Friday 27 August 2021

ಇಂಗ್ಲೆಂಡ್ ಪತ್ರ 8

 ರಜಾದಿನಗಳ ಪ್ರವಾಸಗಳು


ಬೇಸಿಗೆಯ ರಜೆ ಬಂದರೆ ಸಾಕು, ಹುಬ್ಬಳ್ಳಿಯಲ್ಲಿರುವ ಅಜ್ಜಿಯ ಮನೆಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಿದ್ದೆ. ಬೇಕಾದುದನ್ನೆಲ್ಲ ಕೊಡಿಸುವ ಮಾಮಂದಿದ್ದರು. ಮಾಮಿಯಂದಿರು ಮಾಡುವ ರುಚಿ ರುಚಿ ಬಿಸಿ ಬಿಸಿ ಅಡುಗೆ ಇರುತ್ತಿತ್ತು. ಕಸಿನ್‍ಗಳು ಸೇರಿ ಹುಬ್ಬಳ್ಳಿಯನ್ನೆಲ್ಲ ಜಾಲಾಡಿಸುತ್ತಿದ್ದೆವು, ದಿನ ಪೂರ್ತಿ ಆಡುತ್ತಿದ್ದೆವು. ರಾಜಕುಮಾರನ ಹೊಸ ಸಿನೆಮಾ ಸುಜಾತಾ ಟಾಕೀಜ್‍ನಲ್ಲಿ ಇರುತ್ತಿತ್ತು, ರಾಜಕುಮಾರನ ಹಳೆಯ ಸಿನೆಮಾಗಳು ವಾರಕ್ಕೊಂದರಂತೆ ಚಂದ್ರಕಲಾ ಟಾಕೀಜ್‍ನಲ್ಲಿ ಬರುತ್ತಿದ್ದವು.ಬಾಗಲಕೋಟೆ ಎಂಬ ಪುಟ್ಟ ಪಟ್ಟಣದಲ್ಲಿ ಬೆಳೆಯುತ್ತಿದ್ದವನಿಗೆ ಹುಬ್ಬಳ್ಳಿ ಒಂದು ಮಾಯಾನಗರಿಯಂತೆ ಕಾಣುತ್ತಿತ್ತು. ಕಣ್ಣು ತುಂಬ ಕನಸುಗಳನ್ನು ತುಂಬಿಕೊಂಡಿರುವ ಆ ವಯಸ್ಸಿನಲ್ಲಿ ಇನ್ನೇನು ತಾನೆ ಬೇಕಿತ್ತು? ನನ್ನ ಹಾಗೆಯೇ ನನ್ನ ಬಹಳಷ್ಟು ಸಹಪಾಠಿಗಳು ಕೂಡ ಬೇಸಿಗೆಯ ರಜೆ ಬಂದರೆ ಸಾಕು, ಅಜ್ಜನ ಮನೆಗೋ, ಅಜ್ಜಿಯ ಮನೆಗೋ, ಮಾಮಾ-ಕಾಕಾಗಳ ಮನೆಗೋ ಹೋಗುತ್ತಿದ್ದರು. ಈಗಲೂ ಭಾರತದಲ್ಲಿ ಮಕ್ಕಳು ಬೇಸಿಗೆಯ ರಜೆಯಲ್ಲಿ ಮೊದಲಿನಷ್ಟು ದಿನಗಳಿರದಿದ್ದರೂ ನಾಕಾರು ದಿನಗಳ ಮಟ್ಟಿಗಾದರೂ ಬಂಧುಗಳ ಮನೆಗೆ ಹೋಗಿ ಬೇಸಿಗೆಯ ರಜೆಯನ್ನು ಕಳೆಯುವುದು ಸಾಮಾನ್ಯ. 


ಆದರೆ ಇಂಗ್ಲೆಂಡಿನಲ್ಲಿ ಹಾಗಲ್ಲ. ಬೇಸಿಗೆಯ ರಜೆಯಲ್ಲಿ ಅಜ್ಜಅಜ್ಜಿಯ ಮನೆಗೋ, ಮಾಮಾ-ಕಾಕಂದಿರ ಮನೆಗೋ ಹೋಗುವುದಿಲ್ಲ. ಹಾಗಾಗಿ ಇಂಗ್ಲೆಂಡಿನಲ್ಲಿ ಬೇಸಿಗೆಯ ರಜೆ ಶುರುವಾದರೆ ಸಾಕು, ಕುಟುಂಬ ಸಮೇತ ಪ್ರವಾಸಗಳು ಶುರುವಾಗುತ್ತವೆ. ಕುಟುಂಬ ಸಮೇತ ಪ್ರವಾಸ ಕೈಗೊಂಡು, ಊರಿನಿಂದ ದೂರ ಪಯಣಿಸಿ, ಹೊಟೇಲಿನಲ್ಲಿದ್ದು, ನಾಕಾರು ದಿನ ಸುತ್ತ ಮುತ್ತೆಲ್ಲ ಕಳೆದು ಸುತ್ತಾಡಿ ಮನೆಗೆ ಮರಳುತ್ತಾರೆ. ಇಂಗ್ಲೆಂಡಿನಲ್ಲಿ ಈ ‘ಹಾಲಿಡೆ‘ಗಳಿಗೆ ಬಹಳ ಮಹತ್ವ. ವಾರ್ಷಿಕ ವರಮಾನ ಎಷ್ಟೇ ಇರಲಿ, ವರ್ಷಕ್ಕೆ ಕುಟುಂಬ ಸಮೇತ ಒಂದಾದರೂ ಹಾಲಿಡೆ ಮಾಡದಿದ್ದರೆ ಅದೆಂಥ ಬದುಕು ಎನ್ನುತ್ತದೆ ಇಲ್ಲಿನ ಸಮಾಜ. 


ಈ ದೇಶದ ಜನರು ಪಯಣಪ್ರಿಯರು. ಇಂಗ್ಲೆಂಡಿನಲ್ಲಿ ಲಂಡನ್ ಹೊರತಾಗಿ ಬೇಕಾದಷ್ಟು ನೈಸರ್ಗಿಕ, ಐತಿಹಾಸಿಕ ಮತ್ತು ಆಧುನಿಕ ಪ್ರೇಕ್ಷಣೀಯ ಸ್ಥಳಗಳಿವೆ; ಕಾರಿನಲ್ಲಿ ಎಲ್ಲ ಸರಂಜಾಮು ತುಂಬಿಕೊಂಡು ಹೊಟೆಲ್ ಬುಕ್ ಮಾಡಿ ಅಂಥ ಊರುಗಳಿಗೆ ಹೊರಟುಬಿಡುತ್ತಾರೆ. ಆದರೆ ಇಲ್ಲಿನ ಜನರಿಗೆ ವಿದೇಶ ಪ್ರಯಾಣದ ಹುಚ್ಚು, ಬಹುಷಃ ಇಲ್ಲಿನ ಜನರಿಗಿರುವಷ್ಟು ವಿದೇಶ ಪ್ರಯಾಣದ ಹುಚ್ಚು ಬೇರೆ ಯಾವ ದೇಶದವರಿಗೂ ಇಲ್ಲ ಎನಿಸುತ್ತದೆ. ಅದರಿಂದಾಗಿಯೇ ಇವರು ಪ್ರಪಂಚದ ಮೂಲೆಮೂಲೆಗಳಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದರೋ ಅಥವಾ ಎಲ್ಲೆಲ್ಲೂ ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದಕ್ಕಾಗಿ ಇಲ್ಲಿಯ ಜನರಲ್ಲಿ ವಿದೇಶ ಪ್ರವಾಸದ ಹುಚ್ಚು ಶುರುವಾಯಿತೋ? ಯುರೋಪಿನ ಬೇರೆ ದೇಶಗಳಿಗೆ ಪ್ರವಾಸ ಹೋಗುವುದೆಂದರೆ ಇವರಿಗೆ ಪ್ರಾಣ. ಉಳ್ಳವರು ಅಮೇರಿಕದ ನಗರ ಪ್ರವಾಸಕ್ಕೆ ಹೋಗುತ್ತಾರೆ, ನ್ಯೂಯಾರ್ಕ್, ಚಿಕಾಗೊ, ಫ್ಲೋರಿಡಾ, ಲಾಸ್ ವೇಗಾಸ್  ಎಂದರೆ ತುಂಬ ಇಷ್ಟ. ಭಾರತ, ಶ್ರೀಲಂಕಾ, ಥಾಯ್‌ಲ್ಯಾಂಡ್‌ಗಳೂ ಬಹಳ ಜನಪ್ರೀಯ. ಇಲ್ಲಿನ ಪತ್ರಿಕೆಗಳಲ್ಲಿ ಪ್ರತಿ ದಿನ ನಾಕಾರು ಪುಟಗಳನ್ನು ಪ್ರವಾಸದ ಜಾಹೀರಾತುಗಳಿಗೇ ಮೀಸಲಾಗಿರುತ್ತವೆ ಎಂದರೆ ಇಲ್ಲಿನ ಜನರ ಪ್ರವಾಸದ ಹುಚ್ಚು ಯಾವ ಮಟ್ಟಿಗಿರಬಹುದು ಊಹಿಸಿ. 


ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆ‘ಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು ಮತ್ತು ಯಾವಾಗ ಹೋದರೂ ಅವೇ ಆಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್‘ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛರ್ತಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ, ದೇವಸ್ಥಾನದ ಅಥವಾ ಮಠದ ಊಟ ಮಾಡಿದರೆ ಅಲ್ಲಿಗೆ ನಮ್ಮ ಹಾಲಿಡೆ ಖತಮ್. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಮೈಸೂರುಗಳೇನಿದ್ದರೂ ಶಾಲೆಯಿಂದ ಹೋಗಬೇಕಾದ ಹಾಲಿಡೆ ತಾಣಗಳು. ಊಟಿ, ಕಡೈಕೆನಾಲ್‌ಗಳೇನಿದ್ದರೂ ಹನಿಮೂನಿಗೆ ಮಾತ್ರ! ಇನ್ನು ತಾಜಮಹಲ್, ದಿಲ್ಲಿ, ಜಯಪುರಗಲ ಪ್ರವಾಸಗಳು ನಮ್ಮ ಕನಸಿನಲ್ಲೂ ಬರುತ್ತಿರಲಿಲ್ಲ. ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ ಹಾಲಿಡೆಗಳ ಬಗ್ಗೆ ಪ್ರವಾಸಗಳ ಬಗ್ಗೆ ಮನೋಭಾವ ಬದಲಾಗುತ್ತಿದೆ. ಕೆಳಮಧ್ಯಮ ವರ್ಗದವರೂ ತೀರ್ಥಯಾತ್ರಗಳಲ್ಲದೇ ಬೇರೆ ಪ್ರದೇಶಗಳಿಗೂ ಹಾಲಿಡೆಗೆಂದು ಹೋಗುತ್ತಿದ್ದಾರೆ. ಎಲ್ಲ ಐತಿಹಾಸಿಕ ಮತ್ತು ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ತಂಗಲು ಬಜೆಟ್ ಹೊಟೇಲುಗಳಿಂದ ಹಿಡಿದು ದುಬಾರಿ ರಿಸಾರ್ಟುಗಳವರೆಗೆ ಸಿಗುತ್ತವೆ. 


ಇಂಗ್ಲೆಂಡಿನಲ್ಲಿ ಹಾಲಿಡೆಗೆ ಹೋಗುವವರು ಮುಖ್ಯವಾಗಿ ಜಾಗಗಳನ್ನು ಆರಿಸಿಕೊಳ್ಳುವುದು ತಮ್ಮ ಮಕ್ಕಳ ವಯಸ್ಸು ಮತ್ತು ತಮ್ಮ ಹವ್ಯಾಸಗಳ ಆಧಾರಗಳ ಮೇಲೆ. ಚಿಕ್ಕ ಚಿಕ್ಕ ಮಕ್ಕಳಿದ್ದರೆ ಬೀಚ್‍ಗಳು ಇರುವ ಊರಿಗೋ ಅಥವಾ ಮಕ್ಕಳ ಚಟುವಟಿಕೆಗಳಿರುವ ಪ್ರದೇಶಗಳಿಗೋ (ಬಟ್ಲಿನ್ಸ್ ಅಥವಾ ಸೆಂಟರ್ ಪಾರ್ಕ್) ತಮ್ಮದೇ ಕಾರಿನಲ್ಲಿ ಹೋಗುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ತಮ್ಮ ಕಾರಿಗಳ ಬೆನ್ನ ಮೇಲೆ ಸೈಕಲ್‌ಗಳನ್ನು ಹೇರಿಕೊಂಡು ನೈಸರ್ಗಿಕ ತಾಣಗಳಿಗೆ ಹೋಗುತ್ತಾರ. ಬೆಟ್ಟ, ಗುಡ್ಡ, ಕಣಿವೆ, ತೊರೆಗಳಲ್ಲಿ ಸೈಕಲ್ ಓಡಿಸಿಕೊಂಡೋ, ಹೈಕಿಂಗ್ ಮಾಡಿಕೊಂಡೊ, ನೀರಿನಲ್ಲಿ ಹುಟ್ಟು ಹಾಕಿಕೊಂಡೋ ರಜೆಯ ಸಮಯವನ್ನು ಕಳೆಯುತ್ತಾರೆ. ಹೊಟೇಲುಗಳಲ್ಲಲ್ಲದೇ ಕ್ಯಾರಾವಾನ್‍ಗಳಲ್ಲಿ ಅಥವಾ ಟೆಂಟುಗಳಲ್ಲಿ ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಈ ದೇಶದಲ್ಲಿ ಸಿಕ್ಕಾಪಟ್ಟೆ ಕಾಲುವೆಗಳಿವೆ. ಆ ಕಾಲುವೆಗಳಲ್ಲಿ ಚಿಕ್ಕ ಚಿಕ್ಕ ನಾವೆ(ಬೋಟು)ಗಳನ್ನು ಬಾಡಿಗೆಗೆ ಪಡೆದು ಹಾಲಿಡೆ ಮಾಡುತ್ತಾರೆ. ಚಿಕ್ಕ ಬೋಟುಗಳಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ  ಸಾಗಿ, ರಾತ್ರಿಗಳನ್ನು ಬೋಟುಗಳಲ್ಲೇ ಕಳೆಯಬಹುದು. 


ಬೇರೆ ದೇಶಗಳ ಜನರಿಗೆ ಲಂಡನ್ ಪ್ರಮುಖ ಪ್ರೇಕ್ಷಣೀಯ ಸ್ಥಳ, ಆದರೆ ಬ್ರಿಟನ್ನಿನ ಜನರು ಹಾಲಿಡೆಗಳಿಗಾಗಿ ಲಂಡನ್ನಿಗೆ ಹೆಚ್ಚಾಗಿ ಹೋಗುವುದಿಲ್ಲ. ಐತಿಹಾಸಿಕ ಅಥವಾ ನೈಸರ್ಗಿಕ ಪ್ರದೇಶಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಯು.ಕೆಯಲ್ಲಿ ಸರಕಾರವು ನೈಸರ್ಗಿಕ ರಮ್ಯತಾಣಗಳನ್ನು ಗುರುತಿಸಿ (AONB - Area of Natural beauty ಮತ್ತು ಯು.ಕೆ ನ್ಯಾಶನಲ್ ಪಾರ್ಕ್ಸ್) ಅದರ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿರುವುದರಿಂದ, ಎಷ್ಟೇ ಪ್ರವಾಸಿಗಳು ಬಂದು ಹೋದರೂ, ಎಷ್ಟೇ ಜನಪ್ರೀಯವಾದರೂ, ಆಯಾ ಸ್ಥಳಗಳ, ಕಾಡುಗಳ, ಊರುಗಳ ಸೌಂದರ್ಯದಲ್ಲಿ ಯಾವ ರೀತಿಯಲ್ಲಿಯೂ ಹೆಚ್ಚೂ ಕಮ್ಮಿ ಆಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಐತಿಹಾಸಿಕ ಪಟ್ಟಣಗಳು ಮತ್ತು ಮಧ್ಯಕಾಲೀನ ಹಳ್ಳಿಗಳು ಇನ್ನೂ ತಮ್ಮ ಸೊಗಡನ್ನು ಉಳಿಸಿಕೊಂಡು ಜನರನ್ನು ಆಕರ್ಷಿಸುತ್ತಿವೆ. ಇಲ್ಲಿನ ಕಾಡುಗಳು ದಟ್ಟ ಕಾಡುಗಳಲ್ಲ, ದೊಡ್ಡ ಕಾಡು ಪ್ರಾಣಿಗಳು ಇಲ್ಲಿ ಇರುವುದಿಲ್ಲ. ಆದರೂ ಇಲ್ಲಿನ ಕಾಡುಗಳು ಮತ್ತು ಗುಡ್ಡಗಳು ನಡೆದಾಡಲು, ಹೈಕಿಂಗ್ ಮಾಡಲು ಅನುಕೂಲಕರವಾಗಿವೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಏರ್ಪಾಡುಗಳನ್ನು ಮಾಡಿದ್ದಾರೆ. 

ಕ್ರೂಸ್ ಹಾಲಿಡೆಗಳು ಕೂಡ ಇಲ್ಲಿ ತುಂಬ ಜನಪ್ರೀಯ. ಒಂದು ಚಿಕ್ಕ ಪಟ್ಟಣವನ್ನು ಹೋಲುವ ದೊಡ್ಡ ದೊಡ್ಡ ಹಡಗುಗಳು ಸಾವಿರಾರು ಜನರನ್ನು ತುಂಬಿಕೊಂಡು ವಾರದಿಂದ ಹಿಡಿದು ತಿಂಗಳುಗಳವರೆಗೆ ಯುರೋಪನ್ನು, ಕೆರೇಬಿಯನ್ ದ್ವೀಪಗಳನ್ನು, ಅಮೇರಿಕದ ಅಲಸ್ಕಾವನ್ನು ಸುತ್ತಾಡಿಸಿ ಕರೆದುಕೊಂಡು ಬರುತ್ತವೆ. ಒಂದು ಶಿಪ್ಪಿನಲ್ಲೇ ನಾಕಾರು ಕೆಲವೊಮ್ಮೆ ಹತ್ತಾರು ರೆಸ್ಟೋರೆಂಟುಗಳಿರುತ್ತವೆ, ಬಿಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಡಿನ್ನರ್‌ವರೆಗೆ ಪ್ರಪಂಚದ ವಿವಿಧ ಅಡುಗೆಗಳನ್ನು ಮಾಡಿರುತ್ತಾರೆ. ವಿಧ ವಿಧ ಪೇಯಗಳಿರುತ್ತವೆ. ಪ್ರದರ್ಶನಕ್ಕೆಂದು ಸಭಾಂಗಣವಿರುತ್ತದೆ. ಮಕ್ಕಳ ಆಟಕ್ಕೆಂದು ಜಾಗಗಳನ್ನು ಮಾಡಿರುತ್ತಾರೆ. 


ಈ ಪ್ರವಾಸ/ಹಾಲಿಡೆ ಮಾಡುವ ಹುಚ್ಚು ವಲಸೆ ಬಂದ ನಮ್ಮನ್ನೂ ತಟ್ಟಲು ಬಹಳ ಕಾಲವೇನೂ ಬೇಕಾಗುವುದಿಲ್ಲ. ನಾವು ಕೂಡ ಈ ದೇಶಕ್ಕೆ ಬಂದ ಮೇಲಿಂದ ಇಲ್ಲಿನ ಜನರಂತೆ ಪ್ರತಿ ವರ್ಷ ಮಕ್ಕಳ ಬೇಸಿಗೆಯ ರಜೆಯ ಸಮಯದಲ್ಲಿ ಪ್ರವಾಸಕ್ಕೆ ಹೋಗುತ್ತೇವೆ. ಯುರೋಪಿನ ದೇಶಗಳಾದ ಫ್ರಾನ್ಸ್, ಇಟಲಿ, ಗ್ರೀಸ್, ಸ್ಪೇನ್, ನೆದರ್‌ಲ್ಯಾಂಡ್, ಟರ್ಕಿ, ಕೆನರಿ ದ್ವೀಪಗಳು ಹಾಲಿಡೆಗಳಿಗಾಗಿ ತುಂಬ ಜನಪ್ರೀಯ. ಹಾಗೆಯೇ ಬ್ರಿಟನ್ನಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳಾದ ಲಂಡನ್, ಬಾತ್, ಕಾಟ್ಸ್‌ವಲ್ಡ್, ಕಾರ್ನ್ವಾಲ್, ಪೀಕ್ ಡಿಸ್ಟ್ರಿಕ್ಟ್, ಲೇಕ್ ಡಿಸ್ಟ್ರಿಕ್ಟ್, ಸ್ಕಾಟ್‌ಲ್ಯಾಂಡಿನ ಹೈಲ್ಯಾಂಡ್ಸ್‌ಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಬ್ರಿಟನ್ನಿನ ಸುತ್ತಮುತ್ತ ಕಿರುದ್ವ್ವೀಪಗಳಿವೆ, ಹಾಲಿಡೆ ತಾಣಗಳಾಗಿ ಅವೆಲ್ಲ ಬಹಳ ಜನಪ್ರೀಯ. ಅವಗಳ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ. 


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)


Friday 13 August 2021

ಇಂಗ್ಲೆಂಡ್ ಪತ್ರ - 7

ಇಂಗ್ಲೆಂಡ್-ಭಾರತ ಕ್ರಿಕೆಟ್ ತಂಡಗಳ ಟೆಸ್ಟ್ ಸರಣಿ ಶುರುವಾಗಿದೆ. ಇಂಗ್ಲೆಂಡಿನಲ್ಲಿ ಫುಟ್‍ಬಾಲ್‍ಗೆ ಇರುವ ಪ್ರಾಮುಖ್ಯತೆ ಇತರೆ ಆಟಗಳಿಗೆ ಇಲ್ಲವೇ ಇಲ್ಲ ಎನ್ನಬಹುದು. ಇಂಗ್ಲೆಂಡಿನ ಮೊದಲ ಹತ್ತು ಕ್ರಮಾಂಕದಲ್ಲಿ ಆಟಗಳನ್ನು ಹಾಕಿದರೆ ಫುಟ್‍ಬಾಲ್ ಆಟವು ಮೊದಲ ಹತ್ತು ಸ್ಥಾನಗಳನ್ನೂ ಆಕ್ರಮಿಸಿಕೊಳ್ಳುತ್ತದೆ. ಕ್ರಿಕೆಟ್, ಟೆನಿಸ್, ರಗ್‍ಬಿ, ಹಾಕಿ ಇತ್ಯಾದಿಗಳೆಲ್ಲ ಹನ್ನೊಂದರಿಂದ ತಮ್ಮ ಸ್ಥಾನಗಳಿಗಾಗಿ ಹೊಡೆದಾಡಿಕೊಳ್ಳಬೇಕು, ಅಷ್ಟೇ! 


ಭಾರತದಲ್ಲಿ ಹುಟ್ಟಿ ಬೆಳೆದ ನನಗೆ ಫುಟ್‍ಬಾಲ್ ಎಂದರೆ ಅಷ್ಟಕ್ಕಷ್ಟೇ. ಹೀಗಾಗಿ ನಾನು ಫುಟ್‍ಬಾಲ್‍ನ ಪ್ರೀಮಿಯರ್ ಲೀಗ್ (ಕ್ರಿಕೆಟ್ಟಿನ ಐಪಿಎಲ್ ತರಹ; ಭಾರತದ ಐಪಿಎಲ್‍ಗೆ ಇಂಗ್ಲೆಂಡಿನ ಅಥವಾ ಯುರೋಪಿನ ಫುಟ್‍ಬಾಲ್ ಲೀಗ್‍ಗಳೇ ಪ್ರೇರಣೆ) ನೋಡುವುದಿಲ್ಲ, ಸುದ್ದಿಜಾಲದಲ್ಲಿ ಓದುತ್ತೇನೆ, ಎಲ್ಲರ ಜೊತೆ ಮಾತನಾಡುವಾಗ ಯಾವುದಕ್ಕೂ ಇರಲಿ ಎಂದು. ಇಂಗ್ಲೀಷರು ಭಾರತವನ್ನು ಬಿಟ್ಟು ಹೋದಾಗ, ನಮಗೆ ಬಿಟ್ಟು ಹೋದ ಎರಡು ದೊಡ್ಡ ವಸ್ತುಗಳೆಂದರೆ ಇಂಗ್ಲೀಷ್ ಭಾಷೆ ಮತ್ತು ಕ್ರಿಕೆಟ್ ಆಟ ಎಂದರೆ ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. 


ನಾನು ಚಿಕ್ಕವನಾಗಿದ್ದಾಗ ಕ್ರಿಕೆಟ್ ಪಂದ್ಯವು ಐದು ದಿನಗಳ ಟೆಸ್ಟ್ ಮಾದರಿಯಲ್ಲಿ ನಡೆಯುತ್ತಿತ್ತು. ಒಂದು ದಿನದ ಪಂದ್ಯಗಳು ಅಲ್ಲಲ್ಲಿ ನಡೆಯುತ್ತಿದ್ದರೂ, 1983ರ ಕ್ರಿಕೆಟ್ ವಿಶ್ವಕಪ್ ಆಗುವವರೆಗೆ ಕ್ರಿಕೆಟ್ಟನ್ನು ಹಾಗೂ ಆಡಬಹುದು ಎಂದು ನನಗೆ ಗೊತ್ತೇ ಇರಲಿಲ್ಲ. ಭಾರತ 1983ರಲ್ಲಿ ಕ್ರಿಕೆಟ್ ವಿಶ್ವ ಕಪ್ ಗೆದ್ದ ಮೇಲೆ ಕ್ರಿಕೆಟ್ಟಿನ ಜನಪ್ರಿಯತೆ ಭಾರತದಲ್ಲಿ ಊಹೆಗೂ ಮೀರಿದ ರೀತಿಯಲ್ಲಿ ಭಾರತದ ಮೂಲೆ ಮೂಲೆಗಳನ್ನು ಸೇರಿತು. 


ಆದರೂ ಕ್ರಿಕೆಟ್ ಬ್ಯಾಟು, ಕ್ರಿಕೆಟ್ ಚೆಂಡು (ನಾವೆಲ್ಲ ಅದಕ್ಕೆ ಕರೆಯುತ್ತಿದುದು ಲೆದರ್ ಬಾಲ್ ಎಂದು), ಪ್ಯಾಡು, ಗ್ಲೌಸು, ಗಾರ್ಡು, ಹೆಲ್ಮೆಟ್ಟು ನಮ್ಮ ಮತ್ತು ನಮ್ಮ ಶಾಲೆಯ ಆರ್ಥಿಕ ಸ್ಥಿತಿಗೆ  ಸಿಗುವ ಸಾಧ್ಯತೆಗಳೇ ಇರಲಿಲ್ಲ. ನಮ್ಮ ಊರಿನಲ್ಲಿ ಕ್ರಿಕೆಟ್ ಆಡಲು ಬೇಕಾದ ಮೈದಾನಗಳೂ ಸರಿಯಾಗಿ ಇರಲಿಲ್ಲ. ಒಂದೇ ಮೈದಾನದಲ್ಲಿ ಕ್ರಿಕೆಟ್ಟು (ಒಂದೇ ಮೈದಾನದಲ್ಲಿ ಹತ್ತರು ಮ್ಯಾಚುಗಳು ಏಕಕಾಲಕ್ಕೆ), ಹಾಕಿ, ಫುಟ್‍ಬಾಲ್, ಖೋಖೋ, ಗೋಲಿಯಾಟ, ಕುಂಟೆಬಿಲ್ಲೆ, ಚಿಣಿದಾಂಡು, ಹೈಜಂಪ್, ಲಾಂಗ್‍ಜಂಪ್, ಜವೇಲಿಯನ್ ಥ್ರೋ, ಶಾಟ್‍ಫುಟ್ ಎಲ್ಲ ನಡೆಯುತ್ತಿದ್ದವು. ನಾವೆಲ್ಲ ದಿನಬೆಳಗಾದರೆ ಟೆನಿಸ್ ಬಾಲು ಮತ್ತು ಯಾವುದೋ ಕಟ್ಟಿಗೆಯ ತುಂಡಿನಲ್ಲಿ ಮಾಡಿದ ಬ್ಯಾಟು ಹಿಡಿದು ಸಮಯ ಸಿಕ್ಕಿದಾಗಲೆಲ್ಲ ಆಡುತ್ತಿದ್ದೆವು. ನನ್ನ ಚಿಕ್ಕಪಟ್ಟಣದಲ್ಲಿ ಟೆನಿಸ್ ಬಾಲಿನ ಪಂದ್ಯಾವಳಿಗಳು ಸಾಕಷ್ಟು ನಡೆಯುತ್ತಿದ್ದವು. 


ಆಗಾಗ ಕಾರ್ಕ್‍ಬಾಲಿನ ಪಂದ್ಯಗಳೂ ನಡೆಯುತ್ತಿದ್ದವು, ಅದನ್ನೂ ಮ್ಯಾಟ್ ಹಾಕಿ ಆಡಬೇಕಿತ್ತು. ಆ ಮ್ಯಾಟೂ ಕೂಡ ಅಲ್ಲಲ್ಲಿ ಹರಿದು ಹೋಗಿರುತ್ತಿತ್ತು. ಇಡೀ ತಂಡದಲ್ಲಿ ಕಾರ್ಕ್ ಬಾಲನ್ನು ಆಡಲು ಯೋಗ್ಯವಾದ ಬ್ಯಾಟು ಒಂದೇ ಇರುತ್ತಿತ್ತು. ಪ್ರತಿ ರನ್ ಓಡಿದ ಮೇಲೆ ಆ ಬ್ಯಾಟನ್ನು ಬ್ಯಾಟ್ಸ್‌ಮನ್‍ಗಳು ಬದಲಿಸಿಕೊಳ್ಳಬೇಕಿತ್ತು. ಇಡೀ ತಂಡದಲ್ಲಿ ಇರುತ್ತಿದ್ದುದೇ ಎರಡು ಪ್ಯಾಡು, ಬರೀ ಎಡಗಾಲಿಗೆ ಪ್ಯಾಡ್ ಹಾಕಿಕೊಂಡು ಬ್ಯಾಟಿಂಗ್ ಮಾಡಬೇಕಿತ್ತು. ನಿಜವಾದ ಕ್ರಿಕೆಟ್ ಬಾಲಿನಲ್ಲಿ (ಲೆದರ್ ಬಾಲ್) ಕ್ರಿಕೆಟ್ ಆಡುವುದು ನಮಗೆಲ್ಲ ಕನಸಾಗಿಯೇ ಇರುತ್ತಿತ್ತು. ಮುಂದೆ ಬೆಳೆದಂತೆಲ್ಲ ‘ಲೆದರ್ ಬಾಲ್‘‍ನಲ್ಲಿ ಆಗಾಗ ಕ್ರಿಕೆಟ್ ಆಡಿದ್ದುಂಟು, ಆದರೂ ಈ ದೇಶಕ್ಕೆ ಬರುವವರೆಗೆ ಹೆಚ್ಚಿನ ಕ್ರಿಕೆಟ್ ಆಡಿದ್ದು ಟೆನಿಸ್ ಬಾಲಿನಲ್ಲೇ! 


ಇಂಗ್ಲೆಂಡಿನಲ್ಲಿ ಕ್ರಿಕೆಟ್ ಚೆಂಡಿಗೆ ‘ಲೆದರ್ ಬಾಲ್‘ ಎಂದು ಯಾರೂ ಹೇಳುವುದಿಲ್ಲ, ಹಾಗೆ ಹೇಳಿದರೆ ಯಾರಿಗೂ ಅರ್ಥವಾಗುವುದೂ ಇಲ್ಲ. ಅದನ್ನು ಕರೆಯುವುದು ‘ಹಾರ್ಡ್‌ಬಾಲ್‘ ಎಂದು. ಇಲ್ಲಿ ಚಿಕ್ಕ ಮಕ್ಕಳು ಮಾತ್ರ ‘ಸಾಫ್ಟ್‌ಬಾಲ್‘ ಕ್ರಿಕೆಟ್ ಆಡುತ್ತಾರೆ, ಆದರೆ ಅದು ಟೆನಿಸ್ ಬಾಲ್ ಅಲ್ಲ. ಕ್ರಿಕೆಟ್ ಆಡಲು ವಿಶೇಷವಾಗಿ ತಯಾರು ಮಾಡಿದ ಮೃದುವಾದ ಚೆಂಡದು. ಕಾರ್ಕ್ ಬಾಲಿನಲ್ಲಿ ಅಥವಾ ಟೆನಿಸ್ ಬಾಲಿನಲ್ಲಿ ಇಲ್ಲಿ ಯಾವ ಪಂದ್ಯಗಳೂ ನಡೆಯುವುದಿಲ್ಲ. ಭಾರತದಲ್ಲಿ ಆಡುವಂತೆ ಮಕ್ಕಳು ಎಲ್ಲೆಂದರಲ್ಲಿ ಕ್ರಿಕೆಟ್ ಆಡುವುದಿಲ್ಲ (ಯಾವುದಾದರೂ ಪಾರ್ಕಿನಲ್ಲಿ ಹಾಗೆ ಸುಮ್ಮನೇ ಯಾರಾದರೂ ಸಾಫ್ಟ್‌ಬಾಲಿನಲ್ಲೋ ಟೆನಿಸ್ ಬಾಲಿನಲ್ಲೋ ಕ್ರಿಕೆಟ್ ಆಡುವುದು ಕಂಡುಬಂದರೆ ಅವರು ಭಾರತ ಅಥವಾ ಪಾಕಿಸ್ಥಾನ ಮೂಲದವರೇ ಎಂದು ಮುಲಾಜಿಲ್ಲದೇ ಹೇಳಬಹುದು). 


ಈ ಪುಟ್ಟ ದೇಶದಲ್ಲಿ ಸಾವಿರಾರು ಕ್ರಿಕೆಟ್ ಕ್ಲಬ್ಬುಗಳಿವೆ ಮತ್ತು ಈ ಎಲ್ಲ ಕ್ಲಬ್ಬುಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಜೊತೆ ನೊಂದಾವಣಿ ಮಾಡಿಕೊಂಡಿರುತ್ತದೆ. ಪ್ರತಿ ಕ್ಲಬ್ಬಿನಲ್ಲಿ ಇಸಿಬಿಯಿಂದ ಗುರುತಿಸಲ್ಪಟ್ಟ ತರಬೇತುದಾರರು ಇರುತ್ತಾರೆ. ಪ್ರತಿ ಕ್ಲಬ್ಬಿನಲ್ಲಿ ವಿವಿಧ ವಯಸ್ಸಿನ ಹತ್ತಾರು ಕ್ರಿಕೆಟ್ ತಂಡಗಳು ಇರುತ್ತವೆ ಮತ್ತು ಆ ತಂಡಗಳು ಬೇರೆ ಕ್ಲಬ್ಬುಗಳ ಜೊತೆ ಪಂದ್ಯಗಳನ್ನು ಆಡುತ್ತವೆ. ಕೆಲವು ಫ್ರೆಂಡ್ಲಿ ಪಂದ್ಯಗಳು ಮತ್ತು ಕೆಲವು ಲೀಗ್ ಪಂದ್ಯಗಳು ಇರುತ್ತವೆ. ಬೇಸಿಗೆಯಲ್ಲಿ ಮೈದಾನದಲ್ಲೂ ಮತ್ತು ಚಳಿಗಾಲದಲ್ಲಿ ಒಳಾಂಗಣದಲ್ಲೂ ತರಬೇತಿ ಕೊಡುತ್ತಾರೆ.  ನಾಕಾರು ವರ್ಷದ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕ್ರಿಕೆಟ್ ಕ್ಲಬ್ಬುಗಳಿಗೆ ಸೇರಿಸಲಾಗುತ್ತದೆ. ಹತ್ತು ವರ್ಷದವರೆಗೆ ಸಾಫ್ಟ್ ಬಾಲಿನಿಂದ ಕ್ರಿಕೆಟ್ ಆಡಿದ ಮಕ್ಕಳು, ನಂತರ ಹಾರ್ಡ್ ಬಾಲ್ ಕ್ರಿಕೆಟ್ ಆಡುತ್ತಾರೆ. ಈ ಹಾರ್ಡ್ ಬಾಲ್ ಕೂಡ ವಯಸ್ಸಿಗೆ ಅನುಗುಣವಾಗಿ ಬೇರೆ ಬೇರೆ ಗಾತ್ರ ಮತ್ತು ತೂಕದಲ್ಲಿ ಇರುತ್ತದೆ. 


ಪ್ರತಿ ಕ್ರಿಕೆಟ್ ಕ್ಲಬ್ಬಿಗೂ ಕ್ರಿಕೆಟ್ಟಿಗೆಂದೇ ಮೀಸಲಾದ ಸ್ವಂತದ ಮೈದಾನಗಳು ಇರುತ್ತವೆ. ಪ್ರತಿ ಕ್ಲಬ್ಬಿಗೂ ಸದಸ್ಯರಾಗಲು ವಾರ್ಷಿಕ ಚಂದಾ ಕೊಡಬೇಕು. ಪ್ರತಿ ಕ್ಲಬ್ಬಿಗೂ ಒಂದು ಆಡಳಿತದ ತಂಡ ಇರುತ್ತದೆ. ಪ್ರತಿ ಕ್ಲಬ್ಬಿಗೂ ಒಂದು ಚಿಕ್ಕದಾದರೂ ಸರಿ, ಮೈದಾನಕ್ಕೆ ಅಂಟಿಕೊಂಡಂತೆ ಒಂದು ಕಟ್ಟಡವಿರುತ್ತದೆ, ಅದರೊಳಗೆ ಒಂದು ಚಿಕ್ಕ ಪಬ್ಬು ಕೂಡ ಇರುತ್ತದೆ, ಮ್ಯಾಚು ನೋಡಲು ಬಂದವರು ಮತ್ತು ಮ್ಯಾಚು ಮುಗಿಸಿದ ಮೇಲೆ ತಿಂದು ಕುಡಿದು ಹೋಗಲು. ಕ್ಲಬ್ಬಿನಲ್ಲಿ ಆಗಾಗ ಡಿನ್ನರ್ ಗಳನ್ನೂ ಬಾರ್ಬಿಕ್ಯೂಗಳನ್ನೂ ಇಟ್ಟುಕೊಂಡಿರುತ್ತಾರೆ ಮತ್ತು ಕ್ಲಬ್ಬಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಕೆಲವು ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳುತ್ತಾರೆ. ಪ್ರತಿ ಕ್ರಿಕೆಟ್ ಮೈದಾನದಲ್ಲೂ ಹಾರ್ಡ್‌ಬಾಲ್ ಆಡಲು ಯೋಗ್ಯವಾದ ಪಿಚ್ಚುಗಳಿರುತ್ತವೆ. ಆಟ ಆಡುವ ನಾಕಾರು ದಿನಗಳ ಮೊದಲು ಪಿಚ್‌ಮ್ಯಾನ್ ಪಿಚ್ಚನ್ನು ತಯಾರು ಮಾಡುತ್ತಾನೆ; ಪಿಚ್ಚಿನ ಮೇಲೆ ಬೆಳೆದಿರುವ ಹುಲ್ಲನ್ನು ತೆಗೆದು, ನೀರುಣಿಸಿ, ರೋಲ್ ಮಾಡಿ ಅಣಿಮಾಡುತ್ತಾನೆ. ಮಳೆ ಬರುವ ಹಾಗಿದ್ದರೆ ಆ ಪಿಚ್ಚನ್ನು ಮುಚ್ಚಿ ಇಡಲು ಪ್ರತಿ ಕ್ಲಬ್ಬಿನಲ್ಲೂ ಪಿಚ್‌ಕವರ್ ಇರುತ್ತವೆ. ಇಲ್ಲಿ ಮ್ಯಾಟ್ ಹಾಕಿ ಯಾರೂ ಕ್ರಿಕೆಟ್ ಆಡುವುದಿಲ್ಲ. ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಲು ಸೈಡ್‌ಸ್ಕ್ರೀನ್‍ಗಳೂ ಇರುತ್ತವೆ. ಬೌಂಡರಿಗೆರೆಯಾಗಿ ಹಗ್ಗವನ್ನೋ ಇಲ್ಲ ಚಿಕ್ಕ ಧ್ವಜಗಳನ್ನೋ ನೆಟ್ಟಿರುತ್ತಾರೆ. ಹತ್ತು ವರ್ಷದ ಮಕ್ಕಳಿರಲಿ, ಐವತ್ತು ವರ್ಷದ ವಯಸ್ಕರಿರಲಿ, ಪ್ರತಿ ಪಂದ್ಯವನ್ನು ಅಂತರರಾಷ್ಟ್ರೀಯ ಪಂದ್ಯದ ಮಟ್ಟದಲ್ಲಿ ಆಡಿದಂತೆ ಆಡಲಾಗುತ್ತದೆ. ಅಂಪೈರ್‌ನ ನಿರ್ಣಯವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುವ ಮನೋಭಾವವನ್ನು ಚಿಕ್ಕ ವಯಸ್ಸಿನಲ್ಲೇ ಮೂಡಿಸಲಾಗುತ್ತದೆ. ಕ್ಲಬ್ಬಿನ ಪ್ರತಿ ಮ್ಯಾಚಿನ ವಿವರಗಳನ್ನು ಜಾಲತಾಣದಲ್ಲಿ ಹಾಕುತ್ತಾರೆ. ವರ್ಷ ಮುಗಿಯುವಾಗ ಚಿಕ್ಕ ಸಮಾರಂಭವನ್ನು ಏರ್ಪಡಿಸಿ ಬೆಸ್ಟ್ ಬಾಲರ್, ಬ್ಯಾಟ್ಸ್‌ಮನ್ ಮತ್ತು ಆಲ್‍ರೌಂಡರ್ ಪ್ರಶಸ್ತಿಗಳನ್ನು ಕೊಡುತ್ತಾರೆ. 


ಕ್ಲಬ್ ಕ್ರಿಕೆಟ್ಟಿನಲ್ಲಿ ಚೆನ್ನಾಗಿ ಆಡುವ ಮಕ್ಕಳನ್ನು ಗುರುತಿಸಿ, ಜಿಲ್ಲಾ ಮಟ್ಟದ ಆಯ್ಕೆಗೆ ಕಳಿಸಲಾಗುತ್ತದೆ. ಅಲ್ಲಿ ಆಯ್ಕೆಯಾದ ಮಕ್ಕಳು ತಮ ಕ್ಲಬ್ಬಿನ ಪಂದ್ಯಗಳ ಜೊತೆಗೆ ಜಿಲ್ಲಾ ಮಟ್ಟದ ಪಂದ್ಯಗಳನ್ನು ಆಡುತ್ತಾರೆ. ಅಲ್ಲಿ ಚೆನ್ನಾಗಿ ಆಡುವ ಮಕ್ಕಳನ್ನು ಗುರುತಿಸಿ ಕೌಂಟಿ ಮಟ್ಟಕ್ಕೆ ಆಯ್ಕೆ ಮಾಡುತ್ತಾರೆ. ಆಗ ಮಕ್ಕಳು ವಾರಕ್ಕೆ ನಾಕರಿಂದ ಐದು ದಿನ ತಮ್ಮ ಶಾಲೆಯ ಜೊತೆಗೆ ಕ್ರಿಕೆಟ್ ಆಡಬೇಕಾಗುತ್ತದೆ. ಆಟಗಳು ಬೇರೆ ಬೇರೆ ಮೈದಾನಗಳಲ್ಲಿ ನಡಿಯುತ್ತವೆ. ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮ್ಯಾಚು ಮುಗಿಯುವವರೆಗೆ ಕಾಯ್ದು ಕರೆದುಕೊಂಡು ಬರಲು ಇಬ್ಬರಲ್ಲಿ ಒಬ್ಬ ಪಿತೃ  ತಯಾರು ಇರಬೇಕಾಗುತ್ತದೆ. ಕೌಂಟಿ ಕ್ರಿಕೆಟ್ಟಿನಲ್ಲಿ ಬೆಳೆದು ದೊಡ್ಡವರಾದ ಮಕ್ಕಳು ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಾರೆ. 


ಇಂಗ್ಲೆಂಡಿನಲ್ಲಿರುವ ಇಂಥ ಸಾವಿರಾರು ಕ್ಲಬ್ಬುಗಳು ಸುರಳಿತವಾಗಿ ನಡೆಯಲು ಸರಕಾರದ ಅನುದಾನಕ್ಕೆ ಕೈ ಚಾಚುವುದಿಲ್ಲ ಎನ್ನುವುದು ಸೋಜಿಗ. ಎಲ್ಲ ಕ್ಲಬ್ಬುಗಳು ವಾರ್ಷಿಕ ಚಂದಾ, ಪ್ರತಿ ಪಂದ್ಯ ಆಡಿದ ಮ್ಯಾಚ್ ಫೀಸ್, ತಮ್ಮ ಕ್ಲಬ್ಬಿನ ಪಬ್ಬುಗಳ ಆದಾಯ, ಆಗಾಗ ನಡೆಸುವ ದುಡ್ಡು ಸಂಗ್ರಹಿಸುವ ಕಾಎರ್ಯಕ್ರಮಗಳಿಂದ ಬಂದ ಹಣದಿಂದ ನಡೆಸಿಕೊಂಡು ಹೋಗುತ್ತವೆ. ಇಸಿಬಿ ಸ್ವಲ್ಪ ಮಟ್ಟಿನ ಸಹಾಯ ಮಾಡುತ್ತದೆ ಎಂದು ಎಲ್ಲೋ ಓದಿದ ನೆನಪು. 


ಇದನ್ನೆಲ್ಲ ನೋಡಿದಾಗ ಭಾರತದಲ್ಲೂ ಹೀಗಿದ್ದರೆ ಇನ್ನೂ ಎಂಥೆಂಥ ಕ್ರಿಕೇಟಿಗರು ಬರಬಹುದು ಎಂದು ಅನಿಸುತ್ತದೆ. ಕ್ರಿಕೆಟ್ಟಿಗೆಂದೇ ಮೀಸಲಾದ ಮೈದಾನಗಳು, ಕ್ರಿಕೆಟ್ ಆಡಲು ಬೇಕಾದ ಮೂಲಭೂತ ಉಪಕರಣಗಳು, ಸೌಕರ್ಯಗಳು ಮತ್ತು ವ್ಯವಸ್ಥಿತ ವ್ಯವಸ್ಥೆ ಯಾವುವೂ ಇಲ್ಲದೇಯೇ ಭಾರತವು ಇಂದು ಕ್ರಿಕೆಟ್ಟಿನಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಭಾರತದಲ್ಲಿ ಕೂಡ ಪ್ರತಿ ಊರಿಗೊಂದು ಕ್ರಿಕೆಟ್ ಕ್ಲಬ್ಬು ಮತ್ತು ಮೈದಾನಗಳಾದರೆ, ತಾಲೂಕು ಮಟ್ಟದಲ್ಲಿ ಹಾರ್ಡ್‌ಬಾಲ್ ಪಂದ್ಯಾವಳಿಗಳು ನಡೆದರೆ, ಎಲ್ಲ ಸರಕಾರಿ ಮತ್ತು ಸಹಕಾರೀ ಶಾಲೆಗಳಿಗೆ ಕ್ರಿಕೆಟ್ಟಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲೇ ನಿಜವಾದ ಕ್ರಿಕೆಟ್ ಬಾಲಿನಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ಇನ್ನೂ ಎಂಥೆಂಥ ಪ್ರತಿಭೆಗಳು ಹೊರಬರಬಹುದು!  


ಅಂತರರಾಷ್ಟ್ರೀಯ ಪಂದ್ಯಗಳು:


ಈ ದೇಶದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ನೋಡುವ ಮಜವೇ ಬೇರೆ. ಇಲ್ಲಿ ಟೆಸ್ಟ್ ಪಂದ್ಯಗಳೂ ಕೂಡ ಪ್ರೇಕ್ಷಕರಿಂದ ಭರ್ತಿಯಾಗುತ್ತವೆ. ಇಂಗ್ಲೆಂಡ್-ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್-ಭಾರತದ ಪಂದ್ಯಗಳಿಗೆ ಟಿಕೆಟ್ಟುಗಳು ಬಹಳ ಬೇಗ ಖರ್ಚಾಗುತ್ತವೆ. ಇಂಗ್ಲೆಂಡ್ ಭಾರತದ ಒಂದು ದಿನದ ಪಂದ್ಯದಲ್ಲಿ ಭಾರತವನ್ನು ಬೆಂಬಲಿಸುವ ಪ್ರೇಕ್ಷಕರ ಸಂಖ್ಯೆ ಇಂಗ್ಲೆಂಡ್ ತಂಡವನ್ನು ಬೆಂಬಲಿಸುವ ಪ್ರೇಕ್ಷರಿಗಿಂತ ಎರಡು ಪಟ್ಟು ಇರುತ್ತದೆ, ಇಂಗ್ಲೆಂಡ್ ತಂಡದವರಿಗೆ ಇಂಗ್ಲೆಂಡಿನಲ್ಲಿ ಆಡುತ್ತಿದ್ದರೂ ಭಾರತದ ಮೈದಾನದಲ್ಲಿ ಆಡಿದಂತೆ ಅನಿಸಬೇಕು, ಹಾಗೆ. ಆದರೂ ಇಂಗ್ಲೆಂಡ್ ತಂಡವನ್ನು ಬೆಂಬಲಿಸುವ ಪ್ರೇಕ್ಷಕರು ನಮ್ಮ ಪಕ್ಕದಲ್ಲೇ ಕುಳಿತಿದ್ದರೂ ಅದರ ಬಗ್ಗೆ ಒಂಚೂರೂ ಬೇಸರ ಮಾಡಿಕೊಳ್ಳುವುದಿಲ್ಲ. ‘ನಮ್ಮ ದೇಶಕ್ಕೆ ಬಂದು, ಇಲ್ಲಿಯೇ ಕೆಲಸ ಮಾಡಿ, ಇಲ್ಲಿನ ಪ್ರಜೆಗಳಾಗಿ ಇನ್ನೊಂದು ದೇಶವನ್ನು ಏಕೆ ಬೆಂಬಲಿಸುತ್ತೀರಿ?‘ ಎಂದು ಹೇಳಿದ್ದನ್ನು ಕೇಳಿಲ್ಲ, ರಾಷ್ಟ್ರದ್ರೋಹಿ ಎಂದು ಅರಚುವುದಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಾರಿಕೊಳ್ಳುವುದಿಲ್ಲ. ಕ್ರಿಕೆಟ್ ಪಂದ್ಯವನ್ನು ರಾಷ್ಟ್ರೀಯತೆಯ ಸಂಕೇತವಾಗಿ ಕಾಣುವುದಿಲ್ಲ. 


ಆರು ದಿನಗಳ ಟೆಸ್ಟ್ (ಅದರಲ್ಲಿ ಒಂದು ದಿನ ವಿರಾಮವಿರುತ್ತಿತ್ತು) ಪಂದ್ಯಗಳಿಂದ, 60 ಓವರುಗಳ ಒಂದು ದಿನದ ಪಂದ್ಯಗಳು, ಅಲ್ಲಿಂದ 50 ಓವರುಗಳ ಒಂದು ದಿನದ ಪಂದ್ಯಗಳು, ಅಲ್ಲಿಂದ ಟಿ20 ಪಂದ್ಯಗಳು, ಮತ್ತು ಇತ್ತೀಚೆ 100 ಬಾಲಿನ ಪಂದ್ಯಗಳು ಶುರುವಾಗಿವೆ. ಆಡುವುದು ಒಂದೇ ಆಟವಾದರೂ ಪ್ರತಿ ಫಾರ್ಮಟ್ ಬೇರೆ ಬೇರೆ ರೀತಿಯ ಪ್ರತಿಭೆಯನ್ನು ಬೇಡುತ್ತದೆ. ಟಿ20 ಪಂದ್ಯಗಳು ಕೊಡುವ ಮನೋರಂಜನೆಯ ಮುಂದೆ ಒಂದು ದಿನದ ಪಂದ್ಯಗಳು ಮತ್ತು ಟೆಸ್ಟ್‌ಗಳು  ಸಪ್ಪೆ ಎಂದೇ ಹೇಳಬಹುದು. ಆದರೆ ಟೆಸ್ಟ್ ಮ್ಯಾಚುಗಳು ಮಾತ್ರ ನಿಜವಾಗಿಯೂ ಮನುಷ್ಯನ ಟೆಸ್ಟೇ, ಆಟಗಾರನ ಪ್ರತಿಭೆಯ ಮಾತ್ರದಿಂದ ಟೆಸ್ಟ್ ಪಂದ್ಯವನ್ನು ಆಡಲಾಗುವುದಿಲ್ಲ. ಸಹನೆ, ಮನೋಸ್ಥೈರ್ಯ ಮತ್ತು ಪಿಚ್ಚಿಗೆ ಅನುಗುಣವಾಗಿ ಆಟವಾಡುವ ತಾಳ್ಮೆ ಬ್ಯಾಟುಗಾರನಿಗೆ ಬೇಕಾಗುತ್ತದೆ. ಅದೇ ಅದೇ ಲೈನ್ ಮತ್ತು ಲೆಂತಿನಲ್ಲಿ ಬಿಟ್ಟು ಬಿಡದೇ ಬಾಲ್ ಮಾಡುವ ಏಕಾಗ್ರತೆ ಮತ್ತು ತಾಳ್ಮೆ ಬಾಲುಗಾರನಿಗೆ ಬೇಕಾಗುತ್ತದೆ. ಅದಕ್ಕೆಂದೇ ನನಗೆ ಟೆಸ್ಟ್ ಪಂದ್ಯಗಳೆಂದರೆ ವೀಕ್ಷಿಸಲು ಇಷ್ಟ. ಈ ಟಿ20ಗಳು ಮತ್ತು ಒಂದು ದಿನ ಪಂದ್ಯಗಳು ಪಾಪ್ ಸಂಗೀತವಿದ್ದಂತೆ, ಸಿನೆಮಾ ಸಂಗೀತದಂತೆ, ಆದರೆ ಟೆಸ್ಟ್ ಪಂದ್ಯಗಳು ಮಾತ್ರ ಹಿಂದುಸ್ಥಾನಿ ಸಂಗೀತದ ಕಛೇರಿ ಇದ್ದಂತೆ, ಎಷ್ಟು ಹೊತ್ತು ನಡೆದರೂ ಸಂಗೀತ ಸಾಕೆಂದು ಅನಿಸುವುದೇ ಇಲ್ಲ. 


ಕೆಪಿಎಲ್:


ಇತ್ತೀಚೆಗೆ ಡಾರ್ಬಿಯಲ್ಲಿ ನೆಲೆಸಿರುವ ಹರೀಶ್ ರಾಮಯ್ಯನವರು ಯುನೈಟೆಡ್ ಕಿಂಗ್‌ಡಮ್‍ನ ಎಲ್ಲ ಕನ್ನಡ ಕ್ರಿಕೆಟ್ ಆಟಗಾರರನ್ನು ಒಂದೇ ಕಡೆ ಸೇರಿಸಿ ಕೆಪಿಎಲ್ (ಕನ್ನಡ ಪ್ರೀಮಿಯರ್ ಲೀಗ್) ಅನ್ನು ಯಶಸ್ವಿಯಾಗಿ ಆಯೋಜಿಸಿದರು. ಉತ್ತರ ಐರ್‌ಲ್ಯಾಂಡ್‍ನಿಂದ ಹಿಡಿದು ದಕ್ಷಿಣ ಇಂಗ್ಲೆಂಡಿನವರೆಗೆ ಇರುವ ಕನ್ನಡಿಗರನ್ನು ಎಂಟು ತಂಡಗಳಾಗಿ ಮಾಡಿ, ಟಿ20 ಮಾದರಿಯಲ್ಲಿ, ವೃತ್ತಿಪರರಂತೆ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದರು. ಇಷ್ಟೊಂದು ಕನ್ನಡ ಕ್ರಿಕೇಟಿಗರು ಭಾರತದ ಹೊರಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೇರಿದ್ದು ಇದೇ ಮೊದಲು ಇರಬೇಕು. ಯಾವ ಪಂದ್ಯಾವಳಿಗೂ ಕಮ್ಮಿ ಇಲ್ಲದಂತೆ ಈ ಪಂದ್ಯಾವಳಿ ಮನಮೋಹಕವಾಗಿತ್ತು. ಅಂಥದೊಂದು ಸಂಭ್ರಮದಲ್ಲಿ ನಾನೂ ಆಟಗಾರನಾಗಿ ಪಾಲ್ಗೊಂಡೆ ಎನ್ನುವುದೇ ನನ್ನ ಹೆಮ್ಮೆ. ಇಡೀ ಪಂದ್ಯಾವಳಿಯಲ್ಲಿ ಸಿಕ್ಸರುಗಳ ಬೌಂಡರಿಗಳ ಸುರಿಮಳೆ. ಎರಡು ದಿನ ಬಿಟ್ಟು ಬಿಡದೇ ಸುರಿದ ಮಳೆ ಅಂದು ಶಾಂತವಾಗಿತ್ತು ಕೂಡ. ಇಪ್ಪತ್ತು ವರ್ಷದಿಂದ ಹಿಡಿದು ಐವತ್ತೈದು ವರ್ಷದವರೆಗಿನ ಕನ್ನಡಿಗರು ಪಾಲ್ಗೊಂಡಿದ್ದರು. ಯು.ಕೆ ಯಲ್ಲಿ ನೆಲೆಸಿರುವ ಕನ್ನಡ ಕ್ರಿಕೇಟಿಗರಿಗೆ ಅದೊಂದು ಅವಿಸ್ಮರಣೀಯ ಅನುಭವ.   


(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ)