Saturday, 27 November 2021

ಇಂಗ್ಲೆಂಡ್ ಪತ್ರ 13

ಆರೋಗ್ಯ, ಕಾಯಿಲೆ ಮತ್ತು ಸಾವು

 ಪುನೀತ್ ರಾಜಕುಮಾರ್ ಅವರು ಯಾವುದೇ ಪೂರ್ವಸೂಚನೆಗಳಿಲ್ಲದೇ ಹೃದಯಾಘಾತಗಿಂದ ನಿಧನರಾದಾಗ ಸುದ್ದಿಮಾಹಿನಿಗಳಲ್ಲಿ, ವಾಟ್ಸ್ಯಾಪಿನಲ್ಲಿ ಆರೋಗ್ಯದ ಆರೈಕೆಯ ವಿಷಯವಾಗಿ, ವ್ಯಾಯಾಮವನ್ನು ಮಾಡಬೇಕೇ ಬೇಡವೇ, ಯಾವ ಯಾವ ಆರೋಗ್ಯದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು, ಏನು ತಿನ್ನಬೇಕು, ಏನು ತಿನ್ನಬಾರದು, ಏನು ಕುಡಿಯಬೇಕು, ಏನು ಕುಡಿಯಬಾರದು, ಯಾವ ವೈದ್ಯಶಾಸ್ತ್ರವನ್ನು ಅವಲಂಬಿಸಬೇಕು ಎನ್ನುವ ಬಗೆಗೆ ಸಾಕಷ್ಟು ಚರ್ಚೆಗಳು, ಸಲಹೆಗಳು, ಉಪದೇಶಗಳು ಪಾಮರರಿಂದ ಹಿಡಿದು ಪಂಡಿತರವರೆಗೂ ನಡೆದಿವೆ. ವೈದ್ಯವೃತ್ತಿಯಲ್ಲಿರುವ ಹೃದಯರೋಗ ಪರಿಣಿತರು ಸುದ್ದಿವಾಹಿನಿಗಳಲ್ಲಿ, ಯುಟ್ಯೂಬಿನಲ್ಲಿ ತಮ್ಮ ನುರಿತ ಸಲಹೆಗಳನ್ನು ಕೊಟ್ಟಿದ್ದಾರೆ. ಒಂದರ್ಥದಲ್ಲಿ ಪುನೀತ್ ಅವರ ಹಠಾತ್ ಹೃದಯಾಘಾತದಿಂದ ಜನರಲ್ಲಿ ಆರೋಗ್ಯದ ಬಗ್ಗೆ, ವ್ಯಾಯಾಮ ಎಷ್ಟು ಮಾಡಬೇಕು ಎನ್ನುವ ಬಗ್ಗೆ ಗೊಂದಲಗಳಾಗಿವೆ. ನಾನು ಹೃದಯಶಾಸ್ತ್ರಜ್ಞನಲ್ಲ, ರೇಡಿಯಾಲಾಜಿಸ್ಟ್. ನನ್ನ ಈ ಮಿತಿಯಲ್ಲಿ ಕೆಲವು ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತೇನೆ. 


ಈ ಕೆಳಗಿನ ಎರಡು ಮಾದರಿಗಳನ್ನು ಗಮನಿಸಿ: 

  1. ಪ್ರತಿ ನಿಮಿಷಕ್ಕೆ ಹತ್ತಾರು ಗಿಗಾಬೈಟ್ ಮಾಹಿತಿಯನ್ನು ಪಡೆದು, ಸಂಗ್ರಹಿಸಿ, ರವಾನಿಸಿ, ವಿಭಾಗಿಸಿ, ವಿಶ್ಲೇಷಿಸಿ, ಅರ್ಥವಾಗುವ ಹಾಗೆ ಮಾಹಿತಿಯನ್ನು ಹೊರಹಾಕುವ, ನೂರಾರು ತರಹದ ಸಾಫ್ಟ್‌ವೇರ್‌ಗಳಿರುವ ಒಂದು ಸೂಪರ್ ಕಂಪ್ಯೂಟರನ್ನು ಊಹಿಸಿಕೊಳ್ಳಿ. ಅಂಥ ನೂರಾರು ಸೂಪರ್ ಕಂಪ್ಯೂಟರ್ ಮತ್ತು ಅವುಗಳ ಜಾಲವನ್ನು ಊಹಿಸಿಕೊಳ್ಳಿ. ಇಂಥ ವ್ಯವಸ್ಥೆ ನಾಸಾ, ಗೂಗಲ್‌, ಫೇಸ್‍ಬುಕ್‌ ಸರ್ವರ್‌ಗಳನ್ನು ಇಟ್ಟಿರುವ ಜಾಗಗಳಲ್ಲಿ ನೋಡಬಹುದು. ಅರ್ಧ ಎಕರೆ ಜಾಗದಲ್ಲಿ ನೂರಾರು ಕೂಲರ್‌ಗಳ ನಡುವೆ ಈ ಸರ್ವರ್‌ಗಳನ್ನು ಇಟ್ಟಿರುತ್ತಾರೆ. ಅವುಗಳನ್ನು ಸದಾ ಕಾಲ ನೋಡಿಕೊಳ್ಳಲು ಇಂಜಿನಿಯರುಗಳ ತಂಡವೇ ಇರುತ್ತದೆ. ಈ ಅರ್ಧ ಎಕರೆಯ ಜಾಗದಲ್ಲಿ ನೂರಾರು ಕಂಪ್ಯೂಟರುಗಳು ನಡೆಯುವ ಈ ಎಲ್ಲ ಸಂಕೀರ್ಣ ಕೆಲಸಗಳನ್ನು ಕೇವಲ ಒಂದೂವರೆ ಕಿಲೋ ಮಾತ್ರ ತೂಗುವ ನಮ್ಮ ತಲೆಬುರುಡೆಗಿಂತ ಚಿಕ್ಕದಾದ ವಸ್ತುವೊಂದು ಮಾಡಬಲ್ಲದು ಎಂದರೆ ನಂಬುತ್ತೀರಾ? ಹೌದು, ಅಂಥ ಒಂದು ವಸ್ತುವಿದೆ, ಅದೇ ನಮ್ಮ ನಿಮ್ಮೆಲ್ಲ ತಲೆಬುರುಡೆಯೊಳಗಿರುವ ಮೆದುಳು. ಈ ಮೆದುಳಿನ ಸುತ್ತ ಯಾವ ಕೂಲರ್‌ಗಳೂ ಇಲ್ಲ. ಸರ್ವರ್‌ಗಳು ಉಪಯೋಗಿಸುವ ಸಾವಿರದಲ್ಲಿ ಒಂದು ಭಾಗದಷ್ಟು ಶಕ್ತಿಯನ್ನು ಮಾತ್ರ ಉಪಯೋಗಿಸಿ ಮೆದುಳು ಈ ಸೂಪ್ರ ಕಂಪ್ಯೂಟರ್‌ಗಳ ತರಹ ಕೆಲಸ ಮಾಡುತ್ತದೆ. 

  2. ಒಂದು ಕ್ಷಣವೂ ನಿಲ್ಲದೇ ಕೆಲಸಮಾಡುವ ಒಂದು ಪಂಪ್‍ಸೆಟ್ ಒಂದನ್ನು ಊಹಿಸಿಕೊಳ್ಳಿ.ಈ ಪಂಪ್‍ಸೆಟ್ಟಿನಿಂದ ಹೊರಬರುವ ಕೊಳವೆ ಸಹಸ್ರಾರು ಟಿಸಿಲೊಡೆಯುತ್ತ, ಚಿಕ್ಕದಾಗುತ್ತ,  62 ಸಾವಿರ ಕ್ಯುಬಿಕ್ ಸೆಂಟಿಮೀಟರ್ ಪ್ರದೇಶದ ಪ್ರತಿ ಬಿಂದುವಿಗೂ ತನ್ನೊಳಗೆ ಇರುವ ಕೇವಲ ಆರು ಲೀಟರ್ ದ್ರವದಲ್ಲಿ ನೀರುಣಿಸುತ್ತದೆ, ಪೋಷಣೆಮಾಡುತ್ತದೆ. ಅಷ್ಟೇ ಅಲ್ಲ, ಅಷ್ಟು ದೊಡ್ಡ ಪ್ರದೇಶದಲ್ಲಿ ಕ್ಷಣ ಕ್ಷಣವೂ ಬೆಳೆಯುವ ಕೊಳೆಯನ್ನು ಹೊತ್ತು, ಕೊಳೆಯನ್ನು ಬೇರ್ಪಡಿಸುವ ಕಾರ್ಖಾನೆಗೆ ರವಾನಿಸುತ್ತದೆ. ಅಲ್ಲದೇ ಇದೆಲ್ಲ ಕೆಲಸವನ್ನು ಒಂದೇ ನಿಮಿಷದಲ್ಲಿ ಮಾಡುತ್ತದೆ, ಮತ್ತು ಈ ಕೆಲಸ 24 x 7 ಪುನರಾವರ್ತನೆಯಾಗುತ್ತಲೇ ಇರುತ್ತದೆ. ಇದುವರೆಗೆ ಮಾನವ ನಿರ್ಮಿತ ಇಂಥ ಯಾವ ಪಂಪ್‍ಸೆಟ್ಟುಗಳೂ ಒಂದು ನಿಮಿಷ ಕೂಡ ಕೆಟ್ಟು ಹೋಗದೇ, ಎಂಬತ್ತು ವರ್ಷ ಬಿಟ್ಟು ಬಿಡದೇ ನಿರಂತರವಾಗಿ ಈ ಮೇಲೆ ಹೇಳಿದ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಆದರೆ ನಮ್ಮ ನಿಮ್ಮೆಲ್ಲರ ಚಿಕ್ಕ ಮುಷ್ಟಿ ಗಾತ್ರದ ಹೃದಯ ಈ ಕೆಲಸವನ್ನು ತಾನಿರುವ ವ್ಯಕ್ತಿ ಸಾಯುವವರೆಗೆ ದುಡಿಯುತ್ತಲೇ ಇರುತ್ತದೆ.   


ಈ ರೀತಿಯಾಗಿ ಮನುಷ್ಯನ ಸಂಕೀರ್ಣ ರಚನೆಯನ್ನು ವಿವರಿಸುತ್ತ ಹೋಗಬಹುದು. ಪ್ರತಿ ಅಂಗವ್ಯವಸ್ಥೆಯನ್ನು ಒಂದೊಂದು ರೀತಿಯ ಯಂತ್ರಗಳಿಗೆ ಹೋಲಿಸಿ ನೋಡಿದರೆ ನಮ್ಮ ದೇಹದ ಸಂಕೀರ್ಣಯ ಅಗಾಧತೆಯ ಬಗ್ಗೆ ಒಂಚೂರಾದರೂ ಕಲ್ಪನೆ ಮಾಡಿಕೊಳ್ಳಬಹುದು. ಒಬ್ಬ ಮನುಷ್ಯನ ದೇಹವನ್ನು ನಕಲು ಮಾಡುವ ಯಂತ್ರಸಂಕೀರ್ಣವನ್ನು ನಿರ್ಮಿಸಲು ತೊಡಗಿದರೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣಿತರಾದ ಲಕ್ಷಾಂತರ ಇಂಜಿನಿಯರುಗಳು ಬೇಕಾಗುತ್ತದೆ, ಅವರು ಹತ್ತಾರು ವರ್ಷ ತಂಡತಂಡಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದು ಕ್ರಿಕೆಟ್ ಮೈದಾನದಷ್ಟು ದೊಡ್ಡ ಜಾಗ ಬೇಕಾಗುತ್ತದೆ. ಅದನ್ನು ನಿರ್ಮಿಸಿ ಕೆಲಸ ಮಾಡಲು ಶುರುಮಾಡಿದ ಮೇಲೆ, ಆ ಯಂತ್ರಸಂಕೀರ್ಣವು ಅವಿರತವಾಗಿ ಕೆಲಸ ಮಾಡುತ್ತಲಿರಲು, ನಿರ್ವಹಿಸಲು ಮತ್ತು ರಿಪೇರಿ ಮಾಡಲು ಪ್ರತಿದಿನವೂ ಸಾವಿರಾರು ಇಂಜಿನಿಯರುಗಳು ಬೇಕಾಗುತ್ತದೆ. ಆದರೆ ಇಷ್ಟೊಂದು ಸಂಕೀರ್ಣ ಕೆಲಸಗಳು ನಮ್ಮ ಐದಾರು ಅಡಿ ದೇಹದಲ್ಲಿ ಎಡೆಬಿಡದೇ ನಡೆಯುತ್ತಿದೆ. ದೇಹವು ತನ್ನನ್ನು ತಾನೇ ಸದಾ ಕಾಲ ರಿಪೇರಿ ಮಾಡಿಕೊಳ್ಳುತ್ತಲೇ ಇರುತ್ತದೆ. ಇಂಥ ಸಂಕೀರ್ಣವಾದ ನಮ್ಮ ದೇಹರಚನೆ ಮತ್ತು ಕ್ರಿಯೆಗಳನ್ನು ವೈದ್ಯರು ಪ್ರಶ್ನೆ ಕೇಳುವುದರಿಂದ, ತಪಾಸಣೆಯಿಂದ, ರಕ್ತ-ಮೂತ್ರ ಪರೀಕ್ಷೆಯಿಂದ, ಸ್ಕ್ಯಾನ್‌ಗಳಿಂದ ಒಂಚೂರು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ, ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಔಷಧಿ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ದೇಹ ತನ್ನನ್ನು ತಾನು ರಿಪೇರಿ ಮಾಡಿಕೊಳ್ಳಲು ನೆರವಾಗುತ್ತಾರೆ. ದೇಹಕ್ಕೆ ಬೇಕಾದ ಸಹಾಯವನ್ನು ಮಾಡುತ್ತಾರೆ. ಹೃದಯದ ಬಡಿತ ನಿಧಾನವಾಗಿದ್ದರೆ ಪೇಸ್ ಮೇಕರ್ ಹಾಕುತ್ತಾರೆ. ಹಾರ್ಮೋನ್ ಕಡಿಮೆಯಾದರೆ ಹಾರ್ಮೋನಿನ ಮಾತ್ರೆ ಕೊಡುತ್ತಾರೆ. ವೈರಾಣು ಸೋಂಕದಂತೆ ಲಸಿಕೆಗಳನ್ನು ಹಾಕುತ್ತಾರೆ. 

 

ಅನುವಂಶೀಯ ಅಥವಾ ಹುಟ್ಟಿನಿಂದ ರೋಗಗಳು ಬಂದಿರದಿದ್ದರೆ, ನಲವತ್ತರವರೆಗೂ ಬಹುತೇಕ ಬಹಳಷ್ಟು ಜನರಿಗೆ ಎಲ್ಲ ಸರಿಯಾಗಿಯೇ ನಡೆಯುತ್ತಿರುತ್ತದೆ. ಏನು ತಿಂದರೂ, ಏನು ಕುಡಿದರೂ, ಎಷ್ಟೊತ್ತಿಗೆ ಮಲಗಿದರೂ, ಎಷ್ಟೊತ್ತಿಗೆ ಎದ್ದರೂ, ಬದುಕು ಸುಸೂತ್ರವಾಗಿ ನಡೆಯುತ್ತಿರುತ್ತದೆ. ಕಾಲ ಕಳೆದಂತೆ ಅಂಗಾಂಗಗಳು ವೋರ್ನ್‌ಔಟ್ ಆಗುತ್ತವೆ, ಮೊದಲಿನ ಉತ್ಸಾಹವನ್ನು ಕಳೆದುಕೊಳ್ಳುತ್ತವೆ. ಮೆದುಳು ಮೊದಲಿನ ಚುರುಕನ್ನು ಕಡಿಮೆ ಮಾಡಿಕೊಳ್ಳುತ್ತದೆ, ಹೃದಯವು ಮೊದಲಿನ ಲವಲವಿಕೆಯನ್ನು ಕಳೆದುಕೊಳ್ಳುತ್ತದೆ, ಕಿಡ್ನಿಗಳು ಮೊದಲಿನಂತೆ ಕಲ್ಮಷವನ್ನು ಹೊರಹಾಕಲು ಹೆಣಗುತ್ತವೆ, ರಕ್ತದೊತ್ತಡ (ಬಿ.ಪಿ) ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗಲು ಶುರುವಾಗಿರುತ್ತದೆ, ರಕ್ತನಾಳಗಳ ಕೊಳವೆಗಳು ಚಿಕ್ಕವಾಗಲು ಶುರುವಿಡುತ್ತದೆ, ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ, ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದೆಲ್ಲ ಆಗಬೇಕಾದ್ದೆ. ಒಟ್ಟಿನಲ್ಲಿ ಆರೋಗ್ಯ ಮೊದಲಿನಂತೆ ಇಲ್ಲ ಎನ್ನುವ ಸೂಚನೆಯನ್ನು ನಿಧಾನವಾಗಿ ಹೊರಗೆ ಪ್ರಕಟವಾಗಲು ಶುರುವಾಗುತ್ತವೆ. ಹೀಗಾಗಿ ಬಹಳಷ್ಟು ಕಾಯಿಲೆಗಳು ಮತ್ತು ಸಾವುಗಳು ಸಾಕಷ್ಟು ಮುನ್ಸೂಚನೆಗಳನ್ನು ಕೊಟ್ಟೇ ಬರುತ್ತವೆ.. 


ಆದರೆ ಕೆಲವು ಸಾವುಗಳು ಪುನೀತ್ ರಾಜಕುಮಾರ್ ಅವರಿಗೆ ಆದಂತೆ ಹಠಾತ್ತನೇ ಜರುಗುತ್ತವೆ: ಕೆಲವು ಹಠಾತ್ ಸಾವುಗಳು ನಮ್ಮ ದೇಹಕ್ಕೆ ಸಂಬಂಧಿಸಿದ್ದು (ಉದಾ: ತೀವ್ರ ಹೃದಯಾಘಾತ), ಕೆಲವು ಮನಸ್ಸಿಗೆ ಸಂಬಂಧಿಸಿದ್ದು (ಉದಾ: ಆತ್ಮಹತ್ಯೆ), ಕೆಲವು ನೈಸರ್ಗಿಕ ಸೂಕ್ಷ್ಮಜೀವಿಗಳಿಂದ ಬರುವಂಥದ್ದು (ಉದಾ: ಕೋವಿಡ್-19), ಕೆಲವು ಮನುಷ್ಯನ ನಾಗರಿಕತೆಯಿಂದ ಹುಟ್ಟಿದ್ದು (ಉದಾ: ರಸ್ತೆ ಅಪಘಾತ), ಕೆಲವು ನೈಸರ್ಗಿಕ ವಿಕೋಪಗಳಿಂದ ಆದದ್ದು (ಉದಾ: ಭೂಕಂಪ). ವೈದ್ಯಕೀಯ ಕ್ಷೇತ್ರದಲ್ಲಿ ಇಂಥ ಹಠಾತ್ ಸಾವುಗಳನ್ನು ತಡೆಗಟ್ಟಲು (ಅದರಲ್ಲೂ ದೈಹಿಕ ಮತ್ತು ಮಾನಸಿಕ ಕಾರಣಗಳಿಂದ ಬರುವ ಸಾವುಗಳು) ದಶಕಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇವೆಲ್ಲವನ್ನು ತಡೆಗಟ್ಟಲು ‘ಇದಂ ಇತ್ಠಂ‘ ಎನ್ನುವ ಉತ್ತರಗಳು ಇಲ್ಲ, ಬಹುಷಃ ಸಿಗುವುದೂ ಇಲ್ಲ. ಏಕೆಂದರೆ ಮನುಷ್ಯನ ಶರೀರದ ರಚನೆಯು, ಮೇಲೆ ವಿವರಿಸಿದಂತೆ, ತುಂಬ ಸಂಕೀರ್ಣವಾದುದು. ಇಂಥ ಸಂಕೀರ್ಣ ಯಂತ್ರವನ್ನು ನಾನು ಬಲ್ಲೆ, ಯಾವಾಗಲೂ ಆರೋಗ್ಯವಾಗಿ ಇಡಬಲ್ಲೆ, ಕೆಟ್ಟು ಹೋಗದಂತೆ ಮಾಡಬಲ್ಲೆ, ಸಾಯದಂತೆ ತಡೆಯಬಲ್ಲೆ ಎಂದು ಯಾವುದಾದರೂ ವೈದ್ಯ, ಆಸ್ಪತ್ರೆ ಅಥವಾ ವೈದ್ಯಶಾಸ್ತ್ರ ಹೇಳಿಕೆ ಕೊಟ್ಟರೆ ಅಥವಾ ಆಮಿಷ ತೋರಿಸಿದರೆ ಅದಕ್ಕಿಂತೆ ದೊಡ್ಡ ಮೌಢ್ಯ ಇನ್ನೊಂದಿಲ್ಲ. 


ನಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು, ನಮ್ಮನ್ನು ಆರೋಗ್ಯವಂತರನ್ನಾಗಿ ಇಡಲು, ರೋಗದಿಂದ ಗುಣಮುಖವಾಗುವಂತೆ ಮಾಡಲು, ವಿಜ್ಞಾನಿಗಳು ಮತ್ತು ವೈದ್ಯರು ಸಂಶೋಧನೆಗಳನ್ನು, ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಹೊಸ ತಂತ್ರಜ್ಞಾನಗಳನ್ನು, ಔಷಧಿಗಳನ್ನು, ಶಸ್ತ್ರಚಿಕಿತ್ಸೆಗಳನ್ನು ಅವಿಷ್ಕಾರ ಮಾಡುತ್ತಲೇ ಇದ್ದಾರೆ. ವೈದ್ಯಕೀಯ ಕ್ಷೇತ್ರ ಈ ಕಳೆದ ಶತಮಾನದಲ್ಲಿ, ಅದರಲ್ಲೂ ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ. ವೈದ್ಯರುಗಳು ಎಂಬಿಬಿಎಸ್ ಓದಿದ ಮೇಲೆ ಸ್ಪೇಷಾಲಿಟಿ ಮತ್ತು ಸೂಪರ್-ಸ್ಪೇಷಾಲಿಟಿಗಳನ್ನು ಮಾಡುತ್ತಾರೆ. ಜೀವಕೋಶದೊಳಗಿನ ಕಣ್ಣಿಗೆ ಕಾಣದ ಜೀನ್ಸ್‌ಗಳನ್ನು ರಿಪೇರಿ ಮಾಡುವುದರಿಂದ ಹಿಡಿದು ಕಿಡ್ನಿ-ಲಿವರ್‌ಗಳನ್ನು ಜೋಡಿಸುವವರೆಗೆ ವೈದ್ಯರಿದ್ದಾರೆ. ಸಾವಿರಾರು ತರಹದ ರಕ್ತತಪಾಸಣೆಗಳಿವೆ. ಸಿಟಿ ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್‌ಗಳಿವೆ. 


ಇಷ್ಟೊಂದು ಸೌಲಭ್ಯಗಳು, ವೈದ್ಯರು, ಶಸ್ತ್ರಚಿಕಿತ್ಸೆಗಳು, ಔಷಧಗಳು ಇದ್ದರೂ ಮನುಷ್ಯನ ದೇಹರಚನೆ, ಜೀವಕೋಶಗಳ ಕ್ರಿಯೆ, ಅಂಗಾಂಗಳ ವ್ಯವಸ್ಥೆ, ಮತ್ತು ವಿವಿಧ ಅಂಗಾಂಗಳ ನಡುವಿನ ಸಂಬಂಧಗಳ ವಿಪರೀತ ಸಂಕೀರ್ಣತೆಯನ್ನು ಇನ್ನೂ 10% ಕೂಡ ಅರ್ಥಮಾಡಿಕೊಂಡಿಲ್ಲ. ನಮ್ಮೊಳಗೆ ಮತ್ತು ನಮ್ಮ ಸುತ್ತ ಮುತ್ತ ಸಹಸ್ರಾರು ರೀತಿಯ ವೈರಸ್ಸುಗಳು, ಬೆಕ್ಟೀರಿಯಾಗಳು ಮತ್ತು ಅಣಬೆಗಳಿವೆ, ಅವುಗಳ ಮತ್ತು ಮನುಷ್ಯನ ಜೊತೆಗಿನ ನಡುವಿನ ಅವಿನಾಭಾವದ ಸಂಬಂಧ ಇನ್ನೂ 1% ಕೂಡ ಅರ್ಥವಾಗಿಲ್ಲ. ಆದರೂ ಮನುಷ್ಯನ ಆರೋಗ್ಯದ ನಿರ್ವಹಣೆಯಲ್ಲಿ, ರೋಗಗಳನ್ನು ಗುಣಪಡಿಸುವಲ್ಲಿ ಅಥವಾ ಹತೋಟಿಗೆ ಇಡುವಲ್ಲಿ, ಮನುಷ್ಯನ ಸರಾಸರಿ ಆಯುಷ್ಯವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಅರೋಗ್ಯವನ್ನು ಕಾಪಾಡಿಕೊಳ್ಳಲು ಅನುವಂಶೀಯ ಕಾರಣಗಳು, ನಮ್ಮ ಸುತ್ತಲಿನ ಪರಿಸರದ ಕಾರಣಗಳು ಎಷ್ಟರಮಟ್ಟಿಗೆ ಕಾರಣ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಯಾಕೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಆಗುತ್ತದೆ, ಯಾಕೆ ಕೆಲವರಿಗೆ ಕಿಡ್ನಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡುವುದನ್ನು ಕಡಿಮೆ ಮಾಡುತ್ತದೆ ಎಂದೆಲ್ಲ ಸಾಕಷ್ಟು ಸಂಶೋಧನೆಗಳು ನಡೆದಿವೆ ಮತ್ತು ಕೆಲವು ಕಾರಣಗಳೂ ಗೊತ್ತಿವೆ. ಆರೋಗ್ಯವನ್ನು ಸಢೃಡವಾಗಿ ಇಡಲು ಏನೇನು ಮಾಡಬೇಕು ಮತ್ತು ಏನೇನು ಮಾಡಬಾರದು ಎನ್ನುವುದರ ಬಗ್ಗೆಯೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. 


ಪುನೀತ್ ಅವರ ಅಕಾಲಿಕ ಸಾವಿನ ಸ್ವಲ್ಪ ದಿನಗಳಲ್ಲಿ, ಕೆಲವು ಹೃದಯ ಪರಿಣಿತ ವೈದ್ಯರು ೪೦ ದಾಟಿದ ಪ್ರತಿಯೊಬ್ಬ ಭಾರತೀಯ ಗಂಡಸು (ಹೆಂಗಸರಲ್ಲ) ಹೃದಯದ ಸಿಟಿ ಸ್ಕ್ಯಾನ್, ಇಸಿಜಿ ಮತ್ತು ಟ್ರೆಡ್ ಮೀಲ್ ಪರೀಕ್ಷೆಗಳನ್ನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿಕೆ ಕೊಟ್ಟರು. ಈ ಮೂರು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಆಗುವ ಖರ್ಚು ಕಡಿಮೆ ಏನಲ್ಲ, ಮತ್ತು ಎಲ್ಲರ ಕೈಗೆ ಎಟುಕುವುದೂ ಇಲ್ಲ. ಒಂದು ವೇಳೆ ಈ ಮೂರೂ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಆ ಪರೀಕ್ಷೆಗಳಿಂದ ಆಗುವ ಗೊಂದಲಗಳು ಒಂದೆರಡಲ್ಲ. ಏಕೆಂದರೆ, ಆ ಪರೀಕ್ಷೆಗಳನ್ನು ನಾಲ್ಕು ಪರಿಣಿತರಿಗೆ ಕೊಟ್ಟರೆ ಆ ನಾಲ್ಕೂ ಜನ ಪರಿಣಿತರ ಅಭಿಪ್ರಾಯಗಳು ಅವರವರ ಅನುಭವ ಮತ್ತು ಜ್ಞಾನಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತವೆ. ಒಬ್ಬ ನೀನು ಸಂಪೂರ್ಣ ಆರೋಗ್ಯವಾಗಿದ್ದೀಯ ಎನ್ನಬಹುದು, ಇನ್ನೊಬ್ಬ ನಿನಗೆ ಮಾತ್ರೆಗಳ ಅವಶ್ಯಕತೆ ಎನ್ನಬಹುದು, ಮತ್ತೊಬ್ಬ ನಿನಗೆ ಅಂಜಿಯೋಪ್ಲಾಸ್ಟಿಯಾಗಬೇಕು ಎಂದು ಹೇಳಬಹುದು, ಮುಗದೊಬ್ಬ ನಿನಗೆ ಬೈಪಾಸ್ ಆಗಬೇಕು ಎಂದು ಹೇಳಬಹುದು. ಅಷ್ಟೇ ಅಲ್ಲ, ಸಮೂಹಿಕವಾಗಿ ಇಂಥ ಪರೀಕ್ಷೆಗಳನ್ನು ಸ್ಕ್ರೀನಿಂಗ್ ಪರೀಕ್ಷೆಗಳಾಗಿ ಎಲ್ಲ ನಾಗರಿಕರು ನಲವತ್ತು ಆಗಿತ್ತಿದ್ದಂತೆ ಮಾಡಿಸಿಕೊಳ್ಳಬೇಕೆಂದು ಯಾವ ವೈದ್ಯಸಮೂಹವೂ ವೈಜ್ಞಾನಿಕವಾಗಿ ಶಿಫಾರಸು ಮಾಡಿಲ್ಲ. ಒಂದು ವೇಳೆ ಶಿಫಾರಸು ಮಾಡಿದರೆ ಅದರ ವೆಚ್ಚವನ್ನು ಭರಿಸುವ ಶಕ್ತಿ ಭಾರತ ಸರಕಾರಕ್ಕೆ ಇಲ್ಲ, ಸ್ವಂತ ಖರ್ಚಿನಿಂದ ಮಾಡಿಸಿದರೆ ಬಡವ-ಬಲ್ಲಿದರ ನಡುವಿನ ಕಂದರ ಇನ್ನಷ್ಟು ಅಗಲವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. 


ಪುನೀತ್ ಅವರ ನಿಧನವಾದಾಗ ನಿಯಮಿತ ವ್ಯಾಯಾಮ ಮಾಡುವುದು, ಜಿಮ್-ಗೆ ಹೋಗುವುದು  ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಕೂಗು ಕೇಳಿಬಂತು. ಕೆಲವು ವೈದ್ಯರು ಮನುಷ್ಯನ ದೇಹವಿರಿವುದು ನಡೆಯಲು, ಓಡಲಲ್ಲ; ಮನುಷ್ಯನ ಮಾಂಸಖಂಡಗಳು ಇರುವುದು ಹುಲ್ಲು ಕೊಯ್ಯಲು, ಪ್ರಾಣಿಯನ್ನು ಬೇಟೆಯಾಡಲಲ್ಲ. ಆದ್ದರಿಂದ ಜಿಮ್-ಗೆ ಹೋಗುವುದು ಒಳ್ಳೆಯದಲ್ಲ ಎಂದು ಘೋಷಿಸಿದರು, ಓಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.. 


ಇದನ್ನು ಅರ್ಥ ಮಾಡಿಕೊಳ್ಳಲು ನಾವು ವೈದ್ಯಶಾಸ್ತ್ರದಲ್ಲಿ ಉಪಯೋಗಿಸುವ `ರಿಸ್ಕ್ ಅಂಶ`ಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಒಳಿತು. ದಿನಾ ಕಂಠಮಠ ಅಲ್ಕೋಹಾಲು ಕುಡಿದರೆ ಒಂದೆರೆಡು ದಶಕಗಳಲ್ಲಿ ಲಿವರ್ ಕೆಟ್ಟು ಹೋಗುತ್ತದೆ, ಸಿಗರೇಟು ಸೇವನೆಯಿಂದ ಮೂರ್ನಾಕು ದಶಕಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ; ಅಂದರೆ, ಅಲ್ಕೋಹಾಲು ಲಿವರಿಗೆ ರಿಸ್ಕು, ಸಿಗರೇಟು ಶ್ವಾಸಕೋಶಕ್ಕೆ ರಿಸ್ಕು. ಆದರೆ ಕಂಠಮಠ ಅಲ್ಕೋಹಾಲು ಕುಡಿದರೆ ಲಿವರ್ ಕೆಟ್ಟು ಹೋಗುವ ರಿಸ್ಕಿಗೂ ಸಿಗರೇಟು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ರಿಸ್ಕಿಗೂ ವ್ಯತ್ಯಾಸವಿದೆ. ದಿನಾ ತುಂಬ ಕುಡಿಯುವವರಿಗೆ ಲಿವರ್ ಕೆಟ್ಟು ಹೋಗುವುದು ಗ್ಯಾರಂಟಿ, ಆದರೆ ಸಿಗರೇಟು ಸೇವಿಸುವವರೆಲ್ಲರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಅಷ್ಟೇ ಅಲ್ಲ, ಶ್ವಾಸಕೋಶದ ಕ್ಯಾನ್ಸರ್ ಬಂದಿರುವವರೆಲ್ಲರೂ ಧೂಮ್ರಪಾನಿಗಳಾಗಬೇಕಿಲ್ಲ. ಶ್ವಾಸಕೋಶದ ಕ್ಯಾನ್ಸರ್ ಬಂದಿರುವ ೧೦೦ರಲ್ಲಿ ೭೦ ಜನ ಧೂಮ್ರಪಾನಿಗಳಾಗಿರುತ್ತಾರೆ. ಇನ್ನುಳಿದ ೩೦% ಜನರಿಗೆ ಯಾವ ದುರಾಭ್ಯಾಸಗಳು ಇಲ್ಲದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಇದೇ ತರ್ಕವನ್ನು ನಿಯಮಿತ ವ್ಯಾಯಾಮಕ್ಕೆ ಹೋಲಿಸಿ ನೋಡಿದರೆ ಇದರ ಮಹತ್ವ ಅರಿವಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರಿಗೆ ಹೃದಯ ರೋಗಗಳು, ಸಕ್ಕರೆ ಕಾಯಿಲೆ, ಹೈ ಬಿಪಿ ಬರುವ ಸಾಧ್ಯತೆಗಳು ಕಡಿಮೆ, ಆದರೆ ಬರುವುದಿಲ್ಲ ಎಂದೇನಿಲ್ಲ. ಪುನೀತ್ ರಾಜಕುಮಾರ್ ಅಷ್ಟೆಲ್ಲ ವ್ಯಾಮಾಮ ಮಾಡಿಯೂ ಧಿಡೀರೆಂದು ಹೊರಟುಹೋದರೆಂದು ವ್ಯಾಯಾಮವನ್ನೇ ಮಾಡಬಾರದು ಎನ್ನುವುದೂ ಒಂದೇ, ಸಿಗರೇಟು ಸೇದದೇ ಇದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುವುದಿದ್ದರೆ ಬಂದೇ ಬರುತ್ತದೆ, ಆದ್ದರಿಂದ ದಿನವೂ ನಾವೆಲ್ಲರೂ ಸಿಗರೇಟು ಸೇದಬೇಕು ಎನ್ನುವುದೂ ಒಂದೇ ವಾದವಾಗುತ್ತದೆ. ನಮ್ಮ ದೇಹಕ್ಕೆ, ನಮಗೆ ಸರಿ ಅನಿಸುವಂತೆ, ಸೂಕ್ತ ಮಾರ್ಗದರ್ಶನದಲ್ಲಿ, ನಿಯಮಿತವಾಗಿ ವ್ಯಾಯಾಮ, ಓಟ, ನಡಿಗೆ, ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮ ಸ್ಠಿತಿಯಲ್ಲಿ ಇರಲು ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ, ಆದರೆ ಅವೆಲ್ಲ ನಮಗೆ ಯಾವುದೇ ರೋಗ ಬರದಂತೆ ಅಥವಾ ಸಾಯದಂತೆ ತಡೆಯುತ್ತವೆ ಎಂದುಕೊಳ್ಳುವುದು ಮಾತ್ರ ಮಹಾನ್ ಮೂರ್ಖತನ. 


ಪುನೀತ್ ರಾಜಕುಮಾರ್ ಅಮೇರಿಕದಲ್ಲೋ, ಇಂಗ್ಲೆಂಡಿನಲ್ಲೋ ಇದಿದ್ದರೆ ಅಲ್ಲಿನ ಆರೋಗ್ಯ ವ್ಯ್ವಸ್ಥೆಯಿಂದಾಗಿ ಬದುಕಿ ಉಳಿಯುತ್ತಿದ್ದರು ಎನ್ನುವ ಮಾತುಗಳನ್ನು ಕೇಳುತ್ತಿದ್ದೇವೆ. ಇಂಗ್ಲೆಂಡಿನಲ್ಲಿ ಒಂಚೂರು ಎದೆನೋವು ಕಾಣಿಸಿಕೊಂಡರೆ ಸಾಕು, 999ಗೆ ಫೋನು ಮಾಡುತ್ತೇವೆ. ಆ್ಯಂಬ್ಯುಲೆನ್ಸ್ ನಿಮಿಷಗಳಲ್ಲಿ ಮನೆಯ ಮುಂದಿರುತ್ತದೆ. ಆ್ಯಂಬ್ಯುಲೆನ್ಸ್ ಓಡಿಸುವವರು ಬರೀ ವಾಹನ ಚಾಲಕರಲ್ಲ, ಅವರು ತುರ್ತುಚಿಕಿತ್ಸೆಯ ಪರಿಣಿತರು; ಮನೆಗೆ ಬರುತ್ತಿದ್ದಂತೆಯೇ ಇಸಿಜಿ ಮಾಡಿ, ನೋವಿಗೆ ಮಾತ್ರೆ/ಇಂಜಕ್ಷನ್ ಕೊಟ್ಟು, ಹೃದಯಕ್ಕೆ ಬೇಕಾದ ಔಷಧಿಕೊಡುತ್ತಾರೆ. ನಂತರ ಆ್ಯಂಬ್ಯುಲೆನ್ಸ್‌ನಲ್ಲಿ ಮಲಗಿಸಿಕೊಂಡು, ಜೋರಾಗಿ ಸೈರನ್ ಹಾಕಿಕೊಂಡು ವೇಗದಲ್ಲಿ ಆಸ್ಪತ್ರೆಯತ್ತ ಓಡಿಸಿಕೊಂಡು ಹೊರಟರೆ ರಸ್ತೆಯಲ್ಲಿಯ ಎಲ್ಲ ವಾಹನಗಳೂ ದಾರಿ ಮಾಡಿಕೊಡುತ್ತವೆ. ಆಸ್ಪತ್ರೆಯಲ್ಲಿ ಕಾಲ ಮಿಂಚಿವ ಮುಂಚೆ ತಲುಪಿದ ಮೇಲೆ ಅಲ್ಲಿನ ವೈದ್ಯರು ಹೃದಯದ ರಕ್ತನಾಳಗಳನ್ನು ಪರೀಕ್ಷೆ ಮಾಡಿ, ಅಂಜಿಯೋಪ್ಲಾಸ್ಟಿ ಮಾಡಿ ಗುಣಮುಖರನ್ನಾಗಿಸುತ್ತಾರೆ.  


ಜಗತ್ತಿನ ಅತ್ಯಂತ ಆರೋಗ್ಯಕರ ಆಹಾರವನ್ನು ತಯಾರಿಸಿದ ಖ್ಯಾತಿಗೆ ಮಾತ್ರನಾಗಿದ್ದ, ಹಾಲಿವುಡ್ ತಾರೆಯರಿಗೆ ಅಡುಗೆ ಮಾಡಿದ ಪ್ರಖ್ಯಾತ ಬಾಣಸಿಗ (ಚೆಫ್), ಗುರ್‌ಪರೀತ್ ಬೇನ್ಸ್, ಇಂಗ್ಲೆಂಡ್ ನಿವಾಸಿ. ಜಗತ್ತಿಗೇ ಅತ್ಯಂತೆ ಆರೋಗ್ಯದಾಯಕ ಅಡುಗೆಯನ್ನು ಮಾಡಿದ ಅವರಿಗೂ  ಇತ್ತೀಚೆಗೆ (ನವೆಂಬರ್ 12) ತೀವ್ರ ಹೃದಯಾಘಾತವಾಯಿತು. ಮೇಲೆ ಬರೆದ ಅಷ್ಟೆಲ್ಲ ಸೌಲಭ್ಯಗಳು ಇಂಗ್ಲೆಂಡಿನಲ್ಲಿ ಇದ್ದರೂ ಕೂಡ ಅವರನ್ನು ಉಳಿಸಿಕೊಳ್ಳಲು ಇಲ್ಲಿನ ವೈದ್ಯರಿಗೆ ಆಸ್ಪತ್ರೆಗಳಿಗೆ ಸಾಧ್ಯವಾಗಲಿಲ್ಲ.ತೀವ್ರ ಹೃದಯಾಘಾತದಿಂದ ಪುನೀತ್ ಅವರಂತೆಯೇ ಪುನೀತ್ ಅವರಿಗಿಂತ ಒಂದು ವರ್ಷ ಚಿಕ್ಕವರಾದ ಗುರ್‌ಪರೀತ್ ಸಾವನ್ನಪ್ಪಿದರು. ಇದಕ್ಕೇನೆನ್ನೋಣ?


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)