Wednesday 4 February 2009

ಥೇಟ್ ನಿಮ್ಮಂತೆ

`ಜೀವನದ ಕ್ಷಣಕ್ಷಣವೂ ಬದುಕಬೇಕು 
ತೀವ್ರವಾಗಿ ನಿನ್ನ ಜೊತೆ`
ಎಂದು ನಿನ್ನ ತುರಿದ ಗಡ್ಡದ ಗದ್ದದಿಂದ 
ನನ್ನ ಹಾಲುಗಲ್ಲ ಸವರಿದಾಗ 
ಜಗತ್ತಿನಲ್ಲಿ ನನ್ನಷ್ಟು ಅದೃಷ್ಟಶಾಲಿ ಯಾರಿದ್ದರು? 

ಕನಸುಗಳ ಗುಡ್ಡೆಕಟ್ಟುತ್ತ ಡಿಗ್ರಿ ಮುಗಿಸಿ 
ಬಿಜಾಪುರಕೆ ಬೈಬೈ ಹೇಳಿ 
ಬೆಂಗಳೂರಿನಲ್ಲೊಂದು 
ಒಂದು ಪುಟಾಣಿ ರೂಮಿನ `ಮನೆ` ಬಾಡಿಗೆಗೆ ಸಿಕ್ಕಾಗ 
ಸ್ವರ್ಗಕ್ಕೆ ಮೂರುಗೇಣು ಅನ್ನದವರಾರು? 

ನಿನ್ನ ಕೆಲಸ ನನ್ನ ಕೆಲಸ
ನಡುವೆ ನನ್ನ ಬಸಿರು ಹೆರಿಗೆ

ಸೈಟು 
ಮನೆ 
ಆಳು 
ಕಾರು 

ಮಗುವಿನ ಸ್ನಾನ ಮಗುವಿನ ಸ್ಕೂಲು 
ಮಗುವಿನ ಹೋಂವರ್ಕು ಮಗುವಿನ ಕರಾಟೆ 
ಮಗುವಿನ ಸ್ವಿಮಿಂಗು ಮಗುವಿನ ಟೆನಿಸ್ಸು 
ಮಗುವಿನ ಎಕ್ಸಾಮು ಮಗುವಿನ ವೆಕೇಷನ್ನು 

ಎಲ್ಲದಕ್ಕು ನಾನೇ ಬೇಕು ನೀನು ಮಾತ್ರ ಪತ್ತೆಗಿಲ್ಲ 

ನೋಡು ಹೌಸ್ ವೈಫು ಸುಖಿ ಅಂದವರಾರು? 

ಅಡಿಗೆಯವಳ ಅಡಿಗೆ 
ಮನೆಕೆಲಸದವಳ ಕ್ಲೀನಿಂಗು ಮಗ 
ಸ್ಕೂಲಿಗೆ ಹೋದ ಮೇಲಿನ್ನೇನಿದೆ? 

ಇನ್ನರ್‌ವೀಲು ಬ್ಯೂಟಿಪಾರ್ಲಲು 
ಎಂಜಿರೋಡು ಬ್ರಿಗೇಡ್ ರೋಡು 
ಸೆಂಟ್ರಲ್ ಗರುಡಾಮಾಲು 
ವೀಕೆಂಡಲ್ಲಿ ನಾರ್ತಿಂಡಿಯನ್ ಚೆನೀಸ್ ಕಾಂಟಿನೆಂಟಲ್ ನಾಗಾರ್ಜುನ ಅಮೀಬಾ 
ಹೆಜ್ಜೆಗೊಂದು ಇರುವ ಥರಾವರಿ ಪಬ್ಬುಗಳು 

ಇಷ್ಟೆಲ್ಲ ಆದ್ರೂನೂ
ಸೋಫಾದಲ್ಲಿ ಕುಸಿದು ಕೂತು 
ರಿಮೋಟ್ ಹಿಡಕೊಂಡರೆ ಸಾಕು 
ಶುರುವಾಗುತ್ತದೆ ವರಾತ
ಜೀವನ ನರಕ ಅಲ್ಲವೆಂದವರಾರು? 

ಮಗು ಗಂಡ ಮನೆ ಅಂತಸ್ತು 
ಡಯಟ್ಟು ಜಿಮ್ಮುಗಳಲ್ಲಿ 
ಕಳೆದು ಹೋಗುತ್ತಿರುವ ಚಿಲುಮೆ 

ಲೋನು ಫೀಸು 
ಟ್ಯಾಕ್ಸು ಪ್ರಮೋಷನ್ನು 
ಕಾಂಪಿಟೀಷನ್ನುಗಳಲ್ಲಿ ಉಸಿರುಕಟ್ಟಿಸುವ 
ಬೆಂಗಳೂರಿನ ಬವಣೆ 

ಗೊತ್ತು 
ತಪ್ಪು ನಿನ್ನದೂ ಅಲ್ಲ 
ತಪ್ಪು ನನ್ನದೂ ಅಲ್ಲ 
ಆದರೆ ಇಬ್ಬರೂ ಸರಿ ಇಲ್ಲ 

ಪ್ರತಿಬೆಳಗನ್ನು ಹೊಸಜೀವನ ಮಾಡಲು ಗೊತ್ತಿಲ್ಲದ 
ಬದುಕಿನ ಹುಚ್ಚುತನಕ್ಕೆ ಒಡ್ಡಿಕೊಳ್ಳಲು ಗೊತ್ತಿಲ್ಲದ 
ಮನದ ಒಂಟಿತನದಲ್ಲಿ ಹೊಸಲೋಕ ಗೊತ್ತಿಲ್ಲದ 
ಎಲ್ಲ ಇದ್ದೂ ಏನೂ ಇಲ್ಲದ ಖಾಲಿತನದ 

ಕತೆ ಬರೀ ನಮ್ಮದಲ್ಲ ಆನ್ನುವುದೇ 
ನಮಗೆ ಸಮಾಧಾನ 
ಹಳಸಿ ಹೋಗಿರುವ ಧಾರಾವಾಹಿಗಳಂತಾದರೂ ಸರಿ 
ಇನ್ನೂ ಬದುಕು ಸಾಗಿಸುತ್ತಿದ್ದೇವೆ 
ಥೇಟ್ ನಿಮ್ಮಂತೆ