Monday, 11 August 2025

ನನಗೇನನ್ನೂ ಕೇಳದ ನಗರ

ಮುಚ್ಚಿದ ಕೋಣೆಯಲ್ಲಿ 
ಹೊಗೆಯಿಂದ ಉಸಿರುಗಟ್ಟಿ 
ಕೆಲಸ ಬಿಟ್ಟೆ. 

ನನ್ನನ್ನು ನಾನು ಮರೆತು 
ಇನ್ನೊಬ್ಬರ ಕನಸಿಗಾಗಿ 
ಕೆಲಸ ಮಾಡುವುದು 
ಅಕ್ಷಮ್ಯ ಅಪರಾಧ! 

ಇಲ್ಲಿಯವರೆಗೆ ಎಷ್ಟು ಉಳಿತಾಯ 
ಮಾಡಿದ್ದೀಯಾ ಎಂದರೆ 
ನಾನಿನ್ನೂ ನನ್ನನ್ನು ಉಳಿಸಿಕೊಂಡಿದ್ದೇನೆ 
ಎಂದು ಹೇಳಬಲ್ಲೆ. 

ನನ್ನ ಕನಸಿನ ಕೆಲಸ, 
ಕೆಲಸವನ್ನೇ ಮಾಡದಿರುವುದು; 
ಬಹುಷಃ ಕೆಫೆಯೊಂದರಲ್ಲಿ ಕೂತು 
ಕವಿತೆಗಳನ್ನು ಬರೆಯುವುದು 
ಅಥವಾ ಇನ್-ಸ್ಟಾಗೆ ರೀಲ್ ಮಾಡುವುದು. 

ನೀವು ಇದನ್ನು ಇನ್ನೂ ಓದುತ್ತಿದ್ದರೆ ಹೊರಡಿ, 
ಸಂಬಳ ತರುವ ನಿಮ್ಮ ಕೆಲಸಕ್ಕೆ ಮಾಡಿ; 
ಯಾರದೋ ಕನಸಿಗೆ ನಿಮ್ಮ ಸ್ವಾತಂತ್ರ್ಯವನ್ನು ಒತ್ತೆಯಿಟ್ಟು 
ತಿಂಗಳಿಗೆ ಇಂತಿಷ್ಟು ದುಡ್ಡು ಎಣಿಸಿ. 

ಅಥವಾ ಬನ್ನಿ,
ಇಲ್ಲಿ ನನ್ನೊಂದಿಗೆ ಕುಳಿತುಕೊಳ್ಳಿ, 
ನಾವು ಏನಾಗಿದ್ದೇವೆಂದು 
ಮತ್ತು ನಾವು ಏನಾಗಬಹುದು 
ಎಂದು ಚರ್ಚೆ ಮಾಡೋಣ. 
ಹಾಗೇ ಸ್ವಲ್ಪ ಕಾಫಿಗೆ ಆರ್ಡರ್ ಮಾಡುತ್ತೀರಾ?  
ಜೊತೆಗೆ ಚೂರು ತಿಂಡಿಯನ್ನೂ. 
ಥ್ಯಾಂಕ್ಯೂ.

Friday, 16 May 2025

ಬಿಡುಗಡೆ

 ನಾನು ಬರೆಯುತ್ತೇನೆ

ನೀವು ಓದಲಲ್ಲ

ನಾನಿನ್ನೂ ಉಸಿರಾಡಲು


ಅಕ್ಷರಗಳು ಭೋರ್ಗರೆದು ಹರಿಯುತ್ತವೆ

ಯಾರೇನೆಂದು ಕೊಳ್ಳುವರೆಂಬ

ಭಯವಿಲ್ಲದೆ


ಈ ಬರೆದ ಪುಟಗಳು

ನನ್ನ ಬಗ್ಗೆ ತೀರ್ಪು ಕೊಡುವುದಿಲ್ಲ


ಆಮೇಲೆ

ಬರೆದ ಪುಟಗಳನ್ನು 

ಹರಿದು ಬೀಸಾಕುತ್ತೇನೆ

ಇನ್ನೂ ಹೇಗೆ ಬದುಕಿ ಉಳಿದೆನೆಂದು

ನೀವು ಇಣುಕಿ ನೋಡುವ ಮೊದಲು


ಬಿಡುಗಡೆ

ಬರವಣಿಗೆಯ ಪ್ರತಿ ಸಾಲೂ

ಬಿಡುಗಡೆ

Wednesday, 1 January 2025

ವರ್ಷದ ಮೊದಲ ದಿನದ ನಿರ್ಣಯಗಳು

ಈ ವರ್ಷದ ಮೊದಲ ದಿನ 

ಈ ಕೆಳಗಿನ ನಿರ್ಣಯಗಳನ್ನು ಮಾಡಿದ್ದೇನೆ:


ದಿನವೂ ವ್ಯಾಯಾಮ- ಯೋಗ ಮಾಡುತ್ತೇನೆ.

ಖರೀದಿಸಿದ ಎಲ್ಲಾ ಪುಸ್ತಕಗಳನ್ನು ಓದುತ್ತೇನೆ.

ಸ್ನೂಜ್ ಬಟನ್ ಒತ್ತುವುದನ್ನು ನಿಲ್ಲಿಸುತ್ತೇನೆ.


ಟಿಕ್‌ಟಾಕ್ ಸ್ಕ್ರೋಲ್ ಮಾಡುವುದನ್ನು ಬಿಡುತ್ತೇನೆ.

ಇನ್ಸ್-ಟಾ, ಫೇಸ್-ಬುಕ್ ತ್ಯಜಿಸುತ್ತೇನೆ.

ಎಲ್ಲ ವಾಟ್ಸ್-ಆಪ್ ಗುಂಪುಗಳನ್ನು ತೊರೆಯುತ್ತೇನೆ.


ಪ್ರತಿದಿನ ಧ್ಯಾನ ಮಾಡುತ್ತೇನೆ.

ಎಲ್ಲರನ್ನೂ ಅವರಿರುವಂತೇ ಒಪ್ಪಿಕೊಳ್ಳುತ್ತೇನೆ.

ನಾನು ನನ್ನನ್ನು ಕೂಡ  ಕ್ಷಮಿಸಿಕೊಳ್ಳುತ್ತೇನೆ.


ನನ್ನ ಬಹುಪಾಲು ಸಾಲಗಳನ್ನು ತೀರಿಸುತ್ತೇನೆ.

ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಉಳಿಸುತ್ತೇನೆ.

ನನ್ನ ಆಸೆ-ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುತ್ತೇನೆ.


ನನ್ನ ಸಂಗಾತಿಯ ಮಾತುಗಳನ್ನು ಕಿವಿಯಿಟ್ಟು ಕೇಳುತ್ತೇನೆ.

ಮಕ್ಕಳಿಗೆ ಉಪದೇಶ ಮಾಡುವುದನ್ನು ಬಂದ್ ಮಾಡುತ್ತೇನೆ.

ನನ್ನ ತಂದೆ ತಾಯಿಗೆ ಸಾಕಷ್ಟು ಸಮಯ ನೀಡುತ್ತೇನೆ.


ಯಾರೂ ನೋಡುತ್ತಿಲ್ಲ ಎನ್ನುವ ಹಾಗೆ ಕುಣಿಯುತ್ತೇನೆ.

ಹಾಲಿಡೇಗಳಲ್ಲಿ ಫೋಟೋ ತೆಗೆಯುವುದನ್ನು ಕೈಬಿಟ್ಟು

ಪ್ಲಾನ್ ಮಾಡದೇ ಅಲೆದಾಡುತ್ತೇನೆ.


ನಾನು ಟಿವಿ ಸುದ್ದಿ-ಚರ್ಚೆ ನೋಡುವುದನ್ನು ನಿಲ್ಲಿಸುತ್ತೇನೆ.

ನೆಟ್‌ಫ್ಲಿಕ್ಸ್ ಬಿಂಜ್-ವಾಚ್ ಮಾಡುವುಕ್ಕೆ ಬೈ ಹೇಳುತ್ತೇನೆ.

ಲೈವ್ ಕ್ರಿಕೆಟ್ ಮತ್ತು ಫುಟ್‌ಬಾಲ್ ಬದುಕಿಗೆ ಬ್ರೇಕ್ ಹಾಕುತ್ತೇನೆ.


ಈ ವರ್ಷದ ಮೊದಲ ದಿನದಂದು

ಹೀಗೆಲ್ಲ ಬರೆದುಕೊಳ್ಳುವುದು 

ನನಗೆ ಒಂಚೂರೂ ಇಷ್ಟವಿಲ್ಲ.


ಏಕೆಂದರೆ,


ಕಳೆದ ವರ್ಷದ ಮೊದಲ ದಿನವೂ ಹೀಗೆಯೇ ಬರೆದಿದ್ದೆ ,

ಅದರ ಹಿಂದಿನ ವರ್ಷದಂತೆಯೇ,

ಮತ್ತದರ ಹಿಂದಿನ ವರ್ಷದಂತೆಯೇ!