Friday 4 March 2016

ಸಿನೆಮಾ: ಕನ್ನಡ: ಕೂರ್ಮಾವತಾರ



ಯಾವುದೇ ಸಣ್ಣ ಪಟ್ಟಣದಲ್ಲಿ, ಯಾರಿಗೂ ಅಷ್ಟೇನೂ ಪರಿಚಯವಿಲ್ಲದ (ತನ್ನ ಮನೆಯಲ್ಲೇ ಅಪರಿಚಿತನಂತೆ ಬದುಕುವ), ಯಾವುದೇ ಸರಕಾರಿ ಕಛೇರಿಯಲ್ಲಿ ಕಾರಕೂನಿಕೆ ಮಾಡಿಕೊಂಡು, ಯಾವುದೇ ಆದರ್ಶಕ್ಕಾಗಲೀ ಆಮಿಷಕ್ಕಾಗಲೀ ಒಳಗಾಗದೇ, ದಶಕಗಳಗಟ್ಟಲೇ ಅದೇ ಬದುಕನ್ನು ಬದುಕುತ್ತ, ನಿವೃತ್ತಿಯ ಹಾದಿಯಲ್ಲಿರುವ ಕೆಳಮಧ್ಯಮವರ್ಗದ ವಿಧುರ ಗುಮಾಸ್ತ, ತಲೆ-ಕೈ-ಕಾಲುಗಳನ್ನು ಒಳಗೆ ಎಳೆದುಕೊಂಡು ಚಿಪ್ಪಿನಂತೆ ಬಿದ್ದುಕೊಂಡಿರುವ ಕೂರ್ಮದಂತೆ ಬದುಕಿರುತ್ತಾನೆ. 

ನೋಡಲು ಗಾಂಧಿಯಂತೆ ಇರುವುದೇ ಮಹಾಪರಾಧವಾಯಿತೇನೋ ಎನ್ನುವಂತೆ, ಮೊದಲಿನ ಗಾಂಧಿ ಪಾತ್ರಧಾರಿ ಕೈಕೊಟ್ಟದ್ದರಿಂದ, ಟಿವಿ ಸಿರಿಯಲ್ಲಿನ ಗಾಂಧಿಯ ಪಾತ್ರ ಈತನನ್ನು ಹುಡುಕಿಕೊಂಡು ಬರುತ್ತದೆ. 

ಮೊಮ್ಮಗ ಇಂಜಿನಿಯರ್ ಆಗುವ ಕನಸಿದ್ದರೆ ಹಣ ಬೇಕು ಎಂದು ಮೊಮ್ಮಗನ ಪ್ರೀತಿಯ ದಾಳ ಎಸೆದು, ಮಗ (ಬಡ್ಡಿ-ಶೇರ್ ಮಾರುಕಟ್ಟೆ ವ್ಯವಹಾರ ಮಾಡಿ ಜೀವನ ಮಾಡುತ್ತಾನೆ) ಈ ಕೂರ್ಮನನ್ನು ಗಾಂಧಿ ಪಾತ್ರಮಾಡಲು ಒಪ್ಪಿಸುತ್ತಾನೆ. 

ಗಾಂಧಿ ಪಾತ್ರ ಮಾಡುತ್ತ ಮಾಡುತ್ತ ಈ ಕೂರ್ಮನ ತಲೆ, ಕೈ, ಕಾಲುಗಳು ಚಿಪ್ಪಿನಿಂದ ಹೊರಬರಲು ಆರಂಭಿಸುತ್ತವೆ. ಗಾಂಧಿಯ ಆದರ್ಶಗಳು ಒಳಗಿಳಿಯಲು ಹತ್ತುತ್ತವೆ. 

ಮಗ, ಮಿತ್ರರು, ನೆರೆಹೊರೆಯವರು, ಜಾಹೀರಾತುದಾರರು ಈ ಹೊಸ ಗಾಂಧಿಯ ಪ್ರಸಿಧ್ಧಿಯನ್ನು ಎನ್-ಕ್ಯಾಷ್ ಮಾಡಿಕೊಳ್ಳಲು ತೊಡಗುತ್ತಾರೆ. 

ಅದರಿಂದ ಸಿಡಿದೆದ್ದು ಹೊರಬರಲು ಸಾಕಷ್ಟು ಪ್ರಯತ್ನ ಮಾಡಿ, ಸಾಧ್ಯವಾಗದೇ ಸೋಲುತ್ತಾನೆ. 

ಗೋಡ್ಸೆಯಿಂದ ಹತ್ಯೆಯಾಗುವ ದೃಶ್ಯದಲ್ಲಿ ನಟಿಸಿ ಸಾಯುತ್ತಾನೆ. 

ನೆಹರು, ಪಟೇಲ, ಗೋಡ್ಸೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. 

ಅಟೆನ್-ಬರೋ ಅವರ `ಗಾಂಧಿ` ಸಿನೆಮಾದಂತಯೇ, ಗಾಂಧಿಯ ಹತ್ಯೆಯೊಂದಿಗೇ ಸಿನೆಮಾ ಶುರುವಾಗಿ, ಫ್ಲ್ಯಾಷ್-ಬ್ಯಾಕಿನಲ್ಲಿ ಕತೆ ಶುರು ಅಗುತ್ತದೆ, ಕಾಸರವಳ್ಳಿಯವರ `ಕೂರ್ಮಾವತಾರ`. ಆದರೆ `ಗಾಂಧಿ` ಸಿನೆಮಾದಲ್ಲಿ, ನಿಜಜೀವನದಲ್ಲಿ ಗಾಂಧಿಯ ಹತ್ಯೆ ಆಗಿದ್ದು ಒಂದೇ ಗುಂಡಿನಿಂದ. ಇಲ್ಲಿ ದೃಶ್ಯ ಸರಿಯಾಗಿ ಮೂಡಿಬಂದಿಲ್ಲವೆಂದು, ಗಾಂಧಿಯನ್ನು ಪದೇ ಪದೇ ಕೊಲ್ಲಲಾಗುತ್ತದೆ. 

ವೈಯಕ್ತಿಕ ಆದರ್ಶಗಳ, ಕುಟುಂಬದ, ಮಾಧ್ಯಮಗಳ, ಜಾತಿ-ಧರ್ಮಗಳ, ಸಮಾಜದ ಪದರು ಪದರುಗಳನ್ನು ಅದೇ ಸಂಕೀರ್ಣತೆಯಲ್ಲಿ ಉಣಬಡಿಸುತ್ತಾರೆ. 

ನೋಡಲೇಬೇಕಾದ ಚಿತ್ರ.

('ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)