Saturday, 10 November 2018

ರಂಗಸ್ಥಳ: ಶ್ರೀಕೃಷ್ಣವೈಭವ

 


ಸಿಯಾ (ಸೌತ್ ಇಂಡಿಯನ್ ಅಸೋಸಿಯೇಷನ್), ಡಾರ್ಬಿ ಸಂಘಟಿಸಿದ ದೀಪಾವಳಿ ೨೦೧೮ ಸಂಭ್ರಮದಲ್ಲಿ ನನ್ನದೊಂದು ಪುಟ್ಟ ಯುಧಿಷ್ಟಿರನ ಪಾತ್ರ)

Friday, 17 August 2018

ದಂಡೆ ದಾಟುವಾಗ

ಇಳಿಸಂಜೆ ಮತ್ತು ಬೆಳ್ಳಿಚುಕ್ಕೆ 
ಸ್ಪಷ್ಟ ಕರೆಯೊಂದು ನನಗಾಗ! 
ಮತ್ತಾಗ ನರಳಿಕೆ ಇರದಿರಲಿ ಮರಳುದಿಬ್ಬಕೆ, 
ಕಡಲೊಳು ನಾನು ಹೊರಟಾಗ, 

ಆದರಂಥ ತೆರೆಯೂ ಅಲೆದಿದೆ ನಿದ್ರೆವೊಲು, 
ಮೊರೆ-ನೊರೆಯಲಾಗದಷ್ಟು ತುಂಬಿಕೊಂಡು, 
ಅಪರಿಮಿತದಾಳದಿಂದ ಸೆಳೆದಾಗಲೂ 
ಮನೆಗೆ ಹೊರಟಾಗ ತಿರುಗಿಕೊಂಡು. 

ಮಬ್ಬೆಳಕು ಮತ್ತೆ ಕೊನೆಗಂಟೆ, 
ತದನಂತರ ಕಗ್ಗತ್ತಲಾದಾಗ! 
ವಿದಾಯದ ವಿಷಾದವಿಲ್ಲದಿರಲಿ, ಒಂಟಿ 
ನಾ ಯಾತ್ರೆಗೆ ಹತ್ತಿದಾಗ; 

ನಮ್ಮ ಕಾಲದ ನೆಲೆಯ ಇತಿಮಿತಿಯೊಳಗೆ 
ದೂರದವರೆಗೂ ಸೈರಿಸಲಿ ಪ್ರವಾಹವು ನನ್ನನು, 
ನನ್ನ ನಾವಿಕನನ್ನು ನೋಡುವ ನಿರೀಕ್ಷೆಯೊಳಗೆ 
ನಾನು ದಾಟಿದಾಗ ದಂಡೆಯನು.

(Alfred Lord Tennyson ಬರೆದ Crossing The Bar ಕವನದ ಭಾವಾನುವಾದ)

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

ಟಿಪ್ಪಣೆ: 
ಈ ಕವನವನ್ನು ಬಿಎಂಶ್ರೀಯವರು 1926ರಲ್ಲಿ ‘ಇಂಗ್ಲೀಷ್ ಗೀತಗಳು‘ ಕವನ ಸಂಕಲನದಲ್ಲಿ ಅನುವಾದಿಸಿದ್ದಾರೆ. ಇದು ನನಗೆ ಗೊತ್ತಿದ್ದರೆ ನಾನು ಅನಿವಾದಿಸುವ ಕಸರತ್ತಿಗೆ ಇಳಿಯುತ್ತಿರಲಿಲ್ಲ. ಇಲ್ಲಿ ಈ ಕವನದ ಚಿತ್ರವನ್ನು ಕೊಡುತ್ತಿದ್ದೇನೆ. ಅವರ ಅನುವಾದ ಎಷ್ಟು ಶಕ್ತವಾಗಿದೆ!



Friday, 25 May 2018

ರಂಗಸ್ಥಳ: ಮೆಲ್ಲ ಮೃದುಹಾಸ


ರಚನೆ: ಕೇಶವ ಕುಲಕರ್ಣಿ 
ರಾಗ ಸಂಯೋಜನೆ: ಪ್ರವೀಣ್ ಕುಮಾರ್ ಡಿ 
ವಾದ್ಯ ಸಂಯೋಜನೆ: ಮಾರುತಿ ಮಿರಸ್ಕರ್
ಹಾಡುಗಾರಿಕೆ: ಅಮಿತಾ ರವಿಕಿರಣ್
ನೃತ್ಯ ಸಂಯೋಜನೆ: ಶ್ರೀದೇವಿ ತಿರುಗುಲ್ಲಾ
ನೃತ್ಯ: ಶ್ರೀದೇವಿ ತಿರುಗುಲ್ಲ ಮತ್ತು ಸವಿತಾ ಕೇಶವ
ಕಾರ್ಯಕ್ರಮ: ಕನ್ನಡ ಬಳಗ, ಯು,ಕೆ. ಕೋವೆಂಟ್ರಿ, ಎಪ್ರಿಲ್ ೨೦೧೮

Tuesday, 24 April 2018

ಮಿಲನ

ಮೆಲ್ಲ ಮೃದುಹಾಸದಲಿ ಪೋಲಿನುಡಿಯುಲಿದ 
ಕಿವಿಯ ಬಳಿ ಉಸುರುತ್ತ ಉಸಿರ ಬಿಸಿಯ

ತುಂಬುಖಂಡದ ತೋಳು ಬಿಗಿ ಬಾಹುಬಂಧ 
ಮೊರದಗಲದೆದೆಯೊಳಗೆ ಹುದುಗಿ ದೇಹ 
ಅಧರವರಳಿದ ಘಳಿಗೆ ಹಾಲ್ಜೇನ ಒಸಗೆ 
ಬಿಸಿಬೆವರ ಬೆದರಿನಲಿ ಮಿಲನ ಮೋಹ 

ಧಮನಿಧಮನಿಗಳಲ್ಲಿ ದಾಹ ಧಗಧಗಿಸಿ 
ನರನಾಡಿ ಕುಣಿಕುಣಿದು ಪುಟಿವ ಹರೆಯ 
ರೋಮರೋಮಗಳಲ್ಲಿ ಸುಖದ ಚಿಗುರೊಡೆಯೆ 
ಉನ್ಮತ್ತದಾಳದಲಿ ಜೀವದುದಯ

(ಇದು `ಅನಿವಾಸಿ, ಯು.ಕೆ`ಯ ಧ್ವನಿಸುರಳಿಗಾಗಿ ಬರೆದ ಕವನ) 

ರಾಗ ಸಂಯೋಜನೆ: ಪ್ರವೀಣ್ ಕುಮಾರ್ ಡಿ 
ವಾದ್ಯ ಸಂಯೋಜನೆ: ಮಾರುತಿ ಮಿರಸ್ಕರ್
ಹಾಡುಗಾರಿಕೆ: ಅಮಿತಾ ರವಿಕಿರಣ್



Thursday, 15 February 2018

ಪುಸ್ತಕ: ವಿವೇಕ ಶಾನಭಾಗ: ಘಾಚರ್ ಘೋಚರ್


ವಿವೇಕ ಶಾನಭಾಗ ಬರೆದಿರುವ `ಘಾಚರ್ ಘೋಚರ್` ಎನ್ನ್ನುವ ಕಥಾಸಂಕಲದ ಬಗ್ಗೆ ಈಗ ಎರಡು ವರ್ಷಗಳ ಹಿಂದೆಯೇ ಓದಿದ್ದೆ. ಕಳೆದ ವರ್ಷ ಈ ಕಥಾಸಂಕಲನದಲ್ಲಿರುವ ಅದೇ ಹೆಸರಿನ ನೀಳ್ಗತೆ ಅದೇ ಹೆಸರಿನಲ್ಲಿ ಇಂಗ್ಲೀಷ್ ಭಾಷೆಗೆ ಕಿರು-ಕಾದಂಬರಿಯಾಗಿ ಭಾಷಾಂತರಗೊಂಡು ಇಂಗ್ಲೀಷ್ ಭಾಷೆಯ ಪ್ರಸಿದ್ಧ ಸಾಹಿತ್ಯ ಸಂಬಂಧಿ ಮಾಸಿಕಗಳಲ್ಲಿ ಅಲ್ಲದೇ  ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್ ಪತ್ರಿಕೆಗಳಲ್ಲಿ ಈ ಕಾದಂಬರಿಯ `ರಿವ್ಯೂ` ಬಂದಾಗ ಇದನ್ನು ಓದುವ ಕುತೂಹಲ ಇನ್ನೂ ಜಾಸ್ತಿಯಾಯಿತು. ಇಂಗ್ಲೀಷ್ ವಿಮರ್ಶಕರು ವಿವೇಕರನ್ನು ಭಾರತದ ಅಂಟೋನಿ ಚಿಕೋಫ್ ಎಂದು ಕೂಡ ಬಣ್ಣಿಸಿದ್ದಾರೆ.  

`ಘಾಚರ್ ಘೋಚರ್` ಎನ್ನುವ ಅಸಂಬದ್ಧ ಹೆಸರನ್ನು ಹೊತ್ತಿರುವ ಈ ನೀಳ್ಗತೆ, ಅದರ ಹೆಸರಿನಿಂದ ಎಷ್ಟು ಕುತೂಹಲ ಕೆರಳಿಸಿ ಅ ಶಬ್ದಗಳು ಕನ್ನಡದ್ದೋ ಇಲ್ಲ ಇನ್ನಾವುದೋ ಗೊತ್ತಿಲ್ಲದ ಭಾಷೆಯದೋ ಎಂದುಕೊಂಡು ಓದಲು ಶುರು ಮಾಡಿದರೆ, ಕತೆ ಇನ್ನಷ್ಟು ಕುತೂಹಲ ಹುಟ್ಟಿಸುತ್ತದೆ. ಕತೆ ಓದುತ್ತ ಓದುತ್ತ `ಘಾಚರ್ ಘೋಚರ್` ಎಂದರೆ ಏನು ಎನ್ನುವುದು ಗೊತ್ತಾಗುತ್ತದೆ ಮತ್ತು ಅದು ಕತೆಯ ಶೀರ್ಷಿಕೆ ಕೂಡ ಏಕೆ ಆಯಿತು ಎಂದು ಕೂಡ‌. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಈ ಕತೆ ಅಂತ್ಯವಲ್ಲದ ಅಂತ್ಯದಲ್ಲಿ ಅಂತ್ಯವಾದ ಮೇಲೆ `ಘಾಚರ್ ಘೋಚರ್` ಎಂದು ನಮ್ಮೊಳಗೇ ನಿಟ್ಟುಸಿರೊಂದು ಬರುತ್ತದೆ.

ಬೆಂಗಳೂರು ನಗರದ ಒಂದು ಕೆಳ-ಮಧ್ಯಮ ವರ್ಗದ ಕುಟುಂಬವೊಂದು ಕೆಳ-ಮೆಲ್ವರ್ಗಕ್ಕೆ ಏರುವ, ಅಲ್ಲಿ ಏರಿದ ಮೇಲೆ  ನಡೆಯುವ ಬದುಕೇ ಈ ಕತೆಯ ವಸ್ತು. ದಿನ ನಿತ್ಯ ನಡೆಯುವ ಮಾಮೂಲಿ ಚಿಕ್ಕ ಚಿಕ್ಕ ಘಟನೆಗಳನ್ನೇ ಬರೆಯುತ್ತ ಅವರ ಬದುಕಿನ ಹೊರ ಒಳಗನ್ನು ಬಹಳ ಸಂವೇದನಾತ್ಮಕವಾಗಿ ಬರೆಯುತ್ತಾರೆ. ಕತೆಯಲ್ಲಿ ಯಾವುದೇ `ಡ್ರಾಮಾ` ನಡೆಯುವುದಿಲ್ಲ, ಆದರೂ `ಡ್ರಾಮಾ`ಗಿಂತೆ ಹೆಚ್ಚು ತೀವ್ರವಾಗಿ ನಮ್ಮನ್ನು ಅಲುಗಾಡಿಸುತ್ತಾರೆ ವಿವೇಕ.   

ಆಧುನಿಕ‌ ಜೀವನ ನಮ್ಮ ಬದುಕಿನಲ್ಲಿ ಹಾಕಿರುವ ಕಗ್ಗಂಟನ್ನು ಅದು ಇರುವ ಹಾಗೆ ಹೇಳುತ್ತಾ, ಒಂದೇ ಒಂದು ಗಂಟನ್ನೂ ಬಿಡಿಸದೇ ಆದರೆ ಪ್ರತಿ ಗಂಟನ್ನೂ ಸೂಕ್ಷ್ಮವಾಗಿ ತೋರಿಸುತ್ತ  ಭಾವುಕತೆಗೆ ಎಡೆ ಮಾಡಿಕೊಡದೇ, ಅದೇ ಕಾಲಕ್ಕೆ ನಿರ್ಭಾವುಕವೂ ಎನಿಸದಂತೆ, ಕಗ್ಗಂಟಿನ ವಿವಿಧ ಆಯಾಮಗಳನ್ನು ಪ್ರಥಮ ಪುರುಷದಲ್ಲಿ ನಮೂದಿಸುತ್ತ ಹೋಗುತ್ತಾರೆ, ವಿವೇಕ ಶಾನಭಾಗ. ಕತೆಯ (ಬದುಕಿನ) ಸೂಕ್ಷ್ಮತೆ ಮತ್ತು ಸಂಕೀರ್ಣತೆಯನ್ನು ಬಿಟ್ಟುಕೊಡದೇ,  ಅವ್ಯಕ್ತವನ್ನು ವ್ಯಕ್ತ ಮಾಡಲು ಎಷ್ಟು ಕಡಿಮೆ ಶಬ್ದಗಳು ಬೇಕೋ ಅದಕ್ಕಿಂತೆ ಕಡಿಮೆ ಶಬ್ದಗಳಲ್ಲಿ ಬರೆಯುತ್ತಾರೆ. ಕತೆಯಲ್ಲಿ ಬಿಚ್ಚಿಕೊಳ್ಳುವ  ಸತ್ಯಗಳು ನಮ್ಮವೇ ಅನಿಸುತ್ತವೆ. ಹೇಳುವುದಕ್ಕಿಂತ ಹೇಳದೇ ಉಳಿದಿರುವುದು ನಮ್ಮ ಭಾವ ಪಟಲದಲ್ಲಿ ಉಳಿಯುತ್ತದೆ. ಇತ್ತೀಚಿನ ಓದಿನಲ್ಲಿ ನಾನು ಅತಿ ಮೆಚ್ಚಿದ ಕತೆ ಇದು ಅಂದು ನಿಸ್ಸಂಶಯವಾಗಿ ಹೇಳಬಲ್ಲೆ.