Tuesday, 16 March 2010

ಮತ್ತೇಕೆ ಯುಗಾದಿ ಬರುತಿದೆ?

 

ಯುಗ ಯುಗಾದಿ ಕಳೆದರೂ 
ಮತ್ತೇಕೆ ಯುಗಾದಿ ಬರುತಿದೆ?

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು

ವಸಂತ ಮಾಸ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಯಾಕೆ ಶುರುವಾಗಬಾರದು
ಎನ್ನುವ ಜನಾಂಗ ನಾವು

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗ ಕಚ್ಚಿದ್ದು ಮಾತ್ರ ಗೊತ್ತು

ಬೇವಿನ ಮರ ಬಿಡಿ
ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಕೊಳ್ಳಿ
ಅದಕ್ಕೇನು ವೆನಿಲಾದ ರೇಟಿದೆಯೇ?

ಮಾವಿನ ಹಣ್ಣಿಗೆ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ 

ನಮಗೆ ವಸಂತ ಚೈತ್ರ ಅಂದು ಅಂದು ಕನ್ಫೂಸ್ ಮಾಡಬೇಡಿ
ಹುಡುಗಿಯರ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ?

ಅದೆಲ್ಲ ಬೇಂದ್ರೆ ಕಾಲವಾಯಿತು
ಈಗ ನಮಗೂ ಹೊಸ ಜನ್ಮ
ಹೊಸ ಮುಖ ಹೊಸ ತಿಕ
ಐವತ್ತರ ಮೆಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ

ಒಂದು ಜನ್ಮದಲ್ಲಿ ಒಂದೆ ಬಾಲ್ಯ 
ಆದರೆ ಸಾಯುವವರೆಗೂ ಹರೆಯ
ಮುದಿತನದಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?
ನಾವು ನಿನ್ನನ್ನು ಮರೆತಾಗಿದೆ