ಜೋರಾಗಿ ಉಚ್ಚೆ ಬಂದಂತಾಗಿ ಪ್ರಾಣೇಶನಿಗೆ ಎಚ್ಚರವಾಯಿತು. ಪ್ರಾಣೇಶ ಕೈಯಲ್ಲಿರುವ ಆ್ಯಪಲ್ ವಾಚ್ ನೋಡಿದ. ಆಗಲೇ ಬೆಳಗಿನ ಹನ್ನೊಂದು ಗಂಟೆಯಾಗಿತ್ತು. ತಲೆ ಧಿಮಿಧಿಮಿ ಎಂದು ನೋಯುತ್ತಿತ್ತು. ದರಿದ್ರ ಹ್ಯಾಂಗೋವರು! ಎಷ್ಟು ಪೆಗ್ ಕುಡಿದೆ ? ಮೂರು, ನಾಲ್ಕು, ಆರು... ನೆನಪಾಗಲಿಲ್ಲ. ರಾತ್ರಿಯೂಟಕ್ಕೆ ಕೂತಾಗ ಹೆಂಡತಿ, ಪದ್ಮಜಾ, "ನಾಳೆ ಸಂಜೆಯಿಂದ ಮಧ್ಯರಾತ್ರಿಯವರೆಗೂ ಪಾರ್ಟಿ ಇದೆ, ಫ಼್ರೆಷ್ ಇರಬೇಕು, ಅಪ್ಪ ಮಗ ತುಂಬ ಹೊತ್ತು ಮಾತಾಡುತ್ತ, ರಾತ್ರಿಯೆಲ್ಲ ಕುಡಿಯುತ್ತ ಕಳೆಯಬೇಡಿ, ನಾಳೆಯ ಪಾರ್ಟಿಯನ್ನು ಹಾಳು ಮಾಡಬೇಡಿ," ಎಂದು ತಾಕೀತು ಮಾಡಿಯೇ ಬೆಡ್‍ರೂಮಿಗೆ ಹೋಗಿದ್ದಳು. ಆದರೂ ತಾನು ಮತ್ತು ಮಗ ರಾತ್ರಿ ಮಾತಾಡುತ್ತ ಕೂತಿದ್ದು, ಮಗನು ಎದ್ದು ಹೋದ ಮೇಲೂ ತಾನು ಒಬ್ಬನೇ ಕುಡಿಯುತ್ತ ಕೂತಿದ್ದು ನೆನಪಾಯಿತು, ಆದರೆ ಯಾವಾಗ ಮಲಗಿದ್ದು ಎನ್ನುವುದು ಮಾತ್ರ ನೆನಪಾಗಲಿಲ್ಲ. ನೋಡಿದರೆ ಹಾಲ್‍ನ ಸೋಫಾದಲ್ಲೇ ನಿದ್ದೆ ಹೋಗಿದ್ದ!
ಪ್ರಾಣೇಶ, ಡಾ. ಪ್ರಾಣೇಶಾಚರ್ಯ ಕಟ್ಟಿ, ಮೂಲತಃ ಬಾಗಲಕೋಟೆಯವನು. ಕಳೆದ 27 ವರ್ಷಗಳಿಂದ ಇಂಗ್ಲೆಂಡಿನಲ್ಲಿದ್ದಾನೆ. ಸ್ತನದ ಶಸ್ತ್ರಜ್ಞ, ಬ್ರೆಸ್ಟ್ ಸರ್ಜನ್. ಸರಕಾರಿ ಆಸ್ಪತ್ರೆಯಲ್ಲಿ ಕನ್ಸಲ್‍ಟಂಟ್ ಕೆಲಸ. ಚಿಕ್ಕಸ್ತನಗಳಿರುವವರಿಗೆ ದೊಡ್ಡಸ್ತನಗಳ ಆಸೆ, ದೊಡ್ಡವಿರುವವರಿಗೆ ಚಿಕ್ಕವಾಗಿಸುವ ಆಸೆ, ಆದರೆ ಈ ಸೌಲಭ್ಯ ಸರಕಾರಿ ಆರೋಗ್ಯದಡಿಯಲ್ಲಿ ಎಲ್ಲರಿಗೂ ಇರದೇ ಇರುವುದರಿಂದ ಈ ಕೆಲಸ ಪ್ರೈವೇಟಾಗಿಯೇ ಆಗಬೇಕು. ಹೀಗಾಗಿ ಕೈತುಂಬ ಪ್ರೈವೇಟ್ ಪ್ರ್ಯಾಕ್ಟೀಸು. ಸಂಬಳದ ಹೊರತಾಗಿ ವಾರಕ್ಕೆ ಸಾವಿರಾರು ಪೌಂಡುಗಳ ಗಳಿಕೆಯಾಗುತ್ತಿತ್ತು. ಹೆಂಡತಿ ಪದ್ಮಜಾ ಮತ್ತು ಯುನಿವರ್ಸಿಟಿಯಲ್ಲಿ ಓದುತ್ತಿರುವ ಒಬ್ಬನೇ ಮಗ, ಸತ್ಯಬೋಧ. ಬರ್ಮಿಂಗ್‍ಹ್ಯಾಮ್ ನಗರದ ಪ್ರಸಿದ್ಧ ಎಡ್ಜ್‌ಬ್ಯಾಸ್ಟನ್ ಬಡಾವಣೆಯಲ್ಲಿ ಎರಡು ಮಿಲಿಯನ್ ಪೌಂಡುಗಳ ಭವ್ಯ ಮನೆ. ಮಲ್ಟಿಮಿಲಿಯನೇರ್.
ಸಿಡಿಯುತ್ತಿರುವ ತಲೆ ಮತ್ತು ಒತ್ತುತ್ತಿರುವ ಮೂತ್ರವನ್ನು ಶಪಿಸಿಕೊಳ್ಳುತ್ತ ಪ್ರಾಣೇಶ ಎರಡು ಪ್ಯಾರಾಸಿಟೆಮಾಲ್ (ಕ್ರೋಸಿನ್) ನುಂಗಿಯೇ ಬಾತ್‍ರೂಮಿಗೆ ಹೊರಟ. ಪದ್ಮಜಾಳ ಕಿವಿ ಚುರುಕು; ಪ್ರಾಣೇಶ ನಿದ್ದೆಯಿಂದ ಎದ್ದ ಶಬ್ದ ಕೇಳಿ ಅಡುಗೆಮನೆಯಿಂದಲೇ, “ಪ್ರಾಣೂ, ಎಷ್ಟೊತ್ತು ಮಲಗುವದು? ಇವತ್ತು ಏನು ದಿನ ಅಂತ ಗೊತ್ತಿಲ್ಲವೇ? ಹ್ಯಾಪಿ ಆ್ಯನಿವರ್ಸರಿ! ಬೇಗ ಸ್ನಾನ ಮಾಡಿ ಬಾ, ದೇವರಿಗೆ ಒಂದು ಊದಿನಕಡ್ಡಿಯಾದರೂ ಹಚ್ಚು,” ಎಂದು ಬಯ್ದು, “ಸತ್ಯ (ಮಗ ಸತ್ಯಬೋಧ) ಎಲ್ಲಿ? ಫೋನು ಮಾಡಿದರೆ ಫೋನಿಗೆ ಕೂಡ ಸಿಗುತ್ತಿಲ್ಲ,” ಎಂದು ಕೂಗಿದಳು. “ಗೆಳೆಯನ ಜೊತೆ ಬಂದಿದ್ದಾನೆ, ಅವನ ಜೊತೆ ಹೊಟೇಲಿನಲ್ಲಿ ಉಳಿದುಕೊಂಡಿದ್ದಾನೆ, ಅವನ ಗೆಳೆಯನಿಗೆ ಈ ಊರಲ್ಲಿ ಏನೋ ಕೆಲಸವಿದೆಯಂತೆ, ಬಹುಷಃ ಬ್ಯುಸಿ ಇರಬೇಕು, ಅದಕ್ಕೇ ಫೋನ್ ಎತ್ತುತ್ತಿಲ್ಲ ಅನಿಸುತ್ತೆ, ಸಾಯಂಕಾಲ ನೇರ ಪಾರ್ಟಿಗೇ ಬರುತ್ತೇನೆ ಎಂದು ಹೇಳಿದ್ದಾನೆ,” ಎಂದು ಬಾತ್‍ರೂಮಿಗೆ ನಡೆದ. ಉಚ್ಚೆಗೆ ಕೊತಾಗ ಬರುವುದು ಸ್ವಲ್ಪ ಕಷ್ಟ ಎನಿಸಿತು. ವಯಸ್ಸು ಐವತ್ತು ದಾಟಿತಲ್ಲವೇ? ಪ್ರಾಸ್ಟೇಟ್ ಗ್ರಂಥಿ ಸ್ವಲ್ಪ ದೊಡ್ಡದಾಗಲು ಶುರುವಾಗಿರಬಹುದು ಎಂದುಕೊಂಡ.
ಇಂದು ಸಾಯಂಕಾಲ ಆರು ಗಂಟೆಗೆ ತಮ್ಮ ಮದುವೆಯ ರಜತ ಮಹೋತ್ಸವದ ಪಾರ್ಟಿ. ಗಂಡ ಹೆಂಡತಿ ಸೇರಿ ಕಳೆದ ಆರು ತಿಂಗಳಿಂದ ತಯಾರಿ ನಡೆಸಿದ್ದರು; ಹೊಟೆಲ್ ರಾಮಡಾದಲ್ಲಿ ಐವತ್ತು ಜನರ ಅದ್ದೂರಿ ಪಾರ್ಟಿಯನ್ನು ಸಜ್ಜು ಮಾಡಿದ್ದರು. ಸರಿಯಾಗಿ ಅದು ಶನಿವಾರ ಬೇರೆ ಬಂದಿತ್ತು. ಇಂಗ್ಲೆಂಡಿಗೆ ಬಂದಾಗಿನಿಂದ ಇಲ್ಲಿಯವರೆಗೆ ಪರಿಚಯರಾದವರ ಪಟ್ಟಿ ಮಾಡಿ ಯಾರ‍್ಯಾರನ್ನು ಕರೆಯುವುದು ಎಂದು ಮೂರು ತಿಂಗಳ ಮೊದಲೇ ಆಮಂತ್ರಣ ಕೊಟ್ಟಿದ್ದರು. ಬೆಂಗಳೂರಿಗೆ ಹೋದಾಗ ‘ತಮನ್ನಾ ಬೂಟಿಕ್‘ನಲ್ಲಿ ಪದ್ಮಜಾಳಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಕಸ್ಟಮ್ ಮೇಡ್ ಡಿಸೈನರ್ ತೊಡುಗೆ ಮಾಡಿಸಿದ್ದ. ಪ್ರಾಣೇಶ ರಾಲ್ಫ್ ಲಾರೆನ್‍ನ ಪರ್ಪಲ್ ಕಲೆಕ್ಷನ್ ಸೂಟ್ ತೆಗೆದುಕೊಂಡಿದ್ದ.
ಇವತ್ತಿನ ಪಾರ್ಟಿಯಷ್ಟೇ ವೈಭವಯುತವಾಗಿ, ತಮ್ಮ ಮದುವೆಯ ರಜತ ಮಹೋತ್ಸವನ್ನು ಬಂಧುಬಳಗದವರನ್ನು ಸೇರಿಸಿ, ತಿರುಪತಿಯಲ್ಲಿ ಬ್ರಹ್ಮೋತ್ಸವ ಮಾಡಿ ಆಚರಿಸುವ ಆಸೆ, ಪದ್ಮಜಾಳಿಗೆ; ಆಮೇಲೆ ಇಬ್ಬರೇ ಮಂತ್ರಾಲಯಕ್ಕೆ ಹೋಗಿ ಒಂದು ವಾರ ರಾಯರ ಸೇವೆ ಮಾಡುವ ಅಭೀಪ್ಸೆ; ಹಾಗಂತ ಎರಡೂ ಕಡೆ ಬೇಡಿಕೊಂಡಿದ್ದಳು ಕೂಡ. ಆ ವಿಷಯದಲ್ಲಿ ಇಬ್ಬರಿಗೂ ಜಗಳವಾಗುತ್ತಲೇ ಇತ್ತು. ತಾನು ತಿರುಪತಿಗೆ ಮಂತ್ರಾಲಯಕ್ಕೆ ಅಷ್ಟೆಲ್ಲ ದಿನ ಬರಲು ಸಾಧ್ಯವೇ ಇಲ್ಲ, ಬಂದರೂ ದಿಂಡರಿಕಿ ಉರುಳುವುದು, ಅಲ್ಲಿನ ಮಡಿ-ಮೈಲಿಗೆಗಳನ್ನು ಪಾಲಿಸುವುದು ತನ್ನಿಂದ ಸಾಧ್ಯವೇ ಇಲ್ಲ ಎಂದು ಇವನು; ನೀನು ಬರದಿದ್ದರೆ ಬಿಡುವುದಿಲ್ಲ, ಇಬ್ಬರೂ ಸೇರಿಯೇ ಇದನ್ನೆಲ್ಲ ಮಾಡಲೇಬೇಕು ಎಂದು ಇವಳು; ಹಗ್ಗ ಹರಿದಿರಲಿಲ್ಲ, ಕೋಲು ಮುರಿದಿರಲಿಲ್ಲ.
ಹಾಗೆಂದು ಪದ್ಮಜಾ ಕರ್ಮಠ ಮಡಿ ಮಾಡುವ ಹೆಂಗಸೇನಲ್ಲ. ಜಮಖಂಡಿಯಲ್ಲಿ ನೇಮನಿಷ್ಟ ಮಾಡುವ ಮನೆಯಲ್ಲಿ ಹುಟ್ಟಿ ಬೆಳೆದ ಪದ್ಮಜಾ ಬಿ.ಎ ಮುಗಿಸಿ, ಧಾರವಾಡದಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದು ಇಂಗ್ಲೀಷ್ ಎಂ.ಎ ಮಾಡಿದ್ದಳು. ಬೆಂಗಳೂರನ್ನೂ ನೋಡಿರದ ಹುಡುಗಿ ಪ್ರಾಣೇಶನನ್ನು ಮದುವೆಯಾಗುತ್ತಿದ್ದಂತೆ ಆಗಿನ ನಕಾಶೆಯಲ್ಲಿ ಹುಡುಕಿದರೂ ಸಿಗದ ಸ್ಕಾಟ್‍ಲ್ಯಾಂಡಿನ ಇನ್‍ವರ್‌ನೆಸ್ ಎಂಬ ವಿಚಿತ್ರ ಹೆಸರಿನ ಊರಿಗೆ ನಡುಗುವ ಚಳಿಯಲ್ಲಿ ಬಂದು ಇಳಿದಿದ್ದಳು. ಈಗ ಇಂಗ್ಲೆಂಡಿನವರಂತೆಯೇ ಬಟ್ಟೆ ಹಾಕುತ್ತಾಳೆ, ಇಂಗ್ಲೆಂಡಿನ ಇಂಗ್ಲೀಷ್ ಎಕ್ಸೆಂಟನ್ನೂ ಸುಮಾರಾಗಿ ಕಲಿತಿದ್ದಾಳೆ. ಇಂಗ್ಲೆಂಡಿನ ಸಂಸ್ಕೃತಿಯನ್ನು ಸಾಕಷ್ಟು ಅರ್ಥ ಮಾಡಿಕೊಂಡಿದ್ದಾಳೆ. ಸೀರೆ ಸಲ್ವಾರ್ ಈಗ ಏನಿದ್ದರೂ ಹಬ್ಬ ಹರಿದಿನ, ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಮಾತ್ರ. ಆದರೂ ಇದುವರೆಗೂ ಮಾಂಸವನ್ನೂ ಅಲ್ಕೋಹಾಲನ್ನೂ ಮುಟ್ಟಿಲ್ಲ. ದಿನಾ ಬೆಳಿಗ್ಗೆ ಎದ್ದು ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚಿ, `ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ` ಎಂದು ವಿಜಯದಾಸರ ಕವಚವನ್ನು ಹೇಳುವುದನ್ನೂ ಬಿಟ್ಟಿಲ್ಲ (ತಿಂಗಳಲ್ಲಿ ಮೂರು ದಿವಸ ಬಿಟ್ಟು). ರಾಮನವಮಿ, ರಾಯರ ಆರಾಧನೆ, ಗಣೇಶ ಚತುರ್ಥಿ, ತುಳಸಿ ಲಗ್ನಗಳನ್ನು ತಪ್ಪದೇ ಮಾಡುತ್ತಾಳೆ. ಆದರೆ ಗಂಡ ತಿನ್ನುತ್ತಾನೆ, ಕುಡಿಯುತ್ತಾನೆ, ಮಗನಿಗೂ ಕಲಿಸಿದ್ದಾನೆ. ಅಷ್ಟೇ ಅಲ್ಲ, ಅವನಿಗೆ ದೇವರಿಲ್ಲ, ದಿಂಡರಿಲ್ಲ, ಸಂಧ್ಯಾವಂದನೆಯಿಲ್ಲ, ಜನಿವಾರ ಕೂಡ ಹಾಕಿಕೊಳ್ಳುವುದಿಲ್ಲ. ಇಂಥ ನಾಸ್ತಿಕ-ಚಾರ್ವಾಕ ಬಾಗಲಕೋಟೆಯ ಪ್ರಕಾಂಡ ಪಂಡಿತರ ಮನೆಯಲ್ಲಿ ಅದು ಹೇಗೆ ಹುಟ್ಟಿದನೋ ಎಂದು ಯಾವಾಗಲೂ ಬಯ್ಯುತ್ತಲೇ ಇರುತ್ತಾಳೆ, ತನ್ನ ಪೂರ್ವಜನ್ಮದ ಪ್ರಾರಬ್ಧ ಕರ್ಮ ಎಂದು ತನ್ನನ್ನೇ ಶಪಿಸಿಕೊಳ್ಳುತ್ತಾಳೆ.
ಉಚ್ಚೆ ಮಾಡಲು ಕೂತ ಪ್ರಾಣೇಶ ಇನ್ನೂ ಸ್ವಲ್ಪ ಒತ್ತಡ ಹಾಕಿದ. ಬಾಟಲ್ ಓಪನ್ ಆದಂತೆ ಟಪ್ ಅನಿಸಿ ರಭಸದಿಂದ ಉಚ್ಚೆ ಬಂತು. ನೋಡಿದರೆ ಕಮೋಡವೆಲ್ಲ ಕೆಂಪು. ಅನುಮಾನವೇ ಇಲ್ಲ, ರಕ್ತ! ತನ್ನ ಕಣ್ಣನ್ನು ತಾನೇ ನಂಬದಾದ. ಪದ್ಮಜಾಳಿಗೆ ಹೇಳುವುದೋ ಬೇಡವೋ ಎಂದು ಅರೆಕ್ಷಣ ಯೋಚಿಸಿ, `ಇಂದು ವೆಡ್ಡಿಂಗ್ ಆ್ಯನಿವರ್ಸರಿ, ಅದೂ ಇವತ್ತು ಸಂಜೆ ಅಷ್ಟು ದೊಡ್ಡ ಪಾರ್ಟಿ ಬೇರೆ ಇದೆ, ನಾಳೆ ಹೇಳಿದರಾಯಿತು,`ಎಂದುಕೊಂಡ. ಆದರೆ ಕಣ್ಣ ಮುಂದೆ ಕೆಂಪು ಕೆಂಪಾದ ಕಮೋಡವೇ ಕಾಣುತ್ತಿತ್ತು. ರೇಡಿಯಾಲಾಜಿ ಗೆಳೆಯ ಸಂದೀಪ್ ಚಾಟರ್ಜಿಗೆ ಫೋನು ಮಾಡಿ ವಿಷಯ ಹೇಳಿದ. ಕಾಕತಾಳೀಯವಾಗಿ ಚಾಟರ್ಜಿ ವೀಕೆಂಡ್ ಕಾಲ್‍ನಲ್ಲಿ ಇದ್ದಿದುದರಿಂದ ಆಸ್ಪತ್ರೆಯಲ್ಲೇ ಇದ್ದ, “ಬಂದು ಬಿಡು, ಒಂದು ಸಿ.ಟಿ ಸ್ಕ್ಯಾನ್ ಮಾಡಿಬಿಡೋಣ, ಎಲ್ಲೋ ಒಂದು ಚಿಕ್ಕ ಕಿಡ್ನಿ ಕಲ್ಲು ಜಾರಿರಬೇಕು. ಸ್ಕ್ಯಾನ್ ಆದರೆ ಇವತ್ತು ರಾತ್ರಿ ಪಾರ್ಟಿಗೂ ಮನಸ್ಸು ಆರಾಮವಾಗಿರುತ್ತೆ. ರಾತ್ರಿ ಚೆನ್ನಾಗಿ ಕುಡಿದರೆ ಇರುವ ಚಿಕ್ಕ ಪುಟ್ಟ ಕಲ್ಲೂ ಹೋಗಿಬಿಡುತ್ತದೆ,” ಎಂದು ತಮಾಷೆ ಮಾಡಿದ. “ಸರಿ, ಈಗಲೇ ಬರುತ್ತೇನೆ,” ಎಂದು ಹೇಳಿ, ಪದ್ಮಜಾಳಿಗೆ, “ಪ್ರೈವೇಟ್ ಆಸ್ಪತ್ರೆಯಲ್ಲಿ ಅರ್ಜಂಟ್ ಕಾಲ್ ಇದೆ, ಬೇಗ ಬಂದೆ, ಬಂದ ಮೇಲೆ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುತ್ತೇನೆ,” ಎಂದು ಸುಳ್ಳು ಹೇಳಿ ಹೊರಟ.
ಪ್ರಾಣೇಶ ಮೂರು ವರ್ಷಕ್ಕಿಂತ ಹೆಚ್ಚು ಯಾವ ಕಾರನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಮೂರು ವರ್ಷದ ಹಳೆಯ ಮರ್ಸಿಡಿಸ್- ಎಸ್ ಕ್ಲಾಸ್ ಕಾರನ್ನು ಮಾರಿ, ತಿಂಗಳ ಹಿಂದೆ ಕೊಂಡಿದ್ದ ಟೆಸ್ಲಾ-ಮಾಡೆಲ್-ಎಕ್ಸ್ ಕಾರನ್ನು ಆಸ್ಪತ್ರೆಗೆ ಓಡಿಸಿದ. ಯಥಾಪ್ರಕಾರ ಬಿ.ಬಿ.ಸಿ ರೇಡಿಯೋ 4ನ ಮಾತುಗಳು ಶುರುವಾದವು (ಕಾರು ಯಾವುದಾದರೇನು ರೇಡಿಯೋ ಚಾನೆಲ್ ಇದೊಂದೇ). ತಲೆ ನೋಯುತ್ತಿತ್ತು, ಅದಕ್ಕಿಂತ ಹೆಚ್ಚಾಗಿ ರಕ್ತದ ಉಚ್ಚೆ ಕಿರಿಕಿರಿ ಮಾಡಿತು, ಅದಕ್ಕಿಂತಲೂ ಹೆಚ್ಚಾಗಿ ಹಿಂದಿನ ರಾತ್ರಿ ತನ್ನ ಮತ್ತು ತನ್ನ ಮಗನ ನಡುವೆ ನಡೆದ ಸಂವಾದವೇ ಮತ್ತೆ ಮತ್ತೆ ನೆನಪಿಗೆ ಬಂದು ಇನ್ನೂ ಕಸಿವಿಸಿಯಾಯಿತು.
ಮಗ ಎಕಾನಾಮಿಕ್ಸ್ ಮಾಡುತ್ತೇನೆ, ಮುಂದೆ ಬ್ಯಾಂಕರ್ ಆಗುತ್ತೇನೆ ಎಂದು ಚೆನ್ನಾಗಿಯೇ ಓದುತ್ತಿದ್ದ, ಪ್ರತಿಷ್ಟಿತ ‘ಲಂಡನ್ ಸ್ಕೂಲ್ ಆಫ಼್ ಎಕಾನಾಮಿಕ್ಸ್’ನಲ್ಲಿ ಸೀಟು ಕೂಡ ಸಿಕ್ಕಿತ್ತು. ಆದರೆ ಚಿಕ್ಕ ವಯಸ್ಸಿನಿಂದ ಇಲ್ಲಿಯ ಎಲ್ಲ ಮಕ್ಕಳಂತೆ ಪಿಯಾನೋ ಮತ್ತು ವಾಯಲಿನ್ ಕಲಿಯಲು ಹಾಕಿದ್ದೇ ತಪ್ಪಾಯಿತೇನೋ? ಶಾಲೆಯಲ್ಲಿ ಸಂಗೀತವನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದ, ಆದರೆ ಯುನಿವರ್ಸಿಟಿಗೆ ಎಕನಾಮಿಕ್ಸ್ ಬಿಟ್ಟು ಸಂಗೀತವನ್ನು ತೆಗೆದುಕೊಳ್ಳುತ್ತಾನೆಂದು ಕನಸು ಮನಸಿನಲ್ಲೂ ಏಣಿಸಿರಲಿಲ್ಲ. ಸಂಗೀತ ಏನು ಹೊಟ್ಟೆ ತುಂಬಿಸುತ್ತದೆಯೇ ಎಂದು ಇಬ್ಬರೂ ಎಷ್ಟು ಸಲ ಹೇಗೆಲ್ಲ ಹೇಳಿದರೂ ಅದು ಅವನ ತಲೆಗೆ ಹೋಗಲಿಲ್ಲ. ಅಪ್ಪ-ಅಪ್ಪನ ವಾತಾವರಣದಿಂದ ದೂರವಿರುತ್ತೇನೆ ಎಂದು ದೂರದ ಸ್ಕಾಟ್‍ಲ್ಯಾಂಡಿನ ಎಡಿನ್‍ಬರಾ ಸೇರಿಕೊಂಡಿದ್ದ.
ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ಎಂದು ಹಿಂದಿನ ದಿನ ಸಾಯಂಕಾಲ, ಯುನಿವರ್ಸಿಟಿ ಸೇರಿ ಮೂರು ತಿಂಗಳಾದ ಮೇಲೆ, ಇದೇ ಮೊದಲ ಸಲ ಎಡಿನ್‍ಬರಾದಿಂದ ಬಂದಿದ್ದ. ಹೆಂಡತಿ ಮಲಗಿದ ಮೇಲೆ, ಮಗನೇ ತಂದ 12 ವರ್ಷ ಹಳೆಯ ಗ್ಲೆನ್‍ಲಿವೆಟ್ ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿಯನ್ನು ಇಬ್ಬರೂ ಹಾಲ್‍ನಲ್ಲಿ ಕುಡಿಯುತ್ತ ಕೂತಾಗ, ಮಗ ಹೇಳಿದ, “ಡ್ಯಾಡಿ, ನನ್ನ ಜೊತೆ ನನ್ನ ಫ಼್ರೆಂಡನ್ನು ಕರೆತಂದಿದ್ದೇನೆ, ಹೊಟೆಲಲ್ಲಿ ಇಳಿದುಕೊಳ್ಳಲು ಅನುಕೂಲ ಮಾಡಿ ಕೊಟ್ಟಿದ್ದೇನೆ. ಒಂದೇ ಡ್ರಿಂಕ್ ಕುಡಿದು ಅಲ್ಲಿಯೇ ಮಲಗಲು ಹೋಗುತ್ತೇನೆ. ಅಲ್ಲಿ ಹೋಗಲು ಊಬರ್ ಟ್ಯಾಕ್ಸಿ ಬುಕ್ ಮಾಡಿದ್ದೇನೆ.”
“ಯಾಕೆ?, ಈ ಮನೆಯೇನು ಚಿಕ್ಕದೇ, ಆರು ಬೆಡ್‍ರೂಮಿವೆ. ನಿನ್ನ ಫ಼್ರೆಂಡನ್ನ ಇಲ್ಲೇ ಕರೆತರಬಹುದಿತ್ತಲ್ಲ, ಏನು ಗರ್ಲ್‍ಫ಼್ರೆಂಡಾ?” ಎಂದ ಪ್ರಾಣೇಶ.
“ಇಲ್ಲ ಡ್ಯಾಡಿ, ಬಾಯ್‍ಫ಼್ರೆಂಡ್,” ಎಂದ.
ಆಗಲೇ ವಿಸ್ಕಿ ತಲೆಗೆ ಹಿಡಿಯುತ್ತಿತ್ತು, “ತಮಾಷೆ ಮಾಡ್ತೀಯಾ?” ಎಂದು ನಕ್ಕ.
“ಇಲ್ಲ ಡ್ಯಾಡಿ, ಐ ಯಾಮ್ ಸೀರಿಯಸ್.”
“ಮತ್ತೆ, ನೀನು ಈ ಊರು ಬಿಟ್ಟು ಅಲ್ಲಿಗೆ ಹೋಗುವಾಗ ನಿನಗೆ ಒಬ್ಬಳು ಗರ್ಲ್‍ಫ಼್ರೆಂಡ್ ಇದ್ದಾಳೆಂದು ನಿನ್ನಮ್ಮ ಹೇಳುತ್ತಿದ್ದಳು? ಯಾವಾಗ ನೀನು ಗೇ (ಸಲಿಂಗಕಾಮಿ) ಆದೆ?”
“ನೋ ಡ್ಯಾಡಿ. ನಾನು ಬೈ (ದ್ವಿಲಿಂಗಕಾಮಿ),” ಎಂದ.
ಪ್ರಾಣೇಶ ತನ್ನ ವೃತ್ತಿಜೀವನದಲ್ಲಿ ಸಲಿಂಗಕಾಮಿಗಳನ್ನು ಎಲ್.ಜಿ.ಬಿ.ಟಿ ಯವರನ್ನು ಕ್ಲಿನಿಕ್ಕಿನಲ್ಲಿ ಕನ್‍ಸಲ್ಟ್ ಮಾಡಿದ್ದಾನೆ, ಲಿಂಗಬದಲು ಮಾಡಿಸಿಕೊಳ್ಳುವವರಿಗೆ ಹೊಸ ಸ್ತನಗಳ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದಾನೆ. ಆದರೆ ಅವೆಲ್ಲ ಆ ಕ್ಷಣ ಯಾವ ಉಪಯೋಗಕ್ಕೂ ಬರಲಿಲ್ಲ. ಆ ಕ್ಷಣ ಪ್ರಾಣೇಶ ತನ್ನನ್ನೇ ತಾನು ಮರೆತ, “ನಿನಗೆ ತಲೆ ಸರಿ ಇದೆಯಾ, ಸತ್ಯ? ನನಗೆ ನಂಬಿಕೆಯಾಗುತ್ತಿಲ್ಲ. ನೀನು ನನ್ನ ಮಗ ಅನ್ನೋದಕ್ಕೂ ನಾಚಿಕೆಯಾಗುತ್ತೆ,” ಎನ್ನುವ ಅರ್ಥದಲ್ಲಿ ಬಾಯಿಗೆ ಬಂದದ್ದನ್ನು ಐದು ನಿಮಿಷ ಎಡಬಿಡದೇ ಬಯ್ದ.
ಅಷ್ಟೆಲ್ಲ ಬಯ್ಗಳುಗಳನ್ನು ಸಂಯಮದಿಂದ ಕೇಳಿಸಿಕೊಂಡು, “ಡ್ಯಾಡಿ, ನೀನು ಮೆಚ್ಯೂರ್ ಅಂದುಕೊಂಡಿದ್ದೆ. ನನ್ನ ನಿರೀಕ್ಷೆಯನ್ನು ಸುಳ್ಳಾಗಿಸಿದಿರಿ,” ಎಂದ ಸತ್ಯ.
“ಏನು? ನಾನು ನಿನ್ನ ನಿರೀಕ್ಷೆಯನ್ನು ಸುಳ್ಳಾಗಿಸಿದೆನೇ? ನೀನು ನಮ್ಮನ್ನು ನಿರಾಸೆಗೊಳಿಸಿದೆ, ನಮ್ಮ ಎಲ್ಲ ನಿರೀಕ್ಷೆಗಳನ್ನೂ ಗಾಳಿಗೆ ತೂರಿದೆ, ಎಕಾನಾಮಿಕ್ಸ್‌ನಲ್ಲಿ ಸೀಟು ಸಿಕ್ಕಿತ್ತು, ಅದನ್ನು ಬಿಟ್ಟು ಮ್ಯೂಸಿಕ್ ತೆಗೆದುಕೊಂಡೆ, ಈಗ ಇದು ಬೇರೆ,” ಎಂದು ಕೂಗಾಡಿದ.
ಅಷ್ಟರಲ್ಲಿ ಟ್ಯಾಕ್ಸಿ ಬಂದ ನೋಟಿಫಿಕೇಷನ್ ಮಗನ ಫೋನಿಗೆ ಬಂತು, ಮಗ ಹೊರಟು ನಿಂತ.
“ಮಮ್ಮಿಗೆ ಹೇಳಿದ್ದೀಯಾ, ಸತ್ಯ?” ಎಂದು ಕೇಳಿದ ಪ್ರಾಣೇಶ.
“ಇಲ್ಲಾ ಡ್ಯಾಡಿ, ಅದು ನಿನ್ನ ಕೆಲಸ. ಮತ್ತೆ ವೆಡ್ಡಿಂಗ್ ಆ್ಯನಿವರ್ಸರಿ ಪಾರ್ಟಿಗೆ ಗುಡ್‍ಲಕ್,” ಎಂದು ಶೂ ಹಾಕಿಕೊಂಡ.
“ಏನು ಹಾಗಂದರೆ, ನಮ್ಮ ಆ್ಯನಿವರ್ಸರಿ ಪಾರ್ಟಿಗೆ ಬರೋದಿಲ್ವೇ? ಬೇಡ ಬಿಡು, ಬರಬೇಡ, ನೀನು ಬರದಿದ್ದರೇನೇ ಒಳ್ಳೆಯದು,” ಎಂದು ಬಾಗಿಲು ಹಾಕಿಕೊಂಡ.
ಮಗ ಹೊರಟು ಹೋದ ಮೇಲೆ ಮಗನ ಮೇಲೆ ಅಸಾಧ್ಯ ಕೋಪ ಬಂತು. ಇನ್ನೊಂದು ಪೆಗ್ ಹಾಕಿಕೊಂಡ. ಹೌಸ್‍ವೈಫ಼್ ಆಗಿದ್ದರೂ ಇರುವ ಒಬ್ಬ ಮಗನನ್ನು ಕೂಡ ಸರಿಯಾಗಿ ಬೆಳೆಸಲು ಇವಳಿಗೆ ಸಾಧ್ಯವಾಗಲಿಲ್ಲ ಎಂದು ಮಗನಿಗಿಂತ ಹೆಚ್ಚಿನ ಕೋಪ ಪದ್ಮಜಾಳ ಮೇಲೆ ಬಂತು (ಲೈಂಗಿಕತೆಗೂ ಬೆಳೆಸುವ ವಾತಾವರಣಕ್ಕೂ ಅಂಥಹ ಸಂಬಂಧವೇನಿಲ್ಲ ಎನ್ನುವುದು ಪ್ರಾಣೇಶನಿಗೆ ಗೊತ್ತಿಲ್ಲದ ವಿಷಯವೇನಲ್ಲ). ಬರೀ ದೇವರು, ಏಕಾದಶಿ, ದ್ವಾದಶಿ, ಮಂತ್ರ, ಹಾಡು, ಕಡಿಗೆ, ಮುಟ್ಟು ಅನ್ನುತ್ತ ಕೂತರೆ ಮಗ ಹಾಳಾಗದೇ ಇರುತ್ತಾನೆಯೇ? ಮತ್ತೊಂದು ಪೆಗ್ ಹಾಕಿಕೊಂಡ. ಆ ಅಮಲಿನಲ್ಲಿ ಪದ್ಮಜಾಳ ಬದಲಿಗೆ ಜಸ್ಸಿ ಇದ್ದಿದ್ದರೆ ಅನಿಸಿ, ಜಸ್ಸಿಯ ನೆನಪು ಒತ್ತರಿಸಿಕೊಂಡು ಬಂತು.
ತಾನು ಬೆಂಗಳೂರಲ್ಲಿ ಎಂಬಿಬಿಎಸ್ ಮುಗಿಸಿ ಪಿ.ಜಿ.ಐ ಆಸ್ಪತ್ರೆಯಲ್ಲಿ ಎಂ.ಎಸ್ (ಸರ್ಜರಿ) ಮಾಡಲು ಚಂದೀಘಡಕ್ಕೆ ಹೋದಾಗ ಜೊತೆಯಾದವಳು, ತನಗಿಂತ ಎರಡು ವರ್ಷ ಸೀನಿಯರ್ ಆಗಿದ್ದ ಎಂ.ಡಿ (ಮಕ್ಕಳಶಾಸ್ತ್ರ) ಮಾಡುತ್ತಿದ್ದ ದಿಲ್ಲಿಯ ಜಸ್ಸಿ, ಜಸ್ಬೀರ್ ಕೌರ್. ಅದು ಶುರುವಾದದ್ದು ಹೀಗೆ: ಮೆಸ್ಸಿನಲ್ಲಿ ಊಟ ಮಾಡಲು ಕೂತಾಗ ಪಕ್ಕದಲ್ಲಿ ಹಿಂದಿಯ ಪ್ರಖ್ಯಾತ ಗಜ಼ಲ್ ಗಾಯಕ ಜಗಜೀತಸಿಂಗನ ‘ಮಿರ್ಜ಼ಾ ಗಾಲಿಬ್‘ ಕ್ಯಾಸೆಟ್ ಕಾಣಿಸಿತು; ಯಾರಪ್ಪಾ ತನ್ನಂತೆ ಜಗಜೀತಸಿಂಗನ ಫ಼್ಯಾನು ಎಂದು ತಲೆಯೆತ್ತಿದರೆ, ಹುಡುಗಿ. “ನೀವು ಜಗಜೀತಸಿಂಗನನ್ನು ಕೇಳುತ್ತೀರಾ, ನಾನು ಅವರ ಬಿಗ್ ಫ಼್ಯಾನು,” ಅಂದು ತನ್ನ ಪರಿಚಯ ಮಾಡಿಕೊಂಡ. ಪರಸ್ಪರ ಪರಿಚಯವಾದ ಮೇಲೆ ಅವತ್ತು ಮೆಸ್ಸಿನಲ್ಲಿ ಊಟವಾದ ಮೇಲೂ ಅರ್ಧಗಂಟೆ ಬರೀ ಜಗಜೀತಸಿಂಗನ ಗಜ಼ಲುಗಳ ಬಗ್ಗೆಯೇ ಮಾತಾಡಿದರು. ಆಮೇಲೆ ಆಗಾಗ ಮೆಸ್ಸಿನಲ್ಲಿ, ಆಸ್ಪತ್ರೆಯಲ್ಲಿ ಸಿಕ್ಕಿದಾಗ ಮಾತಾಡುತ್ತಿದ್ದರು. ಆಮೇಲೆ ಮಾತಾಡುವ ಸಲುವಾಗಿಯೇ ಸಿಗತೊಡಗಿದರು. ಕೆಲವೇ ತಿಂಗಳುಗಳಲ್ಲಿ ಒಟ್ಟಿಗೇ ಇರಲು ಶುರು ಮಾಡಿದರು. ಜಸ್ಸಿಗೆ ಇವನೇನೂ ಮೊದಲನೇ ಬಾಯ್‍ಫ್ರೆಂಡ್ ಆಗಿರಲಿಲ್ಲ, ಎಂ.ಬಿ.ಬಿ.ಎಸ್ ಮಾಡುವಾಗಿನ ಪ್ರಿಯಕರ ಕೈಬಿಟ್ಟಿದ್ದ, ಜಸ್ಸಿ ಹೊಸ ಜೀವನದ ಹುಡುಕಾಟದಲ್ಲಿದ್ದಳು, ಪ್ರಾಣೇಶನಿಗೆ ಅವೆಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿದ್ದಳು ಕೂಡ. ಪ್ರಾಣೇಶನಿಗೆ ಇವೆಲ್ಲ ಮೊದಲ ಅನುಭವ. ‘ಮದುವೆ‘ ಎಂಬ ಬಂಧನವಿಲ್ಲದೇ ಇದೆಲ್ಲ ತನ್ನ ಜೀವನದಲ್ಲೂ ಆಗುತ್ತೆ ಎಂದು ಕನಸು ಮನಸಿನಲ್ಲೂ ಎಣಿಸಿರದ ಪ್ರಾಣೇಶ ಜಸ್ಸಿಯ ಪ್ರೀತಿ-ಪ್ರಣಯ-ಕಾಮಗಳಲ್ಲಿ ತೇಲಿಹೋದ. ಇಬ್ಬರಿಗೂ ಕೈತುಂಬ ಸಂಬಳ ಬರುತ್ತಿತ್ತು. ವೀಕೆಂಡುಗಳು ಚಂದೀಘಡದ ಸೆಕ್ಟರ್ 15 ಮತ್ತು 17ರ ರೆಸ್ಟೋರಂಟುಗಳಲ್ಲಿ, ಪಬ್ಬುಗಳಲ್ಲಿ ಕಳೆದುಹೋಗುತ್ತಿದ್ದವು, ಕುಡಿಯುವುದನ್ನು ಮತ್ತು ಮಾಂಸ ತಿನ್ನುವುದನ್ನು ಕಲಿತ. ಪ್ರಾಣೇಶನ ಎಂ.ಎಸ್ ಮುಗಿದ ಮೇಲೆ ಜಸ್ಸಿ ಇಂಗ್ಲೆಂಡಿಗೆ ಹೋಗೋಣ ಎಂದು ದುಂಬಾಲು ಬಿದ್ದಳು. ಇಷ್ಟೆಲ್ಲ ನಡೆಯುತ್ತಿದ್ದರೂ ಬಾಗಲಕೋಟೆಯಲ್ಲಿ ತಂದೆ ಕೂರ್ಮಾಚಾರರಿಗೆ ಮತ್ತು ತಾಯಿ ಸಾವಿತ್ರಿಯವರಿಗೆ (ಈಗ ಇಬ್ಬರೂ ವೈಕುಂಠವಾಸಿಗಳಾಗಿ ವರ್ಷಗಳೇ ಆಗಿವೆ) ಇದರ ವಾಸನೆಯೂ ಬಡೆದಿರಲಿಲ್ಲ, ತಂಗಿಗೂ ಹೇಳಿರಲಿಲ್ಲ. ಇಂಗ್ಲೆಂಡಿಗೆ ಹೋಗುತ್ತೇನೆ ಅಂದಾಗ ಅಪ್ಪ-ಅಮ್ಮ ರಂಪ ಮಾಡಿದ್ದರು, ಆದರೆ ಪಿ.ಜಿ ಮಾಡುತ್ತಿರುವಾಗಿನಿಂದಲೇ ತಿಂಗಳೂ ತಿಂಗಳೂ ಮನೆಗೆ ದುಡ್ಡು ಕಳಿಸುತ್ತಿದುದರಿಂದ ಹೆಚ್ಚೇನೂ ತೊಂದರೆಯಾಗಿರಲಿಲ್ಲ. ಇಂಗ್ಲೆಂಡಿಗೆ ಬರುವಾಗ ಜಗಜೀತಸಿಂಗನ ಅಷ್ಟೂ ಕ್ಯಾಸೆಟ್ಟುಗಳನ್ನೂ ತಂದಿದ್ದರು. ಜಸ್ಸಿಗೆ ಲಂಡನ್ನಿನಿಂದ ಹತ್ತಿರವಿರುವ ಮೇಡ್‍ಸ್ಟೋನ್‍ನಲ್ಲಿ ಸುಲಭದಲ್ಲಿ ಕೆಲಸ ಸಿಕ್ಕಿತು, ಪ್ರಾಣೇಶನಿಗೆ ಸಂಬಳವಿಲ್ಲದೇ ಅನುಭವಕ್ಕಾಗಿ ದುಡಿಯುವ ಅಟ್ಯಾಚ್‍ಮೆಂಟ್ ಮಾತ್ರ ಸಿಕ್ಕಿತು. ಜಸ್ಸಿ ಕೆಲಸ ಶುರು ಮಾಡಿದಳು. ಪ್ರಾಣೇಶ ಮನೆ ಆಡುಗೆ ಮಾಡುವುದು, ಮನೆಯನ್ನು ಸ್ವಚ್ಛಗೊಳಿಸುವುದು ಮಾಡಿಕೊಂಡು, ದಿನಕ್ಕೆ ಹತ್ತಾರು ಅಪ್ಲಿಕೇಷನ್ ಹಾಕುತ್ತಿದ್ದ. ಜಸ್ಸಿ ಮನೆಗೆ ಬಂದ ಮೇಲೆ ತಾನಿವತ್ತು ಏನು ಕಲಿತೆ, ಏನೇನೆಲ್ಲ ಮಾಡಿದೆ, ಯಾರು ಯಾರು ಪರಿಚಯವಾದರು ಎಂದು ಹೇಳುತ್ತಿದ್ದಳು. ಮೊದಮೊದಲು ಖುಷಿಯಿಂದಲೇ ಕೇಳಿಸಿಕೊಳ್ಳುತ್ತಿದ್ದ, ಬರಬರುತ್ತ ಕಿರಿಕಿರಿಯಾಗತೊಡಗಿತು.
ಒಂದು ವೀಕೆಂಡ್ ರೋಮ್ಯಾನ್ಸ್ ಎಲ್ಲ ಮುಗಿದ ಮೇಲೆ ಸಂಜೆ ಇಬ್ಬರೂ ಕುಡಿಯುತ್ತ ಕೂತಾಗ ಜಸ್ಸಿ, “ಎಷ್ಟು ದಿನ ಅಂತ ಹೀಗೆ ಇರುವುದು? ಬೇಗ ಮದುವೆಯಾಗಿ ಬಿಡೋಣ, ನನಗೊಂದು ಮಗು ಬೇಕು, ವಯಸ್ಸು ಹೋಗುತ್ತೆ, ಬರುವುದಿಲ್ಲ, ನಮ್ಮ ಮನೆಯಲ್ಲಿ ಯಾವಾಗಿನಿಂದ ಒತ್ತಾಯ ಮಾಡುತ್ತಿದ್ದಾರೆ ಎಂದು ನಿನಗೂ ಗೊತ್ತೇ ಇದೆ,” ಎಂದಳು. “ನನಗಿನ್ನೂ ಕೆಲಸ ಸಿಕ್ಕಿಲ್ಲ, ಸಿಕ್ಕ ಮೇಲೆ ಯೋಚಿಸೋಣ,” ಎಂದ. “ಯಾಕೆ ಈಗ ಬರುವ ದುಡ್ಡು ಇಬ್ಬರಿಗೂ ಸಾಲುತ್ತದಲ್ಲ,” ಎಂದಳು. “ನಿನ್ನ ದುಡ್ಡಿನ ಭಿಕ್ಷೆ ನನಗೆ ಬೇಡ,” ಎಂದ. “ನಿನ್ನ ಅಪ್ಪನ ಮನೆ ನಡೆಸಲು ಮತ್ತು ನಿನ್ನ ತಂಗಿಯ ಶಿಕ್ಷಣಕ್ಕೆ ದುಡ್ಡು ಕಳಿಸುತ್ತಿರುವುದು ನಾನು, ನೆನಪಿರಲಿ,” ಎಂದಳು. ಮಾತು ಎಲ್ಲಿಂದ ಎಲ್ಲಿಗೂ ಬೆಳೆಯಿತು. ಪ್ರೀತಿಗಿಂತ ಜಗಳಗಳು ಜಾಸ್ತಿಯಾಗತೊಡಗಿದವು.
ಕೊನೆಗೂ ಪ್ರಾಣೇಶನಿಗೆ ಕೆಲಸಕ್ಕೆ ಕರೆ ಬಂತು, ಆದರೆ ಸ್ಕಾಟ್‍ಲ್ಯಾಂಡಿನ ಇನ್‍ವರ್‌ನೆಸ್ ಎಂಬ ದೂರದ ಊರಿನಲ್ಲಿ. ಮೊದಲ ಅವಕಾಶವನ್ನು ಕಳೆದುಕೊಳ್ಳುವಂತಿರಲಿಲ್ಲ. ಪ್ರಾಣೇಶ ಹೊಸ ಊರು, ಹೊಸ ಆರೋಗ್ಯ ವ್ಯವಸ್ಥೆ, ಹೊಸ ಕೆಲಸಗಳಲ್ಲಿ ಬ್ಯುಸಿ ಆದ. ದಿನಾ ಫೋನಿನಲ್ಲಿ ಮಾತಾಡುತ್ತಿದ್ದರು, ಮೂರು ನಾಲ್ಕು ತಿಂಗಳಿಗೊಮ್ಮೆ ಭೇಟಿಯಾಗುತ್ತಿದ್ದರು. ಕೆಲಸದ ಒತ್ತಡ ಮತ್ತು ಉನ್ನತ ಪರೀಕ್ಷೆಗಳ ತಯಾರಿ ಇಬ್ಬರ ಸಮಯವನ್ನೂ ತಿನ್ನುತ್ತಿದ್ದವು. ಫೋನು ಕಾಲುಗಳು, ಪರಸ್ಪರ ಭೇಟಿಗಳು ಕಡಿಮೆಯಾದವು. ಪ್ರಾಣೇಶ ಉನ್ನತ ಪರೀಕ್ಷೆಯಲ್ಲಿ ನಪಾಸಾದ, ಜಸ್ಸಿ ಪಾಸಾದಳು. ಒಂದು ದಿನ ಫೋನಿನಲ್ಲಿ ಮಾತು ಎಲ್ಲಿಂದ ಎಲ್ಲಿಗೋ ಹೋಗಿ ಸಂಬಂಧ ಮುರಿದುಬಿತ್ತು.
ರಜೆಗೆ ಬಾಗಲಕೋಟೆಗೆ ಹೋದಾಗ ಅಪ್ಪ-ಅಮ್ಮ ನೋಡಿದ ಪದ್ಮಜಾಳನ್ನು ಮದುವೆ ಮಾಡಿಕೊಂಡು ಬಂದಿದ್ದ. ನಿಧಾನವಾಗಿ ಜಸ್ಸಿ ಭೂತಕಾಲವನ್ನು ಸೇರಿದ್ದಳು. ಅವಳು ಈಗ ಇಂಗ್ಲೆಂಡಿನ ಯಾವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಅಸ್ಪಷ್ಟವಾಗಿ ಗೊತ್ತಿತ್ತು, ಆದರೆ ಪ್ರಾಣೇಶ ಜಸ್ಸಿಯನ್ನು ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಂಡು ಕನವರಿಸಿದ್ದೇ ಇಲ್ಲ. ‘ಪಿ.ಜಿ.ಐ ಚಂಧೀಘಡ ಆಸ್ಪತ್ರೆಯ ವಾಟ್ಯಾಪ್ ಗುಂಪಿ‘ನಲ್ಲಿ ಜಸ್ಸಿ ಇರುವುದು ಗೊತ್ತಿದ್ದರೂ ಅವಳನ್ನು ವೈಯಕ್ತಿಕವಾಗಿ ಸಂಪರ್ಕಿಸಬೇಕು ಎಂದು ಯಾವತ್ತೂ ಅನಿಸಿರಲೇ ಇಲ್ಲ, ಅವಳಿಂದಲೂ ಯಾವತ್ತೂ ವೈಯಕ್ತಿಕ ಮೆಸೇಜುಗಳಾಗಲಿ ಕರೆಗಳಾಗಿ ಬಂದಿರಲಿಲ್ಲ.
ಆದರೆ ನಿನ್ನೆ ಮಗ ಹೋದ ಮೇಲೆ, ಜಸ್ಸಿ ಅದೆಷ್ಟು ನೆನಪಾದಳು! ಅವಳ ಮಾತು, ನಗೆ, ಹಾಡು, ಪ್ರೀತಿ, ಪ್ರಣಯಗಳು ಯಾಕೆ ನೆನಪಾದವು? ತಮ್ಮ ಸಂಬಂಧ ಮುರಿದ್ದಾದರೂ ಏಕೆ ಎಂದು ರಾತ್ರಿಯಿಡೀ ಕುಡಿಯುತ್ತ ಉತ್ತರಗಳನ್ನು ಹುಡುಕುತ್ತಿದ್ದ: ಅವಳು ಉತ್ತರ ಧ್ರುವ-ತಾನು ದಕ್ಷಿಣ ಧ್ರುವ ಎನ್ನುವ ಕಂದರವೇ? ಆಗ ಕರಿಯರ್‌ನಲ್ಲಿ ತನಗಿಂತ ಮುಂದೆ ಹೋದಳು ಎನ್ನುವ ಅವಳ ಸೊಕ್ಕೇ ಅಥವಾ ತನ್ನ ಕೀಳರಿಮೆಯೇ? ತಾನು ಬಡತನದಿಂದ ಬಂದವನು, ಅವಳು ಮಧ್ಯಮವರ್ಗದಿಂದ ಬಂದವಳು ಎನ್ನುವ ಅಂತರವೇ? ತಾನು ಚಿಕ್ಕ ಊರಿನವನು ಅವಳು ದಿಲ್ಲಿಯವಳು ಎನ್ನುವ ಬಿರುಕೇ? ಭಾಷೆಯ ತೊಡಕೇ? ಧರ್ಮದ ಹಂಗೇ? ತನಗಿಂತ ವಯಸ್ಸಿನಲ್ಲಿ ದೊಡ್ಡವಳು ಎನ್ನುವುದೇ? ತಾನಿನ್ನೂ ಆಗ ತಂದೆಯಾಗಲು ತಯಾರಿರಲಿಲ್ಲವೇ? ಅವಳಿಗೆ ಇನ್ನೊಬ್ಬ ಬಾಯ್‍ಫ಼್ರೆಂಡ್ ಸಿಕ್ಕಿದ್ದಿರಬಹುದೇ? ತಾನು ಅವಳ ಮೊದಲ ಪ್ರಿಯಕರನಲ್ಲ ಎನ್ನುವ ತನ್ನ ಕೊರಗೇ?
ಕಾರನ್ನು ನಿಲ್ಲಿಸಿ, ಆಸ್ಪತ್ರೆಗೆ ಹೋಗುತ್ತಿದ್ದಂತೆಯೇ ರಕ್ತ ಮೂತ್ರ ಪರೀಕ್ಷೆಗಳನ್ನು ಕೊಟ್ಟು ಸಿ.ಟಿ ಸ್ಕ್ಯಾನ್ ಮಾಡಿಸಿಕೊಂಡ. ಒಂದು ಸಣ್ಣ ಕಿಡ್ನಿ ಕಲ್ಲು ಇರಬಹುದು ಎಂದುಕೊಂಡಿದ್ದು ಸುಳ್ಳಾಗಿತ್ತು, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗೂ ಕಾಣುವಷ್ಟು ದೊಡ್ಡ ಕ್ಯಾನ್ಸರ್ ಗಡ್ಡೆ ಎಡಕಿಡ್ನಿಯಲ್ಲಿಇತ್ತು! ಒಂದು ಕ್ಷಣ ಕಣ್ಣಿಗೆ ಕತ್ತಲೆ ಬಂದಂತಾಯಿತು. ಕಣ್ಣುಮುಚ್ಚಿ ಕೂತ. ಗೆಳೆಯ ರೇಡಿಯಾಲಾಜಿಸ್ಟ್ ಚಾಟರ್ಜಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಪ್ರಾಣೇಶನೇ ಮೌನ ಮುರಿದು, “ಗಡ್ಡೆ ನನಗೂ ಕಾಣುತ್ತಿದೆ, ಕ್ಯಾನ್ಸರ್ ಎಲ್ಲೆಲ್ಲಿ ಹರಡಿದೆ ನೋಡು,” ಎಂದ. “ಬಹುಷಃ ಮೂಳೆಗಳಿಗೆ ಹರಡಿದೆ ಅನ್ಸುತ್ತೆ,” ಎಂದ ಚಾಟರ್ಜಿ. ಈ ರೇಡಿಯಾಲಾಜಿಸ್ಟುಗಳು ‘ಬಹುಷಃ ಅಂದರೆ ಖಂಡಿತ’ ಎನ್ನುವುದು ಪ್ರಾಣೇಶನಿಗೆ ಗೊತ್ತಿಲ್ಲದ ಮಾತೇನಲ್ಲ. ಚಾಟರ್ಜಿಗೆ ಥ್ಯಾಂಕ್ಸ್ ಹೇಳಿ ಸಾಯಂಕಾಲದ ಪಾರ್ಟಿಯನ್ನು ಇನ್ನೊಮ್ಮೆ ನೆನಪಿಸಿ ಬೀಳ್ಕೊಟ್ಟ.

ಪದ್ಮಜಾಳ ಮೆಸೇಜು ಬಂದಿತ್ತು, ‘ಸಂಜೆಯ ಪಾರ್ಟಿಗೆ ರೆಡಿಯಾಗಲು ಪಾರ್ಲರಿಗೆ ಹೋಗುತ್ತಿದ್ದೇನೆ, ಫ್ರಿಡ್ಜ್‌ನಲ್ಲಿ ಚಿತ್ರಾನ್ನ, ಹಯಗ್ರೀವ ಇದೆ, ತಿನ್ನಲು ಮರೀಬೇಡ’. ‘ಓಕೆ,’ ಎಂದು ಕಳಿಸಿದ. ಆಸ್ಪತ್ರೆಯಿಂದ ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಪದ್ಮಜಾ ಮನೆಯಲ್ಲಿರಲಿಲ್ಲ. ಉಚ್ಚೆ ಮಾಡಿದ, ಈ ಸಲ ರಕ್ತವೇನೂ ಕಾಣಿಸಲಿಲ್ಲ, ಸ್ವಲ್ಪ ಸಮಾಧಾನ ಎನಿಸಿತು. ಸೋಫಾದಲ್ಲಿ ಕಣ್ಣುಮುಚ್ಚಿ ಕುಳಿತ. ಮನಸ್ಸು ಒಂಥರಾ ಖಾಲಿ ಖಾಲಿ ಎನಿಸಿತು. ಅಳು ಬರುತ್ತಿದೆ ಅಂದುಕೊಂಡ, ಆದರೆ ಕಣ್ಣೀರೇನೂ ಬರುತ್ತಿಲ್ಲ. ಬೆಂಗಳೂರಲ್ಲಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಾಗ ಎರಡೇ ಜೊತೆ ಬಟ್ಟೆ ಹಿಡಕೊಂಡು ಹವಾಯಿ ಚಪ್ಪಲಿಯಲ್ಲಿ ಮನೆ ಬಿಟ್ಟು ಮಾಧ್ವಮಹಾಮಂಡಲದ ಹಾಸ್ಟೇಲಿನಲ್ಲಿ ಬಡಹುಡುಗರಿಗೆ ಸಿಗುವ ಫ್ರೀ-ವಸತಿಯಲ್ಲಿ ಇದ್ದಿದ್ದು, ಅಲ್ಲಿನ ದಾನಿಗಳಿಂಡ ಮೆಡಿಕಲ್ ಕಾಲೇಜಿನ ಫೀಸ್ ಕಟ್ಟಿದ್ದು, ದಿನಾ ರಾತ್ರಿ ಹಾಸ್ಟೇಲಿನಲ್ಲಿ ಎಲ್ಲರಿಗೆ ಊಟ ಬಡಿಸಿ ನಂತರ ಊಟ ಮಾಡಿದ್ದು, ಹಾಸ್ಟೇಲಿನ ಥರಾವರಿ ಕೆಲಸಗಳನ್ನು ಮಾಡಿ ಅವಮಾನದಲ್ಲಿ ಬೆಳೆದದ್ದು, ನಂತರ ಎಲ್ಲವನ್ನೂ ಮೆಟ್ಟಿನಿಂತು ಬದುಕು ಇಲ್ಲಿಯವರೆಗೂ ಬಂದದ್ದು... ಎಲ್ಲ ಧುತ್ತನೇ ನೆನಪಿಗೆ ಬಂದವು.
ಕಿಡ್ನಿ ಕ್ಯಾನ್ಸರ್ ಮೂಳೆಗಳಿಗೆ ಹಬ್ಬಿದೆ. ಇನ್ನೊಂದೆರೆಡು ವಾರದಲ್ಲಿ ಎಲ್ಲ ತಪಾಸಣೆಗಳನ್ನು ಮಾಡಿ ತನ್ನ ಚಿಕಿತ್ಸೆಯ ಬಗ್ಗೆ ಹೇಳುತ್ತಾರೆ. ಯಾವ ಯಾವ ಹೊಸ ಟ್ರೀಟ್‍ಮೆಂಟುಗಳು ಬಂದಿವೆ ಎಂದು ಭರವಸೆ ತುಂಬುತ್ತಾರೆ. ಇನ್ನೆಷ್ಟು ತಿಂಗಳು ತಾನೆ ತಾನು ಬದುಕಬಹುದು? ತನಗೆ ಹೀಗೆ ಆಗಿರುವುದನ್ನು ಪದ್ಮಜಾಳಿಗೆ ಹೇಗೆ ಹೇಳುವುದು, ಯಾವಾಗ ಹೇಳುವುದು, ಬಯಾಪ್ಸಿವರೆಗೂ ಕಾಯಬೇಕೇ? ಮಗ ಇಂದು ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ಪಾರ್ಟಿಗೆ ಬರುವುದಿಲ್ಲ ಎಂದು ಪದ್ಮಜಾಳಿಗೆ ಹೇಗೆ ಹೇಳುವುದು? ಏಕೆ ಬರುವುದಿಲ್ಲ ಎನ್ನುವುದನ್ನು ಹೇಗೆ ಹೇಳುವುದು? ಎಷ್ಟು ಹೊತ್ತು ಹಾಗೇ ಯೋಚಿಸುತ್ತ ಕುಳಿತಿದ್ದನೋ ಏನೋ, ಐಫೋನು ‘ಟಂಗ್‘ ಎಂದಾಗಲೇ ಕಣ್ಣು ಬಿಟ್ಟ.
ಮಗ ಸತ್ಯನ ಮೆಸೇಜು, ‘ಹ್ಯಾಪಿ ಆ್ಯನಿವರ್ಸರಿ, ಡ್ಯಾಡಿ.’ ಹಿಂದಿನ ದಿನ ಇಷ್ಟೆಲ್ಲಾ ಆದ ಮೇಲೆ ಇದನ್ನು ಮಗನಿಂದ ನಿರೀಕ್ಷಿಸಿರಲಿಲ್ಲ. ಚಕ್ಕನೇ ಮಗನಿಗೆ ಫೋನ್ ಮಾಡಿದ, ಎದೆ ಡವ ಡವ ಹೊಡೆದುಕೊಳ್ಳತೊಡಗಿತು. ಮಗ ಫೋನ್ ಎತ್ತುವ ಖಾತ್ರಿ ಇರಲಿಲ್ಲ. ಆದರೆ ಎತ್ತಿದ. “ಸಾರಿ ಸತ್ಯ, ಐ ಆಮ್ ವೆರಿ ವೆರಿ ಸಾರಿ. ದಯವಿಟ್ಟು ನಾನು ಮಾತಾಡುವುದನ್ನು ಫೋನ್ ಕಟ್ ಮಾಡದೇ ಮಧ್ಯ ಮಾತಾಡದೇ ಕೇಳಿಸಿಕೊ,” ಎಂದ ಪ್ರಾಣೇಶ. ಆ ಕ್ಷಣಕ್ಕೆ ಏನೇನು ಮನಸ್ಸಿಗೆ ತೋಚಿತೋ ಅದನ್ನೆಲ್ಲ ಬಿಟ್ಟೂಬಿಡದೇ ಮಾತಾಡಿದ, “ದಯವಿಟ್ಟು ಇವತ್ತು ಸಂಜೆ ಪಾರ್ಟಿಗೆ ಬಾ, ಜೊತೆಗೆ ದಯವಿಟ್ಟು ನಿನ್ನ ಬಾಯ್‍ಫ಼್ರೆಂಡನ್ನೂ ಕರೆದುಕೊಂಡು ಬಾ. ಗರ್ಲ್‍ಫ಼್ರೆಂಡನ್ನು ಎಲ್ಲರೂ ಹೇಗೆ ಪರಿಚಯ ಮಾಡಿಕೊಡುತ್ತಾರೋ ಅಷ್ಟೇ ಖುಷಿಯಿಂದ ನಿನ್ನ ಬಾಯ್‍ಫ಼್ರೆಂಡನ್ನು ಎಲ್ಲರಿಗೂ ಪರಿಚಯಮಾಡಿ ಕೊಡುತ್ತೇನೆ. ನಿನ್ನ ಬಾಯ್‍ಫ಼್ರೆಂಡು ಏಷಿಯನ್, ಬಿಳಿಯ, ಕರಿಯ ಯಾರೇ ಆಗಿರಲಿ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಏನೇ ಆಗಿರಲಿ. ಇದು ನನ್ನ ಪ್ರಾಮಿಸ್. ನಿನ್ನ ತಾಯಿಗೆ ಹೇಳುವ ಜವಾಬ್ದಾರಿಯನ್ನು ನನಗೆ ಬಿಡು. ನೀವಿಬ್ಬರೂ ಎಷ್ಟು ದಿನ ಒಟ್ಟಿಗೆ ಇರುತ್ತೀರೋ ಇಲ್ಲವೋ ಗೊತ್ತಿಲ್ಲ, ಮದುವೆಯಾಗುತ್ತೀರೋ ಇಲ್ಲವೋ ಅದೂ ಗೊತ್ತಿಲ್ಲ, ಆದರೆ ನನಗೆ ಅದಾವುದೂ ಮುಖ್ಯವಲ್ಲ. ನೀನು ಇವತ್ತು ಪಾರ್ಟಿಗೆ ಬರಬೇಕು ಅಷ್ಟೇ. ನಾನು ಇನ್ನೊಮ್ಮೆ ನಿನ್ನಲ್ಲಿ ಕ್ಷಮೆಯಾಚಿಸುತ್ತ ನೀನು ಪಾರ್ಟಿಗೆ ಬರಲೇಬೇಕೆಂದು ಪ್ರಾರ್ಥಿಸುತ್ತಿದ್ದೇನೆ.” ಮಗ ಬರುತ್ತೇನೆಂದು ಪ್ರಾಮಿಸ್ ಮಾಡಿದ ಮೇಲೆಯೇ ಫೋನ್ ಇಟ್ಟ.
ಅಷ್ಟರಲ್ಲಿ ಪದ್ಮಜಾ ಎರಡು ಸಲ ಫೋನು ಮಾಡಿದ್ದಳು. ಮಗನ ಫೋನ್ ಇಡುತ್ತಿದ್ದಂತೆಯೇ ಪದ್ಮಜಾಳಿಗೆ ಫೋನ್ ಮಾಡಿ, ಇಷ್ಟೊತ್ತು ಮಗನ ಜೊತೆ ಮಾತಾಡುತ್ತಿದ್ದೆನೆಂದು ಹೇಳಿದ. ತಾನು ಬರುವುದು ಇನ್ನೂ ಅರ್ಧಗಂಟೆಯಾಗುತ್ತದೆಂದೂ, ಬರುವಷ್ಟರಲ್ಲಿ ಅವಳು ಯಾರ ಕೈಗೂ ಸಿಗದಂತೆ ಮೇಲೆ ಇಟ್ಟಿದ್ದ ಜ್ಯುವೆಲರಿ ಬಾಕ್ಸನ್ನು ಕೆಳಗೆ ಇಟ್ಟಿರಬೇಕೆಂದೂ ಹೇಳಿದಳು. “ಆಯಿತು,” ಎಂದು ಹೇಳಿ, “ಪದ್ದೀ, ತಿರುಪತಿ ಮತ್ತು ಮಂತ್ರಾಲಯಕ್ಕೆ ಬರಲು ನಾನು ರೆಡಿ, ಬ್ರಹ್ಮೋತ್ಸವಕ್ಕೆ ಯಾರು ಬೇಕೋ ಎಲ್ಲರನ್ನೂ ಕರೆದುಬಿಡು. ಮಂತ್ರಾಲಯದಲ್ಲಿ ನೀನು ಏನು ಹೇಳುತ್ತೀಯೋ ಆ ಸೇವೆಯನ್ನು ಮಾಡುತ್ತೇನೆ, ಆಯ್ತಾ?” ಎಂದ. ಪದ್ಮಜಾ ಖುಷಿಯಿಂದ, “ಏನಿದು? ಆ್ಯನಿವರ್ಸರಿ ಸರ್‌ಪ್ರೈಸಾ? ಏನಿವತ್ತು ರಾಯರಿಗೆ ದೇವರು ಇಷ್ಟು ಒಳ್ಳೆಯ ಬುದ್ಧಿ ಕೊಟ್ಟಿದ್ದಾನೆ! ಥ್ಯಾಂಕ್ಯೂ,” ಎಂದಳು.
ಪದ್ಮಜಾಳ ಫೋನ್ ಇಟ್ಟ ಮೇಲೆ ವಾಟ್ಸ್ಯಾಪ್‍ನಲ್ಲಿ ‘ಪಿ.ಜಿ.ಐ-ಚಂಧೀಘಡ್’ ಗ್ರುಪ್ ತೆರೆದು ‘ಗ್ರುಪ್ ಇನ್‍ಫ಼ೋ’ಗೆ ಹೋದ, ಅಲ್ಲಿರುವ ಜನರನ್ನು ಸ್ಕ್ರೋಲ್ ಮಾಡಿದ. ಒಂದು ಫೋನ್ ನಂಬರಿನ ಮುಂದೆ ~jassi ಎಂದು ಕಾಣಿಸಿತು. ಫೋನ್ ಮಾಡಿದ. ರಿಂಗ್ ಆಯಿತು. ಅತ್ತ ಕಡೆಯಿಂದ, “ಹಲೋ,” ಕೇಳಿಸಿತು. “ಜಸ್ಸೀ?” ಅಂದ. “ಎಸ್, ಸ್ಪೀಕಿಂಗ್,” ಎಂದಳು. “ನಾನು, ಪ್ರಾಣ್,” ಎಂದು ಹೇಳಿ ಬಿಕ್ಕಿಬಿಕ್ಕಿ ಅಳತೊಡಗಿದ. “ಹೇ ಪ್ರಾಣ್, ಸಬ್ ಠೀಕ್ ಹೈ ನಾ (ಎಲ್ಲ ಸರಿ ಇದೆಯಾ)?” ಎಂದು ಜಸ್ಸಿ ಆತಂಕದಲ್ಲಿ ಕೇಳಿದಳು. ಮನಸ್ಸಿನಾಳದಲ್ಲೆಲ್ಲೋ ಜಗಜೀತಸಿಂಗ “ಆಖರಿ ಹಿಚಕಿ ತೆರೆ ಜ಼ಾನೋ ಮೇಂ ಆಯೆ, ಮೌತ್ ಕೋ ಭೀ ಶಾಯರಾನಾ ಚಾಹತಾ ಹೂಂ (ನನ್ನ ಕೊನೆಯುಸಿರು ನಿನ್ನ ಮಡಿಲಲ್ಲಿ ಬರಲಿ, ಸಾವಿಗೂ ಸಹ ಕವಿತೆಯಾಗಲು ಬಯಸುವೆನು),” ಎಂದು ತನಗಾಗಿಯೇ ಗಜ಼ಲನ್ನು ಹಾಡಿದಂತಾಯಿತು.
ಕತೆಗೆ ಬಂದ ಪ್ರತಿಕ್ರಿಯೆಗಳು:
ನೀವು ಬರೆದಿರುವ ಸಣ್ಣ ಕಥೆ ವೆಡ್ಡಿಂಗ್ ಅನಿವರ್ಸರಿ ಅನ್ನು ಮಯೂರ ಮ್ಯಾಗಝಿನ್ ಅಲ್ಲಿ ಓದಿದೆ. ಕಥೆ ಚೆನ್ನಾಗಿದೆ. ನನಗೆ ಹಿಡಿಸಿತು. ಕಥೆಯ ಓಟ ಚುರುಕಾಗಿದ್ದು ಓದುಗರನ್ನು ಹಿಡಿದಿಡುತ್ತದೆ. ನಿಮ್ಮ ಕಥೆಯ ಸನ್ನಿವೇಶ ಮತ್ತು ಪಾತ್ರಗಳು ಪರಿಚಿತವಾಗಿವೆ. ಬಹುಶಃ ನಾವು ಬ್ರಿಟನ್ನಿನಲ್ಲಿದ್ದಾಗ ನಮ್ಮ ನೆಂಟರು ಮತ್ತು ಸ್ನೇಹಿತರೆಲ್ಲ ಹೆಚ್ಚು ಕಡಿಮೆ ಡಾಕ್ಟರುಗಳೇ ಆಗಿದ್ದರು. ಹಾಗಾಗಿ ಅವರೊಡನೆ ನಮಗಿದ್ದ ೨೦ ವರ್ಷಗಳ ಒಡನಾಟ ನಿಮ್ಮ ಕಥೆಯಲ್ಲಿನ ಪಾತ್ರಗಳಿಗೆ ಸ್ಪಂದಿಸಲು ಸಾಧ್ಯವಾಯಿತು. ಮಧ್ಯಮವರ್ಗದ ಕುಟುಂಬದ ಸದಸ್ಯರು, ವಿದ್ಯಾಭ್ಯಾಸದ ಸಮಯದಲ್ಲಿ ಕಷ್ಟಪಟ್ಟು ಡಿಗ್ರಿ ಮುಗಿಸಿ ಬರುವ ವಿಷಯ ಪರಿಚಿತವಾದದ್ದು. ಜೊತೆಗೆ ಬ್ರಾಹ್ಮಣ ಕುಟುಂಬದ ಮಡಿವಂತಿಕೆಯಲ್ಲಿ ಬೆಳೆದು, ಅದನ್ನು ಮೀರಿ ಜೀವನದಲ್ಲಿ ಮುನ್ನಡೆಯುವ ಸಾಧ್ಯತೆಗಳು, ಮತ್ತು ಹೊರದೇಶಕ್ಕೆ ಬಂದಾಗ ಆ ಮಡಿವಂತಿಕೆ,ಸಂಸ್ಕೃತಿ ಎನ್ನುವ ಹಿನ್ನೆಲೆಯಲ್ಲಿ ಕಾಡುವುದು ನಮ್ಮ ಸ್ವಂತ ಅನುಭವ. ಕಥೆಯ ಮುಖ್ಯ ಪಾತ್ರ ಪ್ರಾಣೇಶ, ಉತ್ತರ ಕರ್ನಾಟಕದ ಬ್ರಾಹ್ಮಣ ಸಂಸ್ಕೃತಿಯ ಮಡಿವಂತಿಕೆ ಬಿಟ್ಟು, ಚಂಢೀಗರದಲ್ಲಿ ನಡೆಸುವ ಜೀವನಶೈಲಿ, ಮದುವೆಗೂ ಮೊದಲೇ ಲಿವಿಂಗ್ ಇನ್ ಪಾರ್ಟ್ನರ್ ಜೆಸ್ಸಿಯ ಜೊತೆಗಿನ ಸಂಬಂಧ ಇವೆಲ್ಲ ಪ್ರಾಣೇಶನ ರೆಬೆಲ್ ಸ್ವಭಾವ ತೋರುತ್ತದೆ. ತಂದೆ-ತಾಯಿಯರ ಮುಂದೆ ನಡೆಸಲಾಗದ ಚಟುವಟಿಕೆಗಳನ್ನು, ದೂರದ ಊರಿನಲ್ಲಿ ನಡೆಸುತ್ತ, ತನ್ನ ಅಸ್ತಿತ್ವ ಕಂಡುಕೊಳ್ಳುವ ಪ್ರಾಣೇಶನ ಪಾತ್ರ ೭೦ರ ಕ್ರಾಂತಿಕಾರ ಲೇಖಕರಾದ ಆಲನಹಳ್ಳಿ ಕೃಷ್ಣ ಮತ್ತು ಯು.ಅರ. ಅನಂತಮೂರ್ತಿ ಅವರ ಕಥೆಗಳನ್ನ ಜ್ಞಾಪಿಸಿತು. ಪ್ರಾಣೇಶನ ಪ್ರೇಮಿ ಜೆಸ್ಸಿ ಬುದ್ಧಿವಂತೆ, ಅವಳು ಕೂಡ ತನ್ನ ಕುಟುಂಬದ ಬೇಲಿಯನ್ನು ಹಾಯ್ದು ಬಂದವಳೇ! ಮುಂದೆ ಇಂಗ್ಲೆಂಡಿನಲ್ಲಿ ಅವರಿಬ್ಬರ ಸಂಬಂಧ ಹಳಸಿ, ಪ್ರಾಣೇಶ ತಂದೆ-ತಾಯಿ ಮೆಚ್ಚಿದ ಹುಡುಗಿಯನ್ನು ಮದುವೆಯಾಗುವ ಸನ್ನಿವೇಶವೂ ಹೊಸತಲ್ಲ. ಆದರೆ, ಎಂ.ಎ ಮಾಡಿದ ಅವನ ಪತ್ನಿ ಪದ್ಮಜಾ ಭಾರತದ ಸಂಪ್ರದಾಯದಿಂದ ಹೊರಬರದೆ, ದಿನನಿತ್ಯ ಹಲವು ಚಟುವಟಿಕೆಗಳನ್ನು ಮುಂದುವರೆಸುವುದನ್ನು ಕಥೆಯಲ್ಲಿ ಓದಿದಾಗ, ನಾವು ಅದೇ ಪರಿಸ್ಥಿತಿಯಲ್ಲಿದ್ದ ಜನ ಎನ್ನುವುದು ನೆನಪಾಯಿತು. ಆದರೆ, ಮಗ ತಾನೊಬ್ಬ ದ್ವಿಲಿಂಗಕಾಮಿ ಎಂದು ತಿಳಿದಾಗ ಅದನ್ನು ಜೀರ್ಣಿಸಿಕೊಳ್ಳಲಾಗದ ವೈದ್ಯ ಪ್ರಾಣೇಶನ ಯೋಚನಾಲಹರಿ ಸ್ವಲ್ಪ ಆಶ್ಚರ್ಯವೆನಿಸಿದರೂ, ಅದೇ ರೀತಿಯ ನಡವಳಿಕೆಯನ್ನು ನಾನು ನಮ್ಮ ಡಾಕ್ಟರ್ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಕಂಡಿದ್ದೇನೆ. ಆದರೆ ಮಗನ ಈ ನಡವಳಿಕೆಗೆ,ತನ್ನ ಪತ್ನಿಯ ಪಾಲನೆ-ಪೋಷಣೆ ಕಾರಣ ಎನ್ನುವ ಅಂಶ ಹಿಡಿಸಲಿಲ್ಲ. ಬಹುಶಃ, ಮಡಿವಂತ ಬ್ರಾಹ್ಮಣ ಕುಟುಂಬದ ಗಂಡಸರು, ಕುಟುಂಬದಲ್ಲಿ ಆಗುವ ತೊಂದರೆಗಳಿಗೆ ಪತ್ನಿಯರು ಜವಾಬ್ದಾರಿ ಎನ್ನುವುದು, ಸ್ಟೀರಿಯೋ-ಟೈಪಿಂಗ್ ಆಲೋಚನೆ ಎನ್ನಿಸಿತು. ಪ್ರಾಣೇಶನ ಪತ್ನಿಯೂ ಒಬ್ಬ ಡಾಕ್ಟರ್ ಆಗಿದ್ದರೆ, ಆಗಲೂ ಪ್ರಾಣೇಶ ಹಾಗೆ ಯೋಚಿಸುತ್ತಿದ್ದನೇ? ಬಹುಶಃ ಇದೆ ಕಾರಣಕ್ಕೆ ಅವನಿಗೆ ಅವನ ಹಿಂದಿನ ಸಂಗಾತಿ ಜೆಸ್ಸಿಯೊಂದಿಗೆ ಸರಿಹೊಂದಲಿಲ್ಲವೇ? ಆದರೆ, ತನಗೆ ಕ್ಯಾನ್ಸರ್ ಇರುವುದು ತಿಳಿದೊಡನೆ, ತನ್ನ ಆಲೋಚನೆಯನ್ನು ಕ್ಷಣಾರ್ಧದಲ್ಲಿ ಬದಲಿಸಿ, ಪತ್ನಿಯ ಎಲ್ಲಾ ಪೂಜೆ-ಪುನಸ್ಕಾರಗಳಿಗೂ ಒಪ್ಪಿ, ಮಗನ ಲೈಂಗಿಕತೆಯನ್ನು ಅನುಮೋದಿಸುವ ಪ್ರಾಣೇಶನ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಬಹುಶಃ ಅವನದೇ ಪರಿಸ್ಥಿತಿಯಲ್ಲಿ ಇನ್ನಾರಿದ್ದರು ಹಾಗೆ ವರ್ತಿಸುತ್ತಿದ್ದರೇನೋ? ಬದಲಾದ ಪ್ರಾಣೇಶನ ನಡವಳಿಕೆಯನ್ನು, ತಮ್ಮ ವೆಡ್ಡಿಂಗ್ ಅನಿವರ್ಸರಿಯ ವಿಶೇಷ ಉಡುಗೊರೆ ಎಂದು ಭಾವಿಸುವ ಪದ್ಮಜಾಳನ್ನು ನೋಡಿ ಕನಿಕರವಾಯಿತು. ಜಸ್ಸಿಯ ಸಂಪರ್ಕ ಬೇಡವೆಂದು ಅನೇಕ ವರ್ಷಗಳಿಂದ ಸುಮ್ಮನಿದ್ದ ಪ್ರಾಣೇಶ, ಅವಳಿಗೂ ಫೋನಾಯಿಸಿ, ಅಳುವುದು, ಪ್ರಾಣೇಶನಿಗೆ ಇನ್ನು ಜೆಸ್ಸಿಯ ಬಗ್ಗೆ ಇರುವ ಭಾವನೆಯನ್ನು ಎತ್ತಿ ತೋರುತ್ತದೆ ಅಲ್ಲದೆ, ಬಹುಶಃ, ಜೆಸ್ಸಿ ಅವನಿಗೆ ಹೆಚ್ಚು ಅನುರೂಪಳಾಗಿದ್ದ ಸಂಗಾತಿ ಎನ್ನುವುದು ತಿಳಿಯುತ್ತದೆ. ಅದೇನೇ ಇರಲಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ, ಪ್ರಾಣೇಶ ಜೀವನದಲ್ಲಿ ಪಟ್ಟ ಪರಿಪಾಠ, ಅವನು ಗಳಿಸಿದ ಯಶಸ್ಸು ಎಲ್ಲವು ಕ್ಷಣಾರ್ಧದಲ್ಲಿ ಅವನ ಕಣ್ಣುಮುಂದೆ ಸುಳಿದು, ತನ್ನ ಜೀವನ ಇಷ್ಟೇ? ಎನ್ನುವ ಹತಾಶ ಭಾವನೆ ಮೂಡುತ್ತದೆ. ಕರ್ನಾಟಕದ ಓದುಗರಿಗೆ ಬ್ರಿಟನ್ನಿನಲ್ಲಿ ಯಶಸ್ವಿ ಡಾಕ್ಟರುಗಳು ನಡೆಸುವ ಜೀವನಶೈಲಿಯ ಉತ್ತಮ ಪರಿಚಯ ಮಾಡಿಕೊಟ್ಟಿದ್ದಿರಿ. ಮಯೂರ ಓದುಗರ ಮನತಟ್ಟುವ ಕಥೆ ಇದು.
-----
ನಿಮ್ಮ ಇಂಗ್ಲೆಂಡಿನ ಪರಿಸರವನ್ನು ಚೆನ್ನಾಗಿ ಬಿಂಬಿಸುತ್ತದೆ. ಸಾವಿನ ನೆರಳು ಕಂಡಾಗ ಎಲ್ಲ ಸಣ್ಣತನಗಳೂ ಮಾಯವಾಗುತ್ತವೆ ಎನ್ನುವುದು ಸತ್ಯ. ಮನುಷ್ಯ ಸತ್ಯ ನುಡಿಯುವುದು ಸಾವಿನ ಶಯ್ಯೆಯಲ್ಲಿಯೇ ಎಂದು ಎಲ್ಲರೂ ಹೇಳುತ್ತಾರೆ. ಅದೂ ಸತ್ಯವೂ ಇರಬೇಕು. ಸಾವಿನ ಸ್ಪರ್ಶ ಮಾಡಿಬಂದವನ ವ್ಯಕ್ತಿತ್ವದಲ್ಲಿ ಬದಲಾವಣೆಯಿರುತ್ತದೆ ಮತ್ತದು ಧನಾತ್ಮಕವಾಗಿರುತ್ತದೆ. ಆದರೂ ಕತೆಯಲ್ಲಿ ಬಂದಷ್ಟು ತೀವ್ರವಾಗಿ ಆ ಬದಲಾವಣೆ ಮೂಡುತ್ತದೆಯೆ ಎಂಬುದು ನನ್ನ ಅನುಮಾನ. ಬಹುಶಃ ಒಂದಿಷ್ಟು ಕಾಲವನ್ನು ಅದು ತೆಗೆದುಕೊಳ್ಳುತ್ತದೆ. ಆದರೆ ಕತೆಯ ಸಣ್ಣ ಹಂದರದಲ್ಲಿ ಈ ತೀವ್ರ ಬದಲಾವಣೆ ಒಪ್ಪಿಗೆಯಾಗುತ್ತದೆ.
----
Excellent article. Size of our country is very big. Nowadays Govt Hospitals are giving good service at vey nominal charges. But due to hype of this Mediclaim, people are reluctant to go govt Hospitals. I think people mind set should change.
ಕೇಶವ ಕುಲಕರ್ಣಿಯವರ ’ಇಂಗ್ಲೆಂಡ್ ಪತ್ರ’ಕ್ಕೆ ಸ್ವಾಗತ. ಸ್ವಾರಸ್ಯಕರ, ಸ್ವಾಗತಾರ್ಹ ಮತ್ತು ಆಶ್ಚರ್ಯಕರ ಎಂದು ಅನ್ನಬಹುದಾದ ಸುದ್ದಿಗಳೂ ಇವೆ ಈ ಪತ್ರದಲ್ಲಿ. ಹುಡುಕಿದರೂ ಮೂಲೆಯಲ್ಲಿ ’ಕ್ಷೇಮ’ ಅಂದು ನಾನು ಬರೆಯುತ್ತಿದ್ದ ಪದ ಕಾಣಿಸಲಿಲ್ಲ! ಓಹೋ, ಕೋರೋನಾ ಇರಬೇಕು. ಮುಂದಿನ ಕ್ಪತ್ರವನ್ನು ಎದುರು ನೋಡುವಾ! ಶ್ರೀವತ್ಸ ದೇಸಾಯಿ
Excellent and honest write up
ಅದ್ಭುತವಾದ ಬರವಣಿಗೆ, ಸಾವಿರಾರು ಮೈಲಿ ದೂರದಲ್ಲಿದ್ದು ಭಾರತದ ಸಮಸ್ಯೆಗಳನ್ನು ಬಿಡಿ ಬಿಡಿಯಾಗಿ ತಿಳಿಸಿ , ಪರಿಹಾರ ಹೇಗೆ ಎಂದು ತುಂಬ ಸೊಗಸಾಗಿ ತಿಳಿಸಿರುವೆ . ತುಂಬ ಹೆಮ್ಮೆ ಎನಿಸುತ್ತದೆ . ಸಂಗೀತದ ಬಗ್ಗೆ ಇರುವ ಅರಿವು , ಮಾಹಿತಿಗಳು ಖುಷಿ ಕೊಡುತ್ತವೆ.

