Monday, 3 July 2006

ಸಿನೆಮಾ: ಕನ್ನಡ: ತಬ್ಬಲಿಯು ನೀನಾದೆ ಮಗನೇ


ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. 

ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು - ಈ ದೃಶ್ಯಗಳಲ್ಲಿ ಬಿಚ್ಚಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ. 

ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ.

ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ ಸಂಕೇತವೂ ಆಗುತ್ತದೆ. `ಗೋವಿನ ಹಾಡಿ`ನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ  ಹೆಸರೇನು ಒಂದೂ ಗೊತ್ತಿಲ್ಲ, ಸುಮ್ಮನೇ 'ಗಂಗೇ, ತುಂಗೇ,' ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ. 

ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ. ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ ರೋಮ್ಯಾಂಟಿಸಿಸಂ ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುವಂತೆ ಚಿತ್ರಸಿದ್ದಾರೆ. 

ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. 

ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ 'ಸನಾತನ ವಿಜಯ'ದತ್ತ ಸಾಗುತ್ತದೆ. 

ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ. 

ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (ತುಂಬ ಅವಾಸ್ತವಿಕ ದೃಶ್ಯವಿದು) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ. 

ಈ ಸಿನೆಮಾವನ್ನು ಇಲ್ಲಿ ನೋಡಬಹುದು.