Saturday, 27 October 2012

ಪುಸ್ತಕ: ಗುರುಪ್ರಸಾದ ಕಾಗಿನೆಲೆ: ಗುಣ


 
ಗುಣ ಎಂದರೆ ಸ್ವಭಾವ. ರೋಗದಿಂದ ವಾಸಿ ಎಂತಲೂ ಆಗುತ್ತದೆ. ಯೋಗ್ಯತೆಯಂತಲೂ ಅರ್ಥವಿದೆ. ಈ ಮೂರೂ ಅರ್ಥಗಳು ಈ ಕಾದಂಬರಿಯ ಆಶಯಕ್ಕೆ ಪೂರಕವಾಗಿವೆ. 

ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ, ಎಂಬಿಬಿಎಸ್ ಮತ್ತು ಪಿಜಿ ಮಾಡಿ, ದುಡ್ಡು ಮಾಡಲು, ಬದುಕು ಕಟ್ಟಲು ವೈದ್ಯನೊಬ್ಬ ಇನ್ನೊಬ್ಬ ವೈದ್ಯೆಯನ್ನು ಮದುವೆಯಾಗಿ ಅಮೇರಿಕದಲ್ಲಿ ಸುಮಾರು ಇಪ್ಪತ್ತು ವರ್ಷ ಬದುಕಿದ ಕತೆ ಇದು. 

ಪಿಜಿ ಮಾಡುವಾಗಲೇ ಆಗುವ ಅರೇಂಜ್ಡ್ ಮದುವೆ  (ರೋಮ್ಯಾನ್ಸ್ ಇಲ್ಲವೇ ಇಲ್ಲವೆನ್ನುವಷ್ಟು ವಿವರಗಳು ಕಡಿಮೆ), ಅತ್ತೆ-ಸೊಸೆಯರ ಜಟಾಪಟಿ, ಅಮೇರಿಕಕ್ಕೆ ಹೋಗಲು ಮಾಡುವ ಕೆಲಸಗಳು, ಅಮೇರಿಕದಲ್ಲಿ ರೆಸಿಡೆನ್ಸಿ ಮಾಡುವಾಗಿನ ಘಟನೆಗಳು, ರೆಸಿಡೆನ್ಸಿ ಮುಗಿಸಿ ಕೆಲಸಕ್ಕೆ ಸೇರುವುದು, ಮಗಳು ಹುಟ್ಟುವುದು, ಅವಳ ಬೆಳವಣಿಗೆ,  ಕೆಲಸದ ಖುಷಿಗಳು-ಒತ್ತಡಗಳು. 

ಅಮೇರಿಕದಲ್ಲೇ ದಶಕಗಳು ಕಳೆಯುತ್ತ ಬಂದಾಗ ಖಾಲಿ ಖಾಲಿ ಎನಿಸುವ ಬದುಕು, ಹೊಸತನವಿಲ್ಲದ ನಿಂತ ನೀರಾದ ದಾಂಪತ್ಯ, ತಾಯಿಯ ಸಾವು, ತಂದೆಯ ಕಾಯಿಲೆ, ಹದ್ದು ಮೀರುತ್ತಿರುವ ಹರೆಯಕ್ಕೆ ಕಾಲಿಟ್ಟ ಹುಡುಗಿ, ಕುಡಿತದ ಮೊರೆ. 

ತಾನೊಬ್ಬ ಕುಡುಕನಾಗುತ್ತಿದ್ದೇನೆ, ತನ್ನ ಧಿಡೀರ್ ಕೋಪದ ಬುದ್ಧಿ ತನ್ನ ಹತೋಟಿಯನ್ನೂ ಮೀರುತ್ತಿದೆ ಎಂದು ಅರಿವಾಗುವುದರಲ್ಲಿ ಹೆಂಡತಿ ಮಕ್ಕಳು, 'ಸ್ವಲ್ಪ ದಿನದ ಮಟ್ಟಿಗಾದರೂ ನೀನು ನಮ್ಮಿಂದ ದೂರವಿದ್ದರೆ ಒಳ್ಳೆಯದು' ಎಂದು ಮನೆಯಿಂದ ಸಾಗಹಾಕುತ್ತಾರೆ. ಅಸ್ಪತ್ರೆಯ ನಿಯಮದ ಪ್ರಕಾರ ತಾನು ಇರುವ ಊರನ್ನು ಬಿಟ್ಟು ಒಂದು ವರ್ಷಕ್ಕೆ ಬೇರೆ ಊರಿಗೆ ಹೋಗುವ 'ಅವಕಾಶ' ಬರುತ್ತದೆ. 

ಕುಡಿಯುವುದನ್ನು ಬಿಡುತ್ತಾನೆ. ಕೋಪ ಶಮನಕ್ಕೆ ಹಾದಿಹುಡುಕಲು ಆರಂಭಿಸುತ್ತಾನೆ. ಮಗಳ ಗ್ರಾಜ್ಯುವೇಷನ್ ಡೇ ಗೆ ಮತ್ತೆ ವಾಪಸ್ಸು ಬರುತ್ತಾನೆ. ಬೆಳೆದು ನಿಂತ ಮಗಳ, ಅವಳ ಬಾಯ್‍ಫ್ರೆಂಡಿನ, ತನ್ನ ಮಡದಿಯ, ತನ್ನ ಗೇ ಗೆಳೆಯನ ಜೊತೆ ಮಾತಾಡುತ್ತ ಮತ್ತೊಂದು ಬದುಕಿಗೆ ಪ್ರಯತ್ನ ಮಾಡುತ್ತಾನೆ. 

ಕನ್ನಡಕ್ಕೇ ಬಹುಷಃ ಮೊದಲ ಬಾರಿಗೆ ಗೇಗಳ ಬಗ್ಗೆ ಬಂದಿರುವ ಕಾದಂಬರಿ ಇದೇ ಇರಬೇಕು. ಈ ಕಾದಂಬರಿಯಲ್ಲಿ ಎರಡು ಗೇ ಪಾತ್ರಗಳು, ಒಬ್ಬ ಅಮೇರಿಕನ್, ಇನ್ನೊಬ್ಬ ಕನ್ನಡಿಗ ಡಾಕ್ಟರು. ನನಗೆ ಗೊತ್ತಿರುವ ಮಟ್ಟಿಗೆ ಕನ್ನಡದಲ್ಲಿ ಸಲಿಂಗಿಗಳ ಬಗ್ಗೆ ಬಂದಿರುವ ಮೊದಲ ಕಾದಂಬರಿ ಇದೇ ಇರಬೇಕು. ಈ ಸಲಿಂಗಿಗಳ ಕತೆ ಮೂಲ ಕತೆಯಲ್ಲಿ ಯಾವ ಪರಿಣಾಮ ಮಾಡದಿದ್ದರೂ, ಬದುಕಿನ ಇನ್ನೊಂದು ಕೋನವನ್ನು ಪರಿಶೀಲಿಸುತ್ತದೆ. 

ಇಡೀ ಕಾದಂಬರಿ ಅನಿವಾಸಿ ಕನ್ನಡಿಗ ವೈದ್ಯನೊಬ್ಬನ ಪರ್ಸನಲ್ ಡೈರಿಯ ಪುಟಗಳನ್ನು ಹೆಕ್ಕಿ ಜೋಡಿಸಿಟ್ಟಂತಿದೆ. ಸುಮಾರು ಇಪ್ಪತ್ತು ವರುಷದ ಬದುಕಿದ ಮತ್ತು ಹತ್ತಿರದಿಂದ ಕಂಡ ಅಥವಾ ಬದುಕಿದ ಬದುಕನ್ನು ಯಾವ ಮೆಲೋಡ್ರಮಾಗಳಿಲ್ಲದೇ, ಯಾವ ಆಡಂಬರಗಳಿಲ್ಲದೇ, ಯಾವ ಇಂಟೆಲೆಕ್ಚ್ಯುವಲ್ ಇಸಂಗೂ ಜೋತುಬೀಳದೆ  ಬರೆಯುವುದು ಸುಲಭದ ಕೆಲಸವಲ್ಲ. ಕಾದಂಬರಿಯಲ್ಲಿ ಎಲ್ಲಿಯೂ ಉಪದೇಶಗಳಿಲ್ಲ, ಹಿಂದೆ ತಿರುಗಿ ನೋಡಿ ಸ್ಯುಡೂ ಹಳಹಳಿಯಿಲ್ಲ, ಇದು ಹೀಗೇ ಇದ್ದರೆ ಚಂದ, ಹೀಗಿಲ್ಲದಿದ್ದರೆ ಅಸಹ್ಯ ಎನ್ನುವ ಫಿಲಾಸಾಫಿಯಿಲ್ಲ. 

ಅನಿವಾಸಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದಕ್ಕಿಂತ ಒಳ್ಳೆ ಕನ್ನಡ ಕಾದಂಬರಿ ಇಲ್ಲ. ಅನಿವಾಸಿ ಕನ್ನಡಿಗರು, ಅದರಲ್ಲೂ ವೈದ್ಯರು ಓದಲೇ  ಬೇಕಾದ ಕಾದಂಬರಿಯಿದು.