Thursday, 11 February 2021

ದೃಶ್ಯಂ-2




ಮೂಲ ಚಿತ್ರ ಯದ್ವಾತದ್ವಾ ಹಿಟ್ ಆಯಿತು ಎಂದು ಎರಡನೇ, ಮೂರನೇ ಭಾಗಗಳನ್ನು ಚಿತ್ರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದು ಹಾಲಿವುಡ್. ಎಷ್ಟೊಂದು ಸಲ ಹೆಸರೊಂದನ್ನು ಬಿಟ್ಟರೆ ಮೊದಲ ಭಾಗಕ್ಕೂ ನಂತರ ಬರುವ ಭಾಗಗಳಿಗೂ ಸಂಬಂಧವೇ ಇರುವುದಿಲ್ಲ. ಮೊದಲ ಸಿನೆಮಾದ ನಾಮಬಲದಿಂದ ಬಿಡುಗಡೆಯಾಗುವ ಮೊದಲೇ ನಿರ್ಮಾಪಕರಿಗೆ ಲಾಭವನ್ನು ತಂದುಕೊಡುವ ಈ ಎರಡನೇ ಮೂರನೇ ಕಂತುಗಳು, ಪ್ರೇಕ್ಷಕರಿಗೆ ಸಂತೋಷ, ಮನೋರಂಜನೆ, ಸಂದೇಶ, ಸಸ್ಪೆನ್ಸ್, ಕುತೂಹಲ, ಹೆದರಿಕೆಗಳನ್ನು ಕೊಡುವ ಸಾಧ್ಯತೆಗಳು ತುಂಬ ಕಡಿಮೆ; ಅದರಲ್ಲೂ ಎರಡನೇ ಭಾಗ ಉತ್ತರಭಾಗ (ಸಿಕ್ವೀಲ್) ಆಗಿದ್ದರಂತೂ ಪ್ರೀಕ್ಷಕನಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ‘ಹ್ಯಾರಿಪಾಟರ್‘, ‘ಲಾರ್ಡ್ ಆಫ್ ದ ರಿಂಗ್ಸ್‘ನಂಥ ಸಿನೆಮಾಗಳು ಮೊದಲೇ ಎಷ್ಟು ಭಾಗಗಳಲ್ಲಿ ಸಿನೆಮಾ ಮಾಡುತ್ತೇವೆ ಎಂದು ನಿರ್ಧರಿಸಿಯೇ ಸಿನೆಮಾ ಮಾಡುವ ಸಂಪ್ರದಾಯವನ್ನು ಹುಟ್ಟುಹಾಕಿದವು. ಅವುಗಳ ಸ್ಪೂರ್ತಿಯಿಂದ ಭಾರತದಲ್ಲಿ ‘ಬಾಹುಬಲಿ‘, ಮತ್ತು ‘ಕೆ.ಜಿ.ಎಫ್‘ಗಳು ಹುಟ್ಟಿಕೊಂಡವು. ಇವುಗಳ ಮಧ್ಯ ಸದ್ದಿಲ್ಲದೇ (ಅಂದರೆ ಸಿನೆಮಾಹಾಲಿನಲ್ಲಿ ಬಿಡುಗಡೆಯಾಗದೇ) ಮಲಯಾಳಂ ಭಾಷೆಯ ‘ದೃಶ್ಯಂ - 2‘ , ಮೊದಲ ಚಿತ್ರದ ಉತ್ತರಕಾಂಡವಾಗಿ ಅಮೇಜ಼ಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿದೆ. 

 

ಆರು ವರ್ಷಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ನಿರ್ಮಾಣಗೊಂಡ ‘ದೃಶ್ಯಂ‘, ತನ್ನ ಕುತೂಹಲಕಾರಿಯಾದ ಕತೆ ಮತ್ತು ಚಿತ್ರಕತೆಯಿಂದಾಗಿ ಭಾರತದ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿ, ಭಾರತದಲ್ಲಿ ಮನೆಮಾತಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ‘ದೃಶ್ಯಂ‘ ಸಿನೆಮಾ ಕನ್ನಡದಲ್ಲೂ ರಿಮೇಕ್ ಆಗಿ ರವಿಚಂದ್ರನ್ ಮತ್ತು ಅಚ್ಯುತ್ ಅವರು ಅದ್ಭುತವಾಗಿ ನಟಿಸಿದ್ದರು.  

 

‘ದೃಶ್ಯಂ‘ ಚಿತ್ರದ ಅಂತ್ಯ ಕೊಟ್ಟ ರೋಚಕತೆಯನ್ನು ಕೊಟ್ಟಿರುವ ಸಿನೆಮಾಗಳು ತುಂಬ ವಿರಳ. ಜೀತು ಜೋಸೆಫ್ ಕತೆ ಬರೆದು, ಚಿತ್ರಕತೆ ಮಾಡಿ, ನಿರ್ದೇಶಿಸಿದ ಮೂಲ ಚಿತ್ರದಲ್ಲಿ ಮೋಹನ್‍ಲಾಲ್ ಅದ್ಭುತವಾಗಿ ಅಭಿನಯಿಸಿದ್ದರು. ಸಿನೆಮಾದ ಪ್ರತಿ ಪಾತ್ರವೂ ನಿಜಜೀವನದ ಪಾತ್ರಗಳಂತೆ ಅಭಿನಯಿಸಿದ್ದರು (ಅದು ಮಲಯಾಳಂ ಭಾಷೆಯ ಸಿನೆಮಾಗಳ ಜೀವಾಳ). ಕನ್ನಡ ಭಾಷೆಯಲ್ಲಿ ಈ ಸಿನೆಮಾ ರಿಮೇಕ್ ಆದಾಗ ರವಿಚಂದ್ರನ್, ಅಚ್ಯುತ್ ಹಾಗೂ ಶಿವರಾಂ ಆಷ್ಟೇ ಸಹಜವಾಗಿ ಅಭಿನಯಿಸಿ ಸಿನೆಮಾವನ್ನು ಕನ್ನಡೀಕರಿಸಿ ಗೆಲ್ಲಿಸಿದ್ದರು. ಆದರೆ ಅದೇ ಚಿತ್ರ ಹಿಂದಿಯಲ್ಲಿ ಬಂದಾಗ ಸಿನೆಮಾ ತುಂಬ ಕೃತಕಾವಾಗಿ ಬಿಟ್ಟಿತ್ತು, ಅಲ್ಲಿಯ ಯಾವ ಪಾತ್ರಗಳೂ ಸಹಜಸಲಿಲ್ಲ (ನಾನು ತಮಿಳು ಮತ್ತು ತೆಲುಗು ಅವತರಣಿಕೆಗಳನ್ನು ನೋಡಿಲ್ಲ). 

 

ಇಂಥ ದೊಡ್ಡ ಛಾಪನ್ನು ಮೂಡಿಸಿದ ಸಿನೆಮಾದ ಮುಂದುವರಿದ ಭಾಗವನ್ನು ಮಾಡುವುದು ಸುಲಭದ ಕೆಲಸವಲ್ಲ. ಮೊದಲ ಸಿನೆಮಾದಲ್ಲಿ ‘ದೃಶ್ಯ‘ಗಳನ್ನು ಸೃಷ್ಟಿ ಮಾಡಿ ನಮ್ಮನ್ನೂ ಪೋಲೀಸರನ್ನೂ ಮರಳು ಮಾಡಿದ್ದರಿಂದ ತಾನೇ ಈ ಸಿನೆಮಾಕ್ಕೆ ‘ದೃಶ್ಯ‘ ಎಂದು ಹೆಸರಿಟ್ಟಿರುವುದು. ಎರಡನೇ ಭಾಗದಲ್ಲಿ ಕೂಡ ನಾಯಕ ದೃಶ್ಯಗಳನ್ನು ಸೃಷ್ಟಿಸುತ್ತಾನೆ, ಆದರೆ ಈ ಸಿನೆಮಾದಲ್ಲಿ ಈ ದೃಶ್ಯಸೃಷ್ಟಿ ನಮ್ಮ ಎಣಿಕೆಗಳನ್ನೂ ಮೀರುತ್ತದೆ, ಆ ವಿಷಯದಲ್ಲಿ ಕತೆಗಾರರಾಗಿ ಜೀತು ಗೆದ್ದಿದ್ದಾರೆ.   

 

ಆತ್ಮ ಸಂರಕ್ಷಣೆಗಾಗಿ ಅಥವಾ ಅಚಾತುರ್ಯವಾಗಿ ಕೊಲೆ ಮಾಡಿದ್ದರೆ ಜೈಲು ಶಿಕ್ಷೆ ಕಡಿಮೆಯೆ. ಈ ಸಿನೆಮಾದಲ್ಲೇ ತೋರಿಸುವಂತೆ ಆರು ವರ್ಷದಲ್ಲಿ ಕೊಲೆಗಾರನ ಬಿಡುಗಡೆಯಾಗುತ್ತದೆ (ಚಿತ್ರದ ಆರಂಭದಲ್ಲೇ ಕೊಲೆಗಾರ ಪೋಲೀಸರಿಂದ ತಪ್ಪಿಸಿಕೊಂಡು ಓದುವ ದೃಶ್ಯ); ಅಲ್ಲಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಯಿತು, ಕೊಲೆ ಮಾಡಿದವನಿಗೂ ಕೊಲೆಯಿಂದ ಮಾನಸಿಕವಾಗಿ ಮುಕ್ತಿ ಸಿಕ್ಕಿತು. ಆದರೆ ನಮ್ಮ ಸಿನೆಮಾದ ನಾಯಕ ಕೊಲೆಯನ್ನು ಮುಚ್ಚಿ ಹಾಕಿ ಕಾನೂನಿನಿಂದೇನೋ ತಪ್ಪಿಸಿಕೊಂಡ, ಆದರೆ ಅವನ ಹೆಂಡತಿ ಮತ್ತು ಮಕ್ಕಳು ಆರು ವರ್ಷಗಳಾದ ಮೇಲೂ ದಿನವೂ ಮಾನಸಿಕವಾಗಿ ಇನ್ನೂ ಅದೇ ಸಂಕಷ್ಟದಲ್ಲಿದ್ದಾರೆ, ಮಾನಸಿಕವಾಗಿ ದಿನವೂ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಮೊದಲರ್ಧ. ಹೇಳೀ ಕೇಳೀ ನಮ್ಮ ನಾಯಕನಿಗೆ ಸಿನೆಮಾಗಳೆಂದರೆ ಪ್ರಾಣ. ಕೇಬಲ್ ಟಿವಿ ಕೆಲಸ ಬಿಟ್ಟು ಈಗ ಸ್ವಂತ ಸಿನೆಮಾ ಮಂದಿರ ಹಾಕಿದ್ದಾನೆ. ಅಷ್ಟೇ ಅಲ್ಲ,  ಹೆಂಡತಿ ಮತ್ತು ಮಕ್ಕಳು ದಿನವೂ ಆ ಹಿಂದಿನ ಕೊಲೆಯ ದುಃಸ್ವಪ್ನದಲ್ಲಿ ನರಳುತ್ತಿದ್ದರೆ,  ಇದಾವುದರ ಪರಿವೇ ಇಲ್ಲದವನಂತೆ (ಹಾಗೆಂದು ನಮಗೆ ಜಾಣ್ಮೆಯಿಂದ ತೋರಿಸುತ್ತಾರೆ, ಜೀತು ಜೋಸೆಫ್) ತಾನೇ ಕತೆ ಬರೆದು  ಸಿನೆಮಾ ಬೇರೆ ಮಾಡಲು ಹೊರಟಿದ್ದಾನೆ. ಆಗಲೇ ಹದಿನೈದು ಲಕ್ಷ ರೂಪಾಯಿಗನ್ನು ಕಳೇದುಕೊಂಡು ಹೆಂದತಿಯಿಂದ ಬಯ್ಯಿಸಿಕೊಂಡಿದ್ದಾನೆ ಕೂಡ.  

 

ಮೊದಲ ಭಾಗದಲ್ಲಿ ಬೆಂಬಲಕ್ಕಿದ್ದ ಕರುಣೆ ತೋರಿದ ಹಳ್ಳಿಯ ಜನರು ಈಗ ಜಾರ್ಜ್‌ಕುಟ್ಟಿಯ ಕುಟುಂಬದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನು ಮಾಡುತ್ತಿದ್ದಾರೆ, ಗೆಳೆತನವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇವುಗಳ ಮಧ್ಯ ಪಕ್ಕದ ಮನೆಗೆ ಬಂದ ಹೊಸ ನೆರೆಯವರದು (ಸಾಬು ಮತ್ತು ಸರಿತಾ) ಯಾವಾಗಲೂ ಗಂಡ ಹೆಂಡತಿಗೆ ಹೊಡೆಯುವ ಕಾಟ ಬೇರೆ.  

 

ಆದರೆ ಚಿತ್ರದ ಮಧ್ಯದ ಹೊತ್ತಿಗೆ ಮೊಟ್ಟ ಮೊದಲ ಶಾಕ್ ನೋಡುಗನ ಊಹೆಯನ್ನು ಮೀರುತ್ತದೆ. ಆಗ ಸಿನೆಮಾದ ಓಟವೂ ಭರದಿಂದ ಸಾಗುತ್ತದೆ. ಎರಡನೇ ಭಾಗ ಎಷ್ಟು ವೇಗವಾಗಿದೆ ಎಂದರೆ ಒಂದೇ ಒಂದು ಸಬ್‍ಟೈಟಲ್ಲನ್ನೂ ತಪ್ಪಿಸಿಕೊಳ್ಳುವಂತಿಲ್ಲ. ಮೊದಲ ಭಾಗದಷ್ಟು ಚಿತ್ರಕತೆ ಸಮರ್ಪಕವಾಗಿ ಮೂಡಿಬಂದಿಲ್ಲ, ಪ್ರಥಮಾರ್ಧ ಸ್ವಲ್ಪ ವೇಗವಾಗಿದ್ದಿರಬೇಕಿತ್ತು, ದ್ವಿತೀಯಾರ್ಧ ಸ್ವಲ್ಪ ನಿಧಾನವಾಗಿರಬೇಕಿತ್ತು ಎನ್ನುವುದು ನನ್ನ ಅನಿಸಿಕೆ.