Sunday 8 May 2022

ನವಿಲು ಕೊಂದ ಹುಡುಗ - ಸಚಿನ್ ತೀರ್ಥಹಳ್ಳಿ

 

(Double Click on the image to read)

(ಉದಯವಾಣಿ ಎನ್ ಆರ್ ಐ ಆವೃತ್ತಿ ೮-೫-೨೦೨೨ ರಂದು ಪ್ರಕಟಿತ)

Saturday 12 February 2022

ಇಂಗ್ಲೆಂಡ್ ಪತ್ರ 17

 ಅನಿವಾಸಿ ಕನ್ನಡಿಗರ ಕತೆಗಳ ಗುರು 


“ನೀನು ನನ್ನನ್ನು ಭಾರತದಿಂದ ತೆಗೆದು ಹಾಕಬಹುದು, ಆದರೆ ನನ್ನಿಂದ ಭಾರತವನ್ನು ತೆಗೆದು ಹಾಕುವುದು ಸಾಧ್ಯವಿಲ್ಲ,” ಎನ್ನುವುದು ತುಂಬ ಕ್ಷೀಷೆಯಾದ ನುಡಿ; ಇದನ್ನೇ ಸ್ವಲ್ಪ ತಿರುಚಿ “ನೀನು ನನ್ನನ್ನು ಕನ್ನಡ ನಾಡಿನಿಂದ ಹೊರಗೆ ಇಡಬಹುದು, ಆದರೆ ನನ್ನಿಂದ ಕನ್ನಡವನ್ನು ತೆಗೆದು ಹಾಕಲು ಸಾಧ್ಯವಿಲ್ಲ,” ಎಂದು ಕೆಲವು ಅನಿವಾಸಿ ಕನ್ನಡಿಗರಿಗಾದರೂ ಅನ್ವಯಿಸಬಹುದು ಎನ್ನಿಸುತ್ತದೆ. ಅಮೇರಿಕಾದ ಜನಜೀವನವನ್ನು ಕನ್ನಡದಲ್ಲಿ ಕತೆ-ಕಾದಂಬರಿಗಳಿಂದ ದಾಖಲಿಸುವ, ವೃತ್ತಿಯಿಂದ ವೈದ್ಯರಾದ ಗುರುಪ್ರಸಾದ ಕಾಗಿನೆಲೆ (ಗುರು) ಅವರಿಗೆ ಈ ಮಾತನ್ನು ಖಂಡಿತ ಹೇಳಬಹುದು.


ಭಾರತದಿಂದ ದಶಕಗಳವರೆಗೂ ದೂರವಿದ್ದರೂ ಕನ್ನಡದ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಓದುವ ಅನಿವಾಸಿ ಕನ್ನಡಿಗರು ಕೆಲವರಾದರೂ ಇದ್ದಾರೆ. ಕನ್ನಡದಲ್ಲಿ ಕೆಲವರು ಒಂದೆರೆಡು ಪುಸ್ತಕಗಳನ್ನು ಪ್ರಕಟಿಸಿದರು ಅಲ್ಲಲ್ಲಿ ಸಿಗುತ್ತಾರೆ. ಆದರೆ ಅನಿವಾಸಿ ಜೀವನವನ್ನು ಕಥೆ ಮತ್ತು ಕಾದಂಬರಿಗಳಲ್ಲಿ ದಾಖಲಿಸುತ್ತ ನಿರಂತರವಾಗಿ ಬರೆಯುತ್ತ ಬಂದವರು ಬೆರಳಣಿಕೆಯಷ್ಟು. ಅಂಥ ಲೇಖಕರಲ್ಲಿ ಅಗ್ರವಾಗಿ ಕಾಣುವ ಹೆಸರು ಗುರು ಅವರು. . 


ನಾನು ಬ್ರಿಟನ್ನಿಗೆ ಬಂದ ಹೊಸದು. ಭಾರತದಿಂದ ತಂದ ನಾಕಾರು ಪುಸ್ತಕಗಳನ್ನು ಆಗಲೇ ಓದಿ ಆಗಿತ್ತು. ಆಗ ಜಾಲತಾಣಗಳಲ್ಲಿ ಕನ್ನಡ ಈಗಿನಷ್ಟು ಓದಲು ಸಿಗುತ್ತಿರಲಿಲ್ಲ.ಜಾಲಗಳಲ್ಲಿ ಕನ್ನಡ ವಿರಳವಾಗಿದ್ದ ಆ ಕಾಲದಲ್ಲಿ ನನ್ನ ಕಣ್ಣಿಗೆ ಬಿದ್ದವರು ಗುರು ಅವರು. ಆಗ ಅವರು ಬರೆದ ಕೆಲವು ಕತೆಗಳು ಜಾಲದಲ್ಲಿ ಓದಲು ಸಿಕ್ಕಿದವು. ಮಾಧ್ವಸಂಪ್ರದಾಯದಲ್ಲಿ ಬೆಳೆದು, ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮಾಡಿ, ಅಮೇರಿಕಕ್ಕೆ ಹೋದ ವೈದ್ಯನ ಕತೆಗಳಾಗಿದ್ದವು. “ಅಲೆಲೆ, ನನ್ನ ಕತೆಗಳನ್ನು ಅಥವಾ ನಾನು ಬರೆಯಬೇಕಾಗಿದ್ದ ಕತೆಗಳನ್ನು ಇವರು ಬರೆಯುತ್ತಿದ್ದಾರಲ್ಲ’ ಎಂದೆನಿಸಿದ್ದು ಅತಿಶಯೋಕ್ತಿಯೇನಲ್ಲ. ಅನಿವಾಸಿಯಾದ ನನಗೆ ಗುರು ಅವರ ಕತೆಗಳು ತುಂಬ ಹತ್ತಿರವಾಗುತ್ತದೆ. ಆ ನೆಲೆಯಲ್ಲಿ ಆಗಿನಿಂದ ಈಗಿನವರೆಗೆ ಗುರು ಅವರ ಸಾಹಿತ್ಯವನ್ನು ಓದುತ್ತ ಬಂದಿದ್ದೇನೆ. 


ಗುರು ಅವರು ಅಮೇರಿಕಾದಲ್ಲಿ ಕೆಲವು ದಶಕಗಳಿಂಧ ನೆಲೆಸಿದ ತುರ್ತುಚಿಕಿತ್ಸೆ ವಿಭಾಗದ ಅನುಭವಿ ವೈದ್ಯರು. ಅಮೇರಿಕ ನೆಲೆಯಲ್ಲಿನ ಕತೆಗಳನ್ನು ಹೇಳುವಾಗ ಅವರು ಕನ್ನಡವನ್ನು ಬಳಸುವ ಬಗೆ ಅನನ್ಯವಾದುದು. 


ಗುರು ಅವರು ಎದುರಿಗೆ ಕೂರಿಸಿಕೊಂಡು ‘ಹೇಳಿದಂತೆ’ ಕತೆಗಳನ್ನು ಬರೆಯುತ್ತ ಹೋಗುತ್ತಾರೆ. ಎದುರಿಗೆ ಕೂತಿರುವವರು ತಮ್ಮಂತೆಯೇ ಭಾರತದಿಂದ ವಲಸೆಬಂದ ವೈದ್ಯರೇ ಇರಬಹುದು ಎನ್ನುವಂತೆ ಸರಲವಾಗಿ ಸರಾಗವಾಗಿ ಬರೆಯುತ್ತಾರೆ. 


ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡು ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ. . 


ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ. ಅವರ ಬಹಳಷ್ಟು ಕತೆಗಳು ನಡೆಯುವುದು   ಅಮೇರಿಕದಲ್ಲಿ; ಅವು ಕನ್ನಡದ ಓದುಗನಿಗೆ ಅಪರಿಚಿತ. ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ  ಕತೆ ನಡೆಯುವ ಊರಿನ, ಆಸ್ಪತ್ರೆಯ, ರೆಸ್ಟೋರ್ಂಟಿನ ಅಥವಾ ಪಾರ್ಕಿನ ವಿವರಗಳನ್ನು ನೂರಾರು ಶಬ್ದಗಳಲ್ಲಿ ಬರೆಯುತ್ತ ಕೂರುವುದಿಲ್ಲ. ಕತೆಯನ್ನು ಪಟಪಟನೇ ಕೇಳುತ್ತಾರೆ. ಇವರ ಕತೆಗಳಲ್ಲಿ ರಮ್ಯತೆಗೆ ಜಾಗವೇ ಇಲ್ಲ. ಯಾವುದನ್ನೂ ಯಾರನ್ನೂ ವೈಭವೀಕರಿಸುವುದೂ ಇಲ್ಲ, ತುಚ್ಛವಾಗಿ ಕಾಣುವುದೂ ಇಲ್ಲ. 


ಕನ್ನಡದ ಬೇರೆ ಲೇಖಕರಿಗಿಂತ ಸಾಕಷ್ಟು ಹೆಚ್ಚೇ ಎನ್ನುವಷ್ಟು ಇಂಗ್ಲೀಷ್ ಶಬ್ದಗಳನ್ನು ಯಾವ ಅಂಜಿಕೆಯಿಲ್ಲದೇ ಉಪಯೋಗಿಸಿ ಬರೆಯುತ್ತಾರೆ, ಏಕೆಂದರೆ ಅಮೇರಿಕದ ಕತೆಯನ್ನು ಕನ್ನಡದಲ್ಲಿ ಹೇಳುವಾಗಿನ ಅನಿವಾರ್ಯತೆ ಇವರ ಕತೆಗಳಿಗಿವೆ. ಅವೈದ್ಯಕೀಯದ ಓದುಗರಿಗೆ ಎಷ್ಟರಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೇ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವೈದ್ಯಕೀಯ ಶಬ್ಧಗಳನ್ನು ಬಳಸಿ ಬರೆಯುತ್ತ ಹೋಗುತ್ತಾರೆ. ನನ್ನ ಸಲಹೆ ಏನೆಂದರೆ, ಕತೆಯ ಅಂತ್ಯದಲ್ಲಿ ಒಂದು ಚಿಕ್ಕ ಅಡಿಟಿಪ್ಪಣೆಯನ್ನು ಕೊಡುವುದು ಒಳ್ಳೆಯದು. 


ಕೊರೋನಾ ಪೀಡಿತ ಕಳೆದ ವರ್ಷದಲ್ಲಿ ಗುರು ಅವರು ’ಲೋಲ’ ಎನ್ನುವ ಕಥಾಸಂಕಲನವನ್ನೂ ಮತ್ತು ’ಕಾಯಾ’ ಎನ್ನುವ ಕಾದಂಬರಿಯನ್ನೂ ಪ್ರಕಟಿಸಿದ್ದಾರೆ. 


ಲೋಲ:


‘ಮುಂದುವರಿದ’ ಎಂದೆನಿಸಿಕೊಂಡ ದೇಶಗಳ ವೈದ್ಯಕೀಯ ಸಂಕಷ್ಟಗಳು ಭಾರತದ ದೊಡ್ಡ ನಗರಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಗುರು ಇಂಥ ಸಮಸ್ಯೆಗಳನ್ನು ಎತ್ತಿಕೊಂಡು, ವೈದ್ಯಕೀಯ ವೃತ್ತಿಯ ಸೀಮಿತದಲ್ಲಿ ವೈದ್ಯರ ಮತ್ತು ರೋಗಿಗಳ ಕಥೆಗಳನ್ನು ಹೇಳಿದರೂ, ಅದರಾಚೆಯ ಉತ್ತರವಿಲ್ಲದ ಪ್ರಶ್ನೆಗಳನ್ನು ನಮ್ಮ ತಲೆಯಲ್ಲಿ ಹುಳ ಬಿಡುತ್ತಾರೆ. ಇಲ್ಲಿನ ಬಹುತೇಕ ಕಥೆಗಳು ನಡೆಯುವುದು ‘ ಪ್ರಥಮ ಪುರುಷ’ ದಲ್ಲಿ ಮತ್ತು ನಾಯಕನೂ ವೈದ್ಯನೇ ಆಗಿರುವುದರಿಂಧ, ಓದುವಾಗ ಕಣ್ಣಮುಂದೆ ಗುರು ಅವರ ಚಿತ್ರವೇ ಬರುತ್ತದೆ (ಕಥಾಸಂಕಲನದಲ್ಲಿ ಪ್ರಕಟವಾದ) ಎನ್ನುವುದು ಓದುಗನಾಗಿ ನನ್ನ ಮಿತಿ ಇರಬಹುದು, ನನಗೆ ಇದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. 


ಇಲ್ಲಿಯ ಬಹುತೇಕ ಎಲ್ಲ ಕತೆಗಳು ಅಮೇರಿಕದಲ್ಲಿ ಜರಗುತ್ತವೆ. 


‘ವ್ಯಕ್ತ ಮಧ್ಯವು’ ಎನ್ನುವ ಅಮೇರಿಕದ ಆಸ್ಪತ್ರೆಯಲ್ಲಿ ನಡೆಯುವ ಘಟನೆಗಳಲ್ಲಿ ಲಿಂಗ ಬದಲಾವಣೆಯ ಕತೆ ಇದೆ. ಲಿಂಗ ಬದಲಾವಣೆಯ ಬಗ್ಗೆ ನಮ್ಮ ಪೂರ್ವಗ್ರಹಗಳು ವೈದ್ಯ ವೃತ್ತಿಯಲ್ಲಿದ್ದರೂ ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ಈ ಕಥೆಯ ಮೂಲಕ ಹೇಳುತ್ತಾ ಹೋಗುತ್ತಾರೆ.


‘ಲೋಲ’ ಕತೆಯಲ್ಲಿ ‘ಶಿಶುಕಾಮಿ’ಯ (ಪೀಡೋಫಿಲಿಯ) ಕತೆಯಿದೆ. ಅದರಲ್ಲೂ ಈ ಶಿಶುಕಾಮಿಯು ಅಮೇರಿಕದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ! ಅವನ ಸಹೋದ್ಯೋಗಿಯಾದ ಭಾರತದಿಂದ ಬಂದ ವೈದ್ಯನಲ್ಲಿ ಶಿಶುಕಾಮಿಗಳ ಬಗ್ಗೆ ಇರುವ ಪೂರ್ವಾಗ್ರಹಗಳು, ಮತ್ತು ಅವುಗಳಿಂದ ಹೊರಬರುವ ಪ್ರಯತ್ನ ಇಲ್ಲಿ ಕಾಣಿಸುತ್ತದೆ. ಜೊತೆಗೆ ಶಿಶುಕಾಮಿಯ ಜೀವನದ ಬಗ್ಗೆ ಉತ್ತರವಿಲ್ಲದ ಪ್ರಶ್ನೆಗಳನ್ನು ಎತ್ತುತ್ತದೆ.


‘ಸಾಕ್ಷಿ’ ಎನ್ನುವ ಕತೆಯಲ್ಲಿ ಅಮೇರಿಕಕ್ಕೆ ವಲಸೆ ಬಂದ ಅನಿವಾಸಿಯ ಕನ್ನಡಿಗನೊಬ್ಬನ ಜೀವನವನ್ನು ಕತೆಯಾಗಿಸಿದ್ದಾರೆ. ಈ ಕತೆಯಲ್ಲಿ ಅಮೇರಿಕದ ಜಗತ್ತಿನ ಎಲ್ಲ ಆಗುಹೋಗುಗಳು ಬಂದುಹೋಗುತ್ತವೆ. ‘ಲಿವಿಂಗ್ ಟು ಗೆದರ್, ವಿಚ್ಛೇದನ, ಮರುವಿಚ್ಛೇದನ, ಅಲ್ಕೋಹಾಲಿಸಂ, ಖಿನ್ನತೆಯ ರೋಗಗಳು ಬರುತ್ತವೆ. ಕಲೆಯ ಬೆನ್ನುಹತ್ತಿ ಬದುಕನ್ನು ತೀವ್ರವಾಗಿ ಬದುಕುವ ವ್ಯಕ್ತಿಯೊಬ್ಬನ ಚಿತ್ರವನ್ನು ಮತ್ತು ಅದು ತರುವ ದುರಂತವನ್ನು ಬಿಚ್ಚುತ್ತಾ ಹೋಗುತ್ತದೆ. 


‘ಕ್ಲಾಸ್ ಆಫ್ 89’ ವೈದ್ಯಕೀಯ ಕಾಲೇಜಿನ ‘ರಿ-ಯೂನಿಯನ್’ ಕತೆ. ಇಲ್ಲಿ, ನಾಯಕನೂ ಅವನ ಹೆಂಡತಿಯೂ, ಅಮೇರಿಕದಲ್ಲಿ ಕೆಲಸ ಮಾಡುವ ಕನ್ನಡ ವೈದ್ಯರು. ಹೆಂಡತಿಯ ಬ್ಯಾಚಿನ ರಿ-ಯೂನಿಯನ್‌ಗೆ ಅವಳ ಗಂಡನಾಗಿ ಅಮೇರಿಕಾದಿಂದ ಭಾರತಕ್ಕೆ ಹೋಗುತ್ತಾನೆ. ನಾಯಕ ಭಾರತದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುವಾಗ ನಾಯಕಿಯ ಸೀನಿಯರ್ ಆಗಿದ್ದವ. ಅವಳ ಬ್ಯಾಚಿನವರಿಗೆ ಪಾಠ ಹೇಳಿಕೊಡುತ್ತಾ, ತನ್ನ ಹೆಂಡತಿಯ ಭ್ಯಾಚಿನ ಹುಡುಗಿಯರ ಕಣ್ನಲ್ಲಿ ಒಂದು ಥರದಲ್ಲಿ ‘ಹೀರೋ’ ಆಗಿದ್ದವ (ಅಥವಾ ಹಾಗೆಂದುಕೊಂಡಿದ್ದವ). ಇಪ್ಪತ್ತೈದು ವರ್ಷಗಳಾದ ಮೇಲೆ ‘ರಿ-ಯೂನಿಯನ್‘ನಲ್ಲಿ ಅದೇ ಪ್ರಭಾವಳಿಯನ್ನಿಟ್ಟುಕೊಂಡು ಹೆಮ್ಮೆಯಿಂದ ಬರುತ್ತಾನೆ. ತನ್ನ ಹೆಂಡತಿಯನ್ನು ಕಾಲೇಜಿನ ಸಮಯದಲ್ಲಿ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ ಹುಡುಗನೂ ಬಂದಿರುತ್ತಾನೆ. ಆದರೆ ಈ  ‘ರಿ–ಯೂನಿಯನ್,’ ನಾಯಕನ ಎಲ್ಲ ಅಹಂಅನ್ನು ಕಳೆದು ಹಾಕುತ್ತದೆ. ಪಾಶ್ಚ್ಯಾತ್ಯ ದೇಶಕ್ಕೆ ವಲಸೆ ಹೋಗಿರುವವರು ಹೇಗೆ ಭಾರತ ಬಿಟ್ಟಾಗಿನ ಕಾಲಕ್ಕೆ ಜೋತು ಬಿದ್ದಿರುತ್ತಾರೆ ಎನ್ನುವುದನ್ನು ಘಟನೆಗಳ ಮೂಲಕ ಹೇಳುತ್ತಾರೆ.


‘ಅಮೃತಮ್ಮ ಬಿದ್ದಿದ್ದು’ ಎನ್ನುವ ಕಥೆ ಭಾರತದಲ್ಲಿರುವ ಬಂಧುಗಳು ಪಾಶ್ಚಾತ್ಯ ದೇಶದಲ್ಲಿರುವ ವೈದ್ಯರ ಅಭಿಪ್ರಾಯ ಕೇಳುತ್ತ, ಅದನ್ನು ಭಾರತದ ವೈದ್ಯರ ಮೇಲೆ ಹೇರುತ್ತ ಹೋದರೆ ಆಗುವ ಅವಘಡಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಈ ಕತೆಯನ್ನು ಅಮೇರಿಕಾದ ವೈದ್ಯನ ದೃಷ್ಠಿಕೋನದಿಂದ ಹೇಳದೇ, ಭಾರತೀಯನ ಬದುಕಿನಿಂದ ನೋಡಿದ್ದು ಕಥೆಗೆ ಬೇರೆರೋಪವನ್ನೇ ಕೊಟ್ಟಿದೆ.


‘ಆ ಬದಿ’ ಎನ್ನುವ ಕಥೆ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಸಂಭವಿಸಬಹುದಾದ ಕಥೆ. ವೈದ್ಯನು ತಾನು ರೋಗಿಯಾದಾಗ ತನಗೆ ತಾನೇ ಚಿಕಿತ್ಸೆ ತೆಗೆದುಕೊಂಡರೆ ಆಗುವ ತಾಪತ್ರಯಗಳ ಕಥೆ, ವಿಮಾ ಕಂಪೆನಿಗಳು ಕೊಡುವ ತಾಪತ್ರಯಗಳ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ.


ನನ್ನ ಜನರೇಶನ್ ನವರಿಗೆ ಎರಡೆರಡು ಹುಟ್ಟುಹಬ್ಬವಿರುವುದು ಸ್ವಾಭಾವಿಕ, ಎರಡೇಕೆ? ಮೂರೆಂದರೂ ನಡೆಯುತ್ತದೆ. ಒಂದು ಕ್ಯಾಲೆಂಡರ್ ಪ್ರಕಾರ ಹುಟ್ಟಿದ ದಿನ, ಇನ್ನೊಂದು ಪಂಚಾಂಗದ ಪ್ರಕಾರ, ಮೂರನೆಯದು ‘ಅಧೀಕೃತ’, ಶಾಲೆ ಸೇರುವಾಗ ನಮೂದಿಸಿದ ಹುಟ್ಟಿದ ದಿನ. ಇದನ್ನು ಇಟ್ಟುಕೊಂಡು ‘ನಾನು ಮತ್ತು ನಾನು‘ ಎನ್ನುವ ಕಥೆಯಲ್ಲಿ ನಾಯಕನಿಗೆ ಐವತ್ತು ವರ್ಷವಾದಾಗ ವಯಸ್ಸಿನ ಬಿಜ್ಞಾಸೆಯನ್ನು ಕತೆಯಲ್ಲಿ ಹುಡುಕುತ್ತಾರೆ.  


ಅಲ್ಲದೆ ‘ಒಸಾಮ ಬೆದರಿದ್ದ’ ಮತ್ತು ‘ ಊಬರ್ ಡ್ರೈವರ್’ ಎನ್ನುವ ಎರಡು ಚಿಕ್ಕ ಕಥೆಗಳಿವೆ. 


ಕನ್ನಡ ಭಾಷೆಗೆ ಈಗಾಗಲೇ ಸಾಕಷ್ಟು ’ಅನಿವಾಸಿ’ ಕತೆಗಳನ್ನು ಕೊಟ್ಟಿರುವ ಗುರು ಅವರು ಹೀಗೇ ಬರೆಯುತ್ತಲಿರಲಿ. ಅವರ ಮಹತ್ವದ ಕತೆಗಳು ಇಂಗ್ಲೀಷ್ ಭಾಷೆಗೂ ಅನುವಾದವಾಗಲಿ ಎನ್ನುವುದು ನನ್ನ ಆಶಯ. ಅನಿವಾಸಿಗಳ ಕತೆಯನ್ನು ಅನಿವಾಸಿಗಳು ಹೇಗೆ ಬರೆಯಬೇಕು ಎನ್ನುವುದಕ್ಕೆ ಗುರು ಅವರ ಶೈಲಿ ನನ್ನಂಥ ಅನಿವಾಸಿ ಕನ್ನಡಿಗರಿಗೆ ಒಂದು ಮಾದರಿ, ಪ್ರೇರಕ ಶಕ್ತಿ ಮತ್ತು ಗುರು.  


ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ’


Saturday 29 January 2022

ಇಂಗ್ಲೆಂಡ್ ಪತ್ರ 16: ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ

 ಕನ್ನಡದ ಎರಡು ಮುಖ್ಯ ಕೊಂಡಿಗಳು ನಮ್ಮನ್ನು ತೊರೆದಿವೆ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ಅವರು ಸಲ್ಲಿಸಿದ ಸೇವೆ ಮತ್ತು ಅವರು ಮಾಡಿದ ಸಾಧನೆ ಅನನ್ಯವಾದುದು. ಇಬ್ಬರೂ ಉತ್ತರಕರ್ನಾಟಕದ ಭಾಷೆಯನ್ನು ಉತ್ಕಟವಾಗಿ ಬಳಸಿದವರು. ಒಬ್ಬರು ಯಾವ ವಿವಾದಗಳಿಲ್ಲದೇ ಎಲೆಮರೆಯ ಕಾಯಿಯಂತೆ ಬದುಕಿದವರು, ಇನ್ನೊಬ್ಬರು ಸದಾ ಕಾಲ ವಿವಾದಗಳನ್ನು ಸೃಷ್ಟಿಸುತ್ತ ಕಾಲುಕೆದರಿ ಸಮಾಜದ ಜೊತೆ ಜಗಳ ಕಾದಿದವರು. ಒಬ್ಬರನ್ನು ನನ್ನ ಗುರುವಾಗಿ ಇನ್ನೊಬ್ಬರನ್ನು ಒಬ್ಬ ಓದುಗನಾಗಿ ನೆನಪಿಸಿಕೊಳ್ಳುತ್ತಿದ್ದೇನೆ. 


ಬಸವಲಿಂಗಯ್ಯ ಹಿರೇಮಠ:


1993-94ನ ಮಾತಿದು. ನಾನಾಗ ಅದೇ ಎಂ.ಬಿ.ಬಿ.ಎಸ್ ಮುಗಿಸಿ ಇಂಟರ್ನ್‌ಶಿಪ್ ಮಾಡುತಿದ್ದೆ. ಪಿ.ಜಿ ಮಾಡಲು ಎಂಟ್ರೆನ್ಸ್ ಪರೀಕ್ಷೆಗಳಿಗೆ ಓದುವುದು ಇದ್ದರೂ, ಎಂ.ಬಿ.ಬಿ.ಎಸ್ ಓದಿನಷ್ಟು ಕಷ್ಟವಿರಲಿಲ್ಲ ಅಥವಾ ಅಂಥ ದರ್ದಿರಲಿಲ್ಲ. ಸಾಹಿತ್ಯದ ಓದು, ಬರೆಯುವುದು, ನಾಟಕ ಮತ್ತು ಸಿನಿಮಾ ನೋಡುವುದು ಅವ್ಯಾಹತವಾಗಿ ನಡೆದಿತ್ತು. ಮೆಡಿಕಲ್ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಿರುಪ್ರಹಸನಗಳನ್ನು ಮತ್ತು ಏಕಾಂಕ ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸುವ ಅಭ್ಯಾಸವಾಗಿತ್ತು. ಅಲ್ಲದೆ ಜಿ.ಎಚ್.ರಾಘವೇಂದ್ರ ಅವರು ಬರೆದ ‘ಬಂಗಾರದ ಕೊಡ’ವನ್ನು ನಿರ್ದೇಶಿಸಿ, ನಟಿಸಿ ಧಾರವಾಡ ವಿಶ್ವವಿದ್ಯಾಲಯದಲ್ಲೂ ಪ್ರದರ್ಶಿಸಿ ಭೇಷ್ ಅನ್ನಿಸಿಕೊಂಡಿದ್ದೆ. ನಾನೇ ಬರೆದು ನಿರ್ದೇಶಿಸಿದ ‘ಆರು ಹಿತವರು ನಿನಗೆ ಈ ಆರರೊಳಗೆ’ ಎನ್ನುವ ಏಕಾಂಕಕ್ಕೆ ಹುಬ್ಬಳ್ಳಿಯ ಏಕಾಂಕದ ಸ್ಪರ್ಧೆಯಲ್ಲಿ ಬಹುಮಾನ ಬೇರೆ ಬಂದಿತ್ತು. ಹೀಗಾಗಿ ನಾನು ಡಾ.ಎಂ.ಜಿ.ಹಿರೇಮಠ (ನನ್ನ ಪ್ರಾಧ್ಯಾಪಕರು)ರ ಕಣ್ಣಿಗೆ ಬಿದ್ದೆ. ಸಿಕ್ಕಾಪಟ್ಟೆ ನಾಟಕದ ಹುಚ್ಚಿದ್ದ ಎಂ.ಜಿ.ಹಿರೇಮಠರಿಗೆ ಪೂರ್ಣಪ್ರಮಾಣದ ನಾಟಕ ಮಾಡಬೇಕು ಎನ್ನುವ ಆಸೆ ಗರಿಗೆದರಿತು. ನಾನು ಅದುವರೆಗೂ ಯಾವುದೇ ಪೂರ್ಣ ಪ್ರಮಾನದ ನಾಟಕವನ್ನು ಮಾಡಿರಲಿಲ್ಲ.


ಒಂದು ದಿನ ಎಂ.ಜಿ.ಹೀರೇಮಠ ಸರ್ ನನ್ನನ್ನು ಕರೆದು ಪೂರ್ಣಪ್ರಮಾಣದ ನಾಟಕದ ವಿಷಯ ಪ್ರಸ್ತಾಪಿಸಿದರು. ಅಲ್ಲಿಯವರೆಗೆ ನೀನಾಸಂ ತಿರುಗಾಟದ ನಾಟಕಗಳನ್ನು ಪ್ರತಿವರ್ಷ ತಪ್ಪದೇ ನೋಡುತ್ತಿದ್ದೆ, ನಾನೇ ಯಾವತ್ತೋ ಒಂದು ದಿನ ಪೂರ್ಣಪ್ರಮಾಣದ ನಾಟಕವನ್ನು ಆಡುತ್ತೇನೆ ಎಂದುಕೊಂಡಿರಲಿಲ್ಲ. ನಾಟಕ ಚಂದ್ರಶೇಖರ ಕಂಬಾರರು ಬರೆದ ‘ಸಿರಿಸಂಪಿಗೆ’, ಅದನ್ನು ನಿರ್ದೇಶಿಸಲು ಬಸವಲಿಂಗಯ್ಯ ಹಿರೇಮಠರು ಬರುತ್ತಾರೆ ಎಂದು ಹೇಳಿ ‘ಆಡಿಶನ್’ಗೆ ಕರೆದುಕೊಂಡು ಹೋದರು. ಅಲ್ಲಿಯವರೆಗೆ ನನಗೆ ಬಸವಲಿಂಗಯ್ಯನವರ ಬಗೆಗೆ ಕೇಳಿ ಗೊತ್ತಿತ್ತೇ ಹೊರತು, ಯಾವತ್ತೂ ಭೇಟಿಯಾಗಿರಲಿಲ್ಲ. ಅವರ ’ಶ್ರೀಕೃಷ್ಣಪಾರಿಜಾತವನ್ನು’ ನೋಡಿ ಮೆಚ್ಚಿಕೊಂಡಿದ್ದೆ. ವೈದ್ಯಕೀಯ ವಿದ್ಯಾರ್ಥಿಯಾದ ನನಗೆ ಅವರನ್ನು ಭೇಟಿಯಾಗುವ ಪ್ರಸಂಗವೂ ಬಂದಿರಲಿಲ್ಲ ನಾನು ‘ಸಿರಿಸಂಪಿಗೆ’ ನಾಟಕವನ್ನೂ ಓದಿರಲಿಲ್ಲ, ಬೇರೆ ಯಾರೂ ಆಡಿದ್ದನ್ನೂ ನೋಡಿರಲಿಲ್ಲ. 


ಬಸವಲಿಂಗಯ್ಯನವರನ್ನು ಮೊದಲಸಲ ಭೇಟಿಯಾದಾಗ ನನ್ನ ಕೈಗಳು ನಡುಗುತ್ತಿದ್ದವು. ಬಸವಲಿಂಗಯ್ಯನವರ ಜೊತೆ ಅವರ ಪತ್ನಿ ವಿಶ್ವೇಶ್ವರಿಯವರೂ ಇದ್ದರು. ಆದರೆ ಅವರ ಜೊತೆ ಎರಡೇ ಮಾತು, ಎಲ್ಲ ನಿರಾಳ. ಅವರಿಗೆ ವೈದ್ಯರನ್ನು ಕಂಡರೆ ತುಂಬಾ ಗೌರವ. ಅದರಲ್ಲೂ ಸಾಹಿತ್ಯ ನಾಟಕಗಳಲ್ಲಿ ಆಸಕ್ತಿ ಇರುವ ವೈದ್ಯರನ್ನು ಕಂಡರೆ ಇನ್ನೂ ಗೌರವ ಅನಿಸುತ್ತದೆ. ನಾನು ಅವರಿಗೆ ಕೊಡುವ ಗೌರವಕ್ಕಿಂತ ಅವರೇ ನನಗೆ ಹೆಚ್ಚು ಗೌರವ ಕೊಡುತ್ತಿದ್ದರು.!


ಬಸವಲಿಂಗಯ್ಯನವರ ಜೊತೆಯಲ್ಲಿ ವಿಶ್ವೇಶ್ವರಿ ಹಿರೇಮಠರು ನಮ್ಮ ನಾಟಕದ ನಿರ್ದೇಶಕರು. ಅವರಂಥ ಅನನ್ಯ ಜೋಡಿಯನ್ನು ನಾನು ಇದುವರೆಗೂ ನೋಡಿಲ್ಲ. ನನ್ನನ್ನು ‘ಕಾಳಿಂಗ’ನ ಪಾತ್ರಕ್ಕೆ ಆಯ್ಕೆ ಮಾಡಿದರು. ನನ್ನದು ನಾಟಕದಲ್ಲಿ ಪ್ರಮುಖಪಾತ್ರ. ನಾಯಕನೆಂದರೂ ನಡೆಯುತ್ತೆ, ಖಳನಾಯಕನೆಂದರೂ ನಡೆಯುತ್ತದೆ. ದಿನಾ ಸಂಜೆಯಿಂದ ರಾತ್ರಿಯವರೆಗೆ ಕರ್ನಾಟಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಅಭ್ಯಾಸ ನಡೆಯುತ್ತಿತ್ತು. ಆ ಎರಡು ತಿಂಗಳಲ್ಲಿ ನಾನು ನಾಟಕದ ಬಗ್ಗೆ, ಸಾಹಿತ್ಯದ ಬಗ್ಗೆ ಕಲಿತದ್ದು ನನ್ನನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದೆ.


ಬಸವಲಿಂಗಯ್ಯನವರು ‘ಸಿರಿಸಂಪಿಗೆ’ ಹಾಗೂ ಕಾರ್ನಾಡರ ‘ನಾಗಮಂಡಲ’ ವನ್ನು ತುಲನೆ ಮಾಡಿ ಮಾತನಾಡುತ್ತಿದ್ದರು. ನಾಟಕವನ್ನು ನಿರ್ದೇಶಿಸುವಾಗ ನನ್ನಂತ ಹವ್ಯಾಸಿ ಕಲಾವಿದನಿಗೂ ನಟಿಸುವ ಸ್ವಾತಂತ್ರ್ಯವನ್ನು ಕೊಡುತ್ತಿದ್ದರು. ‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು. ಬಸವಲಿಂಗಯ್ಯನವರು ಅವರದು ಅದ್ಬುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ’ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು. ಹಾಗಿತ್ತು ಅವರ ಸಂಗೀತದ ಧ್ಯಾನ. ಅವರು ಹಾಡುತ್ತ ಕುಳಿತರೆ ನನಗೆ ನನ್ನ ನಾಟಕದ ಮಾತುಗಳೂ ಮರೆತು ಹೋಗುತ್ತಿದ್ದವು. ಅವರ ಧ್ವನಿಯಲ್ಲಿ ಮಾಂತ್ರಿಕತೆಯಿತ್ತು. 


ನಾಟಕದ ರಿಹರ್ಸಲ್ ನಡುವೆ ನಡೆಯುವ ‘ಚಹಾ-ಚೂಡಾ’ ಸಮಯದಲ್ಲಿ ನಾಟಕ-ಜನಪದ ಪ್ರಪಂಚದ ಸ್ವಾರಸ್ಯಕರ ಪ್ರಸಂಗಗಳನ್ನು ಹೇಳುತ್ತಿದ್ದರು. ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರು. ಹೃದಯತುಂಬಿ ನಗುತ್ತಿದ್ದರು. ಒಂದು ದಿನ ಹಾರ್ಮೋನಿಯಂ ಹಿಡಿದು ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡಿನ ಇಂಗ್ಲೀಷ್ ರೂಪಾಂತರವನ್ನು ‘ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೊ...’ ಎಂದು ಸುಶ್ರಾವ್ಯವಾಗಿ ಹಾಡಿ ನಮ್ಮನ್ನೆಲ್ಲ ನಗಿಸಿದರು! 


ವಿಶ್ವೇಶ್ವರಿ ಮತ್ತು ಬಸವಲಿಂಗಯ್ಯನವರು ‘ಸಿರಿಸಂಪಗೆ’ ಯನ್ನು ತುಂಬ ಹಚ್ಚಿಕೊಂಡು ನಿರ್ದೇಶಿಸಿದರು. ಆದರೆ ನಾಟಕ ನಾವಂದುಕೊಂಡಷ್ಟು ಜನರನ್ನು ತಲುಪಲಿಲ್ಲ. ಎರಡೋ ಮೂರೋ ಪ್ರದರ್ಶನಗಳನ್ನು ಹುಬ್ಬಳ್ಳಿಯಲ್ಲಿ ಮಾಡಿದೆವು. ಬಹುಷ: ಆ ನಾಟಕದ ಪಾತ್ರದಾರಿಗಳೆಲ್ಲ ನನ್ನಂತ ಹವ್ಯಾಸಿಗಳೇ ಆದ್ದರಿಂದ ಆಗಿರಬಹುದು.


ಈ ಕೋವಿಡ್ ಬರುವ ಮೊದಲು ಹಿರೇಮಠ ದಂಪತಿಗಳು ಇಂಗ್ಲೆಂಡಿಗೂ ಬಂದಿದ್ದರು. ’ಕನ್ನಡ ಬಳಗ ಯು.ಕೆ’ ಅವರು ಕರೆಸಿದ್ದರು. ಬಸವಲಿಂಗಯ್ಯನವರು ಒಂದು ಗಂಟೆ ಜನಪದ ಗೀತೆಗಳನ್ನು ಹಾಡಿ ನಮ್ಮನ್ನೆಲ್ಲ ರಂಜಿಸಿದರು. ಕಾರ್ಯಕ್ರಮದ ಸಮಯದಲ್ಲಿ ನಾನು ಭೇಟಿಯಾಗಿ ಆವರಿಗೆ ನಮಸ್ಕರಿಸಿದೆ. ನನ್ನ ಗುರುತು ಸಿಗಲಿಲ್ವ ‘ನಾನು ನಿಮ್ಮ ನಾಟಕದ ಕಾಳಿಂಗ’ ಎಂದು ಗುರುತು ಹೇಳಿಕೊಂಡೆ. ನನ್ನ ಕಷ್ಟಸುಖ ವಿಚಾರಿಸಿ ಆಪ್ತವಾಗಿ ಮಾತನಾಡಿಸಿದ್ದರು.. 


ಬಸವಲಿಂಗಯ್ಯನವರು ನಿಧನರಾದ ಸುದ್ಧಿ ಕೇಳಿ ಇದೆಲ್ಲ ನೆನಪಾಯಿತು. ಕನ್ನಡ ನಾಡಿನ ಜನತೆಗೆ ಜನಪದದ ಸೊಗಡನ್ನು ತಲುಪಿಸಿ, ಕಿರುತೆರೆಯಲ್ಲಿ ನಟಿಸಿ, ನೂರಾರು ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ ನಮ್ಮನ್ನೆಲ್ಲ ಅಗಲಿದ್ದಾರೆ. ’ಸಿರಿಸಂಪಿಗೆ’ಯ ‘ಕಾಳಿಂಗ’ನ ಪಾತ್ರಧಾರಿಯಾಗಿ ಅವರಿಗೊಂದು ಶ್ರದ್ಧಾಂಜಲಿ, ನಮನ.


ಚಂಪಾ:


ನಾನು ಚಿಕ್ಕವನಾಗಿದ್ದಾಗ ಬೇಸಿಗೆಯ ರಜೆಗೆ ಅಜ್ಜಿಯ ಮನೆಗೆ (ತಾಯಿಯ ತಾಯಿಯ ಮನೆ) ಹುಬ್ಬಳ್ಳಿಗೆ ಹೋಗುತ್ತಿದ್ದೆ. ಅಲ್ಲಿ ನನ್ನ ಮಾಂಶಿ ಮತ್ತು ಮಾಮಂದಿರ ನನ್ನ ವಾರಿಗೆಯ ಮಕ್ಕಳು ಜೊತೆಯಾಗುತ್ತಾರೆ ಎನ್ನುವುದು ಒಂದು ಕಾರಣವಾದರೆ, ನನ್ನ ಸೋದರಮಾವಂದಿರ ಒಡನಾಟ ಇನ್ನೊಂದು ಮುಖ್ಯ ಕಾರಣ. ಅವೆರಲ್ಲರೂ ನಾಟಕ, ಸಂಗೀತ ಮತ್ತು ಸಿನಿಮಾ ಪ್ರಿಯರು. ಆ ನನ್ನ ಚಿಕ್ಕ ವಯಸ್ಸಿನಲ್ಲಿ ನನ್ನ ಇಬ್ಬರು ಮಾಮಂದಿರು ‘ಕೊಡೆಗಳು’ ಎನ್ನುವ ಎರಡೇ ಪಾತ್ರಗಳಿರುವ ನಾಟಕದ ತಾಲೀಮು ಮಾಡುತ್ತಿದ್ದರು. ಆ ನಾಟಕದ ಮಾತುಗಳು ಸಿಕ್ಕಾಪಟ್ಟೆ ನಗೆ ಉಕ್ಕಿಸುತ್ತಿದ್ದವು. ನಾಟಕದ ಅಸಂಗತತೆ ಮತ್ತು ಆ ಅಸಂಗತತೆಯ ಅರ್ಥವಾಗಲು ಇನ್ನೂ ಹಲವಾರು ವರ್ಷಗಳು ಬೇಕಾದವು ಎನ್ನುವುದು ಬೇರೆ ಮಾತು. ಆದರೆ ‘ಕೊಡೆಗಳು’ ಮಾತ್ರ ನನ್ನ ತಲೆಯಲ್ಲಿ ಶಾಶ್ವತವಾಗಿ ಹೂತುಬಿಟ್ಟಿತ್ತು. 


ನಾನು ಎಂ.ಬಿ.ಬಿ.ಎಸ್ ಓದುವಾಗ ನಮ್ಮ ಹಾಸ್ಟೇಲಿನ ವಾರ್ಷಿಕೋತ್ಸವಕ್ಕೆ ಏಕಾಂಕವೊಂದನ್ನು ಮಾಡಬೇಕು ಎನ್ನುವ ಹುಳ ಹೊಕ್ಕಿತು. ಮೊಟ್ಟಮೊದಲು ನೆನಪಾದದ್ದೇ ‘ಕೊಡೆಗಳು’. ನನ್ನ ಮಾಮಂದಿರ ಹತ್ತಿರ ಆ ನಾಟಕದ ಪ್ರತಿ ಇರಲಿಲ್ಲ (ಆದರೆ ಸಂಭಾಷಣೆ ಇನ್ನೂ ನೆನಪಿನಲ್ಲಿತ್ತು!). ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಮಾಜ ಪುಸ್ತಕಾಲಯ’ಕ್ಕೆ ಹೋಗಿ, “ಕೊಡೆಗಳು ಅದ ಏನ್ರೀ?” ಅಂದೆ. ಎರಡೇ ನಿಮಿಷದಲ್ಲಿ ಒಂದು ಪುಟ್ಟ ಪುಸ್ತಕವನ್ನು ಕೈಗಿತ್ತರು (ಸಮಾಜ ಪುಸ್ತಕಾಲಯ ನನ್ನ ಪಾಲಿಗೆ ಪುಸ್ತಕದ ಗಣಿ ಆಗಿತ್ತು, ಇಂಥ ಕನ್ನಡ ಪುಸ್ತಕ ಇಲ್ಲ ಎನ್ನುತ್ತಿರಲಿಲ್ಲ). ಆಗಲೇ ‘ಕೊಡೆಗಳು’ ನಾಟಕವನ್ನು ಬರೆದವರು ಚಂದ್ರಶೇಖರ ಪಾಟೀಲರು ಎಂದು ಗೊತ್ತಾದದ್ದು. ’ಕೊಡೆಗಳು’ ಏಕಾಂಕವನ್ನು ಎರಡು ತಿಂಗಳು ತಾಲೀಮು ಮಾಡಿ ಪ್ರದರ್ಶಿಸಿದ್ದೆವು. 


ಅದೇ ಕಾಲಕ್ಕೆ ನಾನು ಕನ್ನಡದ ಕವಿಗಳನ್ನು ಓದುತ್ತಿದ್ದೆ, ವಾರವಾರವೂ ಹುಬ್ಬಳ್ಳಿಯ ಗ್ರಂಥಾಲಯ (ಇಂದಿರಾ ಗಾಜಿನ ಮನೆ)ಕ್ಕೆ ಹೋಗಿ ಕಥಾ ಸಂಕಲನ, ಕವನ ಸಂಕಲನ , ಕಾದಂಬರಿ ಮತ್ತು ವಿಮರ್ಶಾ ಕೃತಿಗಳನ್ನು ತಂದು ಓದುತ್ತಿದ್ದೆ, ಆದರೂ ಒಮ್ಮೆಯೂ ಚಂಪಾ ಕಣ್ಣಿಗೆ ಬಿದ್ದಿರಲಿಲ್ಲ. ಒಂದು ಸಲ ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ‘ ಪುಸ್ತಕ ಸಿಕ್ಕಿತು; ನನಗಂತೂ ಅಕ್ಷಯಪಾತ್ರೆ ಸಿಕ್ಕಷ್ಟು ಸಂತೋಷವಾಯಿತು. ನಾನು ಹೆಸರೇ ಕೇಳಿರದ ಎಷ್ಟೊಂದು ಕವಿಗಳು! ಆಗ ನನ್ನನ್ನು ಆಕರ್ಷಿಸಿದ ಕವಿಗಳಲ್ಲಿ ಒಬ್ಬರು ಚಂಪಾ. ಆ ಪುಸ್ತಕದಲ್ಲಿ ಚಂಪಾ ಅವರ ‘ಗಾಂಧಿ ಸ್ಮರಣೆ’ ಎನ್ನುವ ಕವನ ತನ್ನ ಅತಿ ಸರಳ ಭಾಷೆಯಲ್ಲಿ, ದಿನನಿತ್ಯ ಎಲ್ಲರ ಕಣ್ಣಿಗೆ ಕಾಣುವ, ಎಲ್ಲರೂ ಮಾತನಾಡುವ ರೂಪಕಗಳನ್ನೇ ಹಿಡಿದು ಬರೆದದ್ದು, ನನ್ನನ್ನು ಆಳವಾಗಿ ಕಲಕಿತ್ತು. ಮೊದಲನೇ ಓದಿಗೆ ಬಿಟ್ಟುಕೊಡದ ಬೇಂದ್ರೆ ಮತ್ತು ಅಡಿಗರ ಕವನಗಳಿಗಿಂತ, ಸಂಸ್ಕೃತಭಾಷೆಯಿಂದ ಸಮೃದ್ಧವಾದ ರಮ್ಯತೆಯಿದ್ದ ಕುವೆಂಪು ಅವರಿಗಿಂತ, ಮಲ್ಲಿಗೆ ಕಂಪಿನ ಸಂಸಾರದ ಪ್ರೇಮದ ಕೆಎಸ್‌ಎನ್‌ ಅವರಿಗಿಂತ, ರೂಪಕಗಳಿಂದಲೇ ರೂಪಗೊಂಡ ಮಹತ್ವಾಕಾಂಕ್ಷೆಯ ಅಡಿಗರಿಗಿಂತ, ತುಂಬ ವಿಭಿನ್ನವಾದ ಚಂಪಾ ಅವರ ಕವನಗಳು ಸುಲಭವಾಗಿ ಒಂದೇ ಓದಿಗೇ ಅರ್ಥವಾಗುತ್ತಿದ್ದವು. ವ್ಯಂಗ್ಯ ಮತ್ತು ಹಾಸ್ಯದಿಂದ ಕೂಡಿರುತ್ತಿದ್ದವು. ಅವರ ಕವನಗಳಲ್ಲಿ ಶಬ್ದಾಡಂಬರವಿರಲಿಲ್ಲ. ಏನೋ ಮಹತ್ತರವಾದುದನ್ನು ಹೇಳುತ್ತಿದ್ದೇನೆ ಎನ್ನುವ ಅಹಂಕಾರವಿರಲಿಲ್ಲ. ಅರ್ಥವಾಗದಂತೆ ಬರೆದರೇ ನವ್ಯಕಾವ್ಯ ಎನ್ನುವ ಸೋಗಿರಲಿಲ್ಲ.


ನನಗೆ ಚಂಪಾ ಅವರು ಬರೆದ ‘ಗೋಕರ್ಣದ ಗೌಡಸಾನಿ’ ನಾಟಕದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ನಮ್ಮ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಲ್ಲಿ ಪ್ರದರ್ಶನ. ಹಾಸ್ಯ ಮತ್ತು ವ್ಯಂಗ್ಯಭರಿತ ನಾಟಕವದು. ಕೆಲವರು ಅಶ್ಲೀಲವೆಂದು ಕೆಂಡಕಾರಿದರು. ನನ್ನದು ಆ ನಾಟಕದಲ್ಲಿ ತೆರೆಯ ಹಿಂದಿನ ಕೆಲಸ: ಲೈಟಿಂಗ್ ವಿಭಾಗ. ಈ ನಾಟಕದಲ್ಲಿ ರಂಗದ ಮೇಲಿನ ದೀಪಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ, ’ಲಿಂಗ ಪ್ರತಿಷ್ಟಾಪನೆ’ಯ ಕೊನೆಯ ಅಂಕಣದಲ್ಲಿ. ನನ್ನ ಮಿತ್ರರೆಲ್ಲರೂ ರಂಗದ ಮೇಲೆ ತಾಲೀಮು ಮಾಡುತ್ತಿದ್ದರೆ, ನಾನು ನಾಟಕವನ್ನು ನೋಡುತ್ತಾ ಲೈಟಿಂಗ್ ಅಭ್ಯಾಸ ಮಾಡುತ್ತಿದ್ದೆ.


ನಾಟಕದ ಪ್ರದರ್ಶನದ ದಿನ ಖುದ್ದು ಚಂಪಾ ಅವರೇ ನಾಟಕ ನೋಡಲು ಬಂದಿದ್ದರು. ಚಂಪಾ ಅವರಿಗೆ ನಮ್ಮೆಲ್ಲರ ಪರಿಚಯ ಮಾಡಿಸಿದ್ದರು. ಅವರ ಬಳಿ ಮಾತಾಡಿದ್ದು ಒಂದೆರೆಡು ನಿಮಿಷ ಅಷ್ಟೆ. ಮುಖ್ಯ ಅತಿಥಿಗಳಾಗಿ ಬಂದಿದ್ದ ಅವರು ವೈಚಾರಿಕವಾಗಿ ಮಾತಾಡಿದ್ದರು, ಮಾತಿನಲ್ಲಿ ವ್ಯಂಗ್ಯ ಮತ್ತು ಹಾಸ್ಯ ತುಂಬಿ ತುಳುಕುತ್ತಿದ್ದವು. ಅಂದು ಅವರು ಹೇಳಿದ ಚುಟುಕು ಇಂದಿಗೂ ನಗು ತರಿಸುತ್ತದೆ.ಅದರ ಸಾರಾಂಶ ಇಷ್ಟು: ಒಬ್ಬ ಮಗ ಕನ್ನಡ ಶಾಲೆಗೆ ಹೋಗುತ್ತಿದ್ದಾನೆ, ಇನ್ನೊಬ್ಬ ಇಂಗ್ಲೀಷ್ ಮಾಧ್ಯಮದ ಶಾಲೆಗೆ. ಶಾಲೆಯಲ್ಲಿ ಪಂಪ ಮತ್ತು ರನ್ನರ ಬಗ್ಗೆ ಬರೆದುಕೊಂಡು ಬರಲು ಹೇಳುತ್ತಾರೆ. ಕನ್ನಡದ ಹುಡುಗ ಬರೆದಿರುತ್ತಾನೆ; ಪಂಪ ಮತ್ತು ರನ್ನ. ಇಂಗ್ಲೀಷ್ ಹುಡುಗ ಬರೆದಿರುತ್ತಾನೆ ; Pump and Run! 


ಹುಬ್ಬಳ್ಳಿಯನ್ನು ಬಿಟ್ಟು ನಾನು ಮೈಸೂರಿಗೆ ಬಂದ ಮೇಲೆ ಚಂಪಾ ಅವರ ಗೊತ್ತಾಗುತ್ತಿದ್ದುದುದು ‘ಲಂಕೇಶ್ ಪತ್ರಿಕೆ’ಯಿಂದ, ತಿಂಗಳಿಗೊಮ್ಮೆಯಾದರೂ ಚಂಪಾ ಅವರ ಬಗೆಗೆ ಏನಾದರೂ ಬರೆಯದಿದ್ದರೆ ಲಂಕೇಶರಿಗೆ ಊಟ ರುಚಿಸುತ್ತಿರಲಿಲ್ಲವೇನೊ? ನಾನು ಯಾವತ್ತೂ ಚಂಪಾ ಅವರು ಸಂಪಾದಿಸಿದ ’ಸಂಕ್ರಮಣ’ವನ್ನು ಓದಲೇ ಇಲ್ಲ, ಏಕೆಂದರೆ ಅದು ಸಾಹಿತ್ಯದ ವಿದ್ಯಾರ್ಥಿಗಳಲ್ಲದ ನಮಗೆ ಗೊತ್ತೇ ಇರಲಿಲ್ಲ. 


ನಾನು ಇಂಗ್ಲೆಂಡಿಗೆ ಬಂದಮೇಲೆ ಚಂಪಾ ಅವರು ಬರೆದ ‘ ಇಂಗ್ಲೆಂಡಿನಲ್ಲಿ ಇಂಡಿಯನ್’ ಎನ್ನುವ ಕವನ ತುಂಬ ಆಪ್ತವಾಯಿತು. ಇಲ್ಲಿನ ಚಳಿಗಾಲದಲ್ಲಿ ಹಾಕಿಕೊಳ್ಳುವ ಒಂದರಮೇಲೊಂದು ಬಟ್ಟೆಗಳನ್ನು ‘ಉಳ್ಳಾಗಡ್ಡಿ’ಗೆ ಹೋಲಿಸಿ ಬರೆದುದನ್ನು ನೋಡಿ; ಇಂಥ ರೂಪಕ ಚಂಪಾ ಬಿಟ್ಟರೆ ಇನ್ನೊಬ್ಬರಿಗೆ ಹೊಲೆಯುವುದು ಅಸಾಧ್ಯ ಅನಿಸುತ್ತದೆ. ಇಂಗ್ಲೆಂಡಿನ ಸದಾ ಮುಚ್ಚಿರುವ ಬಾಗಿಲು , ಮೌನ( ಅದನ್ನವರು ಅಸಹ್ಯ ಮೌನ ಎನ್ನುತ್ತಾರೆ), ಬೊಗಳದ ನಾಯಿಗಳು, ಹಾರ್ನ್ ಮಾಡದ ಕಾರುಗಳು, ಗಟಾರಗಳಿಲ್ಲದ ರಸ್ತೆಗಳು... ಇಂಗ್ಲೆಂಡನ್ನು ಲೇವಡಿ ಮಾಡುತ್ತಾ ಹೋಗುತ್ತಾರೆ. ಕೊನೆಗೆ ದೇಶಭಕ್ತ ಭಾರತೀಯನನ್ನೂ ಗೇಲಿ ಮಾಡುತ್ತಾರೆ. ಚಂಪಾ ಅವರು ಇಂಗ್ಲೆಂಡಿನ ಲೀಡ್ಸ್ ನಗರದಲ್ಲಿ ಸ್ನಾತಕೋತ್ತರ ತರಬೇತಿಯನ್ನು ಪಡೆದಿದ್ದರು ಎಂದು ಇತ್ತೀಚೆ ಗೊತ್ತಾಯಿತು. 


ಚಂಪಾ ತೀರಿಕೊಂಡ ಸುದ್ಧಿ ಬಂದಾಗ ನನ್ನ ಬಳಿ ಇರುವ ಪುಸ್ತಕಗಳಿಂದ ಚಂಪಾ ಅವರ ಕವನಗಳನ್ನು ಮತ್ತೆ ಓದಿದೆ. ಅವರ ‘ಬೇಡ’ ಎನ್ನುವ ಕವನದಲ್ಲಿ ಬರೆದ ಸಾಲುಗಳು ಅವರ ನಿಧನದ ಸಂದರ್ಭದಲ್ಲಿ (ಅದರಲ್ಲೂ ಅವರನ್ನು ಕಂಡರಾಗದವರಿಗೆ) ಹೇಳಿ ಮಾಡಿಸಿದಂತಿದೆ: 


“ಬಾಳ ಕಾಳಗದಲ್ಲಿ ಸತ್ತು ಹೋದೇನು

ಹಲಗೆಯನು ನೀ ಹಿಡಿದು ಹೊಯ್ಕಳ್ಳಬೇಡ

ನಾಯಿ ನರಿಗಳು ನನ್ನ ಹೆಣತಿಂದು ನಲಿದಾವು

ಗೋರಿ ತೊಡಲು ನೀನು ಹೆಣಗಬೇಡ”


ಬೇಂದ್ರೆ ಮತ್ತು ಅಡಿಗರನ್ನೂ ವ್ಯಂಗ್ಯಮಾಡಬಲ್ಲ ತಾಕತ್ತಿದ್ದವರು ಚಂಪಾ ಒಬ್ಬರೇ ಇರಬೇಕು. “ಎಲ್ಲೋ ಹುಟ್ಟಿ ಎಲ್ಲೋ ಬೆಳದು...” ಎಂದು ಶಾಲ್ಮಲಾ ಎಂದು ನದಿಯ ರೂಪಕವನ್ನಿಟ್ಟುಕೊಂಡ ಅದ್ಬುತ ಕವನ, ಅದನ್ನು ಅಜರಾಮರವಾಗಿಸಿದ ಸಿ.ಅಶ್ವಥ್ ಅವರ ಸ್ವರ ಸಂಯೋಜನೆಯಲ್ಲಿ ಸಿ.ಅಶ್ವಥ್ ಅವರೇ ಹಾಡಿದ ಹಾಡನ್ನು ‘ಲೂಪ್’ ನಲ್ಲಿ ಹಾಕಿಕೊಂಡು ಕೇಳುತ್ತಾ, ಓದುಗನಾಗಿ ಚಂಪಾ ಅವರಿಗೊಂದು ಶ್ರದ್ಧಾಂಜಲಿ ಅರ್ಪಿಸುತ್ತೇನೆ. 


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)


Saturday 15 January 2022

ಇಂಗ್ಲೆಂಡ್ ಪತ್ರ 15

 ಹೊಸ ವರ್ಷ ಬಂದರೂ ಬಿಡದ ಕರೊನಾ:


೨೦೧೯ರ ಹೆಸರನ್ನು ಇಟ್ಟುಕೊಂಡು ಜನವರಿ ೨೦೨೦ರಲ್ಲಿ ಜಗತ್ತನ್ನು ಆವರಿಸಿದ ಕೋವಿಡ್-೧೯ ಎನ್ನುವ ನಾಮಾಂಕಿತ ವೈರಸ್ 2022 ಬಂದರೂ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬ್ರಿಟನ್ನಿನಲ್ಲಿ ಹಿಂದೆಂದೂ ಕಂಡಿರದಷ್ಟು ಪ್ರಮಾಣದಲ್ಲಿ ಜನರು ಸೋಂಕಿತರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಭರ್ತಿಯಾಗುವವರೂ ಹೆಚ್ಚಾಗುತ್ತಿದ್ದಾರೆ. ಆದರೆ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ, ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ ಅದೇ ಪ್ರಮಾಣದಲ್ಲಿ ಇನ್ನೂ ಹೆಚ್ಚಾಗಿಲ್ಲ ಎನ್ನುವುದು ನೀತಿ-ನಿಯಮಗಳನ್ನು ಮಾಡುವವರಿಗೆ ಸ್ವಲ್ಪ ಸಮಾಧಾನದ ಸಂಗತಿ. ಹೀಗಾಗಿ ಇಲ್ಲಿನ್ನೂ ಲಾಕ್‌ಡೌನ್‌ಗಳಗಲೀ, ಸಿನೆಮಾ-ರೆಸ್ಟೋರೆಂಟಗಳನ್ನು ಮುಚ್ಚುವುದಾಗಲೀ, ಶಾಲಾ ಕಾಲೇಜುಗಳನ್ನು ಬಂದ್‍ ಮಾಡುವುದಾಗಲೀ ನಡೆದಿಲ್ಲ.  


ಬ್ರಿಟನ್ನಿನಲ್ಲಿ ಎಲ್ಲರಿಗೂ ಮೂರನೇ ಸಲ ಲಸಿಕೆ(ಬೂಸ್ಟರ್ ಡೋಸ್ )ಯನ್ನು ಕೊಡುವ ಕೆಲಸ ಭರದಿಂದ ಸಾಗುತ್ತಿದೆ. ಜೊತೆಗೆ ಕೋವಿಡ್ ಸೋಂಕಿತರಿಗೆ ವಿವಿಧ ತರಹದ ಹೊಸ ಹೊಸ ಔಷಧಗಳನ್ನು ಉಪಯೋಗಿಸಲು ಅನುಮೋದನೆಯನ್ನು ಕೊಟ್ಟಿದ್ದಾರೆ. ಸರಕಾರವಾಗಲೀ ಆರೋಗ್ಯ ವ್ಯವಸ್ಥೆಯಾಗಲೀ ಮೊದಲಿನಷ್ಟು ಹೆದರಿಕೊಂಡಂತೆ ಅನಿಸುತ್ತಿಲ್ಲ. ಆದರೆ ಮುಂದೇನು ಎಂದು ಹೇಳುವರು ಯಾರು? ಈ ವರ್ಷವಾದರೂ ಎಲ್ಲ ಸರಿಹೋಗಬಹುದು, ಇದೆಲ್ಲ ಮುಗಿದುಹೋಗಬಹುದು ಎನ್ನುವ ಆಶಯದೊಂದಿಗೆ ಹೊಸ ವರ್ಷವನ್ನು ಆರಂಭಿಸಿದರೆ ಖಿನ್ನತೆಯಾದರೂ ಓಡಿಹೋದೀತು. 


ಭಾರತದಲ್ಲಿಯೂ ಓಮಿಕ್ರಾನ್ ರೂಪಾಂತರಿ ಕರೊನಾ ವೈರಾಣು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಭಾರತದಲ್ಲೂ ಲಸಿಕೆಯ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಎರಡನೇ ಅಲೆಯ ಆರಂಭದಲ್ಲಿ ಭಾರತದಲ್ಲಿ ಉಂಟಾದ ಅಲ್ಲೋಲ-ಕಲ್ಲೋಲ (ಆಮ್ಲಜನಕ ಕೊರತೆ, ಸಾವುಗಳು, ಫಂಗಸ್) ಈ ಸಲ ಆಗದಿರಲಿ ಎನ್ನುವ ಆಶಯ ಮತ್ತು ಪ್ರಾರ್ಥನೆ ಇಲ್ಲಿರುವ ಎಲ್ಲ ಭಾರತೀಯರದು.


ಕೊರೊನಾದಿಂದಾಗಿ ಎಲ್ಲ ದೇಶಗಳು ತತ್ತರಿಸುತ್ತಿದ್ದರೂ, ಜೋಕೋವಿಚ್ (ಪ್ರಖ್ಯಾತ ಟೆನಿಸ್ ಆಟಗಾರ) ಲಸಿಕೆ ಹಾಕಿಸಿಕೊಳ್ಳದೇ ಆಸ್ಟ್ರೇಲಿಯಾವನ್ನೇ ಎದುರು ಹಾಕೊಕೊಂಡು ಗೆದ್ದು, ಲಸಿಕಾವಿರೋಧಿಗಳಲ್ಲಿ ಪುಳಕವೆಬ್ಬಿದಿದ್ದಾರೆ. ಬ್ರಿಟನ್ನಿನಲ್ಲಿ ಕೂಡ ಡಾ.ಸ್ಟೀವ್ ಜಾಬ್ಸ್, ಸ್ವತಃ ಆಸ್ಪತ್ರೆಗಳಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದರೂ, ತನ್ನ ಕಣ್ಣೆದುರಿಗೇ ಕೊರೊನಾದಿಂದ ಸತ್ತವರನ್ನು ನೋಡಿದರೂ, ಇದುವರೆಗೂ ಯಾವ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಮತ್ತು ತಮ್ಮ ಲಸಿಕಾ ವಿರೋಧಿ ಧೋರಣೆಯನ್ನು ಘಂಟಾಘೋಷವಾಗಿ ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಲಸಿಕಾ ವಿರೋಧಿಗಳು ಎಲ್ಲೆಡೆ ಇದ್ದಾರೆ, ಅದಕ್ಕೆ ಅವರದೇ ಆದ ತರ್ಕಗಳಿವೆ. ಲಸಿಕಾ ವಿರೋಧಿಗಳು ಅನಕ್ಷರಸ್ಥರೇ ಆಗಬೇಕಾಗಿಲ್ಲ, ಲಸಿಕಾ ವಿರೋಧಕ್ಕೆ ಭಾರತವೂ ಹೊರತಲ್ಲ, ಕ್ರಿಶ್ಚಿಯನ್ನರು, ಬೌದ್ಧರು, ಹಿಂದೂಗಳು, ಮುಸಲ್ಮಾನರು ಯಾರೂ ಹೊರತಾಗಿಲ್ಲ. ವಿಶ್ವವಿಖ್ಯಾತ ಟೆನಿಸ್ ಆಟಗಾರರಿಂದ ಹಿಡಿದು ಹೇಳಹೆಸರಿಲ್ಲದ ನನ್ನಂಥ ಶ್ರೀಸಾಮಾನ್ಯನವರೆಗೆ ಆಧುನಿಕ ಮತ್ತು ವೈಜ್ಞಾನಿಕ ತರ್ಕಗಳನ್ನು ನಂಬದವರು ಜಗತ್ತಿನ ಎಲ್ಲಕಡೆ ಇರುತ್ತಾರೆ. ಆದ್ದರಿಂದ ಲಸಿಕಾ ವಿರೋಧಿಗಳಿಗೆ ಧರ್ಮದ ಲೇಪನವನ್ನು ಕೊಡುವುದು, ಅಶಿಕ್ಷಿತರು ಎಂದು ಜರೆಯುವುದು ಸಮಂಜಸವಲ್ಲ ಎನಿಸುತ್ತದೆ.


ತರಂಗ ಮತ್ತು ಸುಧಾ: 


ನಾನು ಹುಟ್ಟುವ ಮೊದಲೂ ನಮ್ಮ ಮನೆಗೆ ’ಸುಧಾ’ ಬರುತ್ತಿತ್ತು. ನನಗೆ ಕನ್ನಡ ಓದಲು ಬರುವ ಮೊದಲಿನಿಂದಲೂ ನಾನು ’ಸುಧಾ’ ಓದಿದ್ದೇನೆ; ನಾನು ಅದರಲ್ಲಿರುವ ಫ್ಯಾಂಟಮ್‌ನ ಚಿತ್ರಗಳನ್ನು ನೋಡುತ್ತಿದ್ದೆ, ನನ್ನ ಅಣ್ಣ ಓದಿ ಹೇಳುತ್ತಿದ್ದ. ’ಸುಧಾ’ ನನ್ನ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು. 


ಹತ್ತು ಹನ್ನೊಂದು ವರ್ಷವಾಗುವಷ್ಟರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಒಂದು ಅಕ್ಷರವನ್ನೂ ಬಿಡದೆ (ಜಾಹೀರಾತುಗಳನ್ನೂ ಸೇರಿಸಿ ) ಓದುತ್ತಿದ್ದೆ. ಅರ್ಥವಾಗಲಿ ಬಿಡಲಿ ಅದರಲ್ಲಿರುವ ಕತೆಗಳನ್ನು ಧಾರಾವಾಹಿಗಳನ್ನೂ ಮುಗಿಸುತ್ತಿದ್ದೆ. ಟಿ ಕೆ ರಾಮರಾವ್ ಮತ್ತು ಯಂಡಮೂರಿ ವಿರೇಂದ್ರನಾಥ ನನ್ನ ಅಚ್ಚುಮೆಚ್ಚಿನ ಕತೆಗಾರರಾಗಿದ್ದರು.  1982ರಲ್ಲಿ ‘ತರಂಗ’ ಎನ್ನುವ ವಾರಪತ್ರಿಕೆಯೊಂದು ಶುರುವಾದದ್ದು ಗೊತ್ತಾಯಿತು. ನನ್ನ ಗೆಳೆಯನೊಬ್ಬನ ಮನೆಯಲ್ಲಿ ಅದನ್ನು ಮೊಟ್ಟಮೊದಲು ನೋಡಿದ ನೆನಪು. ‘ಸುಧಾ’ ವಾರಪತ್ರಿಕೆಗಿಂತ ತುಂಬ ವಿಭಿನ್ನವಾದ ರೀತಿಯಲ್ಲಿ ಕಾಣಿಸಿತು. ‘ಸುಧಾ’ ಪತ್ರಿಕೆಯ ಸಂಪಾದಕರು ಯಾರು ಎಂದು ಗೊತ್ತೇ ಇರಲಿಲ್ಲ. ಆದರೆ ‘ತರಂಗ’ದ ಮೊದಲ ಸಂಚಿಕೆಯನ್ನು ತೆರೆಯುತ್ತಿದ್ದಂತೆ ಸಂತೋಷಕುಮಾರ ಗುಲ್ವಾಡಿ ಎನ್ನುವ ಸಂಪಾದಕರ ಹೆಸರು ಮನದಲ್ಲಿ ಸ್ಥಾಪಿತವಾಯಿತು. ‘ತರಂಗ’ ಪತ್ರಿಕೆಯ ಪ್ರತೀ ಪುಟವೂ ವಿಭಿನ್ನವಾಗಿ ಕಂಡಿತ್ತು. ‘ತರಂಗ’ ಎಂದು ಬರೆದಿರುವ ರೀತಿಯಿಂದ ಹಿಡಿದು, ಕೊನೆಯ ಪುಟದವರೆಗೂ ಗುಲ್ವಾಡಿಯವರ ಶ್ರಮ ಕಾಣುತ್ತಿತ್ತು. ’ತರಂಗ ನಮ್ಮ ಮನೆಗೂ ಬರಲು ಶುರುವಾಯಿತು. ‘ಸುಧಾ’ ಘನಗಾಂಬೀರ್ಯದ ಮಧ್ಯವಯಸ್ಕನಂತೆ ಕಂಡರೆ, ‘ ತರಂಗ’ ಟೀನೇಜಿನ ಗುಣಗಳನ್ನು ಹೊಂದಿತ್ತು.


ಕತೆ ಬರೆದವರ ಹೆಸರನ್ನಲ್ಲದೇ ಅವರ ವಿಳಾಸ ಮತ್ತು ಭಾವಚಿತ್ರವನ್ನು ಪ್ರಕಟಿಸುವ ಪರಿಪಾಠವನ್ನು ಆರಂಭಿಸಿದ್ದು, ’ತರಂಗ’. ಪ್ರಿಂಟ್ ಮತ್ತು ಕಾಗದದ ಗುಣಮಟ್ಟವೂ ’ಸುಧಾ’ಗಿಂತ ಒಂದು ಪಟ್ಟು ಮೇಲೇ ಇರುತ್ತಿತ್ತು. ಸಿನೆಮಾ ಪುಟಗಳು ರೋಚಕವಾಗಿರುತ್ತಿದ್ದವು. ಹರಿಣಿಯವರು ಬರೆವ ವ್ಯಂಗ್ಯಚಿತ್ರಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿತ್ತು.ಆಗಾಗ ವಿಶೇಷ ಸಂಚಿಕೆಗಳನ್ನು ಮಾಡುತ್ತಿದ್ದರು. ನಿಜವಾದ ಅರ್ಥದಲ್ಲಿ ’ತರಂಗ’ವು ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪತಾಹಿಕವಾಗಿತ್ತು. 


’ತರಂಗ’ವಾಗಲಿ, ’ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ’ಸುಧಾ’ ಅಥವಾ ’ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ’ತರಂಗ’ ಹರಿದು ಹೋದಿದ್ದಿದೆ. 


ನನ್ನ ಹೆಸರು ಮೊಟ್ಟ ಮೊದಲು ದಾಖಲಾಗಿದ್ದು ‘ತರಂಗ’ದಲ್ಲಿ. ಆಗ ‘ತರಂಗ’ದಲ್ಲಿ ಕಾರಂತಜ್ಜನಿಗೆ ಪ್ರಶ್ನೆ ಕಳಿಸಬಹುದಿತ್ತು. ನಾನು ೧೫ ಪೈಸೆಯ ಪೋಸ್ಟ್‌ಕಾರ್ಡಿನಲ್ಲಿ, ‘ಪೂಜ್ಯ ಕಾರಂತಜ್ಜನಿಗೆ, ಶಿರಸಾಷ್ಟಾಂಗ ನಮಸ್ಕಾರಗಳು...’ ಎಂದು ಆರಂಭಿಸಿ ಪ್ರಶ್ನೆಗಳನ್ನು ಕಳಿಸಿದ್ದೆ (ಯಾವ ಪ್ರಶ್ನೆಗಳು

ಎನ್ನುವುದು ಮರೆತು ಹೋಗಿದೆ). ಅವುಗಳಲ್ಲಿ ಒಂದು ಪ್ರಶ್ನೆಯನು ಎತ್ತಿಕೊಂಡು, ಕಾರಂತರು ಉತ್ತರಿಸಿದ್ದರು. ‘ತರಂಗ’ದಲ್ಲಿ ನನ್ನ ಹೆಸರನ್ನು ನೋಡಿ, ನನ್ನ ಪ್ರಶ್ನೆಗೆ ಕಾರಂತರು ಉತ್ತರಿಸಿದ್ದನ್ನು ನೋಡಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಶಾಲೆಗೆ ‘ತರಂಗ’ ವನ್ನು ತೆಗೆದುಕೊಂಡು ಹೋಗಿ ಗೆಳೆಯರಿಗೆ ಮತ್ತು ಗುರುಗಳಿಗೆ ತೋರಿಸಿದ್ದೆ.


ನಾನೂ ಬರೆಯಬಹುದು ಎನ್ನುವಂತೆ ಮಾಡಿದ್ದೆ ‘ತರಂಗ’. ‘ಸುಧಾ’ ಪತ್ರಿಕೆಯಲ್ಲಿ ಮಕ್ಕಳು ಏನನ್ನಾದರು ಬರೆದರೆ ಅದನ್ನು ಪ್ರಕಟಿಸುತ್ತಾರೋ , ಇಲ್ಲವೋ ಗೊತ್ತಿರಲಿಲ್ಲ. ಜೊತೆಗೆ ಎಲ್ಲಿ ಕಳಿಸಬೇಕು, ಹೇಗೆ ಕಳಿಸಬೇಕು ಎನ್ನುವ ಸೂಚನೆಗಳು ಇರಲಿಲ್ಲ. ಆದರೆ ‘ತರಂಗ’ ದಲ್ಲಿ ಮಕ್ಕಳು ಕೂಡ ಬರೆಯಲು ಅನುಕೂಲವಾಗುವಂತೆ ‘ಮಕ್ಕಳ ವಿಭಾಗ’ದಲ್ಲಿ ಎಲ್ಲಿ ಬರೆದು ಕಳಿಸಬೇಕು ಎನ್ನುವ ಸೂಚನೆ ಇರುತ್ತಿತ್ತು.


ಆಗ ನಾನು ‘ಕವನ’ಗಳನ್ನೂ ಬರೆಯುವ ಪ್ರಯತ್ನ ಮಾಡುತ್ತಿದ್ದೆ. ’ಸುಧಾ’ ಮತ್ತು ‘ತರಂಗ’ದ ‘ಬಾಲಪುಟ’ಗಳಲ್ಲಿ ಬರುವ ಕವನಗಳನ್ನು ಅನುಕರಿಸಿ ಈಗಾಗಲೇ ಸಾಕಷ್ಟು ’ಕವನ’ಗಳನ್ನು ಬರೆದಿದ್ದೆ. ಅವುಗಳಲ್ಲಿ ನನಗೆ ಇಷ್ಟವಾದ ಕವನವೊಂದನ್ನು ‘ತರಂಗ’ಕ್ಕೆ ‘ಇನ್‌ಲ್ಯಾಂಡ್ ಲೆಟರ್’ನಲ್ಲಿ ಬರೆದು ಕಳಿಸಿದೆ. ಅದಾದ ಮೇಲೆ, ಪ್ರತಿವಾರ ತರಂಗವನ್ನು ತೆಗೆದಾಗಲೂ ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು. ಎರಡು ತಿಂಗಳಾಗುವಷ್ಟರಲ್ಲಿ ನನ್ನ ಕವನದ ಪ್ರಕಟಣೆಯ ಆಸೆಯನ್ನು ಬಿಟ್ಟುಬಿಟ್ಟಿದ್ದೆ. ಆದರೆ ಅದಾಗಿ ಕೆಲವು ವಾರಗಳ ನಂತರ ನನ್ನ ಕವನ ಪ್ರಕಟವಾಗಿತ್ತು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಪರೀಕ್ಷೆಯ ಅಂಕಗಳಿಗಿಂತ, ಶಾಲೆಯ ‍‍ರ‍್ಯಾಂಕಿಗಿಂತಲೂ, ಕ್ರಿಕೆಟ್ ಮ್ಯಾಚು ಗೆದ್ದುದಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಬಂದ ಅನುಭವ ಆಗಿತ್ತು. 


ಇದಾದ ಮೇಲೆ 90ರ ದಶಕದಲ್ಲಿ ನಾನು ಬರೆದ ಎರಡು ಕತೆಗಳು ‘ತರಂಗ’ದಲ್ಲಿ ಪ್ರಕಟವಾದವು. ಒಂದು ಕತೆಯಂತೂ ‘ತಿಂಗಳ ಬಹುಮಾನಿತ ಕತೆ’ಯಾಯಿತು. ಆಗಿನ ಕಾಲಕ್ಕೆ ನನಗೆ ಬಂದ ದುಡ್ಡು ೫೦೦ ರೂಪಾಯಿ! ಆಗ ನನ್ನ ತಿಂಗಳ ಹಾಸ್ಟೇಲು-ಊಟ-ಪುಸ್ತಕ-ಸಿನೆಮಾ ಎಲ್ಲ ಸೇರಿ 200 ರೂಪಾಯಿ ಖರ್ಚಾಗುತ್ತಿತ್ತು. ಅಂದರೆ ಒಂದು ಕತೆಗೆ ಎರಡುವರೆ ತಿಂಗಳು ಬದುಕುವಷ್ಟು ದುಡ್ಡು! 


2002ರಲ್ಲಿ ಭಾರತವನ್ನು ಬಿಡುವವರೆಗೂ ‘ತರಂಗ’ವನ್ನು (’ಸುಧಾ’ವನ್ನೂ) ಒಂದು ವಾರವೂ ಬಿಡದೆ ಓದಿದ್ದೇನೆ. ಯಾವುದೇ ಕತೆ, ಧಾರಾವಾಹಿ ಆಗಿರಲಿ, ಬಿಟ್ಟಿಲ್ಲ. ಅದಾದ ಮೇಲೆ ’ತರಂಗ’ ಮತ್ತು ’ಸುಧಾ’ಗಳ ಸಂಪರ್ಕ ಬಿಟ್ಟು ಹೋಗಿತ್ತು. 


ಈಗ ಕೆಲವು ವರ್ಷಗಳಿಂದ ‘ತರಂಗ’ ಮತ್ತು ’ಸುಧಾ’ ಎರಡೂ ಆನ್‌ಲೈನ್‌ನಲ್ಲಿ ಸಿಗುತ್ತವೆ. ಈಗಲೂ ಪ್ರತಿವಾರ ’ಸುಧಾ’ ಮತ್ತು”ತರಂಗ’ಗಳ ಮೇಲೆ ಕಣ್ಣಡಿಸುತ್ತೇನೆ. ಯಾವುದಾದರೂ ಆಸಕ್ತಿದಾಯಕ ಅನಿಸಿದರೆ ಓದುತ್ತೇನೆ. ‘ತರಂಗ’ ಮತ್ತು ’ಸುಧಾ’ಗಳಲ್ಲಿ ಮೊದಲಿನ ಲವಲವಿಕೆ ಇಲ್ಲ ಅನ್ನಿಸುತ್ತದೆ. ಅದಕ್ಕೆ ನನ್ನ ವಯಸ್ಸು ಕಾರಣವಾಗಿರಬಹುದು, ಅಥವಾ ದೇಶದಿಂದ ದೂರ ಬಂದ ಕಾರಣವಿರಬಹುದು, ಈ ಪತ್ರಿಕೆಗಳ ಬದಲಾದ ಧೋರಣೆಗಳಿರಬಹುದು. 


ಅದೇನೇ ಇರಲಿ , ‘ತರಂಗ’ ಮತ್ತು ‘ಸುಧಾ’ ನನ್ನ ಪೀಳಿಗೆಯನ್ನು ‘ಕನ್ನಡ’ದಲ್ಲಿ ಆಡಿಸಿ ಬೆಳೆಸಿದ ವಾರಪತ್ರಿಕೆಗಳು ಎನ್ನುವುದರಲ್ಲಿ ಯಾವುದೇ ತಕರಾರಿಲ್ಲ. ಈಗ ‘ತರಂಗ’ಕ್ಕೆ 40ರ ಸಂಭ್ರಮ. ಅದಕ್ಕೆ ಇದೆಲ್ಲ ನೆನಪಾಯಿತು. ’ತರಂಗ’ ಮತ್ತು ’ಸುಧಾ’ಗಳು ಇನ್ನೂ ನೂರ್ಕಾಲ, ಸಾವಿರಾರು ವರ್ಷ ಕನ್ನಡಿಗರ ಮನೆಮನಗಳಲ್ಲಿ ಕನ್ನಡವನ್ನು ಬೆಳುತ್ತಲಿರಲಿ. 


(’ಕೆಂಡಸಂಪಿಗೆ’ಯಲ್ಲಿ ಮೊದಲು ಪ್ರಕಟಿತ)