Sunday, 18 May 2025

ಕಿನ್ಸುಗಿ

ಹೇಳದೇ ಉಳಿದ ಮಾತು 
ಧಡಕ್ಕನೇ ಹಾಕಿದ ಬಾಗಿಲು 
ಕಣ್ಣಲ್ಲೇ ಉಳಿದ ಕಂಬನಿ 
ಎದೆಯಲ್ಲೇ ಕುದಿವ ಅವಮಾನ 
ತಲೆಯನ್ನು ತಿನ್ನುವ ಅನುಮಾನ 

ಒಂದು ದಿನ ನಮ್ಮ ಬದುಕುಗಳು 
ಅಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ 
ಬಿದ್ದ ಪಾರಿಜಾತದ ಹೂಗಳಂತೆ 
ನಿಶ್ಶಬ್ದವಾಗಿ ಪಚ್ಚೆಯಾಗಿ ಬಣ್ಣ ಒಣಗಿ ಬಿದ್ದುಕೊಂಡಿರುತ್ತವೆ 
ಎತ್ತಿಕೊಳ್ಳಲು ಹೋದರೆ ನೆಲಕ್ಕೆ ಅಂಟಿಕೊಂಡು ನರಳುತ್ತವೆ 
ಹಸಿ ಕೊಳಕು 

ಡೈನಿಂಗ್ ಟೇಬಲ್ಲಿನ ಊಟಕ್ಕೆ ನಿಶ್ಶಬ್ದದ ರುಚಿ 
ಸಾಂಬಾರಿಗೆ ಹಿಂದಿನ ದಿನದ ಸುಳ್ಳಿನ ವಾಸನೆ 
ಸಾಮಾಜಿಕ ತಾಣಗಳು ಸಾವಿರ ಕಣ್ಣುಗಳಿಂದ 
ದುರುಗುಟ್ಟಿ ನೋಡುತ್ತವೆ ಅಪ್-ಡೇಟಿಗೆ ಕಾಯುತ್ತ 

ಮೂವ್ ಆನ್ ಅನ್ನುತ್ತಾನೆ ಥೆರಪಿಸ್ಟು 
ದುಃಖ ಎನ್ನುವುದೇನು ನೇರ ದಾರಿಯೇ? 
ಅದೊಂದು ಕಾಲುದಾರಿಯೂ ಇರದ ಬೆಟ್ಟ 
ಪ್ರತಿಯೊಂದು ಹೆಜ್ಜೆಯೂ 
ಸೋಲುಗಳನ್ನು ನೋವುಗಳನ್ನು ಅವಮಾನಗಳನ್ನು 
ನೆನಪಿಸುತ್ತಲೇ ಇರುತ್ತದೆ 
"ಏಕೆ, ಹೇಗೆ, ನನಗೇ ಯಾಕೆ, ನಾನೇನು ತಪ್ಪು ಮಾಡಿದೆ?" 
 ಎಂದು ಪ್ರತಿಧ್ವನಿಸುತ್ತವೆ 

ಗಾಜಿನಂತೆ ಒಂದೇ ಸಲ ಚೂರು ಚೂರಾಗುವುದಿಲ್ಲ 
ಮೊದಲು ನೆಗ್ಗುತ್ತೇವೆ 
ಆಮೇಲೆ ನಿಧಾನವಾಗಿ ಸೀಳುತ್ತೇವೆ 
ಬಿ ರು ಕು ಬಿಡುತ್ತೇವೆ 
ತುಂಡಾ 
ಗುತ್ತೇವೆ 

ಜಪಾನೀಜರು ಬಿರುಕುಗಳನ್ನು 
ಚಿನ್ನದಿಂದ `ಕಿನ್ಸುಗಿ` ಮಾಡುತ್ತಾರಂತೆ 
ಬಿರುಕುಗಳು ಎದ್ದು ಕಾಣುವಂತೆ ಸುಂದರ 
ಅಚ್ಚಹೊಸ ಬದುಕನ್ನು ಕಟ್ಟಲು 
ಭೂತವನ್ನು ಅಳಿಸಬೇಕಾಗಿಲ್ಲ  

ಬಹುಶಃ ಎಲ್ಲವನ್ನೂ 
ಮೊದಲಿನಂತೆಯೇ ಜೋಡಿಸಬೇಕಾಗಿಲ್ಲ 
ಹೊಸ ಆಕಾರದಲ್ಲೂ 
ದೀಪವನ್ನು ಹಚ್ಚಬಹುದು 
ಬಿರುಕುಗಳಲ್ಲಿಯೇ 
ಪ್ರೀತಿ ಬೆಳಗಬಹುದಲ್ಲವೇ ಸಖಿ? 

ಎತ್ತಿಕೊಳ್ಳಬಹುದಾದುದನ್ನು ಎತ್ತಿಕೊಳ್ಳೋಣ 
ಒಂದು ನೆನಪಿನ ನಗು 
ಕಾರಣವಿಲ್ಲದೆ ಹಿಡಿದ ಕೈ 
ವಿನಾಕರಣ ನಗು 
ಅಕಾರಣ ಪ್ರೀತಿ 
ನಿಧಾನವಾಗಿ ಜೋಪಾನವಾಗಿ 
ಒಂದೊಂದಾಗಿ ಒಟ್ಟುಗೂಡಿಸೋಣ