Thursday 22 October 2009

ಲೇಖನ: ಪೇಪರ್ ಮತ್ತು ಚಹಾ

 ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ.  

ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.

ಓದು ಮುಗಿಸಿ ಕೆಲಸ ಸೇರಿದಾಗ, ಮೈಸೂರಿನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು. 

ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!

ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು  ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.

Thursday 18 June 2009

ಲೇಖನ: ಕೆಲವು ಉತ್ತರ ಕನ್ನಡದ ಶಬ್ದಗಳು

ವಿವೇಕ ಶಾನಭಾಗರ "ಒಂದು ಬದಿ ಕಡಲು" ಓದುವಾಗ ಈ ಕೆಳಗಿನ ಪದಗಳು ಸಿಕ್ಕವು, ಹಂಚಿಕೊಳ್ಳುತ್ತಿದ್ದೇನೆ.  

ಹೊಳ, ಜಿಗ್ಗು, ಪೌಳಿ, ಗಿಳಿಗೂಟ, ಪಡಸಾಲೆ, ಕಟಾಂಜನ, ಬಾಂಕು, ಪಾಗಾರ, ಪರವಡಿ, ನಡುಮನೆ, ತಂಬಳಿ, ಗಿಂಡಿ, ಒರಳು, ಸೊನೆ, ಬಾಂದು, ದರವೇಶಿ, ಗೆರಟೆ, ಹಂಡೆ, ಬೋಗುಣಿ, ಅಟ್ಟ, ನಾಗೊಂದಿ, ಆನಿಸು, ಗಲಬರಿಸು, ಪೆಠಾರಿ, ಗವಾಕ್ಷಿ, ಪ್ರಭಾವಳಿ, ಕರಂಡಕ, ಹರಿವಾಣ, ಚಾದರ, ತಲೆಗಿಂಬು, ಧಾಡಸಿ, ದಮಡಿ, ನಪಾಸು, ಹಳವಂಡ, ಪಾಯರಿ ಹಣ್ಣು, ಆಬೋಲಿ, ಅಂಟವಾಳಕಾಯಿ, ದಣಪೆ, ದೋಟಿ, ಗಡಗಡೆ, ಪಚಾಂಡಿ, ಉಡಾಳ, ಬಶಿ, ಖಾನಾವಳಿ, ಸಂಡಾಸು, ಭೋಳೆತನ, ತೆಣೆ, ಬದು, ಧೋತರ, ಬೀಸಣಿಕಿ, ತಾಲಿ, ಉದ್ರಿ, ರೋಖ, ಕಿರಾಣಿ, ಪಗಾರ, ದಿನಸಿ, ಜವಳಿ, ಕಪಾಟು, ಗಲ್ಲೆ, ಭಡಾರನೆ, ಭಡಕ್ಕನೆ, ಖಟಪಟಿ, ಮಾಡು (ನಾಮಪದ), ಪಕಾಸೆ, ಫರಸಿ, ಫಿರತಿ, ಚಂಚಿ, ಆಜೂಬಾಜೂ, ರುಬ್ಬು, ಜಬುಡು, ನೆಗಸು, ದಾಗೀನು, ಸಂಚಿ, ವಜನು, ಬಜಂತ್ರಿ, ಕಲಗಚ್ಚು, ತೆಣೆ, ಎಬಡ, ಎಬಡಾ, ತಬಡಾ, ಶಾಣ್ಯಾ, ಆಯತವೆಳ್ಯಾ, ಖೇಚರ ಹೆಣ್ಣು, ಮಂಕಾಳಿ, ಅಡ್ಡೆ, ಫಡದೆ

ಸುಶ್ರುತ ದೊಡ್ಡೇರಿಯವರು ಕೆಲವು ಶಬ್ದಗಳನ್ನು ವಿವರಿಸಿ ನನಗೆ ತಿಳಿಸಿದ್ದಾರೆ:

ಜಿಗ್ಗು= ತಂಪು ಮತ್ತು ಮಣ್ಣಿನ ಹದ ಕಾಯ್ದುಕೊಳ್ಳಲೆಂದು ತೋಟಕ್ಕೆ ಸೊಪ್ಪು ಹಾಸಿರುತ್ತಾರೆ. ಆ ಸೊಪ್ಪು ಒಣಗಿದ ಮೇಲೆ ಬರೀ ದಂಟು (ಸವಡು) ಉಳಿಯೊತ್ತಲ್ಲ, ಅದನ್ನ ’ಜಿಗ್ಗು’ ಅಂತ ಕರೀತೀವಿ. ತೋಟಕ್ಕೆ ಹೋದಾಗ ಈ ಜಿಗ್ಗಿನ ಮೇಲೆ ಓಡಾಡೋದು, ಅದರ ಮಧ್ಯೆ ಸಿಕ್ಕಿಕೊಂಡ ಅಡಿಕೆ ಹೆಕ್ಕೋದು ಅಂದ್ರೆ ದೊಡ್ಡ ತಲೆನೋವು. ಆದ್ರೆ ಒಂದೆರಡು ತಿಂಗಳಲ್ಲಿ ಈ ಜಿಗ್ಗೂ ಪುಡಿ-ಪುಡಿಯಾಗಿ ಮಣ್ಣಿನಲ್ಲಿ ಒಂದಾಗಿಬಿಡುತ್ತೆ; ಮಣ್ಣು ಫಲವತ್ತಾಗತ್ತೆ.
ಪೌಳಿ, ಪಾಗಾರ= Compound.
ಸೊನೆ= ಕೆಲ ಮರ-ಗಿಡದ ಕಾಯಿ ಅಥವಾ ಎಲೆಯ ತೊಟ್ಟು ಮುರಿದಾಗ ಒಂದು ರೀತಿಯ ದ್ರವ (ಹಾಲು ಅಥವಾ ಹಯನ ಅಂತಾರೆ ಕೆಲ ಕಡೆ) ಒಸರುತ್ತಲ್ಲ, ಅದೇ ಸೊನೆ.
ಬಾಂದು= ಬಾಂದುಕಲ್ಲು. ಜಮೀನಿನ ಗಡಿಯ ಗುರುತಿಗಾಗಿ ಹೂತಿರುವ ಕಲ್ಲು.
ಗೆರಟೆ= ತೆಂಗಿನಕಾಯಿಯ ಚಿಪ್ಪು.
ನಾಗೊಂದಿ= ನಾಗೊಂದಿಗೆ. Shelf.
ಪೆಠಾರಿ= ಪೆಟ್ಟಿಗೆ.
ಗವಾಕ್ಷಿ= ಮನೆಯ ಸೂರಿನಲ್ಲಿ, ಒಂದು ಹೆಂಚಿನ ಬದಲು glass ಹಾಕಿರ್ತಾರೆ, ಬೆಳಕು ಬರ್ಲಿ ಅಂತ. ಗವಾಕ್ಷಿ ಅಂದ್ರೆ basically ಬೆಳಕಿಂಡಿ ಅಂತ -ಗೋಡೆ ಅಥವಾ ಸೂರಿಗೆ ಮಾಡಿದ ರಂಧ್ರ.
ಕರಂಡಕ= ಡಬ್ಬ ಅಥವಾ ಭರಣಿ.
ಹಳವಂಡ= ಕನವರಿಕೆ, ಭ್ರಮೆ, ತಳಮಳ.
ಅಂಟವಾಳಕಾಯಿ= ಒಂದು ಬಗೆಯ ಕಾಯಿ. ಇದು ಸೋಪಿನ ಹಾಗೆ ನೊರೆ ನೊರೆ ಬರುತ್ತೆ. ಹಿಂದೆಲ್ಲಾ ಇದನ್ನೇ ಸ್ನಾನಕ್ಕೂ ಬಳಸುತ್ತಿದ್ದರಂತೆ; ಈಗ ಪಾತ್ರೆ ತೊಳೆಯುವುದಕ್ಕೆ ಬಳಸುತ್ತಾರೆ. ಮತ್ತೆ ಹಳ್ಳಿಜನ ಕಾಡಿಗೆ ಹೋಗಿ ಅಂಟವಾಳಕಾಯಿ ಸಂಗ್ರಹಿಸಿ ಪೇಟೆಗೆ ಹೋಗಿ ಮಾರುತ್ತಾರೆ. ಅದು ಸೋಪ್ ಮಾಡುವುದಕ್ಕೆ ಹೋಗತ್ತಂತೆ.
ದಣಪೆ= ಗೇಟು ಸಾರ್.. ಆ ಕಡೆ - ಈ ಕಡೆ ಎರಡು ಎರಡು ಕಂಬ ಹುಗಿದು, ಆ ಕಂಬಗಳಿಗೆ ತೂತುಗಳನ್ನು ಮಾಡಿ, ಮಧ್ಯೆ ಗಳು (ಅಥವಾ ದಬ್ಬೆ ಅಥವಾ ಕೋಲು) ಸಿಕ್ಕಿಸಿ ಆ ಕಡೆ ಈ ಕಡೆ ಸರಿಸಲಿಕ್ಕೆ ಬರುವಂಥದು..
ದೋಟಿ= ಕೊಕ್ಕೆ. ಎತ್ತರದಲ್ಲಿರುವ ಹೂವು, ಹಣ್ಣು, ಕಾಯಿ ಕೊಯ್ಯಲಿಕ್ಕೆ ಬಳಸೋ ಉದ್ದ ಕೋಲು.
ಬದು= ಗಡಿ; ಒಡ್ಡು; ಗದ್ದೆಯಲ್ಲಿ ಓಡಾಡಲಿಕ್ಕೆ ಇರುವ ದಾರಿ.
ತಾಲಿ= ಪಾತ್ರೆ.
ಪಕಾಸೆ= ಮನೆಗೆ ಹೆಂಚು ಹೊದಿಸಲಿಕ್ಕೆ ಮೊದಲು ದಪ್ಪ ಮರದ ತುಂಡುಗಳನ್ನು vertically ಜೋಡಿಸಿ ಕೂರಿಸುತ್ತಾರೆ; ಆ ನಂತರ ಸಣ್ಣ ಮರದ ತುಂಡುಗಳನ್ನು horizontally ಹೊಡೆಯುತ್ತಾರೆ. ಅದರ ಮೇಲೆ ಹೆಂಚು ಇಡುತ್ತಾ ಬರುವುದು. ಹಾಗೆ vertically ಜೋಡಿಸಿದ ತುಂಡುಗಳು ’ಪಕಾಸೆ’; horizontally ಹೊಡೆದವು ’ರೀಪು’.

Wednesday 4 February 2009

ಥೇಟ್ ನಿಮ್ಮಂತೆ

`ಜೀವನದ ಕ್ಷಣಕ್ಷಣವೂ ಬದುಕಬೇಕು 
ತೀವ್ರವಾಗಿ ನಿನ್ನ ಜೊತೆ`
ಎಂದು ನಿನ್ನ ತುರಿದ ಗಡ್ಡದ ಗದ್ದದಿಂದ 
ನನ್ನ ಹಾಲುಗಲ್ಲ ಸವರಿದಾಗ 
ಜಗತ್ತಿನಲ್ಲಿ ನನ್ನಷ್ಟು ಅದೃಷ್ಟಶಾಲಿ ಯಾರಿದ್ದರು? 

ಕನಸುಗಳ ಗುಡ್ಡೆಕಟ್ಟುತ್ತ ಡಿಗ್ರಿ ಮುಗಿಸಿ 
ಬಿಜಾಪುರಕೆ ಬೈಬೈ ಹೇಳಿ 
ಬೆಂಗಳೂರಿನಲ್ಲೊಂದು 
ಒಂದು ಪುಟಾಣಿ ರೂಮಿನ `ಮನೆ` ಬಾಡಿಗೆಗೆ ಸಿಕ್ಕಾಗ 
ಸ್ವರ್ಗಕ್ಕೆ ಮೂರುಗೇಣು ಅನ್ನದವರಾರು? 

ನಿನ್ನ ಕೆಲಸ ನನ್ನ ಕೆಲಸ
ನಡುವೆ ನನ್ನ ಬಸಿರು ಹೆರಿಗೆ

ಸೈಟು 
ಮನೆ 
ಆಳು 
ಕಾರು 

ಮಗುವಿನ ಸ್ನಾನ ಮಗುವಿನ ಸ್ಕೂಲು 
ಮಗುವಿನ ಹೋಂವರ್ಕು ಮಗುವಿನ ಕರಾಟೆ 
ಮಗುವಿನ ಸ್ವಿಮಿಂಗು ಮಗುವಿನ ಟೆನಿಸ್ಸು 
ಮಗುವಿನ ಎಕ್ಸಾಮು ಮಗುವಿನ ವೆಕೇಷನ್ನು 

ಎಲ್ಲದಕ್ಕು ನಾನೇ ಬೇಕು ನೀನು ಮಾತ್ರ ಪತ್ತೆಗಿಲ್ಲ 

ನೋಡು ಹೌಸ್ ವೈಫು ಸುಖಿ ಅಂದವರಾರು? 

ಅಡಿಗೆಯವಳ ಅಡಿಗೆ 
ಮನೆಕೆಲಸದವಳ ಕ್ಲೀನಿಂಗು ಮಗ 
ಸ್ಕೂಲಿಗೆ ಹೋದ ಮೇಲಿನ್ನೇನಿದೆ? 

ಇನ್ನರ್‌ವೀಲು ಬ್ಯೂಟಿಪಾರ್ಲಲು 
ಎಂಜಿರೋಡು ಬ್ರಿಗೇಡ್ ರೋಡು 
ಸೆಂಟ್ರಲ್ ಗರುಡಾಮಾಲು 
ವೀಕೆಂಡಲ್ಲಿ ನಾರ್ತಿಂಡಿಯನ್ ಚೆನೀಸ್ ಕಾಂಟಿನೆಂಟಲ್ ನಾಗಾರ್ಜುನ ಅಮೀಬಾ 
ಹೆಜ್ಜೆಗೊಂದು ಇರುವ ಥರಾವರಿ ಪಬ್ಬುಗಳು 

ಇಷ್ಟೆಲ್ಲ ಆದ್ರೂನೂ
ಸೋಫಾದಲ್ಲಿ ಕುಸಿದು ಕೂತು 
ರಿಮೋಟ್ ಹಿಡಕೊಂಡರೆ ಸಾಕು 
ಶುರುವಾಗುತ್ತದೆ ವರಾತ
ಜೀವನ ನರಕ ಅಲ್ಲವೆಂದವರಾರು? 

ಮಗು ಗಂಡ ಮನೆ ಅಂತಸ್ತು 
ಡಯಟ್ಟು ಜಿಮ್ಮುಗಳಲ್ಲಿ 
ಕಳೆದು ಹೋಗುತ್ತಿರುವ ಚಿಲುಮೆ 

ಲೋನು ಫೀಸು 
ಟ್ಯಾಕ್ಸು ಪ್ರಮೋಷನ್ನು 
ಕಾಂಪಿಟೀಷನ್ನುಗಳಲ್ಲಿ ಉಸಿರುಕಟ್ಟಿಸುವ 
ಬೆಂಗಳೂರಿನ ಬವಣೆ 

ಗೊತ್ತು 
ತಪ್ಪು ನಿನ್ನದೂ ಅಲ್ಲ 
ತಪ್ಪು ನನ್ನದೂ ಅಲ್ಲ 
ಆದರೆ ಇಬ್ಬರೂ ಸರಿ ಇಲ್ಲ 

ಪ್ರತಿಬೆಳಗನ್ನು ಹೊಸಜೀವನ ಮಾಡಲು ಗೊತ್ತಿಲ್ಲದ 
ಬದುಕಿನ ಹುಚ್ಚುತನಕ್ಕೆ ಒಡ್ಡಿಕೊಳ್ಳಲು ಗೊತ್ತಿಲ್ಲದ 
ಮನದ ಒಂಟಿತನದಲ್ಲಿ ಹೊಸಲೋಕ ಗೊತ್ತಿಲ್ಲದ 
ಎಲ್ಲ ಇದ್ದೂ ಏನೂ ಇಲ್ಲದ ಖಾಲಿತನದ 

ಕತೆ ಬರೀ ನಮ್ಮದಲ್ಲ ಆನ್ನುವುದೇ 
ನಮಗೆ ಸಮಾಧಾನ 
ಹಳಸಿ ಹೋಗಿರುವ ಧಾರಾವಾಹಿಗಳಂತಾದರೂ ಸರಿ 
ಇನ್ನೂ ಬದುಕು ಸಾಗಿಸುತ್ತಿದ್ದೇವೆ 
ಥೇಟ್ ನಿಮ್ಮಂತೆ