Monday 18 March 2024

ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

ನಾನು ಬರೆದ ಆ ಕತೆಯನ್ನು ತಿಂದಳು 
ಆ ಕತೆ ತಿಂದಾದ ಮೇಲೆ ನಾ ಬರೆದ 
 ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ 
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು 

 ನಾನು ಅವಳನ್ನು ತಡೆಯಹೋದೆ 
ನಕ್ಕು ಕಣ್ಣು ಮಿಟುಕಿಸದಳು 

ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು 
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು 
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು 
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು 

 ನಾನು ಅವಳನ್ನು ತಡೆಯಹೋದೆ 
ಕೈ ಸವರಿ ಮಾತಿಗಿಳಿದಳು 

 ನನ್ನ ಎಲ್ಲ ಪಾಸ್ವರ್ಡ್ ಪಡೆದಳು 
 ನನ್ನ ಬರವಣಿಗೆಯ ಫೈಲುಗಳನ್ನು 
 ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು 
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು 

 ನಾನು ಅವಳನ್ನು ತಡೆಯಹೋದೆ 
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು 

 ನನ್ನ ಹಳೆಬಟ್ಟೆಗಳನ್ನು ಬೀಸಾಕಿ 
 ಹೊಸ ಬಟ್ಟೆಗಳ ತಂದಳು 
ಗಡ್ಡ ತಲೆಗಳ ಟ್ರಿಮ್ ಮಾಡಿದಳು 
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು 

 ನಾನು ಅವಳನ್ನು ತಡೆಯಹೋದೆ 
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು 

ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ 
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು 
 ಮಲಗುವ ಮಂಚವನ್ನು ಗಟ್ಟಿಗೊಳಿಸಿ 
ಹೊಸ ಗಾದೆ ದಿಂಬು ಹಾಕಿದಳು 

ನಾನು ಇನ್ನು ತಡೆಯದಾದೆ 
ಅವಳ ದೇಹದಲ್ಲಿ ಲೀನವಾದೆ 

ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು 
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು 
ಅವಳು ತಿಂದ ಆ ಕತೆಯ ಹೆಸರು, 
`ನನಗೆಂಥ ಹುಡುಗಿ ಬೇಕು?` 

ನಾನು ಕತೆ ಕವನ ಬರೆಯುವುದನ್ನು ಬಿಟ್ಟು 
ಈಗ ಹದಿನೈದು ವರ್ಷಗಳಾದವು