Monday, 27 May 2024

ಇರಲಿ ಬಿಡು

ನನ್ನ ಬಟ್ಟಲು ಮತ್ತೆ ಖಾಲಿಯಾಗುತ್ತಲಿದೆ, ತುಂಬಿಸಿ ಬಿಡು

ನೀ ತೊರೆವ ಗಾಯ ಬಹಳ ನೋಯುತ್ತಲಿದೆ , ಕುಡಿಯಲು ಬಿಡು


ಎಲ್ಲ ಮರೆತು ಮುಂದೆ ಸಾಗೆಂದು ಹೇಳಬಂದಿರುವೆ ನೀನು 

ನಾವು ಬಂದ ದಾರಿಯಲಿ ಗುರುತುಗಳು ಕಾಯುತ್ತಲಿವೆ, ಹೆಕ್ಕಲು ಬಿಡು

 

ನೀ ನೀರುಣಿಸಿದ ಬಳ್ಳಿಯ ತುಳಿದು ಸಾಗಿಹೆ ನೀನು 

ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು


ನನ್ನ ಪ್ರೇಮ ನಿನಗಷ್ಟು ಬೇಗ ಸಾಕಾಯಿತೆ? 

ಹಣೆಯಲಿ ಬರೆದಿದ್ದೇ ಇಷ್ಟು ಅನ್ನುತ್ತಲಿದೆ, ಇರಲಿ ಬಿಡು


ಪ್ರೇಮವಿರದ ಬದುಕು ಮದಿರೆಯಿರದ ಬಟ್ಟಲು

ಬದುಕಲು ನಿನ್ನ ನೆನಪನು ಕುಡಿಯುತ್ತಲಿದೆ, ಬಿಟ್ಟು ಬಿಡು 


ಪ್ರೇಮದ ನಿರಂತರ ಹುಡುಕಾಟವಂತೆ ಬದುಕು

ಈ ಹುಡುಕಾಟ ಕವನವಾಗುತ್ತಲಿದೆ, ಬರೆಯಲು ಬಿಡು

Thursday, 2 May 2024

ನೋಡೂಣಂತ

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ

ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ

ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ

ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ

ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ

ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ

ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಕುಣ್ಯೂಣಂತ

(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)