ ಮುಕ್ಕಾಲು ಆದ ಮೇಲೆ ಮುಂದೆ ಹೋಗಲು ತುಂಬ ಕಷ್ಟ ಪಡುತ್ತಿದ್ದವು, ಕೆಲವಂತೂ ಏನೆಲ್ಲ ಮಾಡಿದರೂ ಕರ್ ಕರ್ ಎಂದು ಸದ್ದು ಮಾಡುತ್ತ ನಿಂತುಬಿಡುತ್ತಿದ್ದವು. ಎಲ್ಲ ಸಿನೆಮಾ ಕತೆಗಳೂ ಒಂದ ತರಹ ಇರುವುದರಿಂದ ಮುಂದೆ ಏನಾಯಿತು, ಸಿನೆಮಾ ಹೇಗೆ ಅಂತ್ಯವಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಅದು ಬೇರೆ ಮಾತು. 

ಹೀಗಿರುವಾಗ ಕನ್ನಡದ ಕೆಲವು ಸಂಘಗಳು ಕನ್ನಡ ಚಲನಚಿತ್ರಗಳನ್ನು ತರಿಸಿ, ಕನ್ನಡದ ಸಿನೆಮಾಗಳನ್ನು ಇಂಗ್ಲೆಂಡಿನ ಸಿನಿಮಾಹಾಲುಗಲಲ್ಲಿ ಬಿಡುಗಡೆ ಮಾಡಿದರು. ‘ರಾಮ, ಶ್ಯಾಮ, ಭಾಮ‘, ನಾನು ಇಂಗ್ಲೆಂಡಿನಲ್ಲಿ ಸಿನೆಮಾಹಾಲಿನಲ್ಲಿ ನೋಡಿದ ಮೊದಲ ಕನ್ನಡ ಸಿನೆಮಾ, ಆ ಚಿತ್ರ ಲಂಡನ್ನಿನ ಸಿನೆಮಾ ಟಾಕೀಜಿನಲ್ಲಿ ಹೌಸ್‍ಫುಲ್ ಆಗಿತ್ತು. ಕನ್ನಡದ ಯಾವುದೋ ಸಾಂಕೃತಿಕ ಕಾರ್ಯಕ್ರಮ ನಡೆಯುತ್ತಿರುವಂತೆ ಸಡಗರವಿತ್ತು. ಕರ್ನಾಟಕದಿಂದ ಸಿನೆಮಾ ತರಿಸಿ, ಅದಕ್ಕೆ ಇಂಗ್ಲೆಂಡಿನ ಸೆನ್ಸಾರ್ ಸರ್ಟಿಫಿಕೇಟ್ (ಆಗ ಇಂಗ್ಲೀಷ್ ಸಬ್‍ಟೈಟಲ್‍ಗಳು ಇರಲಿಲ್ಲ) ಕೊಡಿಸಿ, ಟಿಕೆಟ್ ಮಾರಿ, ಸಿನೆಮಾಹಾಲಿನ ಬಾಡಿಗೆಕೊಟ್ಟ ಮೇಲೆ, ಸಿನೆಮಾ ತರಿಸಿದವರಿಗೆ ಕೈಗೆ ಎಷ್ಟು ಮಿಕ್ಕುತ್ತಿತ್ತೋ ಅಥವಾ ಕೈಯಿಂದ ಅವರೇ ದುಡ್ಡು ಹಾಕಬೇಕಿತ್ತೋ ನನಗಂತೂ ಗೊತ್ತಿಲ್ಲ. ಆದರೆ ಕನ್ನಡ ಸಿನೆಮಾಗಳನ್ನು ನೋಡುವ ಅವಕಾಶ ಮಾತ್ರ ಹೆಚ್ಚುತ್ತ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ ನೋಡಲು ಪುರುಸೊತ್ತು ಸಿಗುತ್ತಿರಲಿಲ್ಲ. ಆನಂತರ ಕನ್ನಡ ಸಿನೆಮಾಗಳು ಇಂಗ್ಲೀಷ್ ಸಬ್‍ಟೈಟಲ್‍ನೊಂದಿಗೆ ಹಾಲಿವುಡ್ ಮತ್ತು ಹಿಂದಿ ಸಿನೆಮಾಗಳಂತೆ ಮಲ್ಟಿಪ್ಲೆಕ್ಸುಗಳಲ್ಲಿ ಅಧೀಕೃತವಾಗಿ ಬಿಡುಗಡೆಯಾಗತೊಡಗಿದವು. ಗಣೇಶ, ದರ್ಶನ್, ಯಶ್‍ರ ಸಿನೆಮಾಗಳು ಇಲ್ಲೂ ವಿಜೃಂಭಿಸತೊಡಗಿದವು (ಈಗ ಕೊರೊನಾ ದೆಸೆಯಿಂದಾಗಿ ಇದೆಲ್ಲ ನಿಂತುಹೋಗಿದೆ, ಮತ್ತೆ ಪ್ರಾರಂಭವಾಗುವುದೇ? ಕಾದುನೋಡಬೇಕು). 

ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಓಟಿಟಿಗಳು ಆರಂಭವಾದಾಗ ಅದರಲ್ಲಿ ಭಾರತೀಯ ಭಾಷೆಯ ಸಿನೆಮಾಗಳು ಇರಲಿಲ್ಲ, ಕನ್ನಡ ಸಿನೆಮಾಗಳಂತೂ ಇರಲೇ ಇಲ್ಲ. ಆದರೆ ಕೆಲವು ವೆಬ್‍ಸೈಟುಗಳು ಎಚ್.ಡಿ ಗುಣಮಟ್ಟದ ಕನ್ನಡ ಸಿನೆಮಾಗಳನ್ನು ಅವು ಕರ್ನಾಟಕದಲ್ಲಿ ಬಿಡುಗಡೆಯಾದ ಕೆಲವು ತಿಂಗಳುಗಳಲ್ಲೇ  ತಮ್ಮ ತಾಣಗಳಲ್ಲಿ ಬಿಡುಗಡೆ ಮಾಡತೊಡಗಿದವು, ಅದೂ ಪುಗಸಟ್ಟೆಯಾಗಿ ಅಥವಾ ತುಂಬ ಕಡಿಮೆ ದುಡ್ಡಿಗೆ. ಮನೆಯಲ್ಲೇ ಕೂತುಕೊಂಡು ಉತ್ತಮ ಪ್ರಿಂಟಿನ ಸಿನೆಮಾಗಳನ್ನು ನೋಡುವ ಅವಕಾಶ ಶುರುವಾಯಿತು. ಆದರೂ ಈ ವೆಬ್‍ಸೈಟುಗಳು ಎಲ್ಲಿ ವೈರಸ್ಸುಗಳನ್ನು, ವರ್ಮ್‍ಗಳನ್ನು ನಮ್ಮ ಕಂಪ್ಯೂಟರಿಗೆ ಬಿಡುತ್ತಾರೋ ಎಂದು ಹೆದರಿಕೆಯಾಗುತ್ತಿತ್ತು. ಅಲ್ಲದೇ ಕಂಪ್ಯೂಟರಿನಿಂದ ಟಿವಿಯ ಅಥವಾ ಹೋಮ್‍ಸಿನೆಮಾದ ಪರದೆಗೆ ಇವನ್ನು ಎಳೆದು ತರುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗುತ್ತಿತ್ತು. 

ಭಾರತೀಯ ಸಿನೆಮಾ ಮಾರುಕಟ್ಟೆಯ ಮೇಲೆ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್‍ಗಳ ಕಣ್ಣು ಬೀಳಲು ತುಂಬ ಸಮಯವೇನೂ ಬೇಕಾಗಲಿಲ್ಲ. ಈಗ ಬಹುತೇಕ ಎಲ್ಲ ಹಿಂದಿ ಸಿನೆಮಾಗಳು ಓಟಿಟಿಯಲ್ಲಿ ನೋಡಲು ಸಿಗುತ್ತವೆ. ಹೊಸ ಕನ್ನಡ ಸಿನೆಮಾಗಳೂ ಪ್ರೈಮ್‍ನಲ್ಲಿ (ನೆಟ್‍ಫ್ಲಿಕ್ಸ್‍ನಲ್ಲಿ ತುಂಬ ಕಡಿಮೆ) ನೋಡಲು ಸಿಗುತ್ತವೆ. ಬರೀ ಹಿಂದಿ ಮತ್ತು ಕನ್ನಡ ಭಾಷೆಯ ಸಿನೆಮಾಗಲಲ್ಲದೇ ತೆಲುಗು, ತಮಿಳು, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ ಸಿನೆಮಾಗಳನ್ನೂ ಮನೆಯಲ್ಲೇ ಕೂತು, ಭಾಷೆ ಅರ್ಥವಾಗದಿದ್ದರೂ ಸಬ್‍ಟೈಟಲ್ ಓದಿಕೊಂಡು ನೋಡಬಹುದಾಗಿದೆ. ಶುದ್ಧ ವ್ಯಾಪಾರಿ ಸಿನೆಮಾಗಳಾದ ರಾಬರ್ಟ್, ಕೆಜಿಎಫ್‍ನಂಥ ಸಿನೆಮಾಗಳ ಜೊತೆಗೆ ನಾತಿಚರಾಮಿ, ಕಿರಗೂರಿನ ಗಯ್ಯಾಳಿಗಳಂಥ ಸೂಕ್ಷ್ಮಸಂವೇದನೆಯ ಸಿನೆಮಾಗಳನ್ನು ನಮಗೆ ಬೇಕಾದ ಹೊತ್ತು, ಎಲ್ಲಿ ಬೇಕಾದರೂ, ಫೋನಿನಿಂದ ಹಿಡಿದು ಹೋಮ್‍ಸಿನೆಮಾ ಪರದೆಯ ಮೇಲೆ ನೋಡಬಹುದಾಗಿದೆ. 

(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ) . 





Friday 27 August 2021

ಇಂಗ್ಲೆಂಡ್ ಪತ್ರ 8

 ರಜಾದಿನಗಳ ಪ್ರವಾಸಗಳು


ಬೇಸಿಗೆಯ ರಜೆ ಬಂದರೆ ಸಾಕು, ಹುಬ್ಬಳ್ಳಿಯಲ್ಲಿರುವ ಅಜ್ಜಿಯ ಮನೆಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಿದ್ದೆ. ಬೇಕಾದುದನ್ನೆಲ್ಲ ಕೊಡಿಸುವ ಮಾಮಂದಿದ್ದರು. ಮಾಮಿಯಂದಿರು ಮಾಡುವ ರುಚಿ ರುಚಿ ಬಿಸಿ ಬಿಸಿ ಅಡುಗೆ ಇರುತ್ತಿತ್ತು. ಕಸಿನ್‍ಗಳು ಸೇರಿ ಹುಬ್ಬಳ್ಳಿಯನ್ನೆಲ್ಲ ಜಾಲಾಡಿಸುತ್ತಿದ್ದೆವು, ದಿನ ಪೂರ್ತಿ ಆಡುತ್ತಿದ್ದೆವು. ರಾಜಕುಮಾರನ ಹೊಸ ಸಿನೆಮಾ ಸುಜಾತಾ ಟಾಕೀಜ್‍ನಲ್ಲಿ ಇರುತ್ತಿತ್ತು, ರಾಜಕುಮಾರನ ಹಳೆಯ ಸಿನೆಮಾಗಳು ವಾರಕ್ಕೊಂದರಂತೆ ಚಂದ್ರಕಲಾ ಟಾಕೀಜ್‍ನಲ್ಲಿ ಬರುತ್ತಿದ್ದವು.ಬಾಗಲಕೋಟೆ ಎಂಬ ಪುಟ್ಟ ಪಟ್ಟಣದಲ್ಲಿ ಬೆಳೆಯುತ್ತಿದ್ದವನಿಗೆ ಹುಬ್ಬಳ್ಳಿ ಒಂದು ಮಾಯಾನಗರಿಯಂತೆ ಕಾಣುತ್ತಿತ್ತು. ಕಣ್ಣು ತುಂಬ ಕನಸುಗಳನ್ನು ತುಂಬಿಕೊಂಡಿರುವ ಆ ವಯಸ್ಸಿನಲ್ಲಿ ಇನ್ನೇನು ತಾನೆ ಬೇಕಿತ್ತು? ನನ್ನ ಹಾಗೆಯೇ ನನ್ನ ಬಹಳಷ್ಟು ಸಹಪಾಠಿಗಳು ಕೂಡ ಬೇಸಿಗೆಯ ರಜೆ ಬಂದರೆ ಸಾಕು, ಅಜ್ಜನ ಮನೆಗೋ, ಅಜ್ಜಿಯ ಮನೆಗೋ, ಮಾಮಾ-ಕಾಕಾಗಳ ಮನೆಗೋ ಹೋಗುತ್ತಿದ್ದರು. ಈಗಲೂ ಭಾರತದಲ್ಲಿ ಮಕ್ಕಳು ಬೇಸಿಗೆಯ ರಜೆಯಲ್ಲಿ ಮೊದಲಿನಷ್ಟು ದಿನಗಳಿರದಿದ್ದರೂ ನಾಕಾರು ದಿನಗಳ ಮಟ್ಟಿಗಾದರೂ ಬಂಧುಗಳ ಮನೆಗೆ ಹೋಗಿ ಬೇಸಿಗೆಯ ರಜೆಯನ್ನು ಕಳೆಯುವುದು ಸಾಮಾನ್ಯ. 


ಆದರೆ ಇಂಗ್ಲೆಂಡಿನಲ್ಲಿ ಹಾಗಲ್ಲ. ಬೇಸಿಗೆಯ ರಜೆಯಲ್ಲಿ ಅಜ್ಜಅಜ್ಜಿಯ ಮನೆಗೋ, ಮಾಮಾ-ಕಾಕಂದಿರ ಮನೆಗೋ ಹೋಗುವುದಿಲ್ಲ. ಹಾಗಾಗಿ ಇಂಗ್ಲೆಂಡಿನಲ್ಲಿ ಬೇಸಿಗೆಯ ರಜೆ ಶುರುವಾದರೆ ಸಾಕು, ಕುಟುಂಬ ಸಮೇತ ಪ್ರವಾಸಗಳು ಶುರುವಾಗುತ್ತವೆ. ಕುಟುಂಬ ಸಮೇತ ಪ್ರವಾಸ ಕೈಗೊಂಡು, ಊರಿನಿಂದ ದೂರ ಪಯಣಿಸಿ, ಹೊಟೇಲಿನಲ್ಲಿದ್ದು, ನಾಕಾರು ದಿನ ಸುತ್ತ ಮುತ್ತೆಲ್ಲ ಕಳೆದು ಸುತ್ತಾಡಿ ಮನೆಗೆ ಮರಳುತ್ತಾರೆ. ಇಂಗ್ಲೆಂಡಿನಲ್ಲಿ ಈ ‘ಹಾಲಿಡೆ‘ಗಳಿಗೆ ಬಹಳ ಮಹತ್ವ. ವಾರ್ಷಿಕ ವರಮಾನ ಎಷ್ಟೇ ಇರಲಿ, ವರ್ಷಕ್ಕೆ ಕುಟುಂಬ ಸಮೇತ ಒಂದಾದರೂ ಹಾಲಿಡೆ ಮಾಡದಿದ್ದರೆ ಅದೆಂಥ ಬದುಕು ಎನ್ನುತ್ತದೆ ಇಲ್ಲಿನ ಸಮಾಜ. 


ಈ ದೇಶದ ಜನರು ಪಯಣಪ್ರಿಯರು. ಇಂಗ್ಲೆಂಡಿನಲ್ಲಿ ಲಂಡನ್ ಹೊರತಾಗಿ ಬೇಕಾದಷ್ಟು ನೈಸರ್ಗಿಕ, ಐತಿಹಾಸಿಕ ಮತ್ತು ಆಧುನಿಕ ಪ್ರೇಕ್ಷಣೀಯ ಸ್ಥಳಗಳಿವೆ; ಕಾರಿನಲ್ಲಿ ಎಲ್ಲ ಸರಂಜಾಮು ತುಂಬಿಕೊಂಡು ಹೊಟೆಲ್ ಬುಕ್ ಮಾಡಿ ಅಂಥ ಊರುಗಳಿಗೆ ಹೊರಟುಬಿಡುತ್ತಾರೆ. ಆದರೆ ಇಲ್ಲಿನ ಜನರಿಗೆ ವಿದೇಶ ಪ್ರಯಾಣದ ಹುಚ್ಚು, ಬಹುಷಃ ಇಲ್ಲಿನ ಜನರಿಗಿರುವಷ್ಟು ವಿದೇಶ ಪ್ರಯಾಣದ ಹುಚ್ಚು ಬೇರೆ ಯಾವ ದೇಶದವರಿಗೂ ಇಲ್ಲ ಎನಿಸುತ್ತದೆ. ಅದರಿಂದಾಗಿಯೇ ಇವರು ಪ್ರಪಂಚದ ಮೂಲೆಮೂಲೆಗಳಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದರೋ ಅಥವಾ ಎಲ್ಲೆಲ್ಲೂ ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದಕ್ಕಾಗಿ ಇಲ್ಲಿಯ ಜನರಲ್ಲಿ ವಿದೇಶ ಪ್ರವಾಸದ ಹುಚ್ಚು ಶುರುವಾಯಿತೋ? ಯುರೋಪಿನ ಬೇರೆ ದೇಶಗಳಿಗೆ ಪ್ರವಾಸ ಹೋಗುವುದೆಂದರೆ ಇವರಿಗೆ ಪ್ರಾಣ. ಉಳ್ಳವರು ಅಮೇರಿಕದ ನಗರ ಪ್ರವಾಸಕ್ಕೆ ಹೋಗುತ್ತಾರೆ, ನ್ಯೂಯಾರ್ಕ್, ಚಿಕಾಗೊ, ಫ್ಲೋರಿಡಾ, ಲಾಸ್ ವೇಗಾಸ್  ಎಂದರೆ ತುಂಬ ಇಷ್ಟ. ಭಾರತ, ಶ್ರೀಲಂಕಾ, ಥಾಯ್‌ಲ್ಯಾಂಡ್‌ಗಳೂ ಬಹಳ ಜನಪ್ರೀಯ. ಇಲ್ಲಿನ ಪತ್ರಿಕೆಗಳಲ್ಲಿ ಪ್ರತಿ ದಿನ ನಾಕಾರು ಪುಟಗಳನ್ನು ಪ್ರವಾಸದ ಜಾಹೀರಾತುಗಳಿಗೇ ಮೀಸಲಾಗಿರುತ್ತವೆ ಎಂದರೆ ಇಲ್ಲಿನ ಜನರ ಪ್ರವಾಸದ ಹುಚ್ಚು ಯಾವ ಮಟ್ಟಿಗಿರಬಹುದು ಊಹಿಸಿ. 


ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆ‘ಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು ಮತ್ತು ಯಾವಾಗ ಹೋದರೂ ಅವೇ ಆಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್‘ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛರ್ತಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ, ದೇವಸ್ಥಾನದ ಅಥವಾ ಮಠದ ಊಟ ಮಾಡಿದರೆ ಅಲ್ಲಿಗೆ ನಮ್ಮ ಹಾಲಿಡೆ ಖತಮ್. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಮೈಸೂರುಗಳೇನಿದ್ದರೂ ಶಾಲೆಯಿಂದ ಹೋಗಬೇಕಾದ ಹಾಲಿಡೆ ತಾಣಗಳು. ಊಟಿ, ಕಡೈಕೆನಾಲ್‌ಗಳೇನಿದ್ದರೂ ಹನಿಮೂನಿಗೆ ಮಾತ್ರ! ಇನ್ನು ತಾಜಮಹಲ್, ದಿಲ್ಲಿ, ಜಯಪುರಗಲ ಪ್ರವಾಸಗಳು ನಮ್ಮ ಕನಸಿನಲ್ಲೂ ಬರುತ್ತಿರಲಿಲ್ಲ. ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ ಹಾಲಿಡೆಗಳ ಬಗ್ಗೆ ಪ್ರವಾಸಗಳ ಬಗ್ಗೆ ಮನೋಭಾವ ಬದಲಾಗುತ್ತಿದೆ. ಕೆಳಮಧ್ಯಮ ವರ್ಗದವರೂ ತೀರ್ಥಯಾತ್ರಗಳಲ್ಲದೇ ಬೇರೆ ಪ್ರದೇಶಗಳಿಗೂ ಹಾಲಿಡೆಗೆಂದು ಹೋಗುತ್ತಿದ್ದಾರೆ. ಎಲ್ಲ ಐತಿಹಾಸಿಕ ಮತ್ತು ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ತಂಗಲು ಬಜೆಟ್ ಹೊಟೇಲುಗಳಿಂದ ಹಿಡಿದು ದುಬಾರಿ ರಿಸಾರ್ಟುಗಳವರೆಗೆ ಸಿಗುತ್ತವೆ. 


ಇಂಗ್ಲೆಂಡಿನಲ್ಲಿ ಹಾಲಿಡೆಗೆ ಹೋಗುವವರು ಮುಖ್ಯವಾಗಿ ಜಾಗಗಳನ್ನು ಆರಿಸಿಕೊಳ್ಳುವುದು ತಮ್ಮ ಮಕ್ಕಳ ವಯಸ್ಸು ಮತ್ತು ತಮ್ಮ ಹವ್ಯಾಸಗಳ ಆಧಾರಗಳ ಮೇಲೆ. ಚಿಕ್ಕ ಚಿಕ್ಕ ಮಕ್ಕಳಿದ್ದರೆ ಬೀಚ್‍ಗಳು ಇರುವ ಊರಿಗೋ ಅಥವಾ ಮಕ್ಕಳ ಚಟುವಟಿಕೆಗಳಿರುವ ಪ್ರದೇಶಗಳಿಗೋ (ಬಟ್ಲಿನ್ಸ್ ಅಥವಾ ಸೆಂಟರ್ ಪಾರ್ಕ್) ತಮ್ಮದೇ ಕಾರಿನಲ್ಲಿ ಹೋಗುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ತಮ್ಮ ಕಾರಿಗಳ ಬೆನ್ನ ಮೇಲೆ ಸೈಕಲ್‌ಗಳನ್ನು ಹೇರಿಕೊಂಡು ನೈಸರ್ಗಿಕ ತಾಣಗಳಿಗೆ ಹೋಗುತ್ತಾರ. ಬೆಟ್ಟ, ಗುಡ್ಡ, ಕಣಿವೆ, ತೊರೆಗಳಲ್ಲಿ ಸೈಕಲ್ ಓಡಿಸಿಕೊಂಡೋ, ಹೈಕಿಂಗ್ ಮಾಡಿಕೊಂಡೊ, ನೀರಿನಲ್ಲಿ ಹುಟ್ಟು ಹಾಕಿಕೊಂಡೋ ರಜೆಯ ಸಮಯವನ್ನು ಕಳೆಯುತ್ತಾರೆ. ಹೊಟೇಲುಗಳಲ್ಲಲ್ಲದೇ ಕ್ಯಾರಾವಾನ್‍ಗಳಲ್ಲಿ ಅಥವಾ ಟೆಂಟುಗಳಲ್ಲಿ ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಈ ದೇಶದಲ್ಲಿ ಸಿಕ್ಕಾಪಟ್ಟೆ ಕಾಲುವೆಗಳಿವೆ. ಆ ಕಾಲುವೆಗಳಲ್ಲಿ ಚಿಕ್ಕ ಚಿಕ್ಕ ನಾವೆ(ಬೋಟು)ಗಳನ್ನು ಬಾಡಿಗೆಗೆ ಪಡೆದು ಹಾಲಿಡೆ ಮಾಡುತ್ತಾರೆ. ಚಿಕ್ಕ ಬೋಟುಗಳಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ  ಸಾಗಿ, ರಾತ್ರಿಗಳನ್ನು ಬೋಟುಗಳಲ್ಲೇ ಕಳೆಯಬಹುದು. 


ಬೇರೆ ದೇಶಗಳ ಜನರಿಗೆ ಲಂಡನ್ ಪ್ರಮುಖ ಪ್ರೇಕ್ಷಣೀಯ ಸ್ಥಳ, ಆದರೆ ಬ್ರಿಟನ್ನಿನ ಜನರು ಹಾಲಿಡೆಗಳಿಗಾಗಿ ಲಂಡನ್ನಿಗೆ ಹೆಚ್ಚಾಗಿ ಹೋಗುವುದಿಲ್ಲ. ಐತಿಹಾಸಿಕ ಅಥವಾ ನೈಸರ್ಗಿಕ ಪ್ರದೇಶಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಯು.ಕೆಯಲ್ಲಿ ಸರಕಾರವು ನೈಸರ್ಗಿಕ ರಮ್ಯತಾಣಗಳನ್ನು ಗುರುತಿಸಿ (AONB - Area of Natural beauty ಮತ್ತು ಯು.ಕೆ ನ್ಯಾಶನಲ್ ಪಾರ್ಕ್ಸ್) ಅದರ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿರುವುದರಿಂದ, ಎಷ್ಟೇ ಪ್ರವಾಸಿಗಳು ಬಂದು ಹೋದರೂ, ಎಷ್ಟೇ ಜನಪ್ರೀಯವಾದರೂ, ಆಯಾ ಸ್ಥಳಗಳ, ಕಾಡುಗಳ, ಊರುಗಳ ಸೌಂದರ್ಯದಲ್ಲಿ ಯಾವ ರೀತಿಯಲ್ಲಿಯೂ ಹೆಚ್ಚೂ ಕಮ್ಮಿ ಆಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಐತಿಹಾಸಿಕ ಪಟ್ಟಣಗಳು ಮತ್ತು ಮಧ್ಯಕಾಲೀನ ಹಳ್ಳಿಗಳು ಇನ್ನೂ ತಮ್ಮ ಸೊಗಡನ್ನು ಉಳಿಸಿಕೊಂಡು ಜನರನ್ನು ಆಕರ್ಷಿಸುತ್ತಿವೆ. ಇಲ್ಲಿನ ಕಾಡುಗಳು ದಟ್ಟ ಕಾಡುಗಳಲ್ಲ, ದೊಡ್ಡ ಕಾಡು ಪ್ರಾಣಿಗಳು ಇಲ್ಲಿ ಇರುವುದಿಲ್ಲ. ಆದರೂ ಇಲ್ಲಿನ ಕಾಡುಗಳು ಮತ್ತು ಗುಡ್ಡಗಳು ನಡೆದಾಡಲು, ಹೈಕಿಂಗ್ ಮಾಡಲು ಅನುಕೂಲಕರವಾಗಿವೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಏರ್ಪಾಡುಗಳನ್ನು ಮಾಡಿದ್ದಾರೆ. 

ಕ್ರೂಸ್ ಹಾಲಿಡೆಗಳು ಕೂಡ ಇಲ್ಲಿ ತುಂಬ ಜನಪ್ರೀಯ. ಒಂದು ಚಿಕ್ಕ ಪಟ್ಟಣವನ್ನು ಹೋಲುವ ದೊಡ್ಡ ದೊಡ್ಡ ಹಡಗುಗಳು ಸಾವಿರಾರು ಜನರನ್ನು ತುಂಬಿಕೊಂಡು ವಾರದಿಂದ ಹಿಡಿದು ತಿಂಗಳುಗಳವರೆಗೆ ಯುರೋಪನ್ನು, ಕೆರೇಬಿಯನ್ ದ್ವೀಪಗಳನ್ನು, ಅಮೇರಿಕದ ಅಲಸ್ಕಾವನ್ನು ಸುತ್ತಾಡಿಸಿ ಕರೆದುಕೊಂಡು ಬರುತ್ತವೆ. ಒಂದು ಶಿಪ್ಪಿನಲ್ಲೇ ನಾಕಾರು ಕೆಲವೊಮ್ಮೆ ಹತ್ತಾರು ರೆಸ್ಟೋರೆಂಟುಗಳಿರುತ್ತವೆ, ಬಿಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಡಿನ್ನರ್‌ವರೆಗೆ ಪ್ರಪಂಚದ ವಿವಿಧ ಅಡುಗೆಗಳನ್ನು ಮಾಡಿರುತ್ತಾರೆ. ವಿಧ ವಿಧ ಪೇಯಗಳಿರುತ್ತವೆ. ಪ್ರದರ್ಶನಕ್ಕೆಂದು ಸಭಾಂಗಣವಿರುತ್ತದೆ. ಮಕ್ಕಳ ಆಟಕ್ಕೆಂದು ಜಾಗಗಳನ್ನು ಮಾಡಿರುತ್ತಾರೆ. 


ಈ ಪ್ರವಾಸ/ಹಾಲಿಡೆ ಮಾಡುವ ಹುಚ್ಚು ವಲಸೆ ಬಂದ ನಮ್ಮನ್ನೂ ತಟ್ಟಲು ಬಹಳ ಕಾಲವೇನೂ ಬೇಕಾಗುವುದಿಲ್ಲ. ನಾವು ಕೂಡ ಈ ದೇಶಕ್ಕೆ ಬಂದ ಮೇಲಿಂದ ಇಲ್ಲಿನ ಜನರಂತೆ ಪ್ರತಿ ವರ್ಷ ಮಕ್ಕಳ ಬೇಸಿಗೆಯ ರಜೆಯ ಸಮಯದಲ್ಲಿ ಪ್ರವಾಸಕ್ಕೆ ಹೋಗುತ್ತೇವೆ. ಯುರೋಪಿನ ದೇಶಗಳಾದ ಫ್ರಾನ್ಸ್, ಇಟಲಿ, ಗ್ರೀಸ್, ಸ್ಪೇನ್, ನೆದರ್‌ಲ್ಯಾಂಡ್, ಟರ್ಕಿ, ಕೆನರಿ ದ್ವೀಪಗಳು ಹಾಲಿಡೆಗಳಿಗಾಗಿ ತುಂಬ ಜನಪ್ರೀಯ. ಹಾಗೆಯೇ ಬ್ರಿಟನ್ನಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳಾದ ಲಂಡನ್, ಬಾತ್, ಕಾಟ್ಸ್‌ವಲ್ಡ್, ಕಾರ್ನ್ವಾಲ್, ಪೀಕ್ ಡಿಸ್ಟ್ರಿಕ್ಟ್, ಲೇಕ್ ಡಿಸ್ಟ್ರಿಕ್ಟ್, ಸ್ಕಾಟ್‌ಲ್ಯಾಂಡಿನ ಹೈಲ್ಯಾಂಡ್ಸ್‌ಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಬ್ರಿಟನ್ನಿನ ಸುತ್ತಮುತ್ತ ಕಿರುದ್ವ್ವೀಪಗಳಿವೆ, ಹಾಲಿಡೆ ತಾಣಗಳಾಗಿ ಅವೆಲ್ಲ ಬಹಳ ಜನಪ್ರೀಯ. ಅವಗಳ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ. 


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)


Friday 13 August 2021

ಇಂಗ್ಲೆಂಡ್ ಪತ್ರ - 7

ಇಂಗ್ಲೆಂಡ್-ಭಾರತ ಕ್ರಿಕೆಟ್ ತಂಡಗಳ ಟೆಸ್ಟ್ ಸರಣಿ ಶುರುವಾಗಿದೆ. ಇಂಗ್ಲೆಂಡಿನಲ್ಲಿ ಫುಟ್‍ಬಾಲ್‍ಗೆ ಇರುವ ಪ್ರಾಮುಖ್ಯತೆ ಇತರೆ ಆಟಗಳಿಗೆ ಇಲ್ಲವೇ ಇಲ್ಲ ಎನ್ನಬಹುದು. ಇಂಗ್ಲೆಂಡಿನ ಮೊದಲ ಹತ್ತು ಕ್ರಮಾಂಕದಲ್ಲಿ ಆಟಗಳನ್ನು ಹಾಕಿದರೆ ಫುಟ್‍ಬಾಲ್ ಆಟವು ಮೊದಲ ಹತ್ತು ಸ್ಥಾನಗಳನ್ನೂ ಆಕ್ರಮಿಸಿಕೊಳ್ಳುತ್ತದೆ. ಕ್ರಿಕೆಟ್, ಟೆನಿಸ್, ರಗ್‍ಬಿ, ಹಾಕಿ ಇತ್ಯಾದಿಗಳೆಲ್ಲ ಹನ್ನೊಂದರಿಂದ ತಮ್ಮ ಸ್ಥಾನಗಳಿಗಾಗಿ ಹೊಡೆದಾಡಿಕೊಳ್ಳಬೇಕು, ಅಷ್ಟೇ! 


ಭಾರತದಲ್ಲಿ ಹುಟ್ಟಿ ಬೆಳೆದ ನನಗೆ ಫುಟ್‍ಬಾಲ್ ಎಂದರೆ ಅಷ್ಟಕ್ಕಷ್ಟೇ. ಹೀಗಾಗಿ ನಾನು ಫುಟ್‍ಬಾಲ್‍ನ ಪ್ರೀಮಿಯರ್ ಲೀಗ್ (ಕ್ರಿಕೆಟ್ಟಿನ ಐಪಿಎಲ್ ತರಹ; ಭಾರತದ ಐಪಿಎಲ್‍ಗೆ ಇಂಗ್ಲೆಂಡಿನ ಅಥವಾ ಯುರೋಪಿನ ಫುಟ್‍ಬಾಲ್ ಲೀಗ್‍ಗಳೇ ಪ್ರೇರಣೆ) ನೋಡುವುದಿಲ್ಲ, ಸುದ್ದಿಜಾಲದಲ್ಲಿ ಓದುತ್ತೇನೆ, ಎಲ್ಲರ ಜೊತೆ ಮಾತನಾಡುವಾಗ ಯಾವುದಕ್ಕೂ ಇರಲಿ ಎಂದು. ಇಂಗ್ಲೀಷರು ಭಾರತವನ್ನು ಬಿಟ್ಟು ಹೋದಾಗ, ನಮಗೆ ಬಿಟ್ಟು ಹೋದ ಎರಡು ದೊಡ್ಡ ವಸ್ತುಗಳೆಂದರೆ ಇಂಗ್ಲೀಷ್ ಭಾಷೆ ಮತ್ತು ಕ್ರಿಕೆಟ್ ಆಟ ಎಂದರೆ ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. 


ನಾನು ಚಿಕ್ಕವನಾಗಿದ್ದಾಗ ಕ್ರಿಕೆಟ್ ಪಂದ್ಯವು ಐದು ದಿನಗಳ ಟೆಸ್ಟ್ ಮಾದರಿಯಲ್ಲಿ ನಡೆಯುತ್ತಿತ್ತು. ಒಂದು ದಿನದ ಪಂದ್ಯಗಳು ಅಲ್ಲಲ್ಲಿ ನಡೆಯುತ್ತಿದ್ದರೂ, 1983ರ ಕ್ರಿಕೆಟ್ ವಿಶ್ವಕಪ್ ಆಗುವವರೆಗೆ ಕ್ರಿಕೆಟ್ಟನ್ನು ಹಾಗೂ ಆಡಬಹುದು ಎಂದು ನನಗೆ ಗೊತ್ತೇ ಇರಲಿಲ್ಲ. ಭಾರತ 1983ರಲ್ಲಿ ಕ್ರಿಕೆಟ್ ವಿಶ್ವ ಕಪ್ ಗೆದ್ದ ಮೇಲೆ ಕ್ರಿಕೆಟ್ಟಿನ ಜನಪ್ರಿಯತೆ ಭಾರತದಲ್ಲಿ ಊಹೆಗೂ ಮೀರಿದ ರೀತಿಯಲ್ಲಿ ಭಾರತದ ಮೂಲೆ ಮೂಲೆಗಳನ್ನು ಸೇರಿತು. 


ಆದರೂ ಕ್ರಿಕೆಟ್ ಬ್ಯಾಟು, ಕ್ರಿಕೆಟ್ ಚೆಂಡು (ನಾವೆಲ್ಲ ಅದಕ್ಕೆ ಕರೆಯುತ್ತಿದುದು ಲೆದರ್ ಬಾಲ್ ಎಂದು), ಪ್ಯಾಡು, ಗ್ಲೌಸು, ಗಾರ್ಡು, ಹೆಲ್ಮೆಟ್ಟು ನಮ್ಮ ಮತ್ತು ನಮ್ಮ ಶಾಲೆಯ ಆರ್ಥಿಕ ಸ್ಥಿತಿಗೆ  ಸಿಗುವ ಸಾಧ್ಯತೆಗಳೇ ಇರಲಿಲ್ಲ. ನಮ್ಮ ಊರಿನಲ್ಲಿ ಕ್ರಿಕೆಟ್ ಆಡಲು ಬೇಕಾದ ಮೈದಾನಗಳೂ ಸರಿಯಾಗಿ ಇರಲಿಲ್ಲ. ಒಂದೇ ಮೈದಾನದಲ್ಲಿ ಕ್ರಿಕೆಟ್ಟು (ಒಂದೇ ಮೈದಾನದಲ್ಲಿ ಹತ್ತರು ಮ್ಯಾಚುಗಳು ಏಕಕಾಲಕ್ಕೆ), ಹಾಕಿ, ಫುಟ್‍ಬಾಲ್, ಖೋಖೋ, ಗೋಲಿಯಾಟ, ಕುಂಟೆಬಿಲ್ಲೆ, ಚಿಣಿದಾಂಡು, ಹೈಜಂಪ್, ಲಾಂಗ್‍ಜಂಪ್, ಜವೇಲಿಯನ್ ಥ್ರೋ, ಶಾಟ್‍ಫುಟ್ ಎಲ್ಲ ನಡೆಯುತ್ತಿದ್ದವು. ನಾವೆಲ್ಲ ದಿನಬೆಳಗಾದರೆ ಟೆನಿಸ್ ಬಾಲು ಮತ್ತು ಯಾವುದೋ ಕಟ್ಟಿಗೆಯ ತುಂಡಿನಲ್ಲಿ ಮಾಡಿದ ಬ್ಯಾಟು ಹಿಡಿದು ಸಮಯ ಸಿಕ್ಕಿದಾಗಲೆಲ್ಲ ಆಡುತ್ತಿದ್ದೆವು. ನನ್ನ ಚಿಕ್ಕಪಟ್ಟಣದಲ್ಲಿ ಟೆನಿಸ್ ಬಾಲಿನ ಪಂದ್ಯಾವಳಿಗಳು ಸಾಕಷ್ಟು ನಡೆಯುತ್ತಿದ್ದವು. 


ಆಗಾಗ ಕಾರ್ಕ್‍ಬಾಲಿನ ಪಂದ್ಯಗಳೂ ನಡೆಯುತ್ತಿದ್ದವು, ಅದನ್ನೂ ಮ್ಯಾಟ್ ಹಾಕಿ ಆಡಬೇಕಿತ್ತು. ಆ ಮ್ಯಾಟೂ ಕೂಡ ಅಲ್ಲಲ್ಲಿ ಹರಿದು ಹೋಗಿರುತ್ತಿತ್ತು. ಇಡೀ ತಂಡದಲ್ಲಿ ಕಾರ್ಕ್ ಬಾಲನ್ನು ಆಡಲು ಯೋಗ್ಯವಾದ ಬ್ಯಾಟು ಒಂದೇ ಇರುತ್ತಿತ್ತು. ಪ್ರತಿ ರನ್ ಓಡಿದ ಮೇಲೆ ಆ ಬ್ಯಾಟನ್ನು ಬ್ಯಾಟ್ಸ್‌ಮನ್‍ಗಳು ಬದಲಿಸಿಕೊಳ್ಳಬೇಕಿತ್ತು. ಇಡೀ ತಂಡದಲ್ಲಿ ಇರುತ್ತಿದ್ದುದೇ ಎರಡು ಪ್ಯಾಡು, ಬರೀ ಎಡಗಾಲಿಗೆ ಪ್ಯಾಡ್ ಹಾಕಿಕೊಂಡು ಬ್ಯಾಟಿಂಗ್ ಮಾಡಬೇಕಿತ್ತು. ನಿಜವಾದ ಕ್ರಿಕೆಟ್ ಬಾಲಿನಲ್ಲಿ (ಲೆದರ್ ಬಾಲ್) ಕ್ರಿಕೆಟ್ ಆಡುವುದು ನಮಗೆಲ್ಲ ಕನಸಾಗಿಯೇ ಇರುತ್ತಿತ್ತು. ಮುಂದೆ ಬೆಳೆದಂತೆಲ್ಲ ‘ಲೆದರ್ ಬಾಲ್‘‍ನಲ್ಲಿ ಆಗಾಗ ಕ್ರಿಕೆಟ್ ಆಡಿದ್ದುಂಟು, ಆದರೂ ಈ ದೇಶಕ್ಕೆ ಬರುವವರೆಗೆ ಹೆಚ್ಚಿನ ಕ್ರಿಕೆಟ್ ಆಡಿದ್ದು ಟೆನಿಸ್ ಬಾಲಿನಲ್ಲೇ! 


ಇಂಗ್ಲೆಂಡಿನಲ್ಲಿ ಕ್ರಿಕೆಟ್ ಚೆಂಡಿಗೆ ‘ಲೆದರ್ ಬಾಲ್‘ ಎಂದು ಯಾರೂ ಹೇಳುವುದಿಲ್ಲ, ಹಾಗೆ ಹೇಳಿದರೆ ಯಾರಿಗೂ ಅರ್ಥವಾಗುವುದೂ ಇಲ್ಲ. ಅದನ್ನು ಕರೆಯುವುದು ‘ಹಾರ್ಡ್‌ಬಾಲ್‘ ಎಂದು. ಇಲ್ಲಿ ಚಿಕ್ಕ ಮಕ್ಕಳು ಮಾತ್ರ ‘ಸಾಫ್ಟ್‌ಬಾಲ್‘ ಕ್ರಿಕೆಟ್ ಆಡುತ್ತಾರೆ, ಆದರೆ ಅದು ಟೆನಿಸ್ ಬಾಲ್ ಅಲ್ಲ. ಕ್ರಿಕೆಟ್ ಆಡಲು ವಿಶೇಷವಾಗಿ ತಯಾರು ಮಾಡಿದ ಮೃದುವಾದ ಚೆಂಡದು. ಕಾರ್ಕ್ ಬಾಲಿನಲ್ಲಿ ಅಥವಾ ಟೆನಿಸ್ ಬಾಲಿನಲ್ಲಿ ಇಲ್ಲಿ ಯಾವ ಪಂದ್ಯಗಳೂ ನಡೆಯುವುದಿಲ್ಲ. ಭಾರತದಲ್ಲಿ ಆಡುವಂತೆ ಮಕ್ಕಳು ಎಲ್ಲೆಂದರಲ್ಲಿ ಕ್ರಿಕೆಟ್ ಆಡುವುದಿಲ್ಲ (ಯಾವುದಾದರೂ ಪಾರ್ಕಿನಲ್ಲಿ ಹಾಗೆ ಸುಮ್ಮನೇ ಯಾರಾದರೂ ಸಾಫ್ಟ್‌ಬಾಲಿನಲ್ಲೋ ಟೆನಿಸ್ ಬಾಲಿನಲ್ಲೋ ಕ್ರಿಕೆಟ್ ಆಡುವುದು ಕಂಡುಬಂದರೆ ಅವರು ಭಾರತ ಅಥವಾ ಪಾಕಿಸ್ಥಾನ ಮೂಲದವರೇ ಎಂದು ಮುಲಾಜಿಲ್ಲದೇ ಹೇಳಬಹುದು). 


ಈ ಪುಟ್ಟ ದೇಶದಲ್ಲಿ ಸಾವಿರಾರು ಕ್ರಿಕೆಟ್ ಕ್ಲಬ್ಬುಗಳಿವೆ ಮತ್ತು ಈ ಎಲ್ಲ ಕ್ಲಬ್ಬುಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಜೊತೆ ನೊಂದಾವಣಿ ಮಾಡಿಕೊಂಡಿರುತ್ತದೆ. ಪ್ರತಿ ಕ್ಲಬ್ಬಿನಲ್ಲಿ ಇಸಿಬಿಯಿಂದ ಗುರುತಿಸಲ್ಪಟ್ಟ ತರಬೇತುದಾರರು ಇರುತ್ತಾರೆ. ಪ್ರತಿ ಕ್ಲಬ್ಬಿನಲ್ಲಿ ವಿವಿಧ ವಯಸ್ಸಿನ ಹತ್ತಾರು ಕ್ರಿಕೆಟ್ ತಂಡಗಳು ಇರುತ್ತವೆ ಮತ್ತು ಆ ತಂಡಗಳು ಬೇರೆ ಕ್ಲಬ್ಬುಗಳ ಜೊತೆ ಪಂದ್ಯಗಳನ್ನು ಆಡುತ್ತವೆ. ಕೆಲವು ಫ್ರೆಂಡ್ಲಿ ಪಂದ್ಯಗಳು ಮತ್ತು ಕೆಲವು ಲೀಗ್ ಪಂದ್ಯಗಳು ಇರುತ್ತವೆ. ಬೇಸಿಗೆಯಲ್ಲಿ ಮೈದಾನದಲ್ಲೂ ಮತ್ತು ಚಳಿಗಾಲದಲ್ಲಿ ಒಳಾಂಗಣದಲ್ಲೂ ತರಬೇತಿ ಕೊಡುತ್ತಾರೆ.  ನಾಕಾರು ವರ್ಷದ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕ್ರಿಕೆಟ್ ಕ್ಲಬ್ಬುಗಳಿಗೆ ಸೇರಿಸಲಾಗುತ್ತದೆ. ಹತ್ತು ವರ್ಷದವರೆಗೆ ಸಾಫ್ಟ್ ಬಾಲಿನಿಂದ ಕ್ರಿಕೆಟ್ ಆಡಿದ ಮಕ್ಕಳು, ನಂತರ ಹಾರ್ಡ್ ಬಾಲ್ ಕ್ರಿಕೆಟ್ ಆಡುತ್ತಾರೆ. ಈ ಹಾರ್ಡ್ ಬಾಲ್ ಕೂಡ ವಯಸ್ಸಿಗೆ ಅನುಗುಣವಾಗಿ ಬೇರೆ ಬೇರೆ ಗಾತ್ರ ಮತ್ತು ತೂಕದಲ್ಲಿ ಇರುತ್ತದೆ. 


ಪ್ರತಿ ಕ್ರಿಕೆಟ್ ಕ್ಲಬ್ಬಿಗೂ ಕ್ರಿಕೆಟ್ಟಿಗೆಂದೇ ಮೀಸಲಾದ ಸ್ವಂತದ ಮೈದಾನಗಳು ಇರುತ್ತವೆ. ಪ್ರತಿ ಕ್ಲಬ್ಬಿಗೂ ಸದಸ್ಯರಾಗಲು ವಾರ್ಷಿಕ ಚಂದಾ ಕೊಡಬೇಕು. ಪ್ರತಿ ಕ್ಲಬ್ಬಿಗೂ ಒಂದು ಆಡಳಿತದ ತಂಡ ಇರುತ್ತದೆ. ಪ್ರತಿ ಕ್ಲಬ್ಬಿಗೂ ಒಂದು ಚಿಕ್ಕದಾದರೂ ಸರಿ, ಮೈದಾನಕ್ಕೆ ಅಂಟಿಕೊಂಡಂತೆ ಒಂದು ಕಟ್ಟಡವಿರುತ್ತದೆ, ಅದರೊಳಗೆ ಒಂದು ಚಿಕ್ಕ ಪಬ್ಬು ಕೂಡ ಇರುತ್ತದೆ, ಮ್ಯಾಚು ನೋಡಲು ಬಂದವರು ಮತ್ತು ಮ್ಯಾಚು ಮುಗಿಸಿದ ಮೇಲೆ ತಿಂದು ಕುಡಿದು ಹೋಗಲು. ಕ್ಲಬ್ಬಿನಲ್ಲಿ ಆಗಾಗ ಡಿನ್ನರ್ ಗಳನ್ನೂ ಬಾರ್ಬಿಕ್ಯೂಗಳನ್ನೂ ಇಟ್ಟುಕೊಂಡಿರುತ್ತಾರೆ ಮತ್ತು ಕ್ಲಬ್ಬಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಕೆಲವು ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳುತ್ತಾರೆ. ಪ್ರತಿ ಕ್ರಿಕೆಟ್ ಮೈದಾನದಲ್ಲೂ ಹಾರ್ಡ್‌ಬಾಲ್ ಆಡಲು ಯೋಗ್ಯವಾದ ಪಿಚ್ಚುಗಳಿರುತ್ತವೆ. ಆಟ ಆಡುವ ನಾಕಾರು ದಿನಗಳ ಮೊದಲು ಪಿಚ್‌ಮ್ಯಾನ್ ಪಿಚ್ಚನ್ನು ತಯಾರು ಮಾಡುತ್ತಾನೆ; ಪಿಚ್ಚಿನ ಮೇಲೆ ಬೆಳೆದಿರುವ ಹುಲ್ಲನ್ನು ತೆಗೆದು, ನೀರುಣಿಸಿ, ರೋಲ್ ಮಾಡಿ ಅಣಿಮಾಡುತ್ತಾನೆ. ಮಳೆ ಬರುವ ಹಾಗಿದ್ದರೆ ಆ ಪಿಚ್ಚನ್ನು ಮುಚ್ಚಿ ಇಡಲು ಪ್ರತಿ ಕ್ಲಬ್ಬಿನಲ್ಲೂ ಪಿಚ್‌ಕವರ್ ಇರುತ್ತವೆ. ಇಲ್ಲಿ ಮ್ಯಾಟ್ ಹಾಕಿ ಯಾರೂ ಕ್ರಿಕೆಟ್ ಆಡುವುದಿಲ್ಲ. ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಲು ಸೈಡ್‌ಸ್ಕ್ರೀನ್‍ಗಳೂ ಇರುತ್ತವೆ. ಬೌಂಡರಿಗೆರೆಯಾಗಿ ಹಗ್ಗವನ್ನೋ ಇಲ್ಲ ಚಿಕ್ಕ ಧ್ವಜಗಳನ್ನೋ ನೆಟ್ಟಿರುತ್ತಾರೆ. ಹತ್ತು ವರ್ಷದ ಮಕ್ಕಳಿರಲಿ, ಐವತ್ತು ವರ್ಷದ ವಯಸ್ಕರಿರಲಿ, ಪ್ರತಿ ಪಂದ್ಯವನ್ನು ಅಂತರರಾಷ್ಟ್ರೀಯ ಪಂದ್ಯದ ಮಟ್ಟದಲ್ಲಿ ಆಡಿದಂತೆ ಆಡಲಾಗುತ್ತದೆ. ಅಂಪೈರ್‌ನ ನಿರ್ಣಯವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುವ ಮನೋಭಾವವನ್ನು ಚಿಕ್ಕ ವಯಸ್ಸಿನಲ್ಲೇ ಮೂಡಿಸಲಾಗುತ್ತದೆ. ಕ್ಲಬ್ಬಿನ ಪ್ರತಿ ಮ್ಯಾಚಿನ ವಿವರಗಳನ್ನು ಜಾಲತಾಣದಲ್ಲಿ ಹಾಕುತ್ತಾರೆ. ವರ್ಷ ಮುಗಿಯುವಾಗ ಚಿಕ್ಕ ಸಮಾರಂಭವನ್ನು ಏರ್ಪಡಿಸಿ ಬೆಸ್ಟ್ ಬಾಲರ್, ಬ್ಯಾಟ್ಸ್‌ಮನ್ ಮತ್ತು ಆಲ್‍ರೌಂಡರ್ ಪ್ರಶಸ್ತಿಗಳನ್ನು ಕೊಡುತ್ತಾರೆ. 


ಕ್ಲಬ್ ಕ್ರಿಕೆಟ್ಟಿನಲ್ಲಿ ಚೆನ್ನಾಗಿ ಆಡುವ ಮಕ್ಕಳನ್ನು ಗುರುತಿಸಿ, ಜಿಲ್ಲಾ ಮಟ್ಟದ ಆಯ್ಕೆಗೆ ಕಳಿಸಲಾಗುತ್ತದೆ. ಅಲ್ಲಿ ಆಯ್ಕೆಯಾದ ಮಕ್ಕಳು ತಮ ಕ್ಲಬ್ಬಿನ ಪಂದ್ಯಗಳ ಜೊತೆಗೆ ಜಿಲ್ಲಾ ಮಟ್ಟದ ಪಂದ್ಯಗಳನ್ನು ಆಡುತ್ತಾರೆ. ಅಲ್ಲಿ ಚೆನ್ನಾಗಿ ಆಡುವ ಮಕ್ಕಳನ್ನು ಗುರುತಿಸಿ ಕೌಂಟಿ ಮಟ್ಟಕ್ಕೆ ಆಯ್ಕೆ ಮಾಡುತ್ತಾರೆ. ಆಗ ಮಕ್ಕಳು ವಾರಕ್ಕೆ ನಾಕರಿಂದ ಐದು ದಿನ ತಮ್ಮ ಶಾಲೆಯ ಜೊತೆಗೆ ಕ್ರಿಕೆಟ್ ಆಡಬೇಕಾಗುತ್ತದೆ. ಆಟಗಳು ಬೇರೆ ಬೇರೆ ಮೈದಾನಗಳಲ್ಲಿ ನಡಿಯುತ್ತವೆ. ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮ್ಯಾಚು ಮುಗಿಯುವವರೆಗೆ ಕಾಯ್ದು ಕರೆದುಕೊಂಡು ಬರಲು ಇಬ್ಬರಲ್ಲಿ ಒಬ್ಬ ಪಿತೃ  ತಯಾರು ಇರಬೇಕಾಗುತ್ತದೆ. ಕೌಂಟಿ ಕ್ರಿಕೆಟ್ಟಿನಲ್ಲಿ ಬೆಳೆದು ದೊಡ್ಡವರಾದ ಮಕ್ಕಳು ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಾರೆ. 


ಇಂಗ್ಲೆಂಡಿನಲ್ಲಿರುವ ಇಂಥ ಸಾವಿರಾರು ಕ್ಲಬ್ಬುಗಳು ಸುರಳಿತವಾಗಿ ನಡೆಯಲು ಸರಕಾರದ ಅನುದಾನಕ್ಕೆ ಕೈ ಚಾಚುವುದಿಲ್ಲ ಎನ್ನುವುದು ಸೋಜಿಗ. ಎಲ್ಲ ಕ್ಲಬ್ಬುಗಳು ವಾರ್ಷಿಕ ಚಂದಾ, ಪ್ರತಿ ಪಂದ್ಯ ಆಡಿದ ಮ್ಯಾಚ್ ಫೀಸ್, ತಮ್ಮ ಕ್ಲಬ್ಬಿನ ಪಬ್ಬುಗಳ ಆದಾಯ, ಆಗಾಗ ನಡೆಸುವ ದುಡ್ಡು ಸಂಗ್ರಹಿಸುವ ಕಾಎರ್ಯಕ್ರಮಗಳಿಂದ ಬಂದ ಹಣದಿಂದ ನಡೆಸಿಕೊಂಡು ಹೋಗುತ್ತವೆ. ಇಸಿಬಿ ಸ್ವಲ್ಪ ಮಟ್ಟಿನ ಸಹಾಯ ಮಾಡುತ್ತದೆ ಎಂದು ಎಲ್ಲೋ ಓದಿದ ನೆನಪು. 


ಇದನ್ನೆಲ್ಲ ನೋಡಿದಾಗ ಭಾರತದಲ್ಲೂ ಹೀಗಿದ್ದರೆ ಇನ್ನೂ ಎಂಥೆಂಥ ಕ್ರಿಕೇಟಿಗರು ಬರಬಹುದು ಎಂದು ಅನಿಸುತ್ತದೆ. ಕ್ರಿಕೆಟ್ಟಿಗೆಂದೇ ಮೀಸಲಾದ ಮೈದಾನಗಳು, ಕ್ರಿಕೆಟ್ ಆಡಲು ಬೇಕಾದ ಮೂಲಭೂತ ಉಪಕರಣಗಳು, ಸೌಕರ್ಯಗಳು ಮತ್ತು ವ್ಯವಸ್ಥಿತ ವ್ಯವಸ್ಥೆ ಯಾವುವೂ ಇಲ್ಲದೇಯೇ ಭಾರತವು ಇಂದು ಕ್ರಿಕೆಟ್ಟಿನಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಭಾರತದಲ್ಲಿ ಕೂಡ ಪ್ರತಿ ಊರಿಗೊಂದು ಕ್ರಿಕೆಟ್ ಕ್ಲಬ್ಬು ಮತ್ತು ಮೈದಾನಗಳಾದರೆ, ತಾಲೂಕು ಮಟ್ಟದಲ್ಲಿ ಹಾರ್ಡ್‌ಬಾಲ್ ಪಂದ್ಯಾವಳಿಗಳು ನಡೆದರೆ, ಎಲ್ಲ ಸರಕಾರಿ ಮತ್ತು ಸಹಕಾರೀ ಶಾಲೆಗಳಿಗೆ ಕ್ರಿಕೆಟ್ಟಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲೇ ನಿಜವಾದ ಕ್ರಿಕೆಟ್ ಬಾಲಿನಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ಇನ್ನೂ ಎಂಥೆಂಥ ಪ್ರತಿಭೆಗಳು ಹೊರಬರಬಹುದು!  


ಅಂತರರಾಷ್ಟ್ರೀಯ ಪಂದ್ಯಗಳು:


ಈ ದೇಶದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ನೋಡುವ ಮಜವೇ ಬೇರೆ. ಇಲ್ಲಿ ಟೆಸ್ಟ್ ಪಂದ್ಯಗಳೂ ಕೂಡ ಪ್ರೇಕ್ಷಕರಿಂದ ಭರ್ತಿಯಾಗುತ್ತವೆ. ಇಂಗ್ಲೆಂಡ್-ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್-ಭಾರತದ ಪಂದ್ಯಗಳಿಗೆ ಟಿಕೆಟ್ಟುಗಳು ಬಹಳ ಬೇಗ ಖರ್ಚಾಗುತ್ತವೆ. ಇಂಗ್ಲೆಂಡ್ ಭಾರತದ ಒಂದು ದಿನದ ಪಂದ್ಯದಲ್ಲಿ ಭಾರತವನ್ನು ಬೆಂಬಲಿಸುವ ಪ್ರೇಕ್ಷಕರ ಸಂಖ್ಯೆ ಇಂಗ್ಲೆಂಡ್ ತಂಡವನ್ನು ಬೆಂಬಲಿಸುವ ಪ್ರೇಕ್ಷರಿಗಿಂತ ಎರಡು ಪಟ್ಟು ಇರುತ್ತದೆ, ಇಂಗ್ಲೆಂಡ್ ತಂಡದವರಿಗೆ ಇಂಗ್ಲೆಂಡಿನಲ್ಲಿ ಆಡುತ್ತಿದ್ದರೂ ಭಾರತದ ಮೈದಾನದಲ್ಲಿ ಆಡಿದಂತೆ ಅನಿಸಬೇಕು, ಹಾಗೆ. ಆದರೂ ಇಂಗ್ಲೆಂಡ್ ತಂಡವನ್ನು ಬೆಂಬಲಿಸುವ ಪ್ರೇಕ್ಷಕರು ನಮ್ಮ ಪಕ್ಕದಲ್ಲೇ ಕುಳಿತಿದ್ದರೂ ಅದರ ಬಗ್ಗೆ ಒಂಚೂರೂ ಬೇಸರ ಮಾಡಿಕೊಳ್ಳುವುದಿಲ್ಲ. ‘ನಮ್ಮ ದೇಶಕ್ಕೆ ಬಂದು, ಇಲ್ಲಿಯೇ ಕೆಲಸ ಮಾಡಿ, ಇಲ್ಲಿನ ಪ್ರಜೆಗಳಾಗಿ ಇನ್ನೊಂದು ದೇಶವನ್ನು ಏಕೆ ಬೆಂಬಲಿಸುತ್ತೀರಿ?‘ ಎಂದು ಹೇಳಿದ್ದನ್ನು ಕೇಳಿಲ್ಲ, ರಾಷ್ಟ್ರದ್ರೋಹಿ ಎಂದು ಅರಚುವುದಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಾರಿಕೊಳ್ಳುವುದಿಲ್ಲ. ಕ್ರಿಕೆಟ್ ಪಂದ್ಯವನ್ನು ರಾಷ್ಟ್ರೀಯತೆಯ ಸಂಕೇತವಾಗಿ ಕಾಣುವುದಿಲ್ಲ. 


ಆರು ದಿನಗಳ ಟೆಸ್ಟ್ (ಅದರಲ್ಲಿ ಒಂದು ದಿನ ವಿರಾಮವಿರುತ್ತಿತ್ತು) ಪಂದ್ಯಗಳಿಂದ, 60 ಓವರುಗಳ ಒಂದು ದಿನದ ಪಂದ್ಯಗಳು, ಅಲ್ಲಿಂದ 50 ಓವರುಗಳ ಒಂದು ದಿನದ ಪಂದ್ಯಗಳು, ಅಲ್ಲಿಂದ ಟಿ20 ಪಂದ್ಯಗಳು, ಮತ್ತು ಇತ್ತೀಚೆ 100 ಬಾಲಿನ ಪಂದ್ಯಗಳು ಶುರುವಾಗಿವೆ. ಆಡುವುದು ಒಂದೇ ಆಟವಾದರೂ ಪ್ರತಿ ಫಾರ್ಮಟ್ ಬೇರೆ ಬೇರೆ ರೀತಿಯ ಪ್ರತಿಭೆಯನ್ನು ಬೇಡುತ್ತದೆ. ಟಿ20 ಪಂದ್ಯಗಳು ಕೊಡುವ ಮನೋರಂಜನೆಯ ಮುಂದೆ ಒಂದು ದಿನದ ಪಂದ್ಯಗಳು ಮತ್ತು ಟೆಸ್ಟ್‌ಗಳು  ಸಪ್ಪೆ ಎಂದೇ ಹೇಳಬಹುದು. ಆದರೆ ಟೆಸ್ಟ್ ಮ್ಯಾಚುಗಳು ಮಾತ್ರ ನಿಜವಾಗಿಯೂ ಮನುಷ್ಯನ ಟೆಸ್ಟೇ, ಆಟಗಾರನ ಪ್ರತಿಭೆಯ ಮಾತ್ರದಿಂದ ಟೆಸ್ಟ್ ಪಂದ್ಯವನ್ನು ಆಡಲಾಗುವುದಿಲ್ಲ. ಸಹನೆ, ಮನೋಸ್ಥೈರ್ಯ ಮತ್ತು ಪಿಚ್ಚಿಗೆ ಅನುಗುಣವಾಗಿ ಆಟವಾಡುವ ತಾಳ್ಮೆ ಬ್ಯಾಟುಗಾರನಿಗೆ ಬೇಕಾಗುತ್ತದೆ. ಅದೇ ಅದೇ ಲೈನ್ ಮತ್ತು ಲೆಂತಿನಲ್ಲಿ ಬಿಟ್ಟು ಬಿಡದೇ ಬಾಲ್ ಮಾಡುವ ಏಕಾಗ್ರತೆ ಮತ್ತು ತಾಳ್ಮೆ ಬಾಲುಗಾರನಿಗೆ ಬೇಕಾಗುತ್ತದೆ. ಅದಕ್ಕೆಂದೇ ನನಗೆ ಟೆಸ್ಟ್ ಪಂದ್ಯಗಳೆಂದರೆ ವೀಕ್ಷಿಸಲು ಇಷ್ಟ. ಈ ಟಿ20ಗಳು ಮತ್ತು ಒಂದು ದಿನ ಪಂದ್ಯಗಳು ಪಾಪ್ ಸಂಗೀತವಿದ್ದಂತೆ, ಸಿನೆಮಾ ಸಂಗೀತದಂತೆ, ಆದರೆ ಟೆಸ್ಟ್ ಪಂದ್ಯಗಳು ಮಾತ್ರ ಹಿಂದುಸ್ಥಾನಿ ಸಂಗೀತದ ಕಛೇರಿ ಇದ್ದಂತೆ, ಎಷ್ಟು ಹೊತ್ತು ನಡೆದರೂ ಸಂಗೀತ ಸಾಕೆಂದು ಅನಿಸುವುದೇ ಇಲ್ಲ. 


ಕೆಪಿಎಲ್:


ಇತ್ತೀಚೆಗೆ ಡಾರ್ಬಿಯಲ್ಲಿ ನೆಲೆಸಿರುವ ಹರೀಶ್ ರಾಮಯ್ಯನವರು ಯುನೈಟೆಡ್ ಕಿಂಗ್‌ಡಮ್‍ನ ಎಲ್ಲ ಕನ್ನಡ ಕ್ರಿಕೆಟ್ ಆಟಗಾರರನ್ನು ಒಂದೇ ಕಡೆ ಸೇರಿಸಿ ಕೆಪಿಎಲ್ (ಕನ್ನಡ ಪ್ರೀಮಿಯರ್ ಲೀಗ್) ಅನ್ನು ಯಶಸ್ವಿಯಾಗಿ ಆಯೋಜಿಸಿದರು. ಉತ್ತರ ಐರ್‌ಲ್ಯಾಂಡ್‍ನಿಂದ ಹಿಡಿದು ದಕ್ಷಿಣ ಇಂಗ್ಲೆಂಡಿನವರೆಗೆ ಇರುವ ಕನ್ನಡಿಗರನ್ನು ಎಂಟು ತಂಡಗಳಾಗಿ ಮಾಡಿ, ಟಿ20 ಮಾದರಿಯಲ್ಲಿ, ವೃತ್ತಿಪರರಂತೆ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದರು. ಇಷ್ಟೊಂದು ಕನ್ನಡ ಕ್ರಿಕೇಟಿಗರು ಭಾರತದ ಹೊರಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೇರಿದ್ದು ಇದೇ ಮೊದಲು ಇರಬೇಕು. ಯಾವ ಪಂದ್ಯಾವಳಿಗೂ ಕಮ್ಮಿ ಇಲ್ಲದಂತೆ ಈ ಪಂದ್ಯಾವಳಿ ಮನಮೋಹಕವಾಗಿತ್ತು. ಅಂಥದೊಂದು ಸಂಭ್ರಮದಲ್ಲಿ ನಾನೂ ಆಟಗಾರನಾಗಿ ಪಾಲ್ಗೊಂಡೆ ಎನ್ನುವುದೇ ನನ್ನ ಹೆಮ್ಮೆ. ಇಡೀ ಪಂದ್ಯಾವಳಿಯಲ್ಲಿ ಸಿಕ್ಸರುಗಳ ಬೌಂಡರಿಗಳ ಸುರಿಮಳೆ. ಎರಡು ದಿನ ಬಿಟ್ಟು ಬಿಡದೇ ಸುರಿದ ಮಳೆ ಅಂದು ಶಾಂತವಾಗಿತ್ತು ಕೂಡ. ಇಪ್ಪತ್ತು ವರ್ಷದಿಂದ ಹಿಡಿದು ಐವತ್ತೈದು ವರ್ಷದವರೆಗಿನ ಕನ್ನಡಿಗರು ಪಾಲ್ಗೊಂಡಿದ್ದರು. ಯು.ಕೆ ಯಲ್ಲಿ ನೆಲೆಸಿರುವ ಕನ್ನಡ ಕ್ರಿಕೇಟಿಗರಿಗೆ ಅದೊಂದು ಅವಿಸ್ಮರಣೀಯ ಅನುಭವ.   


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)  


Saturday 31 July 2021

ಇಂಗ್ಲೆಂಡ್ ಪತ್ರ - 6

ಜನಾಂಗೀಯತೆಯ ಬಗ್ಗೆ ಒಂದಿಷ್ಟು ಆಲೋಚನೆಗಳು

2005ನೇ ಇಸ್ವಿ. ನಾನು ಇಂಗ್ಲೆಂಡಿಗೆ ಬಂದು ಒಂದು ವರ್ಷವಾಗಿತ್ತು. ನಾನಾಗ ಬಾರ್ನೆಟ್ ಎನ್ನುವ ಲಂಡನ್ನಿನ ಉತ್ತರ ಭಾಗದ ಪ್ರದೇಶದ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದೆ. ನಾನು ದಿನವೂ ಟ್ಯೂಬ್‍ನಲ್ಲಿ (ಲಂಡನ್ನಿನ ಲೋಕಲ್ ಟ್ರೇನಿಗೆ ಟ್ಯೂಬ್ ಎಂದು ಕರೆಯುತ್ತಾರೆ) ಸಂಚರಿಸುತ್ತಿದ್ದೆ. ನಾನು ಬಾರ್ನೆಟ್ ಸ್ಟೇಷನ್ನಿನಲ್ಲಿ ಇಳಿದು ಆಸ್ಪತ್ರೆಗೆ ತಲುಪುತ್ತಿದ್ದಂತೇ ಸೆಂಟ್ರಲ್ ಲಂಡನ್ನಿನಲ್ಲಿ ಬಾಂಬ್ ಧಾಳಿಯಾದ ಸುದ್ದಿ ಹಬ್ಬಿತ್ತು. ಈಗಿನಂತೆ ಆಗ ಟ್ವಿಟರ್ ಆಗಲಿ ವಾಟ್ಯ್‌ಆ್ಯಪ್ ಆಗಲಿ ಇರಲಿಲ್ಲ. ಬಿ.ಬಿ.ಸಿ ನ್ಯೂಸ್ ಚಾನೆಲ್ಲಿನಲ್ಲಿ ಬಿಸಿಬಿಸಿ ಸುದ್ದಿ ಅದೇ ತಾನೆ ಹೊರಹೊಮ್ಮುತ್ತಿತ್ತು. ನಾನು ಅಂದು ಇನ್ನೊಂದು ಹತ್ತು ನಿಮಿಷ ತಡವಾಗಿ ಮನೆಯಿಂದ ಹೊರಟಿದ್ದರೆ, ನಾನೂ ಆ ಬಾಂಬ್ ಧಾಳಿಯಾದ ಟ್ರೇನಿನಲ್ಲಿ ಇರುತ್ತಿದ್ದೆ, ಸತ್ತು ಹೋಗುತ್ತಿದ್ದೆನೋ, ಇಲ್ಲ ವಿಕಲಾಂಗನಾಗಿ ಬದುಕಿ ಉಳಿದಿರುತ್ತಿದ್ದೆನೋ ಗೊತ್ತಿಲ್ಲ. ಅದಿರಲಿ, ಲಂಡನ್ ಬಾಂಬ್ ಧಾಳಿಯಾಗಿ ಎರಡು ವಾರ ಕಳೆದಿರಬಹುದು. ನಾನು ಬಾರ್ನೆಟ್ ಟ್ಯೂಬ್ ಸ್ಟೇಷನ್ ಹತ್ತಿರದ ಬಸ್ ಸ್ಟಾಪಿನಲ್ಲಿ ಬಾರ್ನೆಟ್ ಆಸ್ಪತ್ರೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಗಿನ ಜಾವ ಎಂಟು ಗಂಟೆ ಇರಬಹುದು, ಆ ಚಿಕ್ಕ ನಿಲ್ದಾಣದಲ್ಲಿ ನಾನು ಒಬ್ಬನೇ ಇದ್ದೆ. ಎರಡು ಮೋಟರ್ ಬೈಕುಗಳು ಜೋರಾಗಿ ಬಂದು ನನ್ನ ಮುಂದೆಯೇ ಅನತಿದೂರದಲ್ಲಿ ಬಂದು ನಿಂತವು. ಇಬ್ಬರು ತಮ್ಮ ಹೆಲ್ಮೆಟ್ ತೆಗೆದು ನನ್ನ ಮುಖದ ಮೇಲೆ ಉಗಿದು, ‘ಪಾಕಿ‘ ಎಂದು ಬಯ್ದರು. ನನಗೆ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ, ಅಷ್ಟೊಂದು ಶಾಕ್ ನಲ್ಲಿದ್ದೆ. ಅವರು ನನಗೆ ಇನ್ನೇನು ಮಾಡಲಿದ್ದರೋ, ಸದ್ಯ, ಅದೇ ಸಮಯಕ್ಕೆ ಹಿಂದಿನಿಂದ ಬಸ್ಸು ಬಂತು. ಅವರು ಹೊರಟು ಹೋದರು. ನಾನು ನನ್ನ ಮುಖದ ಮೇಲಿನ ಎಂಜಲನ್ನು ಒರೆಸಿಕೊಂಡು ಬಸ್ಸೇರಿದೆ.


ಭಾರತದಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣಕ್ಕೆ-ಕೆಲಸಕ್ಕೆ ಇಂಗ್ಲೆಂಡಿಗೆ ಬರುವವರೆಗೆ ವರ್ಣಭೇದ/ಜನಾಂಗಭೇದ (ರೇಸಿಸಂ)ದ ಬಗ್ಗೆ ಅಲ್ಲಲ್ಲಿ ಓದಿ, ಕೆಲವು ಸಿನೆಮಾಗಳಲ್ಲಿ ನೋಡಿ ಗೊತ್ತಿತ್ತೇ ಹೊರತು, ಜನಾಂಗಭೇದದ ಆಳ ಅಗಲಗಳು ಮತ್ತು ಇತಿಹಾಸ ಒಂಚೂರೂ ಗೊತ್ತಿರಲಿಲ್ಲ. ರೇಸಿಸಂನ ಅನುಭವವೂ ಆಗಿರಲಿಲ್ಲ. ನಮಗೆ ಪಠ್ಯದಲ್ಲೂ ಜನಾಂಗಭೇದದ ಬಗ್ಗೆ ಹೆಚ್ಚಿನ ವಿವರಗಳು ಇರಲಿಲ್ಲ. ನಮ್ಮ ಶಿಕ್ಷಕರೂ ಅದರ ಬಗ್ಗೆ ಎಂದೂ ಮಾತಾಡಿದ್ದಿಲ್ಲ. ಕರ್ನಾಟಕದಲ್ಲಿ ನಾನು ಓದಿದ ಎಲ್ಲ ಊರುಗಳಲ್ಲೂ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದ್ದವರಾಗಿದ್ದರಿಂದ ಜನಾಂಗಭೇದ ಇರುವುದು ಸಾಧ್ಯವೇ ಇರಲಿಲ್ಲ, ಹಾಗಾಗಿ ಜನಾಂಗಭೇದದ ಬಗ್ಗೆ ಶಿಕ್ಷಣದಲ್ಲಿ ಪಠ್ಯವನ್ನು ಸೇರಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು.

ಆದರೆ ಲಿಂಗಭೇದ, ಜಾತಿಭೇದ, ಧರ್ಮಭೇದ ಮತ್ತು ಭಾಷಾಭೇದಗಳು ಬದುಕಿನ ಹೆಜ್ಜೆಹೆಜ್ಜೆಗೂ, ಮಾತುಮಾತಿಗೂ ಇರುತ್ತಿತ್ತಲ್ಲ. ಅವುಗಳ ಬಗೆಗೂ ಕೂಡ ನಮಗೆ ಪಠ್ಯವಿರಲಿಲ್ಲ, ಶಾಲೆಯಲ್ಲಿ ಯಾರೂ ಪಾಠ ಮಾಡಲಿಲ್ಲ, ಯಾವ ಪರೀಕ್ಷೆಗೂ ಅವುಗಳ ಬಗ್ಗೆ ಪ್ರಶ್ನೆ ಕೇಳುತ್ತಿರಲಿಲ್ಲ. ಅಸಮಾನತೆಯ ಬಗ್ಗೆ, ಸಮಾನತೆಯ ಬಗ್ಗೆ ಶಾಲೆಯಲ್ಲಿ ಒಂದೇ ಒಂದು  ಅಧ್ಯಾಯವಿರಲಿಲ್ಲ. ಬ್ರಾಹ್ಮಣರು ಎಲ್ಲರಿಗಿಂತ ಉತ್ಕೃಷ್ಟ ಜಾತಿಯವರು ಎಂದು ತಾವೇ ನಿರ್ಧಾರಮಾಡಿಕೊಂಡು ಸಮಾಜವನ್ನು ನಂಬಿಸಿದ್ದರು. `ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ,` ಎಂದು ಶಿಕ್ಷಕರೇ ಶಾಲೆಯಲ್ಲಿ ಜೋರಾಗಿ ಹೇಳಿ ನಗುತ್ತಿದ್ದರು. ಸಂಸ್ಕೃತ ಭಾಷೆಯು ಕನ್ನಡ ಮತ್ತು ಮರಾಠಿ ಭಾಷೆಗಿಂತ ಮಿಗಿಲು ಎನ್ನುವಂತೆ ಬೋಧಿಸಲಾಗುತ್ತಿತ್ತು. ದಕ್ಷಿಣ ಭಾಗದ ಕನ್ನಡಿಗರಿಗೆ ಉತ್ತರ ಕರ್ನಾಟಕದ ಕನ್ನಡಿಗರನ್ನು ಕಂಡರೆ ಅಸಡ್ಡೆ ಭಾವನೆಯಿತ್ತು. ಉತ್ತರ ಭಾರತದವರಿಗೆ ದಕ್ಷಿಣ ಭಾರತದವರನ್ನು ಕಂಡರೆ ‘ಮದ್ರಾಸಿ‘ ಎಂದು ಅರೆ-ಜನಾಂಗೀಯ ನಿಂದನೆ ದಿನವೂ ಕಿವಿಗೆ ಬೀಳುತ್ತಿತ್ತು. ಪೂರ್ವ ರಾಜ್ಯಗಳ ಜನರನ್ನು ಕಂಡರೆ ಪೂರ್ಣಪ್ರಮಾಣದ ಜನಾಂಗೀಯ ನಿಂದನೆ ಸರ್ವೇಸಾಮಾನ್ಯವಾಗಿತ್ತು, ಅವರಿಗೆ `ಚಿಂ..` ಎಂದೋ, ‘ನೇಪಾಲೀ, ಚೈನೀ‘ ಎಂದೋ ಅವ್ಯಾಚ್ಯವಾಗಿ ಕರೆಯುವುದು ನಡೆಯುತ್ತಿತ್ತು. 

ಇಂಗ್ಲೆಂಡಿನಲ್ಲೂ ಜನಾಂಗಭೇದ, ಭಾರತದ ಜಾತಿಭೇದದಷ್ಟೇ ತೀವ್ರವಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ತೋರಿಸಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿ‘ಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನುಗಳಿವೆ. ಹಾಗೆಯೇ ಆಫ್ರಿಕಾ ಮೂಲದಿಂದ ಬಂದವರಿಗೆ, ‘ನಿ..‘ ಶಬ್ದ ಪ್ರಯೋಗಿಸಿದರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. 

ಇದೆಲ್ಲ ಅಧೀಕೃತವಾಯಿತು. ಆದರೆ ಅನಧೀಕೃತವಾಗಿ ಜನಾಂಗಭೇದ ಇನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಕೆಲಸದಲ್ಲಿ, ದಾರಿಯಲ್ಲಿ, ಅಂಗಡಿಗಳಲ್ಲಿ, ರೆಸ್ಟೋರಂಟುಗಳಲ್ಲಿ ಏಶಿಯನ್ನರು ಮತ್ತು ಆಫ್ರಿಕನ್ನರು ಆಗಾಗ ಜನಾಂಗೀಯ ನಿಂದನೆಗೆ ನೇರವಾಗಿಯೋ ಪರೋಕ್ಷವಾಗಿಯೋ ಒಳಗಾಗುತ್ತಲೇ ಇರುತ್ತಾರೆ. ಬಿಳಿಯರೇ ಶ್ರೇಷ್ಟ ಜನಾಂಗ (white supremacist) ಎಂದು ನಂಬಿಕೊಂಡು ಉಗ್ರವಾದ, ಭಯೋತ್ಪಾದನೆ ಮಾಡುವವರೆಗೂ ಹೋಗುವ ಜನರು ಮತ್ತು ಸಂಘಗಳು ಇಲ್ಲಿ ಬೇಕಾದಷ್ಟಿವೆ.

ಕ್ಲಿನಿಕ್ಕಿಗೆ ಮತ್ತು ಆಸ್ಪತ್ರೆಗೆ ಬರುವ ಕೆಲವರು ತಮಗೆ ಬಿಳಿ-ವೈದ್ಯರೇ ಬೇಕೆಂದು ಕೇಳಿಕೊಳ್ಳುತ್ತಾರೆ. ಕಂದು ಮತ್ತು ಕಪ್ಪು ಜನಾಂಗದ ವೈದ್ಯರ ಮೇಲೆ ದೂರುಗಳೂ ಹೆಚ್ಚು ಕೇಸುಗಳೂ ಹೆಚ್ಚು, ಶಿಕ್ಷೆಗಳೂ ಹೆಚ್ಚು, ಅವರನ್ನು ವೈದ್ಯರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಗಳೂ ಹೆಚ್ಚು. 

ಕೆಲವು ವರ್ಷಗಳ ಹಿಂದೆ ಡಾ. ಹಡೀಜಾ ಬಾವಾ-ಗಾರ್ಬಾ ಎನ್ನುವ ಕಪ್ಪುಜನಾಂಗದ ವೈದ್ಯೆಗೆ, ಅವರು ಕೆಲಸದ ಸಮಯದಲ್ಲಿ ಮಾಡಿದ ತಪ್ಪಿನಿಂದಾಗಿ, ಕೋರ್ಟು ಜೈಲು ಶಿಕ್ಷೆಯನ್ನು ಕೊಟ್ಟಿತು. ವೈದ್ಯಕೀಯ ನ್ಯಾಯಮಂಡಲಿಯು ಒಂದು ವರ್ಷ ವೈದ್ಯಕೀಯ ಕೆಲಸದಿಂದ ವಜಾ ಮಾಡಿತು. ಆದರೆ ‘ಜನರಲ್ ಮೆಡಿಕಲ್ ಕೌನ್ಸಿಲ್‘ (ಈ ದೇಶದಲ್ಲಿ ವೈದ್ಯ್ರರನ್ನು ನಿಯಂತ್ರಿಸುವ ಸಂಸ್ಥೆ), ವೈದ್ಯಕೀಯ ನ್ಯಾಯಮಂಡಲಿಯ ನಿರ್ಣಯಕ್ಕೆ ಸವಾಲು ಹಾಕಿ, ಬಾವಾ-ಗರ್ಬಾ ಅವರನ್ನು ವೈದ್ಯರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವ ನಿರ್ಧಾರ ಮಾಡಿ ಗೆದ್ದಿತು (ಈಗ ಆ ತೀರ್ಪಿನ ವಿರುದ್ಧ ಬಾವಾ-ಗಾರ್ಬಾ ಗೆದ್ದಿದ್ದಾರೆ). ಬ್ಯಾಪಿಯೋ (British Association of Physicians of Indian Origin) ಸಂಸ್ಥೆಯು, ಬಾವಾ-ಗಾರ್ಬಾ ಬಿಳಿಜನಾಂಗದವಳಾಗಿದ್ದರೆ ‘ಜನರಲ್ ಮೆಡಿಕಲ್ ಕೌನ್ಸಿಲ್‘ ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತೇ ಎಂದು ಪ್ರಶ್ನಿಸಿತು. ವೈದ್ಯಸಂಘಟನೆಗಳಲ್ಲಿ ಮತ್ತು ಆಸ್ಪತ್ರಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಜನಾಂಗೀಯ ಭೇದದ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳಾದವು. ‘ಜನರಲ್ ಮೆಡಿಕಲ್ ಕೌನ್ಸಿಲ್‘ಅನ್ನು ಖಂಡಿಸಿ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಬರೆದರು. 

 ಇತ್ತೀಚೆ ಮುಗಿದ ಯುರೋಕಪ್ ಫುಟ್‍ಬಾಲ್ ಆಟದಲ್ಲಿ, ಇಂಗ್ಲೆಂಡ್ ತಂಡವು ಇಟಲಿ ತಂಡದ ವಿರುದ್ಧ ಪೆನಲ್ಟಿ ಶೂಟ್‍ನಲ್ಲಿ ಸೋತಿತು. ಪೆನೆಲ್ಟಿ ಶೂಟ್‍ನಲ್ಲಿ ತಪ್ಪಾಗಿ ಹೊಡೆದವರು ಕಪ್ಪುಜನಾಂಗಕ್ಕೆ ಸೇರಿದವರಾಗಿದ್ದರಿಂದ ಸಾಮಾಜಿಕ ತಾಣಗಳಲ್ಲಿ ಜನಾಂಗನಿಂದನೆಯ ಸುರಿಮಳೆಯಾಯಿತು. 

ಇಂಥ ಘಟನೆಗಳು ದಿನವೂ ನಡೆಯುತ್ತಲೇ ಇರುತ್ತವೆ, ಆಗಾಗ ವರದಿಯಾಗುತ್ತವೆ, ಕೆಲವೊಮ್ಮೆ ರಾಷ್ಟ್ರೀಯ ಅಂತರರಾಷ್ಟ್ರೀಯ ಸುದ್ದಿಯಾಗುತ್ತವೆ, ಮೋರ್ಚಾಗಳು ನಡೆಯುತ್ತವೆ, ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಜನಾಂಗೀಯ ನಿಂದನೆ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ, ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕಾನೂನುಗಳು, ಪತ್ರಿಕೆಗಳು, ದೃಶ್ಯಮಾಧ್ಯಮಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ. ಇತ್ತೀಚೆ ನಡೆದ ಯುರೋ ಕಪ್ ಫುಟ್‌ಬಾಲ್ ಪಂದ್ಯದಲ್ಲಿ ಇಂಗ್ಲೆಂಡಿನ ಆಟಗಾರರು ಸಮಾನತೆಯ ಬಗ್ಗೆ, ತಾರತಮ್ಯದ ಅಳಿವಿನ ಬಗ್ಗೆ ಮಂಡೆಯೂರಿ ಕುಳಿತು ಸಾಂಕೇತಿಕವಾಗಿ ಬಿಂಬಿಸಿ, ಜನರಲ್ಲಿ ಅರಿವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. 

ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ, ಜನಾಂಗಭೇದದ ಬಗ್ಗೆ, ಲಿಂಗ ತಾರತಮ್ಯದ ಬಗ್ಗೆ, ಸಾಮಾಜಿಕ ಸಮಾನತೆಯ ಬಗ್ಗೆ ಪ್ರಾರ್ಥಮಿಕ ಶಾಲೆಯಿಂದಲೇ ಶಿಕ್ಷಣ ಶುರುವಾಗುತ್ತದೆ. ಸೆಕೆಂಡರಿ ಶಾಲೆಗಳಲ್ಲಿ ಕೂಡ ಮುಂದುವರೆಯುತ್ತದೆ. ಇಂಗ್ಲೆಂಡಿನ ಶಾಲೆಗಳಲ್ಲಿ  PSHE (Personal Social Health Education) ಎನ್ನುವ ವಿಷಯವನ್ನು ಕಲಿಸಲಾಗುತ್ತದೆ (ಈ ವಿಷಯಕ್ಕೆ ಪರೀಕ್ಷೆ ಇರುವುದಿಲ್ಲ) ಮತ್ತು ಪ್ರತಿ ವಾರವೂ ಒಂದಾದರೂ ಪಿರಿಯಡ್ ಇರುತ್ತದೆ. ಈ ಪಿರಿಯಡ್ಡಿನಲ್ಲಿ ಜನಾಂಗಭೇದ ಮತ್ತು ಲಿಂಗ ಸಮಾನತೆಯ ಬಗ್ಗೆ ವಿವಿಧ ನಿಟ್ಟಿನಲ್ಲಿ ಪಾಠಮಾಡುತ್ತಾರೆ, ಮಕ್ಕಳ ನಡುವೆ ಚರ್ಚೆಯನ್ನು ಏರ್ಪಡಿಸುತ್ತಾರೆ, ಡಾಕ್ಯುಮೆಂಟರಿಗಳನ್ನು ತೋರಿಸಿ ವಿವರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಸಮಾನತೆಯಯ ಬಗ್ಗೆ, ಸಮಾಜದ ತಾರತಮ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. 

ಕೆಲವೇ ವರ್ಷಗಳ ಹಿಂದೆ ಬಂದ ಕನ್ನಡ ಸಿನೆಮಾ `ದೃಶ್ಯ` ಸಿನೆಮಾದಲ್ಲಿ ಪ್ರಶಾಂತ್ ಸಿದ್ದಿ (ನಾಯಕನ ಸಹಾಯಕನಾಗಿ ಕೆಲಸ ಮಾಡುವವನ ಪಾತ್ರ)ಯವರನ್ನು ಚಿತ್ರದ ನಾಯಕ (ರವಿಚಂದ್ರನ್) ಕರೆಯುವುದೇ `ನಿ..` ಎಂದು. ಒಂದು ಸಿನೆಮಾ ಮಾಡಲು ನೂರಾರು ಜನ ಕೆಲಸ ಮಾಡುತ್ತಾರೆ, ಅದರಲ್ಲಿ ಒಬ್ಬನೇ ಒಬ್ಬನಿಗೂ ಆ `ನಿ..` ಶಬ್ದ ರೇಸಿಸ್ಟ್ ಶಬ್ದ ಎಂದು ಗೊತ್ತಿರಲಿಲ್ಲವೇ? ಆಷ್ಟೇ ಅಲ್ಲ, ಸಿನೆಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡುವವರಿಗೂ ಗೊತ್ತಿರಲಿಲ್ಲವೇ? ಭಾರತೀಯ ಶಿಕ್ಷಣದಲ್ಲಿ ಜನಾಂಗಭೇದದ ವಿಷಯವು ಅಡಕವಾಗಿದ್ದರೆ ಇಂಥ ದೊಡ್ಡ ಪ್ರಮಾದವಾಗುತ್ತಿರಲ್ಲಿಲ್ಲ. 

‘ಫ್ರೆಂಚ್ ಬಿರಿಯಾನಿ‘ ಎನ್ನುವ ಕನ್ನಡ ಸಿನೆಮಾ ಇದೆ, ಅದರಲ್ಲಿ ಇರುವ ಬಿಳಿಜನಾಂಗದ ಯುರೋಪಿಯನ್ ಮಾತನಾಡುತ್ತಾ ಪೋಲೀಸ(ರಂಗಾಯಣ ರಘು)ನಿಗೆ ಹೇಳುತ್ತಾನೆ, ‘ನೀನು ರೇಸಿಸ್ಟ್.‘ ಅದಕ್ಕೆ ಉತ್ತರವಾಗಿ ಪೋಲೀಸ್, ‘ಹೌದು, ನಾನು ರೇಸಿಸ್ಟ್, ನನ್ನ ಹೆಂಡತಿಯೂ ರೇಸಿಸ್ಟ್, ಮಗನೂ ರೇಸಿಸ್ಟ್, ಟೋಟಲೀ ರೇಸಿಸ್ಟ್ ಫ್ಯಾಮಿಲಿ,‘ ಎಂದು ಖುಷಿಯಲ್ಲಿ ಹೇಳುತ್ತಾನೆ. ಯುರೋಪಿಯನ್ನನಿಗೆ ದಿಗಿಲಾಗುತ್ತದೆ. ಪೋಲೀಸನಿಗೆ ‘ರೇಸಿಸ್ಟ್‘ ಎಂದರೆ ‘ರೇಸಿನಲ್ಲಿ ಓಡುವವನ“, ಅವನಿಗೆ ರೇಸಿಸ್ಟ್ ಶಬ್ದದ ಅರ್ಥವೇ ಗೊತ್ತಿಲ್ಲ. ರೇಸಿಸಂ ಎಂದರೇನು, ಜನಾಂಗೀಯ ನಿಂದನೆ ಎಂದರೇನು ಎನ್ನುವುದು ಬಹಳಷ್ಟು ಭಾರತೀಯರಿಗೆ ಇನ್ನೂ ಏನೂ ಗೊತ್ತಿಲ್ಲ ಎನ್ನುವುದನ್ನು ಹಾಸ್ಯದ ರೂಪದಲ್ಲಿ ಸೂಕ್ಷ್ಮವಾಗಿ ಆ ಒಂದು ದೃಶ್ಯದಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ. 

(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)