Monday 10 September 2007

ಪುಸ್ತಕ: ಗುರುಪ್ರಸಾದ ಕಾಗಿನೆಲೆ: ಬಿಳಿಯ ಚಾದರ


ಕಾಗಿನಿಲೆಯವರ 'ಬಿಳಿಯ ಚಾದರ' ಕಾದಂಬರಿ ಓದಿ ಅನಿಸಿದ್ದು: (ಕಾದಂಬರಿಯ shortcomings ಬಗ್ಗೆ, ನ್ಯೂನತೆಗಳ ಬಗ್ಗೆ ನಾನು ಬರೆಯುವುದಿಲ್ಲ, ಅದನ್ನು ಕನ್ನಡದ ವಿಮರ್ಶಕರು ಮಾಡಲಿ - ಅದು ಕಾಗಿನೆಲೆಯವರ ಬೆಳವಣಿಗೆಗೆ ಅಗತ್ಯ ಕೂಡ) 

ಅನಿವಾಸಿ ಅಮೇರಿಗನ್ನಡಿಗರ (ಭಾರತೀಯರ) ಬದುಕನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಿಚ್ಚುತ್ತಾ ಸಾಗುವ ಕತೆ, ಅಂತ್ಯದ ವೇಳೆಗೆ ವಾಂತಿ ಬರುವಂತೆ ಮಾಡಿ ಉಸಿರುಗಟ್ಟಿಸುತ್ತದೆ. ಶ್ರೀಧರ, ರಶ್ಮಿ ಮತ್ತು ನಾಗೇಶರೆಂಬ ಮೂರು ಪಾತ್ರಗಳಲ್ಲಿ - ನಾಗಮಂಗಲದಂಥ ಹಳ್ಳಿ ಮತ್ತು ಅಮೇರಿಕದಂಥ ಆಧುನಿಕತೆ; ಅಮೇರಿಕದ ಸಾಫ್ಟ್ ವೇರ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರ ಬದುಕು; ಗಂಡು-ಹೆಣ್ಣುಗಳ ಮಾನಸಿಕ ಮತ್ತು ದೈಹಿಕ ಸಂಬಂಧಗಳು; - ಇವುಗಳನ್ನು ಸಂಕೀರ್ಣವಾಗಿ ಬಿಚ್ಚುತ್ತಾ, ಬಿಡುಗಡೆ ಮತ್ತು ಪಲಾಯನದ ನಡುವಿನ ವ್ಯತ್ಯಾಸ ಮರೆತು ಹೋಗಿರುವ ನಮ್ಮ ಪೀಳಿಗೆಯ ಬದುಕನ್ನು ತೆರೆದಿಟ್ಟು ನೂರಾರು ಪ್ರಶ್ನೆಗಳನ್ನು ಬಡಿದೆಬ್ಬಿಸುತ್ತಾರೆ, ಕಾಗಿನೆಲೆ.

ನಾಗಮಂಗಲದಲ್ಲಿ ಬೆಳೆವ ರಶ್ಮಿ ಮತ್ತು ಶ್ರೀಧರ - ಅವಳಿ ಜವಳಿ; ರಶ್ಮಿ ಸಾಫ್ಟ್ ವೇರಿಯಾದರೆ, ಶ್ರೀಧರ ಡಾಕ್ಟರಾಗುತ್ತಾನೆ; ಮೊದಲು ರಶ್ಮಿ, ನಂತರ ಶ್ರೀಧರ ಅಮೇರಿಕಕ್ಕೆ ಬರುತ್ತಾರೆ. ಇಬ್ಬರ ಪ್ರಪಂಚಗಳು ಸಂಪೂರ್ಣ ಬೇರೆ ಬೇರೆ. ಒಮ್ಮೆಯೂ ಭೇಟಿಯಾಗುವುದಿಲ್ಲ, ಮತ್ತು ಫೋನಿನಲ್ಲಿ ಸಿಗುವುದೂ ಕಡಿಮೆಯೇ. ನಾಗೇಶ ಇವರಿಗೆ ನಾಗಮಂಗಲದಲ್ಲಿ ನೆರೆಯವ, ವಯಸ್ಸಿನಲ್ಲಿ ದೊಡ್ಡವ, ಆತನೂ ಸಾಫ್ಟ್ ವೇರಿಯಾಗಿ ಅಮೇರಿಕದಲ್ಲಿರುತ್ತಾನೆ. ಶ್ರೀಧರನ ಪ್ರಪಂಚದಲ್ಲಿ ಬೆಟ್ಟಿ ಎಂಬ ಬಿಳಿ ಹೆಣ್ಣು ಬರುತ್ತಾಳೆ, ಘೂಗೆ ಎಂಬ ಮುಂಬೈನ ಡಾಕ್ಟರ್ (ರಸಿಕ ಮತ್ತು ಹೃದ್ರೋಗಿ) ಬರುತ್ತಾನೆ. ರಶ್ಮಿಯ ಜೀವನದಲ್ಲಿ ನಾಗೇಶ ಬರುತ್ತಾನೆ. ಅಮೇರಿಕದ ವೈದ್ಯಕೀಯ ಮತ್ತು ಸಾಫ್ಟ್ ವೇರ್ ಲೋಕದಲ್ಲಿ ನಡೆವ ದಿನನಿತ್ಯದ ವ್ಯವಹಾರಗಳು, ಹರಟೆಗಳು, ಹಾದರಗಳು, ಏರಿಳಿತಗಳು - ಇವುಗಳನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಣ್ಣಿಸುತ್ತಾ, ಈ ಮೂರೂ ಪಾತ್ರಗಳನ್ನು ಪರಿಚಯಿಸುತ್ತ ಬೆಳೆಸುತ್ತ ಹೋಗುತ್ತಾರೆ. ಕಾದಂಬರಿಯ ಉತ್ತರಾರ್ಧದಲ್ಲಿ ನಡೆಯುವ ಘಟನೆಗಳು ಮತ್ತು ಅವು ಉಂಟು ಮಾಡುವ ತಲ್ಲಣಗಳೇ ಕಾದಂಬರಿಯ ಜೀವಾಳ.

ಈ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದದ್ದು. ಹಳ್ಳಿಯಿಂದ ಬೆಂಗಳೂರಿಗೆ ಬಂದ ಕೈಲಸಂ ರ ಬೋರೇಗೌಡನ ಹಾಡು, ಹನೇಹಳ್ಳಿಯಿಂದ ಮುಂಬೈಗೆ ಬಂದ ಚಿತ್ತಾಲರ ಶಿಕಾರಿ ಕಾದಂಬರಿ, ಭಾರತದಿಂದ ಇಂಗ್ಲಂಡಿಗೆ ಹೊರಟು ನಿಂತ ಶಾಂತಿನಾಥ ದೇಸಾಯಿಯವರ ಕ್ಷಿತಿಜದ ಕತೆ - ಹೀಗೆ ಬೆಳೆಯುತ್ತಿರುವ ಆಧುನಿಕ ಕನ್ನಡ ಸಾಹಿತ್ಯಕ್ಕೆ ಅಮೇರಿಕದಲ್ಲೇ ನೆಲೆಸಿರುವ ಮೊದಲ ಪೀಳಿಗೆಯ ಯುವ ಕನ್ನಡಿಗರ ಕಾದಂಬರಿಯನ್ನು ಕಾಗಿನೆಲೆ ಸೇರಿಸಿದ್ದಾರೆ. ಕಾದಂಬರಿಯಲ್ಲಿ ಯಥೇಚ್ಛವಾಗಿ ಇಂಗ್ಲೀಷ್ ಪದಗಳನ್ನು ಸಕಾರಣವಾಗಿಯೇ ಯಾವ ಮಡಿಯಿಲ್ಲದೇ ಉಪಯೋಗಿಸಿ, ಕೆಲವೇ ಕೆಲವು ಇಂಗ್ಲೀಷ್ ಶಬ್ದಗಳನ್ನು ಪ್ರಯತ್ನಪೂರ್ವಕವಾಗಿ ಕನ್ನಡೀಕರಿಸಿ (ಡಾಕ್ಟರ್ = ಧನ್ವಂತ್ರಿ, ಸಾಫ್ಟ್ ವೇರ್ = ಮೃದುಯಂತ್ರಿ, ಕಾಲೇಜ್ = ಗುರುಕುಲ, ಲ್ಯಾಪ್ ಟಾಪ್ = ತೊಡೆಮೇಲಿಗ, ವಾರ್ಡು = ಪಾಳಯ) ಕಾದಂಬರಿಗೆ ಹೊಸ ಭಾಷೆಯನ್ನೇ ತರುತ್ತಾರೆ. ಅವರು ಧನ್ವಂತ್ರಿ, ಪಾಳಯ ಅಂತ ಬರೆಯದೇ ಡಾಕ್ಟರ್, ವಾರ್ಡು ಅಂತ ಬರೆದಿದ್ದರೆ ಕಾದಂಬರಿ ಈಗ ಮಾಡುವ ಪರಿಣಾಮವನ್ನು ಮಾಡುತ್ತಿರಲಿಲ್ಲವೇನೋ ಅಂತ ಅನಿಸದೇ ಇರದು. (ಅವರೇ ಮುನ್ನುಡಿಯಲ್ಲಿ ಬರೆದಿರುವಂತೆ) ಇಂಗ್ಲೀಷ್ ಭಾಷೆ ಮತ್ತು ಸಂಸ್ಕೃತಿ ನಮ್ಮಲ್ಲಿ ಮಾಡಿರುವ ವಿಪ್ಲವ ಮತ್ತು ಅತಂತ್ರ ಸ್ಥಿತಿಯನ್ನು, ನಮ್ಮದಲ್ಲದ್ದನ್ನು ನಮ್ಮದಾಗಿಸಿಕೊಳ್ಳುವ ಕ್ರಿಯೆ ಮಾಡುವ ಕಿರಿಕಿರಿಯನ್ನು ಈ ಕನ್ನಡೀಕರಣ ಕನ್ನಡಿ ಹಿಡಿಯುತ್ತದೆ.

ಇನ್ನೊಂದು ಮಾತು. ಇಂಗ್ಲೀಷಿನಲ್ಲಿ ಬರೆಯುವ ಅವಾರ್ಡು ವಿಜೇತ ಭಾರತೀಯರ (ನಿವಾಸಿ ಮತ್ತು ಅನಿವಾಸಿ) ಎಷ್ಟೋ ಕತೆ ಕಾದಂಬರಿಗಳಿಗಿಂತ ಈ ಕಾದಂಬರಿ ತುಂಬ ಚೆನಾಗಿ ಮೂಡಿಬಂದಿದೆ. ಏಕೆಂದರೆ, ಆ ಬರಹಗಾರರು ಬರೆಯುವಾಗ ಅವರ ದೄಷ್ಟಿಯಲ್ಲಿರುವವರು ಪಾಶ್ಚಾತ್ಯರು, ಪಶ್ಚಿಮವನ್ನು ಮೆಚ್ಚಿಸುವ ಉದ್ದೇಶವಿರುವವರು. ಕಾಗಿನೆಲೆಯವರಿಗೆ ಆ ಭಯವೇ ಇಲ್ಲ, ಅವರು ಕನ್ನಡದವರನ್ನೂ ಮೆಚ್ಚಿಸಬೇಕಿಲ್ಲ, ಪಶ್ಚಿಮವನ್ನೂ ಮೆಚ್ಚಿಸಬೇಕಿಲ್ಲ. ಅಮೇರಿಗನ್ನಡದ ಯುವಜನತೆಯ ಸುಖ, ಭಯ, ದಿಗಿಲುಗಳನ್ನು ಯಾವ ಮುಲಾಜಿಲ್ಲದೇ ತಮ್ಮ ಟ್ರೇಡ್ ಮಾರ್ಕ್ ಶೈಲಿಯಲ್ಲಿ ಬ್ಲಾಗಿನ ಬರಹಗಳಂತೆ ಬರೆದು ಮುಗಿಸುತ್ತಾರೆ.

ಶ್ರೀಧರ ಮತ್ತು ನಾಗೇಶನ ಪಾತ್ರ ತುಂಬ ವಾಸ್ತವಿಕವಾಗಿ ಬಂದಿವೆ; ಕಾದಂಬರಿಯಲ್ಲಿನ ತುಂಬ ಸೂಕ್ಷ್ಮ ಪಾತ್ರ ರಶ್ಮಿಯದು -ಪಾತ್ರ ಸ್ವಲ್ಪ ಕೃತಕ ಎನಿಸಿದರೂ ಅದು ಕಾದಂಬರಿಯ ವಸ್ತುವಿಗೆ ಅನಿವಾರ್ಯವಾಗಿದೆ. ಯಾವುದನ್ನೂ ವ್ಯಾಚ್ಯ ಮಾಡದೇ ಕಾದಂಬರಿ ಎಷ್ಟೊಂದು ದಿಟ್ಟ ಪ್ರಶ್ನೆಗಳನ್ನು ಎತ್ತುತ್ತೆ!

ಶ್ರೀಧರ - ರಶ್ಮಿಯ ತಂದೆ (ಮಾಧವರಾಯ) ರಾಣೇಬೆನ್ನೂರಿನಿಂದ ನಾಗಮಂಗಲಕ್ಕೆ ವಲಸೆ ಹೋಗುವುದು, ಈಗಿನ ಜನಾಂಗ ಭಾರತದಿಂದ ಅಮೇರಿಕಕ್ಕೆ ವಲಸೆ ಹೋಗುವುದಕ್ಕೂ ಹೋಲಿಸಿನೋಡಿ. ಮಾಧವರಾಯರ ಕಾಲಕ್ಕೆ ಈ ವಲಸೆಯ ತುಂಬ ತುಂಬಿದ ಪ್ರಶ್ನೆಗಳು: ತಮ್ಮ ಆಚಾರವನ್ನು ನಡೆಸಿಕೊಂಡು ಹೋಗಲು ಆಗಿತ್ತೋ ಇಲ್ಲವೋ, ತಮ್ಮ ಒಳಜಾತಿಯ ಕನ್ಯೆ ಸಿಗುತ್ತಾಳೋ ಇಲ್ಲವೋ, ಎಂಬವು. ಮಾಧವರಾಯರು ವಲಸೆ ಬಂದರೂ ಅವರ ಆಚಾರ ವಿಚಾರಗಳೇನೂ ಬದಲಾಗುಗುವುದಿಲ್ಲ; ಅದೇ ಆಚಾರ, ಅದೇ ಭಾಗವತ. ಅದೇ ಮಕ್ಕಳು ಅಮೇರಿಕಕ್ಕೆ ಹೊರಟು ನಿಂತಾಗ ಅವರಲ್ಲಿ ಇಂಥ ಪ್ರಶ್ನೆಗಳೇ ಇಲ್ಲ. ಅಮೇರಿಕದಲ್ಲಿದ್ದಾ ಅವರಲ್ಲಿ ಒಮ್ಮೆಯೂ ತಮ್ಮ ಬಾಲ್ಯದ ಸಂಸ್ಕಾರ, ಆಚರಣೆ, ನಂಬಿಕೆ ಇತ್ಯಾದಿಗಳು ಗೊಂದಲಗಳನ್ನು ಹುಟ್ಟಿಸುವುದೇ ಇಲ್ಲ (ಈಗಿನ ಜನಾಂಗ ನವ್ಯದ ಕತೆ ಕಾದಂಬರಿಗಳ ನಾಯಕ ನಾಯಕಿಯರಂತೆ ಅಲ್ಲ ಎಂಬುದು ಎಷಟು ಸತ್ಯ!); ಅವರ ತುಡಿತವೇನಿದ್ದರೂ ಅಮೇರಿಕದ ಆಚರಣೆಗೆ ಅದಷ್ಟು ಬೇಗ ಹೊಂದಿಕೊಳ್ಳುವುದು.

ಶ್ರೀಧರ ಪ್ರೇಮಿಸದೇ ಬೆಟ್ಟಿಯನ್ನು ಬಸಿರು ಮಾಡುವುದು, ಬಸಿರು ಗೊತ್ತಾದ ಮೇಲೆ ಮದುವೆಯಾಗಲೇ ಎಂದು ಯೋಚಿಸುವುದು; ರಶ್ಮಿ ಕೂಡ ಪ್ರೇಮಿಸದೇ ನಾಗೇಶನ ಬಸಿರು ಪಡೆದಿರಬಹುದೆಂದು ಓಡಾಡುವುದು, ಹಲುಬುವುದು - ಪ್ರೇಮ, ಲೈಂಗಿಕತೆ ಮತ್ತು 'ಬಿಡುಗಡೆ'ಗಳ ಹೊಸ ಲೋಕವನ್ನೇ ಅಮೇರಿಕ ತೆರೆಸುತ್ತದೆ. ಇದೇ ರಶ್ಮಿ- ನಾಗೇಶ ಭಾರತದಲ್ಲಿದ್ದರೆ living together ಮಾಡುತ್ತಿದ್ದರೇ; ಶ್ರೀಧರ ನರ್ಸನ್ನು ಬಸಿರು ಮಾಡಿ ಬೆಂಗಳೂರಿನಲ್ಲಿ ಆರಾಮವಾಗಿ ಅದೇ ಆಸ್ಪತ್ರೆಯಲ್ಲೇ ಕೆಲಸ ಮಾಡಿಕೊಂಡು ಬದುಕಲು ಆಗುತ್ತಿತ್ತೇ. ಭಾರತದಲ್ಲಿ ಅಸಾಧ್ಯವೆನಿಸುವಂಥದು ಅಮೇರಿಕದಲ್ಲಿ 'ಸಹಜ' ಎನಿಸಲು ಶುರುವಾಗುತ್ತೆ. ಅದರೆ ಮಳೆ ಬರುವಾಗ ಮುದುಕರಿಗೆ ಕಾರಿನಲ್ಲಿ ಲಿಫ್ಟ್ ಕೊಡುವುದು ಭಾರತದಂಥ ದೇಶದಲ್ಲಿ ಸಹಜವೆನಿಸಿದರೆ, ಅಮೇರಿಕದಲ್ಲಿ ಅದು ಲೀಗಲ್ ಬಂಧನಗಾಗಲು ಶುರುವಾಗುತ್ತದೆ. ರಶ್ಮಿ ನಾಗೇಶರ ಸಂಬಂಧ ರೋಮ್ಯಾಂಟಿಕ್ ಆಗದೇ ವೈಚಾರಿಕವಾಗಿಯೂ ಗಟ್ಟಿಯಾಗದೇ ಶಿಥಿಲಗೊಳ್ಳುತ್ತದೆ. ಅವಳಿಗಳ ನಡುವೆ ವಯೋಸಹಜವಾದ ಭ್ರಾತೃಪ್ರೇಮವೂ ನಶಿಸಿ ಹೋಗುತ್ತದೆ.

ನಾಗಮಂಗಲದಲ್ಲಿ ಪರಸ್ಪರ ಈರ್ಷೆ ಇದ್ದರೂ ಒಬ್ಬರನ್ನೊಬ್ಬರು ಬಿಟ್ಟುಕೊಡದ (ರಶ್ಮಿಯ ಫೋಟೊ ಪ್ರಕರಣ, ಶ್ರೀಧರನ ಸೈಕಲ್ ಪ್ರಕರಣ) ಅವಳಿಗಳು ಅಮೇರಿಕದಲ್ಲಿ ಪರಸ್ಪರ ಫೋನಿನಲ್ಲೂ ಕ್ಷೇಮ ವಿಚಾರಿಸದ ಸ್ಥಿತಿಗೆ ಬರುವುದು; ತಂದೆ ಸತ್ತಾಗ ಭಾವೋದ್ವೇಗವಿಲ್ಲದೇ ಇಬ್ಬರೂ ವ್ಯವಹಾರದಂತೆ ವರ್ತಿಸುವುದು; ತಾಯಿಯ ವಿಳಾಸವೇ ಗೊತ್ತಿಲ್ಲದಿದ್ದರೂ, ತಾಯಿ ಬದುಕಿದಾಳೋ ಸತ್ತಿದ್ದಾಳೋ ಅರಿವಿಲ್ಲದಿದ್ದರೂ, ತಮ್ಮ ತಮ್ಮ ಕೆಲಸಗಳೇ ಮುಖ್ಯವೆಂದು ಬದುಕುವುದು - ನಮಗೆ ಗೊತ್ತಿಲ್ಲದಂತೇ ಮುಂದುವರಿದ ದೇಶಗಳು ನಮ್ಮನ್ನು ಬದಲಿಸುವ ಪ್ರಕ್ರಿಯೆ ಗಾಬರಿ ಹುಟ್ಟಿಸುತ್ತದೆ.

ಕತೆಯ ಕೊನೆ ಕೊನೆಯಲ್ಲಿ, ನನಗೇಕೋ ಖಾಸನೀಸರ ತಬ್ಬಲಿಗಳು ಕತೆ ತುಂಬ ನೆನಪಾಯಿತು.

Saturday 11 August 2007

ಪಾಪ-ಪುಣ್ಯ

ಈ ಭೂಮಿಯಾಚೆ ದೂರದೊಂದು ಗ್ರಹದಲ್ಲಿ 
ಜನ ಬದುಕಿದ್ದಾರಂತೆ 
ಅಲ್ಲಿ ಸತ್ತವರೆಲ್ಲ ಈ ಭೂಮಿ ಮೇಲೆ 
ನಾವು ನೀವಾಗಿ ಹುಟ್ಟುತ್ತಾರಂತೆ 

ಅಲ್ಲಿ ಪಾಪ ಮಾಡಿದವರು ಇಲ್ಲಿ ಬದುಕುತ್ತಾರಂತೆ ಕಷ್ಟಪಟ್ಟು 
ಸಾಲೊಲ್ಲ ತಿಂಗಳ ಸಂಬಳ ತಿಂಗಳಿಗೆ 
ಸೇದೊಲ್ಲ ಕುಡಯೊಲ್ಲ 
ಹೆಂಡತಿಯ (ಅಥವಾ ಗಂಡನ) ಬಿಟ್ಟಿನ್ನೊಬ್ಬರನು ಮುಟ್ಟಿಲ್ಲ 
ಮಗನಗಿನ್ನೂ ನೌಕರಿಯಿಲ್ಲ 
ಮಗಳಿಗೆ ಮದುವೆಯಾಗಿಲ್ಲ 
ಜೊತೆಗಿದೆ ಬಿಪಿ ಸಕ್ಕರೆಕಾಯಿಲೆ 
ಆಸ್ಪತ್ರೆಯಲ್ಲಿ ನರಳಿ ತಿಂಗಳುಗಟ್ಟಲೇ 
ಇಷ್ಟುದ್ದ ಸಾಲಬಿಟ್ಟು ಸಾಯುತ್ತಾರೆ 
ಮತ್ತೆ ಆ ಲೋಕದಲ್ಲಿ ಹುಟ್ಟುತ್ತಾರೆ 

ಅಲ್ಲಿ ಪುಣ್ಯ ಗಳಿಸಿದವರು 
ಬೆಳ್ಳಿ ಚಮಚ ಬಾಯಲ್ಲಿಟ್ಟು ಇಲ್ಲಿ ಹುಟ್ಟುತಾರಂತೆ 
ಕಪ್ಪುಹಣ ಮನೆ ತುಂಬ 
ಮಕ್ಕಳನ್ನು ಓದಲು ಅಮೇರಿಕಕೆ ಕಳಿಸುತ್ತಾರೆ 
ನೆಗಡಿಯಾದರೆ ಸಾಕು ಅಪೋಲೊ ಆಸ್ಪತ್ರೆ ಸೇರುತ್ತಾರೆ 
ಮಗಳ (ಅಥವಾ ಮಗನ) ವಯಸಿನ ಸುಂದರಿಯ ಸವರಿ 
ಎಪ್ಪತ್ತರಲ್ಲಿ ವಯಾಗ್ರ ನುಂಗಿ ಯಯಾತಿಯಾಗುತ್ತಾರೆ

Thursday 12 July 2007

ಬಾ ನನ್ನ ಜೊತೆ

ಬಾ ನನ್ನ ಜೊತೆ 
ನಾ ಕರೆದೊಯ್ಯುವೆ 
ಆ ದೂರ ಗಗನದೆಡೆ

ಎಲ್ಲಿ ದುಃಖವಿರದೋ 
ಕಣ್ಣೀರಿರದೋ 
ಆ ದೂರ ಗಗನದೆಡೆ

ಸೂರ್ಯನ ಮೊದಲನೆ ಕಿರಣ 
ಆಸೆಯ ಬೆಳಕಿನ ಸ್ಫುರಣ 
ಚಂದ್ರನ ತಿಂಗಳ ಬೆಳಕು 
ಅಂಧಕಾರ ಹೋಯಿತು ಹೊರಕು

ಬಿಸಿಲೇ ಇರಲಿ 
ನೆರಳೇ ಬರಲಿ 
ನಮ್ಮ ದಾರಿ ಗಮ್ಯದೆಡೆ

ಕಣ್ಣನ್ನು ಚಾಚಿದಷ್ಟು 
ಮುಕ್ತ ಗಗನದ ನೋಟ 
ಅಲ್ಲಿ ರಂಗು ರಂಗಿನ ಹಕ್ಕಿ 
ಆಸೆ ಸಂದೇಶವ ತರಲಿ 

ಕನಸಿನ ಚಿಗುರು 
ನಳನಳಿಸಿರಲು 
ಸಂಜೆಯ ತಳಿರಿನೆಡೆ 

(ಕಿಶೋರ್ ಕುಮಾರ್ ಬರೆದು ರಾಗ ಸಂಯೋಜಿಸಿ ಹಾಡಿದ  `ಆ ಚಲ್ ಕೆ ತುಝೆ` ಕವನದ ಕನ್ನಡದ ಅನುವಾದ)

Sunday 24 June 2007

ಸಿನೆಮಾ: ಹಿಂದಿ: ಯಾತ್ರಾ


ಗೌತಮ್ ಘೋಷ್, ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬ. ಶ್ಯಾಮ್ ಬೆನಗಲ್, ಗೋವಿಂದ್ ನಿಹಲಾನಿಯವರಿಗಿಂತ ಸಂಕೀರ್ಣವಾದ ವಸ್ತುಗಳನ್ನು ಕ್ಯಾಮರಾದಲ್ಲಿ ಕತೆಯಾಗಿಸಿದವರು. 'ಮಾ ಭೂಮಿ' ಎಂಬ ತೆಲುಗು ಚಿತ್ರದಿಂದ ತಮ್ಮ ನಿರ್ದೇಶನವನ್ನು ಆರಂಭಿಸಿದ ಘೋಷ್, ೨೭ ವರ್ಷಗಳಲ್ಲಿ ನಿರ್ದೇಶಿಸಿದ್ದು ಕೇವಲ ೭ ಚಿತ್ರಗಳು. ಯಾತ್ರಾ - ಅವರ ಏಳನೇ ಚಿತ್ರ. ನಾನಾ ಪಾಟೆಕರ್, ದೀಪ್ತಿ, ರೇಖಾ ಅಭಿನಯದ ಚಿತ್ರ.

ದಶರಥ ಜೋಗಳೇಕರ್, ಒಬ್ಬ ಖ್ಯಾತ ಬರಹಗಾರ, ಕಾದಂಬರಿಕಾರ. ಆತನಿಗೆ ಅವಾರ್ಡುಕೊಟ್ಟು ಸತ್ಕರಿಸಲು ಆತನಿಗೆ ದಿಲ್ಲಿಗೆ ಆಮಂತ್ರಣ. ಪ್ರಥಮ ಬಾರಿಗೆ ಅಂಥ ಕಾರ್ಯಕ್ರಮವನ್ನು ಒಂದು ದೊಡ್ಡ ಕಂಪನಿ ಪ್ರಾಯೋಜಿಸಿರುತ್ತೆ. ಕಾದಂಬರಿಕಾರನನ್ನು ಎಸ್ಕಾರ್ಟು ಮಾಡಲು ಒಂದು ಯುವತಿ ಬೇರೆ. ಬರಹಗಾರನ ಮನೆಯವರೆಲ್ಲ (ಹೆಂಡತಿ, ತಾಯಿ, ವಯಸ್ಸಿಗೆ ಬಂದ ಇಬ್ಬರು ಮಕ್ಕಳು) ಸಿಕ್ಕಾಪಟ್ಟೆ ರಿಯಾಯತಿಯಲ್ಲಿ ಮಾರುವ ಸುಪರ್ ಮಾಲ್ ಒಂದಕ್ಕೆ ಹೋಗಿರುತ್ತಾರೆ. ಅದನ್ನೇ ತಲೆಯಲ್ಲಿ ತುಂಬಿಕೊಂಡು 'ಬಾಜಾರ್' ಎನ್ನುವ ಕಾದಂಬರಿಯೊಂದಕ್ಕೆ ಸಿದ್ಧತೆ ಶುರುವಿಟ್ಟುಕೊಂಡು ದಿಲ್ಲಿಗೆ ಹೊರಡುತ್ತಾನೆ.

ರೈಲಿನಲ್ಲಿ ಆತನಿಗೆ ಇವನ ದೊಡ್ಡ ಅಭಿಮಾನಿ ಯುವನಿರ್ದೇಶಕ ಜೊತೆಯಾಗುತ್ತಾನೆ. ಇಬ್ಬರೂ ಆತನ ಪ್ರಸಿದ್ಧ ಕೃತಿ ಜನಾಝಾವನ್ನು ಮೆಲುಕು ಹಾಕುತ್ತಾರೆ. 'ಬರಹಗಾರ' ಕತೆ 'ಹೇಳಲು' ಆರಂಭಿಸುತ್ತಾನೆ, ಆದ್ದರಿಂದ fact ಯಾವುದು, fiction ಯಾವುದು ಗೊತ್ತಾಗದೇ, fact and fiction ನಡುವಿನ ಎಳೆ ಎಲ್ಲೋ ಕಳಚಿಕೊಂಡು ಬಿಡುತ್ತದೆ. ಯುವನಿರ್ದೇಶಕ ಕಾದಂಬರಿಕಾರ ಹೇಳುತ್ತಿರುವುದನ್ನು ಸಿನಿಮಾಟಿಕ್ ಆಗಿ ಗ್ರಹಿಸುತ್ತಿದ್ದಾನೆ. ಸೃಜನಶೀಲತೆಯ ಯಾತ್ರೆಯಿದು: between fact and fiction, ಕತೆ ಬರೆಯುವುದು ಮತ್ತು ಹೇಳುವುದು, ಕಾದಂಬರಿ ಮತ್ತು ಸಿನಿಮಾ...ಈ ಸಂಕೀರ್ಣತೆಯನ್ನು ನಾನು ಶಬ್ದದಲ್ಲಿ ಹಿಡಿಯಲು ಸಾಧ್ಯವೇ ಇಲ್ಲ, ಚಿತ್ರ ನೋಡಿಯೇ ಅನುಭವಿಸಬೇಕು. ಕಾದಂಬರಿಕಾರ ಹೇಳುತ್ತಾನೆ: ಈ ಕಾದಂಬರಿಯನ್ನು ಮತ್ತೊಮ್ಮೆ ಬರೆಯಬೇಕು.

ಕಾದಂಬರಿಕಾರ ಪ್ರಶಸ್ತಿ ಸ್ವೀಕರಿಸಿ ಹೊಟೀಲ್ ರೂಮಿಗೆ ಬಂದಾಗ ತಲೆತುಂಬ 'ಬಾಜಾರ್' ನ ಸಾಮಗ್ರಿಗಳು: ಡಿಸ್ಕೌಂಟಿನಲ್ಲಿ ಪ್ರೀತಿ-ಪ್ರೇಮಗಳನ್ನು ಮಾರಾಟಕ್ಕಿಟ್ಟಂತೆ, ಪ್ರಿಯಕರನ ಜೊತೆಗಿನ ಪ್ರಣಯ ಇಂಟರ್ನೆಟ್ಟಿನಲ್ಲಿ ಮಾರಾಟಕ್ಕಿಟ್ಟಂತೆ, ಹಿಂದು-ಮುಸ್ಲೀಮ್ ಗಲಭೆಯಲ್ಲಿ ಪೆಟ್ಟು ತಿಂದಿರುವ ಯುವಕನ ಹತಾಶೆ ಟಿವಿ anchor ಮುಂದೆ ಮಾರಾಟಕ್ಕಿಟ್ಟಂತೆ, ಇತ್ಯಾದಿಗಳನ್ನು ತುಂಬಿಕೊಂಡು ಕಾದಂಬರಿ ಬರೆಯಲು ಆರಂಭಿಸುತ್ತಾನೆ.

ಕಾದಂಬರಿಕಾರ ಜನಾಝಾ ಕಾದಂಬರಿಯ ಸ್ಫೂರ್ತಿಯಾದ ನಾಚ್ ವಾಲಿಯನ್ನು ನೋಡಲು ಹೈದರಾಬಾದಿಗೆ ಬರುತ್ತಾನೆ. ಆತ ನಾಪತ್ತೆಯಾಗಿರುವ ಸುದ್ದಿ ಹರಡಲು ಬಹಳ ಹೊತ್ತೇನೂ ಹಿಡಿಯುವುದಿಲ್ಲ. ಕಾದಂಬರಿಕಾರ ನಾಚ್ ವಾಲಿಯ ತೋಲಿನಲ್ಲಿ ಸಾಯುತ್ತಾನೆ. ಆಕೆ ಆತನ ಹೆಸರು ಕೆಡದಿರಲಿ ಎಂದು ಹೆಣವನ್ನು ಸಾಗಹಾಕುತ್ತಾಳೆ. ಅದೇ ವೇಳೆಗೆ ಕಾದಂಬರಿಕಾರನ ಹೆಂಡತಿ ನಾಚ್ ವಾಲಿಯ ಹತ್ತಿರ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. Fact meets the fiction. 'ಬಾಜಾರ್' ನ ಹಾಳೆಗಳು ಹಾರಾಡುತ್ತವೆ.

ಸೃಜನಶೀಲ ಬರಹಗಾರನ ತೊಳಲಾಟಗಳನ್ನು ತುಂಬ ಸಮರ್ಥವಾಗಿ ಚಿತ್ರಿಸಿದ್ದಾರೆ, ಘೋಷ್. ಹಾಗೆಂದು, ಚಿತ್ರದಲ್ಲಿ ದೋಷಗಳೇ ಇಲ್ಲವೆಂದಲ್ಲ. ' ಗಾಂಧಿಯನ್ನು ಗೋಡ್ಸೆ ಒಮ್ಮೆ ಕೊಂದ, ನಾವು ದಿನವೂ ಕೊಲ್ಲುತ್ತಿದ್ದೇವೆ' ಎಂದು ಕ್ಲಿಷೆಯ ಮಾತುಗಳು ಸುಮಾರಿವೆ. ಚಿತ್ರದ ಸಣ್ಣ ಪುಟ್ಟ ಕೊರತೆಗಳನ್ನು ಮರೆತುಬಿಡಿ, ತುಂಬಾ ದಿನಗಳ ನಂತರ ಒಳ್ಳೆಯ ಚಿತ್ರ ನೋಡಿ ಮೆಲುಕು ಹಾಕುತ್ತಿದ್ದೇನೆ, ನೀವೂ ನೋಡಿ.

ಅಂದಹಾಗೆ, ಹಿಂದುಸ್ತಾನಿ ಸಂಗೀತಪ್ರಿಯರಿಗೆ ಈ ಚಿತ್ರದ ಹಾಡುಗಳು ಹುಚ್ಚು ಹಿಡಿಸುವಲ್ಲಿ ಸಂಶಯವೇ ಇಲ್ಲ.

ಈ ಸಿನೆಮಾವನ್ನು ನೋಡಲು ಇಲ್ಲಿ ಒತ್ತಿ.

Saturday 16 June 2007

ಪುಸ್ತಕ: ಗುರುಪ್ರಸಾದ ಕಾಗಿನೆಲೆ: ಶಕುಂತಳಾ


`ಶಕುಂತಳಾ` ಕಥಾಸಂಕಲನ ನನ್ನನ್ನು ಸೆಳೆದದ್ದು ಅದು ಉಪಯೋಗಿಸಿದ ಭಾಷೆಯಿಂದ; ಇಷ್ಟು ದಿನ ನನ್ನನ್ನು ಕಾಡಿದ ಭಾಷಾಸಮಸ್ಯೆಯನ್ನು, ಅದು ಸಮಸ್ಯೆಯೇ ಅಲ್ಲ ಎನ್ನುವಂತೆ ಬರೆದ ಧಾಟಿಯಿಂದ; ಕನ್ನಡಕೊಂದು ಹೊಸ ಎನರ್ಜಿ ತಂದ ಬಗೆಯಿಂದ; ಅಪರಿಚಿತ ಸಂಸ್ಕೃತಿಯಲ್ಲಿ ಬದುಕುತ್ತಿರುವ ಅನಿವಾಸಿ ಭಾರತೀಯರಿಗೆ ಎದುರಾಗುವ ಘಟನೆಗಳನ್ನು ಕನ್ನಡಕ್ಕೆ ಅಳವಡಿಸಿದ ರೀತಿಯಿಂದ; ಸುಮ್ಮಸುಮ್ಮನೇ ಕಷ್ಟದ ಕನ್ನಡ ಸಮಾನಾರ್ಥಕ ಪದಗಳನ್ನು ಉಪಯೋಗಿಸದೇ ಇಂಗ್ಲೀಷನ್ನೇ ಕನ್ನಡ ಪದಗಳನ್ನಾಗಿಸಿದ ಸಹಜತೆಯಿಂದ. ನಾನೂ ಅವರಂತೆ ಪಾಶ್ಚಾತ್ಯ ದೇಶದ ವೈದ್ಯಕೀಯ ಕ್ಷೇತ್ರದಲ್ಲೇ ಇರುವುದರಿಂದ ಈ ಕತೆಗಳು ನನಗೆ ಇನ್ನೂ ಆಪ್ತವಾಗಿವೆ.

ಅಲಬಾಮಾದ ಅಪಾನವಾಯು ಸೆಳೆಯುವುದು ಅದರ ನವಿರಾದ ತಿಳಿ ಹಾಸ್ಯದ ಹೊಸ ಭಾಷೆಯಿಂದ. ಪಾಶ್ಚಾತ್ಯ ದೇಶಗಳ ಕಾರ್ಯವೈಖರಿಯನ್ನು ನವಿರಾಗಿ ಲೇವಡಿಮಾಡುತ್ತಾ ಅಂತ್ಯದಲ್ಲಿ ಫಾರಿನ್ ರಿಟರ್ನ್ಡ್ ಡಾಕ್ಟರನ್ನೂ ಐರನಿಯಲ್ಲಿ ಕೂರಿಸುತ್ತಾರೆ. ಮೇಲುಪದರಿನಲ್ಲಿ ಹಾಸ್ಯವೇ ಈ ಕತೆಯ ಜೀವವಾಗಿದ್ದರೂ, ಒಳಗಿಳಿದಂತೆ ಪೇಪರ್ ವರ್ಕ್, ಮೀಟಿಂಗಳು, ಮಾತು ಮಾತಿಗೆ ಗೈಡ್ ಲೈನ್ಸ್, ರಿಸ್ಕ್ ಮ್ಯಾನೇಜ್ಮೆಂಟ್ ಅನ್ನುತ್ತಾ ಚಿಕ್ಕ ಪುಟ್ಟ ಅನಾಹುತಕಾರಿಯಲ್ಲದ ಘಟನೆಗಳನ್ನು ದೊಡ್ದದನ್ನಗಿಸಿ ಹಾಸ್ಯಪ್ರಜ್ನೆ ಕಳೆದುಕೊಂಡಿರುವ ಇಲ್ಲವನ್ನೂ ದುಡ್ದಿನಲ್ಲಿ ಅಳೆಯುವ ಪಾಶ್ಚಾತ್ಯರ ಕ್ಯಾಪಿಟಲಿಸಂನ್ನು ಗೇಲಿಮಾಡಿದ್ದಾರೆ.

ಬೀಜ, ಒಂಥರ ಐರನಿಕಲ್ ಹಾಸ್ಯದ ಕತೆ. ಮೆಡಿಕಲ್ ಬ್ಯಾಕ್ರೌಂಡ್ ಇಲ್ಲದವರಿಗೆ ಕೆಲ ಶಬ್ದಗಳು ಅರ್ಥವಾಗದಿದ್ದರೂ ಕತೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವೇನೂ ಆಗುವುದಿಲ್ಲ. ಪಾಶ್ಚಾತ್ಯದೇಶಗಳಲ್ಲಿ ಬೆಳೆದ ಭಾರತೀಯ ಮಕ್ಕಳ ಮನೋಭಾವವನ್ನು ಯಾವ ಭಾವಾತಿರೇಕವಿಲ್ಲದೇ ರಿಯಲಿಸ್ಟಿಕ್ ಆಗಿ ಚಿತ್ರಿಸಿದ್ದಾರೆ, ಅದರಿಂದಾಗಿ ಪಿತೃಗಳಿಗಾಗುವ ಪೀಕಲಾಟವನ್ನೂ ಅಷ್ಟೇ ಸಂಯಮದಿಂದ ಚಿತ್ರಿಸಿದ್ದಾರೆ. ಈ ಕತೆಯಲ್ಲಿ ಅಂಡರ್ ಕರೆಂಟಾಗಿ ಹರಿಯುವುದು ಸೆಕ್ಸ್ ಅಂತ ನನ್ನ ಅನಿಸಿಕೆ: ಬೀಜದ ಕ್ಯಾನ್ಸರ್, ಟಿನೇಜ್ ಮಗನಿಗೆ ಸ್ಖಲನದ ಬಗ್ಗೆ ಮಾತಾಡುವ ಭಾರತೀಯ ಪಿತೃಗಳ ಗೊಂದಲ, ಹುಡುಗನಿಗೆ ಯಾವ ಹಿರೋಯಿನ್ ಇಷ್ಟವಿಲ್ಲದೇ ಶಾರೂಖ್ ನನ್ನು ಪ್ರಾಣಹೋಗುವಷ್ಟು ಇಷ್ಟಪಡುವುದು, ಶಾರೂಖ್ ಗೆ ಇರಬಹುದೇ ಎಂದು ಸಂಶಯ ಪಡುವುದು...ಒಂದಕ್ಕೊಂದು ಕೊಂಡಿಯಂತೆ ಸಾಗುತ್ತದೆ.

ಡ್ಯಾಡಿ, ಇನ್ನೊಂದು ನವಿರು ಹಾಸ್ಯದ ಕತೆ. ಪಾಶ್ಚಾತ್ಯ ಬದುಕಿನಲ್ಲಿ ಏಗುವ ತಂದೆಯ ಬದುಕನ್ನು ವ್ಯಂಗ್ಯವಿಲ್ಲದೇ, ಲೇವಡಿ ಮಾಡದೇ ಸೊಗಸಾಗಿ ಬರೆದಿದ್ದಾರೆ. ಇದೇ ಹಾಸ್ಯದ ಇನ್ನೊಂದು ಸೊಗಸಾದ ಕತೆ, ಮೊದಲ ತೇದಿ. ಕನ್ನಡ-ಕಥೆಯ ಶ್ರೀರಾಂ ಈ ಕತೆಯನ್ನು ತುಂಬ ಚೆನ್ನಾಗಿ ವಿಶ್ಲೇಸಿಸಿದ್ದಾರೆ.
ನನಗೆ ಇನ್ನೊಂದು ಇಷ್ಟವಾದ ಕತೆ, ವಿಲ್ಲಾ ವೈದ್ಯ. ಮತ್ತು ಅದರ ಜೊತೆಜೊತೆಗೇ ನಡೆದಿರಬಹುದಾದ ಕತೆ, ಸುಮ್ಮನೆ.

ದೆಜಾ ವೂ, ಗಾಳಿಪಟ, ಶಕುಂತಳಾ, ಸಿರಿಸಂಜೆ - ಈ ಕತೆಗಳು ಬಹುಷಃ ವಿಮರ್ಶಕರನ್ನು ಮೆಚ್ಚಿಸಲು ಅಥವಾ ಕಥಾ ಸ್ಪರ್ದೆಯಲ್ಲಿ ಗೆಲ್ಲಲು ಅಥವಾ ಗಂಭೀರ ಸಾಹಿತ್ಯ ಸೃಷ್ಟಿಸಲು ತಿಣುಕಾಡಿ ಬರೆದಂಥವುಗಳು. ಆದರೆ ಈ ಕತೆಗಳಿಗಿಂತ, ಸರಳ ಭಾಷೆಯಲ್ಲಿ ಸುಲಲಿತವಾಗಿ ಎಲ್ಲರಿಗೆ ತಿಳಿಯುವಂತೆ ಬರೆದ ಉಳಿದ ಕತೆಗಳೇ ಹೆಚ್ಚು ಅರ್ಥವನ್ನು ಹೊಮ್ಮಿಸುತ್ತವೆ.

ಈ ಪುಸ್ತಕವನ್ನು ಇಲ್ಲಿ ಕೊಳ್ಳಬಹುದು