Friday, 7 May 2021

ಕೋವಿಡ್-19: ಬ್ರಿಟನ್ ಮತ್ತು ಕರ್ನಾಟಕ

ಪ್ರಪಂಚದ ಇತರ ಕಡೆ ಆದಂತೆಯೇ ಬ್ರಿಟನ್ ಕೂಡಾ ಕೋವಿಡ್ ನ ಎರಡು ಅಲೆಗಳನ್ನು ಕಂಡಿದೆ. ಮೊದಲನೆಯ ಅಲೆ ಮಾರ್ಚ್ ೨೦೨೦ರಲ್ಲಿ ಆರಂಭವಾಗಿ ಮೇ ಕೊನೆಯವರೆಗೆ ಮತ್ತು ಎರಡನೇ ಅಲೆ ಸೆಪ್ಟೆಂಬರ್ ೨೦೨೦ರಲ್ಲಿ ಆರಂಭವಾಗಿ ಮಾರ್ಚ್ ಅಂತ್ಯಕ್ಕೆ ಇಳಿಮುಖವಾಗಿದೆ. ಸದ್ಯ ನಾವು ಎರಡನೇ ಅಲೆಯಿಂದ ಹೊರ ಬಂದಿದ್ದೇವೆ ಎಂದುಕೊಂಡಿರುವ ಬ್ರಿಟನ್ನಿನಲ್ಲಿ ವೈದ್ಯರಾಗಿರುವ ಕನ್ನಡದ ಲೇಖಕ ಕೇಶವ ಕುಲಕರ್ಣಿ ಇಲ್ಲಿ ಬರೆದಿದ್ದಾರೆ 

ಮೊದಲ ಅಲೆ ಬಂದಾದ ಬ್ರಿಟನ್ ಸಂಪೂರ್ಣ ‘ಲಾಕ್‌ಡೌನ್’ ಮಾಡಿ, ಸರಿ ಸುಮಾರು ಎರಡು, ಎರಡೂವರೆ ತಿಂಗಳು ಇತ್ತು. ಅತಿ ಮುಖ್ಯ ಅಂಗಡಿಗಳ ಹೊರತಾಗಿ ಎಲ್ಲ ವ್ಯಾಪಾರ ವಹಿವಾಟುಗಳನ್ನೂ ಮುಚ್ಚಲಾಗಿತ್ತು. ಎಲ್ಲ ರೆಸ್ಟೊರೆಂಟುಗಳು ಪಬ್ಬುಗಳು ಬೀಗ ಹಾಕಿಕೊಂಡವು.
ಆರೂವರೆ ಕೋಟಿ ಜನಸಂಖ್ಯೆ ಇರುವ ಈ ದೇಶ ಕರ್ನಾಟಕಕ್ಕಿಂತ ಒಂದೂ ಕಾಲಷ್ಟು ದೊಡ್ಡದಿದೆ. ಸ್ಕಾಟ್‌ಲ್ಯಾಂಡಿನ ಉತ್ತರ ಭಾಗದಲ್ಲಿ ವಿರಳ ಜನಸಂಖ್ಯೆಯನ್ನು ತೆಗೆದುಕೊಂಡರೆ ಬ್ರಿಟನ್ನಿನ ಭೂ ಪ್ರದೇಶವನ್ನು ಜನಸಂಖ್ಯೆಯನ್ನೂ ಸುಮಾರಾಗಿ ಒಂದೇ ತರಹ ಅನ್ನಬಹುದು. ಮೊದಲ ಅಲೆಯಲ್ಲಿ ಅತೀ ಹೆಚ್ಚು ಕೇಸುಗಳು ಬ್ರಿಟನ್ನಿನಲ್ಲಿದಾಖಲಾಗಿದ್ದು ಏಪ್ರಿಲ್ ಮಧ್ಯಭಾಗದಲ್ಲಿ& ೫,೦೦೦. ಕರ್ನಾಟಕದಲ್ಲಿ ಅತೀ ಹೆಚ್ಚು ಕೇಸು ದಾಖಲಾಗಿದ್ದು ಅಕ್ಟೋಬರ್ ಮಧ್ಯಭಾಗದಲ್ಲಿ& ೧೦,೦೦೦. ಅಂದರೆ ಬ್ರಿಟನ್ನಿನಲ್ಲಿ ಅತ್ಯಂತ ಹೆಚ್ಚು ಕೇಸುಗಳು ಮತ್ತು  ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕೇಸುಗಳ ಅಂತರ ಆರು ತಿಂಗಳುಗಳು. ಬ್ರಿಟನ್ನಿನಲ್ಲಿ ಮಧ್ಯ ಏಪ್ರಿಲ್‌ನಲ್ಲಿ ದಿನವೊಂದಕ್ಕೆ ಸಾವಿರ ಜನ ಪ್ರಾಣ ತೆತ್ತಿದ್ದು, ದಾಖಲೆಯಾದರೆ ಕರ್ನಾಟಕದಲ್ಲಿ ಆಗಸ್ಟ್ ಮಧ್ಯಭಾಗದಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ- ದಿನಕ್ಕೆ ನೂರರಿಂದ ನೂರೈವತ್ತು. ಅಂದರೆ ಅಧಿಕೃತವಾಗಿ ಕರ್ನಾಟಕದಲ್ಲಿ ಬ್ರಿಟನ್ನಿಗಿಂತ ಕಡಿಮೆ ಸಾವುಗಳು ಸಂಭವಿಸಿವೆ.

ಜೂನ್ ೨೦೨೦ರಲ್ಲಿ ಕೇಸುಗಳು ಮತ್ತು ಸಾವುಗಳು ಕಡಿಮೆಯಾಗಿ ‘ಲಾಕ್‌ಡೌನ್’ ಸಡಿಲಗೊಂಡಿತು. ಶಾಲೆಗಳು ಆರಂಭವಾದವು, ವ್ಯಾಪಾರ ವಹಿವಾಟುಗಳು ಶುರುವಾದವು, ಆದರೂ ಎಲ್ಲ ಕೆಲಸಗಳೂ ‘ಅರ್ಧ ಲಾಕ್‌ಡೌನ್’ನಂತೆಯೇ ನಡೆಯುತ್ತಿದ್ದವು. ಜುಲೈ ಕೊನೆಯಲ್ಲಿ ಸಾವಿರಕ್ಕೆ ಹತ್ತಿರ ಹೊಸ ಕೇಸುಗಳಿದ್ದರೂ, ಸಾವಿನ ಸಂಖ್ಯೆ ಒಂದಂಕಿಗೆ ಇಳಿಯಿತು. ಆದರೆ ಸೆಪ್ಟೆಂಬರಿಗೆ ಮತ್ತೆ ಇಡೀ ದೇಶ ‘ಲಾಕ್‌ಡೌನ್’ಗೆ ಹೋಯಿತು. (ಕ್ರಿಸ್‌ಮಸ್ ಹೊತ್ತಿಗೆ ಕೇಸುಗಳಲ್ಲಿ ಇಳಿಮುಖವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಡಿಸೆಂಬರ್ ಆರಂಭದಲ್ಲಿ ಲಾಕ್‌ಡೌನ್ ಸಡಿಲಿಸಲಾಯಿತು. ಆದರೆ ಆಶಾವಾದ ಬಹಳ ದಿನ ಉಳಿಯಲಿಲ್ಲ. ಎರಡೇ ವಾರಕ್ಕೆ ಸರ್ಕಾರ ‘ಟಿಯರ್’ ವ್ಯವಸ್ಥೆಯನ್ನು ಹಾಕಿತು- ‘ಅರ್ಧ ಲಾಕ್‌ಡೌನ್ ತರಹ’. ಕ್ರಿಸ್‌ಮಸ್ ಹತ್ತಿರ ಬರುವಾಗ ‘ಟಿಯರ್’ ಅನ್ನು ಇನ್ನೂ ಕಠಿಣ ಮಾಡಿ ಕ್ರಿಸ್‌ಮಸ್‌ಗೆ ಬಂಧು ಬಳಗದವರು ಸೇರುವುದನ್ನು ತಡೆಗಟ್ಟಿತು. ಕೇಸುಗಳು ಇನ್ನೂ ಹೆಚ್ಚಾದವು. ಮೂರನೇ ಬಾರಿ ಜನವರಿ ೨೦೨೧ಕ್ಕೆ ಲಾಕ್‌ಡೌನ್ ಹಾಕಲಾಯಿತು. ಮಾರ್ಚ್ ೨೦೨೧ಕ್ಕೆ ಲಾಕ್‌ಡೌನ್ ಸಡಿಲಿಸಲಾಯಿತು. ಅಕ್ಟೋಬರ್‌ನಿಂದ ಆರಂಭವಾದ ಎರಡನೇ ಅಲೆ ಈಗ ಇಳಿಮುಖವಾಗಿದೆ. ಜನವರಿ ೨೦೨೧ರಲ್ಲಿ ದಿನವೊಂದಕ್ಕೆ ೫೫ ಸಾವಿರ ಕೇಸುಗಳಾಗಿದ್ದು ದಾಖಲೆ, ಒಂದು ಕಾಲು ಸಾವಿರ ಜನರು ಪ್ರಾಣ ತೆತ್ತಿದ್ದು ಕೂಡ. ಈಗಲೂ ಕೂಡ ಪ್ರತಿದಿನ ಒಂದೂವರೆ ಸಾವಿರ ಹೊಸ ಕೇಸುಗಳಾಗುತ್ತಿವೆ, ಆದರೆ ಸಾವಿನ ಸಂಖ್ಯೆ ಗಣನೀಯವಾಗಿ ಇಳಿದಿದೆ, ಒಂದಂಕಿಗೆ ಬಂದಿದೆ.
ಭಾರತ/ ಕರ್ನಾಟಕದಲ್ಲಿ ಎರಡನೇ ಅಲೆ ಆರಂಭವಾದದ್ದು ಮಾರ್ಚ್ ೨೦೨೧ರಿಂದ ಇಂಗ್ಲೆಂಡಿನಲ್ಲಿ ಸೆಪ್ಟೆಂಬರ್ ೨೦೨೦ರಲ್ಲಿ. ಅಂದರೆ ಅಂತರ ಮೊದಲನೇ ಅಲೆಯಲ್ಲಿ ಆದಂತೆಯೇ ೬ ತಿಂಗಳು. ನನ್ನ ಗ್ರಹಿಕೆಯ ಪ್ರಕಾರ ಭಾರತದ ಅಲೆ, ಬ್ರಿಟನ್ನಿನಲ್ಲಿ ಆದ ಆರು ತಿಂಗಳ ನಂತರ ಆಗಿದೆ. ಬಹುಶಃ ಈ ಅಂಶ ಮುಂಬರುವ ಕೋವಿಡ್- ೧೯ ಅಲೆಗಳಿಗೆ ಭಾರತಕ್ಕೆ ಮುನ್ಸೂಚನೆ ಕೊಡಬಹದೇನೊ?
ಈ ಎರಡನೇ ಅಲೆಯಲ್ಲಿ ಅಧಿಕೃತವಾಗಿ ಕರ್ನಾಟಕ ಒಂದೇ ದಿನದಲ್ಲಿ ೩೫ ಸಾವಿರ ಕೇಸುಗಳನ್ನು ದಾಖಲಿಸಿದೆ (ಬ್ರಿಟನ್ನಿನಲ್ಲಿ  ೫೫ ಸಾವಿರ) ಮತ್ತು ೨೫೦ ಸಾವುಗಳನ್ನು (ಬ್ರಿಟನ್ ೧೨೫೦). ಅಂದರೆ ಅಧಿಕೃತವಾಗಿ ಬ್ರಿಟನ್ ನಷ್ಟೇ  ಜಾಗ ಮತ್ತು ಜನಸಂಖ್ಯೆ ಇರುವ ಕರ್ನಾಟಕ ಸದ್ಯಕ್ಕೆ ಇಲ್ಲಿಗಿಂತ ಕಡಿಮೆ ಕೇಸು ಮತ್ತು ಸಾವುಗಳನ್ನು ಕಾಣುತ್ತಿದೆ ಎಂದಾಯಿತು. ಇದನ್ನು ಹೀಗೆ ಅರ್ಥೈಸಬಹುದು. ಒಂದೋ ಕರ್ನಾಟಕದ ಅಧಿಕೃತ ಸಂಖ್ಯೆ ಆಗಿರುವುದಕ್ಕಿಂತ ಕಡಿಮೆ ದಾಖಲಸಿದೆ ಅಥವಾ ಇನ್ನೂ ಕೇಸುಗಳು ಜಾಸ್ತಿಯಾಗಲಿವೆ. ಎರಡನೆಯದು ಸುಳ್ಳಾಗಲಿ ಎನ್ನುವುದು ನನ್ನ ಆಶಯ.

ಬ್ರಿಟನ್ ಕೋವಿಡ್- ೧೯ ಎದುರಿಸಿದ್ದು ಹೇಗೆ?

ಬ್ರಿಟನ್ ಲಾಕ್‌ಡೌನ್ ಮತ್ತು ಟಿಯರ್ ವ್ಯವಸ್ಥೆಗಳನ್ನು ಜಾರಿಗೆ ತಂದಾಗ ಇಲ್ಲಿನ ಬಹುತೇಕ ಜನರು ಚಾಚೂತಪ್ಪದೇ ಪಾಲಿಸಿದ್ದಾರೆ. ಈಗಲೂ ಇರುವ ನಿಯಮಗಳನ್ನು ಪಾಲಿಸುತ್ತಿದ್ದರೆ. ಬ್ರಿಟನ್ ಇಲ್ಲಿಯವರೆಗೆ ಮೂರು ಲಾಕ್‌ಡೌನ್‌ಗಳನ್ನು ಕಂಡಿದೆ, ಮತ್ತು ಇನ್ನೂ ‘ಅರ್ಧ- ಲಾಕ್‌ಡೌನ್’ ಇದೆ. ಲಾಕ್‌ಡೌನ್ ಮುಗಿದರೂ ಒಂದು ಮನೆಯ ಜನರಿಗಿಂತ ಹೆಚ್ಚಿನಜನರನ್ನು ಭೇಟಿಯಾಗುವಂತಿಲ್ಲ. ಅದನ್ನು ಜನ ಪಾಲಿಸುತ್ತಾರೆ ಕೂಡ.
ಇಂಗ್ಲೆಂಡಿನ ಮನೆಗಳು, ರಸ್ತೆಗಳು, ಶಾಲೆಗಳು, ಕಾಲೇಜುಗಳು, ಅಂಗಡಿಗಳು ‘ಸಾಮಾಜಿಕ ಅಂತರ’ವನ್ನು ಕಾಪಾಡಿಕೊಳ್ಳುವಲ್ಲಿ ನೆರವಾದವು. ಚಾಚೂತಪ್ಪದೇ ಎಲ್ಲರೂ ಮಾಸ್ಕ್ ಧರಿಸುತ್ತಾರೆ, ೨ ಮೀಟರ್ ಅಂತರವನ್ನು ಇಟ್ಟುಕೊಳ್ಳುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಅವಶ್ಯಕ ಅಂಗಡಿಗಳ ವಿನಃ ಮಿಕ್ಕೆಲ್ಲವೂ ಬಂದ್ ಆಗಿದ್ದವು. ಜನ ಅನವಶ್ಯಕವಾಗಿ ತಿರುಗುತ್ತಿರಲಿಲ್ಲ. ಮೊದಲ ಅಲೆಯಲ್ಲಿ ಕಲಿತಿದ್ದ ನಿಯಮಗಳು ಎರಡನೇ ಮತ್ತು ಮೂರನೇ ಲಾಕ್‌ಡೌನ್‌ನಲ್ಲಿ ಮತ್ತೆ ಜಾರಿಗೆ ಬಂದಾಗ, ಜನರು ಧೃತಿಗೆಡದೇ ಪಾಲಿಸಿದರು. ಮಕ್ಕಳನ್ನು, ಮೊಮ್ಮಕ್ಕಳನ್ನು ನೋಡಿಕೊಳ್ಳಲು ಚಿಕ್ಕ ‘ಬಬಲ್’ಗಳನ್ನು ಮಾಡಿಕೊಂಡರು. ಮದುವೆ, ಸಾವುಗಳಿಗೆ ಸರ್ಕಾರ ನಿರ್ಧರಿಸಿದಷ್ಟೇ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಪಾಲಿಸಿದರು. ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಜನರು ಸಾಮಾಜಿಕ ಪ್ರಜ್ಞೆಯಿಂದ ಪಾಲಿಸಿ ಸರ್ಕಾರದ ಜೊತೆ ಕೈಗೂಡಿಸಿದರು.
ಕೋವಿಡ್- ೧೯ ಲಸಿಕೆಯನ್ನು ಮೊಟ್ಟಮೊದಲು ಅನುಮೋದಿಸಿ ರಾಷ್ಟ್ರ- ಬ್ರಿಟನ್. ಡಿಸೆಂಬರ್ ೨೦೨೦ರ ಕೊನೆಯಲ್ಲಿ ಆರಂಭವಾದ ಈ ಲಸಿಕೆಯ ಕಾರ್ಯಕ್ರಮ ಮೇ ಆರಂಭದ ಹೊತ್ತಿನಲ್ಲಿ ೮೦% ಜಸಂಖ್ಯೆಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಕೆಲವು ಜನರು ಲಸಿಕೆಯ ಬಗ್ಗೆ ಆತಂಕವನ್ನು ತೋರಿಸಿದರೂ, ಈಗ ಸರಿಸುಮಾರು ಎಲ್ಲರೂ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಮೇ ತಿಂಗಳ ಕೊನೆಗೆ ೧೮ ವರ್ಷ ಮೇಲ್ಪಟ್ಟು ಎಲ್ಲರಿಗೂ ಲಸಿಕೆಯಾಗಿರುತ್ತದೆ. ಅಂದರೆ ಒಟ್ಟು ೫ ತಿಂಗಳಲ್ಲಿ ಲಸಿಕೆಯ ಕಾರ್ಯಕ್ರಮ ಎಲ್ಲ ವಯಸ್ಕರಿಗೆ ದೊರಕಿದಂತಾಗಿದೆ. ಬ್ರಿಟನ್ನಿನಲ್ಲಿ ಈಗಲೂ ಎಲ್ಲೇ ಹೋದರೂ ಜನರು ಮಾಸ್ಕ್ ಧರಿಸುತ್ತಾರೆ ಮತ್ತು ೨ ಮೀಟರ್‌ನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಮೇ ಮಧ್ಯದಿಂದ ನಿಯಮಗಳಲ್ಲಿ ಇನ್ನೂ ಸಡಿಲಿಕೆ ಬರಲಿದೆ, ಜೂನ್ ಮಧ್ಯಭಾಗದಿಂದ ಬದುಕು ಮತ್ತೆ ಮಾಮೂಲಾಗಬಹುದು ಎನ್ನುವ ಆಸೆ. ಆದರೆ ಮೂರನೇ ಅಲೆ ಬಂದರೆ ಏನು ಮಾಡಬೇಕು ಎನ್ನುವುದಕ್ಕೆ ಸರ್ಕಾರ ಸನ್ನದ್ಧವಾಗುತ್ತಿದೆ.

ಕೋವಿಡ್- ೧೯- ಬ್ರಿಟನ್ನಿನ ಆರೋಗ್ಯ ವ್ಯವಸ್ಥೆ ಎದುರಿಸಿದ್ದು ಹೇಗೆ?

ಬ್ರಿಟನ್ನಿನಲ್ಲಿ ಎಲ್ಲರಿಗೂ ಸಮಾನ ಆರೋಗ್ಯ ಭಾಗ್ಯ. ಶುಶ್ರೂಷೆಯ ಜವಾಬ್ದಾರಿ ಸಂಪೂರ್ಣವಾಗಿ ಸರ್ಕಾರದ್ದು. ಒಂದು ಪೆನ್ನಿ(ಪೈಸೆ)ಯನ್ನೂ ತೆಗೆದುಕೊಳ್ಳದೇ, ಯಾವ ವಿಮೆಯೂ ಇಲ್ಲದೇ ನೆಗಡಿಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯವರೆಗೆ ಉತ್ತಮ ಗುಣಮಟ್ಟದ ಶುಶ್ರೂಷೆಯ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದು. ಈ ದೇಶದಲ್ಲಿ ಖಾಸಗೀ ಆಸ್ಪತ್ರೆಗಳು ಬಹಳ ಕಡಿಮೆ.
ಕೋವಿಡ್- ೧೯ ರ ಮೊದಲ ಅಲೆ ಬಂದಾಗ ‘ಫ್ಯಾಮಿಲಿ ಡಾಕ್ಟರ್’ಗಳು ಮುಖತಃ ರೋಗಿಗಳನ್ನು ನೋಡುವುದನ್ನು ಅತ್ಯಂತ ಕಡಿಮೆ ಮಾಡಿದರು (ಅದು ಇನ್ನೂ ಮುಂದುವರಿಯುತ್ತಿದೆ). ಆಸ್ಪತ್ರೆಯಲ್ಲಿ ಎಲ್ಲ ರೊಟೀನ್ ಕೆಲಸಗಳನ್ನೂ ನಿಲ್ಲಿಸಿ, ಕೋವಿಡ್- ೧೯ ಶುಶ್ರೂಷೆಗೆ ಮೀಸಲಿಟ್ಟವು. ಸರ್ಕಾರ ಹೆಚ್ಚು ಹಣವನ್ನು ಆಸ್ಪತ್ರೆಗೆ ನೀಡಿತು. ಐ.ಸಿ.ಯು ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಹೆಚ್ಚು ವೆಂಟಿಲೇಟರ್‌ಗಳು ಬಂದವು. ಅದಕ್ಕಿಂತ ಮುಖ್ಯವಾಗಿ ಇಡೀ ದೇಶಕ್ಕೆ ಎಲ್ಲ ಆಸ್ಪತ್ರೆಗಳಲ್ಲೂ ಸರಿಸಮಾನ  ಗೈಡ್‌ಲೈನ್‌ಗಳು ಪಾಲಿಸಿಗಳು ಬಂದವು. ಎಲ್ಲ ನರ್ಸುಗಳು, ವೈದ್ಯರುಗಳು ಅವುಗಳನ್ನು ಪಾಲಿಸಿ ಶುಶ್ರೂಷೆ ಮಾಡಿದರು. ಅವಶ್ಯಕತೆ ಇದ್ದರೆ ಮಾತ್ರ ಎಡ್ಮಿಟ್ ಮಾಡಿಕೊಂಡರು. ಅವಶ್ಯಕತೆ ಇದ್ದರೆ ಮಾತ್ರ ಆಕ್ಸಿಜನ್ ಕೊಟ್ಟರು. ಸಾಧ್ಯವಾದಷ್ಟು ಮಟ್ಟಿಗೆ ಮನೆಯ್ಲೇ ಇದ್ದು ಗುಣಮುಖರಾಗುವಂತೆ ನೋಡಿಕೊಂಡರು.
ಎಲ್ಲ  ಆಸ್ಪತ್ರೆಗಳಲ್ಲಿ ಕೇಸುಗಳು ಕಡಿಮೆಯಾಗಿ ಸಿಬ್ಬಂದಿಯವರು ಸ್ವಲ್ಪ ಉಸಿರಾಡುವಾಗ ರಿಲ್ಯಾಕ್ಸ್ ಆಗದೇ ಎರಡನೇ ಅಲೆಯ ಸಿದ್ಧತೆ ನಡೆಸಿದರು. ಮೊದಲನೇ ಅಲೆ ಬಂದಾಗ ಇದ್ದ ಭಯ, ಆತಂಕ ಮತ್ತು ಉದ್ವೇಗಗಳು (ಎರಡನೇ ಅಲೆಯು ಮೊದಲನೇ ಅಲೆಗಿಂತ ಭೀಕರವಾಗಿದ್ದರೂ) ಎರಡನೇ ಅಲೆಯಲ್ಲಿ ಕಡಿಮೆಯಾಗಿದ್ದವು. ಸಂಶೋಧನೆ ಮೂಸೆಯಲ್ಲಿ ಬಂದ ಟ್ರೀಟ್‌ಮೆಂಟ್ ಪಾಲಿಸಿದರು. ಹೊಸ ಹೊಸ ಔಷಧಿಗಳ ಪ್ರಯೋಗ ನಡೆಸಿದರು. ಅನವಶ್ಯಕವಾಗಿ ಹತ್ತಾರು ಮಾತ್ರೆಗಳನ್ನು ಕೊಡಲಿಲ್ಲ. ಕೋವಿಡ್- ೧೯ ರೋಗಿಗಳ ರೋಗ ಚಿಹ್ನೆಗಳ ಆಧಾರದ ಮೇಲೆ ಚಿಕಿತ್ಸೆ ಕೊಟ್ಟರು. ಎಲ್ಲ ಆರೋಗ್ಯದ ಸಿಬ್ಬಂದಿಗಳಿಗೂ ಲಸಿಕೆಯೂ ಆಯಿತು.

ಕೊನೆಯ ಮಾತು

ಈಗ ಬ್ರಿಟನ್ನಿನಲ್ಲಿ ಎರಡನೇ ಅಲೆಯ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ನಿಯಮಗಳು ಇನ್ನೂ ಸಡಿಲವಾಗುತ್ತದೆ. ಹೆಚ್ಚು ಹೆಚ್ಚು ಜನ ಬೆರೆಯಲು ಆರಂಭವಾಗುತ್ತದೆ. ಇನ್ನು ಅಂತಾರಾಷ್ಟ್ರೀಯ ವಿಮಾನಯಾನವೂ ಆರಾಂಭವಾಗುವ ಕಾಲ ದೂರವಿಲ್ಲ. ಮೂರನೇ ಅಲೆ ಬರದಿರಲಿ ಎನ್ನುವುದು ಎಲ್ಲರ ಆಶಯ. ಲಸಿಕೆ ೧೦೦% ಕಮರಮಿ ತಲುಪಿ, ಮೂರನೇ ಅಲೆ ಬಂದರೂ ಸಾವು- ನೋವುಗಳೂ ಅತ್ಯಂತ ಕಡಿಮೆ ಇರಬಹುದು ಎನ್ನುವ ಆಶಯ. ಆದರೂ ಬ್ರಿಟನ್ನಿನ ಆರೋಗ್ಯ ವ್ಯವಸ್ಥೆ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಲಸಿಕೆಯ ‘ಬೂಸ್ಟರ್ ಡೋಸ್’ಗೂ ಸಜ್ಜಾಗುತ್ತಿದೆ.
(ಲೇಖಕರು  ಬ್ರಿಟನ್ನಿನ ಸರಕಾರೀ ನ್ಯಾಷನಲ್ ಹೆಲ್ತ್ ಸೇವೆಯಲ್ಲಿ  ಕನ್ಸಲ್ಟೆಂಟ್ ರೇಡಿಯಾಲಜಿಸ್ಟ್ ಆಗಿ ಕಳೆದ ಒಂದೂವರೆ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ)

(ಈ ಲೇಖನವು ಯಾವುದೇ ರೀತಿಯಲ್ಲಿ ಸಂಶೋಧನಾ ಲೇಖನ ಅಥವಾ ವೈದ್ಯಕೀಯ ವರದಿಯಲ್ಲ  ಮತ್ತು ಚಿಕಿತ್ಸೆಯ ಬಗ್ಗೆ ವಿವರಗಳನ್ನು ನೀಡಿಲ್ಲ) 

(ಅಂದೋಲನ ಮೇ 8 2021ರಂದು ಪ್ರಕಟಿತ)