Saturday 1 March 2008

ಲೇಖನ: ಎರಡು ಬ್ರಾಹ್ಮಣ ಕತೆಗಳು

ಒಂದು ಕತೆ ಖಾಸನೀಸರ `ತಬ್ಬಲಿಗಳು`, ಇನ್ನೊಂದು ವಸುಧೇಂದ್ರ ಬರೆದ `ಸೀಳುಲೋಟ`. 

ಈ ಎರಡೂ ಕತೆಗಳಲ್ಲಿ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಅಗಾಧವಾದದ್ದು. ಎರಡೂ ಕತೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಸಿಗುವ ಮಾಧ್ವಬ್ರಾಹ್ಮಣರ ಕತೆಗಳು. ಒಂದು ಕತೆ ಮಂತ್ರಾಲಯ, ಇನ್ನೊಂದು ಕತೆ ತಿರುಪತಿ! ಈ ಎರಡೂ ಜಾಗಗಳು ಮಾಧ್ವಬ್ರಾಹ್ಮಣರಿಗೆ ಪುಣ್ಯಕ್ಷೇತ್ರಗಳು - ಸರ್ವರುಗಾಪಹಾರಿ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ, ಮನೆದೇವರು ತಿರುಮಲದಲ್ಲಿ. `ತಬ್ಬಲಿಗಳು` ಕತೆ ತುಂಬ ಗಂಭೀರ, ಮೊದಲಿನಿಂದ ಕೊನೆವರೆಗೂ; ಬ್ರಾಹ್ಮಣರ ಯಾವ ರೀತಿ ರಿವಾಜುಗಳನ್ನೂ ಹೆಚ್ಚಿಗೇನೂ ಹೇಳದೇ, ಆ ಮನಸ್ಸುಗಳ ಒಳಗನ್ನು ನಿಧಾನವಾಗಿ ಯಾವ ಭಿಡೆಯಿಲ್ಲದೇ ನಿರ್ಭಾವುಕವಾಗಿ ಬಿಚ್ಚುತ್ತಾ ಎಲ್ಲರ ಬದುಕನ್ನೂ ತಬ್ಬಲಿಯಾಗಿಸುತ್ತದೆ. `ಸೀಳುಲೋಟ` ಕತೆ ನವಿರು ಹಾಸ್ಯದಲ್ಲಿ, ಬ್ರಾಹ್ಮಣರ ರೀತಿ ರಿವಾಜುಗಳನ್ನು ಬಿಚ್ಚುತ್ತಾ ಅವರ ಬದುಕಿನ ಸುತ್ತ ನಡೆಯುವ ಘಟನೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. 

ಈ ಎರಡೂ ಕತೆಗಳನು ಓದಿದ ಮೇಲೆ ಅನಿಸುವುದು, ಮಾಧ್ವಬ್ರಾಹ್ಮಣರ ಬದುಕು ಬೇರೆಯವರ ಬದುಕಿಗಿಂತ ಭಿನ್ನವಾಗಿಲ್ಲ ಎನ್ನುವುದು. ಅವರ ನಂಬಿಕೆಗಳು, ದೇವರುಗಳನ್ನು ಪೂಜಿಸುವ ರೀತಿ, ಮಂತ್ರ-ತಂತ್ರಗಳು ಬೇರೆಯಿರಬಹುದು. ಆದರೆ ಭಾರತದ "ಬಹುಜನ"ರ ಬಡತನ, ಕೀಳರಿಮೆ, ಚಟಗಳು, ಕಾಯಿಲೆಗಳು, ಒಡಲಾಳದಲ್ಲಿರುವ ಭಯ, ನೋವು, ಕಾಯಿಲೆ ಎಲ್ಲ ಒಂದೇ. `ಮೇಲ್ಜಾತಿ`ಯೆಂದು ಕರೆದು ದುಡ್ಡಿಗೆ ಯಾವತ್ತೂ ಕೊರತೆಯಿರದವರೆಂದು, ಓದಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ ಎಂಬ ನಂಬಿಕೆ ಭಾರತದಲ್ಲಿ ಹಾಸುಹೊಕ್ಕಾಗಿದೆ. `ಬಹುಜನ`ರು ಈ ಕತೆಗಳನ್ನು ಓದಿದರೆ ಚರಿತ್ರೆಯ ಮತ್ತು ವರ್ತಮಾನಸ ಇನ್ನೊಂದು ಮಗ್ಗಲು ತೆರೆದುಕೊಳ್ಳುತ್ತದೆ. ಚರಿತ್ರೆಕಾರರು ಇತಿಹಾಸಕಾರರು ಮಾಡದ ಕೆಲಸವನ್ನು ಈ ಎರಡು ಕತೆಗಳು ಯಾವ ಪೂರ್ವಗ್ರಹವಿಲ್ಲದೇ ಮಾಡಿ ಮುಗಿಸುತ್ತವೆ. 

ನಾನೊಬ್ಬ ಮಾಧ್ವಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದವನು, ಅದಕ್ಕೇ ಹೀಗನಿಸಿರಬೇಕು ಎಂದು ನೀವೆಂದುಕೊಂಡರೆ ಅದು ನನ್ನ ತಪ್ಪಲ್ಲ. ಕಳೆದ ಮೂವತ್ತು ವರ್ಷಗಳಿಂದ ಕೆಲವು ಕರ್ಮಠ ಮಾಧ್ವಬ್ರಾಹ್ಮಣರ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಡಿಗರ `ಆಗಬೋಟಿ` ಕವನದಂತೆ ಒಂದು ಕಡೆ ಇವರ ಬದುಕು ಪಶ್ಚಿಮದ ಝಂಝಾವಾತದಿಂದ ಅಲುಗಾಡುತ್ತಿದೆ; ಇನ್ನೊಂದು ಕಡೆ ಸಮಾಜದಿಂದ, ಸರಕಾರದಿಂದ `ಮೇಲ್ಜಾತಿಯವರು` ಎಂಬ ಹಣೆಪಟ್ಟಿಯಿಂದಾಗಿ ತುಳಿಸಿಕೊಂಡು ನಲುಗುತ್ತಿದೆ; ಮುಗದೊಂದು ಕಡೆ ಇತ್ತ ಹಳ್ಳಿಯೂ ಅಲ್ಲದ ಸಿಟಿಯೂ ಅಲ್ಲದ ಊರುಗಳಲ್ಲಿ ಬಡತನದಲ್ಲಿ ಹರಿನಾಮ ಜಪಿಸುತ್ತಿದ್ದಾರೆ, ರಾಘವೇಂದ್ರಾ ಎಂದು ಬಾಯ್ಬಿಡುತ್ತಿದ್ದಾರೆ.