Thursday 15 January 2015

ಸಿನೆಮಾ: ಹಿಂದಿ: ಪಿಕೆ



ಸರ್ ಕೆನ್ ರಾಬಿನ್ ಸನ್ ‘TED’ ಟಾಕಿನಲ್ಲಿ ಒಂದು ಕತೆ ಹೇಳುತ್ತಾರೆ: ಅದೊಂದು ಪಾಶ್ಚಾತ್ಯ ದೇಶದ ಶಾಲೆ. ಅಲ್ಲಿ ಮಕ್ಕಳಿಗೆ ಚಿತ್ರ ಬರೆಯುವ ಪಾಠ. ಟೀಚರ್ ಒಂದು ಮಗುವಿಗೆ ಕೇಳುತ್ತಾಳೆ, ‘ ಏನು ಚಿತ್ರ ಬರೀತಿದ್ದೀಯಾ, ಪುಟ್ಟೀ?’. ಮಗು ಹೇಳುತ್ತೆ, ‘ ದೇವರ ಚಿತ್ರ’ ಟೀಚರ್, ‘ ಆದರೆ ದೇವರು ಹೇಗೆ ಇರುತ್ತಾನೆ ಎಂದು ಯಾರೂ ನೋಡಿಲ್ಲವಲ್ಲ!?’ ಎಂದು ಆಶ್ಚರ್ಯದ ಮುಖ ಮಾಡುತ್ತಾಳೆ. ಮಗು ಅಷ್ಟೇ ಆರಾಮಾಗಿ ಉತ್ತರಿಸುತ್ತೆ, ‘ಇನ್ನೈದು ನಿಮಿಷ ವೇಟ್ ಮಾಡಿ ಮೇಡಂ, ನಿಮಗೂ ಎಲ್ಲರಿಗೂ ಗೊತ್ತಾಗುತ್ತೆ’. PK ನೋಡಿ ಈ ಕತೆ ನೆನಪಾಯಿತು. 

ಯು ಆರ್ ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಯಲ್ಲಿ, ನಮ್ಮ ಜೀವನದಲ್ಲಿ, ಸಮಾಜದಲ್ಲಿ ‘ನಾವು ಸೃಷ್ಟಿಸಿದ ದೇವರು’ ಸಾಯದ ಹೊರತು ನಮ್ಮ ಜೀವನ ಮತ್ತು ಸಮಾಜ ಸುಧಾರಿಸುವುದಿಲ್ಲ, PK ಕೂಡ ಅದನ್ನೇ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಹೇಳುತ್ತದೆ. 

ಆದರೆ ‘ಭಾರತೀಪುರ’ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅಂಥ ಬದಲಾವಣೆಯನ್ನು ನಿರೀಕ್ಷಿಸುವುದು ಮತ್ತು ಅಂಥ ಒಂದು ಕ್ರಾಂತಿಗೆ ಉದ್ದೀಪಿಸುವುದು ಎಂಥಹ ನಿರಾಸೆ ತರುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಅದು PK ಸಿನೆಮಾದಲ್ಲಿ ಇರಲಿಲ್ಲ, ಆದರೆ ಅದನ್ನು PK ಸಿನೆಮಾ ಬಿಡುಗಡೆ ಆದ ಮೇಲೆ ಕೆಲವರು ಈ ಸಿನೆಮಾವನ್ನು ಬ್ಯಾನ್ ಮಾಡಬೇಕು ಎಂದು ಗಲಾಟೆ ಮಾಡಿ ಸಾಬೀತು ಮಾಡಿದರು! 

ಯಾವುದೇ ಒಳ್ಳೆಯ ಬರಹಗಾರನನ್ನು ಅಥವಾ ಸಿನೆಮಾ ನಿರ್ದೇಶಕನನ್ನು ತೆಗೆದುಕೊಳ್ಳಿ. ಅವರ ಆರಂಭದ ಕೃತಿಯಿಂದ ಹಿಡಿದು ಅಂತ್ಯದ ಕೃತಿಯವರೆಗೆ ಅವರು ಬರೆದ ಕತೆಗಳು/ ಕಾದಂಬರಿಗಳು/ ಸಿನೆಮಾಗಳು ಒಂದೇ ಕೇಂದ್ರದಿಂದ ಹೊರಬಂದಂತೆ ಕಾಣುತ್ತವೆ. ಉದಾಹರಣೆಗೆ ಪುಟ್ಟಣ್ಣ ಕಣಗಾಲ್ ಅವರ ಬಹುತೇಕ ಚಿತ್ರಗಳು ಸ್ತ್ರೀ ಪ್ರಧಾನವಾದವುಗಳು. ಸ್ತ್ರೀಪ್ರಧಾನ ಕತೆಗಳಿಂದ ಬದುಕಿನ ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಎಲ್ಲವನ್ನೂ ಎದುರಿಸಿ ಬದುಕುವದನ್ನು ಇಮೋಷನಲ್ಲಾಗಿ ಬಿಚ್ಚುತ್ತಾ ಹೋಗುತ್ತಾರೆ. ಲಂಕೇಶರ ಕತೆಗಳ ಕೇಂದ್ರ ಬಿಂದು, ಬದುಕಿನ ಹಿಪಾಕ್ರಸಿಯನ್ನು ಯಾವುದೇ ಹೇಸಿಗೆಯಿಲ್ಲದೇ ಉಣಬಡಿಸಿದ್ದು. ಈ ಹಿರಾನಿಯೂ ನನಗೆ ಅದೇ ಕಾರಣಕ್ಕೆ ಇಷ್ಟ. ಅವನ ಕೇಂದ್ರಬಿಂದು ಸಮಾಜದ ಹುಳುಕುಗಳು ಮತ್ತು ಮುಖ್ಯ ಪಾತ್ರಗಳೆಲ್ಲ ಮುಗ್ಧರು, ಮುನ್ನಾಭಾಯಿ, PK; ಅಷ್ಟೇ ಏಕೆ, 3 Idiotsನ ರಾಂಚೋ ಜಾಣನಾದರೂ ಬದುಕನ್ನು ಮಗುವಿನ ಬೆರಗುಗಣ್ಣಿನಿಂದ ನೋಡುವ ಹುಡುಗ. ಇಂಥ ಮುಗ್ಧರ ಕಣ್ಣುಗಳಿಂದಲೇ ತನ್ನ ಸಿನೆಮಾಗಳಲ್ಲಿ ನಮ್ಮ ಸಮಾಜದ ಅಂಕುಡೊಂಕುಗಳನ್ನು ತಿಳಿಹಾಸ್ಯದಲ್ಲಿ ಒಂಚೂರೂ ಬೋರು ಹೊಡೆಸದೇ ತೋರಿಸುತ್ತ ಹೋಗುತ್ತಾನೆ, ಹಿರಾನಿಯ ಮುಖ್ಯ ಪಾತ್ರಗಳು ಹೃಷಿಕೇಶ್ ಮುಖರ್ಜಿಯ ‘ಬಾವರ್ಚಿ’ಯ ಮರುರೂಪಗಳು (ಹಿರಾನಿಯೇ ಒಂದು ಕಡೆ ಹೇಳಿರುವಂತೆ ಆತನಿಗೆ ಹೃಷಿಕೇಶ್ ಮುಖರ್ಜಿಯ ಸಿನೆಮಾಗಳೆಂದರೆ ಪ್ರಾಣ). 

OMG (Oh My God)ನ ನೆರಳಿನಂತೆ ಕಾಣುವ ಈ ಚಿತ್ರ OMGನಂತೆ ಆಳಕ್ಕಿಳಿದು ಚಿಂತಿಸುವುದಿಲ್ಲ. OMGಯ ನಾಟಕೀಯತೆಯಾಗಲೀ, ಕತೆಯಾಗಲೀ, ಗಾಢವಾದ ಪ್ರಶ್ನೆಗಳಾಗಲೀ ಇಲ್ಲಿ ಇಲ್ಲ. OMG ನಾಟಕಗಿಂದ ಮಾಡಿದ ಸಿನೆಮಾ, ಹಾಗಾಗಿ OMGಗೆ ಸಾಹಿತ್ಯ ಮತ್ತು ಮಾತಿನ ಕಸುವಿದೆ, ಬಂಧವಿದೆ. OMGಅನ್ನು ಮುಂದಿಟ್ಟುಕೊಂಡು PK ನೋಡಿದರೆ, PK ತಾಂತ್ರಿಕವಾಗಿ ಗೆಲ್ಲುತ್ತದೆ, ಆದರೆ ಒಂದು ‘ಕಲೆ’ಯಾಗಿ OMG ಮುಂದೆ ಪೇಲವವಾಗಿ ಕಾಣುತ್ತದೆ. 

ಕೊನೆಯದಾಗಿ ಮೂರು ಪ್ರಶ್ನೆಗಳು: 
೧. PKಯಲ್ಲಿ ಅಮೀರ್ ಖಾನ್ ಇಲ್ಲದಿದ್ದರೆ ಈಗಿನಂತೆಯೇ ಗಲ್ಲಾಪೆಟ್ಟಿಗೆಯನ್ನು ಸೂರು ಹೊಡೆಯುತ್ತಿತ್ತೇ? 
೨. PKಯಲ್ಲಿ ಅಮೀರ್ ಖಾನ್ ಇಲ್ಲದಿದ್ದರೆ ಈಗಿನಂತೆಯೇ ಹಿಂದೂ ಮತಾಂಧ ಮತೀಯರ ಕೆಂಗಣ್ಣಿಗೆ ತುತ್ತಾಗುತ್ತಿತ್ತೇ? OMGಗೆ ಯಾವುದೇ ಬೆದರಿಕೆ ಇರಲಿಲ್ಲ 
೩. ಅಮೇರಿಕದಲ್ಲಿ ಯಾವುದೇ ಧರ್ಮದ ಹೆಸರು ಹೇಳದೇ Bruce Almighty ಅಂಥ ತಿಳಿ ಹಾಸ್ಯದ ಚಿತ್ರ ಮಾಡಿ ದೇವರನ್ನು ಕಪ್ಪು ಮನುಷ್ಯನ ಹಾಗೆ ತೋರಿಸಿ ಬಿಳಿಯರಿಗೆ ಒಂದು ಸಣ್ನ ಶಾಕ್ ಕೊಟ್ಟು ನಗಿಸಬಹುದು. ಭಾರತದಲ್ಲಿ OMG ಸಿನೆಮಾ ಮಾಡಿ ಅದರಲ್ಲಿ ದೇವರಿಗೆ ಪ್ಯಾಟು ಶರ್ಟು ಹಾಕಿ ನಮ್ಮ ದೇಶದ ಎಲ್ಲ ಧರ್ಮಗಳ ಮುಖಂಡರನ್ನು ಲೇವಡಿ ಮಾಡಿ ಬದುಕಿ ಉಳಿಯಬಹುದು. PKಯಲ್ಲಿ ಅಮೀರ್ ಖಾನ್ ಏಲಿಯನ್ ಆಗಿ ಹಿಂದೂ ಧರ್ಮದ ಧರ್ಮಗುರುಗಳ ಬಣ್ಣವನ್ನು ಬಯಲು ಮಾಡಿ ನಮ್ಮನ್ನೆಲ್ಲ ನಗಿಸಿ ಗಲ್ಲಪೆಟ್ಟಿಗೆಯನ್ನು ದೋಚಸಬಹುದು. ಆದರೆ ಅದೇ ರೀತಿ ಶಾಂತಿಯ ಧರ್ಮವನ್ನು ಲೇವಡಿ ಮಾಡಿ ಸಿನೆಮಾ ಮಾಡಲು ಯಾರಿಗೆ ಧೈರ್ಯ ಬಂದೀತು? 

('ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

ಈ ಸಿನೆಮಾ ನೆಟ್-ಫ್ಲಿಕ್ಷ್ಸ್-ನಲ್ಲಿ ನೋಡಬಹುದು