ಅಮಿಶ್ ತ್ರಿಪಾಟಿ ಬರೆದ `Shiva Trilogy`ನಲ್ಲಿ ಒಂದು ಪ್ರಶ್ನೆ ಬರುತ್ತದೆ, 'ಎಲೆಯ ಬಣ್ಣ ಯಾವುದು?', ಎಂದು. ಉತ್ತರ `ಹಸಿರು', ಎಲ್ಲರಿಗೆ ಗೊತ್ತಿರುವಂಥದ್ದೇ. ಆದರೆ ಈ ಉತ್ತರ ತಪ್ಪು ಎನ್ನುತ್ತದೆ ಆ ಕಾದಂಬರಿಯ ಪಾತ್ರವೊಂದು. `ಎಲೆ ಬೆಳಕಿನ ಏಳು ಬಣ್ಣಗಳಲ್ಲಿ ಹಸಿರನ್ನು ಬಿಟ್ಟು ಇನ್ನೆಲ್ಲ ಬಣ್ಣಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ `ಎಲೆಯ ಬಣ್ಣ = ಏಳು ಬಣ್ಣ - ಹಸಿರು` ಆಗಬೇಕಲ್ಲವೇ?
ಅಕಿರಾ ಕುರೋಸಾವಾನ `ರೋಶೋಮಾನ್` ಚಿತ್ರದಲ್ಲಿ ಒಂದೇ ದೃಶ್ಯವನ್ನು ಒಂದೊಂದು ಪಾತ್ರ ಒಂದೊಂದು ತರಹ ತಮ್ಮದೇ ರೀತಿಯಲ್ಲಿ ಹೇಳುತ್ತಾರೆ; ನಾವು ಎಲ್ಲ ಕತೆಗಳನ್ನೂ ನಂಬತೊಡಗುತ್ತೇವೆ.
ಇವತ್ತು ಭಾನುವಾರ. ನಾನು, ನನ್ನ ಹೆಂಡತಿ ಮತ್ತು ನನ್ನ ಮಗ ಇಡೀ ದಿನ ಮನೆ ಬಿಟ್ಟು ಎಲ್ಲೂ ಹೋಗಿಲ್ಲ, ಟಿವಿ ನೋಡಿಲ್ಲ, ಫೋನು ಎತ್ತಿಲ್ಲ. ಆದರೂ ನಾವು ಒಬ್ಬೊಬ್ಬರೂ ಒಂದೊಂದು ವಾಸ್ತವದಲ್ಲಿ ಬದುಕುತ್ತಿದ್ದೇವೆ. ನಮ್ಮ ನಮ್ಮ ವಾಸ್ತವಗಳ ಗ್ರಹಿಕೆಯನ್ನೇ ನಿಜವೆಂದು ಸತ್ಯವೆಂದು ನಂಬುತ್ತೇವೆ. ನಮಗೆ ಯಾವುದು ಸ್ಪಷ್ಟ ಮತ್ತು ನಿಸ್ಸಂಶಯ ಅಂದುಕೊಂಡಿರುತ್ತೇವೆಯೋ ಅದಕ್ಕೆ ಕೂಡ ಹಲವಾರು ರೂಪಗಳು, ಆವೃತ್ತಿಗಳು ಇರುವ ಸಾಧ್ಯತೆ ಇರುತ್ತದೆ ಎನ್ನುವುದು ನಮ್ಮ ಅರಿವಿಗೇ ಬರುವುದಿಲ್ಲ.