Sunday 31 January 2021

ಬೇಂದ್ರೆಯವರ ‘ನಾನು ಬಡವಿ‘ಯ ಕವನದ ವಿಶ್ಲೇಷಣೆ

ಮೊದಲು ಕವನವನ್ನು ಓದೋಣ:

  
 ನಾನು ಬಡವಿ ಆತ ಬಡವ 
 ಒಲವೆ ನಮ್ಮ ಬದುಕು 
 ಬಳಸಿಕೊಂಡೆವದನೆ ನಾವು 
 ಅದಕು ಇದಕು ಎದಕು 
  
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ 
  
 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ 
  
 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು 
  
 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು  

ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ಕನ್ನಡದ ಶಬ್ದ ಗಾರುಡಿ; ಉತ್ತರ ಕರ್ನಾಟಕದ ಆಡುಭಾಷೆಯನ್ನು ಕನ್ನಡದ ಕಾವ್ಯ ಪರಂಪರೆಯನ್ನು ಅರಗಿಸಿಕೊಂಡು ಕನ್ನಡ ಜನತೆಗೆ ಉಣಬಡಿಸಿದ ವರಕವಿ. 

‘ನಾನು ಬಡವಿ’ ಎಂಬ ಕವಿತೆ ಅವರ ಒಂದು ಸರಳ ಸುಂದರ ಕವಿತೆ. ಮೊದಲ ಓದಿಗೇ ಅರ್ಥವಾಗುವ ಕವನ, ಆದರೆ ಓದಿದಷ್ಟೂ ಅರ್ಥ ಬಿಚ್ಚಿಕೊಳ್ಳುವ ಕವನ. ಮೈಸೂರು ಅನಂತಸ್ವಾಮಿಯವರು ರಾಗ ಸಂಯೋಜಿಸಿ ಅಮರವಾಗಿಸಿದ ಕವಿತೆ ಇದು. 

ಬೇಂದ್ರೆಯವರ ನೆನಪಿನಲ್ಲಿ ನಾನು ಬೇಂದ್ರೆಯವರ ಈ ಕವಿತೆಯನ್ನು ಆರಿಸಿಕೊಂಡಿರುವುದು, ಸರಳ ಪದಗಳಲ್ಲಿ, ಸುಲಭ ಲಯದಲ್ಲಿ, ಅದ್ಭುತವಾಗಿ, ಎಲ್ಲರಿಗೂ ಅರ್ಥವಾಗುವಂಥಹ ಕವಿತೆಗಳನ್ನೂ ಬೇಂದ್ರೆಯವರು ಬರೆಯುತ್ತಿದ್ದರು ಎಂದು ಹೇಳುವುದು ಒಂದು. 

ಒಳ್ಳೆಯ ಕವನಗಳನ್ನು ಓದುವುದು ಮತ್ತು  ಮತ್ತೆ ಮತ್ತೆ ಓದುವುದು ಒಂದು ಅನುಭೂತಿ. ಕವನಗಳನ್ನು ಹೇಗೆ ಹೀಗೆಯೇ ಬರೆಯಬೇಕು ಎಂದು ಹೇಗೆ ನಿಯಮವಿಲ್ಲವೋ ಅದೇ ರೀತಿ ಕವನಗಳನ್ನು ಹೀಗೇ ಓದಿ ಹೀಗೇ ಅರ್ಥ ಮಾಡಿಕೊಳ್ಳಬೇಕು ಎಂದು ನಿಯಮಗಳೇನೂ ಇಲ್ಲ. ಆದರೂ ಈ ಲೇಖನದಲ್ಲಿ ನಾನು ಕವನಗಳನ್ನು ನನ್ನದಾಗಿಸಿಕೊಳ್ಳುವ ನನ್ನದೊಂದು ರೀತಿಯನ್ನು ಹೇಳುತ್ತೇನೆ.  ಓದುಗನಲ್ಲಿ ಕವಿತೆಗಳ ಬಗ್ಗೆ ಬೇಂದ್ರೆಯವರ ಕವಿತೆಗಳ ಬಗ್ಗೆ ಪ್ರೀತಿಯನ್ನು ಹೆಚ್ಚಿಸುವುದು ಎರಡನೇ ಉದ್ದೇಶ.  

ಕವಿತೆಯ ವಿನ್ಯಾಸ:

ನಾಕು ಸಾಲಿಗೊಂದು ನುಡಿಯಂತೆ ಒಟ್ಟು ಐದು ನುಡಿಗಳು. ಮೊದಲ ಮತ್ತು ಮೂರನೇ ಸಾಲುಗಳು 12 ಮಾತ್ರೆಗಳು, ಎರಡನೇ ಮತ್ತು ನಾಕನೇ ಸಾಲು 9 ಮಾತ್ರೆಗಳ ಛಂದಸ್ಸು. ಎರಡನೇ ಮತ್ತು ನಾಕನೇ ಸಾಲಿನ ಕೊನೆಯಲ್ಲಿ ಪ್ರಾಸಗಳು (ಬದುಕು-ಎದಕು, ರಂಗಸಾಲೆ-ಮೆಚ್ಚಿನೋಲೆ, ಮುಟ್ಟೆ-ಬಟ್ಟೆ, ಗೊತ್ತು-ಮುತ್ತು, ಹೆಚ್ಚಿಗೇನು-ಹಾಲುಜೇನು). 

ಇಡೀ ಕವಿತೆಯನ್ನು ಅರವತ್ತು-ಎಪ್ಪತ್ತರ  ದಶಕದ ಒಂದು ಹಳ್ಳಿಯಲ್ಲಿ ಅದೇ ತಾನೇ ಮೊದಲ ಮಗುವಾದ ಹರೆಯದ ಬಡ ಹೆಂಗಸು ತನ್ನನ್ನು ನೋಡಲು ಬಂದ ತನಗಿಂತ ಚಿಕ್ಕವಳಾದ ಆದರೆ ಬಡವಳಲ್ಲದ ಆತ್ಮೀಯ ಗೆಳತಿಗೆ ಹೇಳುತ್ತಿರುವಂತೆ ಕಲ್ಪಿಸಿಕೊಂಡರೆ (ಗಂಡ ಮನೆಯಲ್ಲಿ ಇಲ್ಲ) ಕವಿತೆಗೆ ಒಂದು ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಅಂಥದೊಂದು ಕಲ್ಪನೆಯಲ್ಲಿ ಕವಿತೆಯನ್ನು ಮತ್ತೊಮ್ಮೆ ಓದಿ ಈ ಕೆಳಗಿನ ಲೇಖನವನ್ನು ಓದೋಣ. 

ಮೊದಲನೇ ನುಡಿ:

ನಾನು ಬಡವಿ ಆತ ಬಡವ 
ಒಲವೆ ನಮ್ಮ ಬದುಕು 
ಬಳಸಿಕೊಂಡೆವದನೆ ನಾವು 
ಅದಕು ಇದಕು ಎದಕು 

ಕವಿತೆಯನ್ನು ಬರೆದವರು ಗಂಡಸು ಬೇಂದ್ರೆ. ಆದರೆ ಈ ಕವಿತೆಯನ್ನು ಓದಲು ಶುರುಮಾಡುತ್ತಿದ್ದಂತೆಯೆ, ಈ ಕವಿತೆಯನ್ನು ಹೇಳುತ್ತಿರುವುದು ಗಂಡಲ್ಲ ಹೆಣ್ಣು ಎಂದು ಕವನದ ಎರಡನೇ ಶಬ್ದದಲ್ಲೇ (ನಾನು ಬಡವಿ) ಗೊತ್ತಾಗಿಬಿಡುತ್ತದೆ. ಅಂದರೆ ಇಲ್ಲಿ ಬೇಂದ್ರೆ ಹೆಣ್ಣಾಗಿ ಪರಕಾಯ ಪ್ರವೇಶ ಮಾಡುತ್ತಾರೆ. ತಾವೇ ಹೆಣ್ಣಾಗಿಬಿಡುತ್ತಾರೆ. 

ಮೊದಲ ನಾಕು ಸಾಲುಗಳು ಇಡೀ ಕವನದ ಪೀಠಿಕೆಯಾಗಿದೆ. ಇಲ್ಲಿ ಹೆಣ್ಣು ತನ್ನ ಬಗ್ಗೆ ಹೇಳಿಕೊಂಡು (ನಾನು ಬಡವಿ)  ನಂತರ ‘ಅವನ‘ ಬಗ್ಗೆ ಹೇಳುತ್ತಾಳೆ (ಆತ ಬಡವ). ಒಂದು ಕ್ಷಣ ಯೋಚಿಸಿ, ಕವಿತೆಯನ್ನು ‘ಅವನು ಬಡವ ನಾನು ಬಡವಿ‘ ಎಂದು ಬರೆದಿದ್ದರೂ ಕವನದ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ, ಆದರೆ ಕವನ ಅರ್ಥವೇ ಬೇರೆಯಾಗುತ್ತಿತ್ತು. 

ಬೇಂದ್ರೆ ಇಲ್ಲಿ ಕನ್ನಡವನ್ನು ದುಡಿಸಿಕೊಳ್ಳುವ ರೀತಿಯನ್ನು ನೋಡಿ. ‘ಬಡವ‘ ಪುಲ್ಲಿಂಗ ‘ಬಡವಿ‘ ಸ್ತ್ರೀಲಿಂಗ; ಇಂಥಹ ಶಬ್ದಗಳು ಕನ್ನಡ ಭಾಷೆಯ ವೈಶಿಷ್ಟ್ಯ. ಉದಾಹರಣೆಗೆ, ಇಂಗ್ಲೀಷಿನಲ್ಲಿ ಇದನ್ನು ಹೇಳಲು ಎರಡು ಪದಗಳು ಬೇಕು, ‘poor man, poor woman’.  ಹಾಗೆ ಹೇಳಿದ ತಕ್ಷಣ ಕವಿತೆ ಗದ್ಯವಾಗಿಬಿಡುತ್ತದೆ. ಬೇಂದ್ರೆ ಎಂಬ ಗಾರುಡಿಗನ ಕೈಯಲ್ಲಿ ಕನ್ನಡ ಭಾಷೆ ಪದಪದಗಳಲ್ಲಿ ಕವಿತೆಯಾಗುತ್ತಾಳೆ ಅನ್ನುವುದನ್ನು ಗಮನಿಸಿ. 

ಬಡವರಲ್ಲದವರಾದರೆ ಅವರಿಗೆ ಬದುಕೆಂದರೆ ಕೆಲಸ, ದುಡ್ಡು ಸಂಪಾದಿಸಿ ಕೂಡಿಡುವುದು, ಕೆಲಸದವರನ್ನು ನೋಡಿಕೊಳ್ಳುವುದು ಇತ್ಯಾದಿ ಏನೆಲ್ಲ ಇರುತ್ತದೆ; ಆದರೆ ಬಡವರಿಗೆ ಬದುಕೆಂದರೆ ಏನು? ದಿನಾ ಕೂಳಿಗಾಗಿ ಕಷ್ಟಪಡುವ ಕಾಯಕ, ಸರಿಯಾದ ಸೂರಿಲ್ಲದ ನರಕ. ಆದರೆ ನಮ್ಮ ನಾಯಕಿಗೆ ಮತ್ತು ನಾಯಕನಿಗೆ ಈ ಕಷ್ಟಗಳ ಪರಿವೆ ಇಲ್ಲ, ಏಕೆಂದರೆ ಅವರಿಗೆ ಒಲವೆಂದರೆ ಬದುಕು, ಬದುಕೆಂದರೆ ಒಲವು. ಒಲವಿಗೆ ಬಡತನ ಬೇಗೆಯನ್ನು ಮೀರಿಸುವ ಶಕ್ತಿ ಇದೆ; ಅದು ಹೇಗೆ ಎನ್ನುವುದನ್ನು ಮುಂದಿನ ನಾಕು ನುಡಿಗಳಲ್ಲಿ ಕವನವನ್ನು ಕಟ್ಟುತ್ತಾರೆ.   

‘ಪ್ರೀತಿ ನಮ್ಮ ಬದುಕು‘ ಅಥವಾ ‘ಪ್ರೇಮ ನಮ್ಮ ಬದುಕು‘ ಎಂದು ಬರೆಸಿದ್ದರೂ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ. ಆದರೆ ಬೇಂದ್ರೆ ಹೆಚ್ಚಾಗಿ ಉಪಯೋಗದಲ್ಲಿ ಇರದ ‘ಒಲವ‘ನ್ನು ಉಪಯೋಗಿಸುತ್ತಾರೆ (ಕನ್ನಡ ಸಿನೆಮಾ ಹಾಡು ‘ಒಲವೇ ಜೀವನ ಸಾಕ್ಷಾತ್ಕಾರ‘, ‘ಒಲವಿನ ಉಡುಗೊರೆ ಕೊಡಲೇನು?’ ಗಮನಿಸಿ). ಪ್ರೀತಿ, ಪ್ರೇಮ ಮತ್ತು ಒಲವು ಎಲ್ಲ ಸಮಾನಾರ್ಥಕ ಪದಗಳಾದರೂ, ಅವುಗಳ ಒಳಾರ್ಥದಲ್ಲಿ ಇರುವ ಸೂಕ್ಷ್ಮವ್ಯತ್ಯಾಸವನ್ನು ಗಮನಿಸಿ, ಬೇಂದ್ರೆ ‘ಒಲವ‘ನ್ನು ಆರಿಸಿಕೊಳ್ಳುತ್ತಾರೆ. ‘ಒಲವು‘ ಏಕೆ ಎನ್ನುವುದನ್ನು ಮುಂದೆ ನೋಡೋಣ.  

ನಾಯಕ ನಾಯಕಿಯರಿಬ್ಬರಿಗೂ ಒಲವನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ, ಮತ್ತೆ ಅವರಿಗೆ ಬೇರೆ ಆಯ್ಕೆಯೂ ಇಲ್ಲ, ಏಕೆಂದರೆ ಅವರ ಬಳಿ ಒಲವಿನ ಹೊರತಾಗಿ ಇನ್ನೇನೂ ಇಲ್ಲ. 

ಎರಡನೇ ಸಾಲಿನ ಕೊನೆಯ ‘ಬದುಕು‘ಗೆ ನಾಕನೇ ಸಾಲಿನ ಕೊನೆಗೆ ಪ್ರಾಸ ಬೇಕು. ದಿನ ರಾತ್ರಿ ಕೂತು ಕನ್ನಡದ ಎಲ್ಲ ಶಬ್ದಕೋಶಗಳನ್ನು ಜಾಲಾಡಿಸಿದರೂ,  ಬೇಂದ್ರೆ ‘ಬದುಕು‘ ಶಬ್ದಕ್ಕೆ ಬರೆಯುವ ಪ್ರಾಸವನ್ನು ಯಾರಿಂದಲಾದರೂ ಬರೆಯಲು ಸಾಧ್ಯವಾದೀತೆ? ‘ಬದುಕು’ ಗೆ ಅವರು ಹಾಕುವ ಪ್ರಾಸ ‘ಎದಕು’! ಉತ್ತರ ಕರ್ನಾಟಕದ ಆಡುಮಾತಿನ ‘ಎದಕು’ (ಎಲ್ಲದಕು), ಎಷ್ಟು ಸುಂದರವಾಗಿ ಸಹಜ ಪ್ರಾಸವಾಗುತ್ತದೆ ಎನ್ನುವುದನ್ನು ಗಮನಿಸಿದರೆ ಬೇಂದ್ರೆ ಏಕೆ ಕನ್ನಡ ಕಂಡ ಅದ್ವಿತೀಯ ಕವಿ ಎನ್ನುವುದು ಅರ್ಥವಾಗುತ್ತದೆ. 

ಬೇಂದ್ರೆ ಹೆಣೆಯುವ ಶಬ್ದಗಳ ಮಾಲೆಯನ್ನು ಅವಲೋಕಿಸಿ, ನಾಯಕ ಮತ್ತು ನಾಯಕಿ ‘ಒಲವನ್ನು‘ ಅವರು ಉಪಯೋಗಿಸಿಕೊಳ್ಳುವುದು ‘ಅದಕು-ಇದಕು-ಎದಕು’! ಅಂತರಿಕ ಪ್ರಾಸಗಳು! ಇಂಥ ಅಪ್ರತಿಮ ಸಾಲುಗಳನ್ನು ಬೇಂದ್ರೆಯಲ್ಲದೇ ಇನ್ನಾವ ಕವಿ ತಾನೆ ಬರೆಯಬಲ್ಲ? ಅವರು ಒಲವನ್ನು ಅದಕ್ಕೆ, ಇದಕ್ಕೆ ಮತ್ತು ಎಲ್ಲದಕೆ ಉಪಯೋಗಿಸಿಕೊಳ್ಳದಿದ್ದರೆ ಅವರಿಗೆ ಬದುಕು ದುರ್ಭರವಾಗುತ್ತಿತ್ತು. ಒಲವನ್ನು ಉಪಯೋಗಿಸಿಕೊಂಡು ಅವರು ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. 

 ಎರಡನೇ ನುಡಿ:
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ  

ಮೊದಲ ನಾಕು ಸಾಲಿನ ಪೀಠಿಕೆ ಆದ ಮೇಲೆ, ನಾಯಕಿ ತನ್ನ ಒಲವಿನ ಪಯಣವನ್ನು ಮೊದಲಿನಿಂದ ಹೇಳುತ್ತಿದ್ದಾಳೆ.  

ನಾಯಕಿಗೆ ನಾಯಕನ ಮೇಲೆ ಒಲವು ಶುರುವಾಗಿದೆ. ನಾಯಕಿಗೆ ಸದಾ ನಾಯಕನ ಚಿಂತೆ, ಆಸೆ, ಕನಸು;  ಆತ ನಾಯಕಿಯ ರಂಗಸಾಲೆ. ‘ರಂಗಸಾಲೆ‘, ಇತ್ತೀಚೆ ಅಷ್ಟಾಗಿ ಉಪಯೋಗದಲ್ಲಿ ಇರದ ಶಬ್ದ. ರಂಗಸಾಲೆ ಎಂದರೆ ಥೇಟರ್, ಇತ್ತೀಚೆ ರಂಗಮಂದಿರ ಹೆಚ್ಚಾಗಿ ಉಪಯೋಗದಲ್ಲಿರುವ ಶಬ್ದ. ನಾಯಕಿಗೆ ಅವನೊಂದು ರಂಗಸಾಲೆ ಇದ್ದಂತೆ ಎಂದು ಬೇಂದ್ರೆ ರೂಪಕ ಕೊಡುತ್ತಾರೆ. ನನಗೆ ತಿಳಿದಿರುವಂತೆ ಇದು ಕನ್ನಡದಲ್ಲಿ ಅಚ್ಚಹೊಸ ರೂಪಕ. ಗಂಡಸನ್ನು ಸೂರ್ಯನಿಗೆ (ತಾನು ಮರ), ಮರಕ್ಕೆ (ತಾನು ಬಳ್ಳಿ) ಹೋಲಿಸಿ ಬರೆಯುವುದು ಅನಾದಿ ಕಾಲದಿಂದ ನಡೆದೇ ಇದೆ. ಬೇಂದ್ರೆ ‘ರಂಗಸಾಲೆ‘ ಎನ್ನುವ ಹೊಸ ರೂಪಕವನ್ನು ತರುತ್ತಾರೆ. ರಂಗಸಾಲೆಯಲ್ಲಿ ತಾನೆ ನಾಟಕ ನಡೆಯುವುದು, ನಗು, ಅಳು, ಎಲ್ಲ ಭಾವೋದ್ವೇಗಳೂ ಜರಗುವುದು. ನಾಯಕಿಗೆ ಅದೆಲ್ಲ ನಾಯಕನಿಂದ ಸಿಗುತ್ತಿದೆ, ಅವನು ಹತ್ತಿರವಿರದಿದ್ದಾಗಲೂ (ಏಕೆಂದರೆ ಕುಂತ್ರೆ ನಿಂತ್ರೆ ಅವ್‍ನ್ದೇ ಧ್ಯಾನ)! ಗಂಡು ಹೆಣ್ಣಿನ ಪ್ರೀತಿ ಹುಟ್ಟುವ ಮತ್ತು ಬೆಳೆಯುವ ಘಟನೆಗಳು ಕೂಡ ನಾಟಕವೇ ಅಲ್ಲವೇ? ಅದಕ್ಕೇ ‘ಅವನೇ ರಂಗಸಾಲೆ‘. ಆಷ್ಟೇ ಅಲ್ಲ  ‘ರಂಗಸಾಲೆ‘ಯನ್ನು ‘ರಂಗ ಸಾಲೆ‘ ಎಂದು ಓದಿದರೂ ಅದಕ್ಕೊಂದು ಹೊಸ ಅರ್ಥ ಬರುತ್ತದೆ. ನಾಯಕ ರಂಗು ರಂಗಿನ ಶಾಲೆ ಇದ್ದಂತೆ, ಪ್ರೀತಿ ಪ್ರೇಮಗಳನ್ನು ಹೇಳಿಕೊಡುವ ಗುರು. ಅಥವಾ ‘ರಂಗ‘ ಎಂದರೆ ಕೃಷ್ಣ, ಕೃಷ್ಣ ಭಾರತದ ಕಾವ್ಯ ಪರಂಪರೆಯಲ್ಲಿ ರಸಿಕರ ರಾಜ. ಅದಕ್ಕೇ ‘ಅವನು ರಂಗ ಸಾಲೆ;. ಎಂದೂ ಅರ್ಥೈಸಬಹುದು.  

ನಾಯಕನ ರೂಪ ಕಣ್ಣುಕಟ್ಟುವಂಥ ‘ಮೂರ್ತಿ’. ‘ಮೂರ್ತಿ‘ ಎಂದರೆ ಬೆಲೆಬಾಳುವಂಥಹದು. ನಾಯಕ ಬಡವನಾದರೂ ಬೆಲೆಕಟ್ಟಲಾಗದಂಥವನು ಎನ್ನುವುದನ್ನು ‘ಮೂರ್ತಿ‘ ಎನ್ನುವ ರೂಪಕದಲ್ಲಿ ಬೇಂದ್ರೆ ರೂಪಿಸುತ್ತಾರೆ.  

ಅವರಿಬ್ಬರೂ ಬಡವರಿರಬಹುದು, ಆದರೆ ಬಡವನಾದ ನಾಯಕ ಬಡವಿಯಾದ ನಾಯಕಿಗೆ ಕೊಡುವ ಉಡುಗೊರೆ ಯಾವ ಶ್ರೀಮಂತನಿಗೆ ಕಡಿಮೆ? ಆತ ನಾಯಕಿಯ ಕಿವಿಯಲ್ಲಿ ಉಲಿಯುವುದು ಅವಳ ರೂಪವನ್ನು, ಅವಳ ಮೇಲಿನ ಪ್ರೀತಿಯನ್ನು; ನಾಯಕಿಗೆ ‘ಕಿವಿಯೋಲೆ’ ಸಿಕ್ಕಿದ್ದು ಹಾಗೆ! ಅದೂ ಅಂತಿಂಥ ಕಿವಿಯೋಲೆಯಲ್ಲ, ಮೆಚ್ಚುಗೆಯ ಕಿವಿಯೋಲೆ! ನಾಯಕಿಗೆ ಅದು ವಜ್ರದ ಓಲೆಗಿಂತೆ ಹೆಚ್ಚು ಬೆಲೆಬಾಳುವಂಥಹದು.  

ಮೇಲಿನ ಈ ನಾಕು ಸಾಲುಗಳು ಗಂಡು ಹೆಣ್ಣಿನ ಪ್ರೇಮಾಂಕುರದ ಘಟ್ಟವನ್ನು ಹೇಳುತ್ತವೆ: ಒಬ್ಬರಿಗೊಬ್ಬರು ನೋಡುತ್ತ ಕೂಡುವುದು, ಮೆಚ್ಚಿಸುತ್ತ ಮಾತಾಡುತ್ತಲೇ ಇರುವುದು.

ಮೂರನೇಯ ನುಡಿ:

 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ

ಎಲ್ಲಿದ್ದರೂ ಅವನದೇ ಧ್ಯಾನವಿರುವಾಗ, ಕಣ್ಣಲ್ಲಿ ಅವನೇ ತುಂಬಿಕೊಂಡಿರುವಾಗ, ಅವನೂ ಹೂಂ ಅಂದು ಕಿವಿಯ ಹತ್ತಿರವೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುವಾಗ, ಪ್ರೇಮ ಪ್ರಣಯದ ನಿಟ್ಟಿನಲ್ಲಿ ಸಾಗುವುದು ಸಹಜವೇ ಅಲ್ಲವೇ?  ಮೆಚ್ಚುಗೆಯ ‘ಓಲೆ’ ಧರಿಸಿದ ನಾಯಕಿ, ತನ್ನಿಷ್ಟದ ‘ಮೂರ್ತಿ’ಯನ್ನು ಈಗ ಮುಟ್ಟುತ್ತಾಳೆ. 

ಪ್ರೇಮ ಈಗ ಮಾತು-ನೋಟದಿಂದ ಮುಂದೆ ಸಾಕಿ ಕೈ ಕೈ ತಾಗಿಸುವ ತಬ್ಬಿಕೊಳ್ಳುವ ಹಂತಕ್ಕೆ ಬಂದಿದೆ. ನಾಯಕನ ಮೈಯನ್ನು ಚಳಿಯಲ್ಲಿ ಮುಟ್ಟಿದರೆ ನಾಯಕಿಯ ಮೈಯೆಲ್ಲ ಬಿಸಿಯಾಗುತ್ತದೆ, ಬಿಸಿಲಲ್ಲಿ ಆತನ ಮೈ ತಂಪು ಆಶ್ರಯವನ್ನು ಕೊಡುತ್ತದೆ. ಇಲ್ಲಿ ಬೇಂದ್ರೆ ಹೇಗೆ ವೈರುಧ್ಯಗಳನ್ನು ಎರಡೇ ಶಬ್ದಗಳಲ್ಲಿ ಹೇಳುತ್ತಾರೆ ಎಂದು ಅವರ ಕಾವ್ಯಪ್ರತಿಭೆಯ ಬಗ್ಗೆ ತಲೆತೂಗಬೇಕಾಗುತ್ತದೆ. 

ಇಲ್ಲಿ ಬೇಂದ್ರೆ ಬಳಸಿರುವ ಶಬ್ದ, ‘ಹದನ’. ಅಷ್ಟಾಗಿ ಉಪಯೋಗದಲ್ಲಿಲ್ಲದ ಶಬ್ದ. ಉತ್ತರ ಕರ್ನಾಟಕದಲ್ಲಿ ‘ಹದ’ವನ್ನು ನಾನಾರ್ಥಗಳಿಗೆ ಉಪಯೋಗಿಸುತ್ತಾರೆ. ಉದಾಹರಣೆಗೆ: ಗಾಯನ ಅಭ್ಯಾಸ ಮಾಡುವ ವಿದ್ಯಾರ್ಥಿಗೆ ಗುರು ಹೇಳುತ್ತಾನೆ, ‘ಈಗ ನಿನ್ನ ಧನಿ ಒಂದು ಹದಕ್ಕ ಬಂತಪಾ’. ಇನ್ನೊಂದು ಅರ್ಥ, ‘ಹದಕ್ಕ ಬಂದಾನ ಹುಡುಗ’ ಎಂದರೆ ಇನ್ನೊಂದು ಅರ್ಥ. ‘ಪುಂಡ ಹುಡುಗನಿಗೆ ಕ್ರೀಡಾ ಶಿಕ್ಷಕರು ಸರಿಯಾಗಿ ಹದ ಮಾಡಿದರು’ ಎಂದರೆ ಮುಗದೊಂದು ಅರ್ಥ. ಈ ಮೂರೂ ಅರ್ಥಗಳು ಇಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ‘ಹದ‘ಕ್ಕೆ ‘ನ‘ ಸೇರಿಸಿ ‘ಹದನ‘ ಮಾಡುವ ಅವಶ್ಯಕತೆ ಏನಿತ್ತು? ಬರೀ ಛಂದಸ್ಸನ್ನು ಪೂರ್ತಿ ಮಾಡಲು ಬೇಂದ್ರೆ ಮಾಡಿದ ಹೊಸ ಶಬ್ದೋತ್ಪತ್ತಿಯೇ? ಆದರೆ ‘ಹದನ‘ ಶಬ್ದ ಅವರ ಉತ್ಪತ್ತಿಯಲ್ಲ. ಗದುಗಿನ ಕುಮಾರವ್ಯಾಸ ಭಾರತದಲ್ಲಿ ಬರುತ್ತದೆ. (ಹದನ ನೀನೇ ಬಲ್ಲೆ ಸಾಕಿ|ನ್ನಿದು ನಿಧಾನವು ಬಗೆಯಲೆಮ್ಮ|ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು (ಉದ್ಯೋಗ ಪರ್ವ, ೭ ಸಂಧಿ, ೩ ಪದ್ಯ) ಮತ್ತು ನೀವು ಬಿಜಯಂಗೈದು ಚಿತ್ತದೊ|ವ ಹದನಾ ಹದನನಾ ರಾ|ಜೀವನಾಭಾದಿಗಳಿಗರುಹುವುದೆಂದರಾ ಚರರು (ಉದ್ಯೋಗ ಪರ್ವ, ೬ ಸಂಧಿ, ೧೫ ಪದ್ಯ)). 

ನಾಯಕ ನಾಯಕಿಗೆ ಹೊಸ ಸೀರೆ ತರದಿದ್ದರೇನಂತೆ? ಆತನ ಮೈ ಮುಟ್ಟಿದರೆ ಸಾಕು, ಆ ರೋಮಾಂಚನದಲ್ಲೇ, ಮೈಯ ತುಂಬ ನಾಯಕಿಗೆ ‘ನವಿರು ಬಟ್ಟೆ’! ಪ್ರೀತಿಯ ಮುಂದಿನ ಘಟ್ಟವಿದು. ಮಾತು-ನೋಟಗಳ ನಂತರ – ಮುಟ್ಟುವುದು – ಮುಟ್ಟುವುದರಲ್ಲಿ ಆಗುವ ರೋಮಾಂಚನ- ಈ ನಾಕು ಸಾಲುಗಳಲ್ಲಿವೆ. 

ನಾಕನೇ ನುಡಿ:

 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು

ಪ್ರೇಮಾಂಕುರ ಅನುರಾಗವಾಗಿ ಪ್ರಣಯವಾಗಿ ಕಾಮನ ಕಾವೇರುತ್ತಿದೆ. ನೋಟ-ಮಾತು-ಮುಟ್ಟುವಿಕೆ ಮುಗಿದು, ಈಗ ಪ್ರೇಮಿಗಳಿಬ್ಬರಿಗೂ ಪ್ರಣಯೋನ್ಮಾದ. ನಾಯಕನ ಅಪ್ಪುಗೆ, ನಾಯಕಿಗೆ ‘ತೋಳಬಂದಿ’. ಆಕೆಯ ಹತ್ತಿರ ಕೊರಳಲ್ಲಿ ಮುತ್ತಿನ ಮಣಿಯಿಲ್ಲದಿದ್ದರೇನಂತೆ? ಆಕೆಯ ಕೆನ್ನೆ ತುಂಬ ಲೆಖ್ಖವಿರದಷ್ಟು ‘ಮುತ್ತು’ಗಳನ್ನು ನಾಯಕ ಕೊಟ್ಟಿದ್ದಾನೆ. ಅಷ್ಟೆ ಅಲ್ಲ, ನಾಯಕ ಇನ್ನೂ ಬಹಳಷ್ಟು ಒಡವೆಗಳನ್ನು ಕೊಟ್ಟಿದ್ದಾನೆ, ಅದು ಅವರಿಬ್ಬರಿಗೆ ಮಾತ್ರ ಗೊತ್ತು, ಅವು ಏನು ಎಂದು ಹೇಳಿದರೆ ಅದರ ಸ್ವಾರಸ್ಯ ಹೋಗುತ್ತದೆ, ಆದ್ದರಿಂದಲೇ ಕವಿ ಹೇಳುತ್ತಾರೆ ‘ನನಗೆ ಅವಗೆ ಗೊತ್ತು’. ಈ ನಾಕು ಸಾಲುಗಳು ಪ್ರೇಮಿಗಳ ಪ್ರಣಯವನ್ನು ಹೇಳುತ್ತವೆ. 

ಈ ನಾಕು ಸಾಲಿನಲ್ಲಿ ಬೇಂದ್ರೆ ಬರೆಯುವ ಶೃಂಗಾರ ರಸ ಅದೆಷ್ಟು ಹೊಸದು! ‘ತೋಳಬಂದಿ‘ ಮತ್ತು ‘ಮುತ್ತು‘ ಶಬ್ದಗಳಿಗೆ ಇರುವ ಎರಡು ಅರ್ಥಗಳನ್ನು ಇಲ್ಲಿ ಎಷ್ಟು ಸುಂದರವಾಗಿ ಕಟ್ಟಿಹಾಕಿದ್ದಾರೆ!  

ಐದನೇ ನುಡಿ:

 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು 

ಪ್ರಣಯದ ದಾರಿಯಲ್ಲಿ ಈಗ ನಾಯಕ ನಾಯಕಿಯರಿಬ್ಬರಿಗೂ ಮದುವೆಯಾಗಿದೆ. ನೋಟ-ಮಾತು-ಮುಟ್ಟು-ಪ್ರಣಯ-ಕಾಮನಾಟಗಳೆಲ್ಲ ಮಾಗಿವೆ. 

ನಾಯಕ ಬಡವನಾದರೇನು, ನಾಯಕಿಗೆ ಯಾವತ್ತೂ ಕುಂದುಕೊರತೆ ತೋರಿಲ್ಲ (ಆ ಕಾಲದಲ್ಲಿ ಗಂಡ ದುಡಿದು ತರಬೇಕಿತ್ತು). ಅಷ್ಟೇ ಅಲ್ಲ, ಆತ ಕೊಟ್ಟ ‘ಫಲ’, ಬಾಯಿಗಲ್ಲ; ಹೊಟ್ಟೆಗೆ ಮಗು. ಮಗುವಿನ ಫಲಕೊಟ್ಟ ಚಲುವ, ತಿನ್ನಲು ಉಣ್ಣಲು ಕಡಿಮೆ ಮಾಡಿಲ್ಲ ಮತ್ತು ಇನ್ನೂ ಪ್ರೀತಿ ಮೊದಲಿನ ಹಾಗೆಯೇ ಇದೆ ಎನ್ನುವುದನ್ನು  ‘ಹಾಲು-ಜೇನು’ ಎಂದು ಬರೆಯುತ್ತಾರೆ! ‘ಮಗು‘ವಿಗಿಂತ ದೊಡ್ಡ ಆಸ್ತಿ ಇನ್ನಾವುದಿದೆ ಎಂದು ನಾಯಕಿ ಸವಾಲು ಹಾಕುತ್ತಾಳೆ, ಕವಿ ಎಲ್ಲರಿಗೆ ಸವಾಲು ಹಾಕುತ್ತಾರೆ!

ಕೊನೆಯ ನಾಕು ಸಾಲುಗಳು ಮಗುವಾಗುವ, ಸಂಸಾರ ಸಾಗಿಸುವ ಪ್ರೀತಿಯನ್ನು ಹೇಳುತ್ತವೆ. 

ಕೊನೆಯ ಮಾತುಗಳು:

ಸರಳವಾಗಿ ಅರ್ಥವಾಗುವಂಥಹ ಕವನವಾದರೂ ಇದು ಪ್ರೀತಿಯ ಗಾಥೆ. ಪ್ರೇಮಾಂಕುರದಿಂದ ಮಗುವಾಗುವ ಪ್ರೀತಿಯ ಪಯಣದ ಕಥೆ. 

ಒಲವಿನ ಶ್ರೀಮಂತಿಕೆಯ ಮುಂದೆ ಲೌಕಿಕ ಶ್ರೀಮಂತಿಕೆ ಏನೂ ಅಲ್ಲ ಎಂಬುದನ್ನು ತೋರಲು ನಾಯಕಿಯನ್ನು ಬಡವಿ- ನಾಯಕನನ್ನು ಬಡವನನ್ನಾಗಿಸಿದ್ದಾರೆ ಕವಿ. ಒಲವು ಶ್ರೀಮಂತಿಗೆಗಿಂತ ಹೆಚ್ಚು ಶ್ರೀಮಂತ, ಮತ್ತದು ಯಾವಾಗಲೂ ಹೆಚ್ಚಾಗುತ್ತಲೇ ಇರುವ ಶ್ರೀಮಂತಿಕೆ ಎನ್ನುವುದನ್ನು ಕವಿತೆ ಸಾರುತ್ತದೆ. ನೋಟದಲ್ಲಿ ಆರಂಭವಾಗುವ ‘ಪ್ರೇಮ‘ವು ಮಾತಿನಲ್ಲಿ, ಪರಸ್ಪರರನ್ನು ಮೆಚ್ಚಿಸುವ ‘ಅನುರಾಗ‘ದಲ್ಲಿ ಮುಂದುವರಿದು, ಯೌವನದ ಬಿಸಿಯಲ್ಲಿ ದೇಹಗಳು ತಾಗಿ ‘ಪ್ರಣಯ‘ವಾಗುತ್ತದೆ, ಪ್ರಣಯ ‘ಕಾಮ‘ವಾಗುತ್ತದೆ; ಕಾಮದಿಂದ ‘ಮಮತೆ‘ಯ ಮಗು ಹುಟ್ಟುತ್ತದೆ. ಅವನ್ನೆಲ್ಲ ಸೇರಿಸಿದರೆ ‘ಒಲವು‘ ಆಗುವುದು. ‘ಒಲವು‘ ಬೆಳೆಯುವ ನೈಸರ್ಗಿಕ ರೀತಿಯಿದು. ಮೊದಲಿನ ನಾಕು ಸಾಲುಗಳ ಅರ್ಥವಾಗುವುದು, ಉಳಿದ ಹದಿನಾರು ಸಾಲು ಓದಿದ ಮೇಲೆ. ‘ಪ್ರೀತಿ ನಮ್ಮ ಬದುಕು’ ಎನ್ನದೇ ‘ಒಲವೆ ನಮ್ಮ ಬದುಕು’ ಎಂದು ಏಕೆ ಬರೆದಿದ್ದಾರೆ ಎನ್ನುವುದರ ಅರ್ಥವಾದುವುದು. 

ಕನ್ನಡಕ್ಕೆ ಇಂಥಹ ಕವಿ ದೊರಕಿದ್ದು ಕನ್ನಡಿಗರ ಪುಣ್ಯ. ಮೊಗೆದಷ್ಟೂ ಇನ್ನೂ ಅರ್ಥಗಳನ್ನು ಕೊಡುವ ಕವಿ, ಬೇಂದ್ರೆ, ಅಂಬಿಕಾತನಯದತ್ತ. 

ಅನಿವಾಸಿ‘ಗಾಗಿ ಬೇಂದ್ರೆಯವರ 125 ಜನ್ಮದಿನದ ಪ್ರಯುಕ್ತ ಬರೆದದ್ದು. 

ಮೈಸೂರು ಅನಂತಸ್ವಾಮಿಯವರು ಈ ಕವನವನ್ನು ಅಮರವಾಗಿಸಿದ್ದಾರೆ. ಈ ಹಾಡನ್ನು ಯುಟ್ಯೂಬಿನಲ್ಲಿ ಕೇಳಿ: