Thursday 22 October 2009

ಲೇಖನ: ಪೇಪರ್ ಮತ್ತು ಚಹಾ

 ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ.  

ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.

ಓದು ಮುಗಿಸಿ ಕೆಲಸ ಸೇರಿದಾಗ, ಮೈಸೂರಿನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು. 

ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!

ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು  ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.