Sunday 30 November 2008

ಈಶ್ವರ ಅಲ್ಲಾ ನಿನ್ನಯ ಜಗದಿ

ಈಶ್ವರ ಅಲ್ಲಾ ನಿನ್ನಯ ಜಗದಿ 
ದ್ವೇಷವಿದೇಕೆ ಛಲವೇಕೆ?
ನಿನ್ನಯ ಮನವು ಆಲದ ಮರವು 
ಮನುಜನ ಮನವು ತೃಣವೇಕೆ? 

ಅಡಿಗಡಿಗೊಂದು ಗಡಿಗಳು ಏಕೆ 
ನಿನ್ನದೇ ಅಲ್ಲವೇ ಜಗವೆಲ್ಲಾ? 
ನೇಸರ ನಮ್ಮನು ಸುತ್ತುತಲಿದ್ದರೂ 
ಕತ್ತಲಲಿ ನಮ್ಮಯ ಬದುಕೆಲ್ಲಾ 
ಭೂಮಿಯ ಸೀರೆಯ ಅಂಚಿನ ತುಂಬ 
ಮನುಜನ ರಕುತದ ಕಲೆ ಏಕೆ? 

ಕಿವಿಗಪ್ಪಳಿಸಿವೆ ಹಾಹಾಕಾರ 
ಒಲುಮೆಯ ಮಾತು ಕೇಳಿಸದು 
ನುಚ್ಚುನೂರಾದವು ಸಾವಿರ ಕನಸು 
ಜೋಡಿಪರಾರೂ ಕಾಣಿಸದು 
ಮನದ ಬಾಗಿಲಿಗೆ ಬಿದ್ದಿದೆ ಬೀಗ 
ಬೀಗಕೆ ಹಿಡಿದಿದೆ ತುಕ್ಕೇಕೆ? 

(ಜಾವೇದ್ ಅಖ್ತರ್ 1947-EARTH ಚಿತ್ರಕ್ಕೆ ಬರೆದು, ಎ ಆರ್ ರೆಹಮಾನ್ ಸಂಗೀತ ನೀಡಿದ ಹಾಡಿನ ಅನುವಾದ. ಅದೇ ಧಾಟಿಯಲ್ಲಿ ಹಾಡಬಹುದು)

Saturday 1 March 2008

ಲೇಖನ: ಎರಡು ಬ್ರಾಹ್ಮಣ ಕತೆಗಳು

ಒಂದು ಕತೆ ಖಾಸನೀಸರ `ತಬ್ಬಲಿಗಳು`, ಇನ್ನೊಂದು ವಸುಧೇಂದ್ರ ಬರೆದ `ಸೀಳುಲೋಟ`. 

ಈ ಎರಡೂ ಕತೆಗಳಲ್ಲಿ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಅಗಾಧವಾದದ್ದು. ಎರಡೂ ಕತೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಸಿಗುವ ಮಾಧ್ವಬ್ರಾಹ್ಮಣರ ಕತೆಗಳು. ಒಂದು ಕತೆ ಮಂತ್ರಾಲಯ, ಇನ್ನೊಂದು ಕತೆ ತಿರುಪತಿ! ಈ ಎರಡೂ ಜಾಗಗಳು ಮಾಧ್ವಬ್ರಾಹ್ಮಣರಿಗೆ ಪುಣ್ಯಕ್ಷೇತ್ರಗಳು - ಸರ್ವರುಗಾಪಹಾರಿ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ, ಮನೆದೇವರು ತಿರುಮಲದಲ್ಲಿ. `ತಬ್ಬಲಿಗಳು` ಕತೆ ತುಂಬ ಗಂಭೀರ, ಮೊದಲಿನಿಂದ ಕೊನೆವರೆಗೂ; ಬ್ರಾಹ್ಮಣರ ಯಾವ ರೀತಿ ರಿವಾಜುಗಳನ್ನೂ ಹೆಚ್ಚಿಗೇನೂ ಹೇಳದೇ, ಆ ಮನಸ್ಸುಗಳ ಒಳಗನ್ನು ನಿಧಾನವಾಗಿ ಯಾವ ಭಿಡೆಯಿಲ್ಲದೇ ನಿರ್ಭಾವುಕವಾಗಿ ಬಿಚ್ಚುತ್ತಾ ಎಲ್ಲರ ಬದುಕನ್ನೂ ತಬ್ಬಲಿಯಾಗಿಸುತ್ತದೆ. `ಸೀಳುಲೋಟ` ಕತೆ ನವಿರು ಹಾಸ್ಯದಲ್ಲಿ, ಬ್ರಾಹ್ಮಣರ ರೀತಿ ರಿವಾಜುಗಳನ್ನು ಬಿಚ್ಚುತ್ತಾ ಅವರ ಬದುಕಿನ ಸುತ್ತ ನಡೆಯುವ ಘಟನೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. 

ಈ ಎರಡೂ ಕತೆಗಳನು ಓದಿದ ಮೇಲೆ ಅನಿಸುವುದು, ಮಾಧ್ವಬ್ರಾಹ್ಮಣರ ಬದುಕು ಬೇರೆಯವರ ಬದುಕಿಗಿಂತ ಭಿನ್ನವಾಗಿಲ್ಲ ಎನ್ನುವುದು. ಅವರ ನಂಬಿಕೆಗಳು, ದೇವರುಗಳನ್ನು ಪೂಜಿಸುವ ರೀತಿ, ಮಂತ್ರ-ತಂತ್ರಗಳು ಬೇರೆಯಿರಬಹುದು. ಆದರೆ ಭಾರತದ "ಬಹುಜನ"ರ ಬಡತನ, ಕೀಳರಿಮೆ, ಚಟಗಳು, ಕಾಯಿಲೆಗಳು, ಒಡಲಾಳದಲ್ಲಿರುವ ಭಯ, ನೋವು, ಕಾಯಿಲೆ ಎಲ್ಲ ಒಂದೇ. `ಮೇಲ್ಜಾತಿ`ಯೆಂದು ಕರೆದು ದುಡ್ಡಿಗೆ ಯಾವತ್ತೂ ಕೊರತೆಯಿರದವರೆಂದು, ಓದಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ ಎಂಬ ನಂಬಿಕೆ ಭಾರತದಲ್ಲಿ ಹಾಸುಹೊಕ್ಕಾಗಿದೆ. `ಬಹುಜನ`ರು ಈ ಕತೆಗಳನ್ನು ಓದಿದರೆ ಚರಿತ್ರೆಯ ಮತ್ತು ವರ್ತಮಾನಸ ಇನ್ನೊಂದು ಮಗ್ಗಲು ತೆರೆದುಕೊಳ್ಳುತ್ತದೆ. ಚರಿತ್ರೆಕಾರರು ಇತಿಹಾಸಕಾರರು ಮಾಡದ ಕೆಲಸವನ್ನು ಈ ಎರಡು ಕತೆಗಳು ಯಾವ ಪೂರ್ವಗ್ರಹವಿಲ್ಲದೇ ಮಾಡಿ ಮುಗಿಸುತ್ತವೆ. 

ನಾನೊಬ್ಬ ಮಾಧ್ವಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದವನು, ಅದಕ್ಕೇ ಹೀಗನಿಸಿರಬೇಕು ಎಂದು ನೀವೆಂದುಕೊಂಡರೆ ಅದು ನನ್ನ ತಪ್ಪಲ್ಲ. ಕಳೆದ ಮೂವತ್ತು ವರ್ಷಗಳಿಂದ ಕೆಲವು ಕರ್ಮಠ ಮಾಧ್ವಬ್ರಾಹ್ಮಣರ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಡಿಗರ `ಆಗಬೋಟಿ` ಕವನದಂತೆ ಒಂದು ಕಡೆ ಇವರ ಬದುಕು ಪಶ್ಚಿಮದ ಝಂಝಾವಾತದಿಂದ ಅಲುಗಾಡುತ್ತಿದೆ; ಇನ್ನೊಂದು ಕಡೆ ಸಮಾಜದಿಂದ, ಸರಕಾರದಿಂದ `ಮೇಲ್ಜಾತಿಯವರು` ಎಂಬ ಹಣೆಪಟ್ಟಿಯಿಂದಾಗಿ ತುಳಿಸಿಕೊಂಡು ನಲುಗುತ್ತಿದೆ; ಮುಗದೊಂದು ಕಡೆ ಇತ್ತ ಹಳ್ಳಿಯೂ ಅಲ್ಲದ ಸಿಟಿಯೂ ಅಲ್ಲದ ಊರುಗಳಲ್ಲಿ ಬಡತನದಲ್ಲಿ ಹರಿನಾಮ ಜಪಿಸುತ್ತಿದ್ದಾರೆ, ರಾಘವೇಂದ್ರಾ ಎಂದು ಬಾಯ್ಬಿಡುತ್ತಿದ್ದಾರೆ. 

Monday 25 February 2008

ಲೇಖನ: ಒಂದೇ ವಸ್ತು ಮೂರು ಕತೆಗಳು

ಕತೆ ೧: 
ರಾಜಕುಮಾರ. ರಾತ್ರಿ ಮಲಗಿದಾಗ ಆತನ ಕೋಣೆಯಲ್ಲಿರುವ ದೀಪದ ಮೊಲ್ಲೆಯ ವಿಗ್ರಹಕ್ಕೆ ಜೀವ ಬಂದು ಅಕ್ಷರಷಃ ರಾಜಕುಮಾರನ ಒಳಗೆ ಸೇರಿಕೊಳ್ಳುತ್ತಾಳೆ. ಎಚ್ಚರವಾದಾಗ ರಾಜಕುಮಾರನಿಗೆ ದೀಪದ ಮೊಲ್ಲೆಯನ್ನಲ್ಲದೇ ಯಾವ ಹುಡುಗಿಯ ಮೇಲೆ ಅತೀವ ಮೋಹ ಹುಟ್ಟುತ್ತದೆ, ಆತ ಅನ್ನಾವ ಹುಡುಗಿಯನ್ನೂ ಕಣ್ಣೆತ್ತಿಯೂ ನೋಡಲಾರ. ಆತನ ತಾಯಿ ಯಾರ್ಯಾರಿಗೋ ಕೇಳಿದ ಮೇಲೆ ರಾಜಕುಮಾರನನ್ನೇ ತುಂಡರಿಸಿ ಎರಡು ಭಾಗ ಮಾಡಿ ಎರಡು ಮಡಿಕೆಗಳಲ್ಲಿ ಹೂತು ಹಾಕುತ್ತಾರೆ. ಒಂದರಿಂದ ರಾಜಕುಮಾರ ಬರುತ್ತಾನೆ. ಇನ್ನೊಂದರಿಂದ ದೀಪದ ಮೊಲ್ಲೆ ಹೊರಬರುತ್ತಾಳೆ ಎಂದು ನಂಬಿಕೊಂಡು. ಒಂದು ಮಡಿಕೆಯಿಂದ ರಾಜಕುಮಾರನೇನೋ ಹೊರಬರುತ್ತಾನೆ, ಆದರೆ ಇನ್ನೊಂದು ಮಡಕೆಯಿಂದ ದೀಪದ ಮೊಲ್ಲೆಯ ಬದಲಿಗೆ ಕಾಳಿಂಗ (ಸರ್ಪ) ಹೊರಬರುತ್ತಾನೆ. ಜನ ಕಾಳಿಂಗನನ್ನು ಹೊಡೆಯಲು ಹೊರಡುತ್ತಾರೆ, ಕಾಳಿಂಗ ತಪ್ಪಿಸಿಕೊಂಡು ಕಾಡು ಸೇರುತ್ತಾನೆ. ರಾಜಕುಮಾರ ವಿಧಿಯಿಲ್ಲದೇ ತಾಯಿ ಹೇಳಿದ ಹುಡುಗಿಗೆ ತಾಳಿ ಕಟ್ಟಿ, ಊರೂರು ಸುತ್ತತೊಡಗುತ್ತಾನೆ, ದೀಪದ ಮೊಲ್ಲೆಯ ಹುಡುಕಾಟದಲ್ಲಿ. ಇತ್ತ ಕಾಳಿಂಗನು ರಾಜಕುಮಾರನ ರೂಪ ತಾಳಿ ರಾಜಕುಮಾರನ ಹೆಂಡತಿಯೊಡನೆ ಸರಸದಲ್ಲಿ ತೊಡಗುತ್ತಾನೆ, ಆಕೆ ಗರ್ಭಿಣಿಯಾಗುತ್ತಾಳೆ. ಆಗ ರಾಜಕುಮಾರನಿಗೆ ತನ್ನ ಹೆಂಡತಿಯ ಶೀಲದ ಮೇಲೆ ಸಂದೇಹ. ಅವಳ ಪರೀಕ್ಷೆಯಾಗುತ್ತದೆ. ಅವಳು, "ನನ್ನ ಗಂಡ ಮತ್ತು ಈ ಸರ್ಪವನ್ನಲ್ಲದೇ ಬೇರೆ ಯಾವ ಗಂಡನನ್ನು ಮುಟ್ಟಿದ್ದರೂ ನನಗೆ ಈ ಸರ್ಪ ಕಚ್ಚಲಿ" ಎನ್ನುತ್ತಾಳೆ, ಗೆಲ್ಲುತ್ತಾಳೆ. ರಾಜಕುಮಾರನಿಗೆ ತಲೆ ಕೆಟ್ಟು ಅಂತಪುರಕ್ಕೆ ಪಹರೆಯಿಡುತ್ತಾನೆ. ಕಾಳಿಂಗ ಸಿಕ್ಕಿಹಾಕಿಕೊಳ್ಳುತ್ತಾನೆ. ಇಬ್ಬರಿಗೂ ಯುದ್ಧವಾಗಿ ಕಾಳಿಂಗ ಸಾಯುತ್ತಾನೆ, ಕಾಳಿಂಗ ಸಾಯುತ್ತಿದ್ದಂತೆ ರಾಜಕುಮಾರನೂ ಸಾಯುತ್ತಾನೆ. ಸಾಯುವಾಗ ಹೆಂಡತಿಗೆ ಹೇಳುತ್ತಾನೆ, "ನನ್ನಂತೆ ಈ ಹೊಟ್ಟೆಯಲ್ಲಿರುವ ಮಗುವನ್ನು ಎರಡು ಮಾಡಲು ಬಿಡಬೇಡ". 

ಕತೆ ೨: 
ಹಳ್ಳಿಯ ಶ್ರೀಮಂತ ಚಲುವ ಯಾವಾಗಲೂ ಇರುವುದು ತನ್ನ ವೇಶ್ಯೆಯ ಹತ್ತಿರವೇ! ತಾಯಿ ತಡೆಯಲಾಗದೇ ಮಗನ ಮದುವೆ ಮಾಡುತ್ತಾಳೆ, ಏನುಪಯೋಗ? ಹೆಂಡತಿಯ ಮೇಲೆ ಅವನಿಗೆ ಒಂಚೂರೂ ಮೋಹವಿಲ್ಲ. ಮನೆಯ ಹತ್ತಿರದ ಕಾಳಿಂಗವೊಂದು ಆ ಶ್ರೀಮಂತನ ರೂಪ ತಾಳಿ ಶ್ರೀಮಂತನ ಹೆಂಡತಿಯೊಡನೆ ರತಿಕ್ರೀಡೆಯಲ್ಲಿ ತೊಡಗುತ್ತದೆ, ಆಕೆ ಗರ್ಭಿಣಿಯಾಗುತ್ತಾಳೆ. ಮೇಲಿನ ತರಹದ್ದೇ ಪರೀಕ್ಷೆ, ಗೆಲ್ಲುತ್ತಾಳೆ. ಶ್ರೀಮಂತನಿಗೆ ತಲೆ ಕೆಟ್ಟು ಅವಳ ಮೇಲೆ ಕಣ್ಣಿಡುತ್ತಾನೆ, ಕಾಳಿಂಗ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇಬ್ಬರ ಯುದ್ಧದಲ್ಲಿ, ಕಾಳಿಂಗ ಸಾಯುತ್ತಾನೆ, ಶ್ರೀಮಂತ ತನ್ನ ತಪ್ಪಿನ ಅರಿವಾಗಿ ಹೊಟ್ಟೆಯಲ್ಲಿರುವ ಮಗುವನ್ನು ತನ್ನದೆಂದು ಒಪ್ಪಿ, ಹೆಂಡತಿಯೊಡನೆ ಸುಖವಾಗಿ ಬಾಳುತ್ತಾನೆ. 

ಕತೆ ೩: 
ವರ್ತಕರ ವಂಶ. ಮಗನಿಗೆ ಮದುವೆಯಾಗುತ್ತಿದ್ದಂತೆ ಆತ ಊರು ಬಿಟ್ಟು ಹೋಗುತ್ತಾನೆ. ಭೂತವೊಂದು ಆತನ ವೇಷ ಧರಿಸಿ ಅವನ ಹೆಂಡತಿಗೆ ಗರ್ಭಧಾರಣೆ ಮಾಡುತ್ತದೆ. ಆಮೇಲೆ ಎಲ್ಲ ಮೇಲಿನೆರೆಡು ಕತೆಗಳಲ್ಲಿದ್ದಂತೇ ನಡೆದು ಹೋಗುತ್ತದೆ. 

ಮೊದಲ ಕತೆಯನ್ನು `ಸಿರಿಸಂಪಿಗೆ` ಎನ್ನುವ ನಾಟಕದ ರೂಪದಲ್ಲಿ ಬರೆದವರು ಚಂದ್ರಶೇಖರ ಕಂಬಾರ. ಎರಡನೇ ಕತೆ ಕಾರ್ನಾಡರ `ನಾಗಮಂಡಲ` ನಾಟಕ, ಆಮೇಲೆ ನಾಗಾಭರಣರು ಸಿನೆಮಾ ಮಾಡಿದರು. ಮೂರನೇ ಕತೆ, ಹಿಂದಿಯಲ್ಲಿ ಚಲನಚಿತ್ರವಾದ, "ಪಹೇಲಿ" (ಇದು ರಾಜಸ್ಥಾನಿ ಕತೆಯನ್ನ್ನು ಬರೆದವರು ವಿಜಯಧಾನ್ ದೇತಾ) . 

ಈ ಕತೆ ಯಾಕೆ ಇಷ್ಟು ಜನರ ತಲೆ ತಿಂದು ನಾಟಕ, ಸಿನೆಮಾ ಆಯಿತು? 

ಭಾರತೀಯ ತತ್ವಶಾಸ್ತ್ರದಲ್ಲಿ ದೇಹ ಮತ್ತು ಆತ್ಮ, ಲೌಕಿಕ ಮತ್ತು ಅಲೌಕಿಕ, ಕಾಮ ಮತ್ತು ಪ್ರೇಮ, ರಾಜಸ ಮತ್ತು ಸಾತ್ವಿಕ ಗಳ ನಡುವಿನ ಮಸೆದಾಟ ವೇದಗಳಿಂದಲೂ ಬಂದಿದೆ, ಭಾರತದ ಮೂಲೆ ಮೂಲೆಗಳಲ್ಲಿರುವ ಜನಪದ ಕತೆಗಳಲ್ಲಿ ಕೂಡ ಈ ತಿಕ್ಕಾಟ ಕಾಣಬಹುದು. 

ಈ ಮೇಲಿನ ಮೂರು ಕತೆಗಳೂ ಒಂದೇ ಜಾನಪದ ಕತೆಯ ಬೇರೆ ಬೇರೆ ರೂಪಗಳು. ಆಧುನಿಕ ಸಾಹಿತ್ಯದಲ್ಲಿ, ಅದರಲ್ಲೂ ನವ್ಯ ಸಾಹಿತ್ಯದಲ್ಲಿ ಈ ತುಮುಲವನ್ನು ಮೇಲಿಂದ ಮೇಲೆ ನೋಡುತ್ತೇವೆ. ದೇಹಕ್ಕಿಂತ ಮನಸ್ಸು-ಆತ್ಮ ಮುಖ್ಯ, ಲೌಕಿಕಕ್ಕಿಂತ ಅಲೌಕಿಕ, ಕಾಮುಕ್ಕಿಂತ ಪ್ರೇಮ-ಭಕ್ತ್ತಿ, ರಾಜಸಕ್ಕಿಂತ ಸಾತ್ವಿಕ ದೊಡ್ಡದು, ಮತ್ತು ಅದರ ಹುಡುಕಾಟದಲ್ಲೇ ನಮ್ಮ ಅಭಿವೃದ್ಧಿ-ಮುಕ್ತಿ, ಮೋಕ್ಷ ಎಂಬುದು ವೈದಿಕ ನಂಬಿಕೆ. ಆದರೆ ದೇಹ, ಲೌಕಿಕ, ಕಾಮಗಳಲ್ಲಿ ಮುಕ್ತಿ ಕಾಣುವ ಚಾರ್ವಾಕರು ವೇದಕಾಲದಿಂದಲೂ ಉಲ್ಲೇಖಗೊಂಡಿದ್ದಾರೆ. ವೈದಿಕದ ಕತೆಗಳಲ್ಲಿ ಆತ್ಮ ಗೆಲ್ಲುತ್ತದೆ (ನಚಿಕೇತ), ಪ್ರೇಮ ಗೆಲ್ಲುತ್ತದೆ (ಸಾವಿತ್ರಿ). ಆದರೆ ಜನಪದ ಕತೆಗಳಲ್ಲಿ ದೇಹ ಗೆಲ್ಲುತ್ತದೆ, ಕಾಮ ಮನುಷ್ಯನ ಸಹಜ ಗುಣ ಎನ್ನುತ್ತದೆ. ಅಧುನಿಕ ಸಾಹಿತ್ಯದಲ್ಲಿ ಈ ವಿಭಜನೆಯ ಸಂಕೀರ್ಣತೆ ಈ ಮೂರು ಕತೆಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.