ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ
ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ
ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ
ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ
ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳುಗಳೇ ಸರಗಳು
ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ
ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು...
ಅವರಿವರ ಬಳಿಯಿದ್ದ
ಅವುಗಳನ್ನು ಗಳಿಸಲು
ಏನನ್ನೂ ಕದಿಯಲಿಲ್ಲ
ಬಾಗಿಸಲಿಲ್ಲ ಬೆನ್ನನ್ನು
ಮಂಡೆಯೂರಿ ಬಿಕ್ಕಿ ಬೇಡಲಿಲ್ಲ
ಗೋಗೆರೆಯಲಿಲ್ಲ, ಅಳಲಿಲ್ಲ, ಕನಿಕರವ ಬೇಡಲಿಲ್ಲ
ನೀನದನ್ನು ಸೊಕ್ಕಾದರೂ ಅನ್ನು
ತಿಕ್ಕಲುತನವಾದರೂ ಅನ್ನು
ನಿನ್ನ ಮದುವೆಯ ದಿನ
ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ
’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’
ಎನ್ನುವ ನಿಮ್ಮಪ್ಪನ ವೇದಾಂತ
ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು
ಅದೇ ಮೊಟ್ಟಮೊದಲ ಬಾರಿಗೆ
ಜೀವನದಲ್ಲಿ ನಾನು ಮುಖವನೆತ್ತಿ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು
ನಿನ್ನಪ್ಪನ ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು