Thursday, 30 January 2020
ಫೇಸ್ಬುಕ್ ಗೀತೆ
Thursday, 16 January 2020
ಸಿನೆಮಾ: ಕನ್ನಡ: ಅವನೇ ಶ್ರೀಮನ್ನಾರಾಯಣ
‘Two things are infinite: the universe and human stupidity; and I am not sure about the Universe,’ ಎಂದು ಐನ್‍ಸ್ಟೀನ್ ಹೇಳಿದ್ದಾನೆ. ಮನುಷ್ಯನಲ್ಲಿ ಬುದ್ಧಿವಂತಿಕೆಯ ಜೊತೆ ಈ ಸ್ಟುಪಿಡಿಟಿ ಇಲ್ಲದಿದ್ದರೆ ಅಂಥಾ ಭಾರಿ ಗಾತ್ರದ ವಿಮಾನವನ್ನು ಹಗುರವಾದ ಗಾಳಿಯಲ್ಲಿ ಹಾರಿಸುವ ಸಾಹಸ ಮಾಡುತ್ತಿದ್ದನೇ, ಅಗಾಧ ಸಮುದ್ರದಲ್ಲಿ ತಿಮಿಂಗಿಲಿಗಿಂತಲೂ ದೊಡ್ಡದಾದ ಹಡುಗಿನಲ್ಲಿ ಇನ್ನೊಂದು ಖಂಡಕ್ಕೆ ದಾಟುವ ಧೈರ್ಯ ಮಾಡುತ್ತಿದ್ದನೇ? ಬುದ್ಧಿವಂತ ಜನರ ನಡುವೆ ಇಂಥಹ ಕೆಲವು ಸ್ಟುಪಿಡ್ ಜನರಿರುವುದರಿಂದಲೇ, ಅವರ ಸ್ಟುಪಿಡಿಟಿಗೆ ಯಾವ ಮೇರೆ ಇಲ್ಲದಿರುವುದರಿಂದಲೇ, ನಾವಿವತ್ತು ಸ್ಮಾರ್ಟ್ ಫೋನುಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಪಂಚವನ್ನೇ ಸ್ಕ್ರೋಲ್ ಮಾಡುತ್ತಿದ್ದೇವೆ, ಹಾಲಿಡೇಗಾಗಿ ಬಾಹ್ಯಾಕಾಶಕ್ಕೆ ಹೋಗಲು ವೇಟಿಂಗ್ ಲಿಸ್ಟಿನಲ್ಲಿ ಸಾಲು ಹಚ್ಚಿದ್ದೇವೆ.
ಹದಿನೆಂಟನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನವನ್ನು ಒಂದೇ ಕಾಲದಲ್ಲಿ ತಂದಿಟ್ಟರೆ ಹೇಗಿಬಹುದು? ಬಿಜಾಪುರದಂಥ ಬರಡು ನೆಲದಲ್ಲಿ ಕೌಬಾಯ್‍ಗಳಿದ್ದರೆ ಏನಾಗಬಹುದು? ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಪಾಳಯಗಾರರ ರಾಜ್ಯ ನಡೆಯುತ್ತಿದ್ದರೆ ಜನರ ಗತಿ ಏನಾಗಬಹುದು? ಇಂಥ ಸ್ಟುಪಿಡ್ ಪ್ರಶ್ನೆಗಳು ಬುದ್ಧಿವಂತರಿಗೆ ಬರಲು ಸಾಧ್ಯವೇ ಇಲ್ಲ, ಮಿತಿಯಿಲ್ಲದ ಸ್ಟುಪಿಡಿಟಿಯಿಂದ ಮಾತ್ರ ಸಾಧ್ಯ. ಇಂಥ ವಾತಾವರಣವನ್ನು ಸೃಷ್ಟಿಸಿಕೊಂಡು, ಪೌರಾಣಿಕ-ಇಂಡೀ-ಬಾಲಿವುಡ್-ಹಾಲಿವುಡ್‍ಗಳನ್ನು ಸೇರಿಸಿ, ಮನರಂಜನೆಯನ್ನೇ ಧ್ಯೇಯವಾಗಿಟ್ಟುಕೊಂಡು ಸಿನೆಮಾ ಮಾಡಿದರೆ ಹೇಗಿರಬಹುದು? ಇದಕ್ಕೆಲ್ಲ ಉತ್ತರ, ‘ಅವನೇ ಶ್ರೀಮನ್ನಾರಾಯಣ‘.
ಅಕಿರಾ ಕುರಸೋವಾ ಅವರ ‘ರೋಶೋಮಾನ್‘ದಿಂದ ಪ್ರೇರಿತರಾಗಿ, ತಮ್ಮ ಮೊದಲ ‘ಉಳಿದವರು ಕಂಡಂತೆ’ ಸಿನೆಮಾದಿಂದಲೇ ಅದಮ್ಯ ಪ್ರತಿಭೆಯನ್ನು ತೋರಿಸಿದ ರಕ್ಷಿತ್, ‘ಲೂಸಿಯಾ’ದ ಪವನ್ ಕುಮಾರ್ ತರಹ ಪ್ರಾಯೋಗಿಕ ಚಪಲತೆಯ ನಿರ್ದೇಶಕನಾಗಿ ಉಳಿದುಬಿಡಲಿಲ್ಲ. ಸಿನೆಮಾಗಳಲ್ಲಿ ನಟಿಸಿದರು. ತಮ್ಮ ಮೊದಲ ಸಿನೆಮಾದ ಪ್ರತಿಭಾವಂತ ಜನರನ್ನು ಸೇರಿಸಿ ಮುಖ್ಯವಾಹಿನಿ ಸಿನೆಮಾಕ್ಕೇ ಕೈಹಾಕಿದರು. ’ಉಳಿದವರು ಕಂಡಂತೆ’ ಬಾಕ್ಸ್ ಆಫೀಸಿನಲ್ಲಿ ಮಖಾಡೆ ಮಲಗಿದರೆ, ’ಕಿರಿಕ್ ಪಾರ್ಟಿ’ ಮನೆ ಮಾತಾಯಿತು. ’ಕಿರಿಕ್ ಪಾರ್ಟಿ’ ಮುಖ್ಯವಾಹಿನಿಯ ಸಿನೆಮಾ ಆದರೂ ಹೊಸತನವಿತ್ತು, ಹೊಸ ಸಂಗೀತವಿತ್ತು, ಹರೆಯದ ಪ್ರೇಮದ ಕತೆಯಾದರೂ, ಹಿಂದೆ ಬಂದ ಮುಖ್ಯವಾಹಿನಿಯ ಸಿನೆಮಾಗಳಿಂದ ಬೇರೆ ತರಹದ ಸಿನೆಮಾ ಮಾಡಿ ಗೆದ್ದಿತ್ತು. ’ಕಿರಿಕ್ ಪಾರ್ಟಿ’ ಮಾಡಿ ಮೂರು ವರ್ಷದ ನಂತರ, ದೊಡ್ಡ ಬಜೆಟ್ಟಿನಲ್ಲಿ ’ಶ್ರೀಮನ್ನಾರಾಯಣ’ ಬಿಡುಗಡೆ ಮಾಡಿದಾಗ ಕುತೂಹಲ ಮೂಡಿದ್ದು ಸಹಜವೇ.
ಈ ಸಿನೆಮಾವನ್ನು ಕಿಡಿಗೇಡಿ ಪೋಲಿಸ್ `ಶ್ರೀಮನ್ನಾರಾಯಣನ ಆವಾಂತರಗಳು` ಎಂದಾದರೂ ನೋಡಬಹುದು. ಫಜೀತಿಯಲ್ಲಿ ಸಿಕ್ಕಿಬಿದ್ದು ಇನ್ನೇನು ಕತೆ ಮುಗಿಯಿತು ಎನ್ನುವಾಗ ಅದೇನೋ ಉಪಾಯ ಮಾಡಿ ಪಾರಾಗುವ `ಶ್ರೀಮನ್ನಾರಾಯಣನ ಸಾಹಸಗಳು` ಎಂದಾದರೂ ನೋಡಬಹುದು, ಸಾಮಾನ್ಯ ಮನುಷ್ಯನೊಬ್ಬ ಹೇಗೆ ’ಶ್ರೀಮನ್ನಾರಾಯಣ’ನಾದ ಎಂತಲೂ ನೋಡಬಹುದು.
`ಒಂದಾನೊಂದು ಕಾಲ್ಪನಿಕ ಕಾಲದಲ್ಲಿ ’ಅಮರಾವತಿ’ ಎಂಬ ಕಾಲ್ಪನಿಕ ಊರು,` ಎಂದು ಶುರುವಾಗುವ ಸಿನೆಮಾ ಚಂದಾಮಾಮಾ ಕತೆಯಂತೆಯೇ ಇದೆ. ಲೂಟಿ ಮಾಡಿದ ನಿಧಿ ಹುಡುಕುವ ಅದೇ ಪುರಾತನ ಕತೆಯನ್ನು ಹೇಳಿರುವ ರೀತಿ ಮಾತ್ರ ಹೊಸದು. ಹೀಗೂ ಸಿನೆಮಾ ಮಾಡಲು ಸಾಧ್ಯವೇ ಎಂದು ಸಿನೆಮಾ ಮಾಡುವ ಮಂದಿಯೂ ಆಶ್ಚರ್ಯ ಪಡುವಂತೆ ಸಿನೆಮಾ ಮಾಡಿದ್ದಾರೆ. ಹಲವಾರು ಉಪಕತೆಗಳನ್ನು ಸೇರಿಸುತ್ತ, ಕೂರ್ಮಾವತಾರದ ಪುರಾಣ ಕತೆಯನ್ನೂ ತೋರಿಸುತ್ತ ನಿಜ ಮನುಷ್ಯರ ಫ್ಯಾಂಟಸಿ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ಲಘುಹಾಸ್ಯವನ್ನು ಚಿತ್ರದುದ್ದಕ್ಕೂ ಲೀಲಾಜಾಲವಾಗಿ ತೋರಿಸಿದ್ದಾರೆ (ಎಲ್ಲಿಯೂ ಹಾಸ್ಯವನ್ನು ತುರುಕಿದಂತೆ ಅನಿಸುವುದೇ ಇಲ್ಲ) ಒಂದೇ ಸಿನೆಮಾದಲ್ಲಿ ಭಕ್ತ ಪ್ರಹ್ಲಾದ, Pirates of the Caribbean, No Country for Old Man, ಕೆಜಿಎಫ್‍ಗಳನ್ನು ಕಲಿಸಿ ಬಡಿಸಿದ್ದಾರೆ. ಕೆಲವರಿಗೆ ಅದು ರುಚಿರುಚಿಯಾದ ಚಿತ್ರಾನ್ನ, ಇನ್ನು ಕೆಲವರಿಗೆ ವಿಚಿತ್ರಾನ್ನ.
ಚಿತ್ರಾನ್ನವೇ ಆಗಲಿ, ವಿಚಿತ್ರಾನ್ನವೇ ಆಗಲಿ, ಅದು ಅವರವರ ಬಾಯ್‍ರುಚಿ. ಒಂದೇ ಸಿನೆಮಾದಲ್ಲಿ ನಾಟಕ, ಕೋಟೆ, ರಾಜವಂಶ, ರೇಬಾನ್ ಕನ್ನಡಕ, ಮೋಟರ್ ಬೈಕು (ರಾತ್ರಿ ಕಗ್ಗತ್ತಿನಲ್ಲಿ ಕಪ್ಪು ಕನ್ನಡಕ ಹಾಕಿಕೊಂಡು ಶ್ರೀಮನ್ನಾರಾಯಣನ ಸವಾರಿ ಹೋಗುತ್ತದೆ!), ಹಳ್ಳಿಯವರ ಬಾಯಿಂದ ಪುಂಖಾನುಪುಂಖವಾಗಿ ಇಂಗ್ಲೀಷ್ ಸೇರಿಸಿದ ಕನ್ನಡ ಮಾತುಗಳು ಜನರಿಗೆ ಗೊಂದಲವಾದರೆ ಅಚ್ಚರಿಯಿಲ್ಲ, ಅಬ್ಸರ್ಡ್ ಅನ್ನಿಸಿ ಸಿನೆಮಾ ಇಷ್ಟವಾಗದಿದ್ದರೆ ಅಚ್ಚರಿಯಿಲ್ಲ. ಸಿನೆಮಾದಲ್ಲೇ ಹೇಳಿರುವಂತೆ, ’ಬುದ್ಧಿವಂತಿಕೆಗೆ ಮಿತಿ ಇದೆ, ಆದರೆ ದಡ್ಡತನಕ್ಕೆ ಮಿತಿಯೇ ಇಲ್ಲ.’
ಏನೇ ಆದರೂ ಚಿತ್ರತಂಡದ ಪರಿಶ್ರಮ ಮಾತ್ರ ಶ್ಲಾಘನೀಯ. ಕಮರ್ಶಿಯಲ್ ಸಿನೆಮಾದ ಅಂಶಗಳನ್ನು ಮತ್ತೊಮ್ಮೆ ಧಿಕ್ಕರಿಸಿ ಪ್ರೇಮಕತೆಯಲ್ಲದ ಸಿನೆಮಾ ಮಾಡಿದ್ದಾರೆ, ಅದೂ ಕನ್ನಡದಲ್ಲಿ. ಕನ್ನಡ ಸಿನೆಮಾದಲ್ಲಿ ಒಂದು ಕಲ್ಟ್ ಕ್ಲಾಸಿಕ್ ಆಗುವ ಎಲ್ಲ ಲಕ್ಷಣಗಳೂ ಈ ಚಿತ್ರಕ್ಕಿದೆ. ಸಿನೆಮಾ ಗೆದ್ದಿದೆಯಂತೆ (ಹಾಗಾಗಿ ಕನ್ನಡಿಗರು ಕನ್ನಡ ಸಿನೆಮಾವನ್ನು ನೋಡುವುದಿಲ್ಲ ಎನ್ನುವ ಗಾದೆ ಸ್ವಲ್ಪವಾದರೂ ಸುಳ್ಳಾಗಿದೆ), ಹಾಗಾಗಿ ರಕ್ಶಿತ್ ಶೆಟ್ಟಿ ತಂಡದಿಂದ ಇನ್ನೂ ಚಂದದ ಹೊಸ ಪರಿಭಾಷೆಯ ಸಿನೆಮಾಗಳನ್ನು ನಿರೀಕ್ಷಿಸಬಹುದು.
(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)