Friday 7 August 2015

ಬಿ ಜಯಶ್ರೀ ಅವರೊಂದಿಗೆ ಒಂದಿಷ್ಟು ಮಾತುಕತೆ


ಬಿ ಜಯಶ್ರೀಯವರು ಇಂಗ್ಲೆಂಡಿಗೆ ಬಂದಾಗ ಅವರೊಂದಿಗೆ ಅರ್ಧ ಗಂಟೆ ಮಾತಾಡುವ ಅವಕಾಶ ಸಿಕ್ಕಿತ್ತು. ಅವರ ಮಾತುಗಳು ನಿಮ್ಮ ಮುಂದೆ..

ಗುಬ್ಬಿ ವೀರಣ್ಣನವರ ಬಗ್ಗೆ…

ಅಷ್ಟು ಬೇಗ ಮುಗ್ಸೋಕೆ ಆಗಲ್ವಲ್ಲಾ (ನಗು). ಗುಬ್ಬಿ ವೀರಣ್ಣ ನನ್ನ ತಾತ, ಓದಿದ್ದು ಬಹುಷಃ ನಾಕನೇ ಕ್ಲಾಸು. ಆದರೆ ಗಳಿಸಿದ್ದು ಅಪಾರ. ‘ನಾನು ತಿಳಿದೋನಲ್ಲ, ಓದಿದವನಲ್ಲ’ ಎಂಬ ವಿನಯ. ಕಂಪನಿ ಮಾಲಿಕನಿಂದ ಬಂದ ಬಳುವಳಿ. ೧೦೫ ವರ್ಷ ಯಾವ ಡಿಗ್ರಿ ಹೋಲ್ಡರಿಗೂ ಕಡಿಮೆ ಇಲ್ಲದಂತೆ ನಡೆಯಿತು ಕಂಪನಿ. Its just not a company, its University ಅಂತ ಪ್ರೂವ್ ಮಾಡಿದರು. ಅಂಥ ದೊಡ್ಡ ವ್ಯಕ್ತಿಯ ಮೊಮ್ಮಗಳಾಗಿ ನನಗೆ ಹೆಮ್ಮೆ. ಅವರ ಮೊಮ್ಮಗಳಾಗಿ ಅಷ್ಟೊಂದು ಸಾಧನೆ ಮಾಡಿದ್ದೇನೂ ಇಲ್ಲವೋ ಗೊತ್ತಿಲ್ಲ.

ಎಲ್ಲಿ ಹೋದರೂ ನನ್ನ ತಾತನ ನೆನಪು ನನಗೆ ತುಂಬಾ ಇದೆ. ಅವರು ಮಾಡಿದಂಥಾ ರಂಗಭೂಮಿಗೆ ನನ್ನಿಂದ ಯಾವುದೇ ಅಪಚಾರ ಆಗಬಾರದು, ತಪ್ಪು ಆಗಬಾರದು, ಅವರ ಹೆಸರಿಗಾಗಲೀ ರಂಗಭೂಮಿಗಾಗಲೀ ಯಾವ ಅಪಚಾರವಾಗಬಾರದು ಎಂದು ನೆನಪಿಟ್ಟುಕೊಂಡೇ ನಾನು ರಂಗಭೂಮಿಯಲ್ಲಿರೋದು.

ನಾನು ನಾಕು ವರ್ಷಕ್ಕೆ ರಂಗಭೂಮಿಗೆ ಬಂದಿದ್ದು. ನನ್ನ ತಾತನನ್ನು ಅವರ ೭೨ ವರ್ಷದವರೆಗೂ ನೋಡಿದ್ದೇನೆ. ಎನ್ ಎಸ್ ಡಿ (ನ್ಯಾಷನಲ್ ಸ್ಕೂಲ್ ಆಫ ಡ್ರಾಮಾ)ದಲ್ಲಿ ನಾನಿದ್ದಾಗ ಅವರು ತೀರಿಕೊಂಡ್ರು, ಆ ವಿಷಯಾನ ಅಲ್-ಖಾಜಿ ಹೇಳಿದ್ರು, ‘ನಿಮ್ಮ ತಾತ ಹೊರಟುಹೋದ್ರು, ಯಾವುದೇ ಕಾರಣಕ್ಕೂ ನೀನು ಅಳಬಾರದು. ಅವರಿಗೆ ನಿನ್ನ ರಂಗಭೂಮಿಯ ಮೂಲಕ ಶೃದ್ದಾಂಜಲಿ ಅರ್ಪಿಸು’. ನಾನು ಅದನ್ನು ಪಾಲಿಸಿದೆ.

ನನ್ನ ತಾತನ ಪ್ರಭಾವ ನನ್ನ ಮೇಲೆ ತುಂಬಾ ದೊಡ್ಡದು. ಅವರಿಗೆ ಬಹಳ ಒಳ್ಳೆಯ ಹಾಸ್ಯಪ್ರಜ್ಞೆ ಇತ್ತು. ಬಹಳ ಒಳ್ಳೆ organizer. ಎಲ್ಲಕ್ಕಿಂತ ಹೆಚ್ಚಾಗಿ ಬಹಳ ದೊಡ್ಡ ಮನುಷ್ಯ. ತಾನು ಒಂದು ದೊಡ್ಡ ಕಂಪನಿಯ ಮಾಲಿಕ, ಕಂಪನಿ ನಡೆಸ್ತಿರೋ ಓನರು ಎನ್ನುವ ಭಾವನೆ ಯಾವತ್ತೂ ಇರಲಿಲ್ಲ. ತಾನು ಎಲ್ಲರಿಗಿಂತ ಕಿರಿಯವ ಎನ್ನುವ ಭಾವನೆ. ಯಾವ ನಟನಿಗೆ ನೋವಾದರೂ ಆ ನಟನ ನೋವು ನಿವಾರಣೆ ಮಾಡೋವ್ರು.

ಒಂದು ಸರ್ತಿ, ಕಂಪನಿಯಲ್ಲಿ ಒಬ್ಬ ನಟ, ಬಹಳ ದೊಡ್ಡ ನಟ, ಮೇರು ನಟ…ಅವನಿಗೆ ಸ್ನಾನಕ್ಕೆ ಬಿಸಿನೀರು ಸಿಗಲಿಲ್ಲ. ಸಿಟ್ಟು ಬಂದು ಕಂಪನಿ ಬಿಟ್ಟು ಹೊರಟು ಹೋಗ್ತೀನಿ ಅಂತ ಹಠ ಹಿಡಿದ. ಆಗ ಡ್ರಂನಲ್ಲಿ ನೀರು ಕಾಯಿಸ್ತಾ ಇದ್ರು. ೧೦೦ ಜನ ಇದ್ದಂಥ ಕಂಪನಿ. ಆ ವಿಷಯ ಗೊತ್ತಾದ ತಕ್ಷಣ ಇವರು ಓಡಿ ಬಕೆಟ್ಟಿನಲ್ಲಿ ನೀರು ಕಾಯಿಸಿಕೊಂಡು ತೋಡಿಕೊಂಡು ಅವರತ್ತ ಓಡಿಹೋಗಿ, ‘ಹಾಗೆಲ್ಲ ಬಿಟ್ಟೋಗೋ ಮಾತಾಡಬೇಡಿ, ನೀವು ಬಿಟ್ರೆ ಕಂಪನಿಗೆ ಒಳ್ಳೆಯದಲ್ಲ’, ಅಂತೆಲ್ಲ ಸಮಾಧಾನ ಮಾಡಿದರು. ಅಂಥಾ ದೊಡ್ಡ ವ್ಯಕ್ತಿ, ಮೇರು ವ್ಯಕ್ತಿ, ನನ್ನ ತಾತ.

ಗುಬ್ಬಿ ವೀರಣ್ಣನವರೇ ಕನ್ನಡದ ಮೊಟ್ಟಮೊದಲ ಮೂಕಿ ಸಿನೆಮಾ ಮಾಡಿದ ವ್ಯಕ್ತಿ. ಅಂಥ ಛಲ ಇತ್ತು ಅವರಲ್ಲಿ, ‘ಸೋತರೂ ಚಿಂತೆಯಿಲ್ಲ, ಈ ವಿಷಯ ಗೊತ್ತಾಗಬೇಕು. ತಪ್ಪು ಮಾಡಿದ್ರೆನೇ ಸರಿ ಯಾವುದು ಅಂತ ಗೊತ್ತಾಗಲು ಸಾಧ್ಯ’, ಎನ್ನುವಂಥ ಯೋಚನೆ.

೧೦೦ ವರ್ಷ ನಡೆದಿರುವಂಥ ಕಂಪನಿ ಏಶ್ಯಾದಲ್ಲೇ ಮೊದಲು. ಕಂಪನಿಯಿಂದ ಎಷ್ಟೊಂದು ಮೇರು ನಟರು, ಕಲಾವಿದರು ಸಿನೆಮಾಗೆ ಬಂದರು. ರಾಜಣ್ಣ, ಬಾಲಣ್ಣ, ನರಸಿಂಹರಾಜು… ಒಬ್ರೇ ಇಬ್ರೇ.. ಕಾಲ ಸರಿದಂತೆ ಅವರು ತಮ್ಮ ತಮ್ಮ ವೃತ್ತಿಯಲ್ಲಿ ಬಿಜಿಯಾದರು. ಆದ್ರೆ ತಾತ ತೀರಿಕೊಂಡಾಗ ಎಲ್ಲ ಬಂದಿದ್ದರು.

ನ್ಯಾಷನಲ್ ಸ್ಕೂಲ್ ಆಪ್ಹ್ ಡ್ರಾಮ (ಎನ್.ಎಸ್. ಡಿ) ಬಗ್ಗೆ…

ಎನ್.ಎಸ್.ಡಿ ಗೆ ಹೋಗುವ ಮೊದಲೇ ಎಲ್ಲ ಪ್ರಾಕ್ಟಿಕಲ್ಸ್ ಆಗಿ ಹೋಗಿತ್ತು. ಎನ್.ಎಸ್.ಡಿ ನಲ್ಲಿ ಥಿಯರಿ ಕಲಿತಿದ್ದು.

ಗುಬ್ಬಿ ಕಂಪನಿಯಲ್ಲಿ ಲೈಟ್ಸ್ ಇರಲಿಲ್ಲ, ಪೆಟ್ರೋಮ್ಯಾಕ್ಸ್ ಹಾಕಿ ನಾಟಕ ಮಾಡೋವ್ರು. ಆದ್ದರಿಂದ ಮುಖಕ್ಕೆ ಹಾಕುವ ಬಣ್ಣ ತುಂಬಾ ಜಾಸ್ತಿ ಆಗಿರ್ತಾ ಇತ್ತು. ಗ್ರೀಕ್ ಥೇಟರಿನಲ್ಲಿ ಮಾಸ್ಕ್ ಹಾಕಿದಂತೆ. ಲೈಟ್ಸ್ ಬಂದಮೇಲೆ ಅದರದೇ ಆದಂಥ ಒಂದು ಬೆಳವಣಿಗೆ ಶುರುವಾಯಿತು. ಆಮೇಲೆ ಸ್ಪಾಟ್ ಲೈಟ್ಸ್ ಬಂತು. ಲೈಟನ್ನು ಹೀಗೆ ಬಿಡಬೇಕು ಅಂತ ಗೊತಾಯಿತೇ ವಿನಃ ಬಣ್ಣ ಎಷ್ಟರ ಮಟ್ಟಿಗೆ ಕಡಿಮೆ ಮಾಡಬೇಕು ಅನ್ನೋದು ಗೊತಾಗಲಿಲ್ಲ. ಇದು ಎನ್.ಎಸ್.ಡಿ ಗೆ ಹೋದಾಗ ನನ್ನ ಅರಿವಿಗೆ ಬಂತು.

ರಂಗಭೂಮಿಯ ಬಗ್ಗೆ …

ಮನುಷ್ಯನನ್ನು ಮನುಷ್ಯನ ಹಾಗೇ ಕಾಣಿಸುವಂಥ ಮಾಧ್ಯಮ ನಾಟಕ ಒಂದೇ. ಮನುಷ್ಯನನ್ನು ತುಂಬಾ ಚಿಕ್ಕವನನ್ನಾಗಿ ಮಾಡುವುದು ಕಿರುತೆರೆ – ಟಿವಿ. ಇರೋದಕ್ಕಿಂತ ಅಗಾಧವಾಗಿ ತೋರ್ಸೋದು ಬೆಳ್ಳಿತೆರೆ.

ರಂಗಭೂಮಿಯ ಜನ ಸೀರಿಯಲ್ಲಿಗೆ ಹೋಗಿದ್ದಾರೆ. ಸೀರಿಯಲ್ಲಿನಲ್ಲಿ ಬೇಗ ದುಡ್ಡು ಸಿಗುತ್ತೆ. ಏನು ಮಾಡೋಕಾಗುತ್ತೆ?

ಪರದೇಶದ ಕನ್ನಡಿಗರ ಬಗ್ಗೆ…

ಹೊರದೇಶದಲ್ಲಿ ಕನ್ನಡಿಗರನ್ನು ನೋಡಿದಾಗ ಖುಶಿಯಾಗುತ್ತೆ, ಇನ್ನೂ ಜ್ಞಾಪಕ ಇಟ್ಟುಕೊಂಡಿದ್ದಾರಲ್ಲ ನಮ್ಮನ್ನ ಅಂತ. ಬರಿ ಸಿನೆಮಾಗಳನ್ನೇ ಜ್ಞಾಪಿಸಿಕೊಳ್ತಾರಲ್ಲ ಅಂತ ಬೇಜಾರಾನೂ ಆಗುತ್ತೆ.

ಹೊರದೇಶದಲ್ಲಿ ಕನ್ನಡಿಗರು ಮಾಡುವ ಕನ್ನಡ ಕಾರ್ಯಕ್ರಮಗಳು ಇನ್ನೂ ಬೆಳೆಯಬೇಕಿತ್ತೇನೋ ಅಂತ ಅನಿಸುತ್ತೆ. ತಾವು ನಾಡನ್ನು ಬಿಟ್ಟು ಬಂದ ಕಾಲದಲ್ಲಿ ಅವರು ನಿಂತು ಬಿಟ್ಟಿದ್ದಾರೆ. ಇನ್ನೂ ತುಂಬಾನೇ ಇದೆ, ತುಂಬಾ ಬದಲಾವಣೆ ಆಗಿದೆ. ಅದನ್ನು ಕಲಿಯಬೇಕು.

ಅಲ್ಲೇನಿದೆ ಬರೋದಿಕ್ಕೆ ಅಂತ ನೀವು ಕೇಳ್ತೀರಿ, ಇಲ್ಲೇನಿದೆ ಇರೋದಿಕ್ಕೆ ಅಂತ ನಾನು ಕೇಳ್ತೀನಿ. ಅಲ್ಲಿ (ಭಾರತದಲ್ಲಿ, ಕರ್ನಾಟಕದಲ್ಲಿ) ನನ್ನತನ ಇದೆ, ನಾನಿದೀನಿ, ನನ್ನ ಆತ್ಮ ಇದೆ.

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)