ಲಂಡನ್ನಿನ ಎಮ್‌ಟಿಆರ್-ನಲ್ಲಿ ಫಿಲ್ಟರ್ ಕಾಫಿಯ ಘಮದ ಜೊತೆ ಇಡ್ಲಿ ದೋಸೆಗಳ ಹಬೆ ಏರುತ್ತಿತ್ತು. ಮೆನು ಬೋರ್ಡ್‌ನಲ್ಲಿ,ಇಂದಿನ ವಿಶೇಷ ತಿಂಡಿಗಳನ್ನು ಬರೆದಿದ್ದರು, ಇಂಗ್ಲೀಷಿನಲ್ಲಿ. ಅದರ ಕೆಳಗೆ ಕನ್ನಡದಲ್ಲಿ! ಮುದ್ರಿತವಲ್ಲ. ಕೈಯಾರೆ ಬರೆದದ್ದು. ಅದೂ ಸುಂದರೆ ಲಿಪಿಯಲ್ಲಿ. ಯಾರು ಬರೆದದ್ದು? ಗಲ್ಲೆಯಲ್ಲಿ ನಿಂತ ಮ್ಯಾನೇಜರ್ ತಾನೇ ಎಂದಳು. ಕನ್ನಡತಿಯಾ ಎಂದೆ. ಇಲ್ಲ, ಗುಜರಾತಿ ಎಂದಳು. ಒಂದು ಕ್ಷಣ, ಒಂದು ಸಣ್ಣ ಆನಂದ ಯಾವುದೇ ಮುನ್ಸೂಚನೆ ಇಲ್ಲದೆ ಅರಳಿತು, ಗೊತ್ತು ಪರಿಚಯವಿಲ್ಲದ ದೇಶದಲ್ಲಿ ಕುರ್ಚಿಯನ್ನು ಎಳೆದು ಯಾರೋ ತಲೆ ಎತ್ತಿ ನೋಡದೆಯೇ, "ಇಲ್ಲಿ, ಕುಳಿತುಕೋ" ಎಂದು ಅಚ್ಚ ಕನ್ನಡದಲ್ಲಿ ಹೇಳಿದಂತೆ ಅನಿಸಿತು.