Thursday, 24 October 2013

ಅಮ್ಮ

ಯಾರು ನನ್ನ ಹೊತ್ತು ಹೆತ್ತು 
ಹಾಲು ಕುಡಿಸಿ ನಕ್ಕಳೋ
ನಿದ್ದೆಯಲ್ಲು ಮುದ್ದು ಮಾಡಿ 
ಜೋ ಜೋ ಲಾಲಿ ಅಂದಳೋ 
ಅವಳೇ ಅಮ್ಮ  

ಕೆಮ್ಮು ಜ್ವರವು  ಶೀತ ಕಫವು
ಹೊಟ್ಟೆನೋವು ಕಾಡಲು
ನಿದ್ದೆ ಬಿಟ್ಟು ಹಗಲು ರಾತ್ರಿ 
ನನ್ನ ನೋಡಿಕೊಂಡಳೋ
ಅವಳೇ ಅಮ್ಮ

ಯಾರು ನನ್ನ ತೊದಲುಮಾತು 
ಅರ್ಥಮಾಡಿಕೊಂಡಳೋ
ಅಳುವ ಅಳಿಸಿ ನಗುವ ಬರಿಸಿ 
ಕೈಯ ತುತ್ತ ಕೊಟ್ಟಳೋ
ಅವಳೇ ಅಮ್ಮ

ಅಮ್ಮನಂಥ ಗುಮ್ಮನಿಲ್ಲ 
ಅಮ್ಮನಂಥ ಗೆಳೆಯನಿಲ್ಲ
ಅಮ್ಮನಂಥ ದೇವರಿಲ್ಲ 
ದೇವರೂ ಹಾಗಂತಾನಲ್ಲ!
ಅಮ್ಮ ನನ್ನಮ್ಮ

Ann Taylor ಬರೆದ `My Mother` ಎನ್ನುವ ಕವನದ ಭಾವಾನುವಾದ ಮತ್ತು ಸ್ಪೂರ್ತಿ

ಈ ಕವನಕ್ಕೆ ರಾಗ ಸಂಯೋಜಿಸಿ ಅಮಿತಾ ರವಿಕಿರಣ್ ಅವರು ಹಾಡಿದ್ದಾರೆ


Monday, 14 October 2013

ಲೇಖನ: ಸತ್ಯ ಸಾಪೇಕ್ಷಕ

 'ಪ್ಯಾಚ್ ಅಡಮ್ಸ್' ಸಿನೆಮದಲ್ಲಿ ಒಂದು ದೃಶ್ಯವಿದೆ. ಪ್ಯಾಚ್ ಸೈಕಿಯಾಟ್ರಿ ವಾರ್ಡಿನಲ್ಲಿ ಇರುವಾಗ ಇಲ್ಲಿರುವ ಇನ್ನೊಬ್ಬ ರೋಗಿ ನಾಕು ಬೆರಳುಗಳನ್ನು ಮೇಲಕ್ಕೆತ್ತಿ, 'ಇವು ಎಷ್ಟು?' ಎಂದು ಕೇಳುತ್ತಿರುತ್ತಾನೆ. ಎಲ್ಲರೂ, 'ನಾಕು' ಎಂದು ಉತ್ತರ ಕೊಡುತ್ತಿರುತ್ತಾರೆ. ಆ ಉತ್ತರ ಕೇಳಿದರೆ ಈ ರೋಗಿಗೆ ಇನ್ನಿಲ್ಲದ ಕೋಪ, 'ತಪ್ಪು, ತಪ್ಪು' ಎಂದು ಕಿರುಚುತ್ತ ಸಾಗುತ್ತಾನೆ. ಆ ರೋಗಿ ಪ್ಯಾಚ್ಗೆ ಕೂಡ ಅದೇ ಪ್ರಶ್ನೆ ಕೇಳುತ್ತಾನೆ, ಪ್ಯಾಚ್ ಕೂಡ, 'ನಾಕು' ಎಂದೇ ಉತ್ತರ ಕೊಡುತ್ತಾನೆ. ಅದಕ್ಕೆ ಆ ರೋಗಿ ನಾಕು ಬೆರಳುಗಳನ್ನು ಮುಂದೆ ಹಿಡಿದು, ಹೇಳುತ್ತಾನೆ, 'ಈ ಬೆರಳುಗಳ ಆಚೆ ನೋಡು' ಎನ್ನುತ್ತಾನೆ. ಪ್ಯಾಚ್ ಬೆರಳುಗಳ ಮೂಲಕ ಬೆರಳುಗಳ ಆಚೆ ನೋಡುತ್ತಾನೆ, ಬೆರಳುಗಳು ಮಬ್ಬಾಗಿ, ನಾಕು ಬೆರಳುಗಳು ಎಂಟು ಬೆರಳುಗಳ ತರಹ ಕಾಣುತ್ತವೆ. 'ಎಂಟು' ಎನ್ನುವ ಉತ್ತರ ಕೊಡುತ್ತಾನೆ ಪ್ಯಾಚ್. ಆ ಉತ್ತರವನ್ನು ಕೇಳಿ ರೋಗಿಯ ಮುಖ ಅರಳುತ್ತದೆ. ಆ ಉತ್ತರದಲ್ಲಿ ಪ್ಯಾಚ್ಗೆ ಬದುಕಿನ ಇನ್ನೊಂದು ಅರ್ಥ ತೆರೆದುಕೊಳ್ಳುತ್ತದೆ. ಕಣ್ಣಿಗೆ ಕಾಣುವ ವಾಸ್ತವದಲ್ಲಿ ಅದರಾಚೆಯ ವಾಸ್ತವವನ್ನೂ, ಕನಸನ್ನೂ, ಆಸೆಯನ್ನೂ, ಭೂತವನ್ನೂ ಒಟ್ಟಿಗೇ ನೋಡುತ್ತಾನೆ.  

ಅಮಿಶ್ ತ್ರಿಪಾಟಿ ಬರೆದ `Shiva Trilogy`ನಲ್ಲಿ ಒಂದು ಪ್ರಶ್ನೆ ಬರುತ್ತದೆ, 'ಎಲೆಯ ಬಣ್ಣ ಯಾವುದು?', ಎಂದು. ಉತ್ತರ `ಹಸಿರು', ಎಲ್ಲರಿಗೆ ಗೊತ್ತಿರುವಂಥದ್ದೇ. ಆದರೆ ಈ ಉತ್ತರ ತಪ್ಪು ಎನ್ನುತ್ತದೆ ಆ ಕಾದಂಬರಿಯ ಪಾತ್ರವೊಂದು. `ಎಲೆ ಬೆಳಕಿನ ಏಳು ಬಣ್ಣಗಳಲ್ಲಿ ಹಸಿರನ್ನು ಬಿಟ್ಟು ಇನ್ನೆಲ್ಲ ಬಣ್ಣಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ `ಎಲೆಯ ಬಣ್ಣ = ಏಳು ಬಣ್ಣ - ಹಸಿರು` ಆಗಬೇಕಲ್ಲವೇ?

ಅಕಿರಾ ಕುರೋಸಾವಾನ `ರೋಶೋಮಾನ್` ಚಿತ್ರದಲ್ಲಿ ಒಂದೇ ದೃಶ್ಯವನ್ನು ಒಂದೊಂದು ಪಾತ್ರ ಒಂದೊಂದು ತರಹ ತಮ್ಮದೇ ರೀತಿಯಲ್ಲಿ ಹೇಳುತ್ತಾರೆ; ನಾವು ಎಲ್ಲ ಕತೆಗಳನ್ನೂ ನಂಬತೊಡಗುತ್ತೇವೆ.   

ಇವತ್ತು ಭಾನುವಾರ. ನಾನು, ನನ್ನ ಹೆಂಡತಿ ಮತ್ತು ನನ್ನ ಮಗ ಇಡೀ ದಿನ ಮನೆ ಬಿಟ್ಟು ಎಲ್ಲೂ ಹೋಗಿಲ್ಲ, ಟಿವಿ ನೋಡಿಲ್ಲ, ಫೋನು ಎತ್ತಿಲ್ಲ. ಆದರೂ ನಾವು ಒಬ್ಬೊಬ್ಬರೂ ಒಂದೊಂದು ವಾಸ್ತವದಲ್ಲಿ ಬದುಕುತ್ತಿದ್ದೇವೆ. ನಮ್ಮ ನಮ್ಮ ವಾಸ್ತವಗಳ ಗ್ರಹಿಕೆಯನ್ನೇ  ನಿಜವೆಂದು ಸತ್ಯವೆಂದು ನಂಬುತ್ತೇವೆ. ನಮಗೆ ಯಾವುದು  ಸ್ಪಷ್ಟ ಮತ್ತು ನಿಸ್ಸಂಶಯ ಅಂದುಕೊಂಡಿರುತ್ತೇವೆಯೋ ಅದಕ್ಕೆ ಕೂಡ ಹಲವಾರು ರೂಪಗಳು, ಆವೃತ್ತಿಗಳು ಇರುವ ಸಾಧ್ಯತೆ ಇರುತ್ತದೆ ಎನ್ನುವುದು ನಮ್ಮ ಅರಿವಿಗೇ ಬರುವುದಿಲ್ಲ.